ಬೆಳಗಿನ ವಾಕ್ ನಲ್ಲಿ

ಲಲಿತ ಪ್ರಬಂಧ

ಲಲಿತ ಪ್ರಬಂಧ

ಸಮತಾ ಆರ್.

How 15 minutes of brisk walking first thing in the morning can energize  your day! - The Pacer Blog: Walking, Health and Fitness

” ನಿಮಗೆ ಶುಗರ್ ಇದೆ ಕಣಮ್ಮ, ಇನ್ನು ತಡ ಮಾಡೋದು ಬೇಡ, ಮಾತ್ರೆ ತೊಗೊಳ್ಳಿ,” ಎಂದು ನನ್ನ ರಕ್ತ ಪರೀಕ್ಷೆ ವರದಿ ನೋಡುತ್ತಾ ವೈದ್ಯರು ಹೇಳಿದರು.ಅದು ನಿರೀಕ್ಷಿತವೇ ಆದ್ದರಿಂದ ಅಂತಹ ಏನೂ ಗಾಬರಿಯಾಗಲಿಲ್ಲ ನನಗೆ.”ಇನ್ನೇನು ಬಿಡು,ಏಳೆಂಟು ವರ್ಷ ಮಾತ್ರೆ ಇಲ್ಲದೇ ತಳ್ಳಿದೆನಲ್ಲ,ಸಾಕಿನ್ನು, ಮಾತ್ರೆ ತೊಗೊಂಡರೆ ಏನು ಹಾನಿ? ಪ್ರಪಂಚದಲ್ಲಿ ಕೋಟಿಗಟ್ಟಲೆ ಜನಕ್ಕೆ ಶುಗರ್ ಇಲ್ವಾ, ಅವ್ರೇನ್ ಬದುಕ್ತಾನೇ ಇಲ್ವಾ,?”ಎಂದು ನನಗೆ ನಾನೇ ಧೈರ್ಯ ತಂದುಕೊಂಡೆ.ವೈದ್ಯರು ಹೇಳಿದ ಪಥ್ಯ, ಮಾತ್ರೆ ತೊಗೊಳ್ಳೋ ವಿಧಾನ ಎಲ್ಲಾ ಕೇಳಿಕೊಂಡೆ.”ಬೆಳಗಿನ ವಾಕ್ತಪ್ಪಿಸಬೇಡಿ”ಎಂದು ಇನ್ನೊಂದು ಎಚ್ಚರಿಕೆಯನ್ನು ಕೊಟ್ಟರು.
ವೈದ್ಯರ ಕೊಠಡಿಯಿಂದ ಆಚೆ ಬಂದು, ಕಾಯುತ್ತಾ ನಿಂತಿದ್ದ ನನ್ನ ಗಂಡನಿಗೆ,” ರೀ, ಶುಗರ್ ಇದೆಯಂತೆ ಕಣ್ರೀ,”ಎಂದೆ.”ಮಾತ್ರೆ ತೊಗೊ ಅಂದ್ರಾ?”ಎಂದಿದ್ದಕ್ಕೆ “ಹೂಂ”ಎಂದಿದ್ದನ್ನು ಸುಮ್ಮನೆ ಕೇಳಿಕೊಂಡ ಇವರು ಅಲ್ಲೇನೂ ಹೇಳದಿದ್ದರೂ ಮನೆಗೆ ಬಂದ ಕೂಡಲೇ ಗೊಣಗುಟ್ಟಲು ಶುರು ಮಾಡಿದರು.”ಕೆಜಿಗಟ್ಟಲೇ ಚಿಕನ್ ಮಟನ್ ಮುಕ್ಕಿದರೆ ಶುಗರ್ ಬರ್ದೆ ಇನ್ನೇನು?ಸಾವಿರ ಸರಿ ಬಡ್ಕೊಂಡೆ,’ ತಿನ್ನೋದರ ಮೇಲೆ ನಿಗಾ ಇರ್ಲಿ’ ಅಂತ,ನನ್ಮಾತು ಎಲ್ ಕೇಳ್ದೆ ನೀನು,ಈಗ ಶುಗರ್ ಬರುಸ್ಕೊಂಡ್ ಇದಿಯ.ಒಂದ್ ವಾಕ್ ಹೋಗು ಅಂದ್ರೂ ಕೇಳಲ್ಲ,ಈಗ್ನೋಡು ಏನಾಯ್ತು ಅಂತ!,ಇನ್ ಮೇಲಾದ್ರು ಎಚ್ಚೆತ್ಕೊ.ಜೀವಮಾನಕ್ಕಾಗೋಷ್ಟು ಎಲ್ಲಾ ತರ ತಿಂದು ಮುಗ್ಸಿದ್ದಿಯ,ಇನ್ಮೇಲಾದ್ರೂ ನಾಲಿಗೆ ರುಚಿ ಬಿಡು.ದಿನಾ ಬೆಳಿಗ್ಗೆ ಎದ್ದು ವಾಕ್ ಹೋದ್ರೆ ಸರಿ,”ಎಂದು ಕೊರೆದರು.”ಹುಲಿ, ಸಿಂಹನೂ ಕೆಜಿ ಗಟ್ಟಲೆ ಚಿಕನ್ ಮಟನ್ ತಿಂತಾವಲ್ಲ ,ಅವುಕ್ಕೂ ಶುಗರ್ ಬರುತ್ತಾ!”ಅಂತ ಕೇಳಬೇಕು ಅಂದುಕೊಂಡೆ.ಆದರೆ ನನ್ನ ಗಂಡನ ಉರಿ ಮುಖ ನೋಡಿ ಧೈರ್ಯ ಸಾಲಲಿಲ್ಲ.

