ಕರ್ಮ ಕಮ್ಸ್ ಬ್ಯಾಕ್

ಅನುವಾದಿತ ಕಥೆ

ಕರ್ಮ ಕಮ್ಸ್ ಬ್ಯಾಕ್

ತೆಲುಗು ಮೂಲ: ಅಮ್ಜದ್                       

ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು

550+ Car Accident Pictures | Download Free Images on Unsplash

ಒಂದು ಭಾನುವಾರದ ಬೆಳೆಗ್ಗೆ ನನ್ನ ಸೋದರತ್ತೆ, ಮಾವ ಮನೆಗೆ ಬಂದರು. ಮನೆಮಂದಿಗೆಲ್ಲಾ ವಿಸ್ಮಯ. ಸಂತೋಷಪಟ್ಟೆವು.

ನನ್ನ ಸೋದರತ್ತೆ ಸೀದಾ ನನ್ನ ಹತ್ತಿರ ಬಂದು “ಹೇಗಿದ್ದಿಯಮ್ಮಾ ಮುದ್ದು ಸೊಸೆ” ಅಂತ ಅಪ್ಪಿಕೊಂಡಳು. ಆಕೆಯ  ಸಂಬೋಧನೆ ನನಗೆ ಹೊಸತೆನೆಸಿದರೂ, ಶಿಷ್ಟಾಚಾರದ ಮುಗುಳ್ನಗೆಯಿಂದ “ಚೆನ್ನಾಗಿದ್ದೇನೆ” ಎನ್ನುತ್ತ ತಲೆಯಾಡಿಸಿದೆ.

ಮಾವ ರಘು “ ಏನಯ್ಯಾ! ನೀನು ಈ ಆರಾಮ ಕುರ್ಚಿ ಬಿಡಲ್ವಾ ?” ಎನ್ನುತ್ತ ಮಾತಾಡಿಸಿದ ಅಪ್ಪನನ್ನು.

ಅಂದಿನ ದಿನ ಪತ್ರಿಕೆಯನ್ನು ಓದುತ್ತಿದ್ದ ಅಪ್ಪ ಎದ್ದು ನಿಂತು, ನಮಸ್ಕಾರ ಮಾಡಿ ಹತ್ತಿರದ ಪ್ಲಾಸ್ಟಿಕ್ ಕುರ್ಚಿಯನ್ನು ಎಳೆದು ಕುಳಿತುಕೊಳ್ಳುವಂತೆ ಸಂಜ್ಞೆ ಮಾಡಿದರು.

ರಘು ಮಾಮ ಒಳ್ಳೆ ಸಂಪಾದನೆ, ಆಸ್ತಿಗಳೊಂದಿಗೆ ಮೆರೆಯುತ್ತಿದ್ದರು. ಬಂಜಾರಾ ಹಿಲ್ಸ್ ನಲ್ಲಿ G+1 ವಿಲ್ಲಾವನ್ನು ಒಳ್ಳೆಯ ಆರ್ಕಿಟೆಕ್ಟ್ ಕೋನಗಳಿಂದ ಕಟ್ಟಿಸಿ, ಅದರಲ್ಲಿ ಎಲ್ಲಾ ಸೌಕರ್ಯಗಳೊಂದಿಗ ನಿವಾಸವಿದ್ದಾನೆ. ರಾಜಕೀಯದಲ್ಲಿ ಸಹ ಒಳ್ಳೆ ಅನುಭವ. ತುಂಬಾ ಸ್ವಾರ್ಥಿ.

ಕಳೆದ ವರ್ಷ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲವೆಂದು ತಿಳಿದೂ ಏನೂ ಗೊತ್ತಿಲ್ಲದವನಂತೆ ನಟಿಸಿದ್ದ. ಅಮ್ಮ ಅನಾರೋಗ್ಯದಿಂದ ಮೃತ್ಯುಮುಖಕ್ಕೆ ಹೋದರೂ, ಒಮ್ಮೆಯಾದರೂ ನೋಡಲು ಬಂದಿರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಇಷ್ಟು ಪ್ರೀತಿ ಹೇಗೆ ಹುಟ್ಟದೆಯೋ?

“ ಏನು ದಿಢೀರಂತ ಬಂದಿದ್ದೀರಿ? ಏನು ವಿಶೇಷ ?” ತನ್ನ ಸಹಜ ಧೋರಣೆಯಲ್ಲೇ ಕೇಳಿದ್ದರು ಅಪ್ಪ.

“ ನೀರಿನ ಮೇಲೆ ಕಟ್ಟಿಗೆಯಿಂದ ಹೊಡೆದರೆ ನೀರು ಬೇರೇ ಆಗುತ್ತಾ ಅಣ್ಣಾ! ನಮ್ಮ ನೆಂಟಸ್ತಿಕೆ ಅಂಥಾದ್ದು. ನಿಮಗೆ ಗೊತ್ತಿಲ್ಲದ್ದೇನಿದೆ? ಇವರು ನೋಡಿದ್ರೆ ಊರೂರು ತಿರುಗೋದು, ಪಾರ್ಟಿ ಗದ್ದಲಗಳಲ್ಲಿ ಹೋಗೋದು, ಮತ್ತೆ ಸ್ವಲ್ಪ ಸಮಯ ಸಿಕ್ಕರೆ ಆಫೀಸಲ್ಲಿ ಕೂರೋದು. ನಮ್ಮ ಪ್ರಸಾದನೂ ವ್ಯಾಪಾರ ಸುಧಾರಿಸ್ತಾ ಇದ್ದಾನೆ. ಅವನಿಗೊಂದು ಮದುವೆ ಮಾಡಿಸಿದರೆ ಅಲ್ಲಿ ವ್ಯಾಪಾರ, ಇಲ್ಲಿ ಮನೆ ಎರಡೂ ನೋಡ್ಕೊಳ್ತಾನೆ ಅಂತ “ ಸಣ್ಣ ಕಥೆ ಹೇಳಿದಳು ಅತ್ತೆ ಅಪ್ಪನ ಪ್ರಶ್ನೆಗೆ.

“ ಇದರಲ್ಲಿ ನಮ್ಮದೇನಿದೆ? “ ಅಪ್ಪ ಅವಳ ಮಾತಿನಲ್ಲಿಯ ನಿಗೂಢಾರ್ಥವನ್ನು ಹೇಗೆ ಅರ್ಥ ಮಾಡಿಕೊಂಡರೋ ಏನೋ, ರಘು ಮಾಮನ ಕಡೆಗೆ ತಿರುಗಿ ಅಂದರು.

