ಅಂಕಣ ಬರಹ

“ಕಾವ್ಯದರ್ಪಣ”

ಹೇ.. ಶೂದ್ರ ತಪಸ್ವಿ

  “ನಿಲ್ಲುವುದೇ ಸಾವು

 ಚಲಿಸುವುದೇ ಬಾಳು”      

          – ಕುವೆಂಪು

“ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ.

 ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ.

 ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಜೀವವಿದೆ

 ಅದರಿಂದಲೇ ಅವುಗಳಲ್ಲಿ ಅಮೃತತ್ವದ ಸಾರವಿದೆ.

   – ಬಿ. ಎಂ. ಶ್ರೀ

ಕಾವ್ಯ ಪ್ರವೇಶಿಕೆಯ ಮುನ್ನ

 ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿರುವ ಹದಿನೆಂಟು ಮುಖ್ಯ  ಭಾಷೆಗಳಲ್ಲಿ  ಪ್ರಥಮ ಪ್ರಾಶಸ್ತ್ಯ ನೀಡಲಾಗಿರುವ ಕನ್ನಡದ ಕನ್ನಡಾಂಬೆಗೆ ಪ್ರಥಮ ಜ್ಞಾನಪೀಠ ಪ್ರಶಸ್ತಿಯ ಮುಕುಟವನ್ನು ತೊಡಿಸಿದ, ವಿಶ್ವಮಾನವ ಸಂದೇಶವನ್ನು ಪ್ರತಿಪಾದಿಸಿರುವ, ಸರ್ವೋದಯ ಮತ್ತು ಸಮನ್ವಯ ತತ್ವಗಳ ಬೋಧಕನಾದ, ದಾರ್ಶನಿಕ ಕವಿ, ಪ್ರಗತಿಪರ ಚಿಂತಕ, ನಾಡು ಕಂಡ ಅಪ್ರತಿಮ  ಕವಿಸಂತ, ಕಾದಂಬರಿಕಾರ, ನಾಟಕಕಾರ, ವರಕವಿ ಬೇಂದ್ರೆಯವರಿಂದ “ಯುಗದ ಕವಿ ಜಗದ ಕವಿ” ಎಂದು ಹಾಡಿ ಹೊಗಳಿಸಿಕೊಂಡ ಕರುನಾಡಿನ ಅದಮ್ಯ ಚೇತನ ಕುವೆಂಪುರವರು.

ಕವಿ ದೇಹ ಬಿಟ್ಟಾನು

  ಉಳಿದೀತು ಕವಿತೆ” 

 ಎಂಬ ಕವಿ ಸಿದ್ದಯ್ಯ ಪುರಾಣಿಕರ ವಚನದ ಸಾಲೊಂದನ್ನು ಓದಿದಾಗ ಕುವೆಂಪುರವರ ವಿಷಯದಲ್ಲಿ ಇದು ಸತ್ಯವೆನಿಸದಿರದು. ಕನ್ನಡ ಸಾಹಿತ್ಯ ಪರಂಪರೆಯ ಅಗಾಧ ಸಾಗರದಲ್ಲಿ ಈಜಿದ ಕವಿಗಳಿಗೆ ಲೆಕ್ಕವಿಲ್ಲ. ಆದಾಗ್ಯೂ ಅಸಂಖ್ಯ ನಕ್ಷತ್ರಗಳ ನಡುವೆ  ಸೌರಮಂಡಲದ ಒಡೆಯನಂತೆ, ಪ್ರಜ್ವಲಿಸುವ ಜ್ಯೋತಿಯಂತೆ, ಕಾಲಗತಿಯ ಹಂಗು ಮೀರಿ ಎಲ್ಲರ ಎದೆಯೊಳಗೆ ರಸಋಷಿಯಾಗಿ ಉಳಿದಿರುವ ಚೇತನವೆಂದರೆ ಅದು ಕುವೆಂಪುರವರು. “ರವಿ ಕಾಣದ್ದನ್ನು ಕವಿ ಕಂಡ” ಎಂಬ ನಾಣ್ಣುಡಿಯಂತೆ ಸಾಮಾನ್ಯತೆಯಲ್ಲೂ ಅಸಮಾನ್ಯತೆಯನ್ನು ಪ್ರದರ್ಶಿಸಿ, ವಿಭಿನ್ನವಾದ, ವಿಶಿಷ್ಟವಾದ ,ವೈಚಾರಿಕ ಚಿಂತನೆಗಳನ್ನು ಬಿತ್ತುತ್ತಾ, ಮಾನವಪ್ರೇಮ ಹಾಗೂ ಜೀವಪರ ಕಾಳಜಿಯನ್ನು ಪ್ರತಿಪಾದಿಸುತ್ತಾ, ಅಣುವಿನಲ್ಲಿ ಸಮಷ್ಟಿಯನ್ನು ಕಟ್ಟಿಕೊಡಲು ಪ್ರಯತ್ನಿಸಿದರು. ಹಾಗಾಗಿ ಇವರ ಬರಹಗಳು, ಆಶಯಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆಯುತ್ತವೆ.

“ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ” ಎನ್ನುವ ಕುವೆಂಪು ವಾಣಿ ಹಾಗೂ “ನಾನು ಹೇಳಿದೆ ಎಂದು ಒಪ್ಪಬೇಡ, ಶಾಸ್ತ್ರಗಳು ಹೇಳಿದ ಕಾರಣಕ್ಕೆ ಒಪ್ಪಬೇಡ , ನಿನ್ನನ್ನು ನೀನೇ ಪ್ರಾಯೋಗಿಕವಾಗಿ ಕೇಳಿಕೊಂಡು ನಿನ್ನ ಅನುಭವಕ್ಕೆ ಬರುವುದನ್ನು ಮಾತ್ರ ಸ್ವೀಕರಿಸು” ಎನ್ನುವ ಬುದ್ಧವಾಣಿಯ ಸಾಧ್ಯತೆಯನ್ನು ಯುವಜನತೆಗೆ ಆತ್ಮಾವಲೋಕನದ ಪ್ರತ್ಯಯವಾಗಿ ಮೂಡಿಸುವ ಧ್ಯೇಯ ಈ ವಾಕ್ಯದ್ದಾಗಿದೆ.

