ಪುಸ್ತಕ ಸಂಗಾತಿ
ಪಿಸುಗುಡುವ ಹಕ್ಕಿ
ಪುಸ್ತಕದ ಹೆಸರು : ಪಿಸುಗುಡುವ ಹಕ್ಕಿ
ಕೃತಿಕಾರರು : ಸರಸ್ವತಿ ಕೆ, ನಾಗರಾಜ್
ಪ್ರಕಾಶಕರು : ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.
ಪ್ರಕಟಣೆ : ಡಿಸೆಂಬರ್ ೨೦೨೧.
ಪುಟಗಳು: ೭೨, ಬೆಲೆ : ೯೦/-
ಪುಸ್ತಕಕ್ಕಾಗಿ ಸಂಪರ್ಕಿಸಿ : ೯೭೪೧೫೬೬೩೧೩
ಶ್ರೀಮತಿ ಸರಸ್ವತಿ ನಾಗರಾಜ್, ಹಿರಿಯೂರು ಇವರ ಮೊದಲ ಕವನ ಸಂಕಲನ ʼಪಿಸುಗುಡುವ ಹಕ್ಕಿʼ ಬಿಡುಗಡೆಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದೆ. ಈ ಕೃತಿಯಲ್ಲಿ ೨-೩ ಚುಟುಕು ರೂಪದ ಬರಹಗಳೂ ಸೇರಿದಂತೆ ಒಟ್ಟು ೫೯ ಕವನಗಳು ಇವೆ. ಕೃತಿಗೆ ಇವರು ಕೊಟ್ಟಿರುವ ಶೀರ್ಷಿಕೆ ʼಪಿಸುಗುಡುವ ಹಕ್ಕಿʼ ಹಾಡುವ ಕೋಗಿಲೆ, ಕುಣಿಯುವ ನವಿಲು ಇತ್ಯಾದಿಗಳ ಬದಲು ಸುಮ್ಮನೆ, ತಣ್ಣಗೆ ಯಾರ ಕಣ್ಣಿಗೂ ಬೀಳದೆ, ತನ್ನ ಪಾಡಿಗೆ ತಾನಿರುವ ಒಂದು ಗುಬಚ್ಚಿ ಅಷ್ಟೇ ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸಿ, ಪರಿಶೀಲಿಸಿ, ಅನುಭವಿಸಿಸ್ತಾ ಇರುತ್ತೆ. ಇದೇ ರೀತಿ ಇಲ್ಲಿನ ಕವಿತೆಗಳನ್ನ ರಚಿಸಿರುವೆ ಎಂಬ ಒಳದನಿ ಈ ಶೀರ್ಷಿಕೆಯಲ್ಲಿ ಅಡಿಗಿರುವುದನ್ನ ಓದುಗರು ಗಮನಿಸಬಹುದು.
ಪ್ರತಿ ಕವಿತೆಯ ಸಂಧರ್ಭದಲ್ಲಿಯೂ ಕವಯತ್ರಿ ಅಲ್ಲಿ ನಿಂತು ಆ ಕ್ಷಣದ ಆನಂದವನ್ನ/ದುಖಃವನ್ನ ದಕ್ಕಿಸಿಕೊಂಡು, ಅರಿತು, ಅನುಭವಿಸಿ, ಜೀವಿಸಿ ಒಂದೊಂದು ಪದವನ್ನ ಪೋಣಿಸಿ ಗುಬಚ್ಚಿಯ ಹಾಗೆ ಕವಿತೆಗಳನ್ನ ಕಟ್ಟಿದ್ದಾರೆ. ಮತ್ತು ಈ ಎಲ್ಲಾ ಕವಿತೆಗಳಲ್ಲೂ ಒಂದು ನಿವೇದನೆ, ಸಂವೇದನೆ, ಬಿಡುಗಡೆ, ಅಥವಾ ಬಿಡುಗಡೆ ಪಡೆಯುವ ಕಾತರ, ಮತ್ತು ದಟ್ಟವಾದ ಜೀವನಾನುಭವ, ಮತ್ತು ಇವರ ಭೋಧನಾನುಭವ ಸಹಾ ಕೆಲವು ಪದ್ಯಗಳಲ್ಲಿದೆ.