“ ಅದಕ್ಕೇ ಅಲ್ಲ ನಿಮ್ಮ ಹತ್ತಿರ ಬಂದಿದ್ದು ! ನೀವು ಎಸ್ ಅನ್ನೋವರೆಗೂ ನಾವು ಇಲ್ಲಿಂದ ಏಳೋದಿಲ್ಲ” ಒಂದು ಅಸಹ್ಯ ನಗೆ ಮಾವನ ಮುಖದಲ್ಲಿ ಹಾದುಹೋಗಿತ್ತು.

“ ಅಣ್ಣಾ! ನೀವು ಮನಸ್ಸಿನಲ್ಲಿ ಏನೂ ಇಟ್ಕೊಬೇಡಿ. ನಮ್ಮಿಂದ ಏನಾದರೂ ಕಷ್ಟವಾಗಿದ್ದಲ್ಲಿ ಕ್ಷಮಿಸಿ. ನಡೆದಿದ್ದೆಲ್ಲಾ ಮರೆಯಿರಿ” ಅತ್ತೆ ಅತಿ ಮೃದು ಸ್ವರದಲ್ಲಿ ಅಂದಳು. ಅವಳ ಗಯ್ಯಾಳಿ ಕೊರಳು ಇವತ್ತು ಎಲ್ಲಿ ಹೋಗಿತ್ತೋ! ನಾನು, ಅಮ್ಮ ಒಬ್ಬರನ್ನೊಬ್ಬರು ನೋಡಿಕೊಂಡೆವು.

 “ನನ್ನೇನು ಮಾಡನ್ನುತ್ತೀರೀ?” ಅಪ್ಪನ ಕಂಠದಲ್ಲಿ ಅಸಹನೆ ತುಳುಕಾಡಿತು.

ಅತ್ತೆ ರಘು ಮಾವನ ಕಡೆಗೆ ತಿರುಗಿ ಹೇಳಿದಳು ನೀವು ಹೇಳಿ ಎನ್ನುವ ಹಾಗೆ.

“ ಸಣ್ಣತನದಿಂದಲೂ ವಸಂತ, ಪ್ರಸಾದ್ ಆಡಿಪಾಡಿ ಬೆಳೆದಿದ್ದಾರೆ. ನಮ್ಮಿಬ್ಬರ ಕುಟುಂಬಗಳಲ್ಲಿ ಯಾರು ಇಟ್ಟ ಬೆಂಕಿನೋ ಏನೋ….. ಸ್ವಲ್ಪ ಎಡವಟ್ಟಾಗಿದೆ. ಇಲ್ಲ ಅಂತಲ್ಲ. ದೊಡ್ಡವರು, ನಾವು ಸರಿಮಾಡೋಣ. ಹುಡುಗರ ಭವಿಷ್ಯ ಚೆನ್ನಾಗಿರುತ್ತೆ. ನನಗೂ ಒಬ್ಬನೇ ಮಗ. ನಿಮಗೂ ಒಬ್ಬಳೇ ಮಗಳು. ನಿಮ್ಮ ಮಗ ಇನ್ನೂ ಪಿಯುಸಿ ಯಲ್ಲಿದ್ದಾನೆ. ಮದುವೆ ನಾವೇ ಚೆನ್ನಾಗಿ ಮಾಡಿಕೊಳ್ತೀವಿ.. ವರದಕ್ಷಿಣೆಯ ಪ್ರಸ್ತಾವನೇ ಇಲ್ಲ. ನನ್ನದು ಮೂರು ತಲೆಮಾರು ತಿಂದರೂ ಕರಗದ ಆಸ್ತಿ” ಅಪ್ಪನ ಎದುರು ಕೈಜೋಡಿಸಿದರು ರಘು ಮಾವ.

ನನ್ನದೇ ಮದುವೆ ವಿಷಯಕ್ಕೇ ಬಂತು ಮಾತು. ಅಲ್ಲಿಂದ ತಪ್ಪಿಸಿಕೊಳ್ಳಲೂ ಆಗದಷ್ಟು ಚಿಕ್ಕದು ನಮ್ಮ ಮನೆ. ನನಗೂ ನನ್ನ ಮದುವೆಯ ವಿಷಯದಲ್ಲಿ ಅಲ್ಲಿದ್ದರೇ ವಾಸಿ ಎನಿಸಿತ್ತು. ಅಪ್ಪ, ಅಮ್ಮ ಸಹ ನನ್ನ ಅಭಿಪ್ರಾಯಕ್ಕೆ ಒಪ್ಪುತ್ತಾರೆ.

“ಮದುವೆ ವಸಂತಳಿಗೆ ಸಂಬಂಧಪಟ್ಟದ್ದು. ಅದನ್ನ ಅವಳಿಗೇ ಬಿಟ್ಟಿದ್ದೇವೆ“ ಅಪ್ಪ ಹೇಳಿದರು. ಅಮ್ಮ ತಲೆಯಾಡಿಸಿದಳು.

“ ಏನಮ್ಮಾ! ಪ್ರಸದ್ ಜೊತೆ ಮದುವೆಗೆ ನಿನ್ನ ಅಭ್ಯಂತರವೇನಾದರೂ ಇದೆಯಾ?” ಪ್ರೀತಿ ತುಂಬಿದ ದನಿಯಲ್ಲಿ ನನ್ನ ಕೇಳಿದಳು ಅತ್ತೆ.

“ಇಲ್ಲ” ಎನ್ನುವ ಹಾಗೆ ತಲೆಯಾಡಿಸಿ “ ಒಮ್ಮೆ ಅವನ ಜೊತೆ ಮಾತಾಡಬೇಕು” ಎಂದೆ.” “ಅಷ್ಟೇ ಅಲ್ಲ. ನಮ್ಮಿಬ್ಬರ ಜೊತೆ ಯಾರೂ ಇರಕೂಡದು” ಎಂದು ಜೋಡಿಸಿದೆ.

ನಾಲ್ಕೂ ಜನ ಒಪ್ಪಿದರು.

ಮರುದಿನ ನಮ್ಮ ಮನೆಯ ತಾರಸಿಯ ಮೇಲೆ ಎರಡು ಪ್ಲಾಸ್ಟಿಕ್ ಕುರ್ಚಿಗಳಲ್ಲಿ ನಾನೂ, ಪ್ರಸಾದ್ ಕೂತಿದ್ದೆವು. ಪ್ರಸಾದ್ ಕರೆಕ್ಟಾಗಿ ಏಳು ಗಂಟೆಗೆ ಬಂದಿದ್ದ.

“ ನನ್ನನ್ನೇ ಏಕೆ ಆರಿಸಿದೆ ನಿನ್ನ ಸಹಚರಿಯಾಗಿ?” ನೇರವಾಗಿ ಕೇಳಿದೆ.

“ ಚಿಕ್ಕಂದಿನಿಂದ ನೀನಂದ್ರೆ ಇಷ್ಟ ನನಗೆ”

“ ನನಗೆ ಯಾವಗಲೂ ಆ ತರದ ಸಂಕೇತ ಬರಲೇ ಇಲ್ಲ”

“ದಿಲ್ ಹಿ ದಿಲ್ ಮೆ ಪ್ಯಾರ್ ಕಿಯಾ ಹೈ ತುಝೆ” ಮುಗುಳು ನಕ್ಕ. ಮತ್ತೆ ಅಂದ “ ಅಪ್ಪ, ಅಮ್ಮ ನಮ್ಮ ಅಂತಸ್ತಿನ ಹುಡುಗಿಯರ ಸಲುವಾಗಿ ಹುಡುಕ್ತಾ ಇರೋವಾಗ ನಾನು ಬೇಡ ಅಂದಿದ್ದೆ. ಅವರ ಜೊತೆ ವಾದ ಪ್ರತಿವಾದ ನಡೆದಿದ್ದವು…. ಕೊನೆಗೆ ನಾನೇ ಗೆದ್ದೆ. ಅದಕ್ಕೆ ಈಗ ನಿನ್ನ ಮುಂದಿದ್ದೇನೆ. ಇದಕ್ಕಿಂತ ಹೆಚ್ಚೇನು ಹೇಳಲ್ಲ. ಕೊನೆ ನಿರ್ಣಯ ನಿಂದೇ “ ಅಂದ ನಗುತ್ತಾ.

“ ನನಗೂ ಈ ಮಾತು ನಿನ್ನಿಂದ ಕೇಳಬೇಕಾಗಿತ್ತು.” ಎನ್ನುತ್ತ ನಾನು ಕುರ್ಚಿಯಿಂದ ಎದ್ದೆ. ಪ್ರಸಾದ್, ನಾವು ನಗುಮೊಗಗಳಿಂದ ಒಳಗೆ ಬಂದದ್ದು ನೋಡಿ ಮನೆ ತುಂಬಾ ಆಹ್ಲಾದಕರವಾದ ವಾತಾವರಣ ತುಂಬಿತು.

**************

ನನ್ನ ಸೋದರತ್ತೆ, ಈಗ ಅತ್ತೆ, ನನ್ನನ್ನು ಮಂಚದಿಂದ ಇಳಿಯದ ಹಾಗೆ ನೋಡಿಕೊಳ್ಳ ತೊಡಗಿದ್ದಳು, ಹೊಸ ಮದುವಣಗಿತ್ತಿ ಅಂತ. ಆಗಾಗ ನನಗೆ ತುಂಬಾ ಮುಜುಗರವಾಗುತ್ತಿತ್ತು. ಯಾಕೋ ಅತಿಯಾಗ್ತಿದೆ ಎನಿಸಿತ್ತು.

ಒಂದು ದಿನ ನಾನ್ನಿನ್ನೂ ನಿದ್ರೆಯಲ್ಲಿದ್ದಾಗ ನನ್ನ ಪ್ರಾಣ ಸ್ನೇಹಿತೆ ಸುಶೀಲ ಫೋನ್ ಮಾಡಿ, ಮದುವೆಯ ಶುಭಾಶಯ ತಿಳಿಸಿದಳು. ಅವಳ ಗಂಡನಿಗೆ ಯಾವುದೋ ಬಿಜಿನೆಸ್ ಕೆಲಸ ಬಿದ್ದಿದ್ದು ಅವಳಿಗೆ ಮದುವೆಗೆ ಬರಲಾಗಿದ್ದಿಲ್ಲ. ಅದಕ್ಕೆ ನೊಂದುಕೊಂಡಳು. ಅಪ್ಪನ ಹತ್ತಿರ ನನ್ನ ವಿಳಾಸ ತಿಳಿದುಕೊಂಡಿದ್ದಳು. ಎರಡು ಗಂಟೆ ಬಿಟ್ಟು ಬರ್ತೇನೆ, ನಂಜೊತೆ ತಿಂಡಿ ಸಹ ತಿಂತೇನೆ ಅಂತ ಹೇಳಿದಳು. ಅಷ್ಟೊತ್ತಿಗೆ ಪ್ರಸಾದ್ ಹೊರಗೆ ಹೋಗುತ್ತಿದ್ದ. ಅತ್ತೆಗೆ ಸುಶೀಲಳ ಬಗ್ಗೆ ಹೇಳಿದೆ. ಒಳ್ಳೆ ತಿಂಡಿ ಮಾಡಿಸಿದಳು.

ಸ್ನಾನಾದಿಗಳು ಮುಗಿಸಿ ಸುಶೀಲಳ ಹಾದಿ ಕಾಯುತ್ತಿದ್ದ ಹಾಗೆ ಬಂದಳು. ನಗೆ, ಸಂಭ್ರಮಗಳ ನಡುವೆ ಅವಳ ಊಟಿ ಟ್ರಿಪ್, ನನ್ನ ಮದುವೆಯ ಸುದ್ದಿ ಕೆಲ ಸಮಯ ನಡೆದವು ನಮ್ಮ ನಡುವೆ. ಸುಶೀಲಳಿಗೆ ನಮ್ಮ ಮದುವೆ ಫೋಟೋ ಆಲ್ಬಂ ತೋರಿಸಿದೆ. ಸಿಡಿ ನಂತರ ನೋಡೋಣ ಅಂದುಕೊಂಡೆವು. ಫೋಟೋ ನೋಡ್ತಾ ಒಂದು ಕಡೆ ನಿಂತುಹೋದಳು ಸುಶೀಲ. ಷಾಕ್ ತಿಂದವಳಂತೆ ಕಂಡಳು. “ಇವರು ಪ್ರಸಾದ್ ಅಲ್ಲ…. ನಿನ್ನ…  “ ಅವಳ ಮುಖದಲ್ಲಿ ಯಾವುದೋ ಸಂದೇಹ. ನನಗೆ ಗಾಭರಿಯಾಯಿತು. ಸುಶೀಲಳಿಗೆ ಪ್ರಸಾದ್ ನ ಪರಿಚಯವಿದೆಯಾ? ಏನಾದರೂ ಅನ್ಯರೀತಿಯ ಸಂಬಂಧ? ಯಾವಾಗಿಂದಾ? ಹೇಗೆ…. ಆಲೋಚನೆ ಮಾಡತೊಡಗಿದ್ದೆ.

