ಹೊನ್ನ ಮಹಲಿನ ಏಕಾಂತದಲ್ಲಿ ಹೊನ್ನಸಿರಿ ಮತ್ತು ಸಾಕಿ

ಪುಸ್ತತಕ ಸಂಗಾತಿ

ಹೊನ್ನ ಮಹಲಿನ ಏಕಾಂತದಲ್ಲಿ

ಹೊನ್ನಸಿರಿ ಮತ್ತು ಸಾಕಿ

ಮನಸು ನನ್ನದಾದರೂ ಆದರ ತುಂಬಾ ಮಿಡಿತ ನೀನು ಕಣೆ

ಹೃದಯ ನನ್ನದಾದರೂ ಅದರೊಳಗಿನ ಬಡಿತ ನೀನು ಕಣೆ

ಬಾನೆತ್ತರ ಕನಸಿನವಳು ಅವಳು ನನ್ನವಳು ಸರೋವರದ ಮನದವಳು ಅವಳು ನನ್ನವಳು

(ಶ್ರೀ ಸಿದ್ದರಾಮ ಹೊನ್ಕಲ್)

ಇಂತಹ ಸುಂದರವಾದ ಪ್ರೇಮ ತುಂಬಿದ ಗಝಲ್ ಗಳನ್ನು ಬರೆದಿರುವವರು ನಿತ್ಯ ಪ್ರೇಮಿ ಶ್ರೀ ಸಿದ್ದರಾಮ ಹೊನ್ಕಲ್ ಅವರು..

ಸಂತೋಷ ನಗು ಅರಸಿ ಅರಸಿ ಇವರ ಹಿಂದೆಯೇ ಸುತ್ತುತ್ತಿದೆಯೇನೋ ಅನ್ನಿಸುವಷ್ಟು  ಹಸನ್ಮುಖಿಯಾಗಿ ಸದಾ ಸಂತೋಷದಿಂದಿರುವ ಸಿದ್ದರಾಮ ಹೊನ್ಕಲ್ ರವರು ಸ್ನೇಹಜೀವಿ…ಭಾವಜೀವಿ.

ಎಲ್ಲರೊಳಗೂ ಬೆರೆತು ಒಂದಾಗುವ ನಿರ್ಮಲ ಮನದವರು.. ತಾನಿರುವ ಸುತ್ತಮುತ್ತೆಲ್ಲಾ ಸಂತಸದ ಬೀಜ ಬಿತ್ತಿ ನಗುವೆಂಬ ಹೂವರಳಿಸುವವರು..

ಆದರೂ ನಾ ಗಮನಿಸಿದಂತೆ ಕೆಲವೊಮ್ಮೆ ಧ್ಯಾನಸ್ಥ ಸ್ಥಿತಿಯಲ್ಲಿರುವರೇನೋ ಎನ್ನುವಂತೆ ಮೌನವಾಗುವರು.. ಅತಿ ಸಣ್ಣ ವಿರಾಮ ತೆಗೆದುಕೊಂಡು ಬಹುಶಃ ಸಾಕಿಯೊಂದಿಗೆ ಸಂಭಾಷಿಸಿ ಮತ್ತೆ ಮೊದಲಿನಂತಾಗುವರು (ಇದು ನನ್ನ ಅನಿಸಿಕೆ) ಮತ್ತದೇ ನಗು, ಸ್ನೇಹ, ಸಂತಸದ ಹೊನಲು..ಬದುಕಿನ ಪ್ರತಿ ಕ್ಷಣಗಳನ್ನು ಪ್ರೀತಿಸುತ್ತಿರುವಂತೆ ಕಾಣುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಸಿದ್ದರಾಮ ಹೊನ್ಕಲ್ ಅವರು ಕೂಡ ಒಬ್ಬರು..

 .ನನ್ನ ಈ ಗಝಲ್ ಗಳಿಗೆ ಪ್ರೇರಕವಾದ ಆ ಸುಂದರ ಮನಸ್ಸು.. ಭಾವಗಳಿಗೆ.. ಎಂಬ ಸುಂದರ ಸಾಲಿನೊಂದಿಗೆ  ತಮ್ಮ ಪುಸ್ತಕವನ್ನು ತಮ್ಮ ಒಡನಾಟದಲ್ಲಿರುವವರಿಗೆ ಅರ್ಪಿಸಿಕೊಳ್ಳುತ್ತಲೇ ಸಿದ್ದರಾಮ ಹೊನ್ಕಲ್ ಅವರ ನಿನ್ನ ಪ್ರೇಮವಿಲ್ಲದೇ ಸಾಕಿ ಹಾಗೂ ಹೊನ್ನ ಮಹಲ್ ಗಝಲ್ ಸಂಕಲನಗಳು ತೆರೆದುಕೊಳ್ಳುತ್ತವೆ.. ಎರಡೂ ಪುಸ್ತಕಗಳ ಮುಖಪುಟ ಅತ್ಯಂತ ಆಕರ್ಷಕವಾಗಿದ್ದು ಗಮನ ಸೆಳೆಯುತ್ತದೆ..

