ಧಾರಾವಾಹಿ

ಆವರ್ತನ

ಅದ್ಯಾಯ-55

PHOTOS - || Welcome to Shri Mahalasa Narayani's Temple at Moodbidri ||

ನರಹರಿ, ತನ್ನ ಗೆಳೆಯ ರಾಜಶೇಖರನ ಮಾರ್ಗದರ್ಶನದಂತೆ ಮುಂದುವರೆಯಲು ಸಿದ್ಧನಾದವನು, ತನ್ನೂರಿನಲ್ಲಿ ಇನ್ನೂ ಅಳಿದುಳಿದಿರುವ ನಾಗಬನ, ದೈವದ ಹಾಡಿ ಮತ್ತು ದೇವರಕಾಡುಗಳ ಅಂಕಿಅಂಶಗಳ ಸಮೇತದ ಸಂಪೂರ್ಣ ವಿವರ; ಅಂಥ ಸ್ವಗೀರ್ಯ ತಾಣಗಳ ಐತಿಹ್ಯ, ಆ ಹಸಿರು ತುಕ್ಕಡಿಗಳ ಮಹತ್ವದ ಕುರಿತು ತಮ್ಮ ಪೂರ್ವಜರಲ್ಲಿದ್ದ ಅರಿವು ಹಾಗೂ ಅವುಗಳನ್ನು ಸಂರಕ್ಷಿಸಿಕೊಂಡು ಬರುವಲ್ಲಿ ಅವರ ನಂಬಿಕೆ, ಆಚರಣೆಗಳ ಕುರಿತ ಸಮಗ್ರ ಮಾಹಿತಿ ಮತ್ತು ಪ್ರಸ್ತುತ ಕಾಲಘಟ್ಟದಲ್ಲಿ ಆ ಸಮೃದ್ಧ ಪ್ರದೇಶಗಳ ಮೇಲೆ ಆಧುನಿಕರು ನಡೆಸತೊಡಗಿರುವ ವಿವಿಧ ರೂಪದ ದೌರ್ಜನ್ಯ. ಅಲ್ಲದೇ ಇನ್ನು ಮುಂದಕ್ಕೆ ಪೃಥ್ವಿಗೂ ಮತ್ತು ಜನಜೀವನಕ್ಕೂ ಆ ಹಸಿರು ಪರಿಸರಗಳ ಅಗತ್ಯತೆ ಹಾಗೂ ಅನಿವಾರ್ಯತೆಗಳು ಯಾವ ಬಗೆಯವು? ಅವುಗಳ ನಾಶದಿಂದ ಯಾವ ಯಾವ ರೂಪದ ಪ್ರಕೃತಿ ವಿಕೋಪಗಳು ಸಂಭವಿಸಬಹುದು? ಎನ್ನುವಂಥ ಹತ್ತು ಹಲವು ಮಹತ್ವದ ವಿಚಾರಗಳ ಕುರಿತು ಅನೇಕ ತಜ್ಞರು ಮತ್ತು ವಿಜ್ಞಾನಿಗಳ ಅಧ್ಯಯನದಿಂದ ದೊರಕಿದ ದಾಖಲೆ, ಮಾಹಿತಿಗಳನ್ನು ಕಲೆ ಹಾಕಲು ನರಹರಿಯು ಅನೇಕ ದಿನ ಕಾಲ ರಾತ್ರಿ ಹಗಲೆನ್ನದೆ ಶ್ರಮಿಸಿದ. ಆ ಕುರಿತು ಸಮಗ್ರ ವಿಷಯ ಸಂಗ್ರಹ ಹಾಗೂ ವೈಜ್ಞಾನಿಕ ದಾಖಲೆಗಳು ಮತ್ತವಕ್ಕೆ ಸಂಬಂಧಿಸಿದ ಕಾನೂನು ಕಾಯ್ದೆಗಳ ವಿವರಗಳೆಲ್ಲವೂ ತನ್ನ ಕೈವಶವಾಗುತ್ತಲೇ ಸುಮಾರು ಇಪ್ಪತ್ತು ಪುಟಗಳ ಪತ್ರವೊಂದನ್ನು ಟೈಪ್ ಮಾಡಿದ.

