ಪುಸ್ತಕ ಸಂಗಾತಿ
‘ಕೆಂಪು ಟೋಪಿ’
ಅವಲೋಕನ
ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ತಮ್ಮ ಕಥೆಗಳನ್ನು ಪ್ರಕಟಿಸಿ ಹಲವಾರು ಓದುಗ ಬಳಗವನ್ನು ಸೃಷ್ಟಸಿಕೊಂಡಿರುವ ನಾಡಿನ ಪ್ರಮುಖ ಕಥೆಗಾರ್ತಿ ಶ್ರೀಮತಿ ಶ್ವೇತಾ ನರಗುಂದ ಅವರು ಈಗಾಗಲೇ ಮೂರು ಕಥಾ ಸಂಕಲನಗಳನ್ನು ಪ್ರಕಟಿಸಿರುವರು. ಈಗ ಕೆಂಪು ಟೋಪಿ ಎನ್ನುವ ಹೊಸ ಕಥಾ ಸಂಕಲನವನ್ನು ಹೊರತರುತ್ತಿದ್ದಾರೆ. ‘ಕೆಂಪು ಟೋಪಿ’ ಮತ್ತು ಇತರ ಕಥೆಗಳು, ಕಥಾ ಸಂಕಲನವು ಹದಿನಾಲ್ಕು ವಿಭಿನ್ನ ಕಥಾ ವಸ್ತುಗಳುಳ್ಳ ಕಥೆಗಳನ್ನು ಒಳಗೊಂಡಿದೆ. ಮಾನಸಿಕ ಅಭದ್ರತೆ, ಒಂಟಿತನ, ಪ್ರೀತಿ ಸ್ನೇಹ ಮುಂತಾದ ಭಾವನಾತ್ಮಕ ತುಮುಲಗಳ ಎಳೆಯಲ್ಲಿ ನವಿರು ಭಾಷೆಯಲ್ಲಿ ಕಥೆಗಳನ್ನು ನೆಯ್ದಿದ್ದಾರೆ.
ಕಥೆ: ‘ಹೂ ಮನ’.
ವಿವಾಹ ವಿಚ್ಛೇದನಕ್ಕೆ ಒಳಗಾದ ದಂಪತಿಗಳ ಮಗುವಿನ ಮಾನಸಿಕ ತೊಳಲಾಟವೇ ಕಥಾ ವಸ್ತು. ಪುಟ್ಟ ವಿನು ಕಥಾ ನಾಯಕ. ಅಪ್ಪ ಅಮ್ಮನ ಪ್ರೀತಿ ಕಕ್ಕುಲತೆ, ಆರೈಕೆಯಲ್ಲಿ ಬೆಳೆಯುತ್ತಿದ್ದ ಮಗುವಿಗೆ ಒಮ್ಮೆಲೆ ಮನೆಯ ವಾತಾವರಣ ಬದಲಾಗಿ ಅಪ್ಪ ಮನೆ ಬಿಟ್ಟು ಬೇರೆ ಹೋಗುವುದು, ತಾಯಿಯ ಒತ್ತಡ, ಮಗುವಿನ ಮನಸ್ಸಿನ ಮೇಲೆ ಮಾಡುವ ಪರಿಣಾಮಗಳು, ಮಗುವಿನ ಪ್ರಶ್ನಾರ್ಥಕ ಮನಸ್ಥಿತಿ, ಎಲ್ಲವೂ ಮನೋಜ್ಞವಾಗಿ ಚಿತ್ರಿತವಾಗಿವೆ. ಈ ಕಥೆಯಲ್ಲಿ ಭಾಷೆಯನ್ನು ಆಡುಭಾಷೆ ಮತ್ತು ಗ್ರಾಂಥಿಕ ಭಾಷೆಯನ್ನು ಸಮರ್ಥವಾಗಿ ಬಳಸಿದ್ದಾರೆ.
ಕಥೆ: ಆಕೆ ನಗೆಯಾದಳು, ಆತ ಧ್ವನಿಯಾದ.
ವಿಭಿನ್ನ ಶೈಲಿಯ ಕಥೆ. ಅತ್ಯಂತ ಕಾವ್ಯಾತ್ಮಕವಾಗಿ ಕಥೆಯ ಸನ್ನಿವೇಶಗಳನ್ನು ಚಿತ್ರಿಸಿದ್ದಾರೆ. ಕಥೆಯ ನಿರೂಪಣಾ ಶೈಲಿಯು ವಿಭಿನ್ನ ಪ್ರೇಮ ಕಥೆ. ಪ್ರೇಮದ ನವಿರು ಭಾವಗಳು ಕಥೆಯ ವಸ್ತು. ಮಳೆಯ ಮುಸ್ಸಂಜೆಯಲ್ಲಿ ಕಥಾನಾಯಕ ನಾಯಕಿ ಭೇಟಿಯಾಗಿ ಕಣ್ಣು ಕನಸು ಮನಸ್ಸುಗಳಲ್ಲಿ ಮಾತನಾಡಿಕೊಳ್ಳುವ ಭಾವಲೋಕದಲ್ಲಿ ಗಾಯಕನಾದ ಕಥಾನಾಯಕನಿಗೆ ನಾಯಕಿ ಪ್ರೇರಣೆಯ ನಗುವಾಗಿ ಪ್ರೇಮರಾಗದ ಸ್ವರವಾಗಿ ಒಂದಾಗುವ ಕಥೆ. ಗಟ್ಟಿಯಾದ ನಿರೂಪಣೆ ಕಾವ್ಯಾತ್ಮಕ ಭಾಷೆಯ ಕಥೆಯನ್ನು ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತದೆ.
ಕಥೆ: ಮುತ್ತಿನ ಬೆಂಡೋಲೆ.