ಇಲ್ಲಿನ ಕವಿತೆಗಳಲ್ಲಿರುವ ಸಂವೇದನೆ ಬಹಳ ವಿಶಿಷ್ಟವಾದದ್ದು, ಈ ಸಂವೇದನೆ ಪಾಂಡಿತ್ಯಕ್ಕೆ ದಕ್ಕುವುದಲ್ಲ. ಇಲ್ಲಿರುವುದು ಅನುಭವ, ದಕ್ಕಿಸಿಕೊಂಡ ಅನುಭವ. ಇಂಥಹಾ ಅನುಭವದ ಮೂಲಕ ಬಂದ ಸಂವೇದನೆ ಇಲ್ಲಿನ ಕೆಲವು ಕವಿತೆಗಳಲ್ಲಿ ತುಂಬಿದೆ. ಇದು ಪಾಂಡಿತ್ಯದ ನಿರಾಕರಣೆ ಅಲ್ಲ. ಪಾಂಡಿತ್ಯ ಸೇರಿದರೆ ಈ ಅನುಭವ ಅಥವಾ ಸಂವೇದನೆ ಮತ್ತಷ್ಟು ಸಂಸ್ಕರಣಗೊಳ್ಳಲು ಸಾಧ್ಯ ಎಂಬುದನ್ನು ಸಹಾ ಗಮನಿಸಲೇ ಬೇಕು.
ಕೃತಿಯ ಕೆಲವು ಕವಿತೆಗಳು ಮತ್ತು ಅವುಗಳ ಕವಿತಾ ವಿಶೇಷತೆಗಳನ್ನು ಗಮನಿಸುವುದಾದರೆ, ʼಪಿಸುಗುಡುವ ಹಕ್ಕಿʼ ಹೆಸರಿನ ಕವಿತೆಯಲ್ಲಿ
ಮನೆ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮುಗಿಲ ಹಾಗೆ
ಎನ್ನುವ ಪ್ರಾರಂಭದ ಸಾಲುಗಳು ಬಹಳಾ ಆಕರ್ಷಕ ಎನಿಸುತ್ತೆ. ಕುವೆಂಪುರವರ ʼಅನಿಕೇತನʼ ಕವಿತೆಯನ್ನು ಇದು ನೆನಪಿಸುತ್ತೆ. ಇಲ್ಲಿನ ಕವಯತ್ರಿ ಕುವೆಂಪುರವರ ಹಾಗೆ ಚೇತನ ಸ್ವರೂಪದಲ್ಲಿ ನಿಂತು ಮಾತಾಡುವುದಿಲ್ಲ. ಆಕೆಗೆ ಮನೆಯೊಂದು ಬೇಕು. ಆದರೆ ಅದು ಎಂತ ಮನೆ ಆಗಿರಬೇಕು ಅಂತ ಪ್ರಶ್ನಿಸಿದರೆ ಅದಕ್ಕೆ ಈ ಕವಿತೆಯ ಮೂಲಕ
ತಂಪಾದ ಗಾಳಿ ಮನೆಯ ತೂಗಿ
ಹಸಿರಾದ ಗರಿಕೆ ತುಸು ಬೆಚ್ಚಗಿರಿಸಿ
ಗುಟುಕುಗಳೇ ಆಸ್ತಿ ಉಳಿದೆಲ್ಲ ನಾಸ್ತಿ
ಜೋಕಾಲಿ ಜೀಕಲಿ ಜೋಗುಳದ ದೋಸ್ತಿ
ಮನೆ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮುಗುಲ ಹಾಗೆ.
ಒಂದು ಪಿಸುಗುಡುವ ಹಕ್ಕಿ ನನ್ನ ಮನೆಯನ್ನು ನೋಡಿ ನೀವು ಇಂತಹಾ ಮನೆಯನ್ನ ಮಾಡಿಕೊಂಡರೆ ಸಾಕು ಎಂದು ಹೇಳುವ ರೂಪದಲ್ಲಿ ಕವಯತ್ರಿ ಈ ಕವಿತೆಯನ್ನ ರಚಿಸಿದ್ದಾರೆ.