ಸುಶೀಲ ಎದ್ದು ನಿಂತು “ ನಾನು ಮತ್ತೆ ಸಿಗ್ತೀನಿ. ಬೇಗ….” ಎಂದಳು,

“ ಎನಿ ಥಿಂಗ್ ರಾಂಗ್ ಸುಶೀ?” ನಡುಗುತ್ತಿದ್ದ ದನಿಯಲ್ಲಿ ಕೇಳಿದೆ.

ಬಲವಂತವಾಗಿ ಮೊಗದಲ್ಲಿ ಕಿರುನಗೆ ತಂದುಕೊಂಡು “ ನಿನ್ನ ಜೊತೆ ವಿವರವಾಗಿ ಮಾತಾಡ್ತೇನೆ” ಎಂದಳು.

ನನ್ನ ಅತ್ತೆಯ ಹತ್ತಿರ ಹೇಳದೇನೇ ಹೊರಟು ಹೋದಳು.

ಮನೆಗೆ ಹೋಗಿ ನನಗೆ ಫೋನ್ ಮಾಡಿ ಮಾತಾಡಿದಳು ಸುಶೀಲ. ಅವಳು ಹೇಳಿದ ವಿಷಯ ಕೇಳಿದಮೇಲೆ ನನ್ನ ಪಾದಗಳ ಕೆಳಗಿನ ನೆಲ ಕುಸಿದಂತಾಯಿತು.

“ನೀನು ತುಂಬಾ ಧೈರ್ಯದಲ್ಲಿರ ಬೇಕು ವಸೂ ! ನಿನಗೆ ನಂಬಿಕೆ ಬರಲಿಕ್ಕೆ ನಾನೊಂದು ಪ್ಲಾನ್ ಮಾಡಿದ್ದೇನೆ. ನಾನು ಹೇಳಿದ ಹಾಗೆ ಮಾಡಬೇಕು ನೀನು. ನಿನಗೆ ಇದರ ಬಗ್ಗೆ ಖಾತ್ರಿ ಪಡೆಸಲು ಪ್ರಸಾದ್, ಸುನಂದರ ಕೆಲ ಫೋಟೋ ಕಳಿಸ್ತಾ ಇದ್ದೇನೆ. ನೋಡಿ ಡಿಲೀಟ್ ಮಾಡು. ಮತ್ತೇನು ಮಾಡ್ತಿಯೋ ನೋಡು” ಎಂದಳು.

ಹೋಟಲ್ ಶಾಂತಿಯಲ್ಲಿ ಕೂತೆ. ವೆಯಿಟರ್ ಬಂದು ನನ್ನೆದುರಿನಲ್ಲಿದ್ದ ಎರಡು ಕುರ್ಚಿಗಳ ನಡುವೆ ಸುಂದರವಾದ ಕುಸುರಿಯ ಕಟ್ಟಿಗೆಯ ಪರದೆ ಇಟ್ಟ. ನಾನು ನನ್ನ ಎದುರು ಕೂತವರನ್ನು ನೋಡಲಾಗುವುದಿಲ್ಲ. ಅವರು ನನ್ನನ್ನು ನೋಡಲಾಗುವುದಿಲ್ಲ. ಇದು ಸುಶೀಲ ಮಾಡಿದ ಏರ್ಪಾಡು. ನೆಸ್ ಕಾಫಿ ಹೇಳಿದೆ. ಕಾಲು ಗಂಟೆಯ ನಂತರ ಸುಶೀಳ ಮತ್ತೊಬ್ಬ ಹುಡುಗಿಯ ಜೊತೆ ನಗುತ್ತ ಬಂದು ಕೂತಳು.

ನಾನು ಕಿವಿ ನಿಮಿರಿಸಿ ಇಬ್ಬರ ಮಾತುಕತೆ ಕೇಳತೊಡಗಿದೆ.

“ಏನು ತೊಗೊಳ್ಳೋಣ” ಸುಶೀಲ.

“ಏನಾದ್ರೂ ಸರಿ. ಲೈಟಾಗಿರಲಿ…!”

“ನಾನು ಮಾತ್ರ ಪೂರಿ ತೊಗೊಳ್ತೀನಿ. ಇಲ್ಲಿ ಚೆನ್ನಾಗಿರುತ್ವೆ. ಲೈಟ್ ಅಂದ್ರೆ ಇಡ್ಲಿ ಚೆನ್ನಾಗಿರತ್ತೆ.” ಸೂಚಿಸಿದಳು ಸುಶೀಲ. ಮತ್ತೆ ಅವಳೇ ಅಂದಳು “ ಪ್ರಸಾದ್ ಗೆ ಫ್ಯಾಟಿ ಹುಡುಗಿ ಅಂದರೆ ಇಷ್ಟವಿಲ್ಲ ಅಂತ ಕಾಣತ್ತೆ!” ನಕ್ಕಳು.

“ ಊ… ಹಾಗೇನಿಲ್ಲ. ಆದರೆ ಅವನಿಗೆ ಚೆನ್ನಾಗಿ ಕಾಣಬೇಕಲ್ಲ !”

“ಇಷ್ಟಕ್ಕೂ ಮದುವೆ ಯಾವಾಗಂತೆ ?”

ಹೊಸ ಹುಡುಗಿ ನಿಟ್ಟುಸಿರುಡುವುದು ಕೇಳಿ ಬಂತು “ ನಿನಗಿದುವರೆಗೇ ಹೇಳಿದ್ನಲ್ಲ ! ನಮ್ಮ ಮನೆಯಲ್ಲಿ, ಪ್ರಸಾದ್ ಮನೆಯಲ್ಲಿ ಬಾಬಾ ಗಳ ಹುಚ್ಚಿದೆ ಅಂತ “

“ ಇದೆ. ನಿನ್ ಮದುವೆಗೆ ಬಾಬಾಗೂ ಏನು ಸಂಬಂಧ?”