    ಆ ವಿನಂತಿ ಪತ್ರದ ಸಂಕ್ಷಿಪ್ತ ಸಾರಾಂಶ ಹೀಗಿತ್ತು: ಈ ಹಿಂದೆ ಹಲವು ವರ್ಷಗಳಿಂದ ತನ್ನ ಊರು ಮತ್ತು ಆಸುಪಾಸಿನ ಅನೇಕ ಗ್ರಾಮ ಹಾಗೂ ಪಟ್ಟಣಗಳಲ್ಲಿದ್ದ ಸಾವಿರಾರು ನಾಗಬನ, ದೇವರಕಾಡು ಮತ್ತು ದೈವ ಭೂತಗಳಿಗೆ ಸಂಬಂಧಿಸಿದ ಸಮೃದ್ಧ ಹಾಡಿಗಳನ್ನು, ‘ಜೀರ್ಣೋದ್ಧಾರ’ದ ಹೆಸರಿನಲ್ಲಿ ಮಾರಣಹೋಮ ಮಾಡಿರುವ ದಾಖಲೆಗಳು. ಅಂಥ ಪ್ರದೇಶಗಳಲ್ಲಿ ಆ ನಂತರ ಕಾಡತೊಡಗಿದ ತೀವ್ರ ಜಲಕ್ಷಾಮ, ವಾಯುಮಾಲಿನ್ಯ ಮತ್ತು ಭೂ ತಾಪಮಾನಗಳ ತೊಂದರೆಗಳು. ಅದರ ಪರಿಣಾಮವಾಗಿ ಸಂಭವಿಸತೊಡಗಿರುವ ಅತೀವೃಷ್ಟಿ, ಅನಾವೃಷ್ಟಿಗಳಂಥ ಪ್ರಕೃತಿ ವಿಕೋಪಗಳು. ಪ್ರಸ್ತುತ ಪ್ರದೇಶಗಳಲ್ಲಿ ನಾಶವಾದ ಮತ್ತು ಅವನತಿಗೆ ತಲುಪಿದ ಅಪೂರ್ವ ಜೀವಸಂಕುಲಗಳ ಗಣತಿಯ ದೀರ್ಘ ಮಾಹಿತಿಯ ವಿವರ. ಪ್ರಸ್ತುತ ತನ್ನ ಊರಿನ ದೊಡ್ಡ ದೇವರಕಾಡೊಂದನ್ನು ಕಡಿದು ಕಾಂಕ್ರೀಟೀಕರಣಗೊಳಿಸಲು ಟೊಂಕಕಟ್ಟಿ ನಿಂತಿರುವ ಜಾಗದ ಮಾಲಕರ ಹೆಸರುಗಳು ಮತ್ತದಕ್ಕೆ ಸುರೇಂದ್ರಯ್ಯ ನೀಡಲಿರುವ ಬೃಹತ್ ಬಂಡೆಯ ವಿಚಾರ ಹಾಗೂ ಇವೆಲ್ಲದರ ಮುಂದಾಳತ್ವ ವಹಿಸಿರುವ ಏಕನಾಥ ಗುರೂಜಿಯವರ ಹೆಸರನ್ನು ಮುಖ್ಯ ದೋಷಿಯ ಸ್ಥಾನದಲ್ಲಿ ಉಲ್ಲೇಖಿಸಿದ. ಮಾತ್ರವಲ್ಲದೇ ಏಕನಾಥ ಗುರೂಜಿಯವರು, ಶಂಕರನೊಂದಿಗೆ ಕೂಡಿ ಈ ಹಿಂದೆ ಜೀರ್ಣೋದ್ಧಾರದ ಹೆಸರಿನಲ್ಲಿ ಧ್ವಂಸ ಮಾಡಿದ್ದ ಹತ್ತಾರು ಬನ ಮತ್ತು ಕಾಡುಗಳ ಸಂಪೂರ್ಣ ವಿವರಗಳನ್ನೂ ಕಲೆಹಾಕಿ ಪತ್ರದಲ್ಲಿ ನಮೂದಿಸಿದ. ಅವಕ್ಕೆಲ್ಲ ಸಂಬಂಧಿಸಿದ ಹಲವಾರು ಛಾಯಾಚಿತ್ರ ಮತ್ತು ವಿಡೀಯೋ ದೃಶ್ಯಾವಳಿಗಳಿಂದ ಕೂಡಿದ ಕ್ಷೇತ್ರಕಾರ್ಯದ ದಾಖಲೆಗಳನ್ನೂ ಪತ್ರದೊಂದಿಗೆ ಲಗತ್ತಿಸಿದ. ಸರಕಾರವು ಈ ಕೂಡಲೇ ಎಚ್ಚೆತ್ತುಕೊಂಡು ಇನ್ನುಳಿದಿರುವ ಹಸಿರುಪ್ರದೇಶಗಳನ್ನು ಸಂರಕ್ಷಿಸಿಕೊಡಬೇಕೆಂಬ ಕಳಕಳಿಯ ವಿನಂತಿಯನ್ನೂ ಮಾಡಿಕೊಂಡ ಪತ್ರವನ್ನು ಮತ್ತು ಸಂಬಂಧಿಸಿದ ದಾಖಲೆಗಳನ್ನೂ ಕೂಡಲೇ ರಾಜಶೇಖರನಿಗೆ ರವಾನಿಸಿದ.

