ಅಂಕಣ ಸಂಗಾತಿ
ಗಜಲ್ ಲೋಕ
ಹುಂಡೇಕಾರ ಅವರ
ರಕುತದ ಸಾಲುಗಳ ಆಲಿಂಗನ…
ನಮಸ್ಕಾರ ಗಜಲ್ ಮನಸುಗಳಿಗೆ…
ಇಂದು ಗುರುವಾರವಲ್ಲವೆ.. ಅದಕ್ಕೆ ಗುರುತರವಾದ ಜವಾಬ್ದಾರಿಯೊಂದಿಗೆ ತಮ್ಮ ಮುಂದೆ ಹಾಜರಾಗಿರುವೆ, ಗಜಲ್ ಗೋ ಒಬ್ಬರ ನೆರಳನ್ನು ಹಿಂಬಾಲಿಸುತ್ತ. ಮಾತಿನಲ್ಲಿ ಕಾಲವನ್ನು ಕೊಲ್ಲಲಾರೆ… ಬನ್ನಿ… ಹೃದಯದ ಬಾಗಿಲನ್ನು ತೆರೆದು ನನ್ನೊಂದಿಗೆ ಹೆಜ್ಜೆ ಹಾಕಲು…!!
“Only One pain greater than Marriage.. the Pain of Life Itself”
-Mirza Gaalib
ಪ್ರತಿಭೆ ಎನ್ನುವುದು ಗುಪ್ತಗಾಮಿನಿಯಂತೆ. ಇದರ ಮೂಲ ಅರ್ಥವೆ ‘ಹೊಳಹು’. ಲಾಕ್ಷಣಿಕರ ನೆಲೆಯಲ್ಲಿ ಇದರ ಅರ್ಥ ನೋಡುವುದಾದರೆ ಕುಂತಕನ ಮಾತುಗಳನ್ನು ಗಮನಿಸಬಹುದು. “ಕವಿಯ ಮನದಲ್ಲಿ ಮೊದಲಿಗೆ ಪ್ರಕಟವಾಗುವ ಕಾವ್ಯದ ಹೊಳಹು ಗಣಿಯಿಂದ ತೆಗೆದ ಪಾಶಾಣದಂತಿರುತ್ತದೆ. ಪ್ರತಿಭಾ ವಿಶೇಷದಿಂದ ಅದು ಕವಿಯ ನುಡಿಗಳಲ್ಲಿ ಪ್ರಕಟಗೊಂಡಾಗ ರಮಣೀಯವಾಗುತ್ತದೆ”. ಇದು ಎಲ್ಲರಲ್ಲಿಯೂ ಇರುತ್ತದೆ, ಆದರೆ ಅದರ ಅನಾವರಣವಾಗುವುದು ಸತತ ಪರಿಶ್ರಮ, ಬದ್ಧತೆಯಿಂದ ಮಾತ್ರ. ಅಂತಹ ಪ್ರತಿಭೆ ಯಶಸ್ಸಿನ ದಡ ತಲುಪಲು ಸಾಧ್ಯ. ಇನ್ನೂ ಕೆಲವರು ಪ್ರತಿಭೆ ಹೊಂದ್ದಿದರೂ, ಸಾಧನೆ ಮಾಡಿದ್ದರೂ ಸಹ ಇತರರಿಂದ ಗುರುತಿಸಿಕೊಳ್ಳದೆ ಎಲೆ ಮರೆಯ ಕಾಯಿಯಂತೆ ಬದುಕುತ್ತಿರುತ್ತಾರೆ. ಮರೆಯಲ್ಲಿ ನಿಲ್ಲುವುದೆಂದರೆ ಸಣ್ಣ ಸಂಗತಿಯಲ್ಲ. ಅದಕ್ಕಾಗಿ ನಿರಂತರ ಪ್ರಯತ್ನ ಬೇಕು. ಚಂಚಲವಾದ ಮನಸ್ಸು ಸದಾ ಏನನ್ನಾದರೂ ಬಯಸುತ್ತಿರುತ್ತದೆ. ಅದು ತಪ್ಪಬೇಕಾದರೆ ನಮ್ಮ ಮೇಲೆ ನಮಗೆ ಹಿಡಿತವಿರಬೇಕು, ಗಟ್ಟಿತನ ಬೇಕು. ಈ ನೆಲೆಯಲ್ಲಿ ಗಮನಿಸಿದಾಗ ಮರೆಯಲ್ಲಿ ನಿಂತಿರುವುದೂ ಒಂದು ಕೌಶಲ್ಯವೆ!! ಮಾವಿನ ಕಾಯಿಯು ಎಲೆಯ ಒಳಗೆ ಇರುತ್ತದೆ. ಅದನ್ನು ಒಮ್ಮೆ ಯಾರಾದರೂ ಕಂಡರೆ ಆಗ ಆ ಮಾವಿನ ಕಾಯಿಯ ಜೀವನವೆ ಮುಕ್ತಾಯವಾಗುತ್ತದೆ!! ಅಷ್ಟರೊಳಗೆ ಕಾಯಿಯನ್ನು ತೆಗೆದುಕೊಂಡು ಹೋಗಿ ಯಾವುದೋ ಕಾರ್ಯಕ್ಕೆ ಬಳಸುತ್ತಾರೆ. ಅಲ್ಲಿಗೆ ಅದರ ವಂಶವೆ ನಾಶವಾಗುತ್ತದೆ. ಅದಿನ್ನೂ ಹಣ್ಣಾಗಬೇಕಿತ್ತು. ಅಷ್ಟೆ ಅಲ್ಲ, ಅದು ಕಾಲದ ಜೊತೆಗೆ ಇರಬೇಕಿತ್ತು. ಬಿರುಗಾಳಿಗೆ ನಿಶ್ಚಲವಾಗಿ ನಿಲ್ಲಬೇಕಿತ್ತು. ಧಾರಕಾರ ಮಳೆಗೆ ಮೈಯೊಡ್ಡಬೇಕಿತ್ತು. ಬಿಸಿಲಿನೊಂದಿಗೆ ಬಹಳ ಕಾಲ ಬೇಯಬೇಕಿತ್ತು. ಇಷ್ಟೆಲ್ಲ ಪ್ರಕ್ರಿಯೆಗೆ ಒಳಗಾದ ಕಾಯಿ ಮಾವಿನಕಾಯಿ ಹಣ್ಣಾದರೆ….? ಅಲ್ಲಿ ಒಂದು ಪೂರ್ಣತ್ವವಿರುತ್ತದೆ. ಪೂರ್ಣತ್ವವೆ ಭಾರತೀಯತೆ!! ಆ ಹಣ್ಣು ಪೂರ್ಣವಾದರೆ ಮಧುರಾನುಭೂತಿ, ಎಲ್ಲರಿಗೂ ಆಸ್ವಾಧ್ಯ. ಇನ್ನೂ ಅದನ್ನು ಹತ್ತಾರು ಜನರೊಂದಿಗೆ ಹಂಚಿಕೊಂಡು ತಿಂದರೆ ಅದರ ಆನಂದವೇ ಪರಮಾನಂದ. ನಂತರ ಮಾವಿನ ಹಣ್ಣಿನ ವಂಶವೂ ಮುಂದೆ ಸಾಗುತ್ತದೆ. ಇದು ಎಲ್ಲ ರಂಗಕ್ಕೂ ಅನ್ವಯಿಸುತ್ತದೆ, ನಮ್ಮ ಗಜಲ್ ವೀಣೆಗೂ ಕೂಡ!! ಮರೆಯಲ್ಲಿ ನಿಂತವರು ತೆರೆಯ ಮೇಲೆ ಬಂದರೆ ತಲೆ ಬಾಗಬೇಕು. ಏಕೆಂದರೆ ಅನುಭವದ ಖಜಾನೆಯೇ ಅಲ್ಲಿರುತ್ತದೆ. ಈ ದಿಸೆಯಲ್ಲಿ ಹಲವಾರು ಗಜಲ್ ಕಾರರು ಮುನ್ನೆಲೆಗೆ ಬರಬೇಕಾಗಿದೆ. ಕಾಯಿಗಳು ಪಕ್ವಗೊಳ್ಳಬೇಕಾಗಿವೆ. ಎಲೆ ಮರೆಯ ಕಾಯಿಯಂತೆ ಇರುವ ಹಲವು ಸಾಧಕರಲ್ಲಿ ಶ್ರೀ ಸಂಗು ಹುಂಡೇಕಾರ ಅವರೂ ಒಬ್ಬರು!!
