ಧಾರಾವಾಹಿ

ಆವರ್ತನ

ಅದ್ಯಾಯ-47

6,515 BEST Stone Crusher IMAGES, STOCK PHOTOS & VECTORS | Adobe Stock

ತಂಗವೇಲುವಿನೊಂದಿಗೆ ಬಂಡೆಯ ಸಮೂಹವನ್ನು ನೋಡುತ್ತ ಕೊರಕಲು ದಾರಿಯಲ್ಲಿ ಫರ್ಲಾಂಗು ಮುಂದೆ ಸಾಗಿದ ಶಂಕರನಿಗೆ ಆ ರಸ್ತೆಯ ಅಂತ್ಯದಿಂದ ಸುಮಾರು ನೂರು ಗಜ ದೂರದಲ್ಲಿ ಎರಡು, ಮೂರು ಶತಮಾನಗಳಷ್ಟು ಹಳೆಯದಾದ ತುಂಡುಪ್ಪರಿಗೆಯ ಮನೆಯೊಂದು ಕಾಣಿಸಿತು. ಅದನ್ನು ಕಂಡ ತಂಗವೇಲು, ‘ಸಂಗರಣ್ಣ ಅದೇ ಮನೆ ಸುಘೇಂದ್ರಯ್ಯನವರ್ದು…!’ ಎಂದು ಗೆಲುವಿನಿಂದ ತೋರಿಸಿದ. ಆದ್ದರಿಂದ ಶಂಕರ ಅಲ್ಲೇ ಒಂದು ಕಡೆ ಕಾರು ನಿಲ್ಲಿಸಿ ಇಳಿದವನು ಕಾರನ್ನೊಮ್ಮೆ ಬೇಸರದಿಂದ ದಿಟ್ಟಸಿದ. ತನ್ನ ಹೊಚ್ಚ ಹೊಸ ಕಾರು ಆ ಕೊರಕಲು ರಸ್ತೆಯ ಒರಟು ಕಲ್ಲುಗಳ ಮೇಲೆ ಹರಿದು ಓಲಾಡುತ್ತ ನಿಮಿಷಕ್ಕೊಮ್ಮೆ ಎಗರಿ ಬೀಳುತ್ತ ಬರುತ್ತಿದ್ದಾಗಲೇ ಅವನ ಹೊಟ್ಟೆಯೊಳಗೆ ಅವಲಕ್ಕಿ ಕುಟ್ಟಿದಂಥ ಹಿಂಸೆಯಾಗುತ್ತಿತ್ತು. ಈಗ ಅದಕ್ಕೆ ಮೆತ್ತಿಕೊಂಡಿದ್ದ ಧೂಳನ್ನೂ ಕಂಡವನು, ‘ಥೂ! ಥೂ! ಎಂಥ ಸಾವು ಮಾರಾಯ ಇದು. ಹೊಸ ಕಾರಿಡೀ ಧೂಳುಮಯವಾಗಿಬಿಟ್ಟಿದೆ ನೋಡು…!’ ಎಂದು ತಂಗವೇಲುವೇ ಅದಕ್ಕೆ ಕಾರಣ ಎಂಬಂತೆ ಸಿಡುಕಿದ. ಅದಕ್ಕವನು ‘ಹ್ಹಿಹ್ಹಿಹ್ಹಿಹ್ಹಿ…! ಊರಿಗೆ ಹೋಗಿ ಗ್ಯಾರೇಜಿಗೆ ಬಿಟ್ಟರಾಯ್ತು ಸಂಗರಣ್ಣಾ…!’ ಎಂದು ಹಲ್ಲು ಗಿಂಜಿ ಮುಂದೆ ನಡೆದ. ಆಗ ಶಂಕರನಿಗೆ ಮತ್ತಷ್ಟು ಉರಿಯಿತು. ಆದರೂ ವಿಧಿಯಿಲ್ಲದೆ ಅವನನ್ನು ಹಿಂಬಾಲಿಸಿದ.    ಇಬ್ಬರೂ ಸುರೇಂದ್ರಯ್ಯನ ಮನೆಯಂಗಳಕ್ಕೆ ಬಂದು ನಿಂತರು. ‘ಸಾವುಗಾರ್ರೇ… ಸಾವುಗಾರ್ರೇ…!’ ಎಂದು ತಂಗವೇಲು ಧ್ವನಿಯೆತ್ತಿ ಕೂಗಿದ. ಶಂಕರ ಆ ಮನೆಯನ್ನೂ ಸುತ್ತಲಿನ ವಠಾರವನ್ನೂ ಗಮನಿಸತೊಡಗಿದ. ಒಂದುಕಾಲದಲ್ಲಿ ನೂರಾರು ಮಂದಿ ಅವಿಭಕ್ತವಾಗಿ ಬಾಳಿ ಬದುಕಿದ ಮನೆಯದು ಎಂಬುದು ಅದನ್ನು ಕಟ್ಟಿದ ಶ್ರೀಮಂತ ಕಲಾತ್ಮಕತೆಯಿಂದಲೇ ತಿಳಿಯುತ್ತಿತ್ತು. ಆದರೆ ಈಗ ಆ ಮನೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಬದುಕಿದ್ದು, ಅದರ ಹೆಚ್ಚಿನ ಭಾಗಗಳು ಶಿಥಿಲಗೊಂಡು ಒಂದೆರಡು ಭಾಗದ ಗೋಡೆಗಳು ಕುಸಿದುಬಿದ್ದಿದ್ದವು. ಸುತ್ತಲಿನ ತೆಂಗು, ಅಡಿಕೆ ತೋಟ ಮತ್ತು ಹೊಲಗದ್ದೆಗಳು ದುಡಿಯುವವರಿಲ್ಲದೆ ಹಡಿಲು ಬಿದ್ದು ದಶಕಗಳೇ ಕಳೆದಂತಿದ್ದವು. ನೆಟ್ಟಗೆ ನಿಲ್ಲಲಾಗದ ಮುದಿ ನಾಯಿಗಳೆರಡು ತಮ್ಮ ದುರ್ಬಲ ದೊಂಡೆಗಳಿಂದ ಊಳಿಡುವಂತೆ ಕರ್ಕಶವಾಗಿ ಬೊಗಳಿದವು, ಅಪರಿಚಿತರ ಸುಳಿವನ್ನು ಮನೆಯವರಿಗೆ ತಿಳಿಸಿ ತಮ್ಮ ಕೆಲಸವಾಯಿತೆಂಬಂತೆ ಮರಳಿ ಕಣ್ಣುಮುಚ್ಚಿ ಮುದುಡಿಕೊಂಡವು.  ಸ್ವಲ್ಪಹೊತ್ತಿನಲ್ಲಿ ಬಣ್ಣ ಮಾಸಿದ ಕಾವಿ ಲುಂಗಿಯುಟ್ಟಿದ್ದ, ಐವತ್ತೈದರ ಆಸುಪಾಸಿನ ಡೊಳ್ಳು ಹೊಟ್ಟೆಯ ಕಂದು ಮೈಬಣ್ಣದ ದಢೂತಿ ವ್ಯಕ್ತಿಯೊಬ್ಬರು ಹಳೆಯ ಬೈರಾಸೊಂದನ್ನು ಹೆಗಲಿಗೇರಿಸಿಕೊಂಡು ಬಾಯಿ ತುಂಬ ಎಲೆಯಡಿಕೆ ಜಗಿಯುತ್ತ ಪಡಸಾಲೆಗೆ ಬಂದರು. ಅಂಗಳದಲ್ಲಿ ನಿಂತಿದ್ದ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಅಲ್ಲೇ ಗೋಡೆಯ ಹೊರ ಮೂಲೆಗೆ ವೀಳ್ಯದೆಂಜಲನ್ನು ಪಿಚಕ್ಕನೇ ಉಗುಳುತ್ತ ತಂಗವೇಲುವಿನ ಗುರುತು ಹಿಡಿದರು. ‘ಓಹೋ, ತಂಗವೇಲುವಾ ಮಾರಾಯಾ…ಬನ್ನಿ ಬನ್ನಿ ಒಳಗೆ ಬನ್ನಿ. ಎಷ್ಟು ಕಾಲವಾಯ್ತಾ ನಿನ್ನನ್ನು ನೋಡಿ…! ಆವತ್ತೊಮ್ಮೆ ಬಂದು ಹೋದವನದ್ದು ಮತ್ತೆ ಪತ್ತೆಯೇ ಇಲ್ಲ ನೋಡು…!’ ಎಂದು ನಗುತ್ತ ಅಂದವರು, ‘ಹೌದೂ ಇವರು ಯಾರು ಸಾಹುಕಾರ್ರು…?’ ಎಂದು ಶಂಕರನೆಡೆಗೆ ದಿಟ್ಟಿಸುತ್ತ ಗತ್ತಿನಿಂದ ಕೇಳಿದರು. ಅವರು, ‘ಸಾಹುಕಾರ್ರು…!’ ಎಂದಾಕ್ಷಣ ಶಂಕರನ ದೇಹವು ತಾನಿದ್ದುದಕ್ಕಿಂತಲೂ ಕೆಲವಿಂಚು ಎತ್ತರಕ್ಕೆ ಸೆಟೆದುನಿಂತಿತು. ‘ಹ್ಹೆಹ್ಹೆಹ್ಹೆ… ಏನು ಮಾಡುವುದು ಸಾವುಗಾರ್ರೇ ಗಿರಾಕಿ ಸಿಗಬೇಕಲ್ಲ…!’ ಎಂದ ತಂಗವೇಲು ಶಂಕರನತ್ತ ತಿರುಗಿ, ‘ಇವರು ನಮ್ಮ ಧಣಿ ಸಂಗರಣ್ಣ ಅಂತ. ದೊಡ್ಡ ಬಿಲ್ಡರ್ರು ಮತ್ತು ಭಾರೀ ದೊಡ್ಡ ಗುಳ (ಕುಳ) ಸಾವುಗಾರ್ರೇ!’ ಎಂದು ನಗುತ್ತ ಹೇಳಿ ತಾನೂ ಅವನನ್ನು ಉಬ್ಬಿಸಿದ. ಶಂಕರ ತಂಗವೇಲುವಿನೆಡೆಗೂ ಮೆಚ್ಚುಗೆಯ ನಗು ಹರಿಸಿದ. ಅಷ್ಟು ತಿಳಿದ ಸುರೇಂದ್ರಯ್ಯ ಶಂಕರನಿಗೆ ಗೌರವದಿಂದ ನಮಸ್ಕರಿಸಿ ಕುಳಿತುಕೊಳ್ಳಲು ಹಳೆಯ ಕುಸುರಿ ಚಿತ್ತಾರವಿದ್ದ ಕುರ್ಚಿಯನ್ನು ತೋರಿಸಿದವರು, ಕೆಲಸದವಳನ್ನು ಕೂಗಿ ಕರೆದು ಕಾಫಿ ತರಲು ಸೂಚಿಸಿ ಅವರೊಂದಿಗೆ ಮಾತುಕತೆಗಿಳಿದರು. ತಂಗವೇಲುವೇ ಮೊದಲು ಮಾತಾಡಿದ. ‘ಸಾವುಗಾರ್ರೇ, ನಮ್ಮ ಶರವಣನ ದಯೆಯಿಂದ ನಿಮ್ಮ ಹಿರಿಯರಾಸೆ ಕೈಗೂಡುವ ಕಾಲ ಬಂದೇಬಿಟ್ಟಿತು ನೋಡಿ. ಸಂಗರಣ್ಣನಿಗೆ ನಿಮ್ಮ ಬಂಡಿಗಲ್ಲು ಬೇಕಂತೆ!’ ಎಂದವನು, ‘ಮುಂದಿನದ್ದನ್ನು ನೀವೇ ಮಾತಾಡಿಕೊಳ್ಳಿ!’ ಎಂಬಂತೆ ಶಂಕರನ ಮುಖ ನೋಡಿದ. ಆದ್ದರಿಂದ ಶಂಕರ ಮೊದಲು ಏಕನಾಥ ಗುರೂಜಿಯವರನ್ನೂ ಮತ್ತವರ ಜ್ಯೋತಿಷ್ಯದ ಶಕ್ತಿಯನ್ನೂ ಹೊಗಳುತ್ತ ಅವರನ್ನು ಪರಿಚಯಿಸಿದ. ಬಳಿಕ ಅವರೀಗ ನಿರ್ಮಿಸಲು ಹೊರಟಿರುವ ದೇವಸ್ಥಾನದ ವಿಚಾರವನ್ನು ಅವರಿಗೆ ವಿವರಿಸಿ, ‘ಗುರೂಜಿಯವರದ್ದು ಇದೊಂದು ದೊಡ್ಡ ಸಾಧನೆಯಾಗಲಿದೆ ಸುರೇಂದ್ರಯ್ಯನವರೇ. ಅದರಿಂದ ನಮ್ಮೂರಿಗೂ ಬಹಳ ಒಳ್ಳೆಯದಾಗಲಿದೆ. ಹಾಗಾಗಿ ಆವೊಂದು ಉತ್ತಮ ಕೆಲಸಕ್ಕೆ ನಿಮ್ಮ ಬಂಡೆಗಳು ನಮಗೆ ಬೇಕು. ಕೊಡಬಹುದಾ…?’ ಎಂದು ಗಂಭೀರವಾಗಿ ಕೇಳಿದ. ಅವನ ಮಾತು ಕೇಳಿದ ಸುರೇಂದ್ರಯ್ಯನಿಗೆ ತಾವು ಕುಳಿತ ನೆಲದಡಿಯಲ್ಲೇ ಕೊಪ್ಪರಿಗೆಯೆದ್ದಷ್ಟು ಸಂತೋಷವಾಯಿತು. ಆದರೂ ತೋರಿಸಿಕೊಳ್ಳದೆ ಕೆಲವು ಕ್ಷಣ ಗಂಭೀರವಾಗಿ ಯೋಚಿಸುವಂತೆ ನಟಿಸಿದರು. ಬಳಿಕ, ‘ಬಂಡೆಯನ್ನೇನೋ ಕೊಡಬಹುದು ಸಾವುಕಾರ್ರೇ…, ಆದರೆ ನಮ್ಮ ಹಿರಿಯರದ್ದೊಂದು ಸಣ್ಣ ಆಸೆಯಿದೆ. ಏನೆಂದರೆ ನಮ್ಮ ಬಂಡೆಯಿಂದ ಕಟ್ಟುವ ದೇವಸ್ಥಾನದಲ್ಲಿ ಯಾವುದಾದರೂ ಒಂದು ದೈವದ ಅಥವಾ ದೇವರ ಮೂರ್ತಿಯು ಇದೇ ಶಿಲೆಯಿಂದ ಕೆತ್ತನೆಯಾಗಿ ಅಲ್ಲಿ ಪೂಜೆಗೊಳ್ಳಬೇಕು ಎಂಬುದು. ನಿಮ್ಮ ಗುರೂಜಿಯವರು ಇದಕ್ಕೆ ಒಪ್ಪುತ್ತಾರಾ…?’ ಎಂದು ಅನುಮಾನದಿಂದ ಪ್ರಶ್ನಿಸಿದರು.    ಅಷ್ಟು ಕೇಳಿದ ಶಂಕರನಿಗೆ ಪಕ್ಕನೆ ಏನೂ ತೋಚಲಿಲ್ಲ. ಆದ್ದರಿಂದ, ‘ಈ ವಿಷಯವನ್ನು ಮಾತ್ರ ನಾನು ಗುರೂಜಿಯವರೊಡನೆ ಕೇಳಿಯೇ ಹೇಳಬೇಕಾಗುತ್ತದೆ ಸುರೇಂದ್ರಯ್ಯ!’ ಎಂದವನು, ‘ಹೌದು, ನಿಮ್ಮ ಹಿರಿಯ ಆ ಆಸೆಗೆ ಕಾರಣವೇನು?’ ಎಂದ ಕುತೂಹಲದಿಂದ. ಅದನ್ನೇ ನಿರೀಕ್ಷಿಸುತ್ತಿದ್ದ ಸುರೇಂದ್ರಯ್ಯ, ‘ಆ ಕಥೆಯನ್ನು ನಿಮಗೆ ಸ್ವಲ್ಪ ಹೇಳಬೇಕು ನೋಡಿ. ಆದರೆ ಅದಕ್ಕಿಂತ ಮೊದಲು ಆ ಬಂಡೆಗಳ ವಿಶೇಷವನ್ನೂ ಹೇಳುತ್ತೇವೆ ಕೇಳಿ. ನಮ್ಮ ಮುತ್ತಜ್ಜನ ಕಾಲದಿಂದಲೋ ಅಥವಾ ಅವರ ಮುತ್ತಜ್ಜದಿಂದಿರ ಕಾಲದಿಂದಲೋ ಎಂಬುದು ಸರಿಯಾಗಿ ಗೊತ್ತಿಲ್ಲ, ಒಟ್ಟಾರೆ ಅಷ್ಟೊಂದು ಪ್ರಾಕಿನಿಂದಲೂ ಆ ಬಂಡೆಕಲ್ಲು ನಮ್ಮ ಜಾಗದಲ್ಲಿತ್ತಂತೆ. ಆದರೆ ಆವಾಗ ಕೇವಲ ಒಂದೇ ಬಂಡೆಯಿದ್ದದ್ದು ಕಾಲಕ್ರಮೇಣ ಬೆಳೆಯುತ್ತ ಹೋಯಿತಂತೆ. ಒಮ್ಮೆ ರಾತ್ರೋರಾತ್ರಿ ಎರಡು ಭಾಗವಾಗಿಬಿಟ್ಟಿತಂತೆ! ಅಷ್ಟಾಗಿ ಕೆಲವು ವರ್ಷಗಳ ನಂತರ ಮತ್ತೆ ಮೂರು ಭಾಗವಾಗಿದ್ದು ಬರಬರುತ್ತ ಮತ್ತಷ್ಟು ಸೀಳಿ, ಒಡೆದುಕೊಳ್ಳುತ್ತ ಬಂದದ್ದು ಒಂದೊಂದು ಬಂಡೆಗೂ ಒಂದೊಂದು ಪ್ರಾಣಶಕ್ತಿ ಬಂದು ಬಂಡೆಗಳ ದೊಡ್ಡದೊಂದು ಸಂಸಾರವೇ ಆಗಿಬಿಟ್ಟಿತಂತೆ. ಹೀಗಾಗಿ ಆ ಬಂಡೆಗಳ ನಡುವೆ ಪಿಲಿಚೌಂಡಿ ಮತ್ತು ಪಂಜುರ್ಲಿ ದೈವಗಳು ಬಂದು ನೆಲೆಸಿದ್ದಾವೆ ಎಂದೊಮ್ಮೆ ನಮ್ಮ ಹಿರಿಯರಿಗೆ ‘ದೈವದರ್ಶನ’ ಸೇವೆಯಲ್ಲಿ ತಿಳಿದು ಬಂದಿತಂತೆ. ಅಷ್ಟು ತಿಳಿದ ಅವರು ಆ ಶಕ್ತಿಗಳನ್ನು ಭಯಭಕ್ತಿಯಿಂದ ಈ ಮನೆಗೆ ಕರೆದುಕೊಂಡು ಬಂದು ನೆಲೆಗೊಳಿಸಿ ಕಾಲಕಾಲಕ್ಕೆ ಅವುಗಳನ್ನು ವೈಭವದಿಂದ ಪೂಜಿಸಿಕೊಂಡು ಬಂದರು. ಆ ಶಕ್ತಿಗಳು ನೆಲೆಯಾಗಿದ್ದಂಥ ಆ ಬಂಡೆಗಳಿಗೂ ದೈವಶಕ್ತಿ ಇರುತ್ತದೆ. ಹಾಗಾಗಿ ಅದರದ್ದೊಂದು ತುಂಡು ಕಲ್ಲಾದರೂ ದೈವ, ದೇವರ ಮೂರ್ತಿಯಾಗಿ ಪೂಜೆಯಾಗಬೇಕೆನ್ನುವುದು ನಮ್ಮ ಹಿರಿಯರ ಸಂಕಲ್ಪ!’ ಎಂದು ಸುರೇಂದ್ರಯ್ಯ ವಿವರಿಸಿದರು. ‘ಓಹೋ ಹೀಗಾ ವಿಷಯ…? ಹಾಗಾದರೆ ಅವರು ಸರಿಯಾಗಿಯೇ ಯೋಚಿಸಿದ್ದಾರೆ ಬಿಡಿ!’ ಎಂದು ಶಂಕರ ಅವರ ಮಾತನ್ನು ಸಮರ್ಥಿಸಿದ. ‘ಆ ಬಂಡೆಗಳಿಗೆ ನಾವು ಹೇಳುತ್ತಿದ್ದ ರೇಟಿಗಿಂತಲೂ ಎರಡರಷ್ಟು ಹೆಚ್ಚು ಕೊಟ್ಟು ಅದನ್ನು ಕೊಳ್ಳಲು ಇಲ್ಲಿನ ತುಂಬಾ ಜನ ಕ್ರಷರ್ ಮಾಲಿಕರು ಬಹಳ ವರ್ಷಗಳಿಂದ ಬಂದು ಹೋಗುತ್ತಲೇ ಇದ್ದಾರೆ ಸಾಹುಕಾರ್ರೇ. ಮೊನ್ನೆ ಮೊನ್ನೆಯಷ್ಟೇ ನಮಗೆ ಬಹಳ ಪರಿಚಯವಿದ್ದ ಇಲ್ಲಿನೊಬ್ಬ ದೊಡ್ಡ ಉದ್ಯಮಿ ರವೀಂದ್ರಯ್ಯ ಅಂತ ಬಂದಿದ್ದರು. ಆದರೆ ನಾವು ಅವರಿಗೂ ‘ಸದ್ಯ ಮಾರುವ ಯೋಚನೆಯಿಲ್ಲ. ಇದ್ದರೆ ಹೇಳುತ್ತೇವೆ!’ ಎಂದು ಕಳುಹಿಸಿದ್ದೆವು. ಈ ಸಲ ಬಹುಶಃ ನಿಮ್ಮ ಮೂಲಕವೇ ನಮ್ಮ ಹಿರಿಯರ ನಂಬಿಕೆಯು ಈಡೇರುವ ಕಾಲ ಬಂದಿದೆ ಅಂತ ತೋರುತ್ತದೆ!’ ಎಂದು ಸುರೇಂದ್ರಯ್ಯ ನಗುತ್ತ ಹೇಳಿದರು. ‘ಆಯ್ತು ಸುರೇಂದ್ರಯ್ಯನವರೇ, ಈ ವಿಷಯ ಗುರೂಜಿಯವರಲ್ಲಿ ಮಾತಾಡಿ ಒಪ್ಪಿಸುವ ಜವಾಬ್ದಾರಿ ನನ್ನದು. ಈಗ ವ್ಯವಹಾರದ ಮಾತಾಡುವ. ನೀವು ಸರಿಯಾದ ಒಂದು ರೇಟು ಹೇಳಿದರೆ ಒಳ್ಳೆಯದಿತ್ತು!’ ಎಂದ ಶಂಕರ. ಆಗ ಸುರೇಂದ್ರಯ್ಯ ಮತ್ತೆ ಗಂಭೀರವಾದವರು ಕೆಲವು ಕ್ಷಣದ ಬಳಿಕ, ‘ನೋಡಿ ಸಾಹುಕಾರ್ರೇ, ನಾವು ಬಂಡೆ ಮಾರಿ ಅದರಿಂದಲೇ ಬದುಕಲು ಹೊರಟವರೇನಲ್ಲ. ಅದನ್ನೀಗಲೇ ಹೇಳಿ ಬಿಡುತ್ತೇವೆ. ಯಾಕೆಂದರೆ ನಮ್ಮ ಹಿರಿಯರು ಬಿಟ್ಟು ಹೋದ ಆಸ್ತಿಯೇ ನಮ್ಮ ಇನ್ನೆರಡು, ಮೂರು ತಲೆಮಾರಿಗಾಗುವಷ್ಟಿದೆ. ಆದರೂ ಆ ಬಂಡೆಗಳನ್ನು ಮಾರಲು ಒಂದು ಮುಖ್ಯ ಕಾರಣವಿದೆ. ನಮ್ಮ ಈ ಮನೆಯನ್ನೂ ಇದರ ಅವಸ್ಥೆಯನ್ನೂ ನೀವು ಗಮನಿಸಿರಬಹುದು. ಅರಮನೆಯಂಥ ಇದನ್ನು ರಿಪೇರಿ ಮಾಡಿಸುವುದೆಂದರೆ ಸಣ್ಣ ಮಾತೇನಲ್ಲ. ಆ ಬಂಡೆಗಳನ್ನು ಮಾರಿ ಈ ಮನೆಯನ್ನು ಈಗ ಇರುವ ರೀತಿಯಲ್ಲೇ ಚಂದ ಮಾಡಿ ರಿಪೇರಿ ಮಾಡಿಸಿ ಇನ್ನೊಂದಷ್ಟು ವರ್ಷ ಇದರ ವೈಭವವನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ತಂದೆಯವರ ಮತ್ತು ನಮ್ಮಿಚ್ಛೆಯೂ ಹೌದು! ಅದಕ್ಕೆ ಒಂದು ಅಂದಾಜಿನ ಪ್ರಕಾರ ಒಂದು ಕೋಟಿಯತನಕ ಖರ್ಚು ಬೀಳಬಹುದು. ನಮ್ಮ ಬಂಡೆಗೂ ನೀವು ಅಷ್ಟೇ ಕೊಟ್ಟರೆ ಸಾಕು!’ ಎಂದು ಸಲೀಸಾಗಿ ಅಂದರು. ಆದರೆ ಶಂಕರನಿಗೆ ಅದೇನೂ ಅಷ್ಟೊಂದು ದೊಡ್ಡ ಮೊತ್ತವೆಂದು ಅನ್ನಿಸಲಿಲ್ಲ. ಆದರೆ ಅವನು ಒಂದು ಹುಲ್ಲು ಕಡ್ಡಿಯನ್ನು ಕೂಡಾ ಹತ್ತು ಬಾರಿ ಚೌಕಾಶಿ ಮಾಡದೆ ಕೊಂಡುಕೊಳ್ಳುವ ಜಾಯಮಾನದವನಲ್ಲ. ಆದ್ದರಿಂದ, ‘ಓ ದೇವರೇ…! ನೀವೆಂಥದು ಮಾರಾಯ್ರೇ ಒಟ್ಟಾರೆ ಒಂದು ರೇಟು ಹೇಳಿ ಬಿಡುವುದಾ…? ಛೇ! ಛೇ! ಅದು ಸಿಕ್ಕಾಪಟ್ಟೆ ಜಾಸ್ತಿಯಾಯಿತು ಬಿಡಿ. ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಆ ದೇವಸ್ಥಾನವನ್ನು ಕಟ್ಟುವುದಕ್ಕೆ ನಾವು ಕೂಡಾ ನಾಗದೇವರ ಭಕ್ತಾದಿಗಳಿಂದಲೇ ಹಣವನ್ನು ಒಟ್ಟು ಮಾಡುವವರು ಸುರೇಂದ್ರಯ್ಯ! ಅಂಥ ಪವಿತ್ರವಾದ ದುಡ್ಡನ್ನು ನಮಗೆ ಖುಷಿ ಬಂದ ಹಾಗೆ ಖರ್ಚು ಮಾಡಲಿಕ್ಕಾಗುತ್ತದಾ ಹೇಳಿ…? ನೀವು ಕೂಡಾ ಅದೇ ದೃಷ್ಟಿಯಿಂದ ಒಂದಷ್ಟು ಕಡಿಮೆ ಮಾಡಿ ಹೇಳಬೇಕು ನೋಡಿ!’ ಎಂದು ಖಡಕ್ಕಾಗಿ ಹೇಳಿದ. ಅವನ ಮಾತಿನ ವರಸೆಯನ್ನು ಕೇಳಿದ ಸುರೇಂದ್ರಯ್ಯ ಒಳಗೊಳಗೇ ಬೆಚ್ಚಿದವರು, ಛೇ, ಛೇ!…ವ್ಯಾಪಾರವೆಲ್ಲಿ ಕೈತಪ್ಪುತ್ತದೋ…? ಎಂದುಕೊಂಡು ಮತ್ತಷ್ಟು ಯೋಚಿಸುವಂತೆ ನಟಿಸಿದರು. ಕೊನೆಯಲ್ಲಿ, ‘ಆಯ್ತು ಸಾಹುಕಾರ್ರೇ, ನೀವು ಆ ನಾಗನ ಹೆಸರು ಹೇಳಿದ ಮೇಲೂ ನಾವು ನಮ್ಮ ಹಿಡಿದ ಮುಷ್ಟಿ ಬಿಚ್ಚದಿದ್ದರೆ ಅರ್ಥ ಉಂಟಾ ಹೇಳಿ? ಇಬ್ಬರಿಗೂ ಚರ್ಚೆ ಬೇಡ. ಒಂದೇ ಮಾತು, ನಾವು ಹೇಳಿದ ಮೊತ್ತದಲ್ಲಿ ಐದು ಲಕ್ಷ ಕಡಿಮೆ ಮಾಡುತ್ತೇವಷ್ಟೇ. ತೊಂಬತ್ತೈದಕ್ಕೆ ವ್ಯಾಪಾರ ಮುಗಿಸಿಬಿಡುವ ಏನಂತೀರಾ…?’ ಎಂದು ನಗುತ್ತ ಅಂದರು.    ಅಷ್ಟಕ್ಕೆ ಶಂಕರನ ಮುಖದಲ್ಲೂ ನಗು ಮೂಡಿತು. ಅಲ್ಲಿಗೆ ವ್ಯವಹಾರದ ಮಾತುಕಥೆಯೂ ಮುಗಿಯಿತು. ತಂಗವೇಲುವೂ ಖುಷಿಯಾದ. ಆದರೆ ಅವನು, ವ್ಯಾಪಾರ ಹೇಗೂ ಕುದುರಿತು. ಆದರೆ ಇನ್ನು ಇವರಿಬ್ಬರ ಕಡೆಯಿಂದ ತನಗೆಷ್ಟೆಷ್ಟು ಕಮಿಷನ್ ಸಿಗುತ್ತದೋ…? ಎಂಬ ಆತಂಕದಿಂದ ಚಡಪಡಿಸಿದ. ಅದನ್ನು ಗಮನಿಸಿದ ಸುರೇಂದ್ರಯ್ಯ, ‘ತಂಗವೇಲು, ನೀನು ಮಂಡೆಬಿಸಿ ಮಾಡಬೇಡ ಮಾರಾಯ. ನಿಮ್ಮ ಕಡೆಯಿಂದ ಹಣ ನಮಗೆ ಸಂದಾಯವಾಗುತ್ತಲೇ ನಿನ್ನ ಕಮಿಷನ್ನೂ ನಿನ್ನ ಕೈ ಸೇರುತ್ತದೆ!’ ಎಂದಾಗ ತಂಗವೇಲು ಗೆಲುವಾದವನು, ‘ಹಾಗಾದರೆ ನಿಮ್ಮದು ಯಾವಾಗ ಶಂಗರಣ್ಣಾ…?’ ಎಂಬಂತೆ ಅವನನ್ನು ದಿಟ್ಟಿಸಿದ. ಆದರೆ ಅಷ್ಟರಲ್ಲಿ ಶಂಕರ ತಟ್ಟನೆ ಅವನಿಂದ ಮುಖ ತಿರುಗಿಸಿ ಎದ್ದು ಕಾರಿನತ್ತ ಹೋದವನು ಗುರೂಜಿಯವರ ಪ್ರಸಾದವನ್ನೂ ಮತ್ತು ಒಂದು ಲಕ್ಷ ರೂಪಾಯಿಯನ್ನೂ ತಂದು, ‘ತಗೊಳ್ಳಿ ಸುರೇಂದ್ರಯ್ಯ, ಇದು ಗುರೂಜಿಯವರು ಕೊಟ್ಟ ಪ್ರಸಾದ. ಮತ್ತಿದು ಅಡ್ವಾನ್ಸು. ಉಳಿದ ಹಣವನ್ನು ಬಂಡೆ ಕಡಿದು ಮುಗಿದ ಕೂಡಲೇ ಚುಕ್ತಾ ಮಾಡುತ್ತೇವೆ. ಅದಕ್ಕೊಂದು ಅಗ್ರಿಮೆಂಟು ಕೂಡಾ ಮಾಡಿಕೊಳ್ಳುವ!’ ಎಂದು ಗತ್ತಿನಿಂದ ಅಂದವನು, ಠಸ್ಸೆ ಪೇಪರನ್ನು ಅವರ ಮುಂದಿಟ್ಟ. ಒಂದು ಲಕ್ಷವನ್ನು ನೋಡಿದ ಸುರೇಂದ್ರಯ್ಯ ತಾವು ಕಾಣುತ್ತಿರುವುದು ಕನಸೋ ನನಸೋ…? ಎಂಬ ಅನುಮಾನಕ್ಕೆ ಬಿದ್ದು ನೋಟಿನ ಕಂತೆಯನ್ನೊಮ್ಮೆ ನಯವಾಗಿ ಮುಟ್ಟಿ ನೋಡಿದವರು, ಶಂಕರನ ಪತ್ರಕ್ಕೆ ಅವನು ತೋರಿಸಿದಲ್ಲಿ ಸಹಿ ಎಳೆದು ಅವರನ್ನು ಅಭಿಮಾನದಿಂದ ಬೀಳ್ಕೊಟ್ಟರು.    ಶಂಕರನೂ ತಂಗವೇಲುವೂ ಹೊರಟು ಹೋದ ಕೂಡಲೇ ಸುರೇಂದ್ರಯ್ಯ ಹಣದ ಕಟ್ಟುಗಳನ್ನು ಮುಂದಿಟ್ಟುಕೊಂಡು ಮತ್ತೊಂದು ಯೋಚನೆಗೂ ಬಿದ್ದರು. ಬಂಡೆಗಳನ್ನು ತೆಗೆದ ಮೇಲೆ ಅವುಗಳ ಅಡಿಭಾಗವನ್ನು ರವೀಂದ್ರಯ್ಯನಿಗೋ ಅಥವಾ ಇತರ ಕ್ರಷರ್ ಮಾಲಿಕರಿಗೋ ಗುತ್ತಿಗೆ ಕೊಡಬೇಕು. ಅದರಿಂದಲೂ ಹತ್ತಾರು ವರ್ಷಗಳ ಕಾಲ ನಿರಂತರ ವರಮಾನ ಬರುತ್ತಿರುತ್ತದೆ. ಹಾಗಾಗಿ ಸಾಯುವವರೆಗೆ ಬೇಸಾಯ ಮಾಡುತ್ತ ನರಳುವುದು ತಪ್ಪುತ್ತದೆ! ಎಂದುಕೊಂಡು ನೆಮ್ಮದಿಯ ಉಸಿರು ಬಿಟ್ಟರು. ಮರುಕ್ಷಣ ರಪ್ಪನೆ ಅವರನ್ನು ತಮ್ಮ ಹಿರಿಯರ ನೆನಪುಗಳು ಮುತ್ತಿಕೊಂಡು ದುಃಖಕ್ಕೆ ತಳ್ಳಿದವು. ಛೇ, ಛೇ! ನಮ್ಮ ಹಿರಿಯರು ಎಷ್ಟೊಂದು ಒಳ್ಳೆಯವರು. ಆದರೆ ನಾವು ಮಾತ್ರ ಆ ಹಾಳು ಬಂಡೆಯಿರುವ ಪಾಳು ಭೂಮಿಯನ್ನೇ ತಮ್ಮ ಮಕ್ಕಳಿಗೆ ದೊಡ್ಡ ಆಸ್ತಿಯೆಂದು ಬಿಟ್ಟು ಹೋಗಿ ಅನ್ಯಾಯ ಮಾಡಿದರು ಅಂತ ಆ ಬಂಡೆಗಳನ್ನು ನೋಡಿದಾಗಲೆಲ್ಲಾ ಅವರ ಮೇಲೆ ಕೆಂಡ ಕಾರುತ್ತಿದ್ದೆವು! ಅಷ್ಟಲ್ಲದೇ ಅವರು ಜೀವಂತವಿದ್ದಾಗಲೂ ಅದೆಷ್ಟೋ ಬಾರಿ ಅದೇ ವಿಷಯವಾಗಿ ಅವರನ್ನು ಹೀಯಾಳಿಸುತ್ತ ಬೈದಿದ್ದೆವಲ್ಲ!  ಈಗ ನೋಡಿದರೆ ನಮ್ಮ ಮೇಲೆ ನಮಗೇ ನಾಚಿಕೆಯಾಗುತ್ತದೆ. ಥೂ! ಆ ಪುಣ್ಯಾತ್ಮರು ಎಂಥ ಚಿನ್ನದ ಗಣಿಯನ್ನು ತಮ್ಮ ಮಕ್ಕಳಿಗೆ ಬಿಟ್ಟು ಹೋಗಿದ್ದಾರೆ. ಅಂಥವರಿಗೆ ತಾವು ಅವಮಾನ ಮಾಡಿದ್ದು ದೊಡ್ಡ ತಪ್ಪಾಯಿತು ಅಂತ ಈಗ ಅನ್ನಿಸುತ್ತಿದೆ. ಆದ್ದರಿಂದ ಅದರ ಪ್ರಾಯಃಶ್ಚಿತ್ತಕ್ಕಾದರೂ ಆ ಬಂಡೆ ಮಾರಿದ ಹಣದಿಂದ ಅಪ್ಪನಿಗೂ, ಅಜ್ಜನಿಗೂ ಒಂದೊಂದು ಚಂದದ ಗುಂಡ ಕಟ್ಟಿಸಿ ಅದಕ್ಕೆ ದಿನಾ ದೀಪವಿಟ್ಟು ನಮಸ್ಕರಿಸುವ ಕ್ರಮವನ್ನು ಇನ್ನಾದರೂ ಆರಂಭಿಸಿಬೇಕು! ಎಂದುಕೊಂಡು ತಮ್ಮ ಹಿರಿಯರ ಆತ್ಮಗಳಿಗೆ ಭಕ್ತಿಯಿಂದ ಕೈಮುಗಿದು ನೋಟಿನ ಕಂತೆಯನ್ನೆತ್ತಿಕೊಂಡು ಹೋಗಿ ಬೀರುವಿನಲ್ಲಿಟ್ಟರು.  
(ಮುಂದುವರೆಯುವುದು)    
—————————————————————————
                                                                        

ಗುರುರಾಜ್ ಸನಿಲ್

ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ

Leave a Reply

Back To Top