“ನೀವು ಪ್ರಿ ಡಯಾಬಿಟಿಕ್,ಆಹಾರದಲ್ಲಿ ಪಥ್ಯ ಮಾಡಿ,ವ್ಯಾಯಾಮ ,ವಾಕ್ ಮಾಡಿ ,”ಎಂದು ವೈದ್ಯರು ಕಳೆದ ಏಳೆಂಟು ವರ್ಷಗಳಿಂದ ಹೇಳುತ್ತಲೇ ಇದ್ದರು.ಅದರಂತೆ ಕಷ್ಟಪಟ್ಟು ಆಹಾರದಲ್ಲಿ ಪಥ್ಯ ಅನುಸರಿಸಿದರೂ ವ್ಯಾಯಾಮ,ವಾಕ್ ಗಳಿಗೆ ಯಾಕೋ ಮೈ ಬಗ್ಗಲೇ ಇಲ್ಲ.ದಿನ ಬೆಳಿಗ್ಗೆ ಎದ್ದು ಕೆಲಸಕ್ಕೆ ಓಡುವ ಅವಸರದಲ್ಲಿ ವಾಕ್ ಗೆ ಸಮಯ ಹೊಂದಿಸಿಕೊಳ್ಳಲು ಆಗಿರಲೇ ಇಲ್ಲ.”ಹೇಗಾದರೂ ಸಮಯ ಹೊಂದಿಸಿಕೊಂಡು ಬೆಳಗಿನ ವಾಕ್ ಮಾಡಬೇಕು ಆರೋಗ್ಯ ಚೆನ್ನಾಗಿರುತ್ತೆ” ಅಂತ ಅಂದುಕೊಳ್ಳಲು ಶುರು ಮಾಡಿ ಎಷ್ಟೋ ವರ್ಷಗಳೇ ಆಗಿಹೋಗಿವೆ.ರಜೆ ಇದ್ದಾಗ ತಪ್ಪದೆ ಸಂಜೆ ಹೊತ್ತು ಅಕ್ಕಪಕ್ಕದ ಗೆಳತಿಯರೊಂದಿಗೆ ವಾಕ್ ಹೋದರೂ ಅದ್ಯಾಕೋ ಮಾರ್ನಿಂಗ್ ವಾಕ್ ಗೆ ಕಾಲ ಕೂಡಿಯೇ ಬಂದಿರಲಿಲ್ಲ. ಈಗ ವೈದ್ಯರ ಎಚ್ಚರಿಕೆಯ ಮಾತು ಕೇಳಿದ ಮೇಲೆ ಕೊಂಚ ಭಯ ಶುರುವಾಯಿತು.

ಅವತ್ತು ರಾತ್ರಿಯೇ” ಮಾರನೆ ಬೆಳಿಗ್ಗೆಯಿಂದಲೆ ಐದು ಗಂಟೆಗೇ ಎದ್ದು ವಾಕ್ ಹೋಗುವ “ಎಂದು ನಿಶ್ಚಯಿಸಿ ಕೊಂಡು ಅಲಾರ್ಮ್ ಇಟ್ಟುಕೊಂಡು ಮಲಗಿದೆ.ಬೆಳಿಗ್ಗೆ ಅಲಾರ್ಮ್ ಹೊಡಿವಾಗ ಫೆವಿಕಾಲ್ ನಿಂದ ಅಂಟಿಸಿರುವ ಹಾಗೆ ಮುಚ್ಚಿಕೊಂಡಿದ್ದ ಕಣ್ಣು ರೆಪ್ಪೆಗಳ ಕಷ್ಟಪಟ್ಟು ಬಿಡಿಸಿಕೊಂಡು ಎದ್ದು, ಅಲಾರ್ಮ್ ಬಂದು ಮಾಡಿ ,ವಾಕ್ ಗೆ ಹೊರಡಲು ಸಿದ್ಧಳಾಗಲು ಹೊರಟೆ.ದೈನಂದಿನ ಕರ್ಮಗಳ ಮುಗಿಸಿ, ಬಾಗಿಲು ತೆರೆದು ಹೊರಬಂದು ನೋಡಿದರೆ ಇನ್ನೂ ಕತ್ತಲು ಗವ್ ಅನ್ನುತ್ತಿತ್ತು.ಒಂದರೆಕ್ಷಣ ಮನ ಹಿಂಜರಿಯಿತು.ಆದರೆ ಅಕ್ಕ ಪಕ್ಕ,ಎದುರು ಬದಿರಿನ ಮನೆಗಳಲ್ಲಿ ಅಡುಗೆ ಮನೆಗಳಲ್ಲಿ ಹೊತ್ತಿದ್ದ ದೀಪಗಳ ನೋಡಿ ಸ್ವಲ್ಪ ಧೈರ್ಯ ಬಂತು.ಸರಿ ನನ್ನ ವಾಕ್ ಶುರುವಾಯಿತು.