ಹೊನ್ನಸಿರಿಯ ಭಾವಗಳು ತೆರೆದುಕೊಳ್ಳುವ ಹೊನ್ನ ಮಹಲ್ ನಲ್ಲಿ ಗುನುಗುತ್ತಿರುವುದು

೭೦ ಗಝಲ್ ಗಳು.. ಹೊನ್ನ ಮಹಲ್ ಗಝಲ್ ಸಂಕಲನ ಪ್ರೀತಿ ,ಪ್ರೇಮ, ವಿರಹ ,ಕಾಡುವಿಕೆ ,ಜಗತ್ತಿನ ವ್ಯವಸ್ಥೆ ,ದೃಷ್ಟಿಕೋನ, ಬದುಕಿನ ದಾರಿಯಲ್ಲಿ ಎದುರಾಗುವ ನಿರಾಸೆಗಳು, ಬದುಕಿನ ಸತ್ಯಗಳು ,ಸಾಮಾಜಿಕ ಕಳಕಳಿ, ವಿವಿಧ ಮುಖಗಳ ಜೊತೆ ಬದುಕುವ ಅನಿವಾರ್ಯತೆಯಲ್ಲಿ ನಮ್ಮ ನಿಲುವು ಹೇಗಿರಬೇಕು ಹೀಗೆ ಹತ್ತಾರು ವಿಷಯಗಳನ್ನೊಳಗೊಂಡಿದ್ದು

 ಅತ್ಯುತ್ತಮವಾಗಿ ಮೂಡಿ ಬಂದಿದೆ..

 ಹುಚ್ಚರ ಮಧ್ಯೆ ಹುಚ್ಚನಂತಿರಬೇಕು ನೀ ತಿಳಿ

 ಬುದ್ಧಿವಂತರ ಮಧ್ಯೆ ಮುಗ್ಧನಂತಿರಬೇಕು ನೀ ತಿಳಿ

ಎಂಬ ಗಝಲ್ ನಲ್ಲಿ  ವಿವಿಧ ರೀತಿಯ ಜನರ ಮಧ್ಯೆ ನಾವು ಹೇಗೆ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡಿರಬೇಕು ಎಂದು ಹೇಳುತ್ತಾರೆ.. ಹಾಗೆಯೇ ಕಾಣದ ವಿವಿಧ ಮುಖಗಳನ್ನು ಹೊಂದಿರುವ ಜನರ ಬಗ್ಗೆ ಹೇಳುತ್ತಾ ಬೇಸರ ವ್ಯಕ್ತಪಡಿಸುತ್ತಾರೆ.

 ಕಾರ್ಗತ್ತಲಲ್ಲಿ ಇದ್ದವರಿಗೆ ಅಕ್ಷರದ ದೀವಟಿಗೆ ಹಚ್ಚಿದವರು

ಶತಶತಮಾನಗಳ ಸಂಕೋಲೆ ಕಳಚಿದವರು

  ಶತಶತಮಾನಗಳಿಂದ ಅಸ್ಪೃಶ್ಯತೆ, ಮೌಢ್ಯ ಜಾತಿಭೇದಗಳ ವಿರುದ್ಧ ಹೋರಾಡಿದವರಿಗೆ ಗಝಲ್ಕಾರರು   ತಮ್ಮ ಈ ಗಝಲ್ ನ್ನು ಅರ್ಪಿಸುತ್ತಾರೆ.

