ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—54

ನನ್ನ ತಂದೆಯವರು

ಗಣಪು ಮಾಸ್ತರ

ಉಪ್ಪಿನಾಗರದ ಕೂಲಿ ಮಾಡುವ ಸ್ವಜಾತಿಯ ಮುಖ್ಯ ಉದ್ಯೋಗವನ್ನೇ ಜೀವನಾಧಾರಕ್ಕೆ ನಂಬಿಕೊಂಡವರು ನಮ್ಮ ಕುಟುಂಬದ ಹಿರಿಯರು. ನಮ್ಮ ತಂದೆಯವರ ತಂದೆ ಅಂದರೆ ನಮ್ಮ ಅಜ್ಜ ಸುಕ್ರು ಸಾಣೆಕಟ್ಟೆಯ ಉಪ್ಪಿನಾಗರದಲ್ಲಿ ಉಪ್ಪು ತೆಗೆಯುವ ಕೂಲಿಗಾಗಿಯೇ ಬದುಕು ಕಟ್ಟಿಕೊಂಡವರು ಅವನ ಪತ್ನಿ ಅಂದರೆ ನಮ್ಮ ಅಜ್ಜಿ, ಅಜ್ಜನ ಹಿರಿಯ ಮಗ ದೊಡಕೂಸ. ಅಂದರೆ ನಮ್ಮ ದೊಡ್ಡಪ್ಪ ಮತ್ತು ಅವನ ಪತ್ನಿ, ಅಜ್ಜನ ಇಬ್ಬರು ಹೆಣ್ಣು ಮಕ್ಕಳು ದೇವಿ ಮತ್ತು ನಾಗಮ್ಮ ಎಲ್ಲರೂ ಉಪ್ಪಿನಾಗರದ ಕೂಲಿಕಾರ್ಮಿಕರಾಗಿಯೇ ತಮ್ಮ ಬದುಕನ್ನು ಆರಂಭಿಸಿದವರು.

ನಮ್ಮ ತಂದೆ, ಸುಕ್ರಜ್ಜನ ಕಿರಿಯ ಮಗ ಗಣಪು ಒಬ್ಬ ಮಾತ್ರ ಓದುವ ಹುಚ್ಚಿಗೆ ಬಿದ್ದು ಉಪ್ಪಿನಾಗರದಲ್ಲಿ ಕೂಲಿಯಾಗಿ ದುಡಿಯಲೊಪ್ಪದೆ ಸಾಲೆ ಸೇರಿದವನು. ಆದರೂ ಮತ್ತೆ ಮತ್ತೆ ಸಾಲೆ ಬಿಡಿಸಿ ಉಪ್ಪಿನಾಗರಕ್ಕೆ ಕರೆದೊಯ್ದು ದುಡಿಯಲು ಹಚ್ಚುವ ತಂದೆ ತಾಯಿಯ ಒತ್ತಾಯವನ್ನು ಸಹಿಸಲಾಗದೆ ಮನೆ ಬಿಟ್ಟು ಓಡಿಹೋಗಿ ಸಾಣೆಕಟ್ಟೆಯ ದೊಡ್ಡಮ್ಮನ ಆಶ್ರಯ ಪಡೆದು ಅವಳ ನೆರವಿನಿಂದಲೇ ಹನೇಹಳ್ಳಿಯ ಹಿಂದುಳಿದ ವರ್ಗದ ವಿದ್ಯಾರ್ಥಿ ನಿಲಯವನ್ನು ಸೇರಿ ಮೂಲ್ಕಿಯವರೆಗೆ ಓದಿ ಮಾಸ್ತರಿಕೆ ಪಡೆದ ನಮ್ಮ ತಂದೆಯವರ ಅಕ್ಷರ ಕಲಿಕೆಯ ಹೋರಾಟದ ಕಥೆ ಅನನ್ಯವಾದುದು.