ನರಹರಿಯ ಅಧ್ಯಯನಪೂರ್ಣ ಮಾಹಿತಿ ಮತ್ತು ಪತ್ರವನ್ನು ಕಂಡ ರಾಜಶೇಖರ ಬೆಕ್ಕಸ ಬೆರಗಾದ. ಅವನು ಸ್ವತಃ ಪರಿಸರತಜ್ಞನಾಗಿದ್ದರೂ ಅವನಿಗೇ ತಿಳಿದಿರದಷ್ಟು ಖಚಿತ ಮಾಹಿತಿ, ವಿಚಾರಗಳು ಆ ಪತ್ರದಲ್ಲಿದ್ದವು! ಅವನ್ನೆಲ್ಲ ಕೂಲಂಕಷವಾಗಿ ಪರಾಮರ್ಶಿಸಿದವನ ಮನಸ್ಸು ನೋವಿನಿಂದ ಮಿಡಿಯಿತು. ಕೂಡಲೇ ತನ್ನ ಸಂಸ್ಥೆಯ ಮುಖಪತ್ರದಲ್ಲಿ ಡಾ. ನರಹರಿಯ ಪರಿಸರ ಕಾಳಜಿಗೆ ಪೂರಕವೆನಿಸುವ ಹಾಗು ಮನಮುಟ್ಟುವಂಥ ಪತ್ರವೊಂದನ್ನು ತಾನೂ ಬರೆದ. ಅದನ್ನು ನರಹರಿಯ ಪತ್ರ ಮತ್ತು ದಾಖಲೆಗಳೊಂದಿಗೆ ಇರಿಸಿ ಕೂಡಲೇ ಮುಖ್ಯಮಂತ್ರಿ ಸೂರ್ಯಪ್ರಕಾಶ್ ಅವರಿಗೆ ಕಳುಹಿಸಿಕೊಟ್ಟ. ಬಳಿಕ ಅವರಿಗೆ ಖುದ್ದಾಗಿ ಕರೆಯನ್ನೂ ಮಾಡಿ ವಿಷಯದ ಗಂಭೀರತೆಯನ್ನು ಮನವರಿಕೆ ಮಾಡಿಸಿದವನು ‘ತಾವು ಆದಷ್ಟು ಬೇಗನೇ ಈ ಸಮಸ್ಯೆಯನ್ನು ಬಗೆಹರಿಸಿ ಜೀವಜಗತ್ತಿಗೆ ಅನಿವಾರ್ಯವಾಗಿರುವ ಹಸಿರು ಪರಿಸರವನ್ನು ಸಂರಕ್ಷಿಸಬೇಕೆಂದು ಕೈಮುಗಿದು ವಿನಂತಿಸಿಕೊಂಡ.

