ಅಂಕಣ ಸಂಗಾತಿ

ಕಾವ್ಯದರ್ಪಣ

ನಾನು ನೋಡಿದ ಮೊದಲ ವೀರ

 ಬಾಳು ಕಲಿಸಿದ ಸಲಹೆಗಾರ

 ಬೆರಗು ಮೂಡಿಸೋ ಜಾದುಗಾರ ಅಪ್ಪಾ

 ಹಗಲು ಬೆವರಿನ ಕೂಲಿಕಾರ

 ರಾತ್ರಿ ಮನೆಯಲ್ಲಿ ಚೌಕಿದಾರ

 ಎಲ್ಲ ಕೊಡಿಸುವ ಸಾಹುಕಾರ ಅಪ್ಪ

 ಗದರೋ ಮೀಸೆಕಾರ

ಮನಸೇಕೋಮಲ

ನಿನ್ನ ಹೋಲೊ ಕರ್ಣ ಯಾರಿಲ್ಲ

   – ವಿ. ನಾಗೇಂದ್ರ ಪ್ರಸಾದ್

ಕಾವ್ಯ ಪ್ರವೇಶಿಕೆಯ ಮುನ್ನ

ಸಂಬಂಧ ಎಂಬುದು ಮನುಜನ ಕೌಟುಂಬಿಕ ಹಾಗೂ ಸಾಮಾಜಿಕ ಬದುಕಿನ ಒಂದು ಮಹತ್ವದ ಅಡಿಗಲ್ಲು. ಇಲ್ಲಿ ಪ್ರತಿಯೊಂದು ಬಾಂಧವ್ಯವೂ ಪ್ರೀತಿ,ವಾತ್ಸಲ್ಯ, ಮಮತೆ, ತ್ಯಾಗ, ಸ್ನೇಹಗಳ ಸರಪಳಿಯೊಂದಿಗೆ ಬೆಸೆದಿರುತ್ತದೆ. ಒಬ್ಬರು ಮತ್ತೊಬ್ಬರನ್ನು ಬಿಟ್ಟಿರಲಾಗದ ಬಂಧನ ಅವರ ನಡುವೆ ಏರ್ಪಟ್ಟಿರುತ್ತದೆ. ಪ್ರಮುಖವಾಗಿ ಅಪ್ಪ,ಅಮ್ಮ, ಮಕ್ಕಳ ನಡುವಿನ ಪ್ರೀತಿ ಅನನ್ಯ ಮತ್ತು ಅಮೋಘ. ಈ ನಡುವೆ ಯಾರೊಬ್ಬರ ಅಗಲಿಕೆಯಾದರೆ ಅದರಿಂದ ಆಗುವ ಯಾತನೆ, ದುಃಖ ವರ್ಣಿಸಲಸದಳ. ಅಷ್ಟು ಭಾವನಾತ್ಮಕ ಮತ್ತು ಮಾನಸಿಕ ಅವಲಂಬನೆ ಅವರುಗಳ ನಡುವೆ ಇರುತ್ತದೆ. ಅಮ್ಮ ಭೂಮಿಯಾದರೆ ಅಪ್ಪ ಆಗಸದಂತೆ ಯಾರೊಬ್ಬರ  ಕೊರತೆಯಾದರೂ ಅದು ಉಂಟುಮಾಡುವ ಶೋಕವನ್ನು ಪದಗಳಲ್ಲಿ ಬಂಧಿಸಲು ಅಸಾಧ್ಯ.

ಅಪ್ಪನ ಪ್ರೀತಿ ಎಂಬುದು ಸಾಗರದಾಳದಲ್ಲಿರುವ ಕಪ್ಪೆ ಚಿಪ್ಪಿನೊಳಗಿನ ಸ್ವಾತಿಮುತ್ತಂತೆ. ಅವನು ಮಕ್ಕಳ ಪಾಲಿನ ನಿಜವಾದ ನಾಯಕ. ತನ್ನ ಕಣ್ಣೊಳಗಿನ ಎಲ್ಲ ಕನಸುಗಳನ್ನು ಮಕ್ಕಳಿಂದ ನನಸು ಮಾಡಿಕೊಳ್ಳಲು ಹಾತೊರೆಯುತ್ತಾನೆ. ಮೇಲ್ನೋಟಕ್ಕೆ ಅಪ್ಪ ಗಂಭೀರತೆಯ ಸ್ವರೂಪದಂತೆ ಕಂಡರೂ ಅವನ ಮನಸ್ಸು ಮಕ್ಕಳ ವಿಚಾರದಲ್ಲಿ ಬೆಣ್ಣೆಯುಂಡೆಯಂತೆ. ಅದಕ್ಕೆ ಮಕ್ಕಳ ಸೋಲಿನ ಅಥವಾ ಕಷ್ಟದ ಅಥವಾ ಸಾವಿನ ಬಿಸಿ ಸ್ವಲ್ಪ ತಾಗಿದರೂ ಸಾಕು ಕರಗಿ ಶೋಕಸಾಗರವಾಗಿ ಹರಿಯುತ್ತದೆ. ಅಪ್ಪ ಭಾವುಕ ಲೋಕದಿಂದ ಹೊರತಾಗಿ ಜಗತ್ತಿನ ಪರಿಚಯವನ್ನು ಮಾಡಿಕೊಡುವ ಮೂಲಕ ಮಕ್ಕಳಿಗೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಪರಿಹರಿಸಿಕೊಳ್ಳಲು,ಬದುಕಿನಲಿ ಯಶಸ್ಸು ಸಾಧಿಸಲು ಆಸರೆಯಾಗುತ್ತಾನೆ. ಅದು ಈಡೇರಿದರೆ ಅವನಂತಹ ಪರಮಸುಖಿ ಮತ್ತೊಬ್ಬನಿಲ್ಲ. ಒಂದು ವೇಳೆ ಅದು ಹುಸಿಯಾದರೆ ನಿತ್ಯ ದುಃಖಿಯಾಗುವನು. ಗಿಡಕ್ಕೆ ತಾಯಿ ಬೇರು ಇದ್ದಂತೆ ಅಪ್ಪ ಮಕ್ಕಳಿಗೆ. ಗಿಡವು ನೀರು ಗೊಬ್ಬರದ ಸಾರವನ್ನು ಹೀರಿಕೊಂಡು ಸಿಹಿಯಾದ ಫಲಕೊಡುವಂತೆ ತಂದೆಯಾದವನು ನೋವು, ಕಷ್ಟ, ಬಡತನ, ಅವಮಾನಗಳನ್ನೆಲ್ಲಾ ಸಹಿಸಿಕೊಂಡು ಮಕ್ಕಳಿಗೆ ಸ್ವಾಭಿಮಾನಿ ಬದುಕು ಕಟ್ಟುತ್ತಾನೆ. ಅಪ್ಪ ಎಂದರೆ ಮಗನಿಗೆ ಅಪಾರ ಪ್ರೀತಿ. ಇಂದು ನಾನು  ಅಪ್ಪನಲ್ಲಿ ತನ್ನ ಮಗಳನ್ನು ಕಾಣುವ ಕವಿಯ ಮನೋಗತವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಬಾಳ ದೋಣಿಯ ದಿಕ್ಸೂಚಿ ಅಪ್ಪ