ʼಎದೆಯಾಳದಿಂದʼ ಎಂಬ ಕವಿತೆಯಲ್ಲಿ ಕವಯತ್ರಿಯ ಪ್ರೀತಿಯ ಸಂಗಾತಿಯ ಹಾಗೂ ಅವರ ನಡುವಿನ ಪ್ರೀತಿಯ ಸ್ವರೂಪವನ್ನು ಬಹಳಾ ಸರಳವಾಗಿ ವಿವರಿಸುವರು. ನಗು, ನೋವು ಮರೆಸುವ ಗುಣ, ಸಹನೆ, ಸಹಿಸುವ ಗುಣ, ಕಲ್ಮಷವಿಲ್ಲದ ಪ್ರೀತಿ, ಇಷ್ಟೇ ಸಾಕು ಒಂದು ಪ್ರೀತಿ ಆದರ್ಶ ಅನಿಸಿಕೊಳ್ಳಲು. ಮತ್ತು ಸಹಜತೆಯೇ ಈ ಕವಿತೆಯ ಸೌಂದರ್ಯ. ಭಕ್ತಿ ಆಗಲಿ ಪ್ರೀತಿ ಆಗಲಿ. ಸಹಜತೆ ಮುಖ್ಯ. ಮತ್ತು ಅತಿ ಆಸೆ ಇಲ್ಲದಿರುವಿಕೆ ಮುಖ್ಯ. ಇಲ್ಲಿ ತಾಜ್ ಮಹಲ್ ಕಟ್ಟಿಸು ಅಂತಾಗಲೀ, ಚಂದ್ರನ್ನ ತಂದು ಕೈಗೆ ಕೊಡು ಅಂತಾಗಲಿ ಕೇಳುವುದು, ಹೇಳುವುದು ಇಲ್ಲ. ವಾಸ್ತವದ ಅರಿವಿನಲ್ಲಿ ಪ್ರೀತಿಯನ್ನ ವಿವರಿಸುವ ಕೆಲಸವಿದೆ, ಅದರಲ್ಲಿಯೂ ಸಹಜವಾದ ಪ್ರೀತಿಯನ್ನು ವಿವರಿಸುವಿಕೆ ಇದೆ. ಒಮ್ಮೊಮ್ಮ ನಗಿಸುತ್ತ, ಒಮ್ಮೊಮ್ಮೆ ಅಳಿಸುತ್ತಾ…. ಎರಡೂ ಕಡೆ ಪ್ರೀತಿ ಹೇಗೆ ಕೆಲಸ ಮಾಡುತ್ತೆ ಅನ್ನುವುದನ್ನ ಈ ಕವಿತೆ ವಿವರಿಸುತ್ತೆ.
ʼನಮ್ಮ ಜನುಮದ ಬಹುದೊಡ್ಡ ಉಡುಗೊರೆʼ ಎಂಬ ಕವನದಲ್ಲಿ ನಮ್ಮ ಜೀವನಕ್ಕೆ ಬೇಕಾದ ನಿಜವಾದ ಕೊಡುಗೆ ಯಾವುದು ಎಂಬುದನ್ನು ವಿವರಿಸುತ್ತಾ..
ಸ್ಪಂದಿಸುವ ಮನಸ್ಸು, ಕಣ್ಣೀರೊರೆಸುವ ಕೈ
ಕಷ್ಟದಲ್ಲಿ ಬರುವ ಸ್ನೇಹಿತ, ಸೋತಾಗ ತುಂಬುವ ದೈರ್ಯ
ಬಿದ್ದಾಗ ಎಬ್ಬಿಸುವ ಕೈ, ನೊಂದಾಗ ಜೊತೆಗಿರುವ ಆಸರೆ
ಇವೆಲ್ಲವೂ ಇದ್ದರೆ ಅದುವೇ ನಮ್ಮ ಜನುಮದ
ಬಹುದೊಡ್ಡ ಉಡುಗೊರೆ. ಎಂದು ಕವಯತ್ರಿ ಅಭಿಪ್ರಾಯ ಪಡುವರು. ತೆಲುಗಿನ ಪ್ರಸಿದ್ಧ ಕೀರ್ತನಕಾರ ಅನ್ನಮಯ್ಯನವರ ʼಇದಿಗಾಕ ಸೌಭ್ಯಾಗ್ಯಮಿದಿಗಾಕತಪಮೋʼ ಎಂದು ಶ್ರೀವೆಂಕಟೇಶ್ವರನ ದರ್ಶನವೇ ತನ್ನ ಜೀವನದ ಸೌಭ್ಯಾಗ್ಯವೆಂದು ಹೇಳುವಂತೆ ಕವಯತ್ರಿ ವಸ್ತು, ಪದಾರ್ಥಗಳ ಹಿಂದೆ ಓಡುತ್ತಿರುವ ಇಂದಿನ ಮೆಟಿರಿಯಲಿಸ್ಟಿಕ್ ಜಗತ್ತಿನಲ್ಲಿ ಎಲ್ಲಾ ಮನುಜರ ಪರನಿಂತು ನಿಜವಾಗಿ ಜೀವನಕ್ಕೆ, ಜೀವನದ ಆನಂದಕ್ಕೆ ಬೇಕಾಗಿರುವ ವಸ್ತುಗಳೇನು ಎಂಬುದನ್ನು ಕಂಡುಕೊಂಡು ಕಣ್ತೆರೆಸುವಲ್ಲಿ ಈ ಕವಿತೆಯ ಯಶಸ್ಸು ಅಡಗಿದೆ.