                                                                       ***

ಮುಖ್ಯಮಂತ್ರಿ ಸೂರ್ಯಪ್ರಕಾಶ್ ಅವರು ಸುಸಂಸ್ಕøತ ಕುಟುಂಬದಿಂದ ಬಂದ ಅತ್ಯಂತ ಮೇಧಾವಿ ಮತ್ತು ವಿನಯಶೀಲ ವ್ಯಕ್ತಿ. ಆದ್ದರಿಂದ ಪ್ರಸ್ತುತ ಸಮಾಜದ ಮೇರುಮಟ್ಟದ ಏಳಿಗೆ, ಯಶಸ್ಸುಗಳಲ್ಲಿ ಯಾವುದೇ ಉಪಯೋಗಕ್ಕೆ ಬಾರದಂಥ ಎಡಪಂಥೀಯ ಮತ್ತು ಬಲಪಂಥೀಯ ಧೋರಣೆಗಳನ್ನು ಮೀರಿದ ಚಿಂತನಾದರ್ಶವು ಅವರಲ್ಲಿತ್ತು. ಆದ್ದರಿಂದಲೇ ಅವರು ರಾಜ್ಯದ ಬಹುವರ್ಗಗಳ ಒಲವು ಮತ್ತು ಗೌರವಾದರಗಳಿಗೆ ಪಾತ್ರರಾಗಿದ್ದರು. ಅವರ ಇಂಥ ಉನ್ನತ ವ್ಯಕ್ತಿತ್ವದಿಂದಲೇ ಬಹಳ ಬೇಗನೇ ಜನನಾಯಕನ ಪಟ್ಟವೂ ಅವರನ್ನು ಅರಸಿ ಬಂದಿತ್ತು. ಹಾಗಾಗಿ ಅವರ ಸಾತ್ವಿಕ ಮತ್ತು ಪಾರದರ್ಶಕ ಆಡಳಿತ ವೈಖರಿಯಿಂದಾಗಿ ಪ್ರಸ್ತುತ ರಾಜ್ಯವು ಅಂತರರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದರೊಂದಿಗೆ ನಾಡಿನ ಅತ್ತ್ಯುತ್ತಮ ನೇತಾರರೆಂಬ ಹೆಗ್ಗಳಿಕೆಗೂ ಅವರು ಭಾಜನರಾಗಿದ್ದರು. ದೇಶವು ಜಾಗತೀಕ ಮಟ್ಟದಲ್ಲಿ ಹೇಗೆ ಮತ್ತು ಯಾವ ಮಾದರಿಯಲ್ಲಿ ಬೆಳೆಯಬೇಕು ಎಂಬ ದೂರದರ್ಶಿತ್ವ ಗುಣವಿದ್ದ ಅವರು ನಾಡಿನ ಹಸಿರು ಪರಿಸರ ಮತ್ತು ವನ್ಯಜೀವಿಗಳ ಮಹತ್ವವನ್ನೂ ಅರಿತುಕೊಂಡು ಅವುಗಳ ಮೇಲೂ ಅಪಾರ ಕಾಳಜಿ ಹೊಂದಿದವರಾಗಿದ್ದರು. ಹೀಗಾಗಿ ಇಂದು ಡಾ. ರಾಜಶೇಖರ್ ಮತ್ತು ಡಾ. ನರಹರಿಯ ಪತ್ರಗಳನ್ನು ಸ್ವತಃ ಓದಿದವರು, ಸಮಸ್ಯೆಯ ಗಂಭೀರತೆಯನ್ನು ತಕ್ಷಣವೇ ಮನಗಂಡು ಇಬ್ಬರಿಗೂ ಪ್ರತ್ತ್ಯುತ್ತರ ಬರೆದರು.

