ವ್ಯಾಲಂಟೈನ್ ವಿಶೇಷ
ಎಪ್ಪತ್ತು ದಾಟಲಿ
ವಿಜಯಶ್ರೀ ಹಾಲಾಡಿ
ನಮ್ಮಿಬ್ಬರಿಗೂ
ಕನಿಷ್ಠ ಎಪ್ಪತ್ತು
ದಾಟಲೆಂದು ಕಾಯುತ್ತಿರುವೆ!
ಆಗಲಾದರೂ
ರೆಸ್ಟೋರೆಂಟಿನ ಮೂಲೆಯ
ಟೇಬಲ್ಲಿನಲ್ಲಿ ಎದುರು
-ಬದುರು ಕೂತು
ಚಹಾ ಹೀರಬೇಕು
ಕಣ್ಣು ಕೂಡಿಸಿ ಮಾತಾಡಬೇಕು
ಬೆಳದಿಂಗಳು ಸುರಿವ
ಹೂ ಹಾದಿಯಲ್ಲಿ ಭುಜಕ್ಕೆ
ಭುಜ ತಾಕಿಸಿ ನಡೆಯುತ್ತ
ಕನಸುಗಳ ಮೆಲ್ಲಬೇಕು
ಚಂದ್ರ ಚುಕ್ಕಿಯರು
ಹೊಟ್ಟೆ ಉರಿಸಿಕೊಳ್ಳಬೇಕು
ಯಾರ ಹಂಗಿಲ್ಲದೆ
ಕಡಲ ದಂಡೆಯಲ್ಲಿ
ಮುಳುಗುವ ಸೂರ್ಯನ
ಮೌನವ ಕಣ್ತುಂಬಿಕೊಂಡು
ಮರಳ ಮನೆಗಳ ಕಟ್ಟಿ
ಕೈ ಹಿಡಿದು ಭಾವುಕರಾಗಬೇಕು
ಜೀವಪ್ರೀತಿಯ ಹಾಡು
ಜೋಪಾನ ಕಾಪಿಟ್ಟು
ಎದೆಗಿಳಿಸಿಕೊಂಡು
ತುಟಿಗಳ ಕುಡಿದು
ತಬ್ಬಬೇಕು
…ಆಗಲೂ ಕಿಚಾಯಿಸುವ
ಕಟಕಿಯಾಡುವ
ಮನಸುಗಳಿದ್ದರೆ
ನಿರ್ಲಕ್ಷ್ಯದ ನಗು ಎಸೆದು
ಆರಾಮಾಗಿ ಎದೆಗೊರಗಿ
ಚುರುಮುರಿ ಸವಿಯಬೇಕು!!