ಬುದ್ಧಿ ಭಾವಗಳ ವಿದ್ಯುದಾಲಿಂಗನ ಪ್ರತಿಭೆ

            – ಕುವೆಂಪು

ಭೂತಕಾಲದ ಘಟನೆಗಳನ್ನು ತಮ್ಮ ಕಾವ್ಯಶಕ್ತಿಯ ಮೂಲಕ ವರ್ತಮಾನದ ಅವಶ್ಯಕತೆಗೆ ತಕ್ಕಂತೆ ಒಗ್ಗಿಸಿಕೊಂಡು ಬರೆದಿದ್ದು ಇವರ ಕಲಾತ್ಮಕತೆಯ ಪ್ರೌಢಿಮೆಯೇ ಸರಿ. ಪ್ರತಿಯೊಬ್ಬ ವಿದ್ಯಾರ್ಥಿ ಗೌರವ ತಪಸ್ವಿ ಎಂದು ಹೇಳುತ್ತಿದ್ದ ಕುವೆಂಪು “ಮಕ್ಕಳು ಭತ್ತ ಬೆಳೆಯುವ ಗದ್ದೆಯಾಗಬೇಕೆ ಹೊರತು ಭತ್ತ ತುಂಬುವ ಚೀಲವಾಗಬಾರದು” ಎಂದು ಆಶಿಸುತ್ತಾ, ತಾವೇ ಜ್ಞಾನಾರ್ಜನೆಯಲ್ಲಿ ತೊಡಗಬೇಕೇ ವಿನಃ ಬೇರೆಯವರು ಹೇಳಿದ್ದನ್ನಷ್ಟೇ ತಲೆಗೆ ತುಂಬಿ ಕೊಳ್ಳಬಾರದೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಹಾಗಾಗಿ ಕುವೆಂಪುರವರ ಸಿದ್ಧಾಂತಗಳು ಯುವಕರನ್ನು ಸೆಳೆಯುತ್ತವೆ.

ಕವಿ ಪರಿಚಯ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಗ್ರಾಮದವರಾದ ಡಾ. ವಡ್ಡಗೆರೆ ನಾಗರಾಜಯ್ಯ ನವರು ಕರ್ನಾಟಕದ ಪ್ರಗತಿಪರ ಹೋರಾಟಗಾರರಲ್ಲಿ ಒಬ್ಬರು.  ಸಂಘಟಕರಾಗಿ, ಚಿಂತಕರಾಗಿ, ದಲಿತ ಹೋರಾಟಗಳು ಮತ್ತು ಅಲೆಮಾರಿಗಳ ಸಬಲೀಕರಣಕ್ಕಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ನೊಂದವರ ದನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯದಿಂದ ‘ಕರ್ನಾಟಕದ ಮಾತಂಗ ಪರಂಪರೆ’ ಕುರಿತ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ಪಡೆದಿರುವ ಇವರು ಕೊರಟಗೆರೆ ತಾಲೂಕಿನಲ್ಲಿ ಪ್ರಥಮರಾಗಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತರ ಪದವಿ ಪಡೆದವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸಕ್ತ ಇವರು ಸರ್ಕಾರಿ ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರ ಪ್ರಥಮ  “ಆಸಾದಿ” ಖಂಡಕಾವ್ಯ ಕೃತಿಗೆ “ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ”  ಪಡೆದಿದ್ದಾರೆ. ಇವರು ರಚಿಸಿರುವ ಅನೇಕ ಪುಸ್ತಕಗಳು ಮತ್ತು ಕವಿತೆಗಳು ಕರ್ನಾಟಕದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿವೆ.

ಕವಿತೆಯ ಆಶಯ

 ಇಲ್ಲಿ ಕವಿಯು ಕುವೆಂಪುರವರ ಕಥೆ, ಕವನ, ಕಾದಂಬರಿಗಳಲ್ಲಿ ಬರುವ ಹಲವಾರು ಪಾತ್ರಗಳನ್ನು ತಮ್ಮ “ಹೇ… ಶೂದ್ರ ತಪಸ್ವಿ” ಎಂಬ ಕವಿತೆಯಲ್ಲಿ ಉಲ್ಲೇಖಿಸುವ ಮೂಲಕ ಕುವೆಂಪುರವರ ವಿಶ್ವಮಾನವ ಸಂದೇಶ ಹಾಗೂ ವಿಚಾರಕ್ರಾಂತಿಯ ಹೊಳಹುಗಳನ್ನು ಓದುಗರೆದೆಗೆ ಬಿತ್ತುವ ಕೈಂಕರ್ಯ ಮಾಡಿದ್ದಾರೆ.

 ಅಮೂರ್ತವಾದ ಚೇತನವೆಂಬ ಪ್ರಜ್ಞೆಗೆ ಸಾಂಸ್ಥಿಕ ರೂಪದ ಯಾವುದೇ ನಿಕೇತನಗಳನ್ನು ಕಟ್ಟದೇ ಚರಾಚರ ಜೀವಮಂಡಲದಲ್ಲಿ ಅನಿಕೇತನವಾಗಿಸುವ ಮೂಲಕ ಶ್ರಮಿಕವರ್ಗದ  ಬದುಕಿನ ಆಯಾಮಗಳನ್ನು ಕುವೆಂಪು ಅವರ ಸಾಹಿತ್ಯ ರಚನೆಗಳು ಪರಿಚಯಿಸುತ್ತವೆ. ಇದನ್ನೇ ದಲಿತ ಸಂವೇದನೆಗಳ ಜೊತೆ ಜೊತೆಗೆ ಸಮೀಕರಿಸುತ್ತಾ ಸಾಗುವ ವಡ್ಡಗೆರೆ ನಾಗರಾಜಯ್ಯನವರ ಕಾವ್ಯದ ಸಾರ, ಸಾಮರಸ್ಯದ ಸಮಾಜವನ್ನು ಕಟ್ಟುವ ಆಶಯವನ್ನು ಹೊತ್ತು ನಿಂತಿದೆ. ಕುವೆಂಪುರವರ ವಿಚಾರಧಾರೆಗಳ ಒಳನೋಟಗಳನ್ನು, ಅಂತಃಸತ್ವವನ್ನು ಜನತೆಗೆ ಪರಿಚಯಿಸುವುದರೊಟ್ಟಿಗೆ ಕನ್ನಡ ನಾಡು ನುಡಿಗೆ ಕುವೆಂಪುರವರ ಅದಮ್ಯ ಸೇವೆಯನ್ನು ಪರಿಚಯಿಸುತ್ತಾ ಕವಿತೆ ಸಾಗುತ್ತದೆ. “ಜನಪರ ಕಾಳಜಿ ಇಲ್ಲದ ಯಾವುದೇ ಬರಹದಿಂದ ಮಾನವ ಕಲ್ಯಾಣ ಅಸಾಧ್ಯ”.

 “ಮಾನವ ಜಾತಿ ತಾನೊಂದೆ ವಲಂ” ಎಂದ ಆದಿಕವಿ ಪಂಪನು ಸಾರಿದ ಮಾನವತಾ ಸೂತ್ರದಲ್ಲಿ ವಿಶ್ವಮಾನವರನ್ನು ಸೃಷ್ಟಿಸುವುದು ಈ ಕವಿತೆಯ ಮಹದಾಶಯವಾಗಿದೆ.

