ಅಂಕಣ ಬರಹ

ಗಜಲ್ ಲೋಕ

ಸ್ನೇಹಲತಾ ರವರ ಗಜಲ್ ಗಳಲ್ಲಿ ಶಶಿಯ ಏಕಾಂತ..

ಹಲೋ.. ನನ್ನ ಗಜಲ್ ಹೃದಯಗಳೆ…

ತಿರುಗುವ ಸಮಯದ ಪರಿಧಿಯಲ್ಲಿ ಮಗದೊಮ್ಮೆ ತಮ್ಮ ಮುಂದೆ ಬರುತಿರುವೆ ಗಜಲ್ ಅಂಗಳದ ಮಾಣಿಕ್ಯದೊಂದಿಗೆ; ಅದೂ ಗಜಲ್ ಚಾಂದನಿಯನ್ನು ಪ್ರೀತಿಸುತ್ತಿರುವ ಗಜಲ್ ಗೋ ಅವರ ಗಜಲ್ ಬಟ್ಟಲು ಹಿಡಿದು…!!

ಕೇವಲ ಕಣ್ಣುಗಳಿಂದ ಜಗವನ್ನು ನೋಡಲಾಗುವುದಿಲ್ಲ

ಹೃದಯದ ಬಡಿತವನ್ನು ಕೈದೀವಿಗೆಯಾಗಿಸಿ ನೋಡು

                             –ನಿದಾ ಫಾಜಲಿ 

       ತತ್ವಶಾಸ್ತ್ರದ ಪರಿಕಲ್ಪನೆಯ ಜಾಡು ಹಿಡಿದು ಹೊರಟರೆ ಪ್ರತಿ ಮನುಷ್ಯನ ಬದುಕು ಸಾವಿಗೆ ಚಿರಋಣಿಯಾಗಿದೆ. ಹುಟ್ಟು-ಸಾವುಗಳು ಜೀವನದಿಯ ಎರಡು ತೀರಗಳು. ಆವಾಗಾವಾಗ ಮುಖಾಮುಖಿಯಾಗುತ್ತಲೆ ಬಾಳಿನ ಮಹತ್ವವನ್ನು ಸಾರುತ್ತವೆ. ನಿರಂತರವಾಗಿ ಹರಿಯುತ್ತಿರುವ ಈ ಪ್ರವಾಹವನ್ನು ದಾಟುವ, ದಾಟಿಸುವ ದೋಣಿಯೆ ನಮ್ಮ ಬದುಕು. ಜನನ-ಮರಣಗಳ ತಾಕಲಾಟದಲ್ಲಿ ಬದುಕನ್ನು ಹಸನುಗೊಳಿಸುವ ಸಾಧನವೆಂದರೆ ಮನುಷ್ಯನ ವಿವೇಚನೆ. ಈ ವಿವೇಚನೆ ಸಾಧ್ಯವಾಗುವುದು, ಸಾಧುವಾಗುವುದು ಬೌದ್ಧಿಕ ಊರುಗೋಲಿನಿಂದ. ವಿವೇಕದ ಸಾಣೆಯಲ್ಲಿ ಧೀಃಶಕ್ತಿಯನ್ನು ಒರೆಗೆ ಹಚ್ಚಿದಾಗಲೆ ಬದುಕು ಶುಚಿಯಾಗುತ್ತದೆ. ವಿವೇಕ ಶೂನ್ಯದಿಂದ ಬಾಳು ಕಲಂಕಿತಗೊಂಡು ಸುತ್ತ ಮುತ್ತಲಿನ ಪರಿಸರವನ್ನೆ ವಿಷಮಯಗೊಳಿಸುತ್ತದೆ. ಈ ನಿಟ್ಟಿನಲ್ಲಿ ತೊಟ್ಟಿಲು-ಗೋರಿಯ ನಡುವಿನ ಪ್ರಯಣಕ್ಕೆ ಪ್ರೀತಿಯ ಬಟ್ಟಲು ಸಂಜೀವಿನಿಯಾಗಿದೆ. ಅನಾದಿ ಕಾಲದಿಂದಲೂ ಪ್ರೀತಿಯ ಅಮೃತವನ್ನು ಹಂಚುತಿರುವ ಫಕೀರನೆಂದರೆ ಸೂಫಿ ಹೃದಯದ ಕಲಾ ರಸಿಕರು. ಈ ನೆಲೆಯಲ್ಲಿ ಚರಾಚರದಲ್ಲೆಲ್ಲ ಸೌಂದರ್ಯದ ಸಾನ್ನಿಧ್ಯವನ್ನು ಅನುಭವಿಸಿ, ಜಗಕ್ಕೆಲ್ಲ ಉಣಬಡಿಸುತ್ತಿರುವ ಕವಿ ಮುಖ್ಯವಾಗುತ್ತಾನೆ. ಅನುಭವದ ಅಂತರಂಗವನ್ನು ಭಾಷೆಯೆಂಬ ಬಹಿರಂಗದ ಗಡಿಗೆಯಲ್ಲಿ ಬೇಯಿಸಿ ಬಾಳಿನ ಸಾರವನ್ನು ಹಂಚುತಿದ್ದಾನೆ. ಇಂತಹ ಪಕ್ವಾನ್ನಗಳಲ್ಲಿ ಗಜಲ್ ನ ರುಚಿ ವರ್ಣನೆಗೆ ಸಿಲುಕದು, ಅದನ್ನು ಸವಿದೆ ಅರಿಯಬೇಕು. ಇದು ಉರ್ದು ಭಾಷೆ ಮತ್ತು ಸಂಸ್ಕೃತಿಯಲ್ಲಿ ಬೇರು ಬಿಟ್ಟು, ಕದಡಿದ ಮನಸುಗಳಿಗೆ ತಿಳಿಗೊಳಿಸುವ ಮುಲಾಮು ಆಗಿದೆ. ಇಂದು ಈ ಗಜಲ್ ಚಾಂದನಿ ಉದಯಿಸಿದ ಊರುಗಳೆ ಇಲ್ಲ. ಕರುನಾಡಿನ, ಕನ್ನಡ ಕಾವ್ಯ ಪ್ರಕಾರಗಳಲ್ಲಿ ಗಜಲ್ ಮುಂಚೂಣಿಯಲ್ಲಿದ್ದು, ಕಲಾರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದೆ. ಮನುಷ್ಯ ತಾನು ಹಾಕಿಕೊಂಡ ಜಾತಿಯ ಮಿತಿಯನ್ನು, ನಿರ್ಮಿಸಿಕೊಂಡ ಧರ್ಮದ ಗೋಡೆಗಳನ್ನು ಮೀರಿ ನಿಂತು ಮಾನವೀಯತೆಯನ್ನು ಸಾರುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿ ಗಜಲ್ ಗಳನ್ನು ಪ್ರೀತಿಸುತ್ತ, ಕನ್ನಡದಲ್ಲಿ ಕೋಮಲ ಗಜಲ್ ಗಳನ್ನು ರಚಿಸಿರುವ, ರಚಿಸುತ್ತಿರುವ ಸ್ನೇಹಲತಾ ಗೌನಳ್ಳಿಯವರ ಗಜಲ್ ಲೋಕವನ್ನೊಮ್ಮೆ ಪ್ರವೇಶಿಸೋಣವೆ.. ಬಲಗಾಲಿಟ್ಟು ಒಳಗೆ ಬನ್ನಿ..!!

