ಭೂತ ಚೇಷ್ಟೆ

ಕಥಾ ಸಂಗಾತಿ

ಭೂತ ಚೇಷ್ಟೆ

ಜಿ. ಹರೀಶ್ ಬೇದ್ರೆ

ಮಾಧವಚಾರರು ಗಾಢ ನಿದ್ದೆಗೆ ಜಾರಿ ಸ್ವಲ್ಪ ಹೊತ್ತಾಗಿತ್ತು , ಯಾರೋ ಮುಂಬಾಗಿಲನ್ನು ಜೋರಾಗಿ ಬಡಿಯುವ ಸದ್ದು ಕೇಳಿ ಧಡಕ್ಕನೆ ಎದ್ದು ಕೂತು ಯಾರದೂ ಬಂದೇ ಎಂದು ಅಲ್ಲಿಂದಲೇ ಕೂಗಿದರು.  ಆ ಸದ್ದಿಗೆ ಮಕ್ಕಳೊಂದಿಗೆ ಪಕ್ಕದ ರೂಮಿನಲ್ಲಿ ಮಲಗಿದ್ದ ಆಚಾರರ ಹೆಂಡತಿ ಶ್ರೀವಲ್ಲಿಯೂ ಎದ್ದು ಬಂದರು.  ಆಚಾರರು ಬಂದೆ ಬಂದೆ ಎಂದು ಎಷ್ಟು ಕೂಗಿಕೊಂಡರು ಹೊರಗಡೆ ಬಾಗಿಲು ಬಡಿಯುವುದು ನಿಂತಿರಲಿಲ್ಲ.  ಆಚಾರರು ಇನ್ನೇನು ಬಾಗಿಲು ತೆಗೆಯಲು ಮುಂದಾಗಬೇಕು ಆಗ ಶ್ರೀವಲ್ಲಿ ತಡೆದು, ಮೊದಲು ಹೊರಗಡೆಯ ಲೈಟ್ ಹಾಕಿ, ಕಿಟಕಿಯಿಂದ ಯಾರೆಂದು ನೋಡಿ ಎಂದರು.  ತಕ್ಷಣ ಆಚಾರರಿಗೂ ಕಳೆದ ತಿಂಗಳಷ್ಟೇ ಹತ್ತಿರದ ಮನೆಯೊಂದಕ್ಕೆ ದರೋಡೆಕೋರರು ನುಗ್ಗಿದ ನೆನಪು ಹಸಿರಾಗಿ ಕೈಕಾಲು ನಡುಗತೊಡಗಿತು.  ಇದರಿಂದ ಹೊರಗಿನ ಲೈಟ್ ಹಾಕುವ ಬದಲು ನಿಂತಲ್ಲೇ ದೇವರ ಪ್ರಾರ್ಥನೆ ಮಾಡತೊಡಗಿದರು. ಸ್ವಲ್ಪ ಹೊತ್ತಲ್ಲೇ ಬಾಗಿಲು ಬಡಿಯುವುದು ನಿಂತು ಮೌನ ಆವರಿಸಿತು.

ಮಾಧವಚಾರರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು. ಇವರಿಗೆ ಇಬ್ಬರು ವಯಸ್ಸಿಗೆ ಬಂದ ಹೆಣ್ಣುಮಕ್ಕಳಿದ್ದಾರೆ.  ತಮ್ಮ ಕಾಲೇಜಿನ ಸಹೋದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಇವರು ಬಹಳ ಅಚ್ಚುಮೆಚ್ಚು. ಎಲ್ಲರೊಂದಿಗೆ ನಗುನಗುತ್ತಾ, ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಬೇರೆಯುವ ವ್ಯಕ್ತಿ.  ಕಾಲೇಜಿಗೆ ಹೋಗಿಬರಲು ಅನುಕೂಲವಾಗಲೆಂದು ಹತ್ತಿರದಲ್ಲೇ ಮನೆ ಮಾಡಿದ್ದರು.  ಆ ಮನೆಗೆ ಬಂದು ಸುಮಾರು ವರ್ಷಗಳೇ ಆಗಿದ್ದವು. ಯಾವತ್ತೂ ಈ ದಿನ ಆದಂತ ಅನುಭವ ಆಗಿರಲಿಲ್ಲ.  ಬೆಳಿಗ್ಗೆ ಹೆದರುತ್ತಲೇ ಬಾಗಿಲು ತೆರೆದು ನೋಡಿದಾಗ, ಚಿಲಕ ಜೋರಾಗಿ ತಟ್ಟಿದ್ದರಿಂದ ಇತ್ತಿಚ್ಚೆಗಷ್ಟೆ ಮಾಡಿಸಿದ ಬಣ್ಣ ಕಿತ್ತು ಹೋಗಿತ್ತು. ಇದನ್ನು ನೋಡಿ ಏನು ಮಾಡಬೇಕೆಂದು ತಿಳಿಯದೆ ಎಂದಿನಂತೆ ಕಾಲೇಜಿಗೆ ಹೋಗಿ ಬಂದರು. ಇದಾದ ಎರಡು ದಿನ ಅದೇ ಯೋಚನೆಯಲ್ಲಿ ಇದ್ದವರು ನಂತರ ಮರೆತು ಮಾಮೂಲಿನಂತಾದರು. 