ನಮ್ಮ ಮನೆ ಇರುವುದು ನಗರದ ಹೊರ ವಲಯ ವೊಂದರಲ್ಲಿ.ಮನೆಗಳ ಸಂಖ್ಯೆ ಕಡಿಮೆಯೇ.ಖಾಲಿ ಸೈಟ್ಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.ಒಂದು ಖಾಲಿ ಸೈಟ್ನ ಫೋಟೋ ತೆಗೆದು ಎಡಿಟ್ ಮಾಡಿದರೆ ಸಾಕು, ಆಫ್ರಿಕಾದ ಯಾವುದೋ ಹುಲ್ಲುಗಾವಲಿನ ಚಿತ್ರ ವಿರಬೇಕು ಅನ್ನಿಸುವಂತೆ ಖಾಲಿ ಸೈಟ್ಗಳಲ್ಲಿ ಸೆದಕಲಿದೆ.ಬಡಾವಣೆಯ ಹೊಸ ಹೊಸ ,ಚಿತ್ರ ವಿಚಿತ್ರ ವಾಸ್ತು ವಿನ್ಯಾಸದ ಮನೆಗಳಿಗೂ ಅವುಗಳ ನಡು ನಡುವಿನ ಈ ಹುಲ್ಲುಗಾವಲಿಗೂ ಏನೇನು ಹೊಂದಾಣಿಕೆ ಕಾಣುವುದಿಲ್ಲ. ಆದರೆ ಜನರೂ ಏನೂ ಅಷ್ಟು ತಲೆಕೆಡಿಸಿಕೊಂಡು,ನಗರ ಪಾಲಿಕೆಯವರಿಗೆ ದೂರು ನೀಡಿ ತಮ್ಮ ಮನೆ ಅಕ್ಕಪಕ್ಕದ ಸೈಟ್ಗಳ ಸೆದಕಲನ್ನು ತೆಗೆಸುವ ಗೋಜಿಗೂ ಹೋಗುವುದಿಲ್ಲ.ತೀರಾ ಯಾರಿಗಾದರೂ” ಹಾವು ಗೀವು ಸೇರಿಕೊಂಡರೆ” ಅನ್ನೋ ಭಯ ಹುಟ್ಟಿದಾಗ ಮಾತ್ರ ಒಂದು ಜೆ ಸಿ ಬಿ ತರಿಸಿ,”ಜುರ್” ಅಂತ ತಮ್ಮ ಮನೆ ಅಕ್ಕ ಪಕ್ಕ ಕ್ಲೀನ್ ಮಾಡಿಸಿಕೊಳ್ಳುತ್ತಾರೆ.ಉಳಿದಂತೆ ಬಡಾವಣೆಯ ತುಂಬಾ ಹುಲ್ಲು,ಪೊದೆ,ಗಿಡ ,ಮರಗಳು ತುಂಬಿಕೊಂಡಿವೆ.