ಕಥಾನಾಯಕಿ ಪರಿಮಳ ತನ್ನ ಬರವಣಿಗೆಯ ಹವ್ಯಾಸದಿಂದ ತಾನು ಹುಟ್ಟಿಬೆಳೆದ ಊರಿನ ಗೆಳೆಯರ ಸಂಪರ್ಕಕ್ಕೆ ಬಂದು ಹಳೆಯದನೆಲ್ಲ ನೆನಪಿಸಿಕೊಂಡು ಪುಳಕಗೊಳ್ಳುವ ಕಥೆ. ಕಥೆ ಪ್ರಸ್ತುತದಲ್ಲಿ ಪ್ರಾರಂಭವಾಗಿ ಭೂತಕಾಲದಲ್ಲಿ ತೆರೆದುಕೊಳ್ಳುತ್ತದೆ. ಬದಲಾದ ಜೀವನದ ಸ್ಥಿತಿಗತಿಗಳಲ್ಲಿ ಕಥೆ ಸಾಗುತ್ತದೆ. ಎಷ್ಟು ವರ್ಷಗಳ ನಂತರ ಪರಿಮಳ ತಾನು ಹುಬ್ಬಳ್ಳಿಯ ಬಾಲ್ಯ ಸ್ನೇಹಿತನನ್ನು ಭೇಟಿಯಾಗಲು ಹುಡುಕಿಕೊಂಡು ಬರುತ್ತಾಳೆ. ಕಥೆಯೊಳಗೆ ಹತ್ತಾರು ಕಥೆಗಳು ತೆರೆದುಕೊಳ್ಳುತ್ತವೆ. ಅಚ್ಚುಕಟ್ಟಾದ ನಿರೂಪಣೆಯಲ್ಲಿ ಕಥೆ ಸಾಗುತ್ತದೆ. ವಠಾರದ ಚಿತ್ರಣ ಕಣ್ಣಮುಂದೆ ಕಟ್ಟುವಂತೆ ಹಿಂದೆ ಸಾಗಿದರೆ, ಜೀವನದಲ್ಲಿ ಅನುಭವಿಸುತ್ತಿರುವ ಒಂಟಿತನದ ನೋವು ಅಸಹಾಯಕತೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಬೇಕಾಗುವ ಮನಸ್ಸು, ಸಾಂಗತ್ಯ ಬಯಸುವ ಹಪಹಪಿತನ ಪ್ರಸ್ತುತ ಮಧ್ಯ ವಯಸ್ಕರ ಸಮಸ್ಯೆಯು ಅತ್ಯಂತ ಮನೋಜ್ಞವಾಗಿ ತೆರೆದುಕೊಳ್ಳುತ್ತದೆ.
ಕಥೆ: ಕೆಂಪು ಟೋಪಿ.
ಕಥಾನಾಯಕಿ ‘ಮೇಡಂ’ ಮಲೆನಾಡಿನ ಪ್ರವಾಸವನ್ನು ಓದುಗರ ಕಣ್ಣಿಗೆ ಕಟ್ಟುವಂತೆ ಕಥೆಯ ನಿರೂಪಣೆಯನ್ನು ಮಾಡುತ್ತಾಳೆ. ಹವ್ಯಾಸಿ ಬರಹಗಾರ್ತಿ ಮತ್ತು ಬ್ಯಾಂಕ್ ಉದ್ಯೋಗಿಯಾದ ಮೇಡಂ ದೂರದ ಮಲೆನಾಡಿಗೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುವುದರೊಂದಿಗೆ ಕಥೆ ಪ್ರಾರಂಭವಾಗುತ್ತದೆ. ಕಥೆಯಲ್ಲಿ ಮತ್ತೊಂದು ಉಪಕಥೆ ತೆರೆದುಕೊಳ್ಳುತ್ತದೆ. ಅದು ಪೆಟ್ರೋಲ್ ಬಂಕಿನಲ್ಲಿ ತನಗೆ ಸುಳ್ಯದವರೆಗೆ ಹೋಗಲು ಲಿಫ್ಟ್ ಕೇಳಿದ ಮರಿಯಮ್ಮ ಪ್ರವಾಸದ ಮಧ್ಯ ಜೊತೆಯಾಗುತ್ತಾಳೆ. ಹಿರಿಯರ ವಿರೋಧವನ್ನು ಕಟ್ಟಿಕೊಂಡು ಮದುವೆಯಾದ ಹುಡುಗಿಯ ಪ್ರೇಮಕಥೆಯು ಬರಹಗಾರ್ತಿಯಾದ ನಾಯಕಿ ಬರೆಯಲು ತನಗೊಂದು ಹೊಸ ಕಥೆ ದೊರೆಯಿತೆನ್ನುವಂತೆ ಉತ್ಸಾಹಿತಳಾಗಿ ಅವಳ ಕಥೆ ಕೇಳುತ್ತಾಳೆ. ಕಲ್ಲುಂಡಿಗೆ ತನ್ನನ್ನು ಕರೆದುಕೊಂಡು ಬಂದು ತನ್ನೂರಿಗೆ ತೆರಳಿದ ಫಣಿಯ ಕಥೆ, ಕೃಷಿ ಪಧವೀಧರನಾದ ಶರದ ಮತ್ತು ಅವನ ಕುಟುಂಬದ ಕಥೆ, ಹೀಗೆ ಹಲವಾರು ಪಾತ್ರಗಳ ಮಧ್ಯ ಸಾಗುವ ಕಥೆ ಕೊನೆಗೆ ಸುಳ್ಯದ ಹೋಟೆಲ್ ಒಂದರಲ್ಲಿ ಸಂಶಯಾಸ್ಪದವಾಗಿ ಸತ್ತ ಮರಿಯಮ್ಮಳ ಸುದ್ದಿ ಟಿ.ವಿ.ಯಲ್ಲಿ ಪ್ರಸಾರವಾಗುವುದರೊಂದಿಗೆ ಸಾವಿಗೆ ಕಾರಣವಾಗಿರಬಹುದಾದ ಕೆಂಪು ಟೊಪ್ಪಿಗೆ ಕಲ್ಲುಂಡಿಯಿಂದ ಬಂದ ಹಣ್ಣು ಹಂಪಲು ತರಕಾರಿಗಳ ಚೀಲದಲ್ಲಿ ಭಾರ್ಗವಿಯ ಮನೆ ಸೇರುವುದರೊಂದಿಗೆ ಕಥೆ ಮುಕ್ತಾಯವಾಗುತ್ತದೆ. ಕುತೂಹಲ ಕೆರೆಳಿಸುವ ಕಥೆಯ ತಿರುವು ಓದುಗರನ್ನು ಪತ್ತೇದಾರರನ್ನಾಗಿ ಮಾಡುವಲ್ಲಿ ಕಥೆ ಯಶಸ್ವಿಯಾಗುತ್ತದೆ.
ಕಥೆ: ಧ್ವಂಧ್ವ.