“ ಇದೆ. ಗಾಢವಾದ ಸಂಬಂಧ ಇದೆ. ಹತ್ತಿರವೇ ಇರೋ ಭಗವಾನ್ ಬಲರಾಂ ಬಾಬಾ ಆಶ್ರಮಕ್ಕೆ ನಮ್ಮಪ್ಪ, ಅಮ್ಮ ಪ್ರಸಾದ್ ಅಪ್ಪ, ಅಮ್ಮ ಜೊತೆಯಲ್ಲಿ ಹೋಗ್ತಿರ್ತಾರೆ. ಆ ಬಾಬಾನ ಮೇಲೆ ತುಂಬಾ ನಂಬಿಕೆ “

“ ನೀನೆಂದೂ ಹೋಗಿಲ್ವಾ ? “

“ಪ್ರಸಾದ್ ಬಲವಂತಕ್ಕೆ ಒಮ್ಮೆ ಹೋಗಿದ್ದೆ “

“ಹೇಗನಿಸಿತ್ತು?”

“ ಆಶ್ರಮ ಬರೀ ಒಂದು ಫಾರ್ಮ್ ಹೌಸ್ ತರ ಇದೆ. ಬಾಬಾ ಜೋಕರ್ ಎನಿಸಿದ್ದ”

“ಸರಿ. ಬಾಬಾ ವಿಷಯ ಬೇಡ….. ನಿನ್ನ ಮದುವೆ ವಿಷಯದಲ್ಲಿ ಏನು ಸಲಹ ಕೊಟ್ಟ ಆ ಬಾಬಾ?”

“ ನಂಗೆ ಅಮ್ಮ ಈ ವಿಷಯ ಹೇಳಿದಳು. ಸುರುವಿನಲ್ಲಿ ನಾನೂ ನಂಬಲಿಲ್ಲ. ಆದರೆ ಅಪ್ಪ, ಅಮ್ಮ ಬಾಬಾ ರ ಪವಾಡಗಳ ಬಗ್ಗೆ ಹೇಳ್ತಾ ಇದ್ದರು. ನಾನು ಮಾತ್ರ ಇದರಲ್ಲಿ ನಂಬಿಕೆ ಇಡದವಳಾಗಿದ್ದು, ಅವರ ಜೊತೆ ವಾದ ಮಾಡುತ್ತಿದ್ದೆ. ಆದರೆ ನನ್ನ ಮಾತು ನಡೆಯಲಿಲ್ಲ. ಎಲ್ಲಕ್ಕಿಂತ ಮುಖ್ಯವಾದ್ದು ಪ್ರಸಾದ್ ಮತ್ತು ನನ್ನ ಮದುವೆ. ಪ್ರಸಾದ್ ಅಂದರೆ ನನಗೆ ಪ್ರಾಣ. ಯಾವುದೋ ಪ್ರಾಣಗಂಡ ಇದೆ ಅಂತ ಹೇಳಿ ಬಾಬಾ ಪರಿಷ್ಕಾರ ಹೇಳಿದ್ದರಂತೆ. ಪ್ರಸಾದ್ ಮದುವೆಯಾದ ಮೂರು ತಿಂಗಳಲ್ಲಿ ಹೆಂಡತಿ ಸತ್ತು ಹೋಗುತ್ತಾಳಂತೆ. ಹಾಗಾಗಿ ಬೇರೇ ಯಾರನ್ನಾದರೂ ಮದುವೆಯಾಗಿ….. ನಂತರ ನನ್ನ ಮದುವೆ ಮಾಡಿಕೊಂಡರೆ ಆ ಶನಿ ಬಿಟ್ಟುಹೋಗುತ್ತಂತೆ ! ಕೇಳಲಿಕ್ಕೆ ವಿಚಿತ್ರವೆನಿಸಿದರೂ ಒಪ್ಪಿದೆ. ಮತ್ತೆ ನಮ್ಮ ನಿಶ್ಚಿತಾರ್ಥ ಸಹ ನಡೆದು ಹೋಯಿತು. ನೀನು ಫೋಟೋ ನೋಡಿದಿಯಲ್ಲ !”

“ಹೌದು. ನೋಡಿದ್ದೇನೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಗಿದೆ. ಅದು ಕೂಡಾ ಬಾಬಾರ ಸಲಹೆ ಅಂತ ಕಾಣತ್ತೆ”

“ಮತ್ತೆ !”

“ ಗಂಡಾಂತರದ ಅವಧಿ ಏನು?”

“ಮೂರು ತಿಂಗಳು. ಈಗಾಗಲೇ ಮದುವೆಯಾಗಿ ಒಂದು ತಿಂಗಳು ಆಗ್ತಾ ಬಂತು. ಪಾಪ ಯಾರೋ ಸ್ಕೇಪ್ ಗೋಟ್…ಪೂರ್ ಗರ್ಲ್” ಎಂದಿದ್ದಳು ಸುನಂದ. ಮತ್ತೆ ಅವಳೇ ಅಂದಳು “ ಬರ್ತೀನಿ ಸುಶೀ ! ಪ್ರಸಾದ್ ಒಂದು ಗಂಟೆ ಒಳಗೆ ನಮ್ಮ ಮನೆಗೆ ಬರ್ತಾನೆ. ನಾವಿಬ್ಬರೂ ಸೇರಿ ಫರ್ನಿಚರ್ ಸೆಲೆಕ್ಟ್ ಮಾಡ್ಬೇಕು”

“ಸರಿ. ಹಾಗಾದರೆ”  ಸುಶೀಲ.

ಹೋಟೆಲ್ ಹೊರಗಡೆವರೆಗೂ ಹೋಗಿ ಬಿಟ್ಟು ಬಂದಳು ಸುಶೀಲ. “ಇನ್ನು ಹೊರಗೆ ಬಾ ವಸೂ!” ಅಂದಳು. ಬಾಯ್ ಗೆ ಹೇಳಿ ಕಟ್ಟಿಗೆ ಪರದೆಯನ್ನು ತೆಗೆಸಿದಳು.