ಈ ಗಿಡಗಂಟಿಗಳಿಂದಾಗಿ ಬೆಳಗಿನ ಜಾವದಲ್ಲಿ ಸುತ್ತಲಿನ ಪರಿಸರವೆಲ್ಲ ತಂಪು ತಂಪು.ಹಾಗಾಗಿ ಮೊದಲ ದಿನ ವಾಕ್ ಮಾಡಲು ಶುರು ಮಾಡಿದಾಗ ಹಿತವಾಗಿಯೇ ಇತ್ತು.,”ಒಬ್ಬಳೇ ಏನೋ ಇಡೀ ರಸ್ತೆಯಲ್ಲಿ” ಎಂದುಕೊಂಡು ನೋಡಿದರೆ,ಅಲ್ಲಲ್ಲಿ ತೆಳ್ಳ ತೆಳ್ಳಗೆ ಜನ ಓಡಾಡುತ್ತಿದ್ದದ್ದು ಕಂಡು ಬಂತು.ಮೆಲ್ಲನೆ ನಡೆವವರು, ಬೀಸುಗಾಲಿನವರು, ಓಡುವವರು, ಹಿಂದು ಮುಂದಾಗಿ ನಡೆಯುತ್ತಿದ್ದ ಒಬ್ಬ ವ್ಯಕ್ತಿ,ಸೈಕಲ್ ಸವಾರಿ ಏರಿ ಹೊರಟವರು, ಹೀಗೆ ತರಹಾವರಿ ಜನರು.ವಾಕ್ ಗಿಂತ ಮಾತಿಗೇ ಒಟ್ಟುಗೂಡಿದಂತಿದ್ದ ಮೂವರು ಸುಂದರಿಯರು,ಕುಲು ಕುಲು ನಗುತ್ತ,ಬೆಳಗಿನ ಜಾವದ ಮೌನವ ಕದಡುತ್ತಾ, ಚಿಮ್ಮಿದಂತೆ ಸಾಗುತ್ತಿದ್ದರು. ನನ್ನ ಎದುರು ಮೆಲ್ಲನೆ ನಡೆಯುತ್ತಿದ್ದ ಒಬ್ಬ ವೃದ್ಧರು ಹಿಡಿದಿದ್ದ ಫೋನ್ ನಿಂದ ಸುಬ್ಬುಲಕ್ಷ್ಮಿಯವರ “ವೆಂಕಟೇಶ ಸುಪ್ರಭಾತ” ಅಲೆ ಅಲೆಯಾಗಿ ಗಾಳಿಯಲ್ಲೆಲ್ಲ ತನ್ನ ಮಾಧುರ್ಯದ ಪರಿಮಳ ಹರಡುತ್ತಾ ಸಾಗಿತ್ತು. ಓಡು ನಡೆಯಲ್ಲಿ ಜಾಗ್ ಮಾಡುತ್ತಿದ್ದ ಮಹಿಳೆಯೊಬ್ಬರು,ಪರಿಚಯವೇ ಇಲ್ಲದಿದ್ದರೂ, ನನ್ನನ್ನು ನೋಡಿ ,”ಹಾಯ್, ಗುಡ್ ಮಾರ್ನಿಂಗ್” ಎಂದು ಹೇಳಿ ಮುಂದೆ ಹೋದರು.
“ಪರವಾಗಿಲ್ಲ,ವಾಕ್ ಮಾಡೋದು ಅಂತ ಬೋರಿಂಗ್ ಏನೂ ಅಲ್ಲ” ಅಂದುಕೊಂಡು ಮುಂದೆ ಸಾಗಿದೆ.ಹಾಗೆ ನಲವತ್ತು ನಿಮಿಷ ನಮ್ಮ ಮನೆಯ ಸುತ್ತಲಿನ ರಸ್ತೆಯಲ್ಲೇ ನಾಲ್ಕೈದು ಸುತ್ತು ನಡೆದು ಮನೆಗೆ ಹಿಂದಿರುಗುವಾಗ ಎದುರು ಮನೆ ಕವಿತಾ ಬಾಗಿಲಿಗೆ ನೀರು ಹಾಕುತ್ತಾ ಇದ್ದವರು ನನ್ನ ಕಂಡು ಕಣ್ಣರಳಿಸಿದರು.ಅವರಿಗೊಂದಿಷ್ಟು ನನ್ನ ಕಾಯಿಲೆ, ಪಥ್ಯೆ, ಮಾತ್ರೆ ಅಂತೆಲ್ಲ ಕೊರೆದು” ವಾಕ್ ಅದಕ್ಕಾಗಿ “ಎಂದು ನಿಟ್ಟುಸಿರು ಬಿಟ್ಟಿದ್ದಾಯಿತು. ಕವಿತಾ ಥಟ್ಟನೇ,” ನಾನು ದಿನಾ ಸಂಜೆ ವಾಕ್ ಮಾಡ್ತಿದ್ದೆ ಕಣ್ರೀ,ಯಾರೂ ಜೊತೆಗಿಲ್ಲ ಅಂತ ಬೆಳಿಗ್ಗೆ ಹೋಗಕೆ ಆಗ್ತೀರ್ಲಿಲ್ಲ.ನಾಳೆಯಿಂದ ನನ್ನ ಕರೀರಿ, ನಾನೂ ಬರ್ತೀನಿ ” ಅಂದ್ರು.ನನಗೆ ಖುಷಿಯಾಯಿತು.”ಒಬ್ಬಳೇ ತಿರುಗೋದಕ್ಕಿಂತ ಮಾತಿಗೆ ಒಬ್ಬರು ಇದ್ರೆ ಬೇಜಾರಾಗೊಲ್ಲ” ಅನಿಸಿತು.”ಹೂಂ,ಅದಕ್ಕೇನಂತೆ ಬನ್ನಿ,” ಎಂದು ,ಮಾರನೇ ದಿನದಿಂದಲೇ ಇಬ್ಬರೂ ಒಟ್ಟಿಗೆ ವಾಕ್ ಹೊರಟೆವು. ಇಬ್ಬರಿದ್ದಿದ್ದರಿಂದ ಮನೆಯಿಂದ ಸ್ವಲ್ಪ ದೂರ ಹೋಗುವ ಧೈರ್ಯವೂ ಬಂತು.