            ಕಲಬುರಗಿಯ ಚಿಂಚೋಳಿ ತಾಲ್ಲೂಕಿನ ಐನೋಳ್ಳಿ ಗ್ರಾಮದಲ್ಲಿ ಸುಭಾಶ್ಚಂದ್ರ ಗೌನಳ್ಳಿ ಹಾಗೂ ನೀಲಮ್ಮ ಗೌನಳ್ಳಿ ದಂಪತಿಗಳ ಮುದ್ದಿನ ಮಗಳಾಗಿ 1991ರ ಏಪ್ರಿಲ್ 15ರಂದು ಜನಿಸಿದ ಸ್ನೇಹಲತಾ ಗೌನಳ್ಳಿಯವರು ತಮ್ಮ ಹುಟ್ಟುರಿನ ಸರಕಾರಿ ಶಾಲೆಯಲ್ಲಿ ಒಂದರಿಂದ ಹತ್ತನೇಯ ತರಗತಿಯವರೆಗೆ ಓದಿ, ಮುಂದಿನ ತಮ್ಮ ವಿದ್ಯಾಭ್ಯಾಸವನ್ನು ಚಿಂಚೋಳಿಯ ಕನ್ಯಾ ಪಿಯುಸಿ ಕಾಲೇಜು ಮತ್ತು ಸಿ.ಬಿ.ಪಾಟೀಲ್ ಪದವಿ ಕಾಲೇಜಿನಲ್ಲಿ ಮುಗಿಸಿದರು. ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಿಂದ ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು, ಹಿಂಗುಲಾಂಬಿಕ ಕಾಲೇಜಿನಲ್ಲಿ ಬಿ.ಎಡ್.ಪದವಿ ಪಡೆದರು. ನಂತರ ಎರಡು ವರ್ಷ ಚಿಂಚೋಳಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿರುವ ಇವರು ಕಾವ್ಯ, ವಿಮರ್ಶೆ, ಅನುವಾದ, ಗಜಲ್… ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡಿದ್ದಾರೆ. ಹಲವಾರು ಸಾಹಿತ್ಯಿಕ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿದ್ದು, “ಉರಿವ ಚಂದಿರ” ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಕಾವ್ಯಮನೆ ಪ್ರಕಾಶನದ “ಕಾವ್ಯ ಪುರಸ್ಕಾರ” ಪ್ರಮುಖವಾಗಿದೆ.