ಮಾಧವಚಾರರು ಮತ್ತು ಮನೆಯವರು ಈ ಘಟನೆಯನ್ನು ಮರೆತಿರುವಾಗಲೇ ಮತ್ತೆ ಅದೊಂದು ರಾತ್ರಿ , ಕಾರು ನಿಲ್ಲಿಸಲು ಮನೆಯ ಪಕ್ಕದಲ್ಲಿ ಮಾಡಿಸಿದ ತಗಡಿನ ಶೆಡ್ಡಿನ ಮೇಲೆ ಕಲ್ಲುಗಳು ಬಿದ್ದು ಸದ್ದಾಗ ತೊಡಗಿತು. ಆಚಾರರಿಗೆ ಹೊರಹೋಗಿ ನೋಡುವ ಧೈರ್ಯ ಸಾಲದೆ, ದೇವರು ಪ್ರಾರ್ಥನೆ ಮಾಡತೊಡಗಿದರು.   ಇದೂ ಸ್ವಲ್ಪ ಹೊತ್ತಿನ ನಂತರ ನಿಂತು ಹೋಯಿತು. ಬೆಳಿಗ್ಗೆ ನೋಡಿದಾಗ ತಗಡಿನ ಮೇಲೆ ಕಲ್ಲುಗಳು ಬಿದ್ದಿದ್ದವು ಆದರೆ ಕಾರಿಗೆ ಏನೂ ಆಗಿರಲಿಲ್ಲ.  ಇದು ಆಚಾರರ ಮನಸ್ಸಿನಲ್ಲಿ ನೂರು ಪ್ರಶ್ನೆಗಳನ್ನು ಹುಟ್ಟುಹಾಕ್ಕಿತ್ತು. ಇದನ್ನೇ ಸಹೋದ್ಯೋಗಿಗಳ ಜೊತೆ ಹಂಚಿಕೊಂಡಾಗ, ಒಬ್ಬರು ಪೋಲಿಸ್ ಕಂಪ್ಲೆಂಟ್ ಕೊಡಲು ಹೇಳಿದರೆ ಮತ್ತೊಬ್ಬರು ಮೊದಲು ಮನೆಯ ಸುತ್ತ ಸಿ.ಸಿ. ಕ್ಯಾಮೆರಾ ಹಾಕಿಸಲು ಹೇಳಿದರು, ಮಗದೊಬ್ಬರು ನಿನ್ನೆ ಅಮಾವಾಸ್ಯೆ ಹಾಗಾಗಿ ಭೂತ ಚೇಷ್ಟೆಯೂ ಇರಬಹುದು ಎಂದರು. ಹೀಗೆ ಒಬ್ಬೊಬ್ಬರು ಒಂದೊಂದು ಸಲಹೆ ನೀಡಿದರೆ ಹೊರತು ಆಚಾರರ ಮನಸ್ಸಿಗೆ ಸಮಾಧಾನ ತರಲಿಲ್ಲ. 