ಹಾಗೆ ಶುರುವಾದ ನಮ್ಮಿಬ್ಬರ ಬೆಳಗಿನ ವಾಕ್ ನಲ್ಲಿ ಏನಾದರೂ ಒಂದು ವಿಚಿತ್ರ,ವಿಶೇಷ ಸಂಗತಿ ಹೆಚ್ಚು ಕಡಿಮೆ ದಿನವೂ ನೋಡಲು ಸಿಗುತ್ತಿತ್ತು.ಇನ್ನೇನು ತುಳಿದೇ ಬಿಡುವ ಷ್ಟರಲ್ಲಿ ತಪ್ಪಿಸಿಕೊಂಡ ಹಾವು.ಡಿಕ್ಕಿ ಹೊಡೆದೇ ಬಿಟ್ಟ ಅನ್ನುವಷ್ಟರಲ್ಲಿ ಎಚ್ಚೆತ್ತುಕೊಂಡ ಹಿಂದು ಮುಂದಾಗಿ ನಡೆಯುವವನು,ಮೈ ಸವರಿಕೊಂಡೆ ಹೋಗಿ ಜೀವ ನಡುಗಿಸಿದ ಒಬ್ಬ ಬೈಕರ್, ಇವರೆಲ್ಲರಿಂದ ಪಾಠ ಕಲಿತು, ಬೆಳಗಿನ ಜಾವದ ಕತ್ತಲಲ್ಲಿ ನಡೆಯುವುದು ರೂಢಿಯಾಗಿ ಹೋಯಿತು.ಇವುಗಳಿಗಿಂತ ಹೆಚ್ಚು ಹೆದರಿಸುವುದು ಮೂರು ರಸ್ತೆಗಳು ಕೂಡುವಲ್ಲಿ ಹಾಕಿರುವ ಮಾಟ ಮಂತ್ರದ ವಸ್ತುಗಳು.ಮೆಣಸಿನಕಾಯಿ,ತೆಂಗಿನಕಾಯಿ,ನಿಂಬೆಹಣ್ಣು, ಬೂದಿ ಗುಂಬಳ,ಎಲ್ಲವಕ್ಕೂ ಹೊಟ್ಟೆಯೊಳಗೆ ಒಂದು ಗಾಡಿ ಕುಂಕುಮ ತುಂಬಿ, ಒಡೆದು,ಎಸೆದು ಹೋಗಿರುತ್ತಾರೆ.ಅದು ರಸ್ತೆಯಲ್ಲೆಲ್ಲ ರಕ್ತ ಚೆಲ್ಲಾಡಿದ ಹಾಗೆ ಕಾಣುವಾಗ ಮೈ ನವಿರೇಳುತ್ತಿತ್ತು.ಕವಿತಾ ಅಂತೂ,”ಅಯ್ಯೋ!ಮೂರು ಸರಿ ಥೂ ಅಂತ ಉಗಿರಿ” ಎಂದು ಉಗುಳುವವರೆಗೆ ಬಿಡುತ್ತಾ ಇರ್ಲಿಲ್ಲ.”ಏನು ಹಾಳ್ ಜನಗಳೋ! ಮನೆ ಮಠ ಇರೊ ಕಡೆನೆ ತಂದ್ ಹಾಕ್ತರಲ್ಲ.ಅವರ ಕೈ ಸೇದೋಗ” ಅನ್ನೋ ಹಿಡಿ ಶಾಪ ಬೇರೆ.” ಅದೆಲ್ಲ ಏನೂ ಆಗೊಲ್ಲ ಬಿಡ್ರಿ” ಅಂದ್ರೂ ಅವರಿಗೆ ಭಯವೇ.
ಎಷ್ಟೇ ವೈಜ್ಞಾನಿಕ ಮನೋಭಾವ,ಲೊಳ್ಳೆ ಲೊಟ್ಟೆ ಅಂದರೂ ಮನಸ್ಸಿನ ಮೂಲೆಯಲ್ಲಿ ಏನೋ ಒಂದು ವಿಧದ ಭಯ ಕಾಡುವುದು ಮಾತ್ರ ನಿಜ.ಆದರೆ ಆ ಮೆಣಸಿನಕಾಯಿ, ತೆಂಗಿನಕಾಯಿ, ಬೂದಿಗುಂಬಳ,ನಿಂಬೆ ಹಣ್ಣುಗಳೇನು ಅಲ್ಲೇ ಇರುತ್ತಿರಲಿಲ್ಲ.ಮಾರನೆ ದಿನಕ್ಕೇ ಮಾಯ. ಒಂದು ದಿನ ವಾಕ್ ಮುಗಿಸಿ ಬರುವಾಗ,ಹೋಗುವಾಗ ಕಣ್ಣಿಗೆ ಬಿದ್ದಿದ್ದ,ಹೊಟ್ಟೆ ಒಡೆದುಕೊಂಡು ರಸ್ತೆಯಲ್ಲೆಲ್ಲ ಚೆಲ್ಲಾ ಪಿಲ್ಲಿಯಾಗಿ,ಕುಂಕುಮ ಕಾರಿಕೊಳ್ಳುತ್ತಾ ಬಿದ್ದುಕೊಂಡು,ನಮ್ಮಿಬ್ಬರನ್ನು ಹೆದರಿಸಿದ್ದ ಬೂದಿ ಗುಂಬಳವೊಂದನ್ನು ಹಸುವೊಂದು ಅಚ್ಚುಕಟ್ಟಾಗಿ ಮೇಯ್ದುಕೊಂಡು,ಒಂದು ಚೂರೂ ಬಿಡದಂತೆ ತಿಂದು ಹಾಕಿದ್ದನ್ನು ನೋಡಿದೆವು.ಕವಿತಾ ನಗುತ್ತಾ,” ಪ್ರಾಣಿಗಳೇ ವಾಸಿ ಕಣ್ರೀ,ಯಾವ ಮಾಟ, ಮಂತ್ರದ ಭಯವೂ ಇಲ್ಲ,” ಎಂದಾಗ ನನಗೂ ನಗು ಬಂತು.ಅಂದಿನಿಂದ ಮಾಟ ಗೀಟಕ್ಕೆಲ್ಲ ಹೆದರದೆ, ಮೆಟ್ಟಿಕೊಂಡೇ ಓಡಾಡುವಷ್ಟು ಧೈರ್ಯ ಕೂಡ ಬಂತು.