ಇದು ಲೈಂಗಿಕ ಶೋಷಣೆಯ ಕಥಾ ವಸ್ತುವುಳ್ಳ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಶೋಷಣೆಯ ಚಿತ್ರಣವಾಗಿದೆ. ಮನೆಯ ಕೆಲಸಕ್ಕೆ ಸೇರಿದ ಗೌರಿ ಹಠಾತ್ತನೆ ಹೇಳದೆ ಕೇಳದೆ ಕಾಣೆಯಾದಾಗ ಮನೆಯ ಯಜಮಾನಿ ಶಿರಿನ್ ಅನುಭವಿಸುವ ಆತಂಕವನ್ನು ಅತ್ಯಂತ ಮನೋಜ್ಞವಾಗಿ ಕಥೆಯಾಗಿಸುವಲ್ಲಿ ಮತ್ತು ಘಟನೆಗೆ ತಾರ್ಕಿಕ ಅಂತ್ಯ ಕೊಡುವಲ್ಲಿ ಕಥೆಗಾರ್ತಿ ಯಶಸ್ವಿಯಾಗಿದ್ದಾರೆ. ಶಿರಿನ್ ತನ್ನ ಮಗ ಚಿನ್ಮಯನನ್ನು ಆಡಿಸಲೆಂದು 6 ವರ್ಷಗಳ ಹಿಂದೆಯೆ ಗೌರಿಯನ್ನು ಕರೆದುಕೊಂಡು ಬಂದಿದ್ದಳು. ಗೌರಿ ಶಿರಿನ್ ತವರುಮನೆ ರೈತ ಬಾಳಣ್ಣನ ಮಗಳು. ಶಿರಿನ್ ಗೌರಿಯನ್ನು ಯಾವತ್ತೂ ಆಳಿನ ತರ ನೋಡಿಕೊಂಡಿರಲಿಲ್ಲ. ಸಂಬಳ ಕೊಟ್ಟು ಪ್ರೀತಿಯಿಂದಲೇ ನೋಡಿಕೊಂಡಿದ್ದಳು. ಗೌರಿ ಈಗ ಹರೆಯಕ್ಕೆ ಕಾಲಿಡುತ್ತಿರುವ ಹುಡುಗಿ ಹೀಗೆ ಇದ್ದಕ್ಕಿದ್ದಂತೆ ಕಾಣೆಯಾದಾಗ ಶಿರಿನ್ ಚಿಂತೆಗೀಡಾಗುತ್ತಾಳೆ. ಅವಳ ಬಗ್ಗೆ ಏನೆನೋ ಯೋಚಿಸಿ ಬೈದುಕೊಳ್ಳುತ್ತಾಳೆ. ಆದರೆ ಸತ್ಯ ಹೊರಬಂದಾಗ ಮಾತ್ರ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಧ್ವಂಧ್ವದಲ್ಲಿ ಸಿಲುಕುತ್ತಾಳೆ. ವಯಸ್ಸಾದ ಮಾವನ ನೀಚ ಕೃತ್ಯ ಅವಳನ್ನು ಆಘಾತಕ್ಕೀಡುಮಾಡುತ್ತದೆ. ಆದರೆ ಶಿಶಿರ ಮಾತ್ರ ತಂದೆಯ ಹೇಯ ಕೃತ್ಯಕ್ಕೆ ಶಿಕ್ಷೆ ಕೊಡಲು ಮುಂದಾಗುವುದರಲ್ಲಿ ಕಥೆ ತಾರ್ಕಿಕ ಅಂತ್ಯವನ್ನು ಕಾಣುತ್ತದೆ.
ಕಥೆ: ಯಾವ ಜನ್ಮದ ರಿಣವಿದು.
ರಕ್ತ ಸಂಬಂಧಕ್ಕೂ ಮೀರಿದ ಮಾನವೀಯ ಸಂಬಂಧಗಳ ಸುತ್ತ ಸಾಗುವ ಕಥೆ ಯಾವ ಜನ್ಮದ ರಿಣವಿದು. ಹೆತ್ತವರನ್ನು ಸಮಾಜವನ್ನು ಎದುರಿಸಿ ಪ್ರೀತಿಸಿ ಮದುವೆಯಾಗಿ ಬಂದ ಹೊಸ ಜೋಡಿ ಪಲ್ಲವಿ ಪ್ರಕಾಶ ಕಥೆಗಾರ್ತಿಯ ಮನೆಯ ಪಕ್ಕದಲ್ಲಿ ಸಂಸಾರ ಹೂಡಿ ಕಥೆಗಾರ್ತಿಗೆ ಮಕ್ಕಳಂತೆ ಆಪ್ತರಾಗುತ್ತಾರೆ. ಸ್ವಂತ ಮಕ್ಕಳು ತಮ್ಮದೇ ಜಗತ್ತಿನಲ್ಲಿ ಮುಳುಗಿ ತಮ್ಮಿಂದ ದೂರವಾದ ನೋವನ್ನು ಕಥೆಗಾರ್ತಿ ಪಲ್ಲವಿ ಪ್ರಕಾಶರ ಸಾಮಿಪ್ಯದಲ್ಲಿ ಮರೆಯುತ್ತಾಳೆ. ಪಲ್ಲವಿ ಪ್ರಕಾಶರ ಮಗ ಪ್ರವೀಣನನ್ನು ತನ್ನ ಮೊಮ್ಮಗನೇ ಎನ್ನುವಂತೆ ಪ್ರೀತಿಸುತ್ತಾಳೆ. ಆರೈಕೆ ಮಾಡುತ್ತಾಳೆ. ಕೋವಿಡ್ ಕಾರಣದಿಂದ ಪಲ್ಲವಿ ಪ್ರಕಾಶರನ್ನು ಕ್ವಾರಂಟೈನ್ ಮಾಡಲು ಕರೆದುಕೊಂಡು ಹೋಗುವಾಗ ಪ್ರವೀಣ ಕಥೆಗಾರ್ತಿಯ ಮಡಿಲು ಸೇರುತ್ತಾನೆ. ಆದರೆ ಈ ಮಧ್ಯದಲ್ಲಿ ಕೋವಿಡ್ ಸಂದರ್ಭದಲ್ಲಿ ಹೇಗೆ ಮಾನವ ಸಂಬಂಧಗಳು ಶಿಥಿಲವಾದವು, ಭಯ ಹೇಗೆ ಎಲ್ಲರನ್ನು ದೂರ ಮಾಡಿತು ಎನ್ನುವುದು ಎಳೆಎಳೆಯಾಗಿ ತೆರೆದುಕೊಳ್ಳುತ್ತದೆ. ಪಲ್ಲವಿ ಪ್ರಕಾಶರ ತಂದೆತಾಯಿಗಳು ಪುಟ್ಟ ಮಗು ಪ್ರವೀಣನ ಜವಾಬ್ದಾರಿ ತೆಗೆದುಕೊಳ್ಳದೇ ನಿರಾಕರಿಸಿ ಮಗುವನ್ನು ಅನಾಥ ಮಾಡಿದಾಗ ಪ್ರವೀಣ ಕಥೆಗಾರ್ತಿಯ ಮಡಿಲು ಸೇರುತ್ತಾನೆ. ಮಾನವೀಯ ಸಂಬಂಧಗಳ ಶಿಥಿಲತೆ ಮತ್ತು ಗಟ್ಟಿತನ ಎರಡನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಕಥೆಗಾರ್ಥಿ ಯಶಸ್ವಿಯಾಗುತ್ತಾರೆ. ಮುಂದೆ ಪ್ರವೀಣ ತನ್ನ ಮಗುವನ್ನು ಅಜ್ಜಿಯ ಕೈಯಲ್ಲಿ ಕೊಡುವಲ್ಲಿ ಕಥೆ ಕೊನೆಗೊಳ್ಳುತ್ತದೆ. ಕಥೆ ವರ್ತಮಾನದಲ್ಲಿ ಶುರುವಾಗಿ, ಭೂತಕಾಲದಲ್ಲಿ ಸರಿದು ಬಂದು, ಸುಖಾಂತ್ಯವಾಗುತ್ತದೆ. ಕ್ವಾರಂಟೈನ್ಗೆ ಹೋದ ಪ್ರವೀಣನ ತಂದೆ ತಾಯಿಗಳು ಏನಾದರು ಎನ್ನುವುದನ್ನು ಓದುಗರ ಊಹೆಗೆ ಬಿಟ್ಟುಕೊಡುತ್ತದೆ. ಸಮಕಾಲೀನ ಚಿತ್ರಣವನ್ನು ಕಥೆ ಕಟ್ಟಿಕೊಡುತ್ತದೆ.
ಕಥೆ: ಗೆಜ್ಜೆನಾದ.
ವಿಭಿನ್ನ ಕಥಾವಸ್ತುವುಳ್ಳ ಕಥೆ ಗೆಜ್ಜೆನಾದ. ಸಾಹಿತ್ಯಾಭಿಮಾನಿಯೊಬ್ಬ ಕಾದಂಬರಿಕಾರನನ್ನು ಹುಡುಕಿಕೊಂಡು ಹೋಗುವ ಕಥೆ. ಗುರುರಾಜ ಬ್ಯಾಂಕ್ ಉದ್ಯೋಗಿಯಾದರೂ ಓದುವ ಹವ್ಯಾಸವಿರುವ ಮನುಷ್ಯ. ಗ್ರಂಥಾಲಯದಿಂದ ಓದಲು ತಂದ ಕಾದಂಬರಿ ‘ಅಭಿಜಾತೆ’ ಗುರುರಾಜನನ್ನು ಆವರಿಸಿ ಬಿಡುತ್ತದೆ. ಭಗ್ನಪ್ರೇಮದ ಕಥಾ ನಾಯಕ ಲೇಖಕನೇ ಆಗಿರಬೇಕು ಎಂದು ಊಹಿಸಿ ಆ ಲೇಖಕನನ್ನು ಭೇಟಿಯಾಗಲು ಪ್ರಯತ್ನಿಸುತ್ತಾನೆ. ಲೇಖಕನ ಬಗ್ಗೆ ತಿಳಿದುಕೊಳ್ಳಲು ಉತ್ಸುಕನಾಗುತ್ತಾನೆ. ಪ್ರೊ. ಕೊಂಡಾಜಿಯ ಸಹಾಯದಿಂದ ಕಾದಂಬರಿಯ ಲೇಖಕ ತೇಜಸ್ವಿಯನ್ನು ಭೇಟಿ ಮಾಡುತ್ತಾನೆ. ಕಥೆ ಮತ್ತು ಕಥಾನಾಯಕನ ಬಗ್ಗೆ ತನಗಿರುವ ಸಂಶಯಗಳನ್ನು ಪರಿಹರಿಸಿಕೊಲ್ಳಲು ಪ್ರಯತ್ನಿಸುತ್ತಾನೆ. ಭಗ್ನ ಪ್ರೇಮಿಯಾದ ತೇಜಶ್ರೀ ತನ್ನ ನೋವನ್ನು ಮರೆಯಲು ಖಿನ್ನತೆಯಿಂದ ಹೊರಬರಲು ತನ್ನ ಪ್ರೇಮ ಕಥೆಯನ್ನು ಅಭಿಜಾತೆ ಎನ್ನುವ ಕಾದಂಬರಿ ಬರೆಯುತ್ತಾನೆ. ಆದರೆ ಅವಳಿಲ್ಲದ ಜೀವನದಿಂದ ವಿಮುಕ್ತನಾಗಿರುವ ಲೇಖಕನನ್ನು ಕಂಡು ಗುರುರಾಜ ಅಕ್ಕ ಶ್ರೀಲತಾಳನ್ನು ನೆನಪಿಸುತ್ತಾನೆ. ದೂರವಾದ ಎರಡು ಹೃದಯಗಳನ್ನು ಬೆಸೆಯಲು ಗುರುರಾಜ ಕೊಂಡಿಯಾಗಿ ನಿಲ್ಲುತ್ತಾನೆ. ಎಂದೋ ಬೇರೆಯಾದ ಜೋಡಿ ಜೀವಗಳು ಒಂದಾಗುವ ಭರವಸೆಯ ಬೆಳಕು ಮೂಡುತ್ತದೆ.
ಕಥೆ: ನಕ್ಷತ್ರಗಳು ಪಿಸುಗುಟ್ಟಿದವು.
ಸ್ತ್ರೀ ಸಂವೇದನೆಯುಳ್ಳ ಕಥೆ ನಕ್ಷತ್ರಗಳು ಪಿಸುಗುಟ್ಟಿದವು. ತಂದೆಯ ಅತಿಯಾದ ಶಿಸ್ತಿನಲ್ಲಿ ಬೆಳೆದ ಮಗ ಶಶಾಂಕ ತಂದೆ ತೀರಿಕೊಂಡ ನಂತರ ಹೆಂಡತಿ ಶರಧಿ ಮತ್ತು ಹಸುಕಂದ ಮಗಳನ್ನು ಮರೆತು ಬೇರೆ ಹೆಣ್ಣಿನೊಂದಿಗೆ ಸಹವಾಸ ಮಾಡಿ ಮನೆಯ ದಾರಿಯನ್ನೇ ಮರೆಯುತ್ತಾನೆ. ಬಾಣಂತನ ಮುಗಿಸಿಕೊಂಡು ಬಂದ ಶರಧಿ ಬದಲಾದ ಗಂಡನ ವರ್ತನೆಯನ್ನು ಕಂಡು ದಿಗಿಲಾಗುತ್ತಾಳೆ. ಕಾವೇರಮ್ಮ ಸೊಸೆಗೆ ನೋವಾಗಬಾರದೆಂದು ಮಗನ ತಪ್ಪುಗಳನ್ನು ಮುಚ್ಚಿಡುತ್ತಾಳೆ. ಮಗನನ್ನು ಸರಿದಾರಿಗೆ ತರಲು ಪ್ರಯತ್ನಿಸಿ ಸೋಲುತ್ತಾಳೆ. ಸೊಸೆಗೆ ಆಸರೆಯಾಗಿ ಮೊಮ್ಮಗಳಿಗೆ ಭರವಸೆಯಾಗಿ ನಿಲ್ಲುವ ಧೃಢ ನಿರ್ಧಾರವನ್ನು ಮಾಡುತ್ತಳೆ. 3 ಹೆಣ್ಣು ಜೀವಗಳು ಒಬ್ಬರಿಗಾಗಿ ಒಬ್ಬರು ಬದುಕಬೇಕೆಂಬ ಛಲ ಕಥೆಯನ್ನು ವಿಭಿನ್ನವಾಗಿ ನಿಲ್ಲಿಸುತ್ತದೆ.
ಕಥೆ: ಅಗ್ನಿ.
