ಅಂಕಣ ಬರಹ

ಗಜಲ್ ಲೋಕ

ದೊಡಮನಿಯವರ ಗಜಲ್ ಮಲ್ಲಿಗೆ

ತೋಟದಲ್ಲೊಂದು ಸುತ್ತು

ಎಲ್ಲರಿಗೂ ನಮಸ್ಕಾರಗಳು…

ಇಂದು ತಾವೆಲ್ಲರೂ ನಮ್ಮೊಂದಿಗಿರುವ ಓರ್ವ ಗಜಲ್ ಗೋ ಅವರ ಪರಿಚಯಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೀರಿ ಅಲ್ಲವೇ, ನನಗೆ ಗೊತ್ತು..!! ತಮ್ಮ ನಿರೀಕ್ಷೆಯಂತೆ ಗಜಲ್ ಸಾಧಕರ ಗಜಲ್ ಪರಿಮಳದೊಂದಿಗೆ ತಮ್ಮ ಮುಂದೆ ಹಾಜರಾಗಿರುವೆ. ಇನ್ನೇಕೆ ತಡ, ಜೊತೆ ಜೊತೆಯಾಗಿ ಹೆಜ್ಜೆ ಹಾಕೋಣ ಬನ್ನಿ ; ಗಜಲ್ ಉದ್ಯಾನವನದಲ್ಲಿ…!!