ಕವಿತೆಯ ಶೀರ್ಷಿಕೆ

 “ಹೇ… ಶೂದ್ರ ತಪಸ್ವಿ” ಇಲ್ಲಿ ಕವಿಯು ಕುವೆಂಪುರವರನ್ನು ಶೂದ್ರತಪಸ್ವಿಯಾಗಿ ಬಿಂಬಿಸಿದ್ದಾರೆ. ಮತಬೇಧಗಳ ಪ್ರಬಲವಾದ ಗೋಡೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ದಮನ ಗೊಳಿಸಿದವರು ಕುವೆಂಪು. ನಾಗರಾಜಯ್ಯ ಅವರೊಳಗಿನ ಕವಿಗೆ ಕುವೆಂಪು ಅವರೇ ನಿಜವಾದ ಶೂದ್ರ ತಪಸ್ವಿಯಾಗಿ ಕಂಡಿದ್ದಾರೆ.

ಕವಿತೆ : ಹೇ, ಶೂದ್ರ ತಪಸ್ವಿ

ಹೇ! ಶೂದ್ರ ತಪಸ್ವಿ……

ಬದುಕಿಗೆ ಬಂದಿಖಾನೆ ಕಟ್ಟಿದ

ಕಟ್ಟು ಕಟ್ಟಳೆಗಳ ಕತ್ತರಿಸಿ

ಬದನೆ ಶಾಸ್ತ್ರಗಳನು ಬಜಾರಿನಲಿ

ಬೆತ್ತಲೆ ನೇಣು ಹಾಕಿರುವೆವು

ಕರಿಸಿದ್ಧ ಪಿರಕದವರು ನಾವು

ಕರಿನೆಲದ ಹಾಡಿಗೆ

ಪಲ್ಲವಿಯಾದವರು.

ಇಂದು ನಾವು ನೋಡುತ್ತಿರುವ ಕೆಲವು ಅಮಾನುಷ ಕೃತ್ಯಗಳು, ಜಾತಿ, ಧರ್ಮಗಳ ಮೇಲಾಟಗಳು, ಶೋಷಣೆ, ಅಸ್ಪೃಶ್ಯತೆ ಮುಂತಾದ ಸಾಮಾಜಿಕ ಅನಿಷ್ಠ ಪದ್ಧತಿಗಳ ಕರಾಳ ಛಾಯೆಯನ್ನು ಅನಾವರಣ ಮಾಡುವ ಸಾಲುಗಳಿವು. ಪಂಚಭೂತಗಳಿಗೆ ಇಲ್ಲದ ಭೇದ ಮನುಷ್ಯನಿಗೇಕೆ? ಎಲ್ಲರ ರಕ್ತ ಒಂದೇ ಆಗಿರುವಾಗ ಮೇಲು, ಕೀಳುಗಳೆಂಬ ತಾರತಮ್ಯ ತರವಲ್ಲವೆಂದು ಪ್ರತಿಭಟಿಸುವ ಕವಿಯ ಸಾಲುಗಳು ಇವಾಗಿವೆ. ಇದಕ್ಕಾಗಿ ಕವಿ ಅಂತಃಕರಣ ರಹಿತ ಶಾಸ್ತ್ರಗಳ ವಿರುದ್ಧ ಸಿಡಿದೇಳುತ್ತಾರೆ. ಮನುಷ್ಯನೊಳಗಿನ ಚೇತನ ಅನಿರ್ಬಂಧಿಯಾಗಿರಬೇಕು. ಅದು ಎಲ್ಲ ಬಂಧನಗಳಿಂದ ಮುಕ್ತವಾಗಿರಬೇಕು. ಚೇತನಕ್ಕೆ ನಾವು ಯಾವುದೇ ಬಂದಿಖಾನೆಗಳನ್ನಾಗಲಿ, ಸರಳುಗಳನ್ನಾಗಲಿ ಕಟ್ಟುವುದು ಸೂಕ್ತವಲ್ಲವೆಂದು ಪ್ರತಿಪಾದಿಸಿದವರು ಕುವೆಂಪು. ವಿಪರ್ಯಾಸವೆಂದರೆ ನಮ್ಮ ಬದುಕಿನಲ್ಲಿ ಜಾತಿ, ಮತ, ಧರ್ಮ, ವರ್ಗ, ವರ್ಣಗಳೆಂಬ ಅನೇಕ ರೀತಿಯ ಸಾಂಸ್ಥಿಕ ನಿಕೇತನಗಳನ್ನು  ಕಟ್ಟುತ್ತಿದ್ದೇವೆ. ಅವೆಲ್ಲವನ್ನೂ ಛೇದಿಸಬೇಕು ಎಂಬ ಕವಿ ಭಾವ ಈ ಕವಿತೆಯಲ್ಲಿದೆ. ಹಾಗಾಗಿಯೇ ಕುವೆಂಪುರವರು “ಓ ನನ್ನ ಚೇತನ ಆಗು ನೀ ಅನಿಕೇತನ” ಎಂದಿದ್ದಾರೆ. ಎಲ್ಲಾ ಧರ್ಮಶಾಸ್ತ್ರಗಳ ಸಾರವು ಮಾನವೀಯತೆಯ ಅಳವಡಿಕೆ ಆಗಿರಬೇಕೆ ಹೊರತು, ಏಕರೂಪಿ ನಿಯಮಗಳಲ್ಲ,ಬದನೆ ಶಾಸ್ತ್ರಗಳಲ್ಲ ಎನ್ನುವ ಕವಿ ಅಸಂಬದ್ಧ ಸಂಪ್ರದಾಯಗಳನ್ನು ಬಜಾರಿನಲ್ಲಿ ಬೆತ್ತಲೆಯಾಗಿ ನೇತುಕಾಕಿದ್ದೇವೆ ಎಂದಿದ್ದಾರೆ.

ಯಾವ ಶಾಸ್ತ್ರಗಳು ಏನು ಹೇಳಿದರೇನು?

 ಎದೆಯ ದನಿಗೂ ಮಿಗಿಲಾದ ಶಾಸ್ತ್ರ ಇಹುದೇನು ?