ಕವಿ ಪರಿಚಯ

ಮೈಸೂರಿನ ಟಿ ನರಸೀಪುರ ದವರಾದ ಎಂ.‌ ಜವರಾಜ್ ರವರು ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರಸಕ್ತ ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀಳ್ಗವಿತೆಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಇವರು ಕಥೆ, ಕವನ, ಕಾದಂಬರಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ವಿಮರ್ಶೆಯು ಇವರ ಇತ್ತೀಚಿನ ಸಾಹಿತ್ಯ ಪ್ರಕಾರವಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಬಹುವಾಗಿ ತೊಡಗಿಸಿಕೊಂಡಿರುವ ಜವರಾಜ್ ರವರು 2013ರಲ್ಲಿ “ಕಿಡಿ” ಕಾದಂಬರಿ, 2009ರಲ್ಲಿ “ನವುಲೂರಮ್ಮನ ಕಥೆ” ಕಥಾಸಂಕಲನವನ್ನು ಪ್ರಕಟಿಸಿದ್ದು ಇದು 2021ರಲ್ಲಿ ಮರುಮುದ್ರಣ ಕಂಡಿದ್ದರೆ, “ಅವ್ವ ನನ್ಹೆತ್ತು ಮುದ್ದಾಡುವಾಗ” ಕವಿತೆಗಳ ಸಂಕಲನ ಈಗಾಗಲೇ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದೆ.

ಮೆಟ್ಟು ಹೇಳಿದ ಕಥಾಪ್ರಸಂಗ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ದೀರ್ಘ ಕಥನಕಾವ್ಯ ಮತ್ತು “ಹೊಸ ತಲೆಮಾರಿನ ಕೃತಿಗಳ ವಿಮರ್ಶೆ” ಎರಡು ಪುಸ್ತಕಗಳು ಬಿಡುಗಡೆಗೆ ಅಣಿಯಾಗುತ್ತಿದ್ದು ಓದುಗರನ್ನು ಶೀಘ್ರವಾಗಿ ಎದುರುಗೊಳ್ಳಲಿವೆ.

ಪ್ರಸ್ತುತ ಕವಿತೆಯನ್ನು “ಅವ್ವ ನನ್ಹೆತ್ತು ಮುದ್ದಾಡುವಾಗ” ಕವನ. ಸಂಕಲನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.

ಕವಿತೆಯ ಆಶಯ

“ಪುತ್ರ ಶೋಕಂ ನಿರಂತರಂ” ಎನ್ನುವ ನುಡಿಯು ಕರುಳ ಕುಡಿಯ ಅಗಲಿಕೆಯ ನೋವು ಎಷ್ಟಿರುತ್ತದೆ ಎಂಬುದನ್ನು ಸಾಬೀತು ಪಡಿಸುತ್ತದೆ. ಜೀವಮಾನದುದ್ದಕ್ಕೂ ಪ್ರತಿಕ್ಷಣವು ಚೂರಿಯಂತೆ ಇರಿಯುತ್ತಿರುತ್ತದೆ. ಈ ಕವಿತೆಯಲ್ಲಿ ಆಕಸ್ಮಿಕವಾಗಿ ತೀರಿಕೊಂಡ ಮಗಳ ಕುರಿತು ಅಪ್ಪನ ಮನೋವೇದನೆಯನ್ನು ಕಾಣುತ್ತೇವೆ.ಅವಳು ಥೇಟ್ ನನ್ನಂತೆ ಎನ್ನುವಲ್ಲಿ ಅಪ್ಪನನ್ನು ಕಳೆದುಕೊಂಡ ನೋವನ್ನು ಆ ಮೊಮ್ಮಗಳು ಮರೆಸುತ್ತಿದ್ದಳು ಎನ್ನುವ ಕವಿ ಭಾವವನ್ನು ಕಾಣಬಹುದು.ಮಗಳ ದೈಹಿಕ ಚಹರೆಯ ಜೊತೆಗೆ ಅವಳ‌ ಮುಗ್ಧತೆ ಪ್ರತಿರೂಪವನ್ನು, ಸೌಂದರ್ಯದ ಪ್ರತಿಮೆಯನ್ನು ವರ್ಣಿಸುತ್ತಾ ಅಪ್ಪನ ಪಾಲಿಗೆ ಮಗಳು ಚೈತನ್ಯದ ಚಿಲುಮೆಯಾಗಿದ್ದ ಪರಿಯನ್ನು ತುಂಬಾ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಅಪ್ಪನಾದವನಿಗೆ ತನ್ನ ಸಾವಿನ ಅಂತ್ಯದವರೆಗೂ ಮಗನದೇ ಕೊರಗು. ಸದಾ ಅವನದೆ ಗುಂಗಿನಲ್ಲಿ ಕಾಲಕಳೆಯುತ್ತಿದ್ದರೂ ಅವನು ಇರುವಾಗ ಅವನ ಆಸೆ ಈಡೇರಿಸಲಾಗದೆ ಅವನ ಮರಣಾ ನಂತರ ಅದು ಪೂರೈಸಿತೆಂಬ ಕವಿ ಮನದ ನೋವನ್ನು ಕವಿತೆ ಹೊತ್ತು ತಂದಿದೆ. ಬಂಧು ಬಾಂಧವರೆಲ್ಲಾ ಕೂಡಿ ಸಾಂತ್ವನ ಹೇಳುತ್ತಾ ಅಮ್ಮನನ್ನು ಸಂತೈಸಿದ ಪರಿ ಅನನ್ಯವಾಗಿದೆ.

