ಕನ್ನಡದ ಕುರಿತು ಒಂದಿಷ್ಟು ಮಾತು….!!

ಲೇಖನ

ಕನ್ನಡದ ಕುರಿತು ಒಂದಿಷ್ಟು ಮಾತು….!!

ದೇವರಾಜ್ ಹುಣಸಿಕಟ್ಟಿ.

ಕನ್ನಡ Kannada - Photos | Facebook

ಕನ್ನಡ ಒಂದು ಭಾಷೆಯಾಗಿ ಅತೀ ದೀರ್ಘಕಾಲಿನ ಇತಿಹಾಸ ಹೊಂದಿದೆ ಅನ್ನೋದು,ಒಂದು ಭಾಷೆಯಾಗಿ ಭಾರತದ ಇತಿಹಾಸದಲ್ಲಿ, ಮತ್ತೂ ಪ್ರಪಂಚದ ಇತಿಹಾಸದಲ್ಲಿ ಒಂದು ಪ್ರಮುಖ ಸ್ಥಾನ ಪಡೆದಿದೆ ಅನ್ನೋದು   ನಿರ್ವಿವಾದಿತ.ಹೀಗೆ ಇರುವಾಗ ಕನ್ನಡ ಭಾಷೆಯ ಅಳಿವು ಉಳುವಿನ ಪ್ರಶ್ನೆ ಆಗಾಗ ದಿಗ್ಗ ಎಂದು ವ್ಯಾಪಾಕವಾಗಿ ಎದ್ದು ಬೀದಿ ಹೋರಾಟ ಆಗೋದು,ಅಲ್ಲಲ್ಲಿ ಗಲಭೆ, ಗಲಾಟೆ ಆಗೋದು ಕಂಡಾಗ  ಒಂದು ಪ್ರಶ್ನೆ ಅಂತೂ ಹುಟ್ಟಿಕೊಳ್ಳುತ್ತೆ.ನಿಜ್ವಾಗ್ಲೂ ಒಂದು ಭಾಷೆಯಾಗಿ ಕನ್ನಡಕ್ಕೆ ಅಪಾಯ ಬಂದ ಒದಗಿದೆಯಾ…? ಹಾಗಾದರೆ ಯಾವುದರಿಂದ…? ಇಲ್ಲಾ ಇದೊಂದು ಆಗಾಗ ನೀರ ಮೇಲಿಂದ ಹೇಳೋ ಗುಳ್ಳೆ ಹಾಗೆ ಒಂದು ಬಬುಲಾ..? ಎಂದು ಏನಿಸದೇ ಇರದು. ಮೊನ್ನೆ ಮೊನ್ನೆ ಸಂಸ್ಕೃತ ವಿಶ್ವ ವಿದ್ಯಾಲಕ್ಕೆ ಸರ್ಕಾರ ಹಣ ಮೀಸಲೂ ಇಟ್ಟು ಭೂಮಿ ಮಂಜೂರು ಮಾಡಿದಾಗಲೂ ಇದೆ ವಾದ ವಿವಾದಗಳ ಸರಮಾಲೆಗಳ ನಾವು ನೀವು ನೋಡಿದ್ದೇವೆ.ಈಗ ಮೂಲ ಪ್ರಶ್ನೆಗೆ ಬರೋಣ. ಹಾಗಾದರೆ ಭಾಷೆಯಾಗಿ ಕನ್ನಡ ಅಪಾಯದಲ್ಲಿ ಇದೆಯಾ..? ಹಾಗೆ ಅಪಾಯ ಇದ್ದರೆ ಯಾರಿಂದ…? ಯಾಕಾಗಿ…? ಕಾರಣಗಳೇನು…? ಇತ್ಯಾದಿ ಪ್ರಶ್ನೆಗಳ ಜೊತೆಗೆ ಒಂದಿಷ್ಟು ಮುಖಾಮುಖಿ ಆಗುವ.