ಸಂಗು ಹುಂಡೇಕಾರ ಅವರ ಪೂರ್ಣ ಹೆಸರು ಸಂಗಮೇಶ ಮಲ್ಲಪ್ಪ ಹುಂಡೇಕಾರ. ಇವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಮಹಾಲಿಂಗಪುರದಲ್ಲಿ 1967 ಜೂನ್ ತಿಂಗಳ ಮೊದಲ ದಿನ ಅಂದರೆ ೦1 ನೇ ತಾರೀಕಿನಂದು ಜನಿಸಿದ್ದಾರೆ. ಇವರು ದಾವಣಗೆರೆ ಕಲಾ ಕಾಲೇಜಿನಲ್ಲಿ ಚಿತ್ರಕಲೆಯಲ್ಲಿ ಪದವಿ ಪಡೆದ ಸಾತ್ವಿಕ ಕಲಾವಿದರು. ಇದರೊಂದಿಗೆ ಹೋರಾಟದ ಹಾದಿ, ರಂಗಭೂಮಿ, ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದ ಇವರು ಹಲವಾರು ಪತ್ರಿಕೆಗಳಿಗೆ ಸಂಪಾದಕರಾಗಿ, ಸಹ ಸಂಪಾದಕರಾಗಿ, ಪುಟ ವಿನ್ಯಾಸಕಾರರಾಗಿಯೂ ಕಾರ್ಯವನ್ನು ನಿರ್ವಹಿಸಿದ್ದಾರೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಗಮನಿಸಬಹುದು. ಹೊಂಗನಸು, ದಿಕ್ಸೂಚಿ (ಮಾಸಪತ್ರಿಕೆ)
ಜೀವನಾಡಿ ಪತ್ರಿಕೆಯ ಉಪಸಂಪಾದಕ, ಭಾವನಾ ಪತ್ರಿಕೆಗೆ ಸಹ ಸಂಪಾದಕ, ಹಾಯ್ ಬೆಂಗಳೂರು ಪತ್ರಿಕೆಯ ಪುಟ ವಿನ್ಯಾಸ ಮತ್ತು ಕಲೆ.. ಉತ್ತಮ ಬರಹಗಾರರಾದ ಹುಂಡೇಕಾರ ಅವರು ಹಲವಾರು ಕವನಗಳನ್ನು ಬರೆದಿದ್ದಾರೆ. ಕೆಲವು ಸಿನಿಮಾಗಳಿಗೆ ಹಾಡುಗಳ ರಚನೆಯನ್ನು ಮಾಡಿದ್ದಾರೆ. ಇನ್ನೂ ನಮ್ಮ ಗಜಲ್ ಗುಲ್ಮೋಹರ್ ಕಡೆ ಬರುವುದಾದರೆ “ಸಮಾಧಿನಿ” ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರ ಟ್ಯಾಗ್ ಲೈನ್ ‘ರಕುತದ ಸಾಲುಗಳು..’ ತುಂಬಾ ಹಾಂಟಿಂಗ್ ಆಗಿದೆ. ಇಂತಹ ಮನಕಲಕುವ ಗಜಲ್ ಗಳನ್ನು ನೀಡಿದ ಶ್ರೀ ಸಂಗು ಹುಂಡೇಕಾರ ರವರು ಸದ್ಯ ತೇರದಾಳದಲ್ಲಿ ವಾಸವಾಗಿದ್ದಾರೆ.
ನಾವು ಉಸಿರಾಡುತ್ತಿರುವ ಇಂದಿನ ಪರಪಂಚದಲ್ಲಿ ಅಸಂಖ್ಯಾತ ಭಾಷಾ ಪ್ರಬೇಧಗಳಿವೆ. ಎಲ್ಲವೂ ತಮ್ಮದೇ ಆದ ವಿಶಿಷ್ಟ ಛಾಪಿನೊಂದಿಗೆ ಜನ ಸಾಮಾನ್ಯರ ನಾಲಿಗೆಯ ತುದಿಯಲ್ಲಿ ನರ್ತಿಸುತ್ತಿವೆ. ಅವುಗಳಲ್ಲಿ ಮೃದು, ಮಧುರ ಹಾಗೂ ಕೋಮಲತೆಯ ಪೇಟೆಂಟ್ ಪಡೆದ ಭಾಷೆಯೆಂದರೆ ಅದು ಉರ್ದು ಭಾಷೆ. ತುಂಬಾ ಕಾವ್ಯಾತ್ಮಕ ಭಾವದ ಭಾಷೆ ಎಂದೇ ಇದು ಜನಜನಿತವಾಗಿದೆ. ‘ಯಾರಿಗೂ ನೋವಾಗದಂತೆ ಮಾತನಾಡುವುದು’ ಇದು ಉರ್ದುವಿನ ಭಾಷಾ ಶ್ರೀಮಂತಿಕೆಯಾಗಿದೆ. ಉರ್ದು ಭಾಷೆಯು ಶಿಷ್ಟತೆಯ-ಸಭ್ಯತೆಯ ಸಂಸ್ಕೃತಿಯನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಉರ್ದು ಸುಸಂಸ್ಕೃತರ ಭಾಷೆಯಾಗಿದೆ. ಇಂತಹ ಭಾಷೆಯ ಕಾವ್ಯದ ರಾಣಿಯಾಗಿ ಮೆರೆದಿರುವ, ಮೆರೆಯುತ್ತಿರುವ ‘ಗಜಲ್’ ಇನ್ನೆಷ್ಟು ನಯ, ನಾಜೂಕಿನಿಂದ ಕೂಡಿರಬಹುದು ಎಂದು ಯೋಚಿಸಿದರೆ ರೋಮಗಳೂ ಮೃದುವಾಗಿಯೆ ಸೆಟೆದು ನಿಲ್ಲುತ್ತವೆ. ಕಷ್ಟಗಳು ಹುಚ್ಚು ನಾಯಿಯಂತೆ ನಮ್ಮನ್ನು ಬೆನ್ನಟ್ಟಿಕೊಂಡು ಬಂದಾಗಲೇ ನಾವು ಎಷ್ಟು ಜೋರಾಗಿ ಓಡಬಲ್ಲೆವು ಎಂಬುದು ತಿಳಿಯುವಂತೆ, ನೋವಿನ ಗೂಡಿನಲ್ಲಿ ಒಂಟಿಯಾಗಿ ಕಾಲ ಕಳೆಯುತ್ತಿರುವಾಗಲೆ ಗಜಲ್ ನ ಸಾಂಗತ್ಯ ಮನಸ್ಸಿಗೆ ಹಿತ ನೀಡುತ್ತದೆ. ತಾಯಿಗಿಂತಲೂ, ಉತ್ತಮ ಸ್ನೇಹಿತನಿಗಿಂತಲೂ ಅಷ್ಟೇ ಏಕೆ ಸಪ್ತಪದಿ ತುಳಿದ ಅರ್ಧಾಂಗಿನಿಗಿಂತಲೂ ಉತ್ತಮವಾಗಿ ಸಂತೈಸುವ, ಮೈಕೊಡವಿ ಎದ್ದೇಳುವಂತೆ ಮಾಡುವ ಮುಲಾಮು ಎಂದರೆ ಅದೂ ಗಜಲ್. ಈ ಗಜಲ್ ನಲ್ಲಿ ಚಂದಿರನ ಮುಗುಳ್ನಗೆ, ನವಿಲಿನ ವೈಯ್ಯಾರ, ಗಿಳಿಯ ಸುಂದರ ಮಾತುಗಳು, ನದಿಯ ಚಂಚಲತೆ, ಹೂವಿನ ಕೋಮಲತೆ, ಮಧುಬಾಲೆಯ ಮೋಹಕತೆ…. ಎಲ್ಲವೂ ಇದೆ, ಇರಬೇಕೂ ಕೂಡ. ಇಂತಹ ಹೃದಯ ಬಡಿತದ ಅಶಅರ್ ಹೊಂದಿರುವ ಗಜಲ್ ಸಂಕಲನಗಳಲ್ಲಿ ಸಂಗು ಹುಂಡೇಕಾರ ಅವರ ‘ರಕುತದ ಸಾಲುಗಳು’ ಎಂಬ ಟ್ಯಾಗ್ ಲೈನ್ ನೊಂದಿಗೆ ಪ್ರಕಟವಾಗಿರುವ ‘ಸಮಾಧಿನಿ’ ಯೂ ಒಂದು. ಈ ಸಂಕಲನವು ಪ್ರೇಮವನ್ನು ರುಬರು ಆಗಿಸಿ ಸವಾಲೆಸೆಯುತ್ತ, ತನ್ನ ನೋವನ್ನು ತನ್ನವರ ನಲಿವನ್ನಾಗಿಸುವಲ್ಲಿ ಗೆದ್ದು ಬೀಗಿದೆ. ತನ್ನವಳಿಗಾಗಿ, ತನ್ನನ್ನು ಪ್ರೀತಿಸಿದವಳಿಗಾಗಿ ಕಾದು, ನೋವಲ್ಲಿ ನೆಂದು, ವಿರಹದ ದಳ್ಳುರಿಯಲ್ಲಿ ಬೂದಿಯಾಗಿ ಸಮಾಧಿಯಲ್ಲಿ ಚಿರನಿದ್ರೆಗೆಯ್ದ ಪ್ರೇಮಿಯ ಕನಸು, ಕನವರಿಕೆಗಳು ಇಲ್ಲಿ ಗಜಲ್ ಗಳ ಅಶಅರ್ ಆಗಿ ಸಹೃದಯ ಓದುಗರ ಹೃದಯದಲ್ಲಿ ಅರಳಿವೆ. ಈ ದಿಸೆಯಲ್ಲಿ ವಿರಹದ ಬೇಗುದಿಯ ಅಭಿವ್ಯಕ್ತಿಗೆ ಗಜಲ್ ನಷ್ಟು ಬೇರೆ ಯಾವ ಸಾಹಿತ್ಯ ಪ್ರಕಾರವು ನ್ಯಾಯ ಒದಗಿಸದು!!