ಅಪ್ಪನಾಸೆಯಂತೆ ಮಗ ಮನೆಗೆ ಸೊಸೆಯನ್ನು ತಂದು ನಂತರ ಜನಿಸಿದ ಹೆಣ್ಣುಮಗು ಅವರ ತಾತನನ್ನೇ ಹೋಲುತ್ತಾ ಮನೆಯನ್ನು

 ಬೃಂದಾವನ ಮಾಡಿದ ಸಂಭ್ರಮದ ಜೊತೆಗೆ ಮೂಡಿಬಂದ ಕವಿತೆ ಅನಿರೀಕ್ಷಿತವಾಗಿ ಅಚಾನಕ್ ತಿರುವನ್ನು ತೆಗೆದುಕೊಂಡು ಓದುಗರನ್ನು ಕಣ್ಣೀರ ಕೊಳದಲ್ಲಿ ಮುಳುಗಿಸಿ ಬೇರೊಂದು ಭಾವನಾ ಲೋಕಕ್ಕೆ ಕರೆದೊಯ್ಯುತ್ತದೆ. ಇಲ್ಲಿ ತಂದೆಯಾದವನು ತನ್ನ ಮಗಳಲ್ಲಿ ತಂದೆಯನ್ನು ಕಾಣುವ ವಿಧಾನ ಮನಮಿಡಿಯುವಂತೆ ಜೀವ ತಳೆದಿದೆ.

ಕವಿತೆಯ ಶೀರ್ಷಿಕೆ

ಅವಳು ಥೇಟ್ ಅಪ್ಪನ ಹಾಗೆ

 ಇಲ್ಲಿ ತಂದೆಯು ತನ್ನ ಮಗಳನ್ನ ತನ್ನ ಅಪ್ಪನ ಗುಣದೊಂದಿಗೆ ಸಮೀಕರಿಸುತ್ತಾ, ಭೌತಿಕವಾಗಿ ಹಾಗೂ ಭಾವನಾತ್ಮಕವಾಗಿ ಅವರ ನಡುವಿನ ಹೊಂದಾಣಿಕೆಯನ್ನು ಕುರಿತು ಕಾವ್ಯದುದ್ದಕ್ಕೂ ಪ್ರತಿಪಾದಿಸುತ್ತಾ ಸಾಗುತ್ತಾರೆ. ಅಪ್ಪನ ಹಾಗೆ ಅನ್ನುವುದು ಅನುವಂಶಿಕವಾಗಿ ಸಾಗಿಬರುವ ಗುಣಲಕ್ಷಣಗಳ ಪ್ರತೀಕವಾಗಿದ್ದು ತಾತನಿಂದ ಮೊಮ್ಮಗಳಿಗೆ ಬಂದ ಬಳುವಳಿಯಾಗಿದೆ. ಅಪ್ಪನ ಅನುಪಸ್ಥಿತಿಯಲ್ಲಿ ಮಗಳಾದರೂ ಅವರ ಸ್ಥಾನ ತುಂಬುವಳೆಂಬ ಆಶಾವಾದಕ್ಕೆ ಕೊಡಲಿಪೆಟ್ಟು ಕೊಟ್ಟ ಮಗಳು ದೂರಾಗಿ ಕವಿಯ ಪಾಲಿಗೆ ಕೇವಲ ನೆನಪುಗಳಷ್ಟೇ ಉಳಿಸಿ ಮನಸ್ಸಿನಲ್ಲಿ ಎಂದು ಮಾಸದ ಗಾಯ ಮಾಡಿದೆ. ಇಲ್ಲಿ ಕವಿಯು ಮಗಳ ಜೊತೆಗೆ ತಂದೆಯನ್ನು ಸ್ಮರಿಸುತ್ತಾ ದುಃಖಿಸುತ್ತಾರೆ . ಆ ನಿಟ್ಟಿನಲ್ಲಿ ಮೂಡಿಬಂದ ಶೀರ್ಷಿಕೆ ಒದುಗರ ಕಂಗಳನ್ನು ಒದ್ದೆಯಾಗಿಸುತ್ತದೆ.

ಕವಿತೆಯ ವಿಶ್ಲೇಷಣೆ

ಅವಳು ಥೇಟ್ ನನ್ನಪ್ಪನ ಹಾಗೆ

ಹೇಗೆ ಮರೆಯಲಿ ಹಾಲುಗಲ್ಲದ ಮುಖವ

 ಅವಳು ಥೇಟ್ ತನ್ನ ಅಪ್ಪನ ಹಾಗೆ

 ನನ್ನ ಅಪ್ಪ ಮತ್ತೆ ಹುಟ್ಟಿ ಬಂದನೇನೋ

 ಎನ್ನುವಂತೆ ಅವಳ ಮುಖ ಕಣ್ಣು

 ಮೂಗು ಕೆನ್ನೆ ಗಲ್ಲ

 ಅವಳು ಥೇಟ್ ನನ್ನ ಅಪ್ಪನ ಹಾಗೆ

ಇಲ್ಲಿ ಕವಿಯು ಹೇಗೆ ಮರೆಯಲಿ  ಹಾಲುಗಲ್ಲದ ಮುಖವ ಎನ್ನುವಲ್ಲಿ ಅವಳಿನ್ನು ಹಾಲು ಕುಡಿಯುವ ಕಂದಮ್ಮ, ತುಟಿಯಲ್ಲಿನ್ನು ಹಾಲಿನ ತೇವ ಆರಿರಲಿಲ್ಲ. ಮುದ್ದು ಮೊಗದ ಕಂದ ತನ್ನನ್ನು ಅಗಲಿದ್ದಕ್ಕೆ ದುಃಖಿ ಸುತ್ತಾರೆ ಅವಳು ನನ್ನ ಅಪ್ಪನ ಹಾಗೆ ಇದ್ದಳು ಎಂದು ಮಗಳೊಳಗಿನ ತಂದೆಯನ್ನು ಸ್ಮರಿಸುತ್ತಾರೆ. ಲೌಕಿಕ ಜಗತ್ತಿನಿಂದ ದೂರಾಗಿರುವ ಅಪ್ಪ ಕವಿಯ ಮನದಾಳದಲ್ಲಿ ಅಳಿಸಲಾಗದ ಅಚ್ಚೆಯಾಗಿದ್ದರೆ ಮಗಳನ್ನು ಕಳೆದುಕೊಂಡ ಶೋಕ ನಿರಂತರವಾಗಿ ಕೆರಳುತಿರುವ ಗಾಯದ ಮಚ್ಚೆಯಾಗಿದೆ. ತನ್ನ ತಂದೆಯ ಗುಣಲಕ್ಷಣಗಳು ತನ್ನ ಮಗಳಿಗೆ ಬಂದಿದ್ದಕ್ಕೆ ಹೆಮ್ಮೆಪಡುವ ಕವಿಯು ಈಗ ತಂದೆ ಮಗಳು ಇಬ್ಬರನ್ನು ದೂರ ಮಾಡಿಕೊಂಡ ತನ್ನ ಸ್ಥಿತಿಗೆ ಪರಿತಪಿಸುತ್ತಾ ವಿಧಿಯನ್ನು ಶಪಿಸುವ ಪರಿ ದುರಂತವೆ ಸರಿ.