         “Laugh and the world laughs with you; but if you weep nobody will weep with you” ಎಂಬ ಚಾರ್ಲಿ ಚಾಪ್ಲಿನ್ ಅವರ ಮಾತು ಬದುಕಿನ ಒಳ-ಹೊರಗನ್ನು ಸೂಕ್ಷ್ಮವಾಗಿ ದಾಖಲಿಸುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಗೋ ತನ್ನ ಕಂಬನಿಗೆ ಆಣೆಕಟ್ಟು ಕಟ್ಟುವುದು ಉಪಮೆ, ರೂಪಕ, ಪ್ರತಿಮೆಗಳಿಂದ. ಕಣ್ಣೀರಿಗೂ ಕಣ್ಣೀರು ತರಿಸುವ ಹಾಗೂ ಆ ಕಣ್ಣೀರನ್ನೆ ಅಮೃತದಂತೆ ಕುಡಿಸುವ ವಿಶ್ವದ ಏಕೈಕ ಕಾವ್ಯ ಪ್ರಕಾರವೆಂದರೆ ಅದು ಗಜಲ್. ಈ ದಿಸೆಯಲ್ಲಿ ಶ್ರೀಯುತರ ಗಜಲ್ ಗಳು  ನಿರೀಕ್ಷೆಗಳು, ಕನವರಿಕೆಗಳು, ಕನಸುಗಳು, ತಲ್ಲಣಗಳು ಜೀವನದ ಹಲವಾರು ತುಮುಲಗಳಿಗೆ ಸಾಂತ್ವಾನವನ್ನು ನೀಡುತ್ತವೆ. ಇದರೊಂದಿಗೆ ಸಾಮಾಜಿಕ ತಲ್ಲಣಗಳಿಗೆ ಧ್ವನಿಯಾಗಿರುವ ಇವರ ಗಜಲ್ ಗಳ ಪರಿ ಸಹೃದಯ ಓದುಗರ ಚಿಂತನೆಯ ಕ್ಷಿತಿಜವನ್ನು ವಿಸ್ತರಿಸುತ್ತವೆ. ಮನುಷ್ಯ ಪ್ರೀತಿಯ ಪ್ರತಿಬಿಂಬ ಮೂಡಿಸುತ್ತ, ಆಶಾವಾದದ ಚಿಲುಮೆಯಲ್ಲಿ ಇವರ ಗಜಲ್ ಗಳು ಮಿಂದೆದ್ದಿವೆ. ಪಶು, ಪಕ್ಷಿ, ಗಿಡ-ಮರ ಹಾಗೂ ಜೀವ ಸಂಕುಲಗಳಲ್ಲಿ ‘ಜಾತಿ’ ಎನ್ನುವುದು ಗುರುತಿನ ಕಲೆ ಆಗಿದೆ. ಆದರೆ ತಾನು ಬುದ್ಧಿವಂತನೆಂದು ಬೀಗುವ ಮನುಕುಲದಲ್ಲಿ ‘ಜಾತಿ’ ಎನ್ನುವುದು ಶೋಷಿಸುವ, ಬಳಸಿಕೊಳ್ಳುವ ಹಾಗೂ ಅಂಧಕಾರವನ್ನು ಸುರಿಸುವ ಅನಿಷ್ಟ ಪದ್ಧತಿಯಾಗಿದೆ. ಇಂತಹ ‘ಜಾತಿ’ಯನ್ನೆ ಜಾಗೃತಿಯ ದೀಪವನ್ನಾಗಿಸಿಕೊಂಡು ಇಡೀ ಜೀವಕೋಟಿಗೆ ಕೊಳ್ಳಿ ಇಡುತ್ತಿರುವುದನ್ನು ಗಜಲ್ ಗೋ ಅವರು ತುಂಬಾ ಸೂಕ್ಷ್ಮ ಸಂವೇದನೆಯಲ್ಲಿ ಚಾಟಿಯನ್ನು ಬೀಸಿದ್ದಾರೆ.