ಮುಖ್ಯಮಂತ್ರಿಯವರ ಪತ್ರದ ವಿವರ ಹೀಗಿತ್ತು: ನಿಮ್ಮಿಬ್ಬರ ಪತ್ರಗಳನ್ನು ಓದಿದೆವು. ಅವುಗಳಲ್ಲಿ ತಿಳಿಸಲಾದ ಸಮಸ್ಯೆಗಳನ್ನು ಓದುತ್ತ ಹೋದ ಹಾಗೆ ನಮಗೂ ಆಘಾತವಾಯಿತು. ನಮ್ಮ ಆಳ್ವಿಕೆಯಲ್ಲಿಯೇ ಇಂಥದ್ದೊಂದು ಅಚಾತುರ್ಯ ನಡೆಯುತ್ತಿರುವುದನ್ನು ಗಮನಿಸದೆ ಹೋದೆವಲ್ಲ ಎಂಬ ನೋವೂ ನಮ್ಮನ್ನು ಕಾಡುತ್ತಿದೆ. ಹಸಿರು ಪರಿಸರದ ಮಹತ್ವದ ಕುರಿತು ನಮ್ಮ ಜನರಲ್ಲಿ ಇನ್ನೂ ಮೂಡದ ತಿಳುವಳಿಕೆ ಮತ್ತು ಅಂಧಶ್ರದ್ಧೆಗಳನ್ನು ಕಾಣುವಾಗ ದುಃಖವಾಗುತ್ತದೆ. ಆದರೆ ಅಂಥ ಪರಿಸರ ಸಂರಕ್ಷಣೆಯಿಂದ ನಾಡನ್ನು ಸುಭಿಕ್ಷಗೊಳಿಸಲು ನಿಮ್ಮಂಥ ತರುಣರು ಧೈರ್ಯದಿಂದ ಮುಂದೆ ಬಂದಿರುವುದೂ ರಾಜ್ಯದ ಭವಿಷ್ಯದ ಕುರಿತು ನಮ್ಮಲ್ಲಿ ಹೊಸ ಆಶಾಕಿರಣಗಳನ್ನು ಮೂಡಿಸಿವೆ. ಆದ್ದರಿಂದ ನಿಮ್ಮಿಬ್ಬರ ಪ್ರಕೃತಿ ಪ್ರೇಮಕ್ಕೆ ಗೌರವಪೂರ್ವಕ ನಮನಗಳು! ನಿಮ್ಮ ಜಿಲ್ಲೆಗಳ ನಿಸರ್ಗದೊಂದಿಗೆ ನಿಮ್ಮವರೇ ನಡೆಸುತ್ತಿರುವ ದೌರ್ಜನ್ಯದ ಚಿತ್ರಣ ಮತ್ತು ಪರಿಣಾಮವಾಗಿ ಮುಂದಿನ ಪೀಳಿಗೆಯು ಅನುಭವಿಸಲಿರುವ ಆಪತ್ತುಗಳನ್ನು ನಿಮ್ಮ ಪತ್ರಗಳು ಹಾಗೂ ಅಧಿಕೃತ ದಾಖಲೆಗಳು ಸ್ಪಷ್ಟವಾಗಿ ವಿಷದಪಡಿಸುತ್ತವೆ. ಹೀಗಾಗಿ ನೀವು ಉಲ್ಲೇಖಿಸಿರುವ ಹಸಿರುಪ್ರದೇಶಗಳನ್ನು ಸಂರಕ್ಷಿಸುವ ಹೊಣೆ ನಮ್ಮದು. ಆ ಕಾರ್ಯಾಚರಣೆಗೆ ಇಂದೇ ಚಾಲನೆ ನೀಡುತ್ತಿದ್ದೇವೆ. ಅಂಥ ದುರಾಸೆ ಪೀಡಿತರ ಅನಾಚಾರಗಳಿಗೆ ಕಡಿವಾಣ ಹಾಕುವ ಕಾನೂನೊಂದನ್ನು ಸದ್ಯದಲ್ಲೇ ಜಾರಿಗೊಳಿಸಲಿದ್ದೇವೆ. ಇನ್ನು ಮುಂದೆಯೂ ನೀವು ಈ ಕುರಿತು ಅಧ್ಯಯನ ಮತ್ತು ಹೋರಾಟವನ್ನು ಜೀವಂತವಿರಿಸಬೇಕೆಂದು ಬಯಸುತ್ತೇವೆ. ಅದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ನಾವು ಮತ್ತು ನಮ್ಮ ಸರಕಾರ ಪ್ರಾಮಾಣಿಕವಾಗಿ ನೀಡುತ್ತದೆ ಎಂಬ ಭರವಸೆಯನ್ನೂ ಈ ಮೂಲಕ ನೀಡುತ್ತಿದ್ದೇವೆ!’ ಎಂಬ ಎರಡು ಪತ್ರಗಳು ಮುಖ್ಯಮಂತ್ರಿ ಕಛೇರಿಯಿಂದ ಇಬ್ಬರಿಗೂ ರವಾನೆಯಾದವು ಹಾಗೂ ಸೂರ್ಯಪ್ರಕಾಶ್ ಅವರು ತಾವು ನುಡಿದಂತೆಯೇ ನಡೆದುಕೊಳ್ಳಲು ಮುಂದಾದರು. ತಮ್ಮ ಆಳ್ವಿಕೆಯಲ್ಲಿದ್ದ ಸದರೀ ಜಿಲ್ಲೆಯ ಶಾಸಕ ಅಜಯ್‍ಕುಮಾರ್‍ಗೆ ಸ್ವತಃ ಕರೆ ಮಾಡಿ ವಿಷಯವನ್ನು ಅವರಿಗೆ ಮನವರಿಕೆ ಮಾಡಿಸಿ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು.