ಬೆಂಗ್ಳುರಿಂದ ಏನ್ ತಂದೆ

ಪ್ರೀತಿನ ಹೊತ್ತು ಬಂದೆ

ತತ್ತಾ ನೀ ತಾ

 ತಗೋ ಸಿಹಿ ಮುತ್ತ

 ಸಾಕು ಇನ್ನೇನು ಬೇಕು ನಂಗೆ.

ಡ್ಯಾಡಿ ಮೈ ಲವ್ಲಿ ಡ್ಯಾಡಿ

ಈ ಸಿನಿಮಾ ಹಾಡು ಅಪ್ಪ ಮಗಳ ಒಲವ ಪರಿಚಯ ಮಾಡಿಸುತ್ತದೆ.

ತಂದೆಯ ಕಂಗಳಲ್ಲಿ ಕಂಡಿದ್ದ ಪ್ರೀತಿ,ವಾತ್ಸಲ್ಯ ತನ್ನ ಮಗಳ ಮೂಲಕ ವಿನಿಮಯವಾಗಿತ್ತು ಎನ್ನುವ ಭಾವದಲ್ಲಿ ಕವಿಯು ಮೂಗು ಕೆನ್ನೆ ಗಲ್ಲ ಮುಂತಾದ ಚಹರೆಗಳು ಅಪ್ಪನನ್ನೇ ಹೋಗುತ್ತಿದ್ದವು. ನಾನೀಗ ಹೇಗೆ ಮರೆಯಲಿ ಅವರಿಬ್ಬರನ್ನು ಎಂದು ಪರಿಪರಿಯಾಗಿ ದುಃಖಿಸುತ್ತಾರೆ.

ಸಂಜೆಯ ಕತ್ತಲು ಆವರಿಸಿದ ಗಳಿಗೆಗೆ ಮನೆಗೆ ಮರಳಿದೆ

 ನಿಧಾನಕ್ಕೆ ಅರ್ಧ ಭಾಗಿಲಷ್ಟೇ

 ತೆರೆದು ಇಣುಕಿ

 ಮಗಳೇಎಂದೇ

  ನನ್ನ ಕೂಗಿಗೆ

 ಅವಳ ಉತ್ಸಾಹದ ಕೇಕೆ

 ನನ್ನ ಮನೆ ಮಂದಿಯ ಸಂಭ್ರಮ

   ನೂರ್ಮಡಿಯಾಗುತ್ತಿತ್ತು

“ಮಕ್ಕಳಿರಲವ್ವ ಮನೆ ತುಂಬ” ಎಂಬ ಸಾಲು ಮಕ್ಕಳು ಮನೆಗೆ ನಂದಾದೀಪದಂತೆ ಎಂದು ಸಾರುತ್ತವೆ. ಅವರು ಮನೆಯೊಳಗಿದ್ದರೆ ಮನೆ ತುಂಬಾ ಹರುಷದ ಹೊಳೆ ಹರಿಯುತ್ತದೆ. ಮನೆಗೆ ಮಕ್ಕಳೆ ಶೋಭೆ ಎಂಬ ಜನಪದರ ಅನುಭಾವಿಕ ನುಡಿಗೆ ಬೆಲೆ ಕಟ್ಟಲಾದೀತೆ ?

ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕಾ

 ಕೂಸು ಕಂದಯ್ಯ ಒಳಹೊರಗ/ ಆಡಿದರ

 ಬೀಸಣಿಕೆ ಗಾಳಿ ಸುಳಿದಾವ

 ಎಂಬ ಜನಪದ ಹಾಡು ಕೂಸು ಆ ಕಡೆಯಿಂದ ಈ ಕಡೆಗೆ, ಈ‌ ಕಡೆಯಿಂದ ಆ ಕಡೆಗೆ ನಡೆದಾಡಿದರೆ ಸಾಕು, ಮನೆಯ ಒಳಗೆ ಹೊರಗೆ ಕಂದ ಆಡಿದರೆ, ಗಾಳಿ ಬೀಸಿದಂತೆ ತಂಗಾಳಿಯ ಸ್ಪರ್ಷವಾಗುತ್ತದೆ. ಅದರಿಂದ ಕೂಸು ಇದ್ದ ಮನೆಗೆ ಬೀಸಣಿಗೆ ಬೇಡ ಎನ್ನುತ್ತಾರೆ ನಮ್ಮ ಜನಪದರು. ಅದೇ ಭಾವವನ್ನು ನಾವು ಈ ಕವಿತೆಯಲ್ಲಿ ಕಾಣಬಹುದು.

ಜೀವನೋಪಾಯಕ್ಕಾಗಿ ಹೊರಗೆ ಹೋಗಿ ದುಡಿದು ಆಯಾಸದಿಂದ ಗೋಧೂಳಿ ಸಮಯಕ್ಕೆ ಮನೆಗೆ ತೆರಳಿದ ಅಪ್ಪ, ಮನೆ ಬಾಗಿಲನ್ನು ಸರಿಸಿ ಇಣುಕಿ ನೋಡಿ ಮಗಳೆಂದರೆ ಮುಗಿಯಿತು , ಅಪ್ಪನ ಆ ಕೂಗು ಕಿವಿಗೆ ಬಿದ್ದೊಡನೆ ಮಗಳು ಕೇಕೆ ಹಾಕುತ್ತಾ, ಕುಣಿಯುತ್ತಾ, ಜಿಗಿಯುತ್ತಾ, ಉಲ್ಲಾಸದ ಹೂಮಳೆ ಸುರಿಸುತ್ತಿದ್ದ ಕ್ಷಣಗಳನ್ನು ನೆನೆದು ಕವಿಮನವು ಅತಿಯಾಗಿ ರೋಧಿಸಿದೆ. ಇದರಿಂದ ಮನೆಯವರ ಸಂತೋಷ, ಸಂಭ್ರಮ ನೂರುಪಟ್ಟು ಹೆಚ್ಚಾಗುತ್ತಿತ್ತು.