ʼಸೋತಿರುವೆವು ಪ್ರಕೃತಿಯ ಎದುರುʼ ಎಂಬ ಒಂದು ಕವಿತೆಯಲ್ಲಿ.
ಬದಲಾಗಿ ಬಿಡು ಒಮ್ಮೆ
….. ಕ್ಷಮೆ ಕೇಳಿಬಿಡು ಪ್ರಕೃತಿಗೆ
ತಪ್ಪಾಯಿತೆಂದು
ಈ ಸಾಲುಗಳನ್ನು ಗಮನಿಸಬೇಕು. ಇಲ್ಲಿ ೨ಮುಖ್ಯ ವಿಷಯಗಳ ಚರ್ಚೆ ಇದೆ, ಒಂದು ಕ್ಷಮಾಪಣೆ, ಮತ್ತೊಂದು ನಮ್ಮಿಂದಲೇ ಆಗಲಿ ಬದಲಾವಣೆ ಅನ್ನುವಂತಹದ್ದು. ಮಾನಸಿಕ ವಿಜ್ಞಾನ ಮತ್ತು ಆಧ್ಯಾತ್ಮಿಕ ವಿಜ್ಞಾನ ಎರಡು ಸಹಾ ಕ್ಷಮಾಯಾಚನೆ (ಫರ್ಗೀವ್ ನೆಸ್)ಬಗ್ಗೆ ಮಾತಾಡುತ್ತೆ. ನಾವು ಮಾಡಿದ ತಪ್ಪುಗಳು ನಮ್ಮ (ನಿಮ್ಮ ತಪ್ಪುಗಳನ್ನು ದೇವರು ಕ್ಷಮಿಸಿದರೂ ಸಹಾ ನಿಮ್ಮ ನರಮಂಡಲ ಕ್ಷಮಿಸಲಾರದು- ಆಲ್ಪರ್ಡ್ ಕೊರ್ರ್ಬಿಸ್ಕಿ)ನ್ನ ಮುಂದೆ ಕಾಡ್ತಾವೆ ಅಂತ. ಹೀಗಾಗಿ ನಾವು ಕ್ಷಮೆ ಕೇಳುವುದು ಬಹಳಾ ಮುಖ್ಯ ಇಲ್ಲಿ ಕವಿ ಪ್ರಕೃತಿಯ ವಿಷಯದಲ್ಲಿ ನಾವು ಮಾಡಿದ ತಪ್ಪಿಗಾಗಿ ಕ್ಷಮೆ ಕೇಳಬೇಕು ಅಂತಾರೆ ಇದರಿಂದ ನಾವು ಬಿಡುಗಡೆಯನ್ನ ಪಡೆಯಬಹುದು. ಕ್ಷಮೆ ಕೇಳುವುದು ಅಂದರೆ ನಾವು ಮಾಡಿದ ತಪ್ಪನ್ನ ಸಂಪೂರ್ಣವಾಗಿ ಒಪ್ಪಿಕೊಳ್ಳುವುದು. ಮತ್ತೆ ಮುಂದೆ ಎಂದೂ ಸಹಾ ಅಂತ ತಪ್ಪನ್ನು ಮಾಡಬಾರದು ಅಂತ ಸಂಕಲ್ಪ ಮಾಡುವುದು. ಮುಂದೆ ಮತ್ತೊಂದು ಪದ್ಯದಲ್ಲಿ ಕ್ಷಮಿಸುವ ಗುಣದ ಬಗ್ಗೆ ಮಾತಾಡುತ್ತಾರೆ. ಮತ್ತೊಂದು ಕಡೆ ʼಕ್ಷಮಿಸಿಬಿಡೊಮ್ಮʼ ಕವಿತೆಯಲ್ಲಿ
ಕ್ಷಮಿಸಿಬಿಡು ಮನವೇ, ನಿನ್ನಲ್ಲಿ ಸ್ವಾರ್ಥವಿಲ್ಲದಿದ್ದರೆ
ನಿಸ್ವಾರ್ಥ ಪ್ರೀತಿ ಮತ್ತೆ ಸಿಗುವ
ನಂಬಿಕೆ ಇದ್ದರೆ
ಕ್ಷಮಿಸಿಬಿಡ್ಡೊಮ್ಮೆ.