   ಇದಾದ ಮೂರನೆಯ ದಿನ ಈಶ್ವರಪುರ ಜಿಲ್ಲೆಯ ಪ್ರಧಾನ ಅರಣ್ಯ ಇಲಾಖೆಗೆ ಮುಖ್ಯಮಂತ್ರಿ ಸೂರ್ಯಪ್ರಕಾಶ್ ಅವರಿಂದ ರಿಜಿಸ್ಟರ್ಡ್ ಪತ್ರವೊಂದು ಬಂತು. ಅದರಲ್ಲಿ, ಡಾ. ನರಹರಿ ಮತ್ತು ಡಾ. ರಾಜಶೇಖರ್ ಉಲ್ಲೇಖಿಸಿರುವ ವಿಷಯದ ವಿವರಣೆಗಳಿದ್ದು, ಆ ಕುರಿತು ಕೂಲಂಕಷವಾಗಿ ತನಿಖೆ ನಡೆಸಿ ಶೀಘ್ರವಾಗಿ ವರದಿ ಒಪ್ಪಿಸುವಂತೆಯೂ ಮುಂದೆ ನಡೆಯಲಿರುವ ಅನಾಹುತಕ್ಕೆ ಕೂಡಲೇ ಕಡಿವಾಣ ಹಾಕುವಂತೆಯೂ ಮುಖ್ಯಮಂತ್ರಿಯವರ ಆಜ್ಞೆಯಾಗಿತ್ತು. ಆ ಪತ್ರವನ್ನು ಓದಿದ ಮತ್ತು ನಾಡಿನಾದ್ಯಂತ ದಕ್ಷ ಅಧಿಕಾರಿ ಎಂದೇ ಪ್ರಸಿದ್ಧನಾಗಿದ್ದ ಮಲೆನಾಡಿನ ಚಂದ್ರಕಾಂತ್ ಎಂಬ ಮೂವತ್ತೈದರ ಹರೆಯ ಅರಣ್ಯಾಧಿಕಾರಿಯು ಮುಖ್ಯಮಂತ್ರಿಯವರ ಆಜ್ಞೆಯನ್ನು ಮನಃಪೂರ್ವಕ ಸ್ವೀಕರಿಸಿ ಆಕೂಡಲೇ ಕಾರ್ಯಪ್ರವೃತ್ತನಾದ. ಅವನು ಅದಕ್ಕಾಗಿ ತನ್ನ ಇಲಾಖೆಯ ವನ್ಯಜೀವಿ ಮತ್ತು ಪರಿಸರತಜ್ಞರ ತಂಡವೊಂದನ್ನು ರಚಿಸಿದ. ಆ ತಂಡವು ಕೂಡಲೇ ಬುಕ್ಕಿಗುಡ್ಡೆಯ ದೇವರಕಾಡಿಗೆ ನಿಶ್ಶಬ್ದವಾಗಿ ಪ್ರವೇಶಿಸಿತು. ಕೆಲವು ದಿನಗಳ ಕಾಲ ಬೆಂಬಿಡದೆ ಆ ಕಾಡಿನ ಮೂಲೆ ಮೂಲೆಗಳಲ್ಲೂ ಸಂಚರಿಸುತ್ತ ಅಲ್ಲಿನ ನಾಲ್ಕೈದು ಶತಮಾನಗಳಿಗೂ ಪ್ರಾಚೀನವಾದ ದೈತ್ಯ ವೃಕ್ಷರಾಶಿಗಳನ್ನೂ ಮತ್ತು ಅಪಾರ ಆಯುರ್ವೇದಿಯ ಸಸ್ಯಸಂಪತ್ತನ್ನೂ ಹಾಗೂ ಆ ಅರಣ್ಯದಲ್ಲಿ ವಾಸಿಸುತ್ತಿದ್ದ ವಿವಿಧ ಜೀವಸಂಕುಲಗಳನ್ನೂ ಪತ್ತೆಹಚ್ಚಿ ಸೂಕ್ಷ್ಮವಾಗಿ ಅಧ್ಯಯನಿಸಿದ ತಂಡವು ಕೂಡಲೇ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿಯವರಿಗೆ ಕಳುಹಿಸಿಕೊಟ್ಟಿತು.

