ಕಥಾ ಸಂಗಾತಿ
ಶಂಕ್ರು
. ಕಲ್ಪನಾ ಪ್ರಭಾಕರ
ಬಹಳ ದಿನಗಳ ನಂತರ ನನ್ನ ಸೋದರತ್ತೆಯ ಮನೆಗೆ ಹೋಗಿದ್ದೆ. ಅತ್ತೆಯ ಮನೆ ಇರುವುದು ಮಲೆನಾಡಿನ ಒಂದು ಪುಟ್ಟ ಹಳ್ಳಿ. ಈ ನಡುವೆ ಮನೆಯ ತಾಪತ್ರಯಗಳಲ್ಲಿ ಮುಳುಗಿದ್ದ ನಾನು ನೆಂಟರಿಷ್ಟರ ಮನೆಗೆ ಹೋಗುವುದು ಅಪರೂಪವೇ ಆಗಿತ್ತು. ಅತ್ತೆಯೇ ಬಂದು ಖುದ್ದಾಗಿ ಮೊಮ್ಮಗನ ಉಪನಯನಕ್ಕೆ ಬರಲೇಬೇಕೆಂದು ಒತ್ತಾಯ ಮಾಡಿ ಹೋಗಿದ್ದರಿಂದ ತಪ್ಪಿಸುವ ಹಾಗಿರಲಿಲ್ಲ.
ಉಪನಯನದ ಕಾರ‍್ಯಕ್ರಮಗಳ ನಂತರ ಭರ್ಜರಿಯಾದ ಊಟವೂ ಮುಗಿದ ಮೇಲೆ ಕೆಲವು ಸಮಯ ವಿಶ್ರಾಂತಿಗೆಂದು ನನ್ನ ಕೆಲವು ಹಳೆಯ ಸ್ನೇಹಿತೆಯರ ಜೊತೆ ಪಕ್ಕದಲ್ಲೇ ಇರುವ ಗಿರಿಜತ್ತೆಯ ಮನೆಗೆ ಹೋದೆ. ನಾನು ಚಿಕ್ಕವಳಿದ್ದಾಗ ಅತ್ತೆಯ ಮನೆಗೆ ಬಂದಾಗಲೆಲ್ಲ ಇವರ ಮನೆಗೆ ಹೋಗುವ ರೂಢಿ. ಅಲ್ಲೋ ಮುಂಜಿಯ ಮನೆಗೆ ಬಂದವರೆಲ್ಲಾ ಮಲಗುವುದಕ್ಕೆ ಇಲ್ಲೇ ಬರುತ್ತಾರೆಂದು ಜಮಖಾನೆಯನ್ನು ಹಾಸಿ ದಿಂಬು ಚಾದರಗಳನ್ನೆಲ್ಲ ಇಟ್ಟಿದ್ದರು. ನಾವೋ ಗೆಳತಿಯರು ತುಂಬಾ ದಿನಗಳ ನಂತರ ಭೇಟಿಯಾಗಿದ್ದು ಅಂಗಳದಲ್ಲಿ ಒಂದಿಷ್ಟು ಖುರ್ಚಿಗಳನ್ನು ಹಾಕಿಟ್ಟಿದ್ದನ್ನು ನೋಡಿದ್ದೇ ಮಲಗುವುದನ್ನು ಬಿಟ್ಟು ಹಾಗೇ ಮಾತಾಡುವುದಕ್ಕೆ ಶುರು ಹಚ್ಚಿದೆವು. ಕೆಲವು ಸಮಯ ಕಳೆದಿರಬಹುದು ಮಾಸಿದ ಲುಂಗಿ ಹಳತಾದ ಅಂಗಿ ತೊಟ್ಟ ಸೆಲೂನು ಕಾಣದ ತಲೆ ಅರೆಬಿಳಿಯಾದ ಗಡ್ಡ ಬಿಟ್ಟವನೊಬ್ಬ ಅಲ್ಲೇ ಸುಳಿದಾಡುತ್ತಿದ್ದ. ಅವನ ಮುಖ ನೋಡಿದರೆ ಇವನನ್ನು ಎಲ್ಲೋ ನೋಡಿದಂತೆ ಕಂಡಿತು. ಮತ್ತೆ ಮತ್ತೆ ನೆನಪು ಮಾಡಿಕೊಂಡು ದಿಟ್ಟಿಸಿ ನೋಡಿದೆ. ಹೌದು ಅವನೇ ನಮ್ಮ ಶಂಕ್ರು. ಅವನ ಅವತಾರವನ್ನು ನೋಡಿ ನನ್ನ ಕರುಳು ಚುರುಕ್ ಎನಿಸಿತು.