ಸುಮ್ನೆ ವಾದಕ್ಕಾಗಿ ತಗೊಳೋಣ ಕರ್ನಾಟಕದಲ್ಲಿ ಕನ್ನಡಕ್ಕಾಗಿ ಅದೆಷ್ಟು ಅಕಾಡಮಿಗಳು,ಅಧ್ಯಯನ ಸಂಸ್ಥೆಗಳು,ಪ್ರಾಧಿಕಾರಗಳು,ವಿಶ್ವ ವಿದ್ಯಾಲಯಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ.ವರ್ಷ ವರ್ಷ ಕೋಟಿ ಕೋಟಿ ಹಣ ಬಳಸುತ್ತಿವೆ. ಸದ್ಭಳಕೆ,ದುರ್ಬಳಕೆ ಅನಂತರದ ಚರ್ಚೆ.ಅಥವಾ (ಲೂಟಿಯೂ ಅಂದುಕೊಳ್ಳಿ.)ಮತ್ತೂ ಪ್ರತಿ ವರ್ಷ ಕನ್ನಡ ಸಂಶೋಧನೆಯ ವಿಭಾಗದಲ್ಲಿ ಅದೆಷ್ಟು ಡಾಕ್ಟರೇಟ್ ಗಳು ಕೊಡಮಾಡಲಾಗುತ್ತಿವೇ..ಇವೆಲ್ಲವು ಗಳಿಂದ ನಿಜ್ವಾಗ್ಲೂ ಕನ್ನಡ ಉದ್ದಾರ್ ಆಗಿದೆಯಾ..? ಹೀಗೆ ಬರೀ ಪ್ರಶ್ನೆಗಳ ಸರಮಾಲೇ ನಮ್ಮ ಎದುರಿಗೆ ಹುಟ್ಟಿಕೊಳ್ಳುತ್ತೆ.ನಾನು ಇದು ಆಗಬಾರದು ಅನ್ನೊನಲ್ಲ.ಅಥವಾ ಇವುಗಳಿಂದಲೇ ಒಂದು ಭಾಷೆಯೂ ಅಸ್ತಿತ್ವ ಉಳಿಸಿಕೊಳ್ಳುತ್ತೆ ಅಂತಾ ನಂಬುವವನೂ ಅಲ್ಲ.

ಒಂದು ಭಾಷೆ  ಉಳಿದಿರುವುದು ಆ ಭಾಷೆಯನ್ನು ಪ್ರೀತಿಸುವ ಮತ್ತೂ ಅದಕ್ಕಿಂತ ಎರಡರಷ್ಟು ಪಟ್ಟು ಇಷ್ಟ ದಿಂದ ಮಾತನಾಡುವರಿಂದ. ನಾಲ್ಕು ನಾಲ್ಕು ಡಾಕ್ಟರೇಟ್ ಪಡೆದು ಆ… ಉ… ಇ…ಎಂದು ನಾಲ್ಕು ಶಬ್ದ ಮಾತಾಡಲು ತಡವರಿಸುವವರಿಂದಲೂ ಅಲ್ಲ.ಮುಂಜಾನೆ ಮುಂಜಾನೆ ಹಳ್ಳಿಯಲ್ಲಿ ಯಪ್ಪಾ ಬಸ್ಸ್ಯಾ ಎದ್ದಳೋ ಹೊತ್ತು ನೆತ್ತಿಗೇರಿದೆ ಅಂತಾ ಬೈದು ಅಂಗಳಾ ಸಾರಿಸಿ ಗಂಗಾಳ ತುಂಬಾ ಗಂಜಿ ಕುಡಿದ್ರೂ ಸೆರಗಿಗಿ ಅಂಟಿದ ಮಗನ ಸಿಂಬಳದಷ್ಟೇ ಪ್ರೀತಿಯಿಂದ ಅದನ್ನ ಆಡೋ ಪ್ರತಿಯೊಬ್ಬ ಕನ್ನಡ ತಾಯಿ ತಂದೆಯರಿಂದ ಅನ್ನೋದು ನಾವೆಲ್ಲಾ ಮೊದಲು ಅರಿಬೇಕು.

