ಲಹರಿ
ಏಕಾಂಗಿಯಾಗಬೇಕು
ಸ್ಮಿತಾ ರಾಘವೇಂದ್ರ
“ಎಲ್ಲೋ ಹುಡುಕಿದೆ ಇಲ್ಲದ ದೇವರ”
ಎಂದು ಶುರುವಾಗಿ “ಎಷ್ಟು ಕಷ್ಟವೋ ಹೊಂದಿಕೆ ಎಂಬುದು”
ಎಂಬಲ್ಲಿಗೆ ಮುಗಿಯುವ, ಕವಿ ಜಿ ಎಸ್ ಎಸ್ ಅವರ ಪದ್ಯ, ನಾನು ಯಾವತ್ತೂ ಗುನುಗಿಕೊಳ್ಳುವ ಬದುಕಿನ ಒಂದು ಭಾಗ. ಎಷ್ಟೆಲ್ಲ ಹತ್ತಿರವಾಗುತ್ತವೆ ಬದುಕಿಗೆ ಪ್ರತೀ ಸಾಲುಗಳು. ಅದರದೇ ಆದ ಅರ್ಥದಲ್ಲಿ ವಿಭಿನ್ನ ರೂಪದಲ್ಲಿ.
ಯಾಕೆ ಈ ಹಾಡು ನೆನಪಿಸಿದೆ ಅಂದರೆ, ಸಂಬಂಧಗಳ ಸೂಕ್ಷ್ಮ ಹರವಿನಲ್ಲಿ ಜಡಕುಗಳೇ ಜಾಸ್ತಿ ಅದನ್ನು ಬಿಡಿಸಿ ಪ್ರೀತಿಸುವುದು ಹೇಗೆಂದು ಹೇಳಿಕೊಡುತ್ತದೆ.
ಇತ್ತೀಚಿಗೆ ಯಾರನ್ನೇ ಭೇಟಿ ಮಾಡಿದರೂ, ಯಾರಿಗೇ ಪೋನ್ ಮಾಡಿದರೂ ಮಾತಿನ ಮಧ್ಯದಲ್ಲಿ ಒಂಟಿತನದ ಬಗ್ಗೆ, ಒಂಟಿಯಾಗಿ ಇರುವುದುರ ಬಗ್ಗೆಯೇ ಮಾತು, ತೂಕಕ್ಕಿಂತ ಐದ್ಹತ್ತು ಗ್ರಾಂ ನಷ್ಟು ಜಾಸ್ತಿಯೇ ಬರುತ್ತದೆ ಯಾಕೆ ಹೀಗೆ!
ಯಾರೇ ನೋಡಿದರೂ ಅಯ್ಯೋ ಏಕಾಂಗಿಯಾಗಿ ಇದ್ದು ಬಿಡಬೇಕು ನೋಡಿ. ಈ ಸಂಬಂಧ ಜಂಜಾಟ, ಕಿಚಿ ಪಿಚಿಗಳೆಲ್ಲ ಒಂದು ಸಂತೆಯಂತೆ, ನೆಮ್ಮದಿಯೇ ಇರಲಾರದು ಬದುಕಿಗೆ.
ಎಲ್ಲೋ ದೂರದಲ್ಲಿ ಕೂತು, ಎಲ್ಲ ಗಡಿ ಗೆರೆಗಳನ್ನು ಮೀರಿ ಸಂಪೂರ್ಣ ಬದುಕನ್ನು ಅನುಭವಿಸಬೇಕು.
ಎಷ್ಟು ಸಂತೋಷವಿದೆ ಅದರಲ್ಲಿ. ಯಾಕೆ ಬೇಕು ಇವೆಲ್ಲ ಅನಿಸುತ್ತದೆ ಕೆಲವೊಮ್ಮೆ. ಇರುವುದು ಒಂದು ಜೀವನ ಎಲ್ಲಿಂದ ಬಂದಿದ್ದೀವೋ, ಎಲ್ಲಿಗೆ ಹೋಗ್ತೀವೋ, ಯಾರಿಗೆ ಗೊತ್ತು. ಎಲ್ಲವನ್ನೂ ಸಂಪೂರ್ಣವಾಗಿ ಅನುಭವಿಸಿ ನಿರ್ಗಮಿಸಬೇಕು.