ಶಂಕ್ರು ಗಿರಿಜತ್ತೆಯ ಮಗ. ಚಿಕ್ಕವರಿದ್ದಾಗ ನಾವೆಲ್ಲಾ ಸೇರಿ ಆಡಿ-ಓಡಿ ಬೆಳೆದವರೇ. ಅವರೆಲ್ಲಾ ಅಕ್ಕ-ತಂಗಿಯರು ಅಣ್ಣ-ತಮ್ಮಂದಿರು ಎಂದು ಏಳೆಂಟು ಜನ ಮಕ್ಕಳು. ಇವನೇ ಚಿಕ್ಕವನು. ಸ್ವಲ್ಪ ಮುದ್ದಿನಿಂದಲೇ ಬೆಳೆದಿದ್ದ. ಆದರೆ ತುಂಬಾ ಸಂಕೋಚದ ಸ್ವಭಾವ. ಅದ್ರಲ್ಲೂ ಹೆಣ್ಣು ಮಕ್ಕಳೆಂದರೆ ಮಹಾದೂರ. ಹೈಸ್ಕೂಲಿಗೆ ಹೋಗುವವರೆಗೂ ಹೆಣ್ಣುಮಕ್ಕಳನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಕೇಳಿದ್ದಕ್ಕೆ ಉತ್ತರ ಎನ್ನುಂತೆ ಹಾಂ. ಹೂಂ ಅಷ್ಟೆ. ಅದೂ ದಿಕ್ಕು ನೋಡಿಕೊಂಡು ಉತ್ತರಿಸುತ್ತಿದ್ದ. ನಮಗೋ ಅವನ ಈ ಸ್ವಭಾವ ಒಂಥರಾ ಮಜಾ ಕೊಡುತ್ತಿತ್ತು, ಬೇಕಂತಲೇ ಕೆದಕಿ ಕೆದಕಿ ಮಾತಾಡಿಸುವುದು ರೇಗಿಸುವುದು ಮಾಡುತ್ತಿದ್ದೆವು. ಆದರೆ ಅಂವ ಮಾತ್ರ ಮುಗುಳು ನಕ್ಕು ಅಲ್ಲಿಂದ ಕಾಲು ಕಿತ್ತುಬಿಡುತ್ತಿದ್ದ. ಹಾಗಿದ್ದರೆ ಆತನೇನೂ ಹೆಣ್ಣಿನ ದ್ವೇಷಿಯಲ್ಲ ಅಂತಾಯಿತು ಎನ್ನುವುದು ನಮ್ಮ ಅಂಬೋಣ. ಆದರೆ ಹೈಸ್ಕೂಲಿನಲ್ಲಿ ಹೆಚ್ಚು ಮಾರ್ಕ್ಸು ಗಳಿಸಿ ರ‍್ಯಾಂಕು ಪಡೆಯುವುದೂ ಅವನೇ ಆಗಿತ್ತು. ಮನೆಯಲ್ಲಿ ಎಲ್ಲರೂ `ಶಂಕ್ರೂನ ನೋಡಿ ಕಲೀರಿ ನಿಮಗೆ ಸ್ವಲ್ಪವೂ ಗಂಭೀರತೆಯೇ ಇಲ್ಲ ಕೋತಿ ತರಹ ಆಡ್ತೀರ ಬಾಲವೊಂದು ಕಡಿಮೆ’ ಎನ್ನುತ್ತಿದ್ದರು. ಹಾಗಂತ ಅಂವ ಕೇವಲ ಪುಸ್ತಕದ ಬದನೇಕಾಯಿ ಅನ್ನೋ ಹಾಗೂ ಇರಲಿಲ್ಲ. ಅವನ ಸ್ನೇಹಿತರ ಜೊತೆಯೆಲ್ಲಾ ಚೆನ್ನಾಗೇ ಬೆರೆಯುತ್ತಿದ್ದ. ಪಿ.ಯು.ಸಿ.ಯಲ್ಲೂ ಒಳ್ಳೆಯ ಮಾರ್ಕ್ಸ ತೆಗೆದು ಮೆಡಿಕಲ್‌ಗೆ ಸೇರಿದ್ದ. ಹುಬ್ಬಳ್ಳಿಯ ಕೆ.ಎಂ.ಸಿ. ಕಾಲೇಜಿನಲ್ಲೇ ಸೀಟು ಸಿಕ್ಕಿತ್ತು.
ಶಂಕ್ರುವಿನ ಮನೆಯಲ್ಲೇನೂ ದೊಡ್ಡ ಶ್ರೀಮಂತರಲ್ಲ. ಅಣ್ಣಂದಿರು ಇಬ್ಬರು ಓದಿ ಅವರ ಬದುಕನ್ನು ನೋಡಿಕೊಂಡಿದ್ದರು. ಇಬ್ಬರೋ ಮೂವರೋ ಜಮೀನಿನಲ್ಲಿ ದುಡಿಯುತ್ತಿದ್ದರು. ಶಂಕ್ರು ತಾನೂ ಡಾಕ್ಟ್ರಾಗಿ ತನ್ನ ಬದುಕನ್ನು ಕಂಡುಕೊಳ್ಳಬೇಕು ತನ್ನ ಹಳ್ಳಿಯಲ್ಲೇ ಬಡವರಿಗೆ ತನ್ನಿಂದಾದ ಸೇವೆ ಮಾಡಬೇಕು ಎಂದೆಲ್ಲ ಕನಸನ್ನು ಕಟ್ಟಿಕೊಂಡಿದ್ದ. ಪಿ.ಯು.ನಲ್ಲಿ ಮಾರ್ಕ್ಸ ಚೆನ್ನಾಗಿದ್ದರಿಂದ ಸಾಕಷ್ಟು ಸ್ಕಾಲರ್‌ಶಿಪ್ಗಳೂ ಸಿಕ್ಕಿದ್ದವು. ಅಂತೂ ಶಂಕ್ರು ಡಾಕ್ಟರಿಕೆ ಕಲಿಯುವುದಕ್ಕೆ ಶುರು ಮಾಡಿದ್ದ.
ಮೊದಲನೇ ವರ್ಷ ಶಂಕ್ರು ಚೆನ್ನಾಗೇ ಮಾರ್ಕ್ಸ ತೆಗೆದಿದ್ದ. ಮನೆಯಲ್ಲಿ ಎಲ್ಲರಿಗೂ ತುಂಬಾ ಖುಷಿಯಾಗಿತ್ತು. ನಮ್ಮೂರಿನ ಹುಡುಗ ಡಾಕ್ಟರನಾಗ್ತಾನೆ ಅಂದ್ರೆ ಕಡಿಮೆಯಾ.. ಎಂದು ಊರವರೂ ಹೆಮ್ಮೆಪಡುತ್ತಿದ್ದರು. “ಯಾರ‍್ಯಾರಿಗೆ ಯಾವ ಯಾವ ರೋಗ ಇದೆ ಅಂತ ಈಗಲೇ ನೋಟ್ ಮಾಡಿಟ್ಟುಕೊಳ್ರೋ ನಮ್ಮ ಶಂಕ್ರು ಡಾಕ್ಟರ್ ಆದ್ಮೇಲೆ ನೋಡ್ತಾನೆ” ಎಂದು ಅವನ ಚಡ್ಡಿ ದೋಸ್ತರು ಚುಡಾಯಿಸಿದರೆ “ಅಯ್ಯೋ ಹೆಂಗಸರು ಬಂದ್ರೆ..”ಮಹಿಳೆಯರಿಗೆ ಪ್ರವೇಶವಿಲ್ಲಾ” ಅಂತ ಬೋರ್ಡ್ ಇಡ್ತಾನೋ ಏನೋ.. ‘ಎಂದು ಮತ್ತೊಬ್ಬರು ರೇಗಿಸುತ್ತಿದ್ದರು. `ಡಾಕ್ಟರಿಕೆ ಕಲೀತಾ ಇದ್ದಾನೆ ಅಂದ್ಮೇಲೆ ಹೋಗ್ತಾ ಹೋಗ್ತಾ ಹೆಣ್ಣು ಮಕ್ಳನ್ನ ನೋಡೋದೂ ಮುಟ್ಟೋದು ಎಲ್ಲಾದು ರೂಢಿಯಾಗುತ್ತೆ ಬಿಡ್ರೋ’ ಎಂದು ಕೆಲವರು ಸಮಾಧಾನ ಮಾಡುತ್ತಿದ್ದರು. ಆದ್ರೆ ಶಂಕ್ರು ಮಾತ್ರ ಇದ್ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ. ಎಲ್ಲದಕ್ಕೂ ಮುಗುಳು ನಗುವೇ
ಅವನ ಉತ್ತರವಾಗುತ್ತಿತ್ತು.