“ನೀನು ಕಷ್ಟದಲ್ಲಿರುವ ಸುಳ್ಳು ಸುದ್ದಿಯನೇ ಕಳಿಸಿಬಿಡು
ಮದಿರೆಯಿಂದ ಮತ್ತೇರದೀಗ ಒಂದಿಷ್ಟು ವಿಷವನೇ ಕಳಿಸಿಬಿಡು“
‘ಮತ್ತು’ ಹುಡುಕುತ ಹೊರಟರೆ ಅದು ಕಂಡು ಬರುವುದು ಪ್ರಿಯತಮ/ಪ್ರಿಯತಮೆಯ ಕಂಗಳಲಿ, ಅವರ ಬಾಹುಗಳ ಬಿಸಿಯಪ್ಪುಗೆಯಲಿ ಮತ್ತು ಬಿಸಿಯೇರಿಸುವ ಕನವರಿಕೆಯಲಿ. ಒಂದುವೇಳೆ ಮದಿರೆಯಲ್ಲಿ ‘ನಶೆ’ ಇರುವುದಾದರೆ ‘ಮಧುಬಟ್ಟಲು’ ಒಲಾಡುತಿತ್ತು, ಕುಣಿಯುತಿತ್ತು ಎಂಬುದನ್ನು ಮೇಲಿನ ಷೇರ್ ಪಿಸುಗುಟ್ಟುತ್ತಿದೆ. ಪ್ರೀತಿಯಲ್ಲಿ ವಿಷವೂ ಅಮೃತವೆನಿಸುವುದು ಸಂಗಾತಿ ಜೊತೆಯಲ್ಲಿದ್ದರೆ ಮಾತ್ರ… ಇಲ್ಲದಿರೆ…!!
ಅವನಿಯಲ್ಲಿ ಬೇರಿಳಿಸಿ, ಆಗಸದ ಬಾಂದಳದಲ್ಲಿ ಅದೂ ತಾರೆಗಳ ಮಧ್ಯೆ ಸುಮವನ್ನು ಅರಳಿಸುವ ದಿವ್ಯವಾದ ಅನುಪಮ ಅನುಭೂತಿಯೆ ಅನುರಾಗ. ಇದು ನಮ್ಮ ಸಾಮಾಜಿಕ ವ್ಯವಸ್ಥೆ ನಿರ್ಮಿಸಿದ ಯಾವ ಅಂತರಗಳನ್ನು ಲಕ್ಷಿಸುವುದೇ ಇಲ್ಲ. ಇಂತಹ ಪ್ರೇಮದ ತೀವ್ರ ಅನುಭವಗಳು ಅನುಭವದ ಸ್ವರೂಪ ಪಡೆದಾಗ ಮಾತ್ರ ಗಜಲ್ ನ ಅರ್ಥ ಸಾಧ್ಯತೆಗಳು ವಿಸ್ತರಿಸುತ್ತವೆ. ಈ ಕಾರಣಕ್ಕಾಗಿಯೇ ಸಂಗು ಹುಂಡೇಕಾರ ಅವರ ಕೆಲವು ಗಜಲ್ ಗಳು ಅಮರವಾಗಿವೆ!!