ಕ್ಷಮಿಸುವುದು ಕಷ್ಟ, ಆದರೂ ಕ್ಷಮಿಸಿ. ಯಕೆಂದರೆ ನೀನು ನಿಸ್ವಾರ್ಥಿ ಆಗಿರುವುದರಿಂದ ಮತ್ತು ಇಂತಹಾ ಪ್ರೀತಿ ಮತ್ತೆ ನಿನಗೆ ಸಿಗುವುದು ಎಂಬ ಹೊಸ ಭರವಸೆ ಇಂದ. ಈ ಕ್ಷಮಿಸುವಿಕೆ ಬಹಳ ಮುಖ್ಯವಾದದ್ದು. ನಮ್ಮನ್ನ ನಾವು ಸರಳಗೊಳಿಸಿಕೊಳ್ಳುವುದಕ್ಕೆ ನಿರಾಳಗೊಳಿಸಿಕೊಂಡು ಹಗುರಾಗುವುದಕ್ಕೆ. ಕವಿ ಕ್ಷಮೆ ಕೇಳುವಷ್ಟಕ್ಕೆ ನಿಲ್ಲದೇ ಮುಂದೆ ನಾನು ಒಬ್ಬ ಸರಿ ಆದರೆ ಪ್ರಪಂಚ ಎಲ್ಲಾ ಸರಿ ಆಗುತ್ತಾ ಅನ್ನುವ ಉದ್ಧಟ ತನದ ಪ್ರಶ್ನೆಯನ್ನು ಉದ್ದೇಶಿಸಿ ಹೇಳ್ತಾರೆ, ನಿನ್ನನ್ನು ನೀನು ಸರಿ ಪಡಿಸಿಕೊಂಡರೆ ಜಗತ್ತಿನಲ್ಲಿ ಒಬ್ಬ ಮೂರ್ಖ ಕಡಿಮೆಯಾದಂತೆ ಎಂದು. ಇದು ನಮ್ಮಿಂದಲೇ ಆಗಲಿ ಬದಲಾವಣೆ ಅನ್ನುವುದನ್ನ ಸ್ಪಷ್ಟವಾಗಿ ದ್ವನಿಸುತ್ತೆ.
ಕೃತಿಯಲ್ಲಿ ಗಮನಿಸಬಹುದಾದ ಮತ್ತೊಂದು ಮುಖ್ಯವಾದ ಕವಿತೆ ʼನನ್ನಪ್ಪʼ ಇಲ್ಲಿ,
ಏನೆಂದು ಬರೆಯಲಿ,
ಹೇಗೆಂದು ಹೇಳಲಿ ಅಪ್ಪ ನಿನ್ನ ಪ್ರೀತಿ ಎಷ್ಟು …..
ನನ್ನ ಬರಹಕ್ಕು ಸಿಗುತ್ತಿಲ್ಲಪ್ಪ ನಿನ್ನ ಪ್ರೀತಿ ಎಷ್ಟು….
ತಂದೆಯ ಪ್ರೀತಿಯನ್ನ ಮಕ್ಕಳು ಅರಿಯದ ಒಂದು ಚಿತ್ರಣ ಇಲ್ಲಿದೆ. ಎಷ್ಟೊಂದು ಪ್ರೀತಿ ಅಪ್ಪ ನಿನ್ನದು ಅಂತ ಆಶ್ಚರ್ಯದಿಂದ, ಪ್ರಶ್ನಾತ್ಮಕವಾಗಿ ಕೇಳುವುದು, ಆ ಪ್ರೀತಿಯನ್ನ ಅಳೆಯಲಾಗದ ಸ್ಥಿತಿ ಮತ್ತು ಅದನ್ನು ಗುರುತಿಸಿಕೊಳ್ಳಲಾರದೇ ಹೋದೆನಲ್ಲ ಅನ್ನುವ ಒಂದು ಪಶ್ಚಾತ್ತಾಪದ ಭಾವನೆ. ʼಎಷ್ಟುʼ ಅನ್ನುವ ಪದದ ಪ್ರಯೋಗ ಅಪ್ಪನ ಪ್ರೀತಿಯ ಅಗಾಧತೆಯನ್ನ ಸೂಚಿಸುತ್ತೆ. ಅದನ್ನ ಏನಂತ ಹೇಗೆ, ಹೇಳಲಿ ? ನನ್ನ ಕೈಯಲ್ಲಿ ಹೇಳುವುದಕ್ಕೆ ಆಗ್ತಾ ಇಲ್ಲ ಅಂತ ಕವಿ ಸೋಲನ್ನು ಒಪ್ಪಿಕೊಳ್ಳುವುದು ಇಲ್ಲಿದೆ. ಹೀಗೆ ಕವಿ ಸೋತರು ಸಹಾ ಕಾವ್ಯ ಮತ್ತು ಕಾವ್ಯದ ಸಂವೇದನೆ ಗೆದ್ದು ಬೀಗುವುದನ್ನು ನಾವಿಲ್ಲಿ ಗಮನಿಸಬಹುದು. ಇದೇ ನಿಜವಾದ ಕವಿತಾ ಶಕ್ತಿ.