ಇದಾದ ಒಂದು ತಿಂಗಳು ಮತ್ತೆ ಯಾವ ಸಮಸ್ಯೆಯೂ ಎದುರಾಗಲಿಲ್ಲ. ಆದರೆ ಈ ಬಾರಿ ಹಿತ್ತಲ ಕಡೆ ಹೆಂಚಿನ ಮೇಲೆ ಕಲ್ಲುಗಳು ಬೀಳತೊಡಗಿದವು.  ಆಚಾರರಿಗೆ ಆ ಕ್ಷಣಕ್ಕೆ  ಸಹೋದ್ಯೋಗಿಯೊಬ್ಬರು ಹೇಳಿದ ಭೂತ ಚೇಷ್ಟೆಯ ನೆನಪಾಗಿ ಹೆಂಡತಿಗೆ, ಇವತ್ತು ಅಮಾವಾಸ್ಯೆಯೇ ಎಂದು ಕೇಳಿದರು. ಅದಕ್ಕವರು ಹೌದು, ಏಕೆಂದು ಕೇಳಿದರು. ಇದಕ್ಕೆ ಏನೂ ಹೇಳದೆ ದೇವರ ಪ್ರಾರ್ಥನೆ ಮಾಡತೊಡಗಿದರು.

ಬೆಳಿಗ್ಗೆ ಎದ್ದೊಡನೆ ಸ್ನಾನ, ಪೂಜೆಗಳನ್ನು ಮುಗಿಸಿ ತಿಂಡಿಯನ್ನು ತಿನ್ನದೆ ಸೀದಾ ತಮ್ಮ ಮನೆಯ ಪೂಜೆ ಪುನಸ್ಕಾರಗಳಿಗೆ ಬರುತ್ತಿದ್ದ ಭಟ್ಟರ ಬಳಿ ಹೋಗಿ ಎಲ್ಲಾ ವಿಷಯ ತಿಳಿಸಿದರು. ಎಲ್ಲವನ್ನೂ ಕೇಳಿದ ಭಟ್ಟರು, ನಿಮ್ಮ ಮನಸ್ಸಿಗೆ ಸಮಾಧಾನ ಆಗುತ್ತದೆ ಎಂದರೆ ಒಂದು ಶಾಂತಿ ಹೋಮ ಮಾಡಿಸಿ ಎಂದರು.  ಅಂದೇ ಭಟ್ಟರ ಬಳಿ  ಮಾತನಾಡಿ ಕಾಲೇಜಿಗೆ ರಜೆ ಹಾಕಿ ಅವರು ಹೇಳಿದ ಶಾಂತಿ ಹೋಮವನ್ನು ಮಾಡಿಸಿದರು.  

ಮನೆಯಲ್ಲಿ ಹೋಮ ಮಾಡಿಸಿದ ನಂತರ ಮನಸ್ಸಿಗೆ ನಿರಾಳವಾಗಿ ಸಮಾಧಾನದಿಂದ  ಕಾಲೇಜಿಗೆ ಹೋದರು. 

ಹೋಮ ಮಾಡಿಸಿದ ನಂತರ ಮತ್ತೆ ಯಾವತ್ತೂ ಆಚಾರ್ಯರ ಮನೆಯ ಮೇಲೆ ಕಲ್ಲುಗಳು ಬೀಳಲಿಲ್ಲ. ಇದೇ ವಿಷಯವಾಗಿ ಅದೊಂದು ದಿನ ಬಿಡುವಿನ ವೇಳೆಯಲ್ಲಿ ಸಹೋದ್ಯೋಗಿಗಳೊಂದಿಗೆ  ಮಾತನಾಡುತ್ತಿರುವಾಗ ಯಾವುದೋ ವಿಚಾರಕ್ಕೆ ಕಾಲೇಜಿಗೆ ಬಂದ  ಸಂತೋಷ್ ಎನ್ನುವ ಹಳೆಯ ವಿದ್ಯಾರ್ಥಿ ಆಚಾರರಿಗೆ, ಸರ್ ನೀವೂ ದೆವ್ವ ಭೂತ ಎಲ್ಲಾ ನಂಬುತ್ತೀರಾ ಎಂದ. ಸಮಯ ಬಂದಾಗ, ಅನುಭವ ಆದಾಗ ಎಲ್ಲಾ ನಂಬಲೇಬೇಕು ಎಂದರು. ಈ ಮಾತಿಗೆ ಸಂತೋಷ್ ಏನನ್ನು ಹೇಳದೆ ಅಲ್ಲಿಂದ ನಗುತ್ತಾ ಹೋದ.