ನನಗೆ ನನ್ನದೇ ನೆರಳು ಎಷ್ಟೋ ಸಲ ಬೇಜಾರು ಮಾಡಿದೆ

ಇದನ್ನೇ ಜೀವನ ಎನ್ನುವುದಾದರೆ ಹೀಗೆ ಬದುಕುವೆ

                               –ಸಾಹಿರ್ ಲುಧಿಯಾನ್ವಿ

             ‘ಮರುಭೂಮಿ’ ಎಂದಾಗ ನಮ್ಮ ಮನದಲಿ ಚಿಗುರುವ ಭಾವವೆಂದರೆ ದಹಿಸುತ್ತಿರುವ ಕೆಂಪು ಸೂರ್ಯ, ಬರಡಾದ ಭೂಮಿ ; ಬೇಗೆಯ ಅಸಹನೀಯ ಅನುಭವ. ಆದರೆ ಆ ಮರುಭೂಮಿಯಲ್ಲಿಯೆ ಬೆಳೆಯುವ ಕಲ್ಲಂಗಡಿ, ಖರ್ಜೂರ… ಆರೋಗ್ಯಕ್ಕೆ ಹಿತಕರ. ಅಂತಹ ಮರುಭೂಮಿಯ ಓಯಾಸಿಸ್ ಎಂದರೆ ಮನುಕುಲದ ತುಟಿಯಂಚಿನಲ್ಲಿ, ಮುಷ್ಟಿ ಗಾತ್ರದ ಹೃದಯದಲ್ಲಿ ಆವರಿಸಿರುವ ಗಜಲ್. ಇದು ಬಿಸಿಲು ನಾಡಿನಲ್ಲಿ ಉದಯಿಸಿದ್ದರೂ ಜಗತ್ತಿಗೆಲ್ಲ ಆಲದ ಮರದಂತೆ ನೆರಳನ್ನು ನೀಡುತ್ತ ಬಂದಿದೆ. ಪರ್ಷಿಯನ್ ಸಂಸ್ಕೃತಿಯಂತೆ ಎಲ್ಲರನ್ನೂ ಪ್ರೀತಿಸುತ್ತ ಎಲ್ಲರೊಂದಿಗೆ ಬೆರೆಯುತ್ತ ಬಂದಿದೆ. ಈ ಅನುಪಮ ಕಾರ್ಯಕ್ಕೆ ಹೃದಯದ ಭಾಷೆ ಉರ್ದು ಮುನ್ನುಡಿ ಬರೆದದ್ದು ಒಂದು ವಿಶೇಷ. ಜಗತ್ತಿನ ಉಳಿದೆಲ್ಲ ಸಾಹಿತ್ಯ ಪ್ರಕಾರಗಳಿಗಿಂತ ‘ಗಜಲ್’ ಹೆಚ್ಚು ಜನರ ಒಡನಾಡಿಯಾಗಿ ಬೆಳೆದು ಬಂದಿದೆ. ಇದರ ಮೂಲ ಸಾಮಗ್ರಿ ಎಂದರೆ ಪ್ರಮಾಣಿಕ ಜ್ಞಾನ. ಗಜಲ್ ಗೋ ಸ್ವಾನುಭೂತಿಯೊಂದರಿಂದಲೆ ಎಲ್ಲವನೂ ಪಡೆಯಲು ಸಾಧ್ಯವಿಲ್ಲ. ತನ್ನ ಸ್ನೇಹಿತರಿಂದ ಪಡೆಯಬಹುದು, ಅರಿಷಡ್ವರ್ಗಗಳ ಪ್ರಬಲ ಮೋಹಕ್ಕೆ ಒಳಗಾಗಿ ವಿನಾಶದತ್ತ ಮುಖ ಮಾಡಿದ ಇತರರಿಂದಲೂ ಪಡೆಯಲು ಸಾಧ್ಯವಿದೆ. ಇಷ್ಟೇ ಅಲ್ಲದೆ ಕನಸಿನಿಂದಲೂ ಪಡೆಯಲು ಸಾಧ್ಯ. ಗಜಲ್ ಜನಪ್ರಿಯತೆ ಎನ್ನುವ ಭೂತಕ್ಕೆ ಹೆದರದೆ, ಅದನ್ನು ಸಂತುಷ್ಟಿಗೊಳಿಸುವ ಚಪಲತೆಗೆ ಬೀಳದೆ, ತನ್ನ ಉದಾತ್ತ ದರ್ಶನದಲ್ಲಿ ಮಾತ್ರ ವಿಧೇಯವಾಗಿ ಜಾಗತಿಕ ಸಾಂಸ್ಕೃತಿಕ ಲೋಕವನ್ನೇ ಮೂಕವಿಸ್ಮಿತರನ್ನಾಗಿ ಮಾಡಿದೆ. ಇದಕ್ಕಾಗಿ ಗಜಲ್ ಆಯ್ದುಕೊಂಡ ವಿಷಯವಸ್ತುವೆಂದರೆ ಪ್ರೀತಿ, ಪ್ರೇಮ, ಪ್ರಣಯ, ವಿರಹ, ನಿರೀಕ್ಷೆ, ತೊಳಲಾಟ, ಮದಿರೆ, ಮಧು ಶಾಲೆ..!! ಇವೆಲ್ಲ ಚಿರ ಯೌವ್ವನದ ಅವತಾರಗಳು. ತಲೆತಲಾಂತರದಿಂದ ಈ ವಿಷಯಗಳು ಚಾಲ್ತಿಯಲ್ಲಿದ್ದರೂ ಯಾರಿಗೂ ಬೇಸರ ಅನಿಸದೆ ಇರೋದು ಇವುಗಳ ಅಕ್ಷಯ ಪ್ರಸ್ತುತತೆಯ ದ್ಯೋತಕವಾಗಿದೆ. ಇಂದು ಈ ಎಲ್ಲ ವಿಷಯಗಳೊಂದಿಗೆ ಗಜಲ್ ಸಾಹಿತ್ಯ ಪ್ರಕಾರವು ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಮಾನಸಿಕದಂತಹ ಹತ್ತು ಹಲವಾರು ವೈವಿಧ್ಯಮಯ ಸಾಂಸ್ಕೃತಿಕ ಆಯಾಮಗಳೊಂದಿಗೆ ಮುಖಾಮುಖಿಯಾಗುತ್ತ, ಅನುದಿನವೂ-ಅನುಕ್ಷಣವೂ ಅಸಂಖ್ಯಾತ ಗಜಲ್ ಗೋ ಅವರ ಉದಯಕ್ಕೆ ಕಾರಣವಾಗುತಿದೆ. ಅಂತಹ ಗಜಲ್ ಗೋ ಅವರಲ್ಲಿ ಶ್ರೀಮತಿ ಲಕ್ಷ್ಮೀ ದೊಡಮನಿ ಅವರೂ ಉಲ್ಲೇಖನೀಯರು!

         ಶ್ರೀ ಮಲ್ಲಿಕಾರ್ಜುನ ದೊಡಮನಿ ಹಾಗೂ ಶ್ರೀಮತಿ ಶಿವಲಿಂಗಮ್ಮ ದೊಡಮನಿ ದಂಪತಿಗಳ ಮಗಳಾದ ಲಕ್ಷ್ಮೀ ದೊಡಮನಿಯವರು ಅಕ್ಕಲಕೋಟ ತಾಲ್ಲೂಕಿನ ನಾಗಣಸೂರಿನ ಜಿ.ಪ.ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿ

B.A.,D.ed.,M.A. ಪದವಿಯನ್ನು ಮುಗಿಸಿದ್ದಾರೆ. ಇನ್ನೂ ವಿಶೇಷವೆಂದರೆ ತಾವು ಕಲಿತ, ಆಡಿ-ಬೆಳೆದ ಶಾಲೆಯಲ್ಲಿಯೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ನೆಲೆಸಿರುವ ಶ್ರೀಯುತರು “ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ” ಎನ್ನುವ ಗಡಿನಾಡು ಭಾಗದ ಸಂಸ್ಥೆಯ ಸದಸ್ಯೆಯಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿಯ ಪ್ರಸಾರಕ್ಕಾಗಿ ದುಡಿಯುತ್ತಿರುವುದು, ಅದರೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿ ಕನ್ನಡಮ್ಮನ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಇದರ ಒಂದು ಭಾಗವಾಗಿ ಕನ್ನಡ ಮತ್ತು ಮರಾಠಿ ಭಾಷೆಗಳ ನಡುವೆ ಸೌಹಾರ್ದಯುತವಾಗಿ ಅನುವಾದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ‘ಚಾಣಕ್ಯ ನೀತಿ’,

‘ಪರಂಪರಾಗತ ಪದಾರ್ಥಗಳ ವೈಶಿಷ್ಟ್ಯತೆ’, ಎಂಬ ಎರಡು ಪುಸ್ತಕಗಳನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರೊಂದಿಗೆ ಸೃಜನಾತ್ಮಕ ಕ್ರಿಯೆಯಲ್ಲೂ ಭಾಗಿಯಾಗಿದ್ದಾರೆ. ಅದುವೆ ಗಜಲ್ ಸಂಕಲನ, ‘ಅರಳು ಮಲ್ಲಿಗೆ’, ಇದು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನಸಹಾಯ ಪಡೆದ ಕೃತಿಯಾಗಿರುವುದು ಕೃತಿಯ ಹೆಗ್ಗಳಿಕೆಯಾಗಿದೆ!

         ‘ಸಾಹಿತ್ಯ’ ಎನ್ನುವಂತದ್ದು ಒಂದು ಸಾಮಾಜಿಕ ವ್ಯವಸ್ಥೆ. ಸಾಮಾಜಿಕ ಸೃಷ್ಟಿಯ ಕೂಸಾದ ಭಾಷೆಯನ್ನು ತನ್ನ ಮಾಧ್ಯಮವನ್ನಾಗಿ ಬಳಸಿಕೊಂಡು ಸಮಾಜವನ್ನು ಪ್ರತಿನಿಧಿಸುತ್ತ ಮನುಕುಲಕ್ಕೆ ತಂಬೆಲರಾಗಿ ಪರಿಣಮಿಸಿದೆ. ಮಾನವನ ಚೈತನ್ಯವನ್ನು, ಉತ್ಸಾಹವನ್ನು ಅವನ ಬದುಕಿನ ವಿಸ್ತಾರವನ್ನು, ಬದುಕಿನ ಪ್ರೀತಿಯನ್ನು ಮೂಡಿಸುವುದೇ ಸಾಹಿತ್ಯದ ಪ್ರಮುಖ ಆಶಯವಾಗಿದೆ. ಸಾಹಿತ್ಯದ ಹಲವು ಬಣ್ಣಗಳಲ್ಲಿ ‘ಕಾವ್ಯ’ ತುಂಬಾ ಪ್ರಮುಖವಾಗಿದ್ದು, ಹೃದಯದ ಭಾಷೆಯನ್ನು ಮೈಗೂಡಿಸಿಕೊಂಡು ಬಂದಿದೆ. ಈ ಕಾವ್ಯವು ಪ್ರಪಂಚದಾದ್ಯಂತ ಹಲವು ಸ್ವರೂಪಗಳೊಂದಿಗೆ ಜೀವಂತವಾಗಿದೆ. ಆ ವೈವಿಧ್ಯಮಯ, ಅನುಪಮ ರೂಪಗಳಲ್ಲಿ ‘ಗಜಲ್’ ಅಗ್ರಗಣ್ಯವಾಗಿದೆ. ಸೂಫಿಸಂ ಅನ್ನು ತನ್ನ ಒಡಲೊಳಗೆ ಕಾಪಿಟ್ಟುಕೊಂಡು ಬಂದಿರುವ ಗಜಲ್, ಗುರುವನ್ನು ದೈವವೆಂದೂ ತಂದೆಯೆಂದೂ ಪ್ರಣಯಿಯೆಂದೂ ಪತಿಯೆಂದೂ ಒಡಮೂಡಿಸಿಕೊಂಡು ಬಂದಿದೆ. ಪರಕೀಯ ಸಂಸ್ಕೃತಿಯೊಂದರ ಬಗೆಗಿನ ತಿಳುವಳಿಕೆ, ಕುತೂಹಲ-ಇವುಗಳೊಂದಿಗೆ ಆ ಸಂಸ್ಕೃತಿಯನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನ ಕನ್ನಡದಲ್ಲಿ ಸತತವಾಗಿ ನಡೆಯುತ್ತಿದೆ. ‘ಮಲ್ಲಿಗೆ’ ಎಂಬ ತಖಲ್ಲುಸ್ ನಾಮದೊಂದಿಗೆ ಗಜಲ್ ಬರೆಯುವ ಲಕ್ಷ್ಮೀ ದೊಡಮನಿಯವರ ಗಜಲ್ ಗಳಲ್ಲಿ ಸಾಮಾಜಿಕ ಕಳಕಳಿ, ಸಾಮಾಜಿಕ ಸಂವೇದನೆ, ಸ್ತ್ರೀ ಸಂವೇದನೆ, ತಣ್ಣನೆಯ ಪ್ರತಿರೋಧ, ಮನುಷ್ಯನ ತಾಕಲಾಟಗಳ ಜೊತೆ ಜೊತೆಗೆ ಪ್ರೀತಿ, ಪ್ರೇಮ, ಪ್ರಣಯ, ವಿರಹದಂತ ಎವರ್ ಗ್ರೀನ್ ವಿಷಯಗಳನ್ನೂ ಕಾಣುತ್ತೇವೆ.