ಅಜ್ಜನಿಗೆ ಭಾಷೆ ಅನ್ನೋದು ಬಿತ್ತೋದು,ಬೆಳೆಯೋದು,ಹಸನ ಮಾಡೋದು,ಬೇಯಿಸೋದು ಉಣ್ಣೊದ ಎಷ್ಟು ಸರಳ ಕ್ರಿಯೆಯೋ ಅಷ್ಟೇ ಸರಳ ಇತ್ತು.ಅಷ್ಟಕ್ಕ ನಾವೆಲ್ಲಿ ನಿಂತವಿ ಹೆಚ್ಚು ಹೆಚ್ಚು ಬೆಳೀಬೇಕು ಅಂತಾ ಗೊಬ್ಬರ ಸುರದವಿ, ಎಣ್ಣಿ ಹೊಡದವಿ,ಎಗ್ಗಿಲ್ಲದಷ್ಟು ನೆಲ ಅಗದ ನೀರು ತೆಗೆದವಿ,ಬೆಳೀನು ಬೆಳದವಿ ಅರಿಬರೀ ಹೊಟ್ಟಿ ಬಟ್ಟಿ ಎಲ್ಲ ತುಂಬಿದಿವಿ ಅಷ್ಟಕ್ಕೆ ನಿಂತ್ವ…? ಇಲ್ಲಾ ಮತ್ತಷ್ಟು ಮತ್ತಷ್ಟು ಅಂತಾ ಅಗತ್ಯಕ್ಕಿಂತ ನೂರು ಪಟ್ಟು ದುರಾಸೆಗೆ ಬಿದ್ವಿ…ಅದು ವಿಷ ಆಯ್ತು ನೆಲ ಸತ್ವಕಳಕೊಂತು,ನೆಲ ನೀರ್ ಕಳಕೊಂತು, ಬರುಡಾತು.ಮತ್ತೇನಿತ್ತು ಮತ್ತೆ ಸಾವಯವ ಅಂತಾ,ಸಹಜ ಕೃಷಿ ಹೊಸ ಆಟ ಶುರುವಿಟ್ಟೆವಿ.ಮತ್ತೆ ಭಾಷಾ ಕಥಿನು ಇಷ್ಟ…ಗಂಗಾಳದ ಜಾಗಕ್ಕೆ ತಟ್ಟಿ ಬಂತು,ತಟ್ಟಿ ಜಾಗಕ್ಕೆ,ಪ್ಲೇಟ್ ಬಂತು ಒಟ್ಟು ನೆಲದ ಭಾಷೆಯ ಅಸ್ತಿತ್ವಕ್ಕೆ ನಾವು ಹೆಚ್ಚು ಹೆಚ್ಚು ಕಲತಂಗ್ ಅಂದ್ರ್ ಬೆರೆತೆಂಗ್ ಹೆಚ್ಚು ಹೆಚ್ಚು ಅಗತ್ಯಕ್ಕಿಂತ ಅನಗತ್ಯ ಶಬ್ದ ತಂದು ಸುರದ್ವಿ ಈಗ ಗಂಗಾಳ ಅಂದ್ರ್ ಏನು ಅನ್ನೋ ಮಟ್ಟಿಗೆ ನೆಲದ ಭಾಷೆಗೆ ಕುತ್ತು ತಂದಿವಿ .ಇದು ಸೋಫೆಸ್ಟಿಕೇಟೆಡ್ ಮನೋಸ್ಥಿತಿಯ ಪರಿಣಾಮ.ಗಂಗಾಳದಾಗ ಊಟ ಹಾಕ್ ಬೇ ಅಂದ್ರ್ ಅಸಹ್ಯ ಅಂತಾ ಭಾವಿಸಿದೋರ್ ನಾವು…ಈಗ ಭಾಷೆಗೆ ಕುತ್ತು ಬಂದಿದೆ ಅಂತಾ ಹೊಯ್ಕೋ ಳ್ಳೊರೂ ನಾವೇ .

