ಸ್ಮಿತಾ ಭಟ್ ಕವಿತೆ ಖಜಾನೆ

ಸೆಲೆ…

ಕ್ಷಿತಿಜಕ್ಕಂಟಿದ ನೆಂಟನೇ
ಜೊತೆ ಸಾಗುವ ತುಸು ದೂರ
ವಿಶ್ರಮಿಸಿಕೊ ನೀನೂ ಅರೆ ಘಳಿಗೆ
ಒಂಟೊಂಟಿಯಾಗೇ ಜೊತೆಗಿರುವೆವು
ಇನ್ನೆಲ್ಲಿಯ ಒಂಟಿತನ!?

ಏರಿಳಿತ ಎಲ್ಲಿಲ್ಲ ಹೇಳು?
ಬದುಕಿದು ಮರಳುಗಾಡೆಂದಾದರೆ
ಬರಡೆಂದರ್ಥವಲ್ಲವಲ್ಲ
ಅಗೋ ಅಲ್ಲಿ ಜೀವ ಸೆಲೆ!
ಹತ್ತಿರದಲ್ಲೇ ಉಸುರುವ
ಪೊದೆ ಪೊದೆ ಹಸಿರ ಅಲೆ

ತುಸು ಹೊತ್ತು ಬಿಸಿಯೇರಿ
ಬುಸುಗುಡುವ ಈ ಉಸುಕ
ನೀರಿಗಿಳಿಯೇ ಝಳ ಜಾರಿ
ತಂಪಾಗಿ ಸುಖದ ಸುಪ್ಪತ್ತಿಗೆ,

ಅರಿವಿರುವ ಈ ಜೀವ ಸೂತ್ರ
ಪಾತ್ರ ಸಡಲಿಸಿದರೂ ದಿಕ್ಕಾಪಾಲಾಗದು
ವಿಶ್ರಮಿಸಿಕೊ ನೀನೂ ಅರೆಘಳಿಗೆ
ಜೊತೆ ಸಾಗುವ ತುಸು ದೂರ

*************

ಕೆದಕ ಬಾರದು

Heart, Love, Red, Light Painting

ಯಾರ ಯಾರಲ್ಲೋ ಯಾರನ್ನೋ ಹುಡುಕುತ್ತಿರುತ್ತಾರೆ
ಒದಗಿದ ಭಾವಗಳ ಮರೆತು
ಎಷ್ಟೆಲ್ಲಾ ಸುಳ್ಳು ನುಡಿಯುತ್ತಾರೆ

ಎಷ್ಟೊಂದು ಪ್ರೀತಿಸುತ್ತೇನೆ
ಎನ್ನುವ ಮಾತಿನ ಮಗ್ಗುಲಲ್ಲೇ
ಬೇಕಂತಲೆ ಎದೆಯ ಗೀರಿಕೊಂಡ
ಹಿಡಿ ಶಾಪದ ಒಸರು

ಈ ಪ್ರೀತಿ ಪ್ರೇಮಗಳೆಲ್ಲ
ಪುಸ್ತದ ಸರಕು ಒಪ್ಪಿದ್ದೆ
ಅಂತರಂಗದ ಸರಕಾಗಿದ್ದು ನೋಡಿ
ಎದೆಯ ಧಮನಿಗಳಲಿ ಮೌನ

ಅನ್ನಿಸುತ್ತದೆ ಕೆಲವೊಮ್ಮೆ
ಜಗವೇ ಒಂದು ಡ್ರಾಮಾ ಕಂಪನಿ ಎಂದು
ಪಾತ್ರಗಳ ಗುರುತು ಹತ್ತದೆ
ನನ್ನ ನಾನೇ ಕಳೆದು ಕೊಳ್ಳುವ ದಿಗಿಲು.

ಕೆದಕ ಬಾರದು ಏನನ್ನೂ
ತೊಟ್ಟ ಮುಖವಾಡಗಳು
ಸರಿದು ಹೋದರೆ
ನೋಡುವುದಾದರೂ
ಏನನ್ನು.

***

“ಪ್ರೇಮದ ಪಾತ್ರೆ”

Hand, Daisy, Flower, Finger, Fingernails

ಪ್ರೇಮದ ಪಾತ್ರೆ ಹಿಡಿದು
ನಿನ್ನೆದುರು ನಿಂತಿದ್ದೆ
ಸ್ವೀಕರಿಸ ಬಹುದಿತ್ತು ನೀನು
ಚೂರು ಒಲವನ್ನು,ವಿರಹವನ್ನೂ
ಇಲ್ಲ ಚೆಲ್ಲಬಹುದಿತ್ತು.

ಕಾಯುವವಳಿಗೆ ಆದಿ ಅಂತ್ಯದ
ಗೆರೆಗಳಿಲ್ಲ
ತುಂಬಿ ಕೊಂಡಿದ್ದು ಖಾಲಿಯಾಗದಂತೆ
ಕಾಪಾಡುವ ಕಾಯಕ ಬಿಟ್ಟರೆ
ಮತ್ತಾವ ಸುಖ ಈ ಕಾಯಕ್ಕೆ.

ನಾನೇನಿದ್ದರೂ ನೀಡುವವಳು
ಎಂಬುದಷ್ಟೇ ಗೊತ್ತು ನಿನಗೆ
ನನ್ನ ದಾಹದ ಪ್ರೇಮಾಗ್ನಿ
ಸುತ್ತುವರಿದು ಸುಟ್ಟ ಕಲೆಗಳ
ಎಡಗಣ್ಣಿನಲೂ ನೋಡಲೇ ಇಲ್ಲ

ಎಲ್ಲೆಲ್ಲಿಂದಲೋ ಬಸಿದು
ಮತ್ತೆ ತುಂಬುತ್ತೇನೆ
ಅಲ್ಲೆಲ್ಲೋ ನೀ ಬರುವ ಸದ್ದಿಗೆ
ನಿನಗದು ನಿಂತ ನೀರು.
ಈಗೀಗ ಬಟ್ಟಲು ಬಿಕ್ಷಾ ಪಾತ್ರೆ ಯಾಗುತ್ತಿದೆ
“ಮುಂದೆ ಹೋಗು’ ಎಂದಾದರೂ
ಹೇಳಿಬಿಡು ಒಮ್ಮೆ


ಸ್ಮಿತಾ ಭಟ್

Leave a Reply

Back To Top