ನನ್ನ ಕಂಗಳಲ್ಲಿ ಬರೀ ಕಂಬನಿ ಬಿಟ್ಟರೆ ಮುಖದ ಮೇಲೆ ಮತ್ಯಾವ ಭಾವವೂ ಕಾಣಲಿಲ್ಲ ಅವಳಿಗೆ.

ಅವಳು ನನ್ನ ಮುಖವನ್ನೇ ದಿಟ್ಟಿಸುತ್ತಾ ”ಐ ನೋ ವಸೂ !…. ನೀನು ಗಟ್ಟಿ ಹುಡುಗಿ. ಈ ತರದ ಕಂಬನಿ ದೇವರು ನಮಗೆ ಕೊಟ್ಟ ವರ. ಸುಖದಲ್ಲೂ, ದುಃಕದಲ್ಲೂ ನಮ್ಮ ಪ್ರಮೇಯವಿಲ್ಲದೇ ಹರಿದು ಹೊರ ಬರುವ ನಮ್ಮ ಭಾವನೆಗಳಿವು” ಎನ್ನುತ್ತ ತಾನೂ ಕಂಬನಿ ತುಂಬಿಕೊಂಡಳು.

ಮತ್ತೆ ಕೆಲ ಸಮಯ ಹರಟೆ ಹೊಡೆದು ನಮ್ಮ ಗಮ್ಯದ ಕಡೆಗೆ ಹೊರಟೆವು ಆಟೋಗಳಲ್ಲಿ.

ಆಟೋ ಹತ್ತುವಾಗ “ ಇವರುಗಳ ಜೊತೆ ಜಾಗ್ರತೆಯಾಗಿರು. ನಿನಗೆ ಯಾವ ತರದ ಸಹಾಯ ಬೇಕಿದ್ದರೂ ನನಗೆ ತಿಳಿಸು” ಎಂದು ಹೇಳಲು ಮರೆಯಲಿಲ್ಲ ಸುಶೀಲ.

*****************

ಆ ದಿನ ರಜೆ. ಡೈನಿಂಗ್ ಟೇಬಲ್ ಮೇಲ್ ಎಲ್ಲರೂ ಸೇರಿ ತಿಂಡಿ ತಿಂತಾ ಇರುವಾಗ “ ನನಗೆ ಡೈವೊರ್ಸ್ ಬೇಕು” ಅಂತ ನಿದಾನವಾಗಿ ಹೇಳಿದೆ.

ಆಕಾಶ ಕಳಚಿ ಬಿದ್ದ ಹಾಗಾಯಿತು ಅತ್ತೆ ಮಾಮಗೆ. ಪ್ರಸಾದ್ ಸಿಡಿಲು ಬಿದ್ದವನಂತೆ ಒದ್ದಾಡಿದ. ಮನಾಯಿಸಲು ಶುರುಮಾಡಿದರು. ನಾನು ಒಪ್ಪಲಿಲ್ಲ. ತವರಿಗೆ ಸುದ್ದಿ ಹೋಯಿತು. ಅವರೂ ಓಡೋಡಿ ಬಂದರು. ಅಮ್ಮ ಅಳಲು ಶುರು ಮಾಡಿದಳು. ಏನೇನೋ ಹೇಳಿ ಒಪ್ಪಿಸಲು ನೋಡಿ, ವಿಫಲಳಾದಳು. ಅಪ್ಪ ಮಾತ್ರ ಒಂದೂ ಮಾತು ಆಡಲಿಲ್ಲ. ಪ್ರಸಾದ್, ಅತ್ತೆ ಮಾಮರ ಮಾತೇ ಕೇಳತೊಡಗಿದ್ದರು. ಅಪ್ಪನಿಗೆ ನನ್ನ ಮೇಲೆ ಅದೆಷ್ಟು ನಂಬಿಕೇನೋ…. ಯಾಕೆ ಅಂತ ಸಹ ಕೇಳಿರಲಿಲ್ಲ. ನಾನು ಸುನಂದಳ ಪ್ರಸ್ತಾವನೆ ತರಲಿಲ್ಲ. ಜಾಗ್ರತೆಯಾಗಿದ್ದೆ.

“ ಬಾವಾ ! ಒಂದು ನಾಲ್ಕು ದಿನ ನಮ್ಮ ಮನೆಗೆ ಕರೆದುಕೊಂಡು ಹೋಗ್ತೇವೆ. ಯಾವುದೋ ಡಿಪ್ರೆಷನ್ ನಲ್ಲಿದ್ದಾಳೆ ಅಂತ ಕಾಣುತ್ತೆ”  ಅಂದರು ಅಪ್ಪ ನನ್ನ ಕಡೆಗೆ ನೋಡುತ್ತಾ. ಅಪ್ಪನಿಗೆ ನನ್ನ ತೊಂದರೆ ಅರ್ಥವಾಗಿರಬೇಕು ಅನಿಸ್ತು. ವಿಧಿ ಇಲ್ಲದೆ ಅತ್ತೆ, ಮಾವ ಒಪ್ಪಿದರು.

“ ಬೇಗ ಬಂದ್ಬಿಡು” ಪ್ರಸಾದ್ ಮೃದುವಾಗಿ ಪ್ರೀತಿ ತುಳುಕಿಸುತ್ತಾ ಹೇಳಿದ. ನನ್ನಲ್ಲಿ ಯಾವ ತರದ ಪ್ರತಿಸ್ಪಂದನೆ ಸಿಗಲಲ್ಲ ಅವನಿಗೆ.

ಸುಶೀಲಳ ಜೊತೆ ಮಾತಾಡಿ ಡೈವರ್ಸ್ ಗೆ ಕೋರ್ಟಲ್ಲಿ ಕೇಸ್ ಹಾಕಿದೆ. ಅಪ್ಪನಿಗೆ ವಿಷಯ ತಿಳಿಸಿದೆ.