ತನ್ನ ಇಳಿಗಾಲದಲ್ಲಿ

 ಹಾಸಿದ ಚಾಪೆಯಲ್ಲಿ

 ಎಡಕ್ಕೆ ಬಲಕ್ಕೆ

 ಮಗ್ಗುಲು ಬದಲಾಯಿಸುತ್ತಾ

 ಕೆಲ ಗಳಿಗೆ ಬೆನ್ನಲ್ಲೇ ಮಲಗಿ

 ಸೂರು ಎಣಿಸುತ್ತಾ

 ಮೂಳೆ ಚಕ್ಕಳದಂತಿಂದ್ದ ಅಪ್ಪನಿಗೆ

 ನನ್ನದೇ ಗುನುಗು

ಇಲ್ಲಿ ಕವಿಯು ತನ್ನ ತಂದೆಯ ಜೀವನದ ಸಂಧ್ಯಾಕಾಲವನ್ನು ವರ್ಣಿಸುತ್ತಾ ಸಾಗಿದ್ದಾರೆ.  ವಯೋಸಹಜ ದೈಹಿಕ ಪರಿಸ್ಥಿತಿಯನ್ನು ವಿವರಿಸುತ್ತಾ, ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಮಗ್ಗುಲು ಬದಲಾಯಿಸುತ್ತಿದ್ದರು. ಕಣ್ಣಿಗೆ ನಿದ್ದೆ ಹತ್ತದ ಕಾರಣ ಚಾಪೆಯ ಮೇಲೆ ಹೊರಳಾಡುತ್ತಿದ್ದರು. ಹಲವು ಬಾರಿ ಬೆನ್ನ ಮೇಲೆ ನೇರವಾಗಿ ಮಲಗಿ ಸರಿಯದ ಕಾಲವನ್ನು ದೂಡಲು ಜಂತೆ ಎಣಿಸುತ್ತಿದ್ದರು ಎನ್ನುವಲ್ಲಿಹಿರಿಯರ ಇಳಿವಯಸ್ಸಿನ ವೇಧನೆ ಎದ್ದು ಕಾಣುತ್ತದೆ. ಅಂತಹ ಅಸಹಾಯಕ ಪರಿಸ್ಥಿತಿಯಲ್ಲೂ ತಂದೆಯಾದವನಿಗೆ ತನ್ನ ಮಗನದೇ ಚಿಂತೆ. ಸದಾ ಅವನ ಮನಸ್ಸು ಮಗನ ಏಳ್ಗೆ, ಸುಖ ಸಂತೋಷಗಳಿಗಾಗಿ ತುಡಿಯುವ ಜೀವದ ಬಗ್ಗೆ ಹೆಮ್ಮೆಯಿಂದ ಬಂದ ಮಾತುಗಳಿವು.ಅಪ್ಪನ ದೇಹ ಶಕ್ತಿಯನ್ನೆಲ್ಲಾ ಕಳೆದುಕೊಂಡು ನಿತ್ರಾಣವಾಗಿದ್ದರೂ, ದೈಹಿಕ ಬಲಾಡ್ಯತೆ ಇಲ್ಲದೆ ಕೇವಲ ಅಸ್ಥಿಪಂಜರದಂತೆ ಕಾಣುವ ಅಪ್ಪನ ಬಾಯಲ್ಲಿ ಬರುವುದು ಅದೇ ರಾಗ, ಅದೇ ಪುತ್ರರಾದ ಎನ್ನುತ್ತಾ ತನ್ನ ಮಗನ ಬಗ್ಗೆ ತಂದೆಯ ಮನಸ್ಥಿತಿಯನ್ನು ಓದುಗರ ಮುಂದಿಟ್ಟಿದ್ದಾರೆ.