ಶಂಕ್ರು ಡಾಕ್ಟರಿಕೆ ಕಲಿಯುತ್ತಿದ್ದಾಗಿನಿಂದ ತುಂಬಾ ಸುಧಾರಿಸಿಬಿಟ್ಟಿದ್ದ. ಮುಖದಲ್ಲೇನೋ ಹೊಸ ಕಳೆ. ಕಣ್ಣಿಗೆ ಕನ್ನಡಕ ಬೇರೆ ಬಂದಿತ್ತು. ಎಲ್ಲರ ಬಳಿಯೂ ಫ್ರೀಯಾಗಿ ಮಾತಾಡುತ್ತಿದ್ದ. ಮೊದಲಿನಷ್ಟು ಸಂಕೋಚವೂ ಇರಲಿಲ್ಲ.
ಒಮ್ಮೆ ನಾನು ಹುಬ್ಬಳ್ಳಿಗೆ ಹೊರಟಿದ್ದೆ. ಗಿರಿಜತ್ತೆ ಚಕ್ಲಿ, ಉಂಡೆ ಎಂದು ಒಂದಿಷ್ಟು ತಿಂಡಿಗಳನ್ನು ಚೀಲದಲ್ಲಿ ತುಂಬಿಕೊಂಡು ಬಂದವಳೇ `ನೀ ಹೆಂಗಿದ್ರೂ ಹುಬ್ಬಳ್ಳೀಗ್ ಹೋಗ್ತೆ ಇದ್ನ ಸ್ವಲ್ಪ ಶಂಕ್ರೂಗೆ ಕೊಡ್ತೋ” ಕೇಳ್ದಾಗ ನನಗೆ ಇಲ್ಲಾ ಎನ್ನಲಾಗಲಿಲ್ಲ. ಅದನ್ನು ತಲುಪಿಸಲೆಂದು ಅವನ ರೂಮಿಗೆ ಹೋದೆ. ಗಂಡುಮಕ್ಕಳ ರೂಮಾಗಿದ್ದರಿಂದ ನನಗೂ ಸ್ವಲ್ಪ ನಾಚಿಕೆ. ಆದರೆ ರೂಮಿನ ಬಾಗಿಲು ತೆರೆದೇ ಇತ್ತು. ಧೈರ್ಯಮಾಡಿ ಒಳ ಹೊಕ್ಕಿದ್ದೆ. ರೂಮಿನಲ್ಲಿ ಯಾರೂ ಇರಲಿಲ್ಲ. ಶಂಕ್ರು ಅಲ್ಲೇ ಎಲ್ಲೋ ಆಚೆ ಹೋದಂತಿತ್ತು. ನಾನು ಅವನ ರೂಮಿನಲ್ಲೇ ಕುರ್ಚಿಯ ಮೇಲೆ ಕುಳಿತು ಅಲ್ಲೇ ಇದ್ದ ಯಾವುದೋ ಮ್ಯಾಗಜಿನ್ ತಿರುವುತ್ತಿದ್ದಂತೆ ನಟಿಸಿ ಸುತ್ತೆಲ್ಲ ಕಣ್ಣಾಡಿಸಿದೆ. ಆಚೀಚೆಯೆಲ್ಲಾ ಒಂದಿಷ್ಟು ಕಾಟು ಟೇಬಲ್ಲುಗಳಿದ್ದವು. ಅಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಹರಡಿದ್ದವು. ಉಂಡ ಪ್ಲೇಟಿನಲ್ಲಿ ನೀರು ಹೊಯ್ದು ಇಟ್ಟಿದ್ದು ಅಲ್ಲೇ ಇತ್ತು. ಅದಕ್ಕೆಲ್ಲ ಗುಂಯ್ ಎಂದು ನೊಣ ನೊರಜುಗಳು ಮುತ್ತಿಗೆ ಹಾಕಿದ್ದವು. ಬಟ್ಟೆಗಳೆಲ್ಲಾ ಅಲ್ಲಲ್ಲೇ ಬಿದ್ದುಕೊಂಡಿದ್ದವು. ಡಾಕ್ಟರಿಕೆ ಕಲಿಯುವ ಹುಡುಗರು ಇರುವ ರೂಪವಾ..! ಎಂದು ಒಮ್ಮೆ ಮುಖ ಸಿಂಡರಿಸಿದರೂ ಗೋಡೆಗಳಿಗೆಲ್ಲಾ ಸಿನಿಮಾ ನಟಿಯರ ಫೋಟೋಗಳು ರಾರಾಜಿಸುವುದನ್ನು ನೋಡಿ ಆಶ್ಚರ್ಯವೂ ಆಯ್ತು. ಈ ವಯಸ್ಸಿನಲ್ಲಿ ಇದೆಲ್ಲಾ ಸಹಜವೆನಿಸಿ ಮನಸಲ್ಲೇ ನಕ್ಕೆ. ಅಷ್ಟರಲ್ಲಿ ಶಂಕ್ರು ಬಂದ. ಇದೆಲ್ಲಾ ` ಮಾರುತಿ ದೇವರ ಪ್ರಭಾವವೋ!’ ಎಂದು ರೇಗಿಸಿದೆ ಫೋಟೋಗಳತ್ತ ತೋರಿಸುತ್ತ. ನಾ ಓದುತ್ತಿದ್ದುದ್ದೂ ಅಲ್ಲೇ ಪಕ್ಕದ ಮಹಿಳಾ ಕಾಲೇಜು. ಹಾಸ್ಟೇಲಿನಲ್ಲಿದ್ದೆ. ಆಗೆಲ್ಲಾ ನಾವು ಗೆಳತಿಯರೆಲ್ಲಾ ಸೇರಿ ಸಂಜೆಯ ವೇಳೆ ಗಾಳಿಸೇವನೆಯ ಜೊತೆ ದೇವರ ದರ್ಶನವೂ ಆದೀತೆಂದು ಹಾಸ್ಟೇಲಿನ ಪಕ್ಕದ ದೊಡ್ಡ ಬಯಲನ್ನು ಒಂದು ಸುತ್ತು ಹೊಡೆದು ಅಲ್ಲೇ ಹತ್ತಿರದಲ್ಲಿದ್ದ ಮಾರುತಿ ದೇವಸ್ಥಾನಕ್ಕೆ ಹೋಗುತ್ತೆದ್ದೆವು. ಇತ್ತ ಮೆಡಿಕಲ್ ಹಾಸ್ಟೇಲಿನವರೂ ನಮ್ಮ ಮಹಿಳಾ ಹಾಸ್ಟೇಲಿನವರು ಸೇರುವ ಸೆಂಟರ್ ಜಾಗವೆನ್ನಬಹುದು. ಒಬ್ಬೊರಿಗೊಬ್ಬರು ಪರಿಚಯ ಹರಟೆ ಎಲ್ಲವೂ ಇರುತ್ತಿತ್ತು. ಕೆಲವರು ಹುಡುಗರೂ ಓರೆಗಣ್ಣಿನಲ್ಲಿ ನೋಡುವುದು ಮುಗುಳು ನಗುವುದೂ ಇರುತ್ತಿತ್ತು. ಕೆಲವರು ಪ್ರೀತಿ ಪ್ರೇಮ ಎಂದು ವಯೋ ಸಹಜವಾದ ಭಾವನೆಗಳಲ್ಲಿ ಬಂಧಿಯಾದ ಜೋಡಿಗಳೂ ಇರುತ್ತಿದ್ದವು. ನಾವೇನೂ ಅಂಥದ್ದರಲ್ಲಿ ಸಿಲುಕದಿದ್ದರೂ ಅವರನ್ನು ನೋಡಿ ಖುಷಿ ಪಡುವುದು ಏನಾದರೂ ಗುಸುಗುಸು ಪಿಸುಪಿಸು ಮಾತಾಡಿಕೊಳ್ಳುವುದೂ ಇದ್ದೇ ಇರುತ್ತಿತ್ತು. ಅದೆಲ್ಲಾ ನೆನಪಿಗೆ ಬಂದು ಶಂಕ್ರುವಿಗೆ ತಮಾಷೆ ಮಾಡಿದ್ದೆ. ಹೀಗೇ ಮಾತಾಡುತ್ತಾ ನಿನ್ನ ಹುಡುಗಿ ಹೇಗಿರಬೇಕು..? ಕೇಳಿದೆ. ಆತ ಶ್ರೀದೇವಿಯ ಪೋಟೋ ಕಡೆ ತೋರಿಸಿದ ನಾಚುತ್ತಾ. ವ್ಹಾ! ಹೆಣ್ಣು ಮಕ್ಕಳ ಕಂಡ್ರೆ ಮಾರುದ್ದ ಹೋದ್ರೂ ಅವರ ಬಗ್ಗೆ ಕನಸು ಕಾಣೋಕೇನೂ ಕಡಿಮೆಯಿಲ್ಲ.ಆಸೆಯೇನೋ ಭರ್ಜರಿಯಾಗೇ ಇದೆ. ಗುಡ್‌ಲಕ್. `ಜೈ ಮಾರುತಿ’ ಎಂದು ರೇಗಿಸಿ ಗಿರಿಜತ್ತೆ ಕೊಟ್ಟ ತಿಂಡಿ ಕೊಟ್ಟು ಬಂದಿದ್ದೆ.
ಶಂಕ್ರು ಆಗ ಮೆಡಿಕಲ್ ಫೈನಲ್ ಈಯರ್ ಇರಬಹುದು. ಯಾವುದೋ ಕೆಲಸದ ನಿಮಿತ್ತ ಮನೆಗೆ ಬಂದಿದ್ದ. ಮೊದಲಿನಷ್ಟು ಲವಲವಿಕೆಯಿಂದ ಇರಲಿಲ್ಲ. ಶರೀರದಲ್ಲೂ ಸ್ವಲ್ಪ ಸೋತಿದ್ದ. ಎಂಬಿಬಿಸ್ ಮುಗಿಸಿ ಎಂ.ಡಿ ಮಾಡುವೆನೆಂದು ಹೇಳಿದ್ದ. ಡಾಕ್ಟರಿಕೆ ಕಲಿಯುವುದೆಂದರೆ ಎಷ್ಟು ಕಷ್ಟವಪ್ಪಾ.. ಓದಿ ಓದಿ ಹೇಗಾಗಿದ್ದಾನೆ ಎಂದು ನಮ್ಮ ನಮ್ಮಲ್ಲೇ ಮಾತಾಡಿಕೊಂಡಿದ್ದೆವು. ಆದರೆ ಫೈನಲ್ ಎಕ್ಸಾಮ್ ಮುಗಿಸಿ ಮನೆಗೆ ಬಂದಾಗ ತುಂಬಾ ಮೌನಿಯಾಗಿದ್ದ. ಯಾವಾಗ ನೋಡಿದರೂ ಯಾವುದೋ ಒಂದು ವಿಚಾರದಲ್ಲೇ ಇರುತ್ತಿದ್ದ. ಮನೆಯಲ್ಲೂ ಯಾರ ಬಳಿಯೂ ಮಾತಿಲ್ಲ ಕಥೆಯಿಲ್ಲ. ರೂಮು ಹೊಕ್ಕಿ ಮಲಗಿರುತ್ತಿದ್ದ. ಹಳೆ ಸ್ಟಾಕ್ ನಿದ್ದೆಯೆಲ್ಲಾ ಈಗ ತೆಗೆಯುತ್ತಿದ್ದಾನೆ ಎಂದು ನಾವು ರೇಗಿಸುತ್ತಿದ್ದೆವು. ಅಂತೂ ರಿಸಲ್ಟ್ ಬಂತು ಶಂಕ್ರು ಎರಡು ವಿಷಯಗಳಲ್ಲಿ ಬ್ಯಾಕ್ ಆಗಿದ್ದ. ಇಷ್ಟು ಚುರುಕಿದ್ದವ ಫೇಲಾಗಿದ್ದು ಎಲ್ಲರಿಗೂ ಆಶ್ಚರ್ಯ ತಂದಿದ್ದರೂ ಒಮ್ಮೊಮ್ಮೆ ಲಕ್ ಎನ್ನುವುದು ಉಲ್ಟಾ ಹೊಡೆದುಬಿಡುತ್ತದೆ ಎಂದು ಅವನ ಅಣ್ಣಂದಿರು ಅಕ್ಕಂದಿರೆಲ್ಲ ಪುನ: ಪರೀಕ್ಷೆ ಕಟ್ಟಿ ಪಾಸು ಮಾಡಿ ಮುಂದುವರೆಸು ಎಂದು ಸಮಾಧಾನ ಮಾಡಿದ್ದರು. ಮನೆಯವರೆಲ್ಲಾ ಇವನ ಸ್ವಭಾವವೇ ಹೀಗೆ ಎಂದು ಸುಮ್ಮನಿದ್ದುಬಿಟ್ಟರು. ದಿನ ಕಳೆದಂತೆ ಅವನ ವರ್ತನೆಗಳೆಲ್ಲಾ ಬದಲಾದವು. ಊಟ ತಿಂಡಿಗೆ ಕೂತಾಗಲೂ ದಿಕ್ಕು ನೊಡುತ್ತ ಕುಳಿತುಕೊಳ್ಳುವುದು. ತುಂಬಾ ಸಿಟ್ಟು ಮಾಡಿಕೊಂಡು ಸಿಕ್ಕಿದ್ದು ಎಸೆಯುವುದು ಏನೆಲ್ಲಾ ಮಾಡುವುದಕ್ಕೆ ಶುರುಮಾಡಿದ. ಒಮ್ಮೆಯಂತೂ ಅಣ್ಣನ ಹೆಂಡತಿ ಏನೋ ಹೇಳಿದರೆಂದು ಅವಳಿಗೆ ಕತ್ತಿಯಿಂದ ಇರಿದುಬಿಟ್ಟಿದ್ದ. ಬೈಯ್ಯುತ್ತಾರೆಂಬ ಭಯದಿಂದಲೋ ಏನೋ ತನ್ನನ್ನು ತಾನು ಬಚಾವು ಮಾಡಿಕೊಳ್ಳಲು ಕೂಡಲೇ ಎದುರಿಗಿದ್ದ ಬಾವಿಯನ್ನು ಹಾರಿಕೊಂಡುಬಿಟ್ಟಿದ್ದ. ಕಣ್ಣು ಮುಚ್ಚಿ ತೆರೆಯುವುದರಲ್ಲಿ ಇದೆಲ್ಲ ನಡೆದುಬಿಟ್ಟಿತ್ತು. ಅಲ್ಲಿದ್ದವರ ಹತ್ತಿರ ಏನೂ ಮಾಡುವುದಕ್ಕಾಗಲಿಲ್ಲ. ಅವನ ಪುಣ್ಯವೋ ಎಂಬಂತೆ ಬಾವಿ ಅಷ್ಟೇನೂ ಆಳವಾಗಿರಲಿಲ್ಲ. ಮನೆಯವರು ಪಕ್ಕದ ಮನೆಯವರೆಲ್ಲಾ ಬಂದು ಅವನನ್ನು ಬಾವಿಯಿಂದ ಹೇಗೋ ಎತ್ತಿ ಪಾರು ಮಾಡಿದ್ದರು.
ಮನೆಯವರಿಗೆಲ್ಲ ಈಗ ಯಾಕೋ ಇವನು ಅಬ್ನಾರ್ಮಲ್ ಎನಿಸಿತ್ತು. ಶಿವಮೊಗ್ಗದ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಟೆಸ್ಟ್ ಮಾಡಿಸಿಯೂ ಆಯ್ತು. ಗುಳಿಗೆಯ ಪ್ರಭಾವಕ್ಕೋ ಏನೋ ಎಲ್ಲಾ ವೇಳೆಯಲ್ಲೂ ಶಂಕ್ರು ಮಂಕಾಗಿ ಕುಳಿತಿರುತ್ತಿದ್ದ. ಹೇಳಿದಷ್ಟು ಕೆಲಸ ಮಾಡುತ್ತಿದ್ದ. ಆದರೆ ಎಂ.ಬಿ. ಬಿ. ಎಸ್ ಫೇಲಾಗಿದ್ದಕ್ಕೆ ಇವನು ಹೀಗಾಗಿದ್ದಾ.. ಅಥವಾ ಬೇರೆ ಏನಾದರೂ ಕಾರಣ ಇರಬಹುದಾ..? ಎಂಬ ಪ್ರಶ್ನೆ ಮಾತ್ರ ನನ್ನನ್ನು ಕಾಡುತ್ತಲೇ ಇತ್ತು.
ಅದೊಂದು ದಿನ ಶಂಕ್ರುವಿನ ಸ್ನೇಹಿತ ವಿವೇಕ ಸಿಕ್ಕಿದ್ದ. ಆತ ಎಂ.ಡಿ. ಮಾಡಿ ಗೌರ‍್ನಮೆಂಟ್ ಆಸ್ಪತ್ರೆಯಲ್ಲಿ ಡಾಕ್ಟರನಾಗಿದ್ದ. ಹೀಗೇ ಶಂಕ್ರುವಿನ ಬಗ್ಗೆ ಮಾತಾಡುತ್ತಾ ಅವನಿಗೆ ಹೀಗಾಗಬಾರದಿತ್ತು.. ಎಷ್ಟು ಬ್ರಿಲಿಯಂಟ್ ಇದ್ದ. ಆ ಹುಡುಗಿಯನ್ನು ಲವ್ ಮಾಡದೇ ಇದ್ದಿದ್ದರೆ ಅವನು ಫೇಲಾಗುತ್ತಿರಲಿಲ್ಲ ಎಂದ. ನನಗೆ ಶಾಕ್ ಹೊಡೆದಂತಾಯ್ತು. ಶಂಕ್ರು ಲವ್ ಮಾಡಿದ್ದನಾ! ಯಾರು ಆ ಹುಡುಗಿ.. ? ಯಾಕೆ ಬೇರೆಯಾದ್ರು..? ಎಂದೆ ಕುತೂಹಲದಿಂದ.