ಯಾಂತ್ರಿಕ ಬದುಕಿನಿಂದ ಬಿಡುಗಡೆ ಪಡೆದು ಪ್ರಕೃತಿ ಮಡಿಲಿನಲ್ಲಿ ಸಮಯ ಕಳೆಯಬೇಕೆಂದು ಹಂಬಲಿಸುವ ಕಥಾನಾಯಕಿಯ ಪ್ರವಾಸ ಕಥನದ ಅನುಭವಗಳೆ ಕಥಾವಸ್ತು. ಕಥೆಯ ನಿರೂಪಣಾ ಶೈಲಿ ತುಂಬಾ ಕಾವ್ಯಾತ್ಮಕವಾಗಿದೆ. ಪ್ರಕೃತಿಯ ವರ್ಣನೆಯಂತು ಓದುಗನ ಅನುಭವಕ್ಕೆ ಬರುವಂತಿದೆ. ಕಾಡು ಮೇಡು ಜಲಪಾತ ಗಿರಿಗಳನ್ನು ಸುತ್ತಲು ಬಂದ ಕಥಾ ನಾಯಕಿಗೆ ತನ್ನಂತೆ ಪ್ರವಾಸಕ್ಕೆ ಬಂದ ಆತ ಆಕಸ್ಮಿಕವಾಗಿ ಅವಳ ಕಣ್ಣಿಗೆ ಬೀಳುತ್ತಾನೆ. ಎರಡು ಮೂರು ದಿನಗಳ ಪ್ರವಾಸದಲ್ಲಿ ಅವಳ ಕಣ್ಣುಗಳು ಅವನನ್ನು ಹುಡುಕುವಷ್ಟು ಆಕರ್ಷಿತಳಾಗುತ್ತಾಳೆ. ಮೊದಲ ನೋಟದಲ್ಲಿ ಪ್ರೇಮಾಂಕುರವಾಗುವ ಕಥೆ ನವಿರು ಭಾವಗಳಿಂದ ತುಂಬಿ ಓದುಗನ ಹೃದಯಕ್ಕೆ ಕಥೆ ಆಪ್ತವಾಗುತ್ತದೆ.
ಕಥೆ: ಮಾತು ಮಾತಿನ ನಡುವೆ.
ಪ್ರಸ್ತುತ ಜ್ವಲಂತ ಸಮಸ್ಯೆಯೇ ಕಥಾವಸ್ತು. ವಿದ್ಯಾವಂತರು ತಮ್ಮ ಅನುಕೂಲಕ್ಕಾಗಿ ಕಾನೂನನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಎನ್ನುವ ಎಳೆಯಲ್ಲಿ ಸಾಮಾಜಿಕ ಸಮಸ್ಯೆಯೊಂದನ್ನು ಕಥೆಯಾಗಿಸುವಲ್ಲಿ ಕಥೆಗಾರ್ತಿ ಯಶಸ್ವಿಯಾಗಿದ್ದಾರೆ. ಕಥೆ ಮಹಿಳಾ ಮಂಡಳದ ಕಾರ್ಯಕ್ರಮದಲ್ಲಿ ಶುರುವಾಗುತ್ತದೆ. ಮಹಿಳಾ ಮಂಡಳದ ಕಾರ್ಯಕ್ರಮದ ಸನ್ನಿವೇಶ ಓದುಗನ ಕಣ್ಣೆದುರು ಹಾದು ಹೋಗುತ್ತದೆ. ಅವರಿವರ ಬಗ್ಗೆ ಆಡಿಕೊಳ್ಳುವ ಹೆಣ್ಣು ಮಕ್ಕಳ ಸಹಜ ಗುಣದಲ್ಲಿಯೇ ಮೂಲ ಕಥೆ ತೆರೆದುಕೊಳ್ಳುತ್ತದೆ. ಗಿರಿಜಕ್ಕನ ಸೊಸೆ ಮದುವೆಯಾದ ದಿನವೇ ಗಂಡನನ್ನು ತಿರಸ್ಕರಿಸಿ ವರದಕ್ಷಿಣೆ ಕೇಸ್ ಹಾಕಿ ಕುಟುಂಬದ ಮಾನ ಹರಾಜು ಹಾಕುವುದಲ್ಲದೆ, ಮನೆಯವರ ನೆಮ್ಮದಿ ಹಾಳುಮಾಡಿ ಕೋರ್ಟು ಕಛೇರಿ ಅಲೆಯುವಂತೆ ಮಾಡುತ್ತಾಳೆ. ಕೇಸ್ ವಾಪಸ್ ಪಡೆಯಲು 50 ಲಕ್ಷ ಪರಿಹಾರ ಕೇಳುತ್ತಾಳೆ. ಗಿರಿಜಕ್ಕ ಮನೆ ಮಾರಿ ಹಣ ಹೊಂದಿಸಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಕಾನೂನಿನ ಹೆಸರಲ್ಲಿ ಅಮಾಯಕರನ್ನು ಸುಲಿಗೆ ಮಾಡುವ ಇಂತಹ ಪ್ರಕರಣಗಳ ಸಂಖ್ಯೆ ನಮ್ಮ ಸಮಾಜದಲ್ಲಿ ಹೆಚ್ಚುತ್ತಿದೆ. ಇಂತಹ ಸಮಕಾಲೀನ ಸಮಸ್ಯೆಯನ್ನು ಕಥೆಯ ಮೂಲಕ ಲೇಖಕಿ ಬಿಚ್ಚಿಟ್ಟು ಇಂತಹ ಪ್ರಕರಣಗಳ ಕುರಿತು ಸತ್ಯಾಸತ್ಯತೆಯನ್ನು ವಿಚಾರ ಮಾಡುವಂತೆ ಮಾಡುತ್ತಾಳೆ.
ಕಥೆ: ಬದಲಾವಣೆ.
ಬದಲಾವಣೆ ವಿಭಿನ್ನ ಕಥಾವಸ್ತುವುಳ್ಳ ಕಥೆ. ಹೆಂಡತಿಯನ್ನು ಕಳೆದುಕೊಂಡ ಇಳಿವಯಸ್ಸಿನ ವಿಧುರ ವಿಠಲರಾಯ ಮತ್ತು ನಿವೃತ್ತಿಯ ಅಂಚಿನಲ್ಲಿರುವ ಬ್ಯಾಂಕ್ ಮ್ಯಾನೇಜರ್ ವಿಧವೆ ವಿಶಾಲಮ್ಮನ ನಡುವೆ ಬೆಳೆದ ಆಪ್ತತೆಯು ಮದುವೆಯಾಗ ಬಯಸುವ ಅವರ ನಿರ್ಧಾರವನ್ನು ಇಬ್ಬರ ಮಕ್ಕಳು ಅದಕ್ಕೆ ಪ್ರತಿಸ್ಪಂದಿಸುವ ರೀತಿ, ಏಕಾಂಗಿತನಕ್ಕೆ ಬೇಕೆನಿಸುವ ಸಾಂಗತ್ಯ ಮುಂತಾದ ಭಾವನಾತ್ಮಕ ಅಂಶ ಮತ್ತು ಪ್ರಸ್ತುತ ಹಿರಿಯರನ್ನು ಕಾಡುತ್ತಿರುವ ಒಂಟಿತನ, ಒಂಟಿತನಕ್ಕೆ ಪರಿಹಾರವಾಗಿ ಪ್ರಭುದ್ಧ ಮನಸ್ಸುಗಳ ಪರಸ್ಪರ ಮೆಚ್ಚುಗೆ, ಒಂದಾಗಿರಬೇಕೆಂಬ ಬಯಕೆಗೆ ಮನೆಯವರಿಂದ, ಸಮಾಜದಿಂದ ಸಿಗುವ ಪ್ರತಿಸ್ಪಂದನಗಳು ಕಥೆಯಲ್ಲಿ ಅತ್ಯಂತ ಸಹಜವಾಗಿ ನಿರೂಪಣೆಯಾಗಿದೆ.