ಜಾತಿಯ ಹೆಸರಲ್ಲಿ ಜಾಗೃತಿ ಮೂಡಿಸುವ ಮೂಢರಿಗೆ ಧಿಕ್ಕಾರವಿರಲಿ

ಧರ್ಮದ ಹೆಸರೇಳಿ ರೊಚ್ಚಿಗೇಳಿಸುವ ಅಂಧರಿಗೆ ಧಿಕ್ಕಾರವಿರಲಿ

ನಾಗರಿಕತೆಯ, ಆಧುನಿಕತೆಯ ತವರೂರೆಂದು ಭಾವಿಸಿರುವ ಆಯಕಟ್ಟಿನ ನಗರಗಳಲ್ಲಿ ಜಾತಿಗೊಂದೊಂದು, ಧರ್ಮಕ್ಕೊಂದೊಂದು ಸಂಘ ಸಂಸ್ಥೆಗಳು, ಗುಡಿ-ಗುಂಡಾರಗಳು, ಚರ್ಚು-ಮಸೀದಿಗಳಿವೆ. ಅವುಗಳಲೆಲ್ಲ ತಮ್ಮ ತಮ್ಮ ಜಾತಿ-ಧರ್ಮಗಳ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತ, ಇನ್ನಿತರರನ್ನು ತೆಗಳುವ ತೆವಲನ್ನು ಇಲ್ಲಿ ಖಂಡಿಸಿದ್ದಾರೆ.

       ‘ಅಮಲು’ ಎಂದಾಗ ನಮಗೆ ತಟ್ಟನೆ ಕಣ್ಣಮುಂದೆ ಬರೋದು ಮದಿರೆ, ಮಧುಬಟ್ಟಲು, ಮೈಖಾನ. ಆದರೆ ಇವುಗಳಿಂದ ಉಂಟಾಗುವ ಅಮಲಿನ ವ್ಯಾಲಿಡಿಟಿ ತುಂಬಾನೇ ಕಡಿಮೆ. ಜೀವನವಿಡೀ ನಮ್ಮನ್ನು ಅಮಲಿನಲ್ಲಿ ತೇಲಿಸುವ, ಮುಳುಗಿಸುವ ಹಾಗೂ ನೋವನ್ನೂ ಆಲಂಗಿಸಲು ಹಚ್ಚುವ ಅನುಪಮ ಅಮಲೆಂದರೆ ಅದು ದೈವೀ ಪ್ರೀತಿ. ವಾಸನೆಯ ಪರಿಧಿಗೆ ದಕ್ಕಿದ ನಿರ್ಮಲ ಪ್ರೀತಿ. ಇಲ್ಲಿ ಮನಸ್ಸುಗಳು ಯಾವಾಗಲೂ ಬೆತ್ತಲೆಯಾಗಿಯೇ ಇರುತ್ತವೆ. ಇದನ್ನು ಗಜಲ್ ಗೋ ಅವರ ಒಂದು ಷೇರ್ ನಲ್ಲಿ ಗಮನಿಸೋಣ ಬನ್ನಿ.

ನಿನ್ನ ಅಮಲೇರಿದ ಬಳಿಕ ನಾನು ಇನ್ನಾವ ನಶೆಗೂ ತಡಕಾಡಲಿಲ್ಲ

ನೀನೆಂಬ ದಡಕ್ಕೆ ಪರಿತಪಿಸದ ಹೊರತು ಬೇರಾವ ಆಸೆಗೂ ತಡಕಾಡಲಿಲ್ಲ”  

ಪ್ರೀತಿ-ಪ್ರೇಮದ ಮುಂದೆ ಯಾವ ಅಮಲು ದೀರ್ಘಕಾಲ ಬಾಳಿಕೆ ಬರದು ಎಂಬುದನ್ನು ತುಂಬಾ ಸರಳವಾಗಿ ನಿರೂಪಿಸಿದ್ದಾರೆ. ಪ್ರತಿ ಪ್ರೇಮಿಯೂ ತಲುಪಬೇಕಾದ ದಡವೆಂದರೆ ತನ್ನ ಪ್ರೇಮಿಯ ಹೃದಯದ ಅಂಗಳು. ಆ ಅಂಗಳ ಬಿಟ್ಟರೆ ಬೇರೇನೂ ಬೇಕಿಲ್ಲ ಎಂಬ ಪ್ರೇಮಿಗಳ ಪ್ರಾರ್ಥನೆ ಗೀತೆ ಈ ಮೇಲಿನ ಷೇರ್ ನಲ್ಲಿ ಪ್ರತಿಧ್ವನಿಸುತ್ತಿದೆ.