ಈ ದಾರಿಯುದ್ದಕ್ಕೂ ವಿವಿಧ ಹಂತಗಳಲ್ಲಿ ಕೈ ಹಿಡಿದು ದಾರಿ ತೋರಿಸಿ ಸಕಾಲದಲ್ಲಿ ಆರ್ಥಿಕ ನೆರವನ್ನು ನೀಡಿ ತನ್ನ ಬಾಳಿಗೆ ಬೆಳಕಾದ ಮಹನೀಯರನ್ನು ಅಪ್ಪ ಯಾವಾಗಲೂ ನೆನಪಿಸಿಕೊಳ್ಳುತ್ತಲೇ ಇದ್ದರು. ಅವರನ್ನು ಮಕ್ಕಳಾದ ನಮಗೆ ಪರಿಚಯಿಸಿ ಅವರ ಉಪಕಾರಕ್ಕೆ ನಾವೆಲ್ಲ ಕೃತಜ್ಞಾಪೂರ್ವಕ ವಂದನೆ ಗೌರವಗಳನ್ನು ಸಲ್ಲಿಸುತ್ತಿರುವಂತೆಯೇ ನಮ್ಮನ್ನು ಜಾಗೃತಗೊಳಿಸಿದರು.

ಮುಖ್ಯವಾಗಿ ಸಾಣೆಕಟ್ಟೆಯ ಅಪ್ಪನ ದೊಡ್ಡಮ್ಮ ಹಮ್ಮಜ್ಜಿ, ನಮ್ಮ ತಾಯಿಯ ಚಿಕ್ಕಪ್ಪ ನಾಡು ಮಾಸ್ಕೇರಿಯ ರಾಕು, ತನ್ನ ಸಹಪಾಠಿಯಾದ ಅಗ್ಗರಗೋಣದ ಏಸುಮನೆ ಯಶವಂತ ನಾಯಕ, ತನಗೆ ಪಾಠ ಕಲಿಸುತ್ತ ಜೀವನ ಪಾಠ ಹೇಳಿಕೊಟ್ಟ ಗುರು ತೊರ್ಕೆಯ ನಾರಾಯಣ ಮಾಸ್ತರರು (ಕವಿ ನಾಗೇಂದ್ರ ನಾಯಕ ತೊರ್ಕೆ ಅವರ ತಂದೆ) ವಂದಿಗೆಯಲ್ಲಿ ಗಾಂವಟಿ ಶಾಲೆಯೊಂದನ್ನು ನಡೆಸಿ ಸ್ವಜಾತಿ ಮಕ್ಕಳಿಗೆ ಅಕ್ಷರ ಕಲಿಸಿದ ವಂದಿಗೆಯ ಸುಕ್ರು ಮಾಸ್ತರ ಮುಂತಾದವರನ್ನು ಇಲ್ಲಿ ಉಲ್ಲೇಖಿಸಬಹುದು.

ಅಂದಿನ ಕಾಲದಲ್ಲಿ (೧೯೫೦-೫೧) ಶಾಲೆಯೊಂದರ ಮಾಸ್ತರನಾಗುವುದಕ್ಕೆ ಮೂಲ್ಕಿವರೆಗಿನ ಓದಿನ ಅರ್ಹತೆ ಸಾಲುತ್ತಿತ್ತು. ಅಪ್ಪ ಮಾಸ್ತರಿಕೆಯನ್ನೇ ಪಡೆಯಬೇಕೆಂದು ಕನಸು ಕಂಡಿದ್ದರೂ ಅವರಿಗೆ ಮೊದಲು ದೊರೆತದ್ದು ಶಾನುಭೋಗಿಕೆ. ಹೊಟ್ಟೆಪಾಡಿನ ಅನಿವಾರ್ಯತೆಯಿಂದ ಜೋಯ್ಡಾ ತಾಲೂಕಿನ ಕುಗ್ರಾಮವೊಂದರಲ್ಲಿ ಅವರು ಶಾನುಭೋಗರಾಗಿಯೇ ವೃತ್ತಿಯನ್ನು ಆರಂಭಿಸಿದರು. ಕಗ್ಗಾಡಿನ ಹಳ್ಳಿಯೊಂದರ ಜಾವಡಿಯ ಹಳೆಯ ಕಟ್ಟಡದಲ್ಲಿಯೇ ಇವರ ಕಚೇರಿ ಮತ್ತು ಇನ್ನೊಂದು ಮಗ್ಗುಲಲ್ಲಿ ವಾಸ್ತವ್ಯದ ಕೊಠಡಿ. ಜೀರ್ಣಗೊಂಡ ಕಟ್ಟಡದ ತುಂಬ ನೆಲದಲ್ಲಿ, ಗೋಡೆಯಲ್ಲಿ ಬಿಲಗಳು. ಅವುಗಳಿಂದ ಆಗಾಗ ಒಳಪ್ರವೇಶಿಸುವ ಇಲಿ-ಹೆಗ್ಗಣಗಳು ಅವುಗಳನ್ನು ಹಿಂಬಾಲಿಸಿ ಬರುವ ವಿವಿಧ ಜಾತಿಯ ಹಾವುಗಳು!