ಬಿದ್ದವರನು ಎತ್ತಿ ಹಿಡಿದರೆ ನಿನ್ನದು ಬಸವಪಥ

ದೀನರಲಿ ದೇವನ ಕಂಡರೆ ನಿನ್ನದು ಬಸವಪಥ

ಈ ಮೇಲಿನ ಷೇರ್ ತುಂಬಾ ಸರಳವಾಗಿ ಬಸವಾದಿ ಶರಣರ ಪ್ರಗತಿಪರ ವಿಚಾರಗಳನ್ನು ಪ್ರವಹಿಸುತ್ತಿದೆ. ತಮ್ಮ ಪಾಡಿಗೆ ತಾವು ಹೋಗುವವರನ್ನು ಬೀಳಿಸಲು ಹೊಂಚು ಹಾಕುವವರ ಮಧ್ಯೆ ಬಿದ್ದವರನು ಎತ್ತಿ ಹಿಡಿಯಲು ಕಲಿಸುವುದು, ದೀನ-ದುರ್ಬಲರಲ್ಲಿ ದೇವರನ್ನು ಕಾಣಬೇಕು ಎಂಬುದನ್ನು ಬಸವಪಥ ಎಂದು ಗಜಲ್ ಗೋ ಅವರು ಪ್ರತಿಪಾದಿಸಿದ್ದಾರೆ.

          ಹೆಣ್ಣಿನ ರಕ್ಷಣೆ ಬಹು ತೊಡಕಾಗಿರುವ ವಿಚಾರ. ಪುರುಷ ಏಕಕಾಲಕ್ಕೆ ಹೆಣ್ಣನ್ನು ರಕ್ಷಿಸುವ, ಭಕ್ಷಿಸುವ ಸಮಯಸಾಧಕ. ಹೆಣ್ಣನ್ನು ತಮ್ಮ ಸರಿ ಸಮಾನವಾಗಿ ನೋಡುವ ಮಾತಿರಲಿ, ಅವಳಿಗೂ ಒಂದು ಹೃದಯವಿದೆ, ಅವಳಿಗೂ ಒಂದು ಕನಸ್ಸಿದೆ ; ಅವಳಿಗೂ ಒಂದು ಬದುಕಿದೆ ಎಂದು ತಿಳಿಯುವವರೆ ಇಲ್ಲದಂತಾಗಿದೆ. ತಾಯಿಯ ಗರ್ಭ ಹಾಗೂ ಗೋರಿ ಎರಡು ಸ್ಥಳಗಳು ಹೆಣ್ಣಿಗೆ ಸುರಕ್ಷಿತ ಎನ್ನಲಾಗುತಿತ್ತು. ಆದರೆ ವೈಜ್ಞಾನಿಕ ಪ್ರಗತಿಯಿಂದಾಗಿ ಗರ್ಭವೂ ಅವಳಿಗೆ ಸುರಕ್ಷಿತವಾಗಿ ಉಳಿದಿಲ್ಲ! ಪುರುಷ ಪ್ರಧಾನ ಸಮಾಜ ಹೆಣ್ಣನ್ನು ಭೋಗದ ವಸ್ತು, ತಮ್ಮ ಆಟದ ಗೊಂಬೆಯಂತೆಯೆ ಬಳಸಿಕೊಂಡು ಬರುತ್ತಿರುವುದಕ್ಕೆ ನಮ್ಮಲ್ಲಿ ಭವ್ಯ ಪರಂಪರೆಯೇ ಇದೆ. ಈ ಶೋಷಣೆಯ ಭಾರದಿಂದ ಸ್ತ್ರೀ ಸಂಕುಲ ಯಾವಾಗ ಪಾರಾಗುವುದು ಎಂಬುದರ ಕಾಳಜಿ ಶ್ರೀಮತಿ ಲಕ್ಷ್ಮೀ ದೊಡಮನಿ ಅವರ ಗಜಲ್ ಗಳಲ್ಲಿ ಕಾಣುತ್ತೇವೆ. ಅದಕ್ಕೊಂದು ಉದಾಹರಣೆ ಇಲ್ಲಿ ಗಮನಿಸಬಹುದು.