ಬೇರೆಯಾಗುವುದಕ್ಕೆ ಹತ್ತಿರವಾಗಿದ್ದರೆ ತಾನೆ.. ಎಂದ.
ಏನು ಸರಿಯಾಗಿ ಹೇಳು ಎಂದೆ. ಅದೊಂದು ದೊಡ್ಡ ಕಥೆ ಎಂದ.
ಶಂಕ್ರು ಮೆಡಿಕಲ್ ಓದುತ್ತಿದ್ದಾಗ ಧಾರವಾಡದಿಂದ ಒಬ್ಬಳು ಹುಡುಗಿ ಬರುತ್ತಿದ್ದಳು ಸಿನೇಮಾ ಹೀರೋಯಿನ್ ತರಹ ಇದ್ದಳು. ಅಲ್ಲದೇ ತುಂಬಾ ಚುರುಕು. ಎಲ್ಲರ ಜೊತೆಯೂ ಫ್ರೆಂಡ್ಳಿಯಾಗಿ ಇದ್ದು ಫ್ರೀಯಾಗಿ ಮಾತಾಡುತ್ತಿದ್ದಳು. ಹೆಣ್ಣುಮಕ್ಕಳನ್ನು ಕಂಡರೆ ಸಂಕೋಚ ಪಡುವ ಈ ಶಂಕ್ರುವಿಗೆ ಆ ಹುಡುಗಿಯೆಂದರೆ ತುಂಬಾ ಇಷ್ಟವಾಗಿತ್ತು. ಅವಳ ಜೊತೆ ಸ್ನೇಹದಿಂದ ಕ್ಯಾಂಟೀನ್ ಪಾರ್ಕ ಎಂದೆಲ್ಲ ಹೋಗುತ್ತಿದ್ದ. ಯಾವಾಗ ನೋಡಿದರೂ ಗೆಳೆಯರ ಜೊತೆ ಅವಳ ಬಗ್ಗೇ ಮಾತಾಡುವುದು ಹೊಗಳುವುದು ಮಾಡುತ್ತಿದ್ದ. ದಿನ ಕಳೆದಂತೆ ಅವನಿಗರಿವಿಲ್ಲದೇ ಅವಳನ್ನು ತುಂಬಾ ಹಚ್ಚಿಕೊಂಡುಬಿಟ್ಟ. ಅವಳ ಬಗ್ಗೇ ಕನಸು ಕಾಣುವುದು. ಪ್ರೇಮ ಕಾವ್ಯಗಳನ್ನು ಬರೆಯುವುದು, ಹಾಡುವುದು ಇವೆಲ್ಲಾ ಶುರುವಾದವು. ಅವಳನ್ನೇ ಪ್ರೀತಿಸಿ ಆರಾಧಿಸುವುದಕ್ಕೆ ಶುರು ಮಾಡಿದ. ಒಂದು ದಿನ ಅವಳನ್ನು ನೋಡದೇ ಇದ್ದರೆ ತುಂಬಾ ಚಡಪಡಿಸುತ್ತಿದ್ದ. ಯಾವ ಹೆಣ್ಣು ಮಕ್ಕಳ ಬಗ್ಗೆಯೂ ಮಾತಾಡದವ ಮೂರೂ ಹೊತ್ತು ಅವಳದೇ ಜಪ ಮಾಡುವುದನ್ನು ಕಂಡಾಗ ಗೆಳೆಯರಿಗೆಲ್ಲ ಆಶ್ಚರ್ಯವಾಗಿತ್ತು.
ವಿವೇಕನೇ ಒಂದು ದಿನ ಏನೋ ಅವಳ ಮೇಲೆ ಲವ್‌ಗಿವ್ ಏನಾದ್ರೂ ಆಗಿದ್ಯೋ ಹೇಗೆ..? ರೇಗಿಸಿದ್ದ. ಆಗ ಶಂಕ್ರು `ಆಕೆ ನನ್ನ ಜೀವ. ಜೀವನದಲ್ಲಿ ಮದುವೆಯಾದರೆ ಅವಳನ್ನೇ’ ಎಂದಿದ್ದ ಭಾವುಕನಾಗಿ. ಆ ಭಾವುಕತೆಯಿಂದ ಹೊರಗಡೆ ಬರುವುದಕ್ಕೆ ಅವನಿಗೆ ಕೆಲವು ಸಮಯವೇ ಕಳೆದಿತ್ತು.
ವಿವೇಕನಿಗೆ ಆಶ್ಚರ್ಯವಾದರೂ ಖುಷಿಯೇ ಆಗಿತ್ತು. ಆ ಹುಡುಗಿಗೆ ನಿನ್ನ ಪ್ರೀತಿಯನ್ನು ಹೇಳಿಕೊಂಡಿದ್ದೀಯಾ.. ಅವ್ಳು ಒಪ್ಪಿದ್ಲಾ..? ಎಂದು ಕೇಳಿದ ಕುತೂಹಲದಿಂದ.
ಇಲ್ಲ ಕಣೋ ಇನ್ನೂ ಕೇಳಿಲ್ಲ. ಅವಳಿಗೆ ಇದನ್ನು ತಿಳಿಸಬೇಕು. ಅವಳ ಅಭಿಪ್ರಾಯವನ್ನು ತಿಳಿದುಕೊಳ್ಳಬೇಕು. ಒಂದು ಒಳ್ಳೆಯ ಸಂದರ್ಭಕ್ಕಾಗಿ ಕಾಯುತ್ತಿದ್ದೇನೆ ಎಂದ ಶಂಕ್ರು ಖುಷಿಯಲ್ಲಿ.
ಮೊದಲು ಆ ಕೆಲಸ ಮಾಡು ಮಾರಾಯಾ.. ಎಂದ ವಿವೇಕ, ಶಂಕ್ರು ಇಷ್ಟು ಲವಲವಿಕೆಯಿಂದ ಇರೋದಕ್ಕೆ ಕಾರಣ ಈ ಹುಡುಗಿಯಾ.. ಎಂದು ಮನಸಲ್ಲೇ ನಕ್ಕಿದ್ದ.