ಬೇರೆ ವ್ಯವಸ್ಥೆಗಾಗಿ ಕಾಯುತ್ತಲೇ ಮೂರು ತಿಂಗಳು ಹೇಗೋ ಈ ಉದ್ಯೋಗವನ್ನು ನಿಭಾಯಿಸಿದರಂತೆ. ಮೂರೇ ತಿಂಗಳಲ್ಲಿ “ಅಂಕೋಲಾ ತಾಲೂಕಿನ ಹೆಗ್ರೆ ಎಂಬ ಗ್ರಾಮದ ಶಾಲೆಗೆ ಮಾಸ್ತರಿಕೆ ಮಾಡಲು ಆದೇಶ ಬಂದದ್ದೇ ಹಿಂದು-ಮುಂದಿನ ಯೋಜನೆಯಿಲ್ಲದೆ ಶಾನುಭೋಗ ಕೆಲಸಕ್ಕೆ ರಾಜೀನಾಮೆ ನೀಡಿದೆ” ಎಂದು ತಂದೆಯವರೇ ಒಮ್ಮೆ ಹೇಳಿಕೊಂಡಿದ್ದರು. ಆದರೂ ಶಾನುಭೋಗ ವೃತ್ತಿ ಲಾಭದಾಯಕವೇ ಆಗಿತ್ತು. ಜೋಯ್ಡಾ ಶಾನುಭೋಗಿಕೆಯ ಮೂರು ತಿಂಗಳು ಅವಧಿಯಲ್ಲಿ ತಮ್ಮ ಸಂಬಳದ ಒಂದು ಪೈಸೆಯೂ ಖರ್ಚಾಗಲಿಲ್ಲ. ಅಕ್ಕಿ, ಬೇಳೆ ತೆಂಗು ತರಕಾರಿಗಳನ್ನೆಲ್ಲ ಸುತ್ತಲಿನ ರೈತರೇ ಪೂರೈಸುತ್ತಿದ್ದರು. ಎಂಬುದನ್ನು ನೆನಪಿಸಿಕೊಂಡು ಮಾಸ್ತರಿಕೆಯ ಸಂಬಳದ ಕಷ್ಟ ಕಾಲದಕ್ಕಿ “ಶಾನುಭೋಗಿಕೆ ಬಿಟ್ಟು ಬಂದು ತಪ್ಪು ಮಾಡಿದೆ….” ಎಂದು ತಾವೇ ಹಲವು ಬಾರಿ ನೊಂದು ನುಡಿದಿದ್ದರು.

ಬಾಲ್ಯ ಮತ್ತು ತನ್ನ ಓದಿನ ಕಾಲಾವಧಿಯಲ್ಲಿ ತುಂಭಾ ಅನಾಥ ಸ್ಥಿತಿಯನ್ನು ಅನುಭವಿಸಿದರೂ ಅಪ್ಪ ಮಾಸ್ತರನಾದ ಬಳಿಕ ಹಿಂದೆ ಮುಂದೆ ಬಂಧು-ಬಾಂಧವರ ದಂಡೇ ಹರಿದು ಬಂತು. ವಯಸ್ಸಾದ ಹಿರಿಯರನೇಕರು ಆಶ್ರಯ ಬಯಸಿ ಬಂದಾಗ ನಿರಾಕರಿಸಲಾಗದೆ ಮನೆಯನ್ನೇ ವೃದ್ಧಾಶ್ರಮದಂತೆ ಮಾಡಿಕೊಂಡ ಅಪ್ಪ ಆ ದಿನಗಳಲ್ಲಿ ಎದುರಿಸಿದ ಸಂಕಷ್ಟಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಮಕ್ಕಳನ್ನು ಹಾಸ್ಟೆಲ್ಲು ಸೇರಿಸಿ ವಾರಕ್ಕೊಮ್ಮೆ ಬಂದು ಕೈಯಲ್ಲಿ ಕಾಸಿಟ್ಟು ಮರಳುವ ಅಪ್ಪ ತನ್ನ ಜೀವಮಾನದಲ್ಲಿ ಮಾತಾಡಿದ್ದು ಲೆಕ್ಕ ಹಾಕಿದರೆ ತುಂಬಾ ಕಡಿಮೆ. ನಮ್ಮ ಹಠ, ಆಕ್ಷೇಪಗಳು ಹೆಚ್ಚಿದಾಗ ಮಾತ್ರ ಇರಲಿ ಸಿಟ್ಟು ಮಾಡಬೇಡ….. ನಮ್ಮಾಂಗೆ ಅವರೂ ಮನುಷ್ಯರೇಯ…… ಸುಮ್ಮನಿರು” “ಒಂದಿನ ಉಪವಾಸ ಬಿದ್ದರೆ ನೀನೇನು ಸಾಯೋದಿಲ್ಲ ಬಿಡೋ” ಇತ್ಯಾದಿ ಮಾತಿನ ತುಣುಕುಗಳು ಮಾತ್ರ. ಆದರೆ ಅವೇ ತುಣುಕುಗಳು ನಮಗೆ ಕಲಿಸಿದ ಸಹನೆಯ ಪಾಠ ತುಂಬ ಅದ್ಭುತವಾದದ್ದೇ ಎಂಬುದು ನಮಗೆ ಬುದ್ಧಿ ಬೆಳೆದಂತೆ ಅರಿವಾಯಿತು.

