ಗಜಲ್
ನಯನ. ಜಿ. ಎಸ್
ನೋವುಗಳ ಕಾವಿನಲಿ ಬೆಂದು ಬಳಲದಿರು ಕರೆಯುತಿದೆ ಬಾಳಿನ ರಹದಾರಿ
ವ್ಯಥೆಗಳೊಳು ಸಿಲುಕುತ ನಿತ್ಯ ಕುಗ್ಗದಿರು ಆದರಿಸುತಿದೆ ಬಾಳಿನ ರಹದಾರಿ !
ಉಳಿವು ಅಳಿವುಗಳು ಸೃಷ್ಟಿಯ ನಿಯಮ ಅರಿತು ಬದುಕು ಉತ್ಸಾಹದಿ
ನಿರಾಸೆಗಳ ಗುಂಗಿನಲಿ ಮುಳುಗದಿರು ಸೆಳೆಯುತಿದೆ ಬಾಳಿನ ರಹದಾರಿ !
ಎಡೆಬಿಡದೆ ಸುರಿಸಿದ ಶ್ರಮದ ಬೆವರನು ಹಾಳು ಗೆಡವದಿರು ಮನವೇ
ಪ್ರತಿಫಲವು ಇರಲು ನೊಂದು ದೂರ ತಳ್ಳದಿರು ಸಾಗುತಿದೆ ಬಾಳಿನ ರಹದಾರಿ !
ಬುದ್ಧಿ ಜೀವಿಯು ಮನುಜ ಎಂಬುದ ಅರಿತು ತಿಳಿ ಸ್ಥಿತಿ ಗತಿಯ ಸೂಕ್ಷ್ಮದಿ
ಭವಿಷ್ಯವಿದೆ ಬದುಕಿನಲಿ ನಿರ್ಲಕ್ಷಿಸದಿರು ಹೆಜ್ಜೆಯಿಡುತಿದೆ ಬಾಳಿನ ರಹದಾರಿ !
ಕಂಬನಿಗಳ ಭಾವವ ಕಂಡು ಮರುಗಿ ಮೌನವಾಗಿಹಳು ಇಂದು ‘ನಯನ’
ದೃಢನಿರ್ಧಾರದ ದಿಟ್ಟತನದಿ ಮಂಕಾಗದಿರು ಓಡುತಿದೆ ಬಾಳಿನ ರಹದಾರಿ !!