        ಬದುಕಿನಲ್ಲಿ ಕಷ್ಟ ನಷ್ಟಗಳಿದ್ದರೂ ಬದುಕನ್ನು ಪ್ರೀತಿಸುವಂತೆ ಮಾಡುವ ಗರಡಿಮನೆ ಎಂದರೆ ಅದು ಗಜಲ್ ಆಲೆಮನೆ. ಅಂತೆಯೇ ಹಲವಾರು ಗಜಲ್ ಗೋ ಅವರು ತಾವು ಜೀವನವನ್ನು ಪ್ರೀತಿಸಿ ಗಜಲ್ ರಚಿಸಿ ಓದುಗರಲ್ಲೂ ಬಾಳಿನ ಬಗ್ಗೆ ಲವಲವಿಕೆ ಮೂಡಿಸಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ನೇಹಲತಾ ಗೌನಳ್ಳಿಯವರಿಂದ ಗಜಲ್ ಲೋಕ ಮತ್ತಷ್ಟು ಸಮೃದ್ಧಿಯಾಗಲಿ ಎಂದು ಶುಭ ಹಾರೈಸುತ್ತೇನೆ.

ಒಂದು ಕಣ್ಣೀರು ಹನಿ ನನ್ನನ್ನು ಮುಳುಗಿಸಿತು ಅವಳ ಚಿಂತೆಯಲ್ಲಿ

ಹನಿ ನೀರಿನಿಂದ ಗೌರವವೆಲ್ಲ ನೀರು ಪಾಲಾಯಿತು

                        –ಶೇಖ್ ಇಬ್ರಾಹಿಂ ಜೌಕ್

‘ಕಾಲ’ ಕೈಗೆಟುಕದ ತಾರೆಯಂತೆ, ಹಿಡಿಯುವ ಹುಂಬುತನ ನನ್ನಲಿಲ್ಲ.. ನಾನು ನನಗಾಗಿ ಮೀಸಲಿರುವ ‘ಸಮಯ’ಕ್ಕಾಗಿ ಕಾಯುವೆ, ಆ ‘ಘಳಿಗೆ’ಯಲ್ಲಿ ಮತ್ತೆ ನಿಮ್ಮ ಮುಂದೆ ಬರುವೆ. ನನ್ನ ಬರುವಿಕೆಗಾಗಿ ಕಾಯುವಿರಲ್ಲವೆ..


ಡಾ. ಮಲ್ಲಿನಾಥ ಎಸ್. ತಳವಾರ





ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

  1. ಗಜಲಗೋ ಸ್ನೇಹಲತಾ ಗೌನಳ್ಳಿ ಅವರ ಪರಿಚಯ ಅವರ ಗಜಲ್ಗಳ ಮೂಲಕ ಗಜಲ್ ನಾದ ಲೋಕ ದಲ್ಲಿ ಆಯಿತು ಮುಂದೆ ಹೊಸಪೇಟಿನಲ್ಲಿ ನಡೆದ ಗಜಲ್ ಗೋಷ್ಠಿಯಲ್ಲಿ ಅವರ ಪ್ರತ್ಯಕ್ಷ ದರ್ಶನ ಪಡೆದದ್ದು ಈಗ ನಿಮ್ಮ ಲೇಖನ ದಲ್ಲಿ ಅವರ ಪರಿಚಯಾ ಮತ್ತೆ ಮತ್ತೆ ಆಗಿದೆ. ಮಲ್ಲಿನಾಥ ಅವರೇ ತುಂಬಾ ಚೆನ್ನಾಗಿದೆ ನಿಮ್ಮ ಈ ಬರಹಅದಕ್ಕೆ ಗಜಲಗೋ, ಬರಹಗಾರ,ಹಾಗೂ ಸಂಗಾತಿ ಪತ್ರಿಕೆ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು

Leave a Reply

Back To Top