ನಾನು ಉದ್ಯೋಗ ಹಿಡಿದು ಸಂಪಾದಿಸಿ ಅಪ್ಪನಿಗೆ ನೆರವಾಗಬೇಕಾದ ತೀರಾ ಅನಿವಾರ್ಯತೆ ಇದ್ದರೂ ನಮ್ಮ ಸಮಾಜದಲ್ಲಿಯೇ ಮೊದಲಿಗನನ್ನಾಗಿ ಎಂ.ಎ ಓದಲು ನನ್ನನ್ನು ಧಾರವಾಡಕ್ಕೆ ಕಳುಹಿಸಿದ ಅಪ್ಪನದ್ದು ನನ್ನ ಕುರಿತಾಗಿ ಬಹುದೊಡ್ಡ ಔದಾರ್ಯ!

ನಾನು ಧಾರವಾಡದಿಂದ ಮರಳಿ ಬರುವ ಹೊತ್ತಿಗೆ ರೋಗಿಯಾಗಿ ಬಂದು ನಮ್ಮ ಮನೆ ಸೇರಿದ ನಮ್ಮ ಸೋದರತ್ತೆ, ವೃದ್ಧಾಪ್ಯದಿಂದ ಹಾಸಿಗೆ ಹಿಡಿದಿದ್ದ ತನ್ನ ತಂದೆಯ ಸೇವೆ ಮಾಡುತ್ತ ಸಾಲೆಗೂ ಹೋಗಿ ಬರುತ್ತಿದ್ದ ಅಪ್ಪ ನಾನು ಎಂ.ಎ ಮುಗಿಸಿ ಬಂದಮೇಲೆ ನನ್ನನ್ನು ತುಂಬ ಅಭಿಮಾನದಿಂದ ನೋಡಿಕೊಳ್ಳುತ್ತಿದ್ದ. ನಾನು ಕಾಲೇಜು ಅಧ್ಯಾಪಕನಾದ ಮೇಲೆಯೂ ಮಗನೆಂಬುದನ್ನು ಮರೆತು ಮೇಲಾಧಿಕಾರಿಯಂತೆ ಗೌರವದಿಂದ ಕಾಣುತ್ತಿದ್ದ.

ನಮ್ಮೆಲ್ಲರ ಏಳ್ಗೆಗಾಗಿ ತನ್ನೆಲ್ಲ ಪ್ರತಿಭಾ ಶಕ್ತಿಯನ್ನು ದುಡಿಸಿಕೊಳ್ಳುತ್ತಿದ್ದ ಅಪ್ಪ ಯಕ್ಷಗಾನ ಪಾತ್ರ ಮಾಡುತ್ತ, ಆಸಕ್ತರಿಗೆ ಯಕ್ಷಗಾನ ಕಲಿಸುತ್ತಲೂ ಕಾಸು ಕಾಸು ಸಂಪಾದಿಸಿ ನಮಗಾಗಿ ಖರ್ಚು ಮಾಡಿದ. ಬನವಾಸಿಯಲ್ಲಿ ಶಿಕ್ಷಕ ವೃತ್ತಿಯಲ್ಲಿರುವಗಾಲೇ ನಾಟಕ ರಂಗ ಭೂಮಿಯಲ್ಲಿ ಉತ್ತಮ ಸ್ತ್ರೀ