“ ಅಷ್ಟು ಬಲವಾದ ಕಾರಣ ಏನಿತ್ತಮ್ಮಾ?” ಅಪ್ಪ ಮೊದಲ ಸಲ ಕೇಳಿದರು,

ನನ್ನ ಕಣ್ಣು ತುಂಬಿ ಬಂತು….” ನಿನ್ನ ನಿರ್ಣಯದ ಬಗ್ಗೆ ನನಗೆ ಸಂದೇಹವಿಲ್ಲ. ಆದರೆ ಆಗಾಗ ನಮ್ಮಿಂದ ಸಹ ಕೆಲ ತಪ್ಪುಗಳು ಆಗಿ ಬಿಡ್ತಾವೆ. ನೀನು ನನ್ನ ಜೊತೆ ಮಾತಾಡಿದರೆ ನಿನ್ನ ಮನಸ್ಸು ಸ್ವಲ್ಪ ಹಗುರಾಗುತ್ತೆ. ಮತ್ತೆ ನೀನು ಮಾಡಿದ್ದು ಏಕೆ ಅಂತ ನನಗೂ ತಿಳಿಯತ್ತೆ. “ ಅಪ್ಪನ ದನಿ ಗದ್ಗದವಾಗಿತ್ತು.

ಅಪ್ಪನ ಎದೆಗೊರಗಿ ಅತ್ತು ಬಿಟ್ಟೆ. ಅಪ್ಪ ಹಾಗೇ ನನ್ನ ರೂಮಿಗೆ ಕರೆದೊಯ್ದು ಕೂರಿಸಿದರು.

ವಿಷಯವೆಲ್ಲ ತಿಳಿಸಿದೆ ಅಪ್ಪನಿಗೆ. ಅವರ ಮುಖ ಕೆಂಪಾಯಿತು. ಅವರ ಕಣ್ಣಲ್ಲಿ ಸಹ ನೀರು ಹೊರಟಿತು.

ನಮ್ಮಿಬ್ಬರ ನಡುವೆ ತುಂಬಾ ಹೊತ್ತಿನ ವರೆಗೆ ನಿಶ್ಶಬ್ದ ಎಡೆ ಮಾಡಿಕೊಂಡಿತ್ತು.

“ ಎಲ್ಲಾ ಮೇಲಿನವನು ನೋಡ್ಕೊಳ್ತಾನೆ ಬಿಡು. ನಮ್ಮ ಕೈಯಲ್ಲೇನಿದೆ? ನೀನು ಅವರಿಗೊಂದು ಪಾಠ ಕಲಿಸ ಬೇಕೆಂದುಕೊಂಡಿದ್ದೀಯಾ ! ಸರಿ… ನೋಡೋಣ. ನಿನ್ನಿಷ್ಟ. ಯಾವ ತರದ ತಿರುವು ಪಡೆಯುತ್ತೋ ನೋಡೋಣ.” ಎನ್ನುತ್ತ ಹೊರ ನಡೆದರು ಅಪ್ಪ.

*******************

ಮೂರು ತಿಂಗಳು ಕಳೆದವು.  ಬಾಬಾ ಕೊಟ್ಟ ಪರಿಷ್ಕಾರದ ಬಗ್ಗೆ ಸುಶೀಲ ತಿಳಿಸಿದಳು. ಮದುವೆಯಾದ ಮೊದಲನೆಯ ತಿಂಗಳಲ್ಲೇ ವಿಚ್ಛೇದನೆ ಪಡೆದಿದ್ದರಿಂದ, ಆ ಮದುವೆ ರದ್ದಾಗಿದೆ, ಮೂರು ತಿಂಗಳ ಗಂಡಾಂತರ ಕಳೆದಿದೆ, ಇನ್ನು ಆ ಮದುಮಗಳು ಸತ್ತ ಹಾಗೇ ! ಆದಕಾರಣ ಇನ್ನು ಯಾವತರದ ಗಂಡಾಂತರ ಇಲ್ಲ, ಮದುವೆ ಏರ್ಪಾಡು ಮಾಡಬಹುದು ಎಂದಿದ್ದರಂತೆ ಬಾಬಾ. ಪ್ರಸಾದ್, ಸುನಂದರ ಮದುವೆ ಏರ್ಪಾಡುಗಳು ಭರದಿಂದ ನಡೆಯುತ್ತಿದ್ದವು. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.

ನಾನು, ಸುಶೀಲ ಬಾಬಾರ ತೀರ್ಪಿಗೆ ನಕ್ಕಿದ್ದೆವು.

ಆ ದಿನ ನಾನು ಇನ್ನೂ ನಿದ್ದೆಯಲ್ಲಿದ್ದೆ. ಅಪ್ಪ ನನ್ನ ರೂಮಿಗೆ ಬಂದು “ ವಸೂ! ಇದು ನೋಡಿದೆಯಾ?” ಎನ್ನುತ್ತಾ ನನ್ನ ಎಬ್ಬಿಸತೊಡಗಿದರು. ಅವರ ಕೈಯಲ್ಲಿ ವಾರ್ತಾ ಪತ್ರಿಕೆ ಇತ್ತು.

ತಡಬಡಿಸಿ ಎದ್ದೆ. ಏನು ಎನ್ನುತ್ತಾ ಅಪ್ಪನ ಕಡೆಗೆ ನೋಡಿದೆ.

ಪೇಪರ್ ಮಡಚಿ ಒಂದು ಮೂಲೆಯಲ್ಲಿನ ವಾರ್ತೆ ತೋರಿಸಿದರು. ನನಗರ್ಥವಾಗಲಿಲ್ಲ. ಪ್ರಶ್ನಾರ್ಥಕವಾಗಿ ಅವರ ಕಡೆಗೆ ನೋಡಿದೆ.

“ ನೀನಿನ್ನೂ ನಿದ್ರೆಯಲ್ಲಿದ್ದೀಯಾ ! ಫ್ರೆಶ್ ಆಗಿ ಬಂದು ಈ ವಾರ್ತೆ ನೋಡು. ನಿಮ್ಮಮ್ಮನ ಹತ್ತಿರ ನಾನು ಈ ವಿಷಯ ಪ್ರಸ್ತಾವಿಸಿಯೇ ಇಲ್ಲ “ ಎನ್ನುತ್ತ ನನ್ನ ರೂಮಿನಿಂದ ಹೊರಟು ಹೋದರು.

ಅಷ್ಟರಲ್ಲಿ ನನ್ನ ಮೊಬೈಲ್ ರಿಂಗಣಿಸಿತು. ಸುಶೀಲ ! “ಏನೇ ಇನ್ನೂ ನಿದ್ರೆಯಲ್ಲಿದ್ದೀಯಾ? ಈವತ್ತಿನ ನ್ಯೂಸ್ ಪೇಪರ್ ನೋಡ್ಲಿಲ್ವಾ?” ಕಿರುಚಿದಂತೆ ಕೇಳುತ್ತಿದ್ದಳು.