ಶ್ರೇಷ್ಠ ಸಂಸ್ಕೃತಿಯ ವಾರಸುದಾರರೆಂದು ಬೀಗಿದರೇನುಮಲ್ಲಿಗೆ

ಸನ್ಯಾಸಿಗಳೂ ಭೋಗ ಬಯಸುವುದು ಕಂಡು ತಲೆ ತಗ್ಗಿಸಿದ್ದೇನೆ

ಈ ಷೇರ್ ನಮ್ಮ ಸಾಮಾಜಿಕ ವ್ಯವಸ್ಥೆಯ ವಿಡಂಬನೆಯಾಗಿದೆ. ಇಲ್ಲಿ ಬೀಗುವುದಕ್ಕಿಂತ ಬಾಗುವುದು ಮುಖ್ಯ. ಸಾಮಾನ್ಯವಾಗಿ ‘ಸನ್ಯಾಸ’ ಎಂದರೆ ಪಂಚೇಂದ್ರಿಯಗಳನ್ನು ನಿಯಂತ್ರಿಸುವುದು, ಅರಿಷಡ್ವರ್ಗಗಳನ್ನು ಗೆಲ್ಲುವುದು ಎಂದು ಹೇಳಲಾಗುತ್ತದೆ.‌ ಆದರೆ ಸನ್ಯಾಸಿಯ ಸೋಗಿನಲ್ಲಿರುವ ಚಪಲ ಚನ್ನಿಗರಾಯರ ಕುರಿತು ಗಜಲ್ ಗೋ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

        ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳ ಹುಡುಕಾಟ, ಶರಣರ-ಸಂತರ-ದಾರ್ಶನಿಕರ ಪ್ರಭಾವ ಶ್ರೀಯುತರ ಗಜಲ್ ಗಳಲ್ಲಿ ಹೇರಳವಾಗಿ ದೊರೆಯುತ್ತವೆ. ಇವರಿಂದ ಗಜಲ್ ಸಾರಸ್ವತ ಲೋಕ ಮತ್ತಷ್ಟು, ಮೊಗೆದಷ್ಟೂ ಸಿರಿತನದಿಂದ ಕಂಗೊಳಿಸಲಿ ಎಂದು ಶುಭ ಕೋರುತ್ತೇನೆ.

ನನ್ನ ಯಾವ ಅಂಗಾಂಗವು ಪ್ರೇಮದಿಂದ ಹೊರತಾಗಿಲ್ಲ

ನಿಸ್ಸಂದೇಹವಾಗಿ, ನನ್ನ ಪ್ರತಿ ಅಂಗವು ಹೃದಯವಾಗಿದೆ

                           –ಸಯ್ಯದ್ ಮಹ್ಮದ್ ಹುಸೇನಿ ಗೇಸುದರಾಜ್

       ‘ಕಾಲ ಚಕ್ರ’ ನಿರಂತರವಾಗಿ ಉರುಳುತ್ತಿದೆ ಗಜಲ್ ಪ್ರೇಮಿಗಳೇ. ಕಾಲದ ಮುಂದೆ ಎಲ್ಲರೂ ಮಂಡಿಯೂರಲೆ ಬೇಕಲ್ವಾ.. ಮುಂದಿನ ಗುರುವಾರ ಮತ್ತೆ ಬರುವೆ, ನಿಮ್ಮೊಂದಿಗೆ ಗಜಲ್ ಗೋ ಒಬ್ಬರ ಕುರಿತು ಅನುಸಂಧಾನಗೈಯಲು… ಧನ್ಯವಾದಗಳು.. ಶುಭದಿನ!!


ಡಾ. ಮಲ್ಲಿನಾಥ ಎಸ್. ತಳವಾರ

2 thoughts on “

Leave a Reply

Back To Top