ಪಾತ್ರಧಾರಿ ಎಂದೇ ಹೆಸರು ಮಾಡಿ ಹವ್ಯಾಸಿ ಕಲಾ ತಂಡದ ಮುಖ್ಯ ಸ್ತ್ರೀ

 ವೇಷಧಾರಿಯಾಗಿ ಜನ ಮೆಚ್ಚುಗೆ ಗಳಿಸಿದ್ದ. ಯಕ್ಷಗಾನ ಕಲೆಯಂತೂ ಬಹುಚಿಕ್ಕ ವಯಸ್ಸಿನಲ್ಲಿಯೇ ಅಪ್ಪನಿಗೆ ಒಲಿದು ಬಂದಿತ್ತು. ದುರಾದೃಷ್ಟವೆಂದರೆ ಅಂದಿನ ದಿನಗಳಲ್ಲಿದ್ದ ಪ್ರಚಾರದ ಕೊರತೆಯಿಂದ ಆತ ನಿರೀಕ್ಷಿತ ಪ್ರಮಾಣದಲ್ಲಿ ಪ್ರಸಿದ್ಧಿ ಪಡೆಯುವುದು ಸಾಧ್ಯವೇ ಆಗಲಿಲ್ಲ.

ಮಾಸ್ತರಿಕೆಯ ತಿರುಗಾಟದ ಕೊನೆಯ ಹಂತದಲ್ಲಿ ಊರಿಗೆ ಬಂದು ನೆಲೆನಿಂತ ಬಳಿಕ ಕೇರಿಯ ಜನರಿಗೆ ಸರಕಾರಿ ಭೂಮಿ ಒದಗಿಸಿಕೊಡುವಲ್ಲಿ, ಜನತಾ ಮನೆಗಳನ್ನು ಮಂಜೂರಿ ಮಾಡಿಸುವಲ್ಲಿ ನಿರಂತರವಾಗಿ ಶ್ರಮಿಸಿದ ಅಪ್ಪ ತನ್ನ ಮಾತು ಕೇಳುವ ಕೇರಿಯ ಮಕ್ಕಳೆಲ್ಲ ಶಿಕ್ಷಣ ಪಡೆಯುವಂತೆ ಪ್ರೇರೆಪಿಸುತ್ತಲೇ ಇದ್ದ. ಕೇರಿಯಲ್ಲಿಯೇ ಇದ್ದ ನಾಲ್ಕಾರು ಜೀತದಾಳುಗಳ ಮೇಲೆ ದೌರ್ಜನ್ಯ ನಡೆಯುವಾಗ ಒಡೆಯರ ವಿರುದ್ಧ ನಿಂತು ಹೋರಾಡಿದ. ಕೆಲವರನ್ನು ಜೀತದಿಂದ ಬಿಡಿಸುವಲ್ಲಿಯೂ ಯಶಸ್ವಿಯಾಗಿದ್ದ.

ತನ್ನ ಇತಿಮಿತಿಗಳ ನಡುವೆಯೂ ಮನುಷ್ಯನೊಬ್ಬ ತನ್ನ ಸುತ್ತಲಿನ ಸಮಾಜಕ್ಕೆ ಪರಿಸರಕ್ಕೆ ಹೇಗೆ ಸ್ಪಂದಿಸಬಹುದು ಎಂಬುದನ್ನು ಬದುಕಿ ತೋರಿದ ಅಪ್ಪ ಎಂದಿಗೂ ಯಾವುದಕ್ಕೂ ಪ್ರಚಾರ ಬಯಸಲಿಲ್ಲ. ಇಂದು ಅವನ ಮಕ್ಕಳಾದ ನಾವೆಲ್ಲ ಏನಾಗಿದ್ದೇವೆ? ಎಂಬುದು ಅಪ್ಪನ ಆಯುಷ್ಯದ ಮೌನ ಸೇವಾ ವೃತದ ಫಲ ಮಸ್ತ

