ಯುವಕರ ಬಾಳಿನ ಆಶಾಕಿರಣ

National Youth Day 2021: Remembering Swami Vivekananda on his birthday and  how he still inspires | Education News

ಆರ್. ಬಿ. ಪ್ರಿಯಾಂಕ

ಇಂದು  ರಾಷ್ಟ್ರೀಯ ಯುವದಿನ….

ರಾಷ್ಟ್ರವನ್ನು ಮುನ್ನಡೆಸಲು ಸಶಕ್ತವಾದ ಯುವಪಡೆಯನ್ನು ನಿರ್ಮಿಸುವುದೇ ನನ್ನ ಜೀವನದ ಗುರಿ ಎನ್ನುತ್ತಿದ್ದ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು” ರಾಷ್ಟ್ರೀಯ ಯುವ ದಿನ ” ಎಂದು ಆಚರಿಸಲಾಗುತ್ತದೆ.

 ” ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ” ಎಂದು ಯುವ ಜನತೆಯನ್ನು ಬಡಿದೆಬ್ಬಿಸಿದ ಸ್ವಾಮಿ ವಿವೇಕಾನಂದರು 1863 ಜನವರಿ 12 ರಂದು ಜನಿಸಿದರು.

ಇವರ ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ. ಇವರ ಮೂಲ ಹೆಸರು ನರೇಂದ್ರನಾಥ ದತ್ತ. ತದನಂತರ ಇವರು ವಿವೇಕಾನಂದ ಎಂಬಹೆಸರಿನಿಂದ ಜಗತ್ಪ್ರಸಿದ್ಧರಾದರು.

ಇವರ ಗುರುಗಳು ರಾಮಕೃಷ್ಣ ಪರಮಹಂಸರು. ಇವರ ಮಾರ್ಗದರ್ಶನದ ಜ್ಞಾನದ ಬೆಳಕಿನಲ್ಲಿ ವಿವೇಕಾನಂದರು ಬೆಳೆದರು.

1893 ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ವಿವೇಕಾನಂದರು ಮಾಡಿದ ಭಾಷಣ ಇಂದಿಗೂ ಪ್ರಖ್ಯಾತಿ.

” ಅಮೆರಿಕಾದ ಸಹೋದರ ಸಹೋದರಿಯರೇ “

ಎಂಬ ಆರಂಭದ ಮಾತು ಅಲ್ಲಿನ  ಜನರನ್ನು ಆಕರ್ಷಿಸಿತು.

ತಮ್ಮ ಅಗಾಧ ಚಿಂತನೆಗಳ ಮೂಲಕ ಸ್ವಾಮಿ ವಿವೇಕಾನಂದರು ವಿದೇಶಿಗರ ಮನವನ್ನು ಗೆದ್ದರು.

ಅವರ ಆ  ಭಾಷಣದಿಂದ ಇಡೀ  ವಿಶ್ವವೇ ಭಾರತವನ್ನು ನೋಡುವ ದೃಷ್ಟಿಯೇ  ಬದಲಾಯಿತು.

ಸ್ವಾಮಿ ವಿವೇಕಾನಂದರ ಸಂದೇಶಗಳು ವಿಶೇಷವಾಗಿ ಯುವಜನತೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ಇವರು ಹೊತ್ತಿಸಿದ ಜ್ಞಾನದ ದೀವಿಗೆ ಎಷ್ಟೋ ಯುವಕ-ಯುವತಿಯರ ಬದುಕಿನಲ್ಲಿ ಹೊಸ ಚೈತನ್ಯವನ್ನು ತಂದಿದೆ.

ಭವ್ಯ ಭಾರತವನ್ನು ನಿರ್ಮಿಸುವಲ್ಲಿ ಯುವಕರ ಪಾತ್ರದ ಕುರಿತು ಒತ್ತಿ ಹೇಳಿದರು. ಬಲಿಷ್ಠ ಭಾರತವನ್ನು ಕಟ್ಟುವ ಆಲೋಚನೆ ಹೊಂದಿದ ಇವರು ಕಾಲ್ನಡಿಗೆಯಲ್ಲೇ ದೇಶದ ಮೂಲೆ ಮೂಲೆಗೂ ಸಂಚರಿಸಿ ತಮ್ಮ ವಿಚಾರಗಳ ಮೂಲಕ ಸ್ಫೂರ್ತಿಯನ್ನು ತುಂಬಿದರು.

ಸ್ವಾಮಿ ವಿವೇಕಾನಂದರ ಕೆಲವು ತತ್ವಾದರ್ಶಗಳು…

” ಮಾರ್ಗದರ್ಶನ ನೀಡುವವರು ಇಲ್ಲದಿದ್ದರೇನು?

ಹೊಸಮಾರ್ಗ ಸೃಷ್ಟಿಸುವ ಧೈರ್ಯ ಮತ್ತು ತಾಕತ್ತು ನಿನ್ನಲ್ಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ.”

ಎಂಬಂತೆ ನಮ್ಮ ಪಾಲಿಗೆ ಎಲ್ಲಾ ಮಾರ್ಗಗಳು ಮುಚ್ಚಿ ಹೋದರೇನಂತೆ, ನಾವು ನಡೆದಿದ್ದೇ  ಒಂದು ಮಾರ್ಗವಾಗಲೀ, ಆ ಮಾರ್ಗ ನಾಲ್ಕು ಜನಕ್ಕೆ ಸ್ಪೂರ್ತಿಯಾಗಲಿ. ಎಂಬ ವಿವೇಕಾನಂದರ ಮಾತು ಯುವಕರ ಕುರಿತಾದ ಪ್ರೇರಣೆಯ ನುಡಿಯಾಗಿದೆ.

 ” ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ,  ಪ್ರಯತ್ನಿಸುವುದರಿಂದ ನಷ್ಟವೇನಿದೆ ಗೆದ್ದರೆ ಸಂತೋಷ,  ಸೋತರೆ ಅನುಭವ.”

ಎಂಬ ಮಾತು ಪ್ರಯತ್ನವನ್ನು ಕುರಿತದ್ದಾಗಿದೆ. ನಿರಂತರ ಪ್ರಯತ್ನವನ್ನು ಮಾಡಬೇಕು,  ಒಂದು ವೇಳೆ ಸೋತರೆ ಅದನ್ನು ಒಂದು ಅನುಭವವಾಗಿ ತೆಗೆದುಕೊಂಡು ಪುನಃ  ಪ್ರಯತ್ನವನ್ನು ಮಾಡಬೇಕು.

ಮರಳಿ ಪ್ರಯತ್ನವನ್ನು ಮಾಡುವ ಮನ ಬಲಗೊಳ್ಳಬೇಕು.

 ” ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ದಾರರು, ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.”

ಎಂಬ ಮಾತಿನಂತೆ ನಮ್ಮ ದುಃಖಕ್ಕೆ ನಾವೇ ಜವಾಬ್ದಾರರಾಗಿರುತ್ತೇವೆ.  ಜೀವನದಲ್ಲಿ ಸಮಸ್ಯೆಗಳು ಹಕ್ಕಿಗಳಂತೆ ಅವು ಆಗಾಗ ಬಂದು ಹೋಗುತ್ತವೆ. ಆದರೆ ಅವನ್ನು  ಯಾವತ್ತೂ ಗೂಡು ಕಟ್ಟಲು ಬಿಡಬಾರದು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಪರಿಹಾರದ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕು.

ಹಾಗೆಯೇ ನಮ್ಮ ಜೀವನದ ಶಿಲ್ಪಿಗಳು ನಾವೇ ಆಗಿರುತ್ತೇವೆ. ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎಂಬುದು ನಮ್ಮ ಕೈಯಲ್ಲಿದೆ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ ಎಂಬುದನ್ನು ಮರೆಯಬಾರದು ಎಂಬ ವಿವೇಕಾನಂದರ ಮಾತು ಸ್ಪೂರ್ತಿಯ  ಪ್ರತೀಕ.

” ಇತರರಿಗಾಗಿ ಯಾರು ಮರಗುತ್ತಾರೆ ಅವರೇ ನಿಜವಾಗಿಯೂ ಬದುಕಿರುವವರು,  ಉಳಿದವರು ಬದುಕಿದ್ದು ಸತ್ತಂತೆ.”

ಕಷ್ಟದಲ್ಲಿರುವವರ, ಅಸಹಾಯಕರ,  ದುರ್ಬಲರ ಕಂಡು ನಮ್ಮ ಜೀವ ಮರುಗಿ  ಸಹಾಯ, ಸಾಂತ್ವನಕ್ಕೆ ಮುಂದಾದರೆ ನಾವು ಮನುಷ್ಯರಾಗಿದ್ದೇವೆ ಎಂದರ್ಥ. ಅಂದರೆ ಇದು  ಮಾನವೀಯತೆಯನ್ನು ಎತ್ತಿ ತೋರಿಸುತ್ತದೆ. ಮನುಷ್ಯನ ಬದುಕಿನಲ್ಲಿ ಸಹಕಾರ ಸಹೋದರತ್ವ ಮಾನವೀಯ ಮೌಲ್ಯಗಳು ಅತ್ಯಂತ  ಪ್ರಮುಖವಾಗಿವೆ.

ಹೀಗೆ ತಮ್ಮ ಅಪೂರ್ವ ವಿಚಾರಗಳ ಮೂಲಕ ನಮ್ಮ ರಾಷ್ಟ್ರದ ಚೇತನವನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು. ಯುವಕರಲ್ಲಿ ಪ್ರೋತ್ಸಾಹವನ್ನು ತುಂಬಿದರು. ಭಾರತದ ಸಂಸ್ಕೃತಿ, ಸಿರಿವಂತಿಕೆ,  ಜ್ಞಾನದ ಕುರಿತು ತಿಳಿ ಹೇಳಿದರು.

ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ,  ಭವ್ಯ ಭಾರತದ ಹೆಮ್ಮೆಯ ಪುತ್ರ,  ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಎಂದಿಗೂ ಜೀವಂತ.

ತಮ್ಮ 39ನೇ ವರ್ಷದಲ್ಲಿ ದೇಹ ತ್ಯಜಿಸಿದ ಅವರು ತಮ್ಮ ಅಪೂರ್ವ ತತ್ವಾದರ್ಶ,  ಸ್ಫೂರ್ತಿ, ಪ್ರೇರಣೆಯಚಿಂತನೆಗಳ ಮೂಲಕ ಎಂದೆಂದಿಗೂ ಅಜರಾಮರರಾಗಿದ್ದಾರೆ.


Leave a Reply

Back To Top