ಜೀವನ ತೇರು

ಕಾವ್ಯ ಸಂಗಾತಿ

ಜೀವನ ತೇರು

ಭೀಮರಾಯ ಹೇಮನೂರ

ಐವತ್ತರ ಏರಿಯನೇರಿ
ಮೆಲ್ಲಗೆ ಇಳಿಯುತ್ತಿರುವೆ ನೋಡು
ನನಗೀಗ ಐವತ್ತೆರಡು.

ಏರಿನ ದಾರಿಗೆ ನಡೆಯುವುದೆಂದರೆ ಅದೇನೋ…
ಕೋರಿಸಿದ್ಧನ ಜಾತ್ರೆಗೆ ನಡೆದ ಸಂಭ್ರಮ
ನೆರೆದ ಜನರ ನೂಕು ನುಗ್ಗಲು ಲೆಕ್ಕವಿಲ್ಲ
ಕೊರೆವ ಚಳಿಗಾಳಿಯಡೆ ಲಕ್ಷವಿಲ್ಲ
ಸುರಿವ ಮಳೆ ಬಿಸಿಲಿದ್ದರೂ ಚಿಂತೆಯಿಲ್ಲ
ಸಾವಿರ ಮಣಭಾರದ ಬಾಳ
ತೇರನೆಳೆಯುವ ಸಡಗರ

ಪರಮ ಭಕ್ತಿಯ ಪರಾಕಾಷ್ಠೆಯೋ…
ಎಲ್ಲರೊಗ್ಗೂಡಿ ಎಳೆದ ಫಲವೋ..
ಗುರು ಕಾರುಣ್ಯದಿಂದ ಎಳೆದ ತೇರು
ಸರ ಸರನೆ ಸಾಗಿ ಬಂತು
ಆ ಕಡೆ ಈ ಕಡೆ ತಾಗಿ ಬಂತು
ಒಮ್ಮೊಮ್ಮೆ ಮುಗ್ಗರಿಸಿದಂತಾಗಿ ತೂಗಿ ಬಂತು

ನೆರೆದ ಜನ ಸಾಗರದ ನಡುವೆ
ಜೋರಾದ ಹಕಾರಿ, ಹೆಮ್ಮೆಯ ಕೇಕೆ
ಗುನುಗುನು, ಪಿಸುಪಿಸು, ಗುಸುಗುಸು
ದೂರದಿಂದಲಿ ಎಸೆದ ಬಾಳೆಹಣ್ಣು ಉತ್ತುತ್ತಿ
ತೇರನಪ್ಪಳಸಿ ಸೀಳಿದ ಕಬ್ಬು, ತೆಂಗಿನ ಕಾಯಿ
ಉತ್ಸಾಹದ ಉತ್ಸವಕ್ಕೆ ಪೂರಕವೇನೋ…
ಭಕ್ಕಿ ಗೌರವ ಅಭಿಮಾನದ ಪ್ರತೀಕವೇನೋ….
ಹಾಗೆಂದೇ ತಿಳಿದು ಸಾಗಿ ಬಂತು ತೇರು.

ನನ್ನ ತೇರಿದು ಹೊನ್ನ ತೇರಿದು
ನನ್ನ ಬಾಳಿನ ಚೆನ್ನ ತೇರಿದು
ನಾನಷ್ಟೇ ಎಳೆಯಲಾಗದು
ಇಲ್ಲಿಯವರೆಗೆ ಎಳೆದಿದ್ದೀರಿ
ಕಾಲೆಳೆಯುವವರನು ಮೀರಿ

ಅರ್ಧ ದಾರಿಗೆ ಎಳೆದು ಬಿಡುವಂತಿಲ್ಲ ಬನ್ನಿರಿ
ತೇರಿಗೊಂದು ಗೂಡಿದೆ, ಮರಳಿ ಗೂಡಿಗೆ ತನ್ನಿರಿ.
—————

Leave a Reply

Back To Top