      – ಕುವೆಂಪು

ಕವಿ ತಮ್ಮನ್ನು “ಕರಿಸಿದ್ದನ ಪಿರಕ”ದವರೆಂದು ಹೇಳಿಕೊಂಡಿದ್ದಾರೆ. ಕರಿಸಿದ್ದ ಎಂಬುವನು ಕುವೆಂಪು ವಿರಚಿತ ಕವಿತೆಯಲ್ಲಿ ಬರುವ ತಳಸ್ತರದ ದುಡಿಮೆಗಾರ ವ್ಯಕ್ತಿಯಾಗಿದ್ದಾನೆ. ಇವನ ವಂಶಕ್ಕೆ ಸೇರಿದವರು ತಾವೆಂದು ಕವಿ ಹೆಮ್ಮಯಿಂದ ಹೇಳುತ್ತಾರೆ. ಇಲ್ಲಿ ತಳಸ್ತರದ ಶ್ರಮಜೀವಿಗಳಾದ ನಾವು ಕರಿ ನೆಲದ ಹಾಡಿಗೆ ಪಲ್ಲವಿ ಯಾದವರು ಅಂದರೆ ಕರಿ ನೆಲೆಯೆಂದರೆ ಕರುನಾಡು, ಕುವೆಂಪುರವರಿಂದ ರಚಿತಗೊಂಡ ನೀ ಏರುವ ಮಲೆ ಅದು ಸಹ್ಯಾದ್ರಿ, ನೀ ಕುಡಿಯುವ ನೀರು ಕಾವೇರಿ ಎಂದು ಕೀರ್ತಿಸಿಕೊಂಡಿರುವ ಕಪ್ಪುನೆಲದ ಅರ್ಥಾತ್ ಕನ್ನಡ ನೆಲದ ಹಾಡು ಹಾಡುವ ಮೂಲಕ ಕುವೆಂಪುರವರನ್ನು ನಮ್ಮೆದೆಗೆ ಇಳಿಸಿಕೊಂಡಿದ್ದೇವೆ ಎಂಬ ಸಂದೇಶವನ್ನು ಕವಿ ನೀಡುತ್ತಾರೆ. ಆ ಮೂಲಕ ಇಲ್ಲಿ ಕವಿ ಮಾನವ ಕಲ್ಯಾಣಕ್ಕೆ ಜಾತ್ಯತೀತ ಅಂಶಗಳು ಮತ್ತು ಪ್ರಜಾಸತಾತ್ಮಕ ಮೌಲ್ಯಗಳ  ಬಿತ್ತುವಿಕೆಯ ಅನಿವಾರ್ಯತೆಯನ್ನು ಎತ್ತಿಹಿಡಿದಿದ್ದಾರೆ.

ನಮ್ಮದೇ ನೆತ್ತರೆಣ್ಣೆಯನೆರೆದು

ಜಗಕೆ ಕೈದೀವಿಗೆ ಹಿಡಿದು

ಆದಿ ಹಾಡಿನ ಆದಿಮ ರಾಗಗಳನ್ನು

ನಾಭಿ ನಾಡಿನಲಿ ಮೀಟಿ

ನೆಲದ ಮೊಳಕೆಯ ಕೊರಳಿಗೆ ತುಂಬಿ

ಗುಡುಗಾಗಿ ಗುಡುಗಿ ಗಿಡುಗನಂಗಳದಲ್ಲಿ

ಗೆಜ್ಜೆ ಕಟ್ಟಿ ಕುಣಿಯುವೆವು!

ನವಿಲುಗಣ್ಣಿನ ಕನಸು ಕಟ್ಟಿಕೊಂಡು.

ನೆತ್ತರೆಣ್ಣೆಯನೆರೆದು ಅಂದರೆ ಶ್ರಮವಹಿಸಿ ದುಡಿದು ನೆತ್ತರನ್ನೇ ಬೆವರಾಗಿ ಭೂಮಿಗೆ ಬಸಿದು ಬೆಳೆ ಬೆಳೆದು ಈ ಜಗಕೆ ಅನ್ನ ನೀಡಿ ಕೈದೀವಿಗೆ ಹಿಡಿಯುವ ಜನ ನಾವು. ಆದಿ ಹಾಡಿನ ಆದಿಮ ರಾಗಗಳನ್ನು  ಅಂದರೆ ಹಿಂದಿನ ಪೂರ್ವಿಕರ ಕಾಲದಿಂದಲೂ ನಡೆದು ಬಂದಿರುವಂತಹ ಪ್ರಕೃತಿ ತತ್ವವನ್ನು, ಸಮಾನತೆಯ ಸಂದೇಶವನ್ನು, ವಿಚಾರ ಕ್ರಾಂತಿಯನ್ನು, ಕುವೆಂಪುರವರು ಪ್ರತಿಪಾದಿಸಿದ ವಿಶ್ವಮಾನವ ಸಂದೇಶವನ್ನು ನಮ್ಮ ನರನಾಭಿಗಳ ಮೂಲಕ ಹಾಡುತ್ತೇವೆ. ಈ ಮೇಲಿನ ಸಿದ್ದಾಂತಗಳನ್ನು ನೆಲದ ಎಳೆಯ ಮಕ್ಕಳಿಗೂ ಕೂಡ  ಕಲಿಸುತ್ತೇವೆ. ಗಿಡುಗನಂಗಳದಲ್ಲಿ ಅಂದರೆ ಶತ್ರುವಾದರೂ ಹೆದರದೆ ಗೆಜ್ಜೆಕಟ್ಟಿ ಕುಣಿವ ಕವಿಯ ಆತ್ಮಬಲವನ್ನು ನಾವಿಲ್ಲಿ ಕಾಣಬಹುದು.

ಇಲ್ಲಿ ಕವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೌಂದರ್ಯ ರಾಶಿಯಾದಂತಹ ನವಿಲನ್ನ ಬಳಸಿ, ಅಹಿಂಸೆ, ಶಾಂತಿ, ಸಹೋದರತೆ, ಭ್ರಾತೃತ್ವ, ಸಮಾನತೆ, ಸಹಬಾಳ್ವೆ, ಸಾಮಾಜಿಕ ನ್ಯಾಯದ ಕನಸುಗಳನ್ನು  ಕಟ್ಟಿಕೊಟ್ಟಿದ್ದಾರೆ. ಕನ್ನಡ ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡಿಕೊಳ್ಳುವ ಕನಸನ್ನ ಕಾಣುತ್ತಿದ್ದೇವೆ ಎನ್ನುತ್ತಿದ್ದಾರೆ. ಜೊತೆಗೆ ಹುಯಿಲಗೋಳ ನಾರಾಯಣರಾಯರ ಆಶಯದ ಚೆಲುವ ಕನ್ನಡನಾಡನ್ನು ಕಟ್ಟುವ ಕನಸು ಕವಿಯದಾಗಿದೆ.

ಗುಂಡಿಗೆಯ ನೋವನೆ

ಅಗ್ನಿಕಾವ್ಯವಾಗಿ ಹಾಡಿ

ಕಾವ್ಯಖಡ್ಗದಲ್ಲಿ ಬೇನೆಗಳಿಗೆ ಮದ್ದು ನೀಡುವೆವು

ಹಳೆಮನೆ ಭೈರ ಮಲೆಯ ಮಕ್ಕಳು.