ಜನಾರಣ್ಯದಲ್ಲಿ ಕೂಡಿ*

ಬಾಳಬೇಕು ಇಲ್ಲಿ ಸಾಕಿ

ಕುಂತಲ್ಲಿ ಮುಳ್ಳು ಚುಚ್ಚಿದರೆ ನಗುತ್ತಿರಬೇಕು ಇಲ್ಲಿ ಸಾಕಿ

ಕೂಡಿ ಉಣಬೇಕು ವಿಷವಿದ್ದರೂ ಇರಬಹುದೆಂದು ವಿಷಕಂಠರಾಗಿ ಅಮೃತ ಸವಿದಂತಿರಬೇಕು ಇಲ್ಲಿ ಸಾಕಿ

ಎಂಬ ಸಾಲುಗಳನ್ನು ಒಳಗೊಂಡ ಗಜ಼ಲ್ ನಲ್ಲಿ ತಾಳ್ಮೆ-ಸಹನೆಯನ್ನು ತಂದುಕೊಂಡು ನಾವು ದುಷ್ಟಶಕ್ತಿಗಳೊಂದಿಗೇ ಬದುಕು ನಡೆಸುತ್ತಿರುತ್ತೇವೆ ಎಂದು ಹೇಳಲಾಗಿದೆ.. ಹಾಗೆಯೇ ನಮ್ಮ  ಒಳ್ಳೆಯತನಕ್ಕೆ ದುಷ್ಟಶಕ್ತಿಗಳೇ ಹತಾಶೆಗೊಳಗಾಗಬೇಕು ಎಂದು ಹೇಳುವ ಸಾಲುಗಳಲ್ಲಿ ಬದುಕು ಸಹಬಾಳ್ವೆಯ ಅಡಿಗಲ್ಲಿನಲ್ಲಿ ನಿಂತಿದೆ..ಹಾಗೂ ಒಳ್ಳೆಯತನ ಎಂದಿಗೂ ಸೋಲಲಾರದು ಎಂಬ ಅಂಶ ಬಿಂಬಿತವಾಗಿದೆ.

 ಕಡು ನೋವಲಿ ಕಥೆಗೊಂದು ಬೆನ್ನುಡಿ ಬರೆಯುತಿರುವೆ ಸಾಕಿ

 ಎಂದೋ ಮಾಡಬೇಕಾದ ಕೆಲಸವಿದು ಕೈಗೆತ್ತಿಕೊಂಡಿರುವೆ ಸಾಕಿ

ಎಂಬ ಗಝಲ್ ನಲ್ಲಿ

ನಿರಾಸೆ, ಹತಾಶೆ.. ಎದ್ದು ಕಾಣುತ್ತದೆ.ಒಡೆದ ಪ್ರೀತಿಯನ್ನು  ಎದೆಯಲ್ಲಿರಿಸಿಕೊಂಡು ಮುಂದೆ ಸಾಗುತ್ತಿರುವಂತೆ ಅನಿಸುತ್ತದೆ.

ಹಾಗೆಯೇ  ‌

 ಕೆಡಹುವುದಾದರೆ ಅಸಮಾನತೆಯ ಅಸಹಿಷ್ಣುತೆಯ ಕೆಡವಿರಿ ಮನಗಳನ್ನಲ್ಲ

ಎಂಬ ಸಾಲುಗಳನ್ನು ಒಳಗೊಂಡ

 ಗಝಲ್ ಕೂಡ ಸಮಾಜದಲ್ಲಿ ಜನರು ತಮ್ಮ ದೃಷ್ಟಿಕೋನಗಳನ್ನು ಬದಲಾಯಿಸಿಕೊಳ್ಳುವಂತೆ ಸಾರಿ ಹೇಳುತ್ತದೆ..

  ಮನಸ್ಸುಗಳೇಕೆ  ವ್ಯಾಪಾರಿ ಸರಕಾಗಿವೆ ಗೆಳೆಯಾ

ಸದಾ ಸ್ವಾರ್ಥದಿಂದ ತುಂಬಿ ತುಳುಕಾಡುತ್ತಿದೆ ಗೆಳೆಯಾ

ಎಂಬ ಗಝಲ್ ನಲ್ಲಿ  ನಿಷ್ಕಲ್ಮಶ ಪ್ರೀತಿ ಪ್ರೇಮಗಳು ಕಾಣದಾಗಿದೆ… ಮರೀಚಿಕೆಯಾಗಿ ಹೋಗಿದೆ.. ಎಲ್ಲವೂ ಸ್ವಾರ್ಥದಿಂದ ಕೂಡಿದೆ ಎನ್ನುತ್ತಾರೆ..

ಇನ್ನು  ನಿನ್ನ ಪ್ರೇಮವಿಲ್ಲದೆ ಸಾಕಿ ಎಂಬ ಗಝಲ್ ಸಂಕಲನವೂ ಉತ್ಕೃಷ್ಟವಾದ ಗಜಲ್ ಗಳನ್ನು ಒಳಗೊಂಡಿರುವ ಕೃತಿಯಾಗಿದೆ .. ಗಝಲ್ ಕಾರರು ತಮ್ಮ ಈ ಗಝಲ್ ಸಂಕಲನದ ಒಂದೆರಡು ನುಡಿಗಳಲ್ಲಿ ಎಂಬ ಅಂಕಣದಲ್ಲಿ ನನ್ನ ಹೆಸರನ್ನು ಉಲ್ಲೇಖ ಮಾಡಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಹೂವಿನೊಂದಿಗೆ ನಾರೂ ಸ್ವರ್ಗ ಸೇರುತ್ತಿದೆ ಎನಿಸಿತು.. ಧನ್ಯವಾದಗಳು ಹೊನ್ಕಲ್ ಸರ್..