ನನಗೆಲ್ಲಾ ಅಯೋಮಯವೆನಿಸಿತು. ಅಪ್ಪ ವಾರ್ತೆ ನೋಡು ಎನ್ನುವುದು, ಸುಶೀಲ ಸಹ ನ್ಯೂಸ್ ಪೇಪರ್ ನೋಡ್ಲಿಲ್ವಾ ಅಂತ ಕೇಳುವುದು !

“ ಇಲ್ಲ ಕಣೇ!…… ಅಪ್ಪ ಕೂಡಾ ನ್ಯೂಸ್ ಪೇಪರ್ ತಂದು ಕೈಯಲ್ಲಿಟ್ಟಿದ್ದಾರೆ. ಏನಾಗಿದೆ ಹೇಳಬಾರದಾ?”

“ ನಾನೇನು ಹೇಳೋದು ? ನೀನೇ ಓದಿಕೋ. ನಾನು ಸ್ವಲ್ಪ ಹೊತ್ತು ಬಿಟ್ಟು ಬರ್ತೇನೆ ನಿಮ್ಮ ಮನೆಗೆ” ಎನ್ನುತ್ತ ಫೋನ್ ಕಟ್ ಮಾಡಿದಳು.

ನಾನು ನ್ಯೂಸ್ ಪೇಪರನ್ನು ಬೆಡ್ ಮೇಲೆ ಹಾಕಿ, ಬಾತ್ರೂಂ ಕಡೆಗೆ ಹೋದೆ.

ಅಷ್ಟರಲ್ಲಿ ಅಮ್ಮ ಕಾಫಿ ಕೊಟ್ಟಳು. ಕಾಫಿ ಕಪ್ಪು, ನ್ಯೂಸ್ ಪೇಪರ್ ಹಿಡಿದುಕೊಂಡು ಮೇಲೆ ಹೋದೆ.

ಸೂರ್ಯನ ಎಳೆಯ ಕಿರಣಗಳಲ್ಲಿ ತೊಯ್ಯುತ್ತಾ, ಕಾಫಿ ಕುಡಿಯುತ್ತಾ ಪೇಪರ್ ನೋಡತೊಡಗಿದೆ. ಭಯಾನಕ ಅಪಘಾತದ ಫೋಟೋ ಅದು. ಅದರ ಪಕ್ಕದಲ್ಲೇ ಅದರ ಬಗ್ಗೆ ಸಮಾಚಾರ.

“ ತುಂಬಾ ವೇಗದಿಂದ ಬಂದ ಲೆಕ್ಸಸ್ ಕಾರು, ಮುಂದೆ ನಿಂತಿದ್ದ ಹಾಲಿನ ಟ್ರಕ್ಕಿಗೆ ಢಿಕ್ಕಿ ಹೊಡೆದಿದೆ. ಡ್ರೈವರ್  ತುಂಬಾ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾನೆ. ಕಾರು ಓನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಹೆಸರು ಪ್ರಸಾದ್. ಹೆಸರಾಂತ ದೊಡ್ಡ ವ್ಯಾಪಾರಸ್ಥರ ಒಬ್ಬನೇ ಮಗ. ಮದುವೆಯಾಗಿ ಒಂದು ವಾರ ಮಾತ್ರ ಆಗಿದೆ. ಶವವನ್ನು ಪೋಸ್ಟ್ ಮಾರ್ಟೆಮ್ ಗಾಗಿ ಕೊಂಡೊಯ್ದಿದ್ದಾರೆ. …” ನಂತರದ ವಿಷಯ ಓದಲಾಗಲಿಲ್ಲ ನನಗೆ, ಅರ್ಧ ಕುಡಿದ ಕಾಫಿ ಕಪ್ ಜಾರಿ ಬಿತ್ತು.

“ವಸೂ !….” ಎನ್ನುತ್ತಾ ಮೆಟ್ಟಿಲು ಹತ್ತಿ ಬರುತ್ತಿದ್ದಳು ಸುಶೀಲ. ಅವಳನ್ನು ಅಪ್ಪಿಕೊಂಡೆ, ಕಣ್ಣೀರಿನ ನಡುವೆ.


6 thoughts on “ಕರ್ಮ ಕಮ್ಸ್ ಬ್ಯಾಕ್

  1. ಪ್ರಸಾದ್ ತಂದೆ- ತಾಯಂದಿರ ನಿರ್ಣಯದ ಹಿಂದಿರುವ ಕ್ರೌರ್ಯ ಹಾಗೂ ಸಂಚುಗಳ ಸುಳಿವು ವಸಂತಳಿಗೆ ಸಿಗದೇ ಇದ್ದರೂ, ವಿಧಿ ತನ್ನದೇ ತೀರ್ಪು ನೀಡಿದ ಸಂಗತಿಗಳು ಕತೆಯ ಶೀರ್ಷಿಕೆ ” ಕರ್ಮ ಕಿಮ್ಸ್ ಬ್ಯಾಂಕ್” ಅನ್ನು ಪುಷ್ಟಿಗೊಳಿಸುವಂತೆ ಅನಿಸಿತು. ಕತೆಯ ಉದ್ದಕ್ಕೂ ನಿರೂಪಣೆ ನಿರ್ಭಾವುಕವಾಗಿ ಸಾಗುತ್ತದೆ.ಆದರೆ ಓದುಗನ ಕುತೂಹಲವನ್ನು ಕಾಪಾಡಿಕೊಂಡು ಸಾಗುತ್ತದೆ. ಮೂಲ ತೆಲುಗು ಕತೆಯನ್ನು ರಮೇಶ್ ಬಾಬು ಅವರು ಬಹಳ ಸಮರ್ಥವಾಗಿ ಅನುವಾದಿಸಿದ್ದಾರೆ.

  2. ರಾಮೇಶ ಬಾಬು ಸರ್, ನಿಮ್ಮ ಅನುವಾದುತ ಕಥ ಓದಿದೆ. ಅನುವಾದ ಕುರಿತಂತೆ ಎರಡು ಮಾತಿಲ್ಲ. ಸಮರ್ಥ ಅನುವಾದ ಅಭಿನಂದನೆಗಳು.

Leave a Reply

Back To Top