ಅನುವಾದ ಸಂಗಾತಿ
ಆಕೆ
ತೆಲುಗು ಮೂಲ: ಡಾ|| ಎಂ.ಬಿ.ಡಿ. ಶ್ಯಾಮಲ
ಕನ್ನಡಕ್ಕೆ: ಧನಪಾಲ ನಾಗರಾಜಪ್ಪ
ಆಕೆ. . . .
ಒಂದು ವಿಷಾದ ಮೋಹನ!
ಅಡಿಯಡಿಗೂ ಹಸಿರನ್ನು ಹಾಸುತ್ತ
ತುಳುಕಿ ಹಾರಾಡಿದ ಆಕೆ
ಕಾಲಗತಿಯಲ್ಲಿ ಒಣಗಿ ಬಿರುಕುಬಿಟ್ಟ
ಒಂದು ಮಧುರ ಸ್ರವಂತಿ!
ನಿರಾಶೆಯ ಹಿಮಾಚ್ಛಾದಿತ ಆ ಕಂಗಳಲ್ಲಿ
ಈ ಹಿಂದೆ ಆನಂದದ ಒರತೆಗಳಿದ್ದವೇನೋ?
ಶಶಿಯ ತುಂಡಿನಂತಹ ಹಣೆಯಲ್ಲಿ ಪ್ರಶ್ನಾರ್ಥಕಗಳಾಗಿ ವಾಲುವ ಮುಂಗುರುಳು
ಆಕೆಯ ಹಣೆಬರಹವನ್ನು ಅರಿಯಲು
ವಿಫಲ ಯತ್ನ ಮಾಡುತ್ತಲೇ ಇವೆ!
ತನ್ನವರು ಎನ್ನುವವರೆಲ್ಲಾ
ಆಕೆಯನ್ನು ದೋಚಿಕೊಂಡವರೇ?
ಆಕೆಯ ನಂಬಿಕೆಯನ್ನೂ ಸಹ!
ಜೀವನಗ್ರಂಥ ಮಧುರ ಮಧುರಾಕ್ಷರ
ಅಂದುಕೊಂಡ ಆಕೆಯನ್ನು. . .
ಎಡೆಬಿಡದ ಕಹಿ ಅನುಭವಗಳು
ಮರುಭೂಮಿಯಾಗಿಸಿರಬಹುದು!
ಅದಕೂ ಮುನ್ನ ಅನೇಕಾನೇಕ ಸುಂದರ ಕನಸುಗಳ ಸಾಮ್ರಾಜ್ಯಗಳಿಗೆ
ಆಕೆ ಮಹಾರಾಣಿಯಾಗಿ ಗೌರವಿಸಲ್ಪಟ್ಟಿರಲೂಬಹುದು!
ಆದರೆ ಈಗ. . . . .
ಆಕೆ ಅಡುಗೆ ಮನೆಯಲ್ಲಿ ಓರ್ವ ಕೆಲಸದಾಳು!
ಮಕ್ಕಳನ್ನು ನಂಬಿಕೆಯಿಂದ ಸಾಕುವಾಕೆ
ಯಾರೋ ಜೋರಾಗಿ ತೂಗುತ್ತಿದ್ದರೆ
ಹಗಲಿರುಳು ತೂಗುಯ್ಯಾಲೆಯಲ್ಲಿ
ಜಾರಿ ಬೀಳುವ ತನಕ ನಿರ್ಭಯವಾಗಿ
ನಿರುತ್ಸಾಹವಾಗಿ
ತೂಗುವ ಒಂದು ಬೊಂಬೆ!!
ಯಾರಿಗೂ ಆಕೆಯ ಹೃದಯದ ಕಾಳಜಿಯಿಲ್ಲ
ನಿಜ ಹೇಳಬೇಕೆಂದರೆ ಆಕೆಗೇ
ತನ್ನ ಹೃದಯದ ಕಾಳಜಿಯಿಲ್ಲ!