 ೭೫ ಗಝಲ್ ಗಳನ್ನು ಒಳಗೊಂಡಿರುವ ನಿನ್ನ ಪ್ರೇಮವಿಲ್ಲದೆ ಸಾಕಿ ಎಂಬ ಗಝಲ್ ಸಂಕಲನ ಪ್ರೀತಿ, ಪ್ರೇಮ, ವಿರಹ, ತುಡಿತ, ಮಿಡಿತ ಹಾಗೆಯೇ ಜನರ ವಿವಿಧ ಮುಖಗಳು ,ನವಭಾರತದ ಬಗೆಗಿನ ಕನಸುಗಳು ಹರಡಿಕೊಂಡು  ಉತ್ತಮವಾಗಿ ಮೂಡಿ ಬಂದಿದೆ.ಅಲ್ಲದೆ ಕೆಲವು ಉತ್ತಮ ತರಹಿ ಗಝಲ್ ಗಳೂ ಇವೆ..

 ಚಂದನೆಯ ಮೊಗಕೆ ಕೇಶದ ಮುಸುಕೇಕೆ ಹೊನ್ನಸಿರಿಯ ಎದೆಯಲಿ ಅವಿತು ಬೆಚ್ಚಗಿರು ಸಖಿ

ಎಂಬ ಸಾಲುಗಳು ಓದುಗರ ಹೃದಯವನ್ನು ಬೆಚ್ಚಗಾಗಿಸುತ್ತದೆ..

 ತಮ್ಮ ತಮ್ಮ ಭಾವಗಳಲಿ ಎಳೆದಾಡುತಿಹರು ನೆಮ್ಮದಿ ಸಿಗಲಿ

ಎಂಬ ಸಾಲುಗಳುಳ್ಳ ಗಝಲಿನ ಉದ್ದಕ್ಕೂ ಪ್ರತಿಯೊಬ್ಬರು ನಮ್ಮನ್ನು ಅವಶ್ಯಕತೆಗಳಿಗೆ ಅನುಸಾರವಾಗಿ ಬಳಸಿಕೊಳ್ಳುವ ಬಗ್ಗೆ ಬರೆಯುತ್ತಾರೆ.

 ಕಟ್ಟಿದ ಕನಸು ಕುಡಿದ ಮಧು ಬಟ್ಟಲು ಚೂರಾಗಿದೆ

ಮೌನದಿ ದೂರ ಸರಿಸುವ ಕಥೆ ಮರೆತುಬಿಡು ಈಗ(..೩೦)

ಇಂತಹ ಹಲವಾರು ಸಾಲುಗಳು ಭಗ್ನ ಪ್ರೇಮದ ಸುಳಿವನ್ನು ನೀಡುತ್ತಾ ಸಾಗುತ್ತದೆ..