ಒಂದು ಬೇಲಿಯನ್ನು ನಮಗೆ ನಾವೇ ಹಾಕಿಕೊಂಡು ಎಷ್ಟು ದಿನ ಬದುಕೋದು.
ಈ ಸಂಬಂದಗಳೆಲ್ಲ ಒಂದು ಹಂತದವರೆಗೆ ಚಂದ ಆಮೇಲೆ ಏಕಾಂತವೇ ಹೆಚ್ಚು ಖುಷಿ ಕೊಡುತ್ತದೆ.
ನಮಗೆ ಬೇಕಾಂದತೆ ಬದುಕಲು ಒಬ್ಬಂಟಿ ಬದುಕೇ ಹೆಚ್ಚು ಹಿತ ಎನ್ನುವ ಲಹರಿಯಲ್ಲೇ ಇರುತ್ತದೆ ಮಾತೆಲ್ಲ.
ಹೌದು, ಸಂಬಂಧಗಳು ಇಷ್ಟೆಲ್ಲ ಸತ್ವ ಕಳೆದುಕೊಳ್ಳಲು ಕಾರಣವಾದರೂ ಏನು? ಯಾರಿಗೂ ಯಾರೂ ಬೇಡ. ಎಲ್ಲವೂ ಅವಿಶ್ವಾಸದ ಅಡಿಯಲ್ಲೇ ಚಿಗುರಿ ಮುರುಟಿ ಹೋಗುತ್ತವೆ.
ಅರೇ,, ನಮ್ಮ ಹಿಂದಿನವರು ಒಂದೇ ಮನೆಯಲ್ಲಿ ಹದಿನೈದು ಇಪ್ಪತ್ತಕ್ಕೂ ಹೆಚ್ಚು ಜನರು ಜೀವನ ಪರ್ಯಂತ ಬದುಕುತ್ತಿರಲಿಲ್ಲವಾ! ಕಾಡಿ, ಕೂಡಿ
ಕಲ್ಮಶಗಳಿಲ್ಲದೇ ಜೀವನ ನಡೆಸಲಿಲ್ಲವಾ?
ಅದ್ಯಾವ ಗಳಿಗೆಯಲ್ಲಿ ಸಂಬಂಧ ಆತ್ಮೀಯತೆ ಸಹಬಾಳ್ವೆಗಳೆಲ್ಲ ಜಂಜಾಟವಾಗಿ ಮಾರ್ಪಟ್ಟಿತು.
ಅದಕ್ಕಂತೂ ಉತ್ತರವಿಲ್ಲ.
ಸ್ವಾರ್ಥವೋ ಜಂಜಾಟವೋ ಅವಶ್ಯಕತೆಯೋ ಅನಿವಾರ್ಯವೋ,ಬದುಕಿನ ದಾರಿಯಲ್ಲಿ ಎಲ್ಲವೂ ಬದಲಾಗಿದ್ದು ನಿಜವೇ.
ಹಾಗಂತ, ಹಾಗಿತ್ತು ಹೀಗಿತ್ತು ಈಗೇನಿಲ್ಲ ಅನ್ನುವುದೇ ಬದುಕಲ್ಲ. ಅದು ವಾಚಾಳಿತನವಾಗುತ್ತದೆ ಅಷ್ಟೇ. ಹರಿವ ನೀರಿನ ಜೊತೆ ಸಾಗುವಾಗ ಮೂಲದಲ್ಲಿ ಎಷ್ಟು ಸೆಳವಿತ್ತು ವಿಶಾಲತೆ ಇತ್ತು, ಸ್ವಚ್ಚವಿತ್ತು ಎಂದು ನದಿಯನ್ನು ಜರಿಯಲು ಆದೀತೆ?
ಸಮಯ ಬಂದಾಗ, ಅವಕಾಶ ಸಿಕ್ಕಾಗ,ಅದು ತನ್ನ ಪಾತ್ರವನ್ನೂ, ಸೆಳವನ್ನೂ ಹೆಚ್ಚಿಸಿಕೊಳ್ಳುತ್ತದೆ
ಹಾಗೇ ತಗ್ಗಿಸಿಯೂ ಕೊಳ್ಳುತ್ತದೆ.
ನಾವೂ ಅಷ್ಟೇ ಹರಿಯಬೇಕು ಅಂದರೆ ಬದಲಾಗಬೇಕು.