ಕೊನೆಗೆ ಅಪ್ಪನ ಕನಸು ಈಡೇರಿಸಿದೆ

 ಅವನು ಕಾಲವಾದ ಮೇಲೆ

 ಮನೆ ಮಂದಿಗೂ ಅದೇ ಆಸೆ

 ಅವರಿದ್ದಾಗ ಆಗಿದ್ದರೆ

 ಅವನೂ ನಿನ್ಗ ಹಾಲ್ಸುರ್ದು ನೀರೊಯ್ದು

 ಒಂದಿಡಿ ಅಕ್ಕಿಕಾಳು ಹಾಕುತ್ತಿದ್ದ

 ಅಂತೂ ಒಂದು ಶುಭ ಗಳಿಗೆ ಬಂತು

 ಮನಮನ ತುಂಬಿಕೊಂಡಳು ನನ್ನಾಕೆ

 ನನ್ನ ಅಪ್ಪನ ಅನುಪಸ್ಥಿತಿಯಲ್ಲಿ

ಅಪ್ಪನಿಗೆ ತನ್ನ ಮಕ್ಕಳ ಮದುವೆ ಬಗ್ಗೆ ಸಾವಿರಾರು ಕನಸುಗಳಿರುತ್ತವೆ. ಮೊಮ್ಮಕ್ಕಳನ್ನು ಕಾಣುವ, ಅವರೊಂದಿಗೆ ಆಡುವ ಹಂಬಲವಿರುತ್ತದೆ. ಆದರೆ ಅಂತಹ ಯೋಗ ಎಲ್ಲರಿಗೂ ಕೂಡಿ ಬರಲು ಸಾಧ್ಯವಿಲ್ಲ. ಈ ಕವಿತೆಯ ಸಾಲುಗಳು ಅಪ್ಪನ ಅನುಪಸ್ಥಿತಿಯಲ್ಲಿ ಈಡೇರುವ ಅವನ ಕನಸುಗಳ ಅನಾವರಣ ಮಾಡುತ್ತವೆ. ಅಪ್ಪ ಮರಣಿಸಿದ ನಂತರ ಅಂತೂ ಕಾಲ ಕೂಡಿ ಬಂದು ವಿವಾಹ ಕಾರ್ಯ ಮುಗಿದು ನನ್ನ ಮನೆ ಮನಕೆ ಗೃಹಲಕ್ಷ್ಮಿ ಬಂದಾಯಿತು ಎನ್ನುವ ಕವಿಯು, ಇದೆಲ್ಲಾ ಅಪ್ಪ ಬದುಕಿದ್ದಾಗ ಸಾಗಿದ್ದರೆ ಅರ್ಥಪೂರ್ಣವಾಗುತ್ತಿತ್ತು ಎಂದು ವಾದಿಸುತ್ತಾರೆ. ಅಪ್ಪ ಬದುಕಿದ್ದಾಗ ಕಂಕಣ ಬಲ ಕೂಡಿ ಬಂದಿದ್ದರೆ ಅವನು ತಲೆ ಮೇಲೆ ಅಕ್ಷತೆ ಹಾಕಿ ಹಾರೈಸುತ್ತಿದ್ದ ಎಂಬ ಹತಾಶಾ ಭಾವವನ್ನು ಕಾಣಬಹುದು.

ಅಕ್ಕಂದಿರೊಂದಿಗೆ ತಂಗಿಯರೂ

 ಅಣ್ಣಂದಿರೊಂದಿಗೆ ತಮ್ಮಂದಿರೂ

ಭಾವಂದಿರೊಂದಿಗೆ ಭಾವಮೈದುನರೂ

 ಅತ್ತಿಗೆಯರೊಂದಿಗೆ ನಾದಿನಿಯರೂ

 ಮಕ್ಕಳೊಂದಿಗೆ ಮೊಮ್ಮಕ್ಕಳೂ

 ನಮ್ಮನೆಯವರೊಂದಿಗೆ ನೆರೆಹೊರೆಯವರೂ

 ಅವ್ವನೊಂದಿಗೆ ಕುಲು ಕುಲು  ಮಾತನಾಡುತ್ತ

ಎದೆಭಾರ ಇಳಿಸತೋಡಗಿದರು

ಈ ಸಾಲುಗಳು ಬಾಂಧವ್ಯದ ಪ್ರತೀಕವಾಗಿ ಮೂಡಿಬಂದಿವೆ. ಕಷ್ಟ ಬಂದಾಗ ಇಡೀ ಕುಟುಂಬ ಬೆನ್ನೆಲುಬಾಗಿ ನಿಲ್ಲುತ್ತದೆ ಹಾಗೂ ಪರಿವಾರ ಹೆಗಲಿಗೆ ಹೆಗಲು ಜೋಡಿಸಿ ನೋವಿನ ಭಾಗವನ್ನು ಹಂಚಿಕೊಳ್ಳುತ್ತದೆ ಎಂಬ ಭಾವವಿದೆ. ದುಃಖದಲ್ಲಿರುವವರಿಗೆ ನಾವಾಡುವ ಎರಡು ಸಾಂತ್ವನದ ನುಡಿಗಳು ಧೈರ್ಯ ತುಂಬುವ ಗೋವರ್ಧನಗಿರಿಯಂತೆ ಭಾಸವಾಗಿ ಮನದ ತುಂಬಾ ಭರವಸೆಯನ್ನು ತುಂಬುತ್ತದೆ. ಆಶಾವಾದವನ್ನು ಬಿತ್ತರಿಸುತ್ತದೆ. ತಾಯಿಯ ದುಃಖವನ್ನು ಬಂಧು ಬಾಂಧವರೆಲ್ಲಾ ಒಟ್ಟಿಗೆ ಸೇರಿ ಅವ್ವನ ಎದೆ ಭಾರವನ್ನು ಇಳಿಸಿದರು ಎನ್ನುವಲ್ಲಿ ನಮ್ಮದುರಿತ ಕಾಲದಲ್ಲಿ ನಮಗಾಗಿ ಮಿಡಿವ ಜೀವಗಳಿವೆ ಎಂದು ಪ್ರತಿಪಾದಿಸುತ್ತದೆ.

ವರುಷ ಒಪ್ಪತ್ತು ತುಂಬಿ ನನ್ನಾಕೆ ಹೆತ್ತಳು

 ಭೂಮಿ ತಾಯಿಯ ಚೊಚ್ಚಲ ಮಗಳನು

 ಅದೆಂಥ ಮುಖ ಅದೆಂಥ ಕಳೆ

 ನೋಡಲು ಎರಡು ಕಣ್ಣು ಸಾಲದು

 ಎಲ್ಲರ ಮಾತು ಒಂದೇ

 ಎಲ್ಲಾ ನಿನ್ನ ಹಾಗೆ

 ನಾನೇನು ಹೇಳಲಿ

 ನನ್ನೊಳಗೆ ಸಂತೋಷದ ಕಡಲುಕ್ಕಿ ಹರಿಯುತ್ತಿತ್ತು

ಮದುವೆಯಾಗಿ ವರ್ಷಕ್ಕೆ ಅವನ ಮನದರಸಿಯ ಮಡಿಲು ತುಂಬಿತ್ತು. ಒಂದು ಮಗುವಾಗಿದ್ದು ,ಭೂಮಿಯ ತಾಯಿಯ ಚೊಚ್ಚಲ ಮಗಳು ಎಂಬ ರೂಪಕ ಭೂಮಿ ತೂಕದವಳು ಹೆಣ್ಣು ಎಂಬ ವಿಚಾರಕ್ಕೆ ಹೊಳಹು ನೀಡುತ್ತದೆ. ಇಲ್ಲಿ ಕವಿಗೆ ಆಮಗುವಿನ ಅಂದ ಚೆಂದ ತುಂಬಿದ ಹಸುಗೂಸನ್ನು ನೋಡಲು ಕಣ್ಣುಗಳೆರಡು ಸಾಲದಾಗಿತ್ತು ಎನ್ನುತ್ತಾರೆ. ಕವಿ ತನ್ನ ಮಗಳು ನನ್ನನ್ನೇ ಹೋಗುತ್ತಾಳಂತೆ ಇದು ನೋಡುಗರ ಮಾತು, ಎಲ್ಲಾ ನಿನ್ನ ಹಾಗೆ ಎನ್ನುವಾಗ ಕವಿಯ ಮನದೊಳಗೆ ಆನಂದ ಸಾಗರವೆ ಉಕ್ಕಿ ಹರಿದಂತೆ ಭಾಸವಾಗುತ್ತದೆ.ನಮ್ಮ ಮಕ್ಕಳು ನಮ್ಮಂತೆ ಎಂದು ಯಾರಾದರೂ ಹೇಳಿದರೆ ಖುಷಿಯಾಗದಿರುವ ಜೀವ ಜಗತ್ತಿನಲ್ಲಿದೆಯೇ ಅದಕ್ಕೆ ಕವಿಯು ಹೊರತಾಗಿಲ್ಲ.