ಎದೆಯೊಳಗಿನ ನೋವು, ಕೆಟ್ಟದ್ದು ಎಲ್ಲವನ್ನು ಅಗ್ನಿಯಲ್ಲಿ ಸುಟ್ಟು ಕಾವ್ಯ ಖಡ್ಗದಲ್ಲಿ ಅಂದರೆ ಹರಿತವಾದ ಲೇಖನಿಯ ಮೂಲಕ ಸಾಮಾಜಿಕ ಅನಿಷ್ಠ ಪದ್ಧತಿಗಳೆಂಬ ರೋಗಗಳಿಗೆ ವಿಚಾರಕ್ರಾಂತಿಯ ಮದ್ದು ನೀಡುವ ನಾವು ಹಳೆಮನೆ ಬೈರನ ಪ್ರೀತಿಯ ಮಕ್ಕಳು ಎಂದಿದ್ದಾರೆ. ಹಳೆಮನೆ ಬೈರ ಕುವೆಂಪು ವಿರಚಿತ ಕಾದಂಬರಿಯಲ್ಲಿ ಬರುವ ದುಡಿಮೆಗಾರ ಜಗತ್ತನ್ನು ಪ್ರತಿನಿಧಿಸುವಂತಹ ಒಬ್ಬ  ಕಾಯಕಜೀವಿ.

ಹೇ! ಶೂದ್ರ ತಪಸ್ವಿ

ತ್ರಿಶೂಲ ಹಿಡಿದು ಬೆಳದಿಂಗಳ

ನೊರೆವಾಲುಗೆನ್ನೆಯ ಕೆಡಿಸಿ

ಮೆತ್ತಿಕೊಂಡು ರಕ್ತವನು

ಮಾನವೀಯತೆಯ ಮುಖಕ್ಕೆ ಮಸಿ ಬಳಿದು

ಗಟಾರಕ್ಕೆ ಬಿದ್ದ ರಾಮನನು

ಕೈಗೂಸಿನಂತೆ ಮಡಿಲೊಳಾಡಿಸಿ

ಕುಲಬೇನೆಯ ಸೂತಕ ಕಳೆವ

ಎದೆಹಾಲು ಕುಡಿಸಿದ ಅವ್ವ ನೀನು;

ಇಲ್ಲಿ ಕವಿಯು ಕುವೆಂಪುರವರನ್ನು ಶೂದ್ರತಪಸ್ವಿಯಾಗಿ ಕಂಡಿದ್ದಾರೆ. “ಶ್ರೀ ರಾಮಾಯಣದರ್ಶನಂ” ಕನ್ನಡಿಗರ ಹೆಮ್ಮೆಯ ಕಾವ್ಯ. ಇಲ್ಲಿ ಕುವೆಂಪುರವರು ರಾಮನನ್ನು ಮಗುವಂತೆ ಕಂಡು, ಲಾಲಿಹಾಡು ಹಾಡುತ್ತಾ, ಸಂತೈಸುತ್ತಾ, ಕೈಗೂಸಿನಂತೆ ಆಡಿಸುವ ಪರಿಯನ್ನ ಕುರಿತು ಕವಿ ತಮ್ಮ ಕಾವ್ಯದಲ್ಲಿ ಚಿತ್ರಿಸಿದ್ದಾರೆ. ಯಾವುದೇ ಆಯುಧಗಳನ್ನು ರಾಮನಿಗೆ ನೀಡದೆ ತ್ರಿಶೂಲ ರಹಿತನಾಗಿ, ಶಾಂತಿ ಪಾಲಕನಾಗಿ, ರಾಮರಾಜ್ಯದ ಕಲ್ಪನೆಯ ರೂವಾರಿಯಾಗಿ ಬಿಂಬಿಸುವ ಕುವೆಂಪುರವರ ವೈಚಾರಿಕತೆಗೆ ಕನ್ನಡಿ ಹಿಡಿದ ಸಾಲುಗಳಿವು. ಇಲ್ಲಿ ಕುವೆಂಪು ತಮ್ಮ ರಾಮನಿಗೆ ಸಮನ್ವಯ ತತ್ವದ ಎದೆಹಾಲು ಕುಡಿಸಿದ್ದಾರೆ ಎಂದಿದ್ದಾರೆ.

ಬರವಣಿಗೆ ಬದುಕನ್ನೆ ಕ್ರಾಂತಿಕಾವ್ಯವಾಗಿಸಿ

ಕಾಡುವ ನಿನ್ನ ಉಸಿರು

ನಮ್ಮ ಎದೆಕುಲುಮೆಯಲಿ

ತಿದಿಯೊತ್ತುತ್ತಿದೆ ಎಚ್ಚರದ ಜ್ವಾಲೆಯಾಗಿ!

ನಮ್ಮ ಕಣ್ಣ ಕತ್ತಲೆಗಿಳಿದ ನಿನ್ನ ಜ್ವಾಲೆ

ಕಣ್ಣೊಳಗಿನ ಬೆಳಕಾಗಿ

ಬರವಣಿಗೆಯ ಜವಾಬ್ದಾರಿಯನ್ನು ಹೊತ್ತು ಕಾವ್ಯವನ್ನೇ ಉಸಿರಾಗಿಸಿಕೊಂಡವರ ಎದೆಕವಲಿನಲ್ಲಿ ವಿಚಾರಕ್ರಾಂತಿಯ ತಿದಿಯೊತ್ತುತ್ತಾ, ಗಾಳಿಯೂದುತ್ತಾ, ಎಚ್ಚರಿಕೆಯಲ್ಲಿ, ಚಿಂತನೆಯ ಜ್ವಾಲೆಯಲ್ಲಿ ಕೆಟ್ಟದ್ದನ್ನು ಸುಟ್ಟು ಒಳ್ಳೆಯ ದೀಪ್ತಿಯನ್ನು ಬೆಳಗಿಸುವ ಮಹದಾಸೆ ಕವಿಯದಾಗಿದೆ.

ಮುರುಕು ಗುಡಿಸಲಲ್ಲಿ

ಗುಂಡಿಗೆಯ ಗಾಯಗಳು ಕಣ್ಣೀರುಗರೆದು

ಕೆಂಪು ರಕ್ತದಿಂದ ಬರೆಯುವೆವು ನೋಡು

ಹಸಿರು ಕವಿತೆ;

ಬಂದೂಕದ ಬಾಯಿಗೆ ಎದೆಗೊಟ್ಟು ನಗುತ್ತದೆ ಕವಿತೆ ಹೂವಿನಂತೆ.

 ಗುಡಿಸಲಲ್ಲಿ ವಾಸಿಸುತ್ತಾ, ಮೈಮೇಲೆ ಹರಕು ಬಟ್ಟೆಯನ್ನು ತೊಡುತ್ತಾ, ಬಡತನದಲ್ಲಿ ಬದುಕುತ್ತಿದ್ದರೂ ಕೂಡ, ಯಾವುದೇ ದ್ವೇಷ ಕಾರದೆ ಶಾಂತಿ ಬಯಸುವ ರೈತನಂತೆ ಹಗಲಿರುಳು ದುಡಿದು ಇಡೀ ಜಗತ್ತಿಗೆ ಅಗತ್ಯವಾದ ಫಸಲನ್ನು ಬೆಳೆಯುತ್ತಾ, ಅನ್ನವನ್ನು ನೀಡುವ ಕಾಯಕ ಜೀವಿಗಳು ನಾವು ಎಂದು ಸಾರಿದ್ದಾರೆ. ಇಲ್ಲಿ ಕವಿ ಬಂದೂಕಿನ ಬಾಯಿಗೆ ಎದೆಕೊಟ್ಟು ನಿಲ್ಲುವ ಹೂವಂತ ಕವಿತೆಯನ್ನು ರಚಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ.

ಹೇ! ಶೂದ್ರ ತಪಸ್ವಿ

ಸೂರ್ಯನ ನೆತ್ತಿಗೆ ಗುದ್ದಿ

ಬೆಂಕಿ ಮಳೆಗರೆದು

ಉಲ್ಕೆಗಳ ಎಳೆತಂದು ದ್ರೋಣರಿಗಪ್ಪಳಿಸಿ

ಭೂಲೋಕಕೆ ಹಂಚಿ ಮಿಗುವಷ್ಟು

ಏಕಲವ್ಯನಿಗೆ ಪ್ರೀತಿಯುಣಿಸಿದ ಕವಿಯೇ

“ಸೂರ್ಯನ ನೆತ್ತಿಗೆ ಗುದ್ದಿ, ಬೆಂಕಿ ಮಳೆಗರೆದು, ಉಲ್ಕೆಗಳ ಎಳೆತಂದು”  ಅಬ್ಬಾ ಎಂತಹ ರೂಪಕ ಸಾಮ್ರಾಜ್ಯ ಅಂದರೆ ಈ ಮಣ್ಣಿನ ಎಂತಹ ಸಾಹಸಕ್ಕೂ ಸಿದ್ಧ ಎಂಬುದನ್ನು ಇವು ಸಾರುತ್ತವೆ. “ಬೆರಳ್ಗೆ ಕೊರಳ್” ನಾಟಕದ ಮೂಲಕ ದ್ರೋಣಾಚಾರ್ಯರನ್ನು ಜಾತಿ ಮತ ಸಂಕೋಲೆಗಳಿಂದ ಹೊರತಂದು ವಿದ್ಯೆ ಕಲಿಸುವ ಗುರುವಾಗಿ ಚಿತ್ರಿಸಿದ್ದಾರೆ ಕುವೆಂಪುರವರು ಎನ್ನುತ್ತಾರೆ. ಏಕಲವ್ಯನಿಗೆ ವಿದ್ಯೆ ಕಲಿಸಿದ ಗುರು ಪಡೆದ ಹೆಬ್ಬೆರಳಿನ ಗುರುದಕ್ಷಿಣೆಗೆ ಕೊರಳ್ ಬಲಿ ಕೇಳದೆ ಅವನು ಬಯಸಿದ ವಿದ್ಯೆಯನ್ನು ಕಲಿಸುವ ಗುರುವಾಗಿ ದ್ರೋಣರನ್ನು ಚಿತ್ರಿಸಿದ್ದಾರೆ. ಏಕಲವ್ಯನಿಗೆ ಭೂಲೋಕಕ್ಕೆ ಹಂಚಿ ಮಿಗುವಷ್ಟು ಪ್ರೀತಿಯನ್ನು ಕುವೆಂಪುರವರು ಉಣಿಸಿದ್ದಾರೆ ಎಂದು ಕವಿ ಇಲ್ಲಿ ಕುವೆಂಪುರವರನ್ನು ಕೊಂಡಾಡಿದ್ದಾರೆ.

ಎಲ್ಲ ತತ್ವದೆಲ್ಲೆ ಮೀರಿ

ಬೆಟ್ಟದಂತೆ ನಿಂತ ನಿನ್ನ ಕಾವ್ಯವನು

ಅಖಂಡವಾಗಿ ತಬ್ಬಿಕೊಂಡವರು ನಾವು

ಜಲಗಾರನ ಮಕ್ಕಳು.

ನಮ್ಮ ಮೂಕರಾಗದ ಮಟ್ಟುಗಳಿಗೆ

ಸೀಮೆ ಎಲ್ಲೆಗಳಿಲ್ಲ

ಮತಭಾಷೆ, ಗಡಿದೇಶ ಮೊದಲಿಲ್ಲ.

 ಕುವೆಂಪು ಸಾಹಿತ್ಯ ಕ್ಷೇತ್ರದ ದೈತ್ಯ ಪ್ರತಿಬೆ. ಬೆಟ್ಟ ಎಷ್ಟು ಗಟ್ಟಿಯಿರುವುದೋ ಇವರ ಸಾಹಿತ್ಯವು ಅಷ್ಟೇ ಸತ್ವ ಪೂರ್ಣವಾದದ್ದು ಹಾಗೂ ಅಖಂಡವಾದುದು. ಹಾಗಾಗಿಯೇ ಕವಿ ಬೆಟ್ಟದಂತೆ ಬೆಳೆದು ನಿಂತ ಕಾವ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಸಗನ್ನಡ ಸಾಹಿತ್ಯವನ್ನು ಹಲವಂದದಲಿ ಸಿರಿವಂತಗೊಳಿಸಿದ ಧೀಮಂತ ಸಾಹಿತಿ ಕುವೆಂಪು