೧೯೭೮ ರ ಹೊತ್ತಿಗೆ ಅಪ್ಪನಿಗೆ ‘ಲಕ್ವ’ ಹೊಡೆಯಿತು. ಇನ್ನೂ ಒಂದೆರಡು ವರ್ಷ ಮಾಸ್ತರಿಕೆಯ ಸೇವಾವಧಿ ಬಾಕಿಯಿತ್ತು. ಎರಡು-ಮೂರು ತಿಂಗಳ ಸುಶ್ರೂಶೆಯ ಬಳಿಕ ಚೇತರಿಸಿಕೊಂಡ ಅಪ್ಪ ಪುನಃ ಶಿಕ್ಷಕ ವೃತ್ತಿಗೆ ಹಾಜರಾಗಿ ಸೇವಾವಧಿಯನ್ನು ಮುಗಿಸಿ ನಿವೃತ್ತನಾದ. ಆದರೆ ಸರಿಯಾಗಿ ನಡೆಯಲಾಗದ ಮತ್ತೆ ಯಕ್ಷಗಾನ ಇತ್ಯಾದಿ ಪಾತ್ರ ಮಾಡದ ತನ್ನ ಅಸಹಾಯಕತೆಗಾಗಿ ತುಂಬಾ ನೊಂದುಕೊಳ್ಳುತ್ತಿದ್ದ.

ಕೆಲಸವಿಲ್ಲದ ಒಂಟಿತನ, ಅನಾರೋಗ್ಯದ ಆತಂಕದ ನಡುವೆಯೇ ಆರೆಂಟು ವರ್ಷಗಳ ಕಾಲ ನಮ್ಮೊಡನಿದ್ದ ಅಪ್ಪ ೧೯೯೯ರ ಒಂದು ಶಿವರಾತ್ರಿಯ ಉಪವಾಸದ ಸುರ್ಯೋದಯದ ಹೊತ್ತಿಗೆ ನಮ್ಮೆಲ್ಲರನ್ನು ಬಿಟ್ಟು ಶಾಶ್ವತವಾಗಿ ಹೊರಟು ಹೋದ.

ನಾನು ಬನವಾಸಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನನ್ನನ್ನು ಶಾಲೆಯ ವೇದಿಕೆಯಲ್ಲಿ ನಿಲ್ಲಿಸಿ ಅಪ್ಪ ಹಾಡು ಹೇಳಿಸಿದ ನೆನಪು…….

“ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರ

ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು ಇನ್ನೊಮ್ಮೆ ಏಕೆ ಬಾರ…….”

ಈಗ ನಮ್ಮ ಜೊತೆಗಿರುವುದು ಅಪ್ಪನ ಆದರ್ಶ ಮತ್ತು ನೆನಪುಗಳು ಪಾತ್ರ.


ರಾಮಕೃಷ್ಣ ಗುಂದಿ

ಕನ್ನಡದಖ್ಯಾತಕತೆಗಾರ. ಅವಾರಿ, ಕಡಲಬೆಳಕಿನದಾರಿಗುಂಟ, ಅತಿಕ್ರಾಂತ, ಸೀತೆದಂಡೆಹೂವೇ …ಈನಾಲ್ಕುಅವರಕಥಾಸಂಕಲನಗಳು. ಅವರಸಮಗ್ರಕಥಾಸಂಕಲನಸಹಈಚೆಗೆಪ್ರಕಟವಾಗಿದೆ.‌ಯಕ್ಷಗಾನಕಲಾವಿದ.‌ ಕನ್ನಡಉಪನ್ಯಾಸಕರಾಗಿಅಂಕೋಲಾದಜೆ.ಸಿ.ಕಾಲೇಜಿನಲ್ಲಿಸೇವೆಪ್ರಾರಂಭಿಸಿ, ಕಾರವಾರದದಿವೇಕರಕಾಲೇಜಿನಲ್ಲಿಪ್ರಾಂಶುಪಾಲರಾಗಿಕರ್ತವ್ಯನಿರ್ವಹಿಸಿನಿವೃತ್ತರಾಗಿದ್ದಾರೆ. ಯಕ್ಷಗಾನಅಕಾಡೆಮಿಸದಸ್ಯರಾಗಿಸೇವೆಸಲ್ಲಿಸಿದ್ದಾರೆ. ಮಗಅಮೆರಿಕಾದಲ್ಲಿಸಾಫ್ಟ್‌ವೇರ್ಎಂಜಿನಿಯರ್. ಅಗೇರಸಮುದಾಯದಿಂದಬಂದಗುಂದಿಅವರುಅದೇಜನಾಂಗದಬಗ್ಗೆಪಿಎಚ್ಡಿಪ್ರಬಂಧಮಂಡಿಸಿ, ಡಾಕ್ಟರೇಟ್ಸಹಪಡೆದಿದ್ದಾರೆ‌ . ದಲಿತಜನಾಂಗದಕಷ್ಟನಷ್ಟನೋವು, ಅವಮಾನ, ನಂತರಶಿಕ್ಷಣದಿಂದಸಿಕ್ಕಬೆಳಕುಬದುಕುಅವರಆತ್ಮಕಥನದಲ್ಲಿದೆ. ಮರಾಠಿದಲಿತಸಾಹಿತಿಗಳ,‌ಲೇಖಕರಒಳನೋಟ , ಕನ್ನಡನೆಲದದಲಿತಧ್ವನಿಯಲ್ಲೂಸಹಇದೆ.‌ ರಾಮಕೃಷ್ಣಗುಂದಿಅವರಬದುಕನ್ನುಅವರಆತ್ಮಕಥನದಮೂಲಕವೇಕಾಣಬೇಕು. ಅಂತಹನೋವಿನಹಾಗೂಬದುಕಿನ‌ ಚಲನೆಯಆತ್ಮಕಥನವನ್ನುಸಂಗಾತಿ ..ಓದುಗರಎದುರು, ‌ಕನ್ನಡಿಗರಎದುರುಇಡುತ್