ಆದರೆ ಒಂದಂತೂ ನಿಜ, ನದಿ ಪ್ರೀತಿಗಾಗಿ ಹರಿಯುತ್ತದೆ, ಅದರ ಗಮ್ಯ ಯಾವತ್ತೂ ಒಲವೇ.
ಹಾಗಿದ್ದರೆ ಮನುಷ್ಯನೊಳಗೆ ಒಂದು ಸ್ವಾರ್ಥದ ಸೆಳವೇ ಜಾಸ್ತಿ ಇದೆಯಾ!
ಹೌದು ಎನ್ನುವುದು ಯಾವ ಬಿಡೆ ಇಲ್ಲದೇ ಸಾಬೀತಾದ ವಿಷಯ ಎಂದೋ..
ನಮ್ಮ ನಮ್ಮ ಮನಸಿಗೆ ಯಾವುದು ಬೇಕೋ ಅದನ್ನು ಮಾತ್ರ ನಾವು ಸ್ವೀಕರಿಸುತ್ತೇವೆ.
ಸಮಯ ಸಂದರ್ಭಕ್ಕೆ ತಕ್ಕಂತೆ.
ನೀತಿ ನಿಯಮಗಳೂ ಹಾಗೇ, ನಮಗೆ ಬೇಕಾದಂತೆ ಬದಲಾಯಿಸಿಕೊಂಡು ಅದಕ್ಕೊಂದು ಸಮರ್ಥನೆಯನ್ನೂ ಕೊಟ್ಟುಕೊಳ್ಳುತ್ತೇವೆ
ಅದು ಯಾವ ಕಾಲವೇ ಇರಲಿ.
ಒಂದು ಸಣ್ಣ ಉದಾಹರಣೆ ಕೊಡೋದಾದ್ರೆ
ವರ್ಷ ಭವಿಷ್ಯ ಅಂತ ಬರಿತಾರೆ ,ಅಲ್ಲಿ ಎಲ್ಲ ಒಳ್ಳೆದೂ, ಕೆಟ್ಟದ್ದೂ ಇರುತ್ತೆ, ಒಂದೇ ರಾಶಿ ನಕ್ಷತ್ರದವರು ಕೋಟ್ಯಾಂತರ ಮಂದಿ ಇರೋದ್ರಿಂದ,ಎಲ್ಲರಿಗೂ ಈ ಭವಿಷ್ಯ ಹಂಚಿ ಹೋಗುತ್ತದೆ ಎನ್ನುವುದು ನಮ್ಮ ನೆಮ್ಮದಿ.
ಪ್ರಾಣ ಭಯ, ಮಾನ ಹಾನಿ,ಅಂತಿದ್ರೆ ನಮಗೇ ಆಗಬೇಕು ಅಂತೇನು ಇಲ್ವಲ್ಲ ಅಂತೀವಿ. ಧನಾಗಮನ, ವಿವಾಹ ಯೋಗ ನಮ್ಮ ಮನೆಯಲ್ಲೂ ನಡೆಯಬಹುದಲ್ಲ ಅಂತೀವಿ. ಹಾಗೆ ನಮಗೆ ಯಾವುದು ಖುಷಿ ಕೊಡುತ್ತದೋ ಅದನ್ನು ನಾವು ಕಲ್ಪಿಸಿ ಕೊಳ್ತೇವೆ ಹೆಚ್ಚು ಇಷ್ಟ ಪಡುತ್ತೇವೆ ಅಷ್ಟೇ.
ಕೇವಲ ಕೆಟ್ಟದ್ದನ್ನೇ ಕಲ್ಪಿಸಿಕೊಂಡು ಭಯದ ತೆಕ್ಕೆಯೊಳಗೇ ಬದುಕುವವರೂ ಇರ್ತಾರೆ.
ಇಲ್ಲಿ ಭಯಕ್ಕೂ, ನೆಗೆಟೀವ್ ವಿಚಾರಕ್ಕೂ, ಪೊಸೆಟೀವ್ ವಿಚಾರಕ್ಕೂ ,ಅವಕಾಶ ಇದೆ.
ಯಾಕೆಂದರೆ ಇದು ಅಗೋಚರ .
ಸಂಬಂಧಗಳೊಳಗೂ ಇರುವುದು ಅಗೋಚರ ಸ್ಥಿತಿಯೇ, ಹೀಗೆಯೇ ಅಗುತ್ತೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಜೊತೆಯಾಗಬಹುದು ದೂರಾಗಬಹುದು. ಬೇಸರವಾಗಬಹುದು.
