ಗಜಲ್

ಗಜಲ್

ಶಾಲಿನಿ ರುದ್ರಮುನಿ

ಜಾವದ ಹುಲ್ಲುಹಾಸಿನ ಮೇಲೆ ಇಬ್ಬನಿ ಬನಿಯ ಮೌನದಲಿ ನಿ‌ನ್ನನೆ ಹುಡುಕುವೆ ದೊರೆ,
ಮೊರೆವ ಕಡಲ ಹಿಂದೆಮುಂದಲೆವ ಅಲೆಗಳ ತಳಮಳದಲಿ ನಿನ್ನನೆ ಹುಡುಕುವೆ ದೊರೆ,

ಮುಟ್ಟಿಯು ಮುಟ್ಟದೆ ಅಟ್ಟಾಡುವ ಅಲೆಯ ಅಸಹಾಯಕತೆ ಕಡಲ ಕಿನಾರೆಗಿದೆ,
ಒಡಲಾಳ ಕಡಲ ಭಾವಗಳು ನುಗ್ಗಿ ಸುಗ್ಗಿ ತರುವ
ಮಳೆಬಿಲ್ಲಲಿ ನಿನ್ನನೆ ಹುಡುಕುವೆ ದೊರೆ,

ಋತುಗಾನದ ನವಿರತೆಲಿ ಬೆತ್ತಲಾಗಿ ಮತ್ತೆ ಚಿಗುರಿ ಹೂಬಿಡುತಿಹ ಜೀವತಂತುಗಳಿವೆ
ಅಲ್ಲಲ್ಲಿ ಬಿದ್ದಿಹ ಚಳಿ ಗಾಳಿಗೆ ಸಿಲುಕಿದ ಪ್ರೀತಿ ತರಗೆಲೆಯಲಿ ನಿನ್ನನೆ ಹುಡುಕುವೆ ದೊರೆ

ದೊಡ್ಡ ನಗರದ ತುಂಬ ಅಡ್ಡಾಡಿದರು ಮುಟ್ಟದ ನೀಲಿ ಬಾನಿನ ಬೆಳಗಿದೆ,
ಬೆಡಗಿನ ಬೆರಗಿನ ದೂರದ ಆಸೆಯನು ದೂರದಿ
ಅರಸುತಲಿ ನಿನ್ನನೆ ಹುಡುಕುವೆ ದೊರೆ,

ನಿಟ್ಟುಸಿರ ಬಿಸಿ ಉಸಿರಿಗೆ ಕರಗಿದ ಜಾವದ ಬನಿಯಲಿ ಆಳದ ಹೆಜ್ಜೆ ಗುರುತಿದೆ,
ಶಾರು ಬೊಗಸೆ ತುಂಬಾ ಕಣ್ಣ ನೀರಿನುಪ್ಪಿನ ಕಡಲಲಿ ನಿನ್ನನೆ ಹುಡುಕುವೆ ದೊರೆ


Leave a Reply

Back To Top