ಹಗಲುರಾತ್ರಿ ಬರುತ್ತಾ

 ಸೂರ್ಯ ಚಂದ್ರ ಮುಳುಗುತ್ತಾ

 ದಿನ ಕಳಿತಾ

 ನನ್ನ ಮಗಳು ಅಂಬೆಗಾಲಿಡುತ್ತಾ

 ಥೇಟ್ ನನ್ನ ಅಪ್ಪನ ಹಾಗೆ

 ನನ್ನ ಕಣ್ಣಿಗೆ ಅಪ್ಪನೇ ಎದ್ದುಬಂದು

 ಕಿಲಕಿಲ ನಗುತ್ತಾ ಇರುವನೇನೋ

 ಎನ್ನುವಂತೆ ಎದೆ ತುಂಬುತ್ತಾ

 ನನ್ನ ಮನೆಯ ನೂರೆಂಟು ನೋವುಗಳು

 ತೆಪ್ಪಗಾದದ್ದು ಬಿಟ್ಟು ಬೇರೆನಿತ್ತು

ಇಲ್ಲಿ ಮಗಳ ಬೆಳವಣಿಗೆಯನ್ನು ಸೂಚಿಸುತ್ತಾ ಹಗಲು ರಾತ್ರಿ ಬರುತ್ತಾ, ಸೂರ್ಯ ಚಂದ್ರ ಮುಳುಗುವ ಎನ್ನುವ ರೂಪಕಗಳಲ್ಲಿ ಕಳೆದ ದಿನಗಳ ಪರಿಯನ್ನು ಅರ್ಥೈಸಿದ್ದಾರೆ. ಅಂಬೆಗಾಲಿಡುತ್ತ ಕಿಲಕಿಲ ನಗುತ್ತಾ ಮನೆ ತುಂಬಾ ಸರಿದಾಡುತಿದ್ದರೆ, ಕವಿಗೆ ಥೇಟ್ ಅಪ್ಪನೆ ನಡೆದಾಡುವಂತೆ ಭಾಸವಾಗುತ್ತಿತ್ತು. ಇಲ್ಲಿ ಕವಿಯ ತಂದೆಯು ಇಹಲೋಕದಲ್ಲಿ ಇರಲಿಲ್ಲ ಎಂಬುದನ್ನು ನಾವಿಲ್ಲಿ ಸ್ಮರಣೆಯಲ್ಲಿಡಬೇಕು. ತನ್ನಪ್ಪನ ಸ್ಥಾನ ತುಂಬುತ್ತಿದ್ದ ಮಗಳ ಸಂತೋಷ, ತುಂಟಾಟ, ಬಾಲ್ಯದ ಆಟಗಳು ಕವಿಯೆದೆಯಲ್ಲಿ ನೂರಾರು ಹೂಗಳು ಒಟ್ಟಿಗೆ ಅರಳಿ ಪರಿಮಳವನ್ನು ಸೂಸಿದಂತಾಗಿದೆ. ಅಷ್ಟು ಶಾಂತಿ ನೆಮ್ಮದಿ ಮನೆ ಮನಗಳನ್ನು ಆವರಿಸಿತು ಎಂಬ ಭಾವಾಭಿವ್ಯಕ್ತಿಯನ್ನು ನಾವು ಕಾಣಬಹುದು.

ದಿನಾ ನನ್ನ ಕನಸಲ್ಲಿ ತಪ್ಪದೆ ನೀ ಬರ್ತಿದ್ದೆ

 ನಾನು ನಿನ್ನ ಹೆಗಲೇರಿ ಹಾಡ್ತಾ ಇದ್ದೆ

 ಎದ್ದರೆ ಅಳ್ತಾ ಇದ್ದೆ

 ದಿನ ನನ್ನ ತಟ್ಟೆಯಲ್ಲಿ

 ನಿನಗೆ ತೆಗೆದಿಡ್ತಿದ್ದೆ

 ನಿನ್ನ ಬಿಟ್ಟು ತಿನ್ನೋಕೆ ನೋಯ್ತಾ ಇದ್ದೆ

 ಈದಿನ ಕಾಯ್ತಾ ಇದ್ದೆ

 ಅಂಡಮಾನ್ ಅಂಡಮಾನ್ ನಿನಗೆ ವಂದನೆ

ಅಂಡಮಾನ್ ಸಿನಿಮಾದ ಈ ಹಾಡು ಕೇಳಿರುವವರಿಗೆಲ್ಲಾಈ ಕವಿತೆಯು ಅದೇ ಭಾವದ ಸಾರವನ್ನು ಹೊತ್ತು ‌ತಂದಿದೆ ಎನಿಸದಿರದು.

ಒಂದು ಸಿಹಿ ಕೇಕು ಕತ್ತರಿಸಿದ್ದು ಆಯಿತು

 ಹೂಮಳೆ ಚೆಲ್ಲಿ ಗಮ್ಮನೆ ನಮ್ಮನೆ

 ಮರುದಿನ ನನ್ನ ಕಣ್ಣು ಕಡಲಾಯಿತಲ್ಲ..

 ಯಾಕೆ ಹೋದೆ ಮಗಳೇ..

 ನನ್ನ ಕನಸಿನಲ್ಲಿ ದಿನವೂ ಬರುವ ಅಪ್ಪ ಕೇಳುತ್ತಾನೆ

 ಕೂಸು ಎಲ್ಲಪ್ಪ ?

 ನಾನೇನು ಹೇಳಲಿ ?