ಕಥೆ: ಸದಾ ಲಕ್ಷ್ಮೀ ಪ್ರಸಂಗ
ಕರೋನಾ ಸಂಕಷ್ಟ ಕಾಲದ ಚಿತ್ರಣವನ್ನು ನೀಡುವ ಮನಮಿಡಿಯುವ ಕಥೆ ಸದಾಲಕ್ಷ್ಮೀ ಪ್ರಸಂಗ ಊರು ಕೇರಿ ಬಿಟ್ಟು ದೂರದ ಊರಿಗೆ ದುಡಿಯಲು ಹೋದವರು ಕರೋನಾ ರೋಗದಿಂದಾಗಿ ದೇಶದಲ್ಲಿ ಜಾರಿಯಾದ ಲಾಕ್ಡೌನ್ ಸಂಧರ್ಭದಲ್ಲಿ ಕಾಲ್ನಡಿಗೆಯಲ್ಲಿ ಊರು ಸೇರುವ ಪ್ರಸಂಗವನ್ನು ಅತ್ಯಂತ ಮನಮಿಡಿಯುವಂತೆ ಕಥೆಯಾಗಿಸಿದ್ದಾರೆ. ಬಸುರಿ ಹೆಂಗಸು ಶಾರವ್ವ ಹೊಟ್ಟೆ ಹೊತ್ತುಕೊಂಡು ರಣಬಿಸಿಲಿನಲ್ಲಿ ನಡೆಯುತ್ತಾ ಸಾಗುವಾಗ ಅವಳು ಅನುಭವಿಸುವ ಸಂಕಟ, ಜೊತೆಗಾರರ ಆತಂಕ, ದಾರಿ ಮಧ್ಯದಲ್ಲಿ ಕಾಣಿಸಿಕೊಂಡ ಹೆರಿಗೆ ನೋವು, ನಡೆಯಲಾಗದ ಶಾರವ್ವನನ್ನು ನಾಲ್ಕು ಜನ ಗಂಡಸರು ಚಾದರಿನ ಜೋಳಿಗೆಯಲ್ಲಿ ಹೊತ್ತು ರೈಲ್ವೆ ಹಳಿಯ ಮೇಲೆ ನಡೆದು ಸ್ಟೇಷನ್ ಸೇರಿದ್ದು, ಅವರ ಕಷ್ಟಕ್ಕೆ ಸ್ಪಂದಿಸಿದ ಸಾಹುಕಾರ ಸದಾನಂದ ಅವರಿಗೆ ಊಟ, ಆಸ್ಪತ್ರೆ ಮತ್ತು ಊರು ಸೇರಲು ಸಹಯ ಮಾಡಿದ ನೆನಪಿಗೆ ಹುಟ್ಟಿದ ಹೆಣ್ಣು ಮಗುವಿಗೆ ಸದಾಲಕ್ಷ್ಮೀ ಎಂದು ಹೆಸರಿಟ್ಟು ಕಷ್ಟ ಕಾಲದಲ್ಲಿ ಸಹಾಯ ಮಾಡಿದವರ ಉಪಕಾರವನ್ನು ಸದಾಕಾಲ ಸ್ಮರಿಸುತ್ತಾರೆ.
ಕಥೆ: ಸುಳಿ.
ಸಮರಸವಿಲ್ಲದ ದಾಂಪತ್ಯದ ಸುತ್ತ ಹೆಣೆದ ಕಥೆ ಸುಳಿ. ಕಥಾ ನಾಯಕಿ ಪದ್ಮಾ ತನ್ನ ಗೆಳತಿ, ಮೇಲಾಗಿ ಅಣ್ಣನ ಹೆಂಡತಿಯಾದ ಸುನೀತಳ ಜೀವನದಲ್ಲಿ ಆದಂತಹ ಬದಲಾವಣೆ ಅವಳು ಮಾಡಿದ ಸಾಧನೆಯನ್ನು ಅಭಿನಂದಿಸಲು ಏಳು ವರ್ಷಗಳ ನಂತರ ತವರಿಗೆ ಬರುತ್ತಾಳೆ. ತನ್ನ ಅರಿವಿಗೆ ಬಾರದ ಅಣ್ಣನ ಸ್ವಭಾವದಿಂದ ವೈನಿಯಾದ ಸುನಿ ಅನುಭವಿಸಿದ ನೋವು ಸಂಕಟ, ಒಂಟಿತನದ ಕಥೆಯನ್ನು ಅತ್ತಿಗೆಯ ಡೈರಿ ಹೇಳುತ್ತದೆ. ಮಾನಸಿಕವಾಗಿ ಎಷ್ಟೋ ವರ್ಷಗಳಿಂದ ಅಣ್ಣನಿಂದ ದೂರವಾದ ಅತ್ತಿಗೆ, ಮಗನ ಒಳಿತಿಗಾಗಿ, ಸಮಾಜದಲ್ಲಿಯ ಭದ್ರತೆಗಾಗಿ ವಿಚ್ಛೇಧನ ಪಡೆಯುವ ನಿರ್ಧಾರದಿಂದ ಹಿಂದೆ ಸರಿವ ನಿರ್ಧಾರ ಹೆಣ್ಣಿನ ಅಸಹಾಯಕತೆಯನ್ನು ಪ್ರತಿಬಿಂಬಿಸುತ್ತದೆ. ಅತ್ತಿಗೆಯ ನಿರ್ಧಾರ ಏನೆ ಆದರೂ ಅವಳಿಗೆ ಬೆಂಬಲವಾಗಿ ನಾನಿರುತ್ತೇನೆ ಎನ್ನುವ ಸಂಕಲ್ಪವನ್ನು ಪದ್ಮಾ ಮಾಡುತ್ತಾಳೆ. ಕಥೆಯಲ್ಲಿ ಬರುವ ಪದ್ಮಾಳ ಅಣ್ಣ ಗೋಪಾಲನಂತಹ ಪಾತ್ರಗಳು ನಮ್ಮ ನಡುವೆ ಸುಳಿಯುತ್ತವೆ. ಅವುಗಳ ನಿಜವಾದ ರೂಪ ಜೊತೆಗಿದ್ದ ಹೆಂಡತಿಗೆ ಮಾತ್ರ ತಿಳಿಯುತ್ತದೆ. ಎನ್ನುವ ನಿಲುವನ್ನು ಕಥೆ ಬಿಂಬಿಸುತ್ತದೆ.
ಕಥೆ: ಗುಳಿಗೆನ್ನೆಯ ಹುಡುಗಿ.