6 thoughts on “

  1. ತಮ್ಮ ತಂದೆಯವರ ಅಂದಿನ ಸಾಧನೆಯ ಹಾದಿ ಓದಿ ಕುಶಿ ಆಯಿತು.ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಅಭಿನಂದನೆಗಳು ಸರ್

    1. ಸರ್, ತಮ್ಮ‌ ತಂದೆಯವರ ಕುರಿತು ಬರಹ ಕಂಡ ಮನಸ್ಸು ತುಂಬಿ ಬಂತು. ತಮ್ಮ ಅವಲಂಬಿತರಿಗಾಗಿ ಅವರು ತಮ್ಮ ಕಷ್ಟಕಾಲವನ್ನು ಮರೆತು ಮಾನವೀಯ ಮೌಲ್ಯಗಳನ್ನು ಸ್ವತಃ ಉಳಿಸಿ ಬೆಳೆಸಿದವರು ಎಂಬುದನ್ನು ಓದಿದಾಗ ತಮಗೆ ತಂದೆಯವರು ಪಟ್ಟ ಭವಣೆಗಳು ಮನದಿಂದ ಮರೆಯಾಗದೇ ಹೃದಯದ ಮೂಲೆಯಲ್ಲಿ ಇರುವ ನೋವಿನ ಗೆರೆಯು ಕಾಣುತ್ತಿತ್ತು.ನಮ್ಮ ಪ್ರೀತಿಯ ಗುರುಗಳು ತಾವು. ಗೌರವಪೂರ್ವಕ ತಮಗೆ.

  2. ಇದೊಂದು ಅದ್ಭುತ ಬರಹ,ಪ್ರೀತಿ, ವಾತ್ಸಲ್ಯ, ಮೆಚ್ಚುಗೆ, ಅಭಿಮಾನ, ಹೆಮ್ಮೆ ಎಲ್ಲ ಮಿಳಿತವಾಗಿ ಹೃದಯಸ್ಪರ್ಶಿಯಾಗಿದೆ.

  3. ನಿಮ್ಮ ತಂದೆಯವರ ಬಗ್ಗೆ ನಿಮಗೆ ದೇವರಿಗಿಂತ ಅಪಾರ ಅಭಿಮಾನ ಹಾಗೂ ದೇವರಿಗಿಂತ ಹೆಚ್ಚು ಭಕ್ತಿ, ತಂದೆ ಬಿಟ್ಟು ನೀವಿಲ್ಲ ನಿಮಗೆ ಬಿಟ್ಟು ತಂದೆಯಿಲ್ಲ, ತಂದೆಯ ಗೌರವದಿಂದ ಇಷ್ಟೊಂದು ಎತ್ತರಕ್ಕೆ ಬೆಳೆದು ಸಾಧನೆ ಮಾಡಿದ್ದೀರಿ….. ಓದಿ ಮನಸ್ಸಿಗೆ ತುಂಬಾ ನೋವಿನ ಜೊತೆಗೆ ಸಂತೋಷವಾಯಿತು ಗುರೂಜಿ…..

    ಮುಂದುವರಿದ ಸಂಚಿಕೆ ಎದುರಾಗಿರುವೆ!

Leave a Reply

Back To Top