ಹಾಗಾದರೆ ಕನ್ನಡದ ಉಳಿವಿಗೆ ಆಗ ಬೇಕಾದ ತುರ್ತು ಅಗತ್ಯವೇನು…?ಒಂದು ಅದು ತನ್ನ ಸ್ಥಾನಿಕ ವೈವಿದ್ಯತೆ ಉಳಿಸಿಕೊಳ್ಳುವುದು ಹೇಗೆ..? ಪಠ್ಯಕ್ಕೆ ಅದನ್ನ ತುರ್ತಾಗಿ ತರೋದು ಹೇಗೆ…? ಆ ಮೂಲಕ ಮಂಡ್ಯ ಕನ್ನಡವೊ,ಧಾರವಾಡ ಕನ್ನಡವೊ ಮುಂದಿನ ಪೀಳಿಗೆಗೆ ಒಂದಿಚೂ ನಶಿಸಿದಂಗ್ ರವಾನಿಸೋದು ಹೇಗೆ..? ಎಂದು ಚಿಂತಿಸಿ ಪರಿಹಾರ ಕಂಡುಕೊಳ್ಳುವುದು. ಯಾಕೆಂದರೆ ನಾವು ಇವತ್ತು ಇಡೀ ಕರ್ನಾಟಕ ಒಂದು ಪಠ್ಯ ಅನಿಸರಿಸುವಾಗ ಇಡೀ ಕರ್ನಾಟಕ ಕ್ಕೆ ಒಂದು ಗ್ರಂಥಸ್ಥ ಕನ್ನಡ ಸಿಕ್ಕಿದೆ ಜೊತೆಯಲ್ಲಿ ಸ್ಥಾನಿಕ ಭಾಷೆಯ ವೈಷಿಷ್ಟ್ ಕಾಲಾನು ಗಟ್ಟದಲ್ಲಿ ನಶಿಸುವ ಅಪಾಯ ಒದಗಿದೆ.ಇದನ್ನ ಭಾಷಾ ಸಂಶೋಧಕರು,ಪಠ್ಯ ರಚನಾ ಸಮಿತಿಗಳು,ಸರಕಾರ ಗಳು ಗಮನಿಸಿ ತಕ್ಷಣ ಕ್ಕೆ ಪರಿಹಾರ ಕಂಡು ಕೊಳ್ಳಲೆ ಬೇಕು.ಇಲ್ಲವಾದರೆ ಕನ್ನಡದ ಈ ಅತ್ಯಂತ ಅಮೂಲ್ಯ ವಾದ ಸ್ಥಾನಿಕ,  ಪ್ರಾದೇಶಿಕ ಭಾಷಾ ವೈಶಿಷ್ಟ ತೇ ನಶಿಸುವ ಅಪಾಯವಿದೆ.ಇದು ಒಂದಾದರೆ ಇನ್ನೊಂದು ಸಾಹಿತ್ಯ ಕ್ಕೆ ಸಂಬಂದಿಸಿದ್ದು

ಕನ್ನಡ ಸಾಹಿತ್ಯ ವಿಮರ್ಶೆಗೆ ಸಂಬಂಧ ಪಟ್ಟದ್ದು ಮತ್ತೂ ಸಾಹಿತಿಗೆ ಅಂಟಿಸೋ ಪೂರ್ವ ಗ್ರಹ ಉಪಾದಿಗಳನ್ನು ಮುಂದಿನ ಪೀಳಿಗೆಗೆ ಸದ್ದಿಲ್ಲದೇ ರವಾನಿಸುತ್ತಿರುವುದು.ಉದಾಹರಣೆಗೆ ಬೇಂದ್ರೆ ಅಂದ್ರ್ ಅವರೊಬ್ಬ ಅದ್ಭುತ ಕವಿ ಅಂತಾ ಲೇಬಲ್ ಮಾಡಿ   ಅವರನ್ನು ಬರೀ ಕವಿಯಾಗಿ ಕಟ್ಟಿ ಹಾಕೋ ಅಪಾಯ ಅದು ಮತ್ತೆ ಇದನ್ನ ಮಾಡೋರ್ ಯಾರೂ ಅನ್ಕೊಂಡಿರಿ ಅದು ಅವರನ್ನು ತುಂಬಾ ಓದಿ ಕೊಂಡೇವಿ ಅನ್ಕೊಂಡು ಸಿಕ್ಕ ಸಿಕ್ಕ ವಿಶ್ವ ವಿದ್ಯಾಲಯಗಳಲ್ಲಿ ವೇದಿಕೆಗಳಲ್ಲಿ ಅವರ ಕುರಿತು ಭಾಷಣ ಬಿಗಿಯೋರ…ಯಾಕೆ ಇಷ್ಟ ನಿಷ್ಠುರವಾಗಿ ಹೇಳತೀನಿ ಅಂದ್ರ್ ಬೇಂದ್ರೆ ಅವರು ಒಬ್ಬ ಅಪ್ಪಟ ದೇಶೀ ಕವಿ ಅನ್ನೋದನ್ನ ನಾನು ಅಲ್ಲ ಗಳಿತಿಲ್ಲ ಆದ್ರೆ ಹಾಗೆ ಹಣೆ ಪಟ್ಟಿ ಕಟ್ಟುವ  ಮುನ್ನ ಅವರು ಬರದ ಕವಿತೆಗೂ ಹೆಚ್ಚು ಲೇಖನಗಳ ಸರಣಿ ಓದಿಕೊಳ್ಳುವುದು ಮುಖ್ಯ ಅವರ ವಿಚಾರ ಧಾರೆಗೆ ಒಂದು ಲೇಬಲ್ ಕೊಡೊ ಮುನ್ನ ಅವರನ್ನು ಸಮಗ್ರ ವಾಗಿ ತಲಪೋದು ಬಹಳ ಮುಖ್ಯ ಅಷ್ಟೇ ಅಲ್ಲದೇ ಹಾಗೆ ತಲುಪಿದ ಮೇಲೆ ಈ ರೀತಿಯ ಅಪಭ್ರoಶ ಉಪಾದಿಗಳಿಂದ ಅವರ ಸಾಹಿತ್ಯ ಕ್ಕೆ ಮಾಡೋ ಅಪಚಾರ ನಿಲ್ಲಿಸಿ ಪಠ್ಯ ಕ್ರಮದಲ್ಲಿ ಅವು ಇನ್ನೂ ಹೆಚ್ಚು ಪರಿ ಪೂರ್ಣವಾಗಿ ದಕ್ಕೋ ಹಂಗ್ ಮಾಡಬೇಕು.ಮತ್ತ್ ಕನ್ನಡ ಭಾಷಿಕರು ಮೊದಲು ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಸ್ಥಾನಿಕ ಕನ್ನಡವನ್ನ  ಹೆಮ್ಮೆಯಿಂದ ಅಭಿಮಾನದಿಂದ ಮಾತನಾಡಬೇಕು ಮತ್ತೂ ಪ್ರಜ್ಞಾಪೂರ್ವಕವಾಗಿ ಅದರ ಬಳಕೆಯನ್ನು ಸಾಧ್ಯವಾದಷ್ಟು ಮಾಡಬೇಕು…ಇದು ಯಾವುದೇ ಹೋರಾಟಕ್ಕಿಂತ ಅತೀ ಅಂದ್ರ್ ಅತೀ  ಮುಖ್ಯ.——————————–

Leave a Reply

Back To Top