ನಗರ ಪಾಲಿಕೆಯವರು ಈ ಮೂರು ರಸ್ತೆ ಸೇರೋ ಕಡೆ ಅಲ್ಲಲ್ಲಿ ರಸ್ತೆ ಬದಿ,ಚರಂಡಿಗಳು ಸೇರೋ ಕಡೆ ,ಅದಕ್ಕೆ ಅಡ್ಡನಾಗಿ ಕಟ್ಟೆಗಳ ಕೂಡ ಕಟ್ಟಿದ್ದಾರೆ.ಅವುಗಳ ಮೇಲೆ ಕುಳಿತು,ನಿಂತು ,ಮಲಗಿ ಅಂತೆಲ್ಲಾ ಯೋಗಾಭ್ಯಾಸ,ಪ್ರಾಣಾಯಾಮ, ವ್ಯಾಯಾಮ ಮಾಡೋರೂ ಎಷ್ಟೊಂದು ಜನ ನೋಡಲು ಸಿಗ್ತಾರೆ.”ಅಯ್ಯೋ ಅಕಸ್ಮಾತ್ ಹೊರಳಿಕೊಂಡು ಚರಂಡಿಯೊಳಕ್ಕೆ ಬಿದ್ದು ಹೋದರೇನು ಗತಿ,” ಅನ್ನೋ ಭಯ ಕವಿತಂಗೆ.ಅವರ ಭಯ ಒಮ್ಮೆ ನಿಜವೂ ಆಗಿ ಬಿಟ್ಟಿತು.ಬೆಳಗಿನ ಜಾವಕ್ಕೇ ವಾಕ್ ಗೆಂದು ಬಂದ ಒಬ್ಬರು ಅಜ್ಜಿ ಸುಸ್ತು ಎಂದು ಒಂದು ಕಟ್ಟೆ ಮೇಲೆ ಕುಳಿತವರು ಹಾಗೇ ತಲೆ ತಿರುಗಿ ಹಿಂದಕ್ಕೆ ಉರುಳಿಕೊಂಡು ಚರಂಡಿಯೊಳಗೆ ಬಿದ್ದು ಬಿಟ್ಟಿದ್ದಾರೆ.ಚರಂಡಿಯೊಳಗೂ ಸಾಕಷ್ಟು ಗಿಡಗಳು ಬೆಳೆದು ಕೊಂಡಿದ್ದರಿಂದ ಅದರೊಳಗೆ ಸೇರಿಕೊಂಡ ಇವರು ಯಾರಿಗಾದರು ಕಾಣುವ ಹಾಗೂ ಇರಲಿಲ್ಲ.ಬೆಳಗಿನ ವಾಕ್ ಮುಗಿಸಿ ಎಷ್ಟು ಹೊತ್ತಾದರೂ ಬಾರದ ಇವರ ಬಗ್ಗೆ ಮನೆಯವರಿಗೆ ಆತಂಕ ಶುರುವಾಗಿ ಇಡೀ ದಿನ ಹುಡುಕಿದರೂ ಸಿಕ್ಕಿಲ್ಲ.ಅಂತೂ ಕಡೆಗೆ ಯಾರೋ “ಆ ಕಟ್ಟೆಯ ಮೇಲೆ ಕುಳಿತಿದ್ದ ಹಾಗೆ ಕಂಡೆ” ಎಂದದ್ದು ಕೇಳಿ ಇವರು, ಕಟ್ಟೆ ಹಿಂದಿನ ಚರಂಡಿಯೊಳಗಿಳಿದು ನೋಡುವಷ್ಟರಲ್ಲಿ ಆ ಅಜ್ಜಿಯ ಪ್ರಾಣ ಹಾರಿ ಹೋಗಿ ಸುಮಾರು ಹೊತ್ತಾಗಿತ್ತು. ಆ ದಿನ ಆದ ದುಃಖ ಮಾತ್ರ ಅಷ್ಟಿಷ್ಟಲ್ಲ.ಈಗ ನಾವಿಬ್ಬರೂ ಎಲ್ಲಿಯಾದರೂ ಯಾರಾದರೂ ಕಟ್ಟೆ ಮೇಲೆ ಕುಳಿತುಕೊಂಡಿರುವುದ ಕಂಡರೆ ಒಂದೆರಡು ಎಚ್ಚರದ ಮಾತು ಹೇಳಿಯೇ ಮುಂದೆ ಹೋಗುತ್ತೇವೆ.