   ಅರಣ್ಯ ಇಲಾಖೆಯ ಅಧ್ಯಯನ ದಾಖಲೆಗಳನ್ನು ಪರಿಶೀಲಿಸಿದ ಸರಕಾರವು ಹೊರಡಿಸಿದ ಆಜ್ಞೆಯಂತೆ ಇಲಾಖಾಧಿಕಾರಿಗಳು ಮತ್ತು ಪರಿಸರತಜ್ಞರೂ ಕೂಡಿ ವ್ಯವಸ್ಥಿತ ವ್ಯೂಹವೊಂದನ್ನು ರಚಿಸಿದರು. ಮುಂದಿನ ಕಾರ್ಯಸೂಚಿಯಾಗಿ ಆ ಜಾಗಕ್ಕೆ ಸಂಬಂಧಿಸಿದವರಿಗೆಲ್ಲ ನೋಟೀಸು ಜಾರಿಗೊಳಿಸಿ ಅವರನ್ನು ಕಛೇರಿಗೆ ಆಹ್ವಾನಿಸಿದರು. ಬಳಿಕ ಅವರೊಡನೆ ಸುದೀರ್ಘ ಚರ್ಚೆ ನಡೆಯಿತು. ಅದರಲ್ಲಿ ನಾಡಿನ ನಾಗಬನ, ದೇವರಕಾಡು ಮತ್ತು ದೈವದ ಹಾಡಿಗಳ ಮಹತ್ವವನ್ನು ಅವರಿಗೆ ಮೃದುವಾಗಿ ಮನವರಿಕೆ ಮಾಡಿಸಲಾಯಿತು ಹಾಗೂ ಪ್ರಸ್ತುತ ಪ್ರದೇಶವನ್ನು ಸರಕಾರದ ಸ್ವಾಮ್ಯಕ್ಕೆ ಒಪ್ಪಿಸಬೇಕೆಂದೂ ಮತ್ತು ಆ ಭೂಮಿಯ ಬೆಲೆಯನ್ನು ಸರಕಾರವೇ ಭರಿಸಲಿದೆಯೆಂದೂ  ಅವರಿಗೆಲ್ಲ ಭರವಸೆಯನ್ನು ನೀಡಲಾಯಿತು. ಆದ್ದರಿಂದ ಸರಕಾರದ ಉದ್ದೇಶ ಮತ್ತು ನಿಲುವುಗಳು ಜಾಗದ ಮಾಲಕರಲ್ಲಿ ಬಹುತೇಕರಿಗೆ ಒಪ್ಪಿಗೆಯಾದವು. ಆದರೆ ಅವರೆಲ್ಲ ಆ ಕುರಿತು ಪಟ್ಟನೆ ಸಮ್ಮತಿಸಲು ಹಿಂಜರಿದರು. ಏಕೆಂದರೆ ಆವತ್ತು ಏಕನಾಥ ಗುರೂಜಿಯವರ ಇಂದ್ರಜಾಲದ ಚಮತ್ಕಾರಕ್ಕೆ ತಾವೆಲ್ಲ ಮರುಳಾಗಿ ಆ ಕಾಡನ್ನು ಜೀರ್ಣೋದ್ಧಾರ ಮಾಡಿ ದೇವಸ್ಥಾನ ಕಟ್ಟಿಸಲು ಹೊರಟಿರುವುದನ್ನೂ ಗುರೂಜಿಯವರೇ ಅದರ ಮುಖಂಡತ್ವ ವಹಿಸಿರುವುದನ್ನೂ ಮತ್ತು ಈಗಾಗಲೇ ಅದಕ್ಕೆ ಚಾಲನೆಯನ್ನೂ ನೀಡಿರುವುದನ್ನು ಅಧಿಕಾರಿಗಳಿಗೆ ವಿವರಿಸುತ್ತ ಆತಂಕ ವ್ಯಕ್ತಪಡಿಸಿದರು. ಆದರೆ ಸರಕಾರಿ ತಜ್ಞರು ಅದಕ್ಕೂ ಪರಿಹಾರೋಪಾಯವನ್ನು ಕಂಡುಕೊಂಡಿದ್ದರು. ಹಾಗಾಗಿ ಅವರುಗಳು, ‘ಆ ಕುರಿತು ನೀವ್ಯಾರೂ ಭಯಪಡುವ ಅಗತ್ಯವಿಲ್ಲ. ನಿಮ್ಮ ಗುರೂಜಿಯವರನ್ನೂ ಸಂಬಂಧಪಟ್ಟವರನ್ನೂ ಕರೆಯಿಸಿ ಎಲ್ಲರಿಗೂ ಮನವರಿಕೆ ಮಾಡಿಸಲಾಗುವುದು ಹಾಗೂ ಇನ್ನು ಮುಂದೆ ಇಂಥ ದೇಶದ್ರೋಹದ ಅಪರಾಧಗಳಲ್ಲಿ ತೊಡಗುವವರ ಮತ್ತು ಅಂಥ ದುಷ್ಕøತ್ಯಗಳಲ್ಲಿ ಭಾಗಿಯಾಗುವವರ ಮೇಲೂ ಸೂಕ್ತ ಕ್ರಮಗಳನ್ನು ಜರುಗಿಸಿ ಅವರನ್ನು ಕಠಿಣವಾಗಿ ಶಿಕ್ಷಿಸುವಂಥ ಕಾನೂನು ಕೂಡಾ ತಿದ್ದುಪಡಿಯಾಗುತ್ತಿದ್ದು ಇನ್ನೇನು ಕೆಲವೇ ಕಾಲದೊಳಗೆ ಜಾರಿಗೆ ಬರಲ್ಲಿದೆ!’ ಎಂಬ ಎಚ್ಚರಿಕೆಯನ್ನು ನೀಡಿದರು.