ಸಾಧ್ಯತೆಗಳು ಎಲ್ಲವೂ ಇದೆ.
ನಮ್ಮ ನಮ್ಮ ಭಾವನೆಯೊಳಗೇ, ಜೀವನ ಪ್ರೀತಿ ಮತ್ತು ಜೀವನ ವೈರಾಗ್ಯ ಎರಡೂ ಇರುವುದು.
ಅದ್ಯಾವುದೋ ಗಳಿಗೆಯಲ್ಲಿ ಯಾವ ಸಂಬಂಧವೂ ಸ್ವಂತದ್ದಲ್ಲ ಅನ್ನಿಸಿಲೂಬಹುದು.
ಯಾರಿಗೂ ಯಾರ ಮೇಲೆಯೂ ನಂಬಿಕೆ ಇಲ್ಲ,ಆತ್ಮೀಯತೆ ಎನ್ನುವುದು ಔಪಚಾರಿಕ, ಶಿಷ್ಟಾಚಾರದ ನೆಪದಲ್ಲಿ ಕಳೆದೇ ಹೋಗಿದೆ.
ಮನಸು ಬಿಚ್ಚಿ ಯಾರೊಂದಿಗಾದರೂ ಮಾತಾಡೋಕೆ ಭಯ,ಎಲ್ಲಿ ಏನು ತಿಳ್ಕೊಂಡು ಬಿಡ್ತಾರೇನೋ,ಸುಮ್ನೇ ಯಾಕೆ ಎನಾದ್ರೂ ಹೇಳಿ ಕೇಳಿ ಮಾಡಿ ,ಇಲ್ಲದ ರಗಳೆ ಸುಮ್ನಿರೋದೇ ವಾಸಿ
ಅನ್ನಿಸುವುದೇ ಹೆಚ್ಚಿನ ಸಲ.
“ಯೇ ಹೋಗಿ ಸಾಯಿ ,”
ಮುಖತೋರಿಸ್ಬೇಡ ನೀನು”
“ಒಂದಿನ ನಾನೇ ಕೊಲ್ಲೋದು ನಿನ್ನ” ಅಂತೆಲ್ಲ ವಾಚಾಮಗೋಚರ ಬೈಕೊಂಡು ಹೆಗಲ ಮೇಲೆ ಕೈಹಾಕಿ ಹೆಜ್ಜೆ ಹಾಕ್ತಾ ಇದ್ದೆವು.
ಕೈ ಕೈ ಮಿಲಾಯಿಸಿ ಕುಸ್ತಿ ಹೊಡೆದು, ಸಂಜೆ ಒಟ್ಟಿಗೇ ಕೂತು ಕೈ ತುತ್ತು ತಿನ್ನುತ್ತಿದ್ದೆವು.
ಆದರೆ ಈಗ ಎಷ್ಟೇ ಹತ್ತಿರದವರಾದರೂ ಹತ್ತು ಸಲ ವಿಚಾರ ಮಾಡಿ ಮಾತಾಡ್ತೀವಿ ಎಲ್ಲಿ ತಪ್ಪು ತಿಳ್ಕೋತಾರೇನೋ. ಬೇಜಾರಾಗಿ ಬಿಡ್ತಾರೆನೋ
ಎನ್ನುವ ಭಯ.
“ಹತ್ತಿರ ವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ” ಕವಿ, ಜಿ ಎಸ್ ಶಿವರುದ್ರಪ್ಪನವರ ಸಾಲು ಮತ್ತದರ ಪೂರ್ತಿ ಹಾಡು ಮತ್ತೆ ಮತ್ತೆ ಸತ್ಯವಾಗಿ ಗೋಚರಿಸುತ್ತದೆ.
ಪ್ರತೀ ಸಂಬಂಧಗಳೊಳಗೆ ಅಹಂಕಾರದ ಅಗೋಚರ ಪರದೆಯೊಂದು ಸದಾ ನಮ್ಮ ತಡೆಯುತ್ತಲೇ ಇರುತ್ತದೆ.
ಚೂರು ಅಹಂ ಬಿಟ್ಟರೆ ಯಾರೊಂದಿಗಿನ ಹೊಂದಾಣಿಕೆಯೂ ಕಷ್ಟದ್ದು ಅಲ್ಲವೇ ಅಲ್ಲ.