ಬಸ್ ಸ್ಯ್ಟಾಂಡಿನಲ್ಲಿ ಶೇಂಗಾಮಾರುವ ನಾಲ್ಕು ವರ್ಷದ ಹೆಣ್ಣು ಮಗುವಿಗೆ ಪ್ರೀತಿ ತೋರಿಸಿ ವಿದ್ಯಾಬ್ಯಾಸ ನೀಡಿ ಮದುವೆ ಮಾಡಿ ಕೊಟ್ಟು ಧನ್ಯತೆಯನ್ನು ಅನಿಭವಿಸುವ ಪದ್ಮಾಳ ಕಥೆ. ಅಪಘಾತದಲ್ಲಿ ಗಂಡ ಮತ್ತು ಮಗಳನ್ನು ಕಳೆದುಕೊಂಡ ಪದ್ಮಾಳಿಗೆ ಬಸ್ ಸ್ಯ್ಟಾಂಡಿನಲ್ಲಿ ಶೇಂಗಾ ಮಾರುವ ಪುಟ್ಟ ಬಾಲಕಿಯಲ್ಲಿ ತನ್ನ ಮಗಳು ಕಾಣುತ್ತಾಳೆ. ಅವಳ ಜೊತೆ ಒಂದು ಭಾವನಾತ್ಮಕ ಸಂಬಂಧ ಚಿಗುರಿ ನಿರ್ಗತಿಕಳಾದ ಅಜ್ಜಿ ಮೊಮ್ಮಗಳನ್ನು ತನ್ನ ಮನೆಗೆ ಕರೆದುಕೊಂಡು ಬಂದು ಮಗುವಿಗೆ ತನ್ನ ಸತ್ತುಹೋದ ಮಗಳ ಸ್ಥಾನವನ್ನು ನೀಡುತ್ತಾಳೆ. ಬಸ್ ಸ್ಯ್ಟಾಂಡಿನ ಚಿತ್ರಣ ಶೇಂಗಾ ಮಾರುವ ಚಿಕ್ಕ ಬಾಲಕಿಯ ಚಿತ್ರಣವನ್ನು ಅತ್ಯಂತ ನೈಜವಾಗಿ ಬರವಣಿಗೆಯಲ್ಲಿ ಚಿತ್ರಿಸಿದ್ದಾರೆ.
ವಿಭಿನ್ನ ಕಥಾ ವಸ್ತುವುಳ್ಳ ಹದಿನಾಲ್ಕು ಕಥೆಗಳು ಪ್ರಸ್ತುತ ಮಾನವ ಸಂಬಂಧಗಳ ನಡುವಿನ ತಾಕಲಾಟ, ಒಂಟಿತನ, ಪ್ರೀತಿ, ಗಂಡಿನ ಅಹಂ ಭಾವ, ಪ್ರೇಮ, ಕಾಮಗಳಂತಹ ಭಾವನಾತ್ಮಕ ಸಂವೇಗಗಳು ಮತ್ತು ಮೂಲಭೂತ ಬಯಕೆಗಳ ಸುತ್ತ ಕಥೆಗಳು ತೆರೆದುಕೊಳ್ಳುತ್ತವೆ. ಕಥೆಗಳೆಲ್ಲವೂ ತಾರ್ಕಿಕವಾಗಿ ಅಂತ್ಯವಾಗಿ ಓದುಗರನ್ನು ಒಮ್ಮೆ ಭಾವಲಹರಿಯಲ್ಲಿ ನಿಲ್ಲಿಸಿದರೆ, ಇನ್ನೊಮ್ಮೆ ಚಿಂತನೆಗೆ ಹಚ್ಚುತ್ತವೆ. ಪಾತ್ರ ಸನ್ನಿವೇಶಗಳನ್ನು ಕಣ್ಣ ಮುಂದೆ ಕಟ್ಟುವಂತೆ ನಿರೂಪಣಾ ಶೈಲಿ ಬಿಗಿಯಾಗಿದೆ. ವಿಷಯವಸ್ತು ಓದುಗನನ್ನು ಮುಂದೆ ನಡೆಸಿಕೊಂಡು ಹೋಗುತ್ತದೆ. ಬಳಕೆಯಾಗಿರುವ ಆಡು ಭಾಷೆ ಒಂದು ಸಂಸ್ಕøತಿಯ ಪ್ರತಿಬಿಂಬವಾಗಿ ಮೂಡಿ ಬಂದಿದೆ. ಸಾಂಸ್ಕøತಿಕ ಹಿನ್ನೆಲೆ ಭಾμÁ ಶೈಲಿಯ ಬಳಕೆಯು ಸಮರ್ಪಕವಾಗಿ ಹೆಚ್ಚು ಕಥೆಗಳಲ್ಲಿ ಬಳಕೆಯಾದರೆ, ಬೆಳಗಾವಿ ಭಾಗದ ಗ್ರಾಮೀಣ ಪ್ರದೇಶದ ಜನರಾಡುವ ಭಾμÉಯನ್ನು ಅμÉ್ಟ ಪರಿಣಾಮಕಾರಿಯಾಗಿ ಸದಾಲಕ್ಷ್ಮೀ ಪ್ರಸಂಗ ಮತ್ತು ದ್ವಂದ್ವ ಕಥೆಗಳಲ್ಲಿ ಬಳಸಿದ್ದಾರೆ.