ಮತ್ತೊಂದು ಪದ್ಯದಲ್ಲಿ ಎಲ್ಲವನು ನಗುನಗುತ್ತಲೇ ಸ್ವೀಕರಿಸಬೇಕು ಎಂದು ಹೇಳುತ್ತಾ ನಗುನಗುತ್ತಾ ತಾನು ಅನುಭವಿಸುವ ಸ್ವಯಂ ನಿರಾಳತೆಯನ್ನು ಕವಯತ್ರಿ ಕಟ್ಟಿಕೊಟ್ಟಿದ್ದಾರೆ.
ನಗುವುದನ್ನು ಕಲಿಯೋಣ
ಯಾರಿಗಾಗಿಯೂ ಬೇಡ
ಯಾವುದಕ್ಕಾಗಿಯೂ ಬೇಡ
ನಮ್ಮ ಮನಶಾಂತಿಗಾಗಿ//
ನಮ್ಮ ನೋವನ್ನು ಮೆಯುವುದಕ್ಕಾಗಿ//
ಇಲ್ಲಿ ಕವಿಗೆ ದುಃಖ ಇದೆ. ಅದನ್ನ ಮರೆಯುವುದಕ್ಕೆ ನಗುವುದನ್ನ ಕಲಿಯಬೇಕು ಅಂತ ಬಯಸುತ್ತಾರೆ.
ʼಕೊನೆಗೂ ಗೊತ್ತಾಗಲೇ ಇಲ್ಲʼ ಎಂಬ ಒಂದು ಕವಿತೆಯಲ್ಲಿ ಒಬ್ಬ ಸ್ತ್ರೀಯ ಬದುಕು ಹೇಗೆ ತನಗೇ ಗೊತ್ತಾಗದೇ ಕಳೆದುಹೋಗುತ್ತೆ ಅನ್ನುವುದನ್ನ ಒಂದು ಕಥಾನಕದ ರೂಪದಲ್ಲಿ ವಿವರಿಸಿದ್ದಾರೆ. ಅಂದರೆ ಒಬ್ಬ ಮನುಷ್ಯನ ಜೀವನದಲ್ಲಿ ಏನೆಲ್ಲಾ ನಡೆದು ಹೋಗ್ತಾ ಇರುತ್ತೆ ಆದರೆ ಅದು ನಮಗೆ ಗೊತ್ತಾಗುವುದೇ ಇಲ್ಲ. ಮದುವೆ, ಮಕ್ಕಳು ಬೆಳೆಯುವುದು, ಮನೆ, ಕಾರು, ಬಿಳಿ ಕೂದಲು, ನಿವೃತ್ತಿ, ಮಕ್ಕಳ ದೂರಾಗುವಿಕೆ, ನಿದ್ರೆ ಇಲ್ಲದ ರಾತ್ರಿಗಳು, ಕಡೆಗೆ ನನಗಾಗಿ, ನನ್ನದು ಏನು ಇಲ್ಲ ಅಂತ ಅರಿಯುವ ಹೊತ್ತಿಗೆಲ್ಲ ಜೀವನ ಮುಗಿಯುತ್ತಾ ಬಂದಿರುತ್ತೆ. ಇದನ್ನ ಬಹಳಾ ಚೆನ್ನಾಗಿ ಈ ಕವಿತೆ ಅಭಿವ್ಯಕ್ತಿ ಪಡಿಸುತ್ತೆ.