ನಮ್ಮೊಳಗಿನ ಅಹಂಕಾರದ ಕಾರಣದಿಂದಾಗಿಯೇ ಇವತ್ತು ನಾವು ನೀವೆಲ್ಲ ಒಂಟಿಯಾಗಿ ಇರುವುದನ್ನೂ ಏಂಕಾಂತವನ್ನೂ ಹೆಚ್ಚು ಹೆಚ್ಚು ಇಷ್ಟ ಪಡುವುದು.
ಯಾರಿಂದ ನನಗೇನು ಆಗುವುದಿದೆ. ನನ್ನ ಹತ್ತಿರ ಹಣ ಇದೆ, ಅಧಿಕಾರ ಇದೆ, ನನ್ನ ಜೀವನ ನಂದು ಅಂತಾರೆ.
ಇನ್ನು ಕೆಲವರು ನಾವಿಷ್ಟು ವರ್ಷ ಬದುಕಿಲ್ಲವ ನಮ್ಮ ದಾರಿಯಲ್ಲೇ ನಡೆಯೋಕೆ ಏನು ಅಂತಾರೆ.
ಆದರೆ ಅವೆಲ್ಲ ಶಾಶ್ವತ ನೆಮ್ಮದಿಯೇ ಅಂತ ಕೇಳಿದರೆ, ಸರಿಯಾದ ಉತ್ತರ ಕೂಡ ನಮ್ಮೊಳಗೆ ಇಲ್ಲ. ಉತ್ತರ ಕಂಡು ಕೊಳ್ಳುವ ಅನಿವಾರ್ಯತೆ ಅಂತೂ ಖಂಡಿತ ಇದೆ.
ಹರಿಯುವ ನದಿಯಂತೆ ಬದುಕಿನ ಗಮ್ಯ ಎನ್ನುವುದು ಒಂದು ನಿಷ್ಕಲ್ಮಶ ಪೀತಿಯೆಡೆಗೆ ಇದ್ದರೆ ಜೀವನ ಸೂತ್ರ ಒಂದಿಷ್ಟು ಸರಳವಾಗಬಹುದು ಅಷ್ಟೇ..
ಉತ್ತಮ ಬರಹ
ಬದುಕಿನ ಮುಸ್ಸಂಜೆಯಲ್ಲಿ ಮೂಡುವ ಭಾವಗಳಿವು.ಉದ್ದಕ್ಕೂ ಈಜಿ ಕೈಕಾಲುಗಳು ದಣಿದಾಗ ಯಾವುದೂ ಬೇಡ ಅನ್ನಿಸಿ ಮನಸ್ಸು ಏಕಾಂಗಿತನ ಬಯಸುತ್ತದೆ.ಅದೂ ಸಹ ಬದುಕಿನ ಸಹಜ ಭಾಗ.ಆದರೆ ಈಸುವ ಬಯಕೆ,ತಾಕತ್ತು ಇದ್ದಾಗ ಈ ಭಾವ ಮೂಡಲಾರದು.
ನಮ್ಮ ಹಿರಿಯರು ಕೂಡಿ ಬಾಳಿದ್ದರು ಎಂಬುದು ನಿಜವಾದರೂ ಅಲ್ಲಿ ಸದಾಕಾಲ ಸಾಮರಸ್ಯವಿತ್ತು ಎಂಬ ಮಾತು ಸುಳ್ಳು.ನಾನು ಸಾಕಷ್ಟು ಅವಿಭಾಜ್ಯ ಕುಟುಂಬಗಳನ್ನು ಹತ್ತಿರದಿಂದ ನೋಡಿದ್ದೇನೆ.ಸಣ್ಣತನ ಅಲ್ಲಿ ತುಂಬಿಕೊಂಡಿರುತ್ತಿತ್ತು.ತೀರ ಕ್ಷುಲ್ಲಕ ಕಾರಣಗಳಿಗೆ ಅವರು ಹೊಡೆದಾಡಿದ್ದೇ ಹೆಚ್ಚು.ಎಷ್ಟಂದರೂ ಮನುಷ್ಯ ಸಹಜ ಸ್ವಭಾವ ಎಲ್ಲ ಕಾಲಗಳಲ್ಲಿಯೂ ಪ್ರಕಟವಾಗುತ್ತಲೇ ಇರುತ್ತದೆ.