ಶಂಕ್ರು ಅವಳಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ಕಾಯುತ್ತಿದ್ದ. ಆದರೆ ಆ ಹುಡುಗಿ ಮತ್ತೆ ಕಾಣಿಸಲೇ ಇಲ್ಲ. ಯಾರಿಗೂ ಏನೂ ಹೇಳಿರಲೂ ಇಲ್ಲ. ಇದ್ದಕ್ಕಿದ್ದಂತೆ ಮಾಯವಾಗಿದ್ದಳು. ಬಹುಶ: ಆಕೆಯ ತಂದೆಗೆ ಎಲ್ಲೋ ಟ್ರಾನ್ಸ್ಫರ್ ಆಗಿರಬೇಕು ಎಂದುಕೊಂಡರು. ಪಾಪ ಆಕೆಗೇನು ಗೊತ್ತು ಇವನ ಪ್ರೀತಿಯ ಬಗ್ಗೆ. ಹೇಗಾದರೂ ಆ ಹುಡುಗಿಯನ್ನು ಹುಡುಕಬೇಕೆಂದು ಅವನ ಗೆಳೆಯರೆಲ್ಲ ಪ್ರಯತ್ನ ಮಾಡಿ ಆಮೇಲೆ ಸೋತು ಕೈಬಿಟ್ಟಿದ್ದರು. ಇನ್ನು ಆ ಹುಡುಗಿ ಸಿಗುವುದಿಲ್ಲವೆಂದು ಶಂಕ್ರು ಮರೆತುಬಿಟ್ಟಿದ್ದಾನೆ ಎಂದು ಅವನ ಗೆಳೆಯರು ಅಂದುಕೊಂಡಿದ್ದರು. ಆದರೆ ಶಂಕ್ರು ಅವಳನ್ನು ತನ್ನ ಮನಸ್ಸಿನಿಂದ ಆಚೆ ಹಾಕಲೇ ಇಲ್ಲ. ಅವನ ಏಕಮುಖ ಪ್ರೀತಿಯ ಬೇರು ಮನಸ್ಸಿನಾಳಕ್ಕೆ ಇಳಿದು ಬಿಟ್ಟಿತ್ತು. ಯಾರು ಎಷ್ಟೇ ಬುದ್ದಿ ಹೇಳಿದರೂ ಶಂಕ್ರು ಆ ಹುಡುಗಿಯ ಮೇಲಿನ ಪ್ರೀತಿಯ ಭ್ರಮೆಯಿಂದ ಆಚೆ ಬರಲೇ ಇಲ್ಲ. ಕೊರಗಿ ಕೊರಗಿ ಓದುವ ಆಸಕ್ತಿಯನ್ನು ಕಳೆದುಕೊಂಡ. ಆದರೆ ಆತ ಪ್ರೀತಿಗೋಸ್ಕರ ತನ್ನ ಭವಿಷ್ಯವನ್ನೇ ಹಾಳು ಮಾಡಿಕೊಂಡುಬಿಟ್ಟ ಎಂದ ವಿವೇಕ ದೀರ್ಘವಾದ ನಿಟ್ಟುಸಿರು ಬಿಟ್ಟ.
ಆತನ ಮಾತುಗಳನ್ನು ಕೇಳಿದಾಗ ನನಗೆ ಕರುಳೇ ಕಿವುಚಿ ಬಂದಂತಾಯ್ತು. ಪ್ರೀತಿ ಬದುಕಿಗೆ ಸ್ಪೂರ್ತಿಯಾಗಿರಬೇಕು ಆದರೆ ಪ್ರೀತಿಗೋಸ್ಕರ ನಮ್ಮನ್ನು ನಾವು ಕಳೆದುಕೊಳ್ಳುವುದರಲ್ಲಿ ಅರ್ಥವಿದೇಯೇ..? ಇಲ್ಲಿ ಆ ಹುಡುಗಿಯದೇನು ತಪ್ಪು.. ವಾಸ್ತವವನ್ನು ಅರ್ಥ ಮಾಡಿಕೊಳ್ಳದೇ ಈ ಶಂಕ್ರು ಪ್ರೀತಿಯೆಂಬ ಭ್ರಮೆಯಲ್ಲಿ ಭಾವನೆಗಳ ಜೊತೆ ತೇಲಾಡಿ ತನ್ನನ್ನೇ ತಾನು ಕಳೆದುಕೊಂಡ.