ʼನಿದ್ರೆಯೇ ಬಂದುಬಿಡುʼ ಅನ್ನುವ ಒಂದು ಕವಿತೆ. ನಿದ್ರೆ ಬರದಿದ್ದಾಗ ಆಕೆಯನ್ನು ಕಾಡುವ ಹಳೆ ನೆನಪುಗಳಿಂದ, ಆ ದಿನ ಆಯಾಸದಿಂದ ತಪ್ಪಿಸಿಕೊಳ್ಳಲು ನಿದ್ರೆಯನ್ನು ಆಹ್ವಾನಿಸುವ ಒಂದು ಪ್ರಯತ್ನ. ನಿದ್ರೆಯ ಮೂಲಕ ಇವುಗಳಿಂದ ಬಿಡುಗಡೆ ಪಡೆಯಬಹುದು ಎಂಬ ಆಲೋಚನೆ. ʼನಾನು ರಾತ್ರಿಗಳನ್ನು ಮಾತ್ರ ಪ್ರೀತಿಸುತ್ತೇನೆʼ ಎಂಬ ಶೀರ್ಷಿಕೆಯ ಶಶಿಕಲಾ ವೀರಯ್ಯಸ್ವಾಮಿ ಅವರ ಕವಿತೆಯೊಂದನ್ನ ಇದು ನೆನಪಿಸುತ್ತೆ.
ತಮ್ಮ ತಂದೆ ತಾಯಿಯರನ್ನ ಕುರಿತಾಗಿ ʼನೀವಿಲ್ಲದೇ ಏನಿದೆʼಎಂಬ ಒಂದು ಸರಳ ಸುಂದರ ಕವಿತೆ ಈ ಕೃತಿಯಲ್ಲಿದೆ.
ಅಪ್ಪ ಅಂದರೆ ಆಕಾಶ
ಅಮ್ಮ ಅಂದರೆ ಭೂಮಿ
ಜನುಮ ನೀಡಿ ಜೀವ ತುಂಬಿ
ಕಳುಹಿಸಿದ ನಿಮಗೆ
ಇಲ್ಲಿಗೆ ಕವನಗಳು ಮುಗಿಯುವುದು ಬಹಳ ಅರ್ಥ ಪೂರ್ಣ. ಅದು ಮುಗಿಯುವಿಕೆ ಅಲ್ಲ ಒಂದು ದೀರ್ಘವಾದ ಮೌನ. ಈ ಮೌನಕ್ಕೆ ಸಾವಿರಾರು ಅರ್ಥಗಳು.
ಇವಲ್ಲದೇ, ಸ್ವಾರ್ಥಿಯಾಗದಿರು ನೀನೆಂದು, ಪರಿವರ್ತನೆ, ಸ್ಪಂದಿಸುವವರಾರು, ದೇವರ ಆಟ, ಹಳ್ಳಿಯ ಸೊಗಡು, ಪಂಜರದ ಬದುಕು, ಹಣತೆ, ಕಣ್ಣಿದ್ದು ಕುರುಡರೇ, ಮುತ್ತು ಮಣಿಗಳು, ಮುಂತಾದ ವಿಚಾರಪೂರ್ಣ ಕವಿತೆಗಳನ್ನು ಈ ಕೃತಿ ಒಳಗೊಂಡಿದೆ.
ಇಲ್ಲಿನ ಸಾಕಷ್ಟು ಕವಿತೆಗಳಲ್ಲಿ ಒಂದು ರೀತಿಯ ಸಹಜ ಸ್ಪೂರ್ತಿಯ, ಸ್ತ್ರೀ ಸಹಜ ಅನುಭಾವ, ಯಾವುದೇ ಘೋಷಣೆಗಳು, ಪ್ರತಿರೋಧ, ವಿರೋಧ, ದ್ವೇಷ ಇಲ್ಲದೆ ತಣ್ಣಗೆ ಎಲ್ಲದಕ್ಕೂ ಪ್ರತಿಕ್ರಿಯಿಸುವಿಕೆ ಇದೆ. ದೊಡ್ಡ ದ್ವನಿಗೆ ಬದಲಾಗಿ ಸಣ್ಣ, ತಣ್ಣನೆಯ ಬಂಡಾಯ ಇದೆ. ಕಲ್ಪನೆ ಇದೆ, ಆ ಕಲ್ಪನೆ ವಾಸ್ತವಿಕ ನೆಲೆಯದ್ದು. ಕವಿಯ ಸುಪ್ತ ಚೇತನಕ್ಕೆ ವಾಸ್ತವದ, ವಿಚಾರವಾದಿಯ ವೈರಾಗ್ಯದ ಅರಿವು ಇದ್ದಂತೆ ತೋರುತ್ತದೆ.