ಬಡಾವಣೆಯಿಂದ ದೂರ ದೂರಕ್ಕೆ ಹೋದ ಹಾಗೆಲ್ಲ ಮನೆಗಳು ವಿರಳವಾಗುತ್ತಾ, ಮರಗಿಡಗಳ ಸೆದಕಲು ದಟ್ಟವಾಗುತ್ತಾ ಹೋಗುತ್ತದೆ.ಅಲ್ಲಿನ ಚರಂಡಿ ಕಟ್ಟೆಗಳ ಮೇಲೆ,ಹೆಂಡದ ಬಾಟಲಿಗಳು,ಖಾಲಿ ಸಿಗರೇಟ್ ಪ್ಯಾಕ್ ಗಳು , ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ಇರುವ ಆಹಾರದ ಅವಶೇಷಗಳು ರಾತ್ರಿ ಹೊತ್ತು ನಿರ್ಜನ ಪ್ರದೇಶಗಳಿಗೆ ಮೋಜಿಗಾಗಿ ಬರುವವರ ಕಥೆ ಹೇಳುತ್ತವೆ.ಅಂತಹ ದೂರದ ಏರಿಯಾಗಳ ಕಡೆಗೆ ನಾವು ವಾಕ್ ಹೋಗೋದು ಕಮ್ಮಿಯೇ. ಆದರೊಂದು ದಿನ ಕವಿತಾ “ಇಲ್ಲೇ ನಮ್ಮ ನೆಂಟರೊಬ್ಬರ ಮನೆಗೆ ಏನೋ ಕೇಳಲು ಹೋಗಬೇಕು ಬನ್ನಿ,”ಎಂದಾಗ,ಆಗಲೇ ಬೆಳಕು ಹರಿಯುತ್ತಿದ್ದದ್ದರಿಂದ ಧೈರ್ಯವಾಗಿ ಸಾಗಿದೆವು.ಅವರ ನೆಂಟರ ಮನೆ ಸುಮಾರು ಇಪ್ಪತ್ತು ಮೂವತ್ತು ಖಾಲಿ ಸೈಟ್ಗಳ ಮಧ್ಯೆ ಇದ್ದ ಒಂದು ಒಂಟಿ ಮನೆ.ಸಾಕಷ್ಟು ಮರ ,ಗಿಡ, ಪೊದೆ, ಹುಲ್ಲುರಾಶಿ ಮಧ್ಯೆ ಸಾಗಿ ಹೋಗಬೇಕಿತ್ತು.ಹಾಗೆ ಹೋಗುವಾಗ,ಎಲ್ಲೋ ಏನೋ,ಯಾರೋ ನರಳುವ ಹಾಗೆ ಸದ್ದು ಕೇಳಿ ನಾವಿಬ್ಬರೂ ಅವಕ್ಕಾಗಿ ನಿಂತೆವು.ಹಾಗೆ ಕಿವಿಗೊಟ್ಟು ಕೇಳಿದಾಗ ಹತ್ತಿರದ ಉಣ್ಣಿ ಮೆಳೆಯೊಂದರ ಮಧ್ಯದಿಂದ ಸದ್ದು ಕೇಳಿದಂತೆ ಅನ್ನಿಸಿತು.ನಮ್ಮಿಬ್ಬರಿಗೂ ಗಾಬರಿಯೋ ಗಾಬರಿ.”ಕವಿತ, ಬೇಡ ಬನ್ರಿ,ವಾಪಸ್ ಹೋಗೋಣ “ಎಂದರೂ ಕೇಳದೆ ಕವಿತ ಸದ್ದು ಬರುತ್ತಿದ್ದ ಕಡೆಗೆ ಧಾವಿಸಿ ಹೋದರು.ಬೇರೆ ದಾರಿ ಕಾಣದೆ ನಾನೂ ಹಿಂಬಾಲಿಸಿದೆ.ಹತ್ತಿರ ಹೋಗಿ ನೋಡಿದರೆ ಒಂದು ಇಪ್ಪತ್ತು, ಇಪ್ಪತ್ತೆರಡರ ವಯಸ್ಸಿನ ಹುಡುಗಿ ಮಕಾಡೆ ಬಿದ್ದುಕೊಂಡು ನರಳುತ್ತಿದೆ.ಬಟ್ಟೆ ಎಲ್ಲ ಅಸ್ತವ್ಯಸ್ತ, ತಲೆಗೂದಲೆಲ್ಲ ಕೆದರಿದೆ. ಅವಳ ಕೈ ಚೀಲವೊಂದು ಕಡೆ,ಚಪ್ಪಲಿಗಳು ಅಲ್ಲೊಂದು ಇಲ್ಲೊಂದು ಬಿದ್ದಿವೆ.ಮುಖ ವಾರೆಯಾಗಿ ಮಾಡಿಕೊಂಡು ಮಲಗಿ ನರಳುತ್ತಿದ್ದಾಳೆ.ಅಕ್ಕ ಪಕ್ಕದಲ್ಲಿ ಬಾಟಲಿಗಳು,ಸಿಗರೇಟ್ ಪ್ಯಾಕ್,ತಿಂದು ಬಿಸಾಡಿದ ಊಟದ ಪ್ಯಾಕ್ ಗಳು ಚೆಲ್ಲಿ ಹರಡಿಕೊಂಡಿವೆ.ಕವಿತಾ ಬಗ್ಗಿ ಅವಳನ್ನು ಅಲ್ಲಾಡಿಸಿ ಏಳಿಸಿದರು.ಕಷ್ಟದಲ್ಲಿ ಎದ್ದು ಕುಳಿತ ಅವಳಿಗೆ ಮಾತನಾಡಲೂ ತ್ರಾಣವಿರಲಿಲ್ಲ.ಕೈ ಸನ್ನೆ ಮಾಡಿ “ನೀರು” ಎಂದು ಕೇಳಿದಳು.ಅಷ್ಟರಲ್ಲಿ ಕವಿತಾಳ ನೆಂಟರ ಮನೆಯವರೂ ಬಂದರು.ಅವರಿಗೆ ಹೇಳಿ ನೀರು ತರಿಸಿ ಕೊಟ್ಟೆವು. ಕುಡಿದ ಮೇಲೆ ಅವಳಲ್ಲಿ ಸ್ವಲ್ಪ ಚೇತರಿಕೆ ಕಂಡಿತು.”ಯಾರಪ್ಪ ನೀನು,ಏನಾಯಿತು? ಇಲ್ಯಾಕೆ ಹೀಗೆ ಬಿದ್ದಿದ್ದಿಯಾ?,”ಎಂದೆಲ್ಲ ಕವಿತಾ ವಿಚಾರಿಸಿದರು.”ಆಂಟಿ ನನಗೊಂದು ಆಟೋ ತರಿಸಿಕೊಡಿ ,ನಾನು ಮನೆಗೆ ಹೋಗಬೇಕು” ಎಂದವಳು ಕೇಳಿಕೊಂಡಳು.ಇನ್ನೇನು ಕೇಳಿದರೂ ಉತ್ತರವಿಲ್ಲ.ಒಂದೇ ಮಾತು,” ನಾನು ಮನೆಗೆ ಹೋಗಬೇಕು.” ಕವಿತಾಳ ನೆಂಟರು ಯಾರಿಗೋ ಫೋನ್ ಮಾಡಿ ಒಂದು ಆಟೋ ಬರ ಮಾಡಿದರು.