 ಅವಳು ಥೇಟ್ ಅವನ ಹಾಗೆ

ಮಗಳು ಜನಿಸಿ ವರುಷ ಉರುಳಿದ ಆ ಸಂತೋಷಕೆ ಪಾರವೇ ಇರಲಿಲ್ಲ. ಮನೆಯಲ್ಲಿ ಅವಳ ಹುಟ್ಟು ಹಬ್ಬವನ್ನು ಕೇಕು ಕತ್ತರಿಸಿ   ಆಚರಿಸಿದ್ದಾರೆ. ಮಗಳ ನಗು ಮನೆಯ ತುಂಬ ಹೂವಿನ ಮಳೆಯನ್ನೆ ಸುರಿಸಿದೆ. ಅದರ ಪರಿಮಳವೂ ನಮ್ಮನೆ ತುಂಬಾ ಆವರಿಸಿದೆ ಎನ್ನುವ ಭಾವಕ್ಕೆ ಬೆಸೆದುಕೊಂಡ ಮುಂದಿನ ಸಾಲು ವಿಧಿಯಾಟದ ಕ್ರೂರತೆಯನ್ನು ಪ್ರತಿಭಟಿಸುತ್ತದೆ.

ಮರುದಿನ ನನ್ನ ಕಣ್ಣು ಕಡಲು ಆಯಿತಲ್ಲ ಎನ್ನುವಲ್ಲಿ ಮಗಳ ನಿರ್ಗಮನದ ಕರಾಳ ಛಾಯೆ ಆವರಿಸಿ ಬದುಕಿನ ತುಂಬಾ ಕತ್ತಲಾವರಿಸಿದೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಸದಾ ಅಪ್ಪಾ ಕನಸಿನಲ್ಲಿ ಬಂದು ಕೂಸು ಎಲ್ಲಪ್ಪ ಎಂದರೇನು ಹೇಳಲಿ? ಎನ್ನುವ ಕವಿಯು, ಅವರೊಂದಿಗೆ ಮೊಮ್ಮಗಳು  ಸಮಾಧಿಯಾದಳೆನ್ನಲೆ ಎಂದು ಕವಿ ಬಿಕ್ಕಿಬಿಕ್ಕಿ ಅಳುತ್ತಾರೆ.

ಒಟ್ಟಿನಲ್ಲಿ ಈ ಕವಿತೆ ಕಟುಕರ ಕಂಗಳಲ್ಲೂ ನೀರನಿಸದಿರದು.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಈ ಕವಿತೆಯಲ್ಲಿ ಕವಿಯ ದುಃಖದ ವ್ಯಾಕುಲತೆಯನ್ನು ಕಾಣಬಹುದು. ತನ್ನನ್ನು ಅಪಾರವಾಗಿ ಪ್ರೀತಿಸುವ ಅಪ್ಪನನ್ನು ಕಳೆದುಕೊಂಡು, ತನ್ನ ಜೀವವಾಗಿದ್ದ ಮುದ್ದಿನ ಕಂದನ ಅಗಲಿಕೆ ನಿರಾಶೆಯ ಅಂತ:ಧ್ವನಿಯು ಬಿಂಬಿತವಾಗಿದೆ. ಇಲ್ಲಿ ಕವಿಯು ತನ್ನ ಮಗಳೊಂದಿಗೆ ಭಾವನಾತ್ಮಕವಾಗಿ ಸಂವಾದ ನಡೆಸಿದ್ದಾರೆ. ಅಪ್ಪನಲ್ಲಿ ಅನಂತತೆಯನ್ನು, ಮಗಳಲ್ಲಿ ಜೀವನದ ಸಾರ್ಥಕತೆಯನ್ನು ಕಾಣುವ ಜವರಾಜ್ ರವರ ಮನದ ಬಿಕ್ಕಳಿಕೆಯು ಓದುಗರನ್ನು ಭಾವಪರವಶರನ್ನಾಗಿ ಮಾಡುತ್ತದೆ. ಇದು ಭಾವನಾತ್ಮಕ ಹಾಗೂ ಮಾನಸಿಕ ಅಭಿವ್ಯಕ್ತಿಯಾಗಿದ್ದು ಇವರ ಒಡಲೊಳಗೆ ಸುಡುವ ಜ್ವಾಲೆಯೆ ಮನೆ ಮಾಡಿದೆ. ಇಲ್ಲಿ ಕವಿಗೆ ಎರಡು ಕಣ್ಣುಗಳು ಕಳೆದುಕೊಂಡು ಅಂಧನಾಗಿ ನಿಂತಿರುವೆ ಎಂಬ ಭಾವ ಕಾಡಿದೆ. ಅವರ ಭಾವಚಿಪ್ಪಿನೊಳಗಿಂದ ನೋವು ಅಕ್ಷರರೂಪದಲ್ಲಿ ಮೈದಳೆದು ಕವಿತೆಯ ರೂಪ ಪಡೆದಿದೆ. ಕವಿತೆಯಲ್ಲಿ ತನ್ನವರಿಗಾಗಿ ತುಡಿತವಿದೆ, ಮಿಡಿತವಿದೆ. ಅಪಾರ ಯಾತನೆಯ ನಡುವೆ ಮಡುಗಟ್ಟಿದ ದುಃಖ ಹೃದಯ ಸೀಳುವಂತೆ ಉಕ್ಕಿ ಹರಿದಿದೆ. ಇದು ಓದುಗರಿಗೆ ಎದೆ ಸೀಳುವ ಅನುಭವ ನೀಡುತ್ತದೆ.

 ಭಾವನೆಗಳೇ ಪ್ರಧಾನವಾಗಿದ್ದರೂ ಕಾವ್ಯಾಭಿವ್ಯಕ್ತಿಯು ಓದುಗರಿಗೆ ಅಂತಃಕರಣ ಮೂಡಿಸುವಂತೆ ಬಂದಿದೆ. ಜೀವನದಲ್ಲಿ ಎದುರಾದ ವೈರುಧ್ಯಗಳು, ಒಡಲಿನ ಸಂಕಟ ಅಂತರಂಗವನ್ನು ಕಲಕುತ್ತವೆ. ಒಟ್ಟಾರೆ ಸಂಬಂಧಗಳ ಅನುಸಂಧಾನದ ನೆಲೆಯಲ್ಲಿ ಸಂವೇದನಾಶೀಲತೆಯಿಂದ ಮೂಡಿಬಂದ ಕವಿತೆ ಅದ್ಭುತ ಹಾಗೂ ಅನನ್ಯ.


ಅನುಸೂಯ ಯತೀಶ್

ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

Leave a Reply

Back To Top