   ಸರಕಾರಿ ಅಧಿಕಾರಿಗಳಿಂದ ಮನಮುಟ್ಟುವ ಮತ್ತು ನ್ಯಾಯಸಮ್ಮತವಾದ ಮಾತುಕಥೆಗಳು ಹಾಗೂ ಪ್ರಸ್ತುತ ವನ್ಯಜೀವಿ ಕಾನೂನು, ಕಾಯ್ದೆಗಳ ವಿಶೇಷ ನಿಲುವುಗಳ ಕುರಿತು ತಜ್ಞರ ಅಪಾರ ತಿಳುವಳಿಕೆಯ ವಿವರಗಳಿಂದಾಗಿ ಜಮೀನು ಮಾಲಕರಲ್ಲೂ ಆ ಕುರಿತು ಅರಿವು ಮೂಡಿತು. ಅಷ್ಟಲ್ಲದೇ ಅವರಲ್ಲನೇಕರಿಗೆ ಸರಕಾರದ ಉದ್ದೇಶವು ಬೇರೊಂದು ರೀತಿಯಲ್ಲೂ ಇಷ್ಟವಾಯಿತು. ಹೇಗೆಂದರೆ, ಒಂದುಕಾಲದಲ್ಲಿ ಅವರ ಅವಿಭಕ್ತ ಕುಟುಂಬವು ಇದೇ ಜಾಗದಲ್ಲಿ ಬಾಳಿ ಬದುಕಿದ್ದರೂ ಕ್ರಮೇಣ ಆಧುನಿಕತೆಯ ತೆಕ್ಕೆಗೆ ಬಿದ್ದು ಉನ್ನತಮಟ್ಟದ ವಿದ್ಯೆ, ಶಿಕ್ಷಣ ಪಡೆದು ಉದ್ಯೋಗ ಅರಸುತ್ತ ದೇಶ ವಿದೇಶಗಳಲ್ಲಿ ಹಂಚಿ ಹೋಗಿತ್ತು. ಹಾಗಾಗಿ ಅವರಲ್ಲಿ ಬಹುತೇಕರಿಗೆ ಇಂದು ಹಿರಿಯರ ಈ ಜಮೀನಿನ ಅಗತ್ಯವಿರಲಿಲ್ಲ. ಅಲ್ಲದೇ ತಮ್ಮ ಪೂರ್ವಿಕರ ದೈವದೇವರುಗಳನ್ನೂ ಮೂಲದ ಮನೆಯಲ್ಲಿ ಹಿರಿಯರಿಬ್ಬರು ಪೂಜಿಸಿಕೊಂಡು ಬರುತ್ತಿದ್ದರು. ಅದೂ ಅಲ್ಲದೇ ಹಿರಿಯರ ದೈವಭೂತಗಳ ಮೇಲೆ ಈಗಿನ ಯುವಪೀಳಿಗೆಯಲ್ಲೂ ನಂಬಿಕೆ ಮತ್ತು ಭಯಭಕ್ತಿ ಕ್ಷೀಣಿಸುತ್ತಿದ್ದುದರಿಂದಲೂ ಒಂದಷ್ಟು ಹಿರಿಯರು ಕೂಡಾ ಆ ಮನಸ್ಥಿತಿಗೆ ಹೊರಳಿದ್ದರಿಂದಲೂ ಮರಳಿ ದೈವ ದೇವರುಗಳನ್ನು ನಂಬುವ ಮತ್ತು ಅವುಗಳನ್ನು ಕಾಲಕಾಲಕ್ಕೆ ಸರಿಯಾಗಿ ಪೂಜಿಸಿಕೊಂಡು ಬರುವಂಥ ತಾಪತ್ರಯಗಳೆಲ್ಲ ಈ ಮೂಲಕ ತಪ್ಪಿಹೋದುದು ಅವರಿಗೆಲ್ಲ ನೆಮ್ಮದಿಯನ್ನು ತಂದುಕೊಟ್ಟಂತಾಯಿತು.

   ಆದ್ದರಿಂದ ಅವರೆಲ್ಲರೂ ಸರಕಾರದ ಉದ್ದೇಶಕ್ಕೆ ತಂತಮ್ಮ ಒಪ್ಪಿಗೆಯನ್ನು ಲಿಖಿತರೂಪದಲ್ಲಿ ನೀಡಿ ಹಿಂದಿರುಗಿದರು. ಸರಕಾರವು ಈ ಕೆಲಸವನ್ನು ಮುಗಿಸಿದ ಕೂಡಲೇ ಸುರೇಂದ್ರಯ್ಯನ ಬಂಡೆಗಳನ್ನೂ ಮುಟ್ಟುಗೋಲು ಹಾಕಿ ಆ ಪ್ರದೇಶವನ್ನು ಸ್ವಾಧೀನ ಪಡೆದುಕೊಂಡಿತು. ಇಷ್ಟಾಗುತ್ತಲೇ ಅದು ಇನ್ನೊಂದು ಮಹತ್ವದ ಆದೇಶವನ್ನೂ ಹೊರಡಿಸಿತು. ಅದರ ಪರಿಣಾಮವಾಗಿ ಏಕನಾಥ ಗುರೂಜಿಯವರ ಜಂಘಾಬಲವೇ ಹುದುಗಿ ಹೋಗುವಂಥದ್ದೊಂದು ನೋಟೀಸು ಜಾರಿಗೊಂಡಿತು.


(ಮುಂದುವರೆಯುವುದು)

ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top