 ಅಕ್ಕ ಸೀರೆ ಬಿಚ್ಚೆ ಸೆದು ನೀ ದಿಗಂಬರೆಯಾಗಿ ಹೊರಬಂದೆ

ಕೌಶಿಕ ನನ್ನೇ ಧಿಕ್ಕರಿಸಿ ಬಂಡಾಯಗಾರ್ತಿಯಾಗಿ ಕಂಡುಬಂದೆ

ಎಂಬೊಂದು ಗಝಲ್ ನಲ್ಲಿ

ಅಕ್ಕಮಹಾದೇವಿ ಎಲ್ಲವನ್ನು ತ್ಯಜಿಸಿಬಂದು ಉಟ್ಟ ಬಟ್ಟೆಯನ್ನೂ ಕಿತ್ತೆಸೆದು ಭಿಕ್ಷಾನ್ನ, ಹಾಳು ದೇಗುಲದಲ್ಲಿ ಬದುಕಿ ಜಯಿಸಿದಳು. ಈ ಕಾಲದಲ್ಲಿ ಹೆಣ್ಣಿಗೆ ಅಂದಿನ ಸುರಕ್ಷತೆ ಎಲ್ಲಿದೆ? ಗಲ್ಲಿಗಲ್ಲಿಗಳಲ್ಲಿ ಕಾಮ ಪಶುಗಳು ಇದ್ದಾರೆ. ಬಸವಾದಿ ಶರಣ, ಅಲ್ಲಮ, ಚೆನ್ನಬಸವ, ಸಿದ್ದರಾಮರ ಅನುಭವಮಂಟಪದಲ್ಲಿ ಹೆಣ್ಣಿಗೆ ಗೌರವ ಆದರಗಳಿತ್ತು.ಸುರಕ್ಷತೆಯಿತ್ತು. ಈಗ ಅಂತಹವರೆಲ್ಲಿಹರು? ಎಂದು ತಮ್ಮ ಗಝಲ್ ನಲ್ಲಿ ಹೇಳುತ್ತಾ ಹೆಣ್ಣಿನ‌ ವಿಷಯದಲ್ಲಿ  ಈಗಿನ  ಜಗತ್ತು ಅಷ್ಟು ಸುರಕ್ಷಿತವಲ್ಲ ಎನ್ನುತ್ತಾರೆ..

 ಬದುಕಲ್ಲಿ ಯಾವ ಕಾಲಕ್ಕೆ ಏನಾಗಬೇಕು ಅದೇ ಆಗುವುದು

ಕಾಲ ನಡೆಸಿದಂತೆ ನಡೆಯಬೇಕಿದೆ ಎಂದು ವಿಧಿಯ ಮಡಿಲಲ್ಲಿ ಬಂದದ್ದನ್ನು ಒಪ್ಪಿ ,ಅಪ್ಪಿ  ಬದುಕಬೇಕು ಎಂದು ಹೇಳುವ ಗಜಲ್  ಕಷ್ಟ-ಸುಖಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂಬ ಕಿವಿಮಾತು ಹೇಳಿದಂತಿದೆ..

ಎಲ್ಲಾ ಗಜಲ್ ಗಳನ್ನು ಓದಿ ಅದರ ಬಗ್ಗೆ ಬರೆಯುವುದಾದರೆ ಬಹಳಷ್ಟು ಬರೆಯಬೇಕಾಗುತ್ತದೆ.. ಎಲ್ಲವನ್ನು ಓದಿ  ಕೆಲವು ಸಾಲುಗಳನ್ನಷ್ಟೇ ಉಲ್ಲೇಖಿಸಿರುವೆ.. ಹಾಗೆಯೇ ನನಗೆ ಬೇಕಾಗಿರುವ ಅಂಶಗಳನ್ನು ಈ ಗಝಲ್ ಸಂಕಲನದ ಬುತ್ತಿಯಿಂದ ಪಡೆದುಕೊಂಡಿರುವೆ.. ಗಝಲ್ ಸಾಹಿತ್ಯ ಮೊಗೆದಷ್ಟೂ ಮುಗಿಯದ ಭಾವಗಳ ಭಂಡಾರ ಪ್ರತಿಯೊಬ್ಬ ಗಝಲ್ ಕಾರರ  ಗಝಲ್ ಗಳಿಂದಲೂ ಕಲಿಯಬೇಕಾದದ್ದು ಸಾಕಷ್ಟಿದೆ..

ಶ್ರೀಯುತ ಸಿದ್ದರಾಮ ಹೊನ್ಕಲ್  ಅವರ

ಸುಮಾರು ೫೦ ಪುಸ್ತಕಗಳು ಪ್ರಕಟಗೊಂಡಿದ್ದು ಹಲವಾರು ಪ್ರಶಸ್ತಿಗಳನ್ನು ಹಲವಾರು ಕಾರ್ಯಕ್ರಮಗಳ ಅಧ್ಯಕ್ಷತೆಗಳನ್ನು ವಹಿಸಿಕೊಂಡು ತಮ್ಮ ಸಾಹಿತ್ಯ ಸೇವೆಯನ್ನೂ ಮುಂದುವರಿಸುತ್ತಿರುವುದು ಸಂತಸದ ವಿಷಯ. ಇವರ ಇನ್ನೂ  ಹಲವಾರು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿ.. ಹಾಗೂ ದೇವರು ಸದಾ

ಸಂತೋಷದ ಬಟ್ಟಲನ್ನು ಇವರ ಮುಂದಿರಿಸಲಿ. ಮೊಗದಲ್ಲಿ ನಗು ಎಂದೂ ಮಾಸದಿರಲಿ…   ಎಂದು ಹಾರೈಸುತ್ತಾ ನನ್ನ ಅನಿಸಿಕೆಗೆ ವಿರಾಮ ನೀಡುತ್ತೇನೆ. ಧನ್ಯವಾದಗಳು.


 ವತ್ಸಲಾ ಶ್ರೀಶ ಕೊಡಗು

Leave a Reply

Back To Top