ಅವಳ ಕೈಗೆ ಸ್ವಲ್ಪ ದುಡ್ಡು ಕೊಟ್ಟು,ಆಟೋದವನಿಗೆ ಅವಳು ಹೇಳುವ ಕಡೆಗೆ ಬಿಡಲು ಹೇಳಿದೆವು. ಇಬ್ಬರೂ ಸೇರಿ ಅವಳನ್ನು ಮೆಲ್ಲಗೆ ಏಳಿಸಿ ಆಟೋ ಹತ್ತಿಸಲು ಕರೆದೊಯ್ಯುವಾಗ ಕವಿತಾಳ ಕಡೆ ತಿರುಗಿ ಆಕೆ,”ದುಡ್ಡೇನೂ ಬೇಡ ಆಂಟಿ,ನನ್ ಹತ್ರ ಇದೆ,ಇಬ್ಬರು ಬರ್ತೀವಿ ಅಂದಿದ್ರು,ನಾಲ್ಕು ಜನ ಬಂದ್ ಬಿಟ್ರು,ನಾನ್ ಎಷ್ಟ್ ಕೇಳ್ ಕೊಂಡ್ರೂ ಬಿಡ್ಲಿಲ್ಲ,ಏನ್ ಮಾಡೋದು, ನನ್ ಕರ್ಮ,” ಎಂದವಳು,ಮೆಲ್ಲನೆ ಆಟೋ ಹತ್ತಿ ಹೊರಟು ಹೋದಳು.ನಾವಿಬ್ಬರೂ ಗರ ಬಡಿದವರಂತೆ ಸ್ವಲ್ಪ ಹೊತ್ತು ಮೂಕರಾಗಿ ಅಲ್ಲೇ ನಿಂತು ಬಿಟ್ಟೆವು.ನಂತರ ಸಾವರಿಸಿಕೊಂಡು ಅಲ್ಲಿಂದ ಹೊರಟು ಮನೆ ಕಡೆ ಮರಳಿ ಬರುವಾಗ,ಕವಿತಾ” ಪಾಪ ಕಣ್ರೀ,ಯಾರ ಮಗಳೋ ಏನೋ, ಈಗ ನೋಡಿದ್ದಿದ್ರೆ ಹೆತ್ತ ಹೊಟ್ಟೆಗೆ ಎಷ್ಟು ಸಂಕಟವಾಗುತ್ತಿತ್ತೋ,”ಎನ್ನುವಷ್ಟರಲ್ಲಿ ಅವರ ಗಂಟಲು ಕಟ್ಟಿ ಹೋಯಿತು.
ಮನೆಗೆ ಮರಳಿದ ಬಳಿಕ ಆ ದಿನವೇ ಕವಿತ ನಗರ ಪಾಲಿಕೆಯವರಿಗೆ ಫೋನ್ ಮಾಡಿ ದಬಾಯಿಸಿದ್ದೇ ದಬಾಯಿಸಿದ್ದು.”ವರ್ಷ ವರ್ಷ ಬಿಡದೇ ಮನೆ ಕಂದಾಯ ಕಟ್ಟಿಸಿ ಕೊಳ್ಳುತ್ತೀರ,ಒಂದು ಸ್ವಲ್ಪ ಸೆದಕಲ ಕ್ಲೀನ್ ಮಾಡಿಸಲು ಆಗೋಲ್ಲವಾ?ಮಕ್ಕಳು ಮರಿ ಇರೋ ಜಾಗ, ಹಾವು ಗೀವು ಸೇರ್ಕೊಂಡ್ರೆ ಏನ್ ಮಾಡೋದು,”ಎಂದೆಲ್ಲ ಒಂದೆರಡು ದಿನ ಬಿಡದೇ ಕರೆ ಮಾಡಿ ದಬಾಯಿಸಿದರು.ಅಂತೂ ಒಂದು ದಿನ ನಗರಪಾಲಿಕೆಯವರು ಬಂದು ಮಾಡಿದ್ದೇನು! ಬೆಳೆದು ನಿಂತಿದ್ದ ಹುಲ್ಲುರಾಶಿಗೆ ಬೆಂಕಿ ಕೊಟ್ಟರು.ಒಂದು ಇಡೀ ದಿನ ಬಡಾವಣೆ ತುಂಬೆಲ್ಲಾ ಹೊಗೆಯೋ ಹೊಗೆ.ಮಾರನೇ ದಿನಕ್ಕೆ ಅಲ್ಲಲ್ಲಿ ಮೈ ಕೈ ಸುಟ್ಟುಕೊಂಡ ಹಾಗಿದ್ದ ನೆಲ, ಎಲೆಗಳನ್ನೆಲ್ಲ ಸುಟ್ಟುಕೊಂಡು,ಮೂಳೆ ಮೂಳೆ ಬಿಟ್ಟು ಕೊಂಡ ಹಾಗೆ ಒಣಕಲು ರೆಂಬೆ ಕೊಂಬೆಗಳ ಬಿಟ್ಟುಕೊಂಡು ನಿಂತಿದ್ದ ಗಿಡ,ಮರ ,ಪೊದೆಗಳನ್ನು ನೋಡಲು ಕಣ್ಣಿಗೆ ಹಿಂಸೆ ಅನ್ನಿಸಿದರೂ ,”ಸ್ವಲ್ಪ ಧೈರ್ಯವಾಗಿ ಆಸುಪಾಸು ಓಡಾಡ ಬಹುದಲ್ಲವ”,ಎಂದುಕೊಂಡು ಸಮಾಧಾನ ತಂದು ಕೊಂಡೆವು. ಆದರದು ಸ್ವಲ್ಪ ದಿನ ಮಾತ್ರ.ಮತ್ತೆರಡು ವಾರಕ್ಕೇ ಹುಲ್ಲು ಬೆಳೆದು ಹರಡಿ,ಗಿಡಮರಗಳು ಚಿಗುರಿ ಮತ್ತೆ ಬಡಾವಣೆ ಹಸಿರಿನಿಂದ ತುಂಬಿಕೊಂಡಿತು.ನಾವೇ ದೂರ ದೂರಕ್ಕೆ ವಾಕ್ ಹೋಗುವುದು ಬಿಟ್ಟು,ಮನೆ ಸುತ್ತ ಮಾತ್ರ ಸುತ್ತಿಕೊಂಡು ಸುಮ್ಮನಿದ್ದೇವೆ.


9 thoughts on “ಬೆಳಗಿನ ವಾಕ್ ನಲ್ಲಿ

  1. You have narrated the topic Morning walk so well Samatha.. very realistic incidents..bt the last incidence is really harsh to digest whether it’s invited or uninvited problem..n hope it’s jus a story

  2. ಎಂದಿನಂತೆ ತುಂಬಾ ಚೆಂದ ಆಗಿದೆ ಸಮತಾ, ಖುಷಿ

  3. ತುಂಬಾ ಚೆನ್ನಾಗಿದೆ..ಗ್ರಾಮೀಣ ಭಾಷೆ ಸೊಗಸಾಗಿದೆ.ಮಹಿಳಾ ದಿನಾಚರಣೆ ಗೆ ಸೂಕ್ತ

  4. ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
    ಸಮತಾ

Leave a Reply

Back To Top