 – . . ಮಾಳವಾಡ

“ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ” ಎನ್ನುವ ಮೂಲಕ ಶಿವತತ್ವದಲ್ಲಿ ಅಪಾರ ನಂಬಿಕೆಯಿಟ್ಟಿದ್ದವರು. ಕುವೆಂಪುರವರು “ಜಲಗಾರ” ನಾಟಕದಲ್ಲಿ ಶಿವನೇ ಜಗದ ಜಲಗಾರನೆಂದು ಹೇಳಿರುವಂತೆ ಇಲ್ಲಿ ಕವಿ ವಡ್ಡಗೆರೆಯವರು ನಾವೆಲ್ಲರೂ ಜಲಗಾರನ ಮಕ್ಕಳು ಅಂದರೆ ಶಿವನ ಕಂದಮ್ಮಗಳು ಎಂದಿದ್ದಾರೆ. ಇಲ್ಲಿ ಜಲಗಾರ ಅಂದರೆ ಕಸಗುಡಿಸುವವನು. ಅವನ ಕೆಲಸ ಏನು? ಸ್ವಚ್ಛಗೊಳಿಸುವುದು ಏನನ್ನು ಸ್ವಚ್ಚಗೊಳಿಸಬೇಕು, ಈ ಜಗದ ಕಳೆಯನ್ನು, ಕೊಳೆಯನ್ನು ಸ್ವಚ್ಛಗೊಳಿಸುತ್ತಾರೆ. ಜಾತಿ ಮತ ಭೇದಗಳ ಕಸವನ್ನು ಸೀಮೆ, ಗಡಿಗಳ ಎಲ್ಲೆ ಇಲ್ಲದೆ ಸ್ವಚ್ಛಗೊಳಿಸಬೇಕು. ಇಲ್ಲಿ ಶಿವ ಜಗದ ಜಲಗಾರನಾಗಿ ಎಲ್ಲ ಧರ್ಮಗಳಲ್ಲಿರುವ ಕಸವನು ಗುಡಿಸುವ ಸ್ವಚ್ಛ ಕಾರ್ಮಿಕನಾಗಿ ಕವಿಗೆ ಕಂಡಿದ್ದಾರೆ.

ಕದ ಗೋಡೆಗಳಿಲ್ಲದ

ಹೆಸರಿರದ ಮನೆಗೆ ನಡೆಸುವ

ನಿನ್ನ ಹಾಡನು ಹಾಡುವ

ತಿಮ್ಮಿ ನೆರಿಗೆ ಕಾವಿನ ಹಾಲುಂಡವರ

ಹಸಿರು ಕವಿತೆ ಆಕಾಶದೆತ್ತರಕ್ಕೆ ಬೆಳೆದು

ನಕ್ಷತ್ರಗಳ ನಗಿಸಿ

ನಭೋಮಂಡಲದಿಂದ ನರಮಂಡಲಕ್ಕೆ

ಬೆಳಕು ತಂದು

ಬತ್ತಿದೆದೆ ಚಿಲುಮೆಯಲಿ

ಉಕ್ಕಿಸುವುದು ಪ್ರೀತಿಯೊರತೆ

ಹತ್ತಿಸುವುದು ಬೆಳಕ ಹಣತೆ

ಮೂಡಿಸುವುದು ಕಣ್ಣೊಳಕೆ ಕಣ್ಣು

ನಿನ್ನ ಹಾಗೆ

ಹೇ! ಶೂದ್ರ ತಪಸ್ವಿ….

ಮೇಲ್ ಸ್ತರದವರು ಮಾತ್ರ ದೈವಾನುಗ್ರಹಕ್ಕೆ ಪಾತ್ರರಾಗುತ್ತಾರೆ ಎನ್ನುತ್ತಿದ್ದ ಕಾಲದಲ್ಲಿ ಅವೆಲ್ಲವನ್ನೂ ಮೀರಿ ನಿಂತವರು ಕುವೆಂಪು. ತಮ್ಮ ಕಾದಂಬರಿಯ “ತಿಮ್ಮಿ” ಪಾತ್ರದ ಮೂಲಕ ದಲಿತ ಮಹಿಳೆಯರಿಗೂ ಕೂಡ ಶಿವ ಸಾಕ್ಷಾತ್ಕಾರವನ್ನು ಮಾಡಿಸಿದವರ. ಒಬ್ಬ ತಳಸ್ತರದ ಸ್ತ್ರೀ ಗೂ ಆಧ್ಯಾತ್ಮಿಕ ಶೋಧ ಸಾಧ್ಯ,   ಎಂದು ತೋರಿಸಿಕೊಟ್ಟಿದ್ದಾರೆ ಕುವೆಂಪು. ತಿಮ್ಮಿಯು ತಳ ಸಮುದಾಯಕ್ಕೆ ಸೇರಿದ್ದರೂ ಎಲ್ಲರಂತೆ ಆಧ್ಯಾತ್ಮಿಕ ಅನುಭೂತಿ ಕಂಡಳು ಎಂಬುದನ್ನು ಸ್ಮರಿಸುತ್ತಾ ಕುವೆಂಪುರವರಿಗೆ ಧನ್ಯವಾದ ಹೇಳಿದ್ದಾರೆ.

” ಕುವೆಂಪು ಮೂಲತಹ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡದ ಕವಿ ಲೇಖಕರು ಇಲ್ಲವೇ ಇಲ್ಲ ಎಂದರೂ ಸಲ್ಲುತ್ತದೆ. ಉಚ್ಛ ವರ್ಣದ ಸಮಸ್ತ ಬೌದ್ಧಿಕ ಉಪಕರಣಗಳನ್ನು ಕೈವಶ ಮಾಡಿಕೊಂಡು, ಅವುಗಳನ್ನು ಉಪಯೋಗಿಸಿ ಅಪ್ರತಿಷ್ಠ ವರ್ಗಕ್ಕೆ ಆತ್ಮಗೌರವವನ್ನು ಕಿಚ್ಚನ್ನು ತುಂಬಿದ್ದು

ಇವರ ಸಾಹಿತ್ಯಕ ಧೋರಣೆಯ ವಿಶೇಷತೆಯಾಗಿದೆ”.

 – ಜಿಎಸ್ ಶಿವರುದ್ರಪ್ಪ

 ಬಡವರ ಕಾವ್ಯದ ಉದ್ದ ಅಗಲಗಳನ್ನು ಅಳೆಯಲು ಸಾಧ್ಯವಿಲ್ಲ. ಅದು ಆಗಸದಷ್ಟು ಎತ್ತರ ಬೆಳೆದು ಆಕಾಶ ತಬ್ಬಿದ ಹಾಗೆ. ವಡ್ಡಗೆರೆಯವರ  ಈ ಕವಿತೆ, ಗ್ರಹತಾರೆಗಳನ್ನು ನಗಿಸಿ, ನಭೋಮಂಡಲದಿಂದ ನರಮಂಡಲಕ್ಕೆ ಬೆಳಕು ತಂದು ಮನುಷ್ಯರಲ್ಲಿ ಸಹಜ ಮಾನವ ಪ್ರೀತಿಯನ್ನು ಚಿಗುರಿಸುತ್ತದೆ. ಎಂಬುವ ಮೂಲಕ ಮತಬೇಧಗಳನ್ನು ಮೀರಿದ ಮಾನವ ಧರ್ಮದ ಪ್ರತಿಪಾದನೆಯು ಇಲ್ಲಿದೆ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