ಸಮಕಾಲೀನ ವಿಚಾರಗಳ ಸಮಸ್ಯೆಗಳ ಗೈರು ಹಾಜರಿ ಈ ಕೃತಿಯಲ್ಲಿ ಎದ್ದು ಕಾಣುವುದಾದರೂ ಸಹಾ ಸಮಕಾಲೀನ ಸಂಗತಿ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸದೇ ಇರಬೇಕು ಎಂಬ ಉದ್ದೇಶದಿಂದಲೇ ಕವಿಯತ್ರಿ ಈ ವಿಚಾರಗಳ ಕುರಿತು ಮೌನ ವಹಿಸಿದಹಾಗೆ ತೋರುತ್ತೆ. ಒಂದು ಲೆಕ್ಕದಲ್ಲಿ ಇದು ಸಹಾ ಒಂದು ಬಂಡಾಯವೇ. ಯಾವುದೇ ರೀತಿಯ ರಾಜಕೀಯ, ಸಿದ್ಧಾಂತ ಇಲ್ಲಿ ನಮಗೆ ಕಾಣುವುದಿಲ್ಲ. ರಾಜಕೀಯ ಇಲ್ಲ ಅನ್ನುವುದಕ್ಕಿಂತ ಇಲ್ಲೊಂದು ಪ್ರೀತಿಯ ರಾಜಕಾರಣ ಇದೆ ಅಂತ ಹೇಳಬಹುದು. ಈ ಪ್ರೀತಿ ಇದ್ದಾಗ ಮಾತ್ರ ಯಾರನ್ನು ದ್ವೇಷಿಸದೇ, ಯಾರನ್ನೂ ದೂಷಿಸದೇ ಮತ್ತು ಅತಿರಂಜನೆ ಇಲ್ಲದೆ ಕಾವ್ಯರಚನೆ ಮಾಡುವುದು ಸಾಧ್ಯ.
ಕವಿಗೆ ತಾನು ಏನು ಹೇಳಹೊರಟಿರುವೆ, ಏನು ಹೇಳಬೇಕು ಅನ್ನುವ ಖಚಿತತೆ ಇದೆ. ಮತ್ತು ಇಲ್ಲಿ ಪಂಡಿತರನ್ನು ಮೆಚ್ಚಿಸುವ ಯಾವುದೇ ಹಠ ಇಲ್ಲ. ಪ್ರಾಸದ ಹುಚ್ಚು ಇಲ್ಲ. ಪದಗಳ ವ್ಯಾಪಾರ ಅಥವಾ ಪಾಂಡಿತ್ಯದ ಪರ್ದರ್ಶನವಿಲ್ಲ. ಏನು ಹೇಳಬೇಕಿದೆ ಅಷ್ಟೇ. ಒಂದು ಸುಪ್ತ ಜಾಗೃತಿ, ಮಾತಿಗೆ ಮೀರಿದ ಅನುಭವ, ಸಹಜ ಅರಿವು, ವಾಸ್ತವಿಕತೆ, ತನ್ನನ್ನು ನಿರೂಪಿಸಿಕೊಳ್ಳುವ ಹಠ ಇಲ್ಲದ ಸರಳವಾದ ನಿರೂಪಣೆ, ಒಳ್ಳೆಯ ಸಂವೇದನೆ, ಸಮಾನತೆಯ ಚಿಂತನೆ, ಬಹುಮುಖಿ ಆಲೋಚನಾ ದೇಷ್ಠಿಕೋನ ಕವಿಯಲ್ಲಿದ್ದು ಇದು ಸ್ಪಷ್ಟವಾಗಿ ಕೃತಿಯಲ್ಲಿ ಪ್ರತಿಲಿತವಾಗಿದೆ. ಕವಿತೆ ಯಾವಾಗಲೂ ಕವಿಯನ್ನ ಬಿಡುಗಡೆಗೊಳಿಸುತ್ತೆ. ಅಂತಹಾ ಬಿಡುಗಡೆ ಕಾತರಿಸುವ ಕೃತಿ ಇದು. ಇಂತಹಾ ಕೃತಿರತ್ನವನ್ನು ಅರ್ಪಿಸಿದ ಕವಯತ್ರಿ ಸರಸ್ವತಿ ಕೆ. ನಾಗರಾಜ್ ಇವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ….. ಸಹೃದಯರು ಈ ಕೃತಿ ಕೊಂಡು ಓದಿ ಪ್ರೂತ್ಸಾಹಿಸಬೇಕೆಂದು ವಿನಂತಿಸುವೆ. ನಮಸ್ಕಾರಗಳು.
– ವರುಣ್ ರಾಜ್ ಜೀ
ಧನ್ಯವಾದಗಳು