ಯಾವತ್ತೂ ನಮ್ಮ ಮನಸ್ಸು ಗಟ್ಟಿಯಾಗಿರಬೇಕು ಕಣೋ ಶಂಕ್ರು ಅದು ನಿನ್ನಲ್ಲಿ ಸಾಧ್ಯವಾಗದೇ ಹೋಯ್ತು ಎಂದು ನಾನು ನನ್ನಷ್ಟಕ್ಕೇ ಗೊಣಗಿಕೊಂಡೆ. ಈ ವಿಚಾರವನ್ನು ಅವರ ಮನೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದೆನೋ ಇಲ್ಲವೋ ಅಷ್ಟರಲ್ಲಿಯೇ ಅವನ ತಾಯಿ ತೀರಿಕೊಂಡ ವಿಚಾರ ಗೊತ್ತಾಯ್ತು. ಇಷ್ಟು ದಿವಸ ಯಾರು ಅವನ ಬಗ್ಗೆ ಕಾಳಜಿ ವಹಿಸದಿದ್ದರೂ ತಾಯಿಯ ಪ್ರೀತಿಯಾದರೂ ಅವನಿಗೆ ಧೈರ್ಯವಾಗಿತ್ತು ಈಗ ಅದೂ ಇಲ್ಲದೆ ಅನಾಥನಾಗಿಬಿಟ್ಟ. ಅಣ್ಣಂದಿರೆಲ್ಲ ತಮ್ಮ ಪಾಲು ತೆಗೆದುಕೊಳ್ಳುವುದಕ್ಕೆ ಮುಂದಾದರು. ವರ್ಷದೊಳಗೇ ಮನೆ ಭಾಗವಾಯಿತು. ಅರೆಹುಚ್ಚನೆಂದು ಕರೆಯಿಸಿಕೊಂಡ ಶಂಕ್ರು ಯಾರ ಪಾಲಿಗೆ? ಎಂಬುದು ಸಮಸ್ಯೆಯಾಯ್ತು. ಯಾರೂ ಜೊತೆಗಿಟ್ಟುಕೊಳ್ಳುವುದಕ್ಕೆ ಮುಂದಾಗಲಿಲ್ಲ. ಅಂತೂ ಪಂಚರೇ ಮಾತಾಡಿ ಹಿರಿಯಣ್ಣನ ಪಾಲಿನಲ್ಲಿ ಶಂಕ್ರುವನ್ನೂ ಸೇರಿಸಿದರು. ಆಸ್ತಿಯ ಆಸೆಗೆ ಆತ ಒಪ್ಪಿಕೊಂಡರೂ ಅಷ್ಟಾದರೂ ಅವನಿಗೊಂದು ನೆಲೆ ಸಿಕ್ಕಿತಲ್ಲ ಎಂಬ ಸಂತೋಷ ನೋಡುವವರಿಗೆ. ಅವರವರ ಸಂಸಾರದ ಜವಾಬ್ದಾರಿ ಕರ್ತವ್ಯಗಳ ಜೊತೆ ಶಂಕ್ರು ಒಂದು ಹೊರೆಯೇ ಆದ. ಬೆನ್ನಿಗೆ ಹುಟ್ಟಿದ ತಪ್ಪಿಗೆ ಅವನ ಹಸಿವೆಗೊಂದಿಷ್ಟು ಕೂಳು ಎಂಬಂತಾಯ್ತು. ಅಣ್ಣಂದಿರ ಮಕ್ಕಳ ಹೇಲು-ಉಚ್ಚೆ ತೆಗೆಯುವುದು ವಿಶೇಷವಾದಾಗ ನೆಂಟರು ಬಂದಾಗ ಜಮಖಾನೆ ಹಾಸಿದ್ದು ಕುಡುಗಿ ತೆಗೆಯುವುದು, ಅವರ ಎಂಜಲು ತೆಗೆಯುವುದು ಇಂಥ ಕೆಲಸಗಳೇ ಅವನ ಪಾಲಿಗಿರುತ್ತಿತ್ತು. ಜನರೊಡನೆ ಮಾತಿಲ್ಲ ಕಥೆಯಿಲ್ಲ. ಉಂಡನೋ ಬಿಟ್ಟನೋ ಯಾರಿಗೆ ಬೇಕಾಗಿದೆ ? ಯಾವಾಗಲೋ ಒಂದಿಷ್ಟು ತಿನ್ನುವುದು ಮಲಗುವುದು ಗುಳಿಗೆ ನುಂಗುವುದು. ಒಟ್ಟಿನಲ್ಲಿ ಆತ ಪರದೇಸಿಯಂತಿದ್ದ.
ಯಾವುದೇ ಮನುಷ್ಯನಿಗೆ ದೇಹ ಮನಸ್ಸು ಎರಡೂ ಆರೋಗ್ಯವಾಗಿದ್ರೆ ಹೇಗಾದ್ರೂ ಕೂಲೀನಾದ್ರೂ ಮಾಡಿ ದುಡ್ದು ಬದುಕು ಸಾಗಿಸಬಹುದು ಆಗ ಆ ಬದುಕಿಗೊಂದು ಅರ್ಥವಾದ್ರೂ ಇರುತ್ತೆ ಅದೇ ದೇಹ ಹೆಸರಿಗೆ ಮಾತ್ರವಾಗಿದ್ದರೆ ಅದೊಂದು ಕೆಲಸಕ್ಕೆ ಬಾರದ ವಸ್ತುವಿನ ತರಹ ಮೂಲೆ ಸೇರಿ ಬಿಡುತ್ತದೆ. ಜಡವಸ್ತುವಾದರೆ ಹೊರಗೆಸೆದುಬಿಡಬಹುದು ಹಾಗಂತ ಜೀವವಿದ್ದ ವಸ್ತುವನ್ನು ಎಸೆಯಲಾದೀತೇ..?.
ಯಾಕೋ ನನಗೆ ನಾವು ಚಿಕ್ಕವರಿರುವಾಗ ಅರೆನಗ್ನ ಸ್ಥಿತಿಯಲ್ಲಿ ಮಳೆ ಚಳಿ ಎನ್ನದೇ ಅವರಿವರು ಕೊಟ್ಟಿದ್ದು ತಿನ್ನುತ್ತ ಬಸ್ಟ್ಯಾಂಡಿನಲ್ಲೋ, ತಂಗು ಮನೆಗಳಲ್ಲೋ ಶಾಲೆಯ ವರಾಂಡದ ಮೇಲೋ ಮಲಗುತ್ತ ಅಲೆಯುತ್ತಿದ್ದ ಇರುತ್ತಿದ್ದ ಕಂಚಿಮಳ್ಳುವಿನ ನೆನಪಾಗಿ ಸದ್ಯ ಆ ಪರಿಸ್ಥಿತಿಯೊಂದು ಇವನಿಗೆ ಬರಲಿಲ್ಲವೆಂಬ ಸಮಾಧಾನವಾಯ್ತು. ನಮ್ಮಂಥವರು ಅನುಕಂಪ ತೋರಿಸುವುದು ಬಿಟ್ಟು ಮತ್ತೇನೂ ಮಾಡಲಾಗದಲ್ಲ ಎಂಬ ದು:ಖ ನನ್ನನ್ನು ಕಾಡಿತು. ಮುಂದಿನ ಜನ್ಮದಲ್ಲಾದರೂ ಶಂಕ್ರುವಿಗೆ ಪೂರ್ಣ ಬದುಕನ್ನು ಕರುಣಿಸು ಎಂದು ದೇವರಲ್ಲಿ ಬೇಡಿಕೊಂಡೆ. ನನ್ನ ನೆನಪುಗಳಿಂದ ಹೊರಗಡೆ ಬರುವಷ್ಟರಲ್ಲಿ ಶಂಕ್ರು ಅಲ್ಲಿಂದ ಮರೆಯಾಗಿದ್ದ. ನನ್ನ ಹೃದಯವೊಮ್ಮೆ ಮಿಡಿದು ಕಣ್ಣುಗಳು ಒದ್ದೆಯಾದವು.
.