ಆಕೆ ನಗೆಯಾದಳು, ಆತ ಧ್ವನಿಯಾದ ಮತ್ತು ಅಗ್ನಿ ಕಥೆಗಳು ವಿಭಿನ್ನ ನಿರೂಪಣಾ ಶೈಲಿಯ ಕಥೆಗಳು. ನವಿರು ಭಾವಗಳಿಂದ ತುಂಬಿ, ಪ್ರಣಯಭರಿತ ಕಾವ್ಯಾತ್ಮಕವಾಗಿ ಮೂಡಿಬಂದಿವೆ. ಓದುಗರನ್ನು ಭಾವನಾ ಲೋಕಕ್ಕೆ ಕರೆದೊಯ್ಯುತ್ತವೆ. ಯಾವ ಜನ್ಮದ ರಿಣವಿದು ಮತ್ತು ಸದಾಲಕ್ಷ್ಮೀ ಪ್ರಸಂಗ ಕಥೆಗಳು ಕರೋನಾ ಕಾಲದ ಸಾಮಾಜಿಕ ಸಂಕಷ್ಟಗಳಿಗೆ, ಘಟನೆಗಳಿಗೆ ಕಣ್ಣಾದ ಕಥೆಗಾರ್ತಿಯ ಅನುಭವಗಳು ಕಥಾರೂಪ ಪಡೆದುಕೊಂಡು ಘಟನೆಗಳ ಸಾಕ್ಷಿ ರೂಪವಾಗಿ ಮೂಡಿಬಂದಿವೆ. ಹೂಮನ ಮತ್ತು ಸುಳಿ ಕಥೆಗಳಿಗೆ ವಿವಾಹ ವಿಚ್ಛೇದನವೆ ಮೂಲ ದೃವ್ಯವಾದರೂ, ಒಂದು ಕಥೆ ವಿಚ್ಚೇದನದಿಂದಾಗುವ ಪರಿಣಾಮವನ್ನು ಬಿಚ್ಚಿಟ್ಟರೆ, ಇನ್ನೊಂದು ಕಥೆ ಪರಿಣಾಮವನ್ನು ಊಹಿಸಿ ವಿಚ್ಚೇದನದಿಂದ ಹಿಂದೆ ಸರಿಯುವ ನಿರ್ಧಾರದಲ್ಲಿ ಕೊನೆಗೊಳ್ಳುತ್ತದೆ. ಬದಲಾವಣೆ ಮತ್ತು ಮುತ್ತಿನ ಬೆಂಡೋಲೆ ಕಥೆಗಳಲ್ಲಿ ಹಿರಿಯ ವಯಸ್ಸಿನವರು ಇಂದು ಅನುಭವಿಸುವ ಒಂಟಿತನ ಮತ್ತು ಅನಾಥಪ್ರಜ್ಞೆಯೆ ಕಥಾವಸ್ತುವಾಗಿದೆ. ಬಾಲ್ಯದ ಗೆಳೆಯನನ್ನು ದೂರದ ಊರಿನಿಂದ ಹುಡುಕಿಕೊಂಡು ಬರುವ, ಎಲ್ಲವು ಇದ್ದರೂ ಆಪ್ತ ಸಾಂಗತ್ಯ ಬಯಸುವ ಎರಡು ನುರಿತ ಮನಗಳು ಭಾವಬಂಧನದಲ್ಲಿ ಒಂದಾಗಬೇಕಿದೆ ಎಂದು ಹಂಬಲಿಸಿದರೆ, ಸಂಧ್ಯಾ ಸಮಯದಲ್ಲಿ ಒಂಟಿಯಾಗಿ ಆತ್ಮೀಯತೆಗೆ ಹಂಬಲಿಸುವ ವಿಧುರ ಮತ್ತು ವಿಧವೆ 60ರ ವಯಸ್ಸಿನಲ್ಲಿ ಮದುವೆಯಾಗಿ ಜೊತೆಯಾಗಿ ಬಾಳುವ ನಿರ್ಧಾರ ಮಾಡಿದ್ದವರು, ತಮ್ಮ ಮಕ್ಕಳ ಪ್ರೀತಿ ಉಳಿಸಲು ಬೀಗರಾಗಿ ಬದಲಾಗಿಯು ಭಾವನಾತ್ಮಕ ಸಂಬಂಧವನ್ನ ಆಪ್ತತೆಯನ್ನು ಉಳಿಸಿಕೊಳ್ಳಬಹುದು ಎನ್ನುವ ಪ್ರಭುದ್ದ ನಿರ್ಧಾರದ ಸಂದೇಶವನ್ನ ಕಥೆ ಸಾರುತ್ತವೆ. ಅಗ್ನಿ ಮತ್ತು ಕೆಂಪು ಟೋಪಿ ಕಥೆಗಳು ಪ್ರವಾಸಕಥನದ ಅನುಭವಗಳು ಕಥೆಯಾಗಿ ರೂಪುಗೊಂಡು ಮಲೆನಾಡಿನ ಸೊಬಗನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ.
ನಕ್ಷತ್ರಗಳು ಪಿಸುಗುಟ್ಟಿದವು ಮತ್ತು ಗುಳಿಗೆನ್ನೆಯ ಹುಡುಗಿ ಸ್ತ್ರೀ ಸಂವೇದನೆಯ ಎಳೆಯ ಮೇಲೆ ರಚಿತವಾದ ಕಥೆಯಾಗಿವೆ. ಬೇರೆ ಹೆಂಗಸಿನ ಸಹವಾಸ ಮಾಡಿದ ಮಗ, ಸೊಸೆ ಮೊಮ್ಮಗಳನ್ನು ನಡುನೀರಿನಲ್ಲಿ ಕೈಬಿಟ್ಟಾಗ, ಕಾವೇರಮ್ಮ ಸೊಸೆ ಮೊಮ್ಮಗಳಿಗೆ ಆಸರೆಯಾಗಿ ನಿಲ್ಲುವ ಹೆಮ್ಮರವಾಗುತ್ತಾಳೆ. ದಿಕ್ಕಿಲ್ಲದ ಅಜ್ಜಿ ಮತ್ತು ಮೊಮ್ಮಗಳಿಗೆ ಪದ್ಮ ತಾಯಿಯಾಗಿ ನಿಂತು ಮಮತೆಯ ಧಾರೆ ಎರೆಯುತ್ತಾಳೆ. ಮಾತುಗಳ ನಡುವೆ ಮತ್ತು ದ್ವಂದ್ವ ಕಥೆಗಳಲ್ಲಿ ಕಾನೂನಿನ ಸದುಪಯೋಗ ಮತ್ತು ದುರುಪಯೋಗದ ಚಿತ್ರಣವೆ ಕಥಾವಸ್ತು. ಮದುವೆಯಾಗಿ ಬಂದ ಸೊಸೆ ಹಣಕ್ಕಾಗಿ ಗಂಡನ ಮನೆಯವರ ಮೇಲೆ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳದ ಕೇಸು ಹಾಕಿ ಜೈಲಿಗೆ ಕಳಿಸಿ ಹಣವಸೂಲಿ ಮಾಡುವುದರ ಮೂಲಕ ಕಾನೂನನ್ನ ದುರುಪಯೋಗ ಪಡಿಸಿಕೊಳ್ಳುವುದು ಒಂದು ಕಥೆಯಾದರೆ, ಮೊಮ್ಮಗಳ ವಯಸ್ಸಿನ ಮನೆ ಕೆಲಸದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಂದೆಯನ್ನು ಕಾನೂನಿಗೆ ಒಪ್ಪಿಸುವ ಮಗ ಹೆಂಡತಿಯ ದ್ವಂದ್ವಕ್ಕೆ ಮುಕ್ತಾಯ ನೀಡುತ್ತಾನೆ.
ಹೀಗೆ ಒಂದೇ ವಿಷಯದ ವಿಭಿನ್ನ ಆಯಾಮಗಳನ್ನು ಕಟ್ಟಿಕೊಡುವ ಕಥೆಗಳ ಸಂಗ್ರಹ ‘ಕೆಂಪು ಟೋಪಿ’ ಓದುಗರನ್ನು ಮುಟ್ಟುವುದರಲ್ಲಿ ಯಶಸ್ವಿಯಾಗುತ್ತದೆ…
ಡಾ. ನಿರ್ಮಲ ಬಟ್ಟಲ
ಅವಲೋಕನ ಚೆನ್ನಾಗಿದೆ.
ಮೂಲಕ ಅವಲೋಕನ ಕ್ಕಾಗಿ ಧನ್ಯವಾದ ಗಳು ನಿರ್ಮಲ
ಮೌಲಿಕ ಅವಲೋಕನ