“ಮನಸನಿಟ್ಟು ಕರೆ ಹೆಸರ ಹಿಡಿದು ಪಿರುತಿಯಿಂದ
ಬಾರದೆ ಇರರೆದ್ದು ಹೊದ್ದು ಮಲಗಿದ ಸಮಾಧಿಯಿಂದ“
ಅಬ್ಬಾ..! ಮೇಲಿನ ಷೇರ್ ನ ಮಿಸ್ರಾ-ಎ-ಸಾನಿ ಪ್ರೀತಿಯ ಶಕ್ತಿಯನ್ನೆ ಬಹಿರಂಗಪಡಿಸುತ್ತದೆ. ‘ಪ್ರೀತಿಯೆಂದರೆ…ಪ್ರೀತಿಯೆ, ಬೇರೇನೂ ಅಲ್ಲ’. ನಮ್ಮ ಇತಿಹಾಸ, ಪರಂಪರೆಯನ್ನು ಗಮನಿಸಿದಾಗ ಪ್ರೀತಿಗಾಗಿ ಏನೆಲ್ಲ ಘಟಿಸಿದೆ ಎಂಬುದನ್ನು ಅರಿಯಬಹುದು. ಲೈಲಾ-ಮಜನು, ರೋಮಿಯೋ-ಜ್ಯೂಲಿಯೇಟ್, ಶಿರಿನ್-ಫರಹಾ, ದೇವದಾಸ-ಪಾರ್ವತಿ, ಸಲೀಂ-ಅನಾರ್ಕಲಿ, ಹೀರ್-ರಾಂಜಾ…. ಇವರೆಲ್ಲರೂ ನಮ್ಮೊಂದಿಗೆ, ನಮ್ಮ ಹೃದಯದಲ್ಲಿ ಜೀವಂತವಾಗಿರಲು ಕಾರಣವೇ ಪ್ರೀತಿಯಲ್ಲವೆ. ಅಂತೆಯೇ ‘ಪ್ರೀತಿಸಿದವರು ಸಾಯುವರೆ ಹೊರತು ಪ್ರೀತಿಯಲ್ಲ’ ಎಂದು ಹೇಳಲಾಗುತ್ತದೆ.
‘ಪ್ರೀತಿ’ಗೆ ಸಮಾನವಾದ, ಸಮಾನಾಂತರವಾದ ಭಾವ ಮತ್ತೊಂದಿಲ್ಲ. ಪ್ರೀತಿಸುವುದಕ್ಕೂ ಮತ್ತು ದ್ವೇಷಿಸುವುದಕ್ಕೂ ಪ್ರೀತಿಯೇ ಬೇಕು. ಈ ಪ್ಯಾರ್ ನ ವಿವಿಧ ಮಗ್ಗುಲಗಳನ್ನು ತುಂಬಾ ಮೊಹಬ್ಬತ್ ನಿಂದ ಬರೆದ ಗಜಲ್ ಗೋ ಹುಂಡೇಕಾರ ಅವರಿಂದ ಮತ್ತಷ್ಟು ಭಾವಪರವಶವಾದ ಗಜಲ್ ಮಳೆ ಸುರಿಯಲಿ ಎಂದು ಶುಭ ಕೋರುತ್ತೇನೆ.
“ನೀ ಸತ್ತು ಹೋಗಿ ನನ ಜೀವಾ ತಗೊಂಡು ಜೀವಂತ ಇಟ್ಟೀದಿ!
ನೀ ಎಲ್ಲಿದಿ ಅಲ್ಲೇ ನನ್ನೂ ಕರಕೋ ಸುಳ್ಳs ನನ್ನ ಯಾಕ ಕಾಡತೀದಿ“
–ಸಾಹೀರ್
ಸಮಯವನ್ನೂ ತೋರಿಸುವ ‘ಗಡಿಯಾರ’ ಮಾತ್ರ ನಮ್ಮದು, ಸಮಯ….!! ಇಂದಿನ ನನ್ನ ಸಮಯ ಮುಗಿಯುತ್ತಾ ಬಂದಿದೆ, ಬರಹಕ್ಕೆ ತೆರೆ ಎಳೆಯಲೆ ಬೇಕಲ್ಲವೇ. ನೀವು ನಿರಾಶರಾಗಬೇಡಿ, ನನಗೆ ಹೋಗಲು ಆಗುವುದಿಲ್ಲ. ಚೀಯರ್ ಅಫ್.. ಮತ್ತೆ ಮುಂದಿನ ಗುರುವಾರ, ನಿಮ್ಮ ಮಲ್ಲಿ… ನಿಮ್ಮ ಹೃದಯದ ಅಂಗಳದಲ್ಲಿ…!!
ಧನ್ಯವಾದಗಳು.. ಶುಭದಿನ!!
ಡಾ. ಮಲ್ಲಿನಾಥ ಎಸ್. ತಳವಾರ