ಆತ್ಮೀಯ
ವರುಷ,ತಿಂಗಳು,ದಿನ,
ತಾಸುಗಳು ಎಷ್ಟೋ
ಕಳೆದಿರಬಹುದು ನೀನು
ಆದರೆ ಸವೆಸಲಾಗದ
ಆ ಒಂದು ರಾತ್ರಿ ನಾನು
ಸಲ್ಲಾಪ, ಸೂಳ್ನುಡಿಗಳು
ಬಹಳಷ್ಟು ಮಂದಿಯೊಡನೆ
ಸಾಕಷ್ಟು ಮಾಡಿರಬಹುದು ನೀನು
ಎದೆಯ ನೆಲದ ಒಳಗೆ
ಸೀದಾ ಇಂಗುವ ಮಾತು ನಾನು
ಸಂದಣಿಯೊಳಗೆ ಸಣ್ಣಗೆ
ಕರಗಿಹೋಗಿ ಒಬ್ಬಂಟಿಯಾಗಿ
ಉಳಿದೆಯೇನೋ ಎನ್ನುವಾಗಲೆ
ಬೆಚ್ಚನೆಯ ಆತ್ಮೀಯತೆಯ
ಅನುಭೂತಿ ನೀಡುವ ಸಾಂಗತ್ಯ ನಾನು
ನೂರಾರು ಸುಂದರ ಕ್ಷಣಗಳು
ನಿನ್ನ ಬೊಕ್ಕಸದಲ್ಲಿರಬಹುದು
ನೂರು ಜನರ ಒಡನಾಟದ
ಸವಿಯನುಂಡಿರಬಹುದು ನೀನು
ಮರೆಯಲೇ ಆಗದ ಸುಂದರ ನೆನಪು ನಾನು
**************
ನಾನು ಇಂದು ನಾನಾಗೇ ಇರಬೇಕು
ಯಾರೂ ತುಳಿಯದ, ಅಂತ್ಯವೇ
ಇರದ ಉದ್ದಕ್ಕೆ ಸುಮ್ಮನೆ ಕ್ರಮಿಸುವ
ಪಥವಾಗಬೇಕು ನಾನು
ಬಂಧಗಳು ಸಂಬಂಧಗಳೇ ಇರದ
ನಿರಾತಂಕ, ನಿರಾಡಂಬರ,
ಬಾಳ್ವೆಯಾಗಬೇಕು ನಾನು
ಎಲ್ಲಿಯೋ ದೂರದೊಂದು ಕಾಡಿನೊಳಗೆ
ಸೂರ್ಯನ ಬೆಳಕು ಪ್ರತಿಫಲಿಸುತ್ತ
ಹರಿವ ತೊರೆಯಾಗಬೇಕು ನಾನು
ಎದೆಯ ಹಾಡನ್ನು ಸ್ವಚ್ಛಂದ ಹಾಡಿ
ಹಸಿರು ಆಲಯದೊಳಗೆ ಹಸಿರಾಗಿ ಉಲಿಯುವ ಗಿಳಿಯಿಂಚರದೊಳಗೆ ಕಳೆದುಹೋಗಬೇಕು ನಾನು
ಮೋಡಗಳ ನಾಡಿನಿಂದ ಕೆಳಗೆ ಧುಮ್ಮಿಕ್ಕುವ,
ಸ್ಫಟಿಕದಂತೆ ಹೊಳೆಯುವ ಹನಿಗಳುಳ್ಳ
ಜಲಧಾರೆಯೊಳಗೆ ಕಳೆದುಹೋಗಬೇಕು ನಾನು
ನಾನು ಇಂದು ನಾನಾಗೇ ಇರಬೇಕು
******************
ಒಂದೇ ಬಳ್ಳಿಯ ಹೂಗಳು
ಒಂದೇ ಬಳ್ಳಿಯ
ಹೂಗಳು ನಾವು
ಬಣ್ಣ ಒಂದೇ ಆದರೂನು
ಬೇರೆ ನಮ್ಮ ಘಮವು
ಮೊಳಕೆಯೊಡೆದ ನೆಲ
ಹರಿವ ರಕ್ತ ಕಣ
ಎಲ್ಲ ಒಂದೆ ಆದರೂನು
ಭಿನ್ನ ನಮ್ಮ ಗುಣ
ಹಬ್ಬಿ ಬೆಳೆದ ಮರ
ಬಿಸುಪು ನೀಡಿದ ಕರ
ಅದು ಒಂದೆ ಆದರೂನು
ನಾವು ಬೇರೆ ಥರ
ಮಿಡಿತ ಬೇರೆ
ತುಡಿತ ಬೇರೆ
ಸ್ವರವೂ ಬೇರೆ,
ಲಯವೂ ಬೇರೆ
ತಾಳ ಬೇರೆ ಆದರೂನು
ಒಲವು ಗೆಲುವು
ಛಲವು ಒಂದೆ
ಒಂದೆ ಬಳ್ಳಿ
ಹೂಗಳು ನಾವು
ಒಂದೇ ನಮ್ಮ
ಅಳವು
ಚೈತ್ರಾ ಶಿವಯೋಗಿಮಠ
ಮೂರೂ ಕವನಗಳು ಚೆನ್ನಾಗಿವೆ.ಅಭಿನಂದನೆಗಳು
ಧನ್ಯವಾದಗಳು ಸರ್
ಮೊದಲ ಕವಿತೆ ತುಂಬಾ ತುಂಬಾ ತುಂಬಾ… ಹಿಡಿಸಿತು.
ಧನ್ಯವಾದ ಮೇಡಂ
ಮೊದಲ ಕವಿತೆ ಓದಲು ನನ್ನ ಅಪ್ತ ಗೆಳತಿ ಒತ್ತಾಯಪೂರ್ವಕವಾಗಿ ,ಪ್ರೀತಿಯಿಂದ ಆಗ್ರಹಿಸಿದಳು. ಓದಿದೆ. ಲೌಲಿಯಾಗಿದೆ.
ಎರಡನೇ ಕವಿತೆಯಲ್ಲಿ ಜಿ.ಎಸ್.ಶಿವರುದ್ರಪ್ಪ ಕಂಡರು. ಮೂರನೇ ಕವಿತೆಯಲ್ಲಿ ಅಕ್ಕ ಮಹಾದೇವಿ ಕಂಡಳು…
ಸರ್ ಥ್ಯಾಂಕ್ಯೂ
ಮೂರೂ ಕವಿತೆಗಳು ಹಿತ, ಮುದ..!!
ಧನ್ಯವಾದ ಮ್ಯಾಮ್