ಐದಾರು ವರ್ಷಗಳ ಹಿಂದಿನ ಮಾತು,  ಸಂತೋಷ ಕಾಲೇಜಿಗೆ ಬರುವಾಗ ಕೊರಳಿಗೆ ನಿಂಬೆಹಣ್ಣನ್ನು ದಾರದಲ್ಲಿ ಕಟ್ಟಿಕೊಂಡು ಬಂದಿದ್ದ. ಇದನ್ನು ನೋಡಿ ಅವನ ಗೆಳೆಯರು ಅವನಿಗೆ ರೇಗಿಸುತ್ತಿದ್ದರು. ಅದೇ ಸಮಯದಲ್ಲಿ ಅಲ್ಲಿಂದ ಹಾದು ಹೋಗುತ್ತಿದ್ದ ಮಾಧವಚಾರರನ್ನು ನೋಡಿ, ಸರ್ ನೀವಾದ್ರೂ ಇವರಿಗೆ ಹೇಳಿ, ಹಗಲೆಲ್ಲ ಮೈಮೇಲೆ ದಾಟುಗುಳ್ಳೆ ಆಗುತ್ತಿದೆ ಎಂದು ಅಮ್ಮ ಮಾರಿಗುಡಿಯಲ್ಲಿ ಮಂತ್ರಿಸಿ ತಂದ ನಿಂಬೆಹಣ್ಣು ಕಟ್ಟಿಕೊಂಡು ಬಂದರೆ ಇವರು ಟ್ರಾನ್ಸಿಸ್ಟರ್ ಎಂದು ಕಾಡಿಸುತ್ತಿದ್ದಾರೆ ಎಂದ. ಅದಕ್ಕೆ ಆಚಾರರು, ಏ ಪೆದ್ದ ಮೈಯಲ್ಲಿ ರಕ್ತ ಕೆಟ್ಟಿದ್ದಾರೆ ಮೈಮೇಲೆ ಗುಳ್ಳೆ ಆಗುತ್ತೆ. ಡಾಕ್ಟರ್  ಹತ್ತಿರ ಹೋಗು, ನಿಂಬೆಹಣ್ಣು ಕಟ್ಟಿಕೊಂಡರೆ ಹೋಗೋಲ್ಲ ಎಂದು ಮುಂದೆ ನಡೆದರು. ಈ ಮಾತು ಕೇಳಿ ಅವನ ಗೆಳೆಯರು ಜೋರಾಗಿ ನಗತೊಡಗಿದರು. ಅದರಲ್ಲೂ ಸಂತೋಷ ಮನಸಲ್ಲೇ ಪ್ರೀತಿಸುತ್ತಿದ್ದ ಶರಾವತಿ ಎಲ್ಲರಿಗಿಂತ ಜೋರಾಗಿ ನಕ್ಕಿದ್ದು ನೋಡಿ ಅವನಿಗೆ ಇನ್ನಿಲ್ಲದ ಅವಮಾನ ಆದಂತೆ ಆಗಿತ್ತು. ಇದರಿಂದ ಸಂತೋಷ, ಮಾಧವಚಾರರಿಗೆ ಸರಿಯಾಗಿ ಪಾಠ ಕಲಿಸಬೇಕೆಂದು, ಪ್ರತಿ ಅಮಾವಾಸ್ಯೆಯಂದು ಅವನೇ ಬಂದು ಮನೆಯ ಮೇಲೆ ಕಲ್ಲು ತೂರಿ ಹೋಗಿದ್ದ. ಇದು ತಿಳಿಯದ ಮಾಧವಚಾರರು ಭೂತ ಚೇಷ್ಟೆಯೆಂದು ಹಣ ಖರ್ಚು ಮಾಡಿ ಶಾಂತಿ ಹೋಮ ಮಾಡಿಸಿದ್ದರು.  ಈ ವಿಷಯ ತಿಳಿದ ಸಂತೋಷನಿಗೆ ತಾನು ತಪ್ಪು ಮಾಡಿದೆ, ಹೀಗೆ ಮಾಡಬಾರದಿತ್ತು ಎಂದು ಪಶ್ಚಾತ್ತಾಪ ಪಡುವಂತಾಯಿತು.  ತಾನು ಆತುರದಲ್ಲಿ ತೆಗೆದುಕೊಂಡ ನಿರ್ಧಾರ ಪಾಠ ಹೇಳಿಕೊಟ್ಟ ಗುರುಗಳಿಗೆ ತೊಂದರೆ ನೀಡಿದೆ, ಇನ್ನೆಂದೂ ಅವರಿಗೆ ಅಲ್ಲ ಯಾರಿಗೂ ತೊಂದರೆ ಕೊಡಬಾರದೆಂದು ನಿರ್ಧರಿಸಿದ.


Leave a Reply

Back To Top