 ಕೋಮುವಾದ, ಜಾತಿವಾದಗಳ ದಳ್ಳುರಿಯಲ್ಲಿ ದಹಿಸುತ್ತಿರುವ ಮಾನವನಿಗೆ ಪ್ರೀತಿಯನ್ನು ಕುವೆಂಪುರವರ ವಿಶ್ವಮಾನವ ಸಂದೇಶದಡಿ ನೋಡಬಯಸುತ್ತಿದ್ದಾರೆ. ಇಲ್ಲಿ ಕವಿಯ ಭಾಷಾ ಹಿಡಿತ ಹಾಗೂ ಬಳಕೆಯ ಪ್ರೌಢಿಮೆಗೆ ಸಾಟಿಯಿಲ್ಲ.  ಅಮೋಘವಾದ ಪದಪುಂಜಗಳ ಮೂಲಕ, ಅಗಾಧ ಭಾವವನ್ನು ತುಂಬಿ, ವಿಶಿಷ್ಟವಾದ ಹಾಗೂ ಪರಿಣಾಮಕಾರಿಯಾದ ರೂಪಕಗಳು, ಉಪಮಾನ, ಉಪಮೇಯಗಳನ್ನು ಬಳಸಿ ಕಾವ್ಯ ಕಟ್ಟುವ ಮೂಲಕ ಕುವೆಂಪುರವರ ಕವಿತೆಗಳಿಗೆ, ಆಶಯಗಳಿಗೆ, ಇವರು ಮತ್ತೊಮ್ಮೆ ದನಿಯಾಗಿದ್ದಾರೆ.

 ಇಲ್ಲಿ ಕವಿ ದಲಿತರ ನೋವು ಅಸಹಾಯಕರ ಕಷ್ಟಗಳನ್ನು ಹತ್ತಿರದಿಂದ ಕಂಡವರು. ಅವರ ವೇದನೆಗಳಿಗೆ ಸ್ಪಂದಿಸಿದವರು. ಹಾಗಾಗಿಯೆ ಈ ಕವಿತೆ ಕವಿ ವಡ್ಡಗೆರೆ ‌ನಾಗರಾಜಯ್ಯ ಅವರ ಲೇಖನಿಯಿಂದ  ಪರಿಣಾಮಕಾರಿಯಾಗಿ ಜೀವತಳೆದಿದೆ. ಡಾ. ವಡ್ಡಗೆರೆ ನಾಗರಾಜಯ್ಯನವರ ಈ ಕವಿತೆ ನನಗೆ ಬಹಳ ಕಾಡಿತ್ತು. ಕಾರಣ ಕುವೆಂಪುರವರ ಬಹುತೇಕ ಒಳನೋಟಗಳು, ಚಿಂತನೆಗಳ ಸಮಗ್ರನೋಟ ಈ ಕಾವ್ಯದ ಅಂತಃಶಕ್ತಿಯಾಗಿದೆ. ಈ ಕಾವ್ಯದ ರಚನೆಕಾರರನ್ನು ನೋಡಿದಾಗ ಕುವೆಂಪುರವರ ತತ್ವಗಳು ಇವರ ಮೇಲೆ ಬಹಳ ಪ್ರಭಾವ ಬೀರಿ ಕುವೆಂಪುರವರನ್ನು ಎದೆಗೆ ಇಳಿಸಿಕೊಂಡಿದ್ದಾರೆ ಅನ್ನಿಸುತ್ತದೆ.

“ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು ?

 ಅವರ ಕಾವ್ಯದಲ್ಲಿ ಕಾಣುವ ಮೃದುಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ, ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ, ಸಂತೋಷದ ಕಣ್ಣೀರು ಹರಿಸುತ್ತದೆ. ಪಾಶ್ಚಿಮಾತ್ಯ ಕಾವ್ಯ ವಿಮರ್ಶಕರ ಮಾನದಂಡದಿಂದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ”

  – ಡಿ.ಎಲ್. ನರಸಿಂಹಾಚಾರ್

ಡಾ.ವಡ್ಡಗೆರೆ ನಾಗರಾಜಯ್ಯ ಅವರ “ಹೇ.. ಶೂದ್ರ ತಪಸ್ವಿ’ ಎಂಬ ಕವಿತೆ ಇಂತಹ ಮಾನವೀಕರಣ ಎಲ್ಲಾ ನೆಲೆಗಳನ್ನು ತಡವಿದೆ ಹಾಗೂ ವಿಶ್ವಮಾನವತೆಯ ಆಶಯಗಳನ್ನು ಧಾರಣೆ ಮಾಡಿಕೊಂಡಿದೆ.

ಫೋಟೊ ಆಲ್ಬಂ


ಅನುಸೂಯ ಯತೀಶ್

ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

2 thoughts on “

  1. ಕಾವ್ಯ ,ಕಥಾ ಮಂಜರಿ ಪ್ರತಿ ಸಾಹಿತ್ಯವು ಹಿತವಾಗಲು ಒಂದು ವಿಮರ್ಶಾತ್ಮಕ ನುಡಿ ಹಾರೈಕೆಗಳು ಸದಾಮಇರಲೇ ಬೇಕು ಅದನ್ನು ತುಂಬುವ ನಿಘಂಟು ನೀವು ನೀಡಿದ ವಿಮರ್ಶಾ ಚಿಂತನೆ ಬಹು ಸುಂದರವಾದ ಮತ್ತು ಅರ್ಥಗರ್ಭಿತ ವಾಗಿದೆ ಕವಿಗೆ ಸ್ಪೂರ್ತಿ ತುಂಬಿದ ನಿಮಗೆ ಹಾಗೂ ರಚನೆಗಾರರಾದ ಡಾ ವಡ್ಡಗೆರ ನಾಗರಜ ಸರ್ ರವರಿಗೆ ಅಭಿನಂದನೆಗಳು ಕೋರುವೆ ಮೇಮ್ ಜೀ..✌✋

  2. ಅತ್ಯತ್ತಮವಾದ ಒಂದು ಸಿನಿಮಾ ನೋಡಿಬಂದಂತ ಭಾವ ಮೂಡಿತು ನಿಜಕ್ಕೂ ಶೂದ್ರ ತಪಸ್ವಿಯಾಗಿ ಕುವೆಂಪುರವರ ಕನಸುಗಳು ಆಗು ಆಶಯಗಳನ್ನು ನಾಗರಾಜಯ್ಯನವರು ಅತ್ಯುತ್ತಮವಾಗಿ ಕಟ್ಟಿದ್ದಾರೆ ಹಾಗು ಅಷ್ಟೇ ವಿಚಾರದ ಆಳಕ್ಕೆ ಇಳಿದು ಅದು ವಿಮರ್ಷೆ ಮಾಡಿ ಅನುಸೂಯ ಮೇಡಂ ತಮ್ಮೊಳಿರುವ ಜ್ಞಾನ ಪ್ರಭೆಯನ್ನು ಹೊರಹಾಕಿದ್ದಾರೆ. ಇಬ್ಬರಿಗೂ ಆತ್ಮೀಯ ಧನ್ಯವಾದಗಳು.

Leave a Reply

Back To Top