ಭಾಷಾ ಕಲಿಕೆ

ಲೇಖನ

ಭಾಷಾ ಕಲಿಕೆ

ಗಣಪತಿ ಹೆಗಡೆ

Hindi Marathi Indian Languages Alphabets Designed Stock Vector (Royalty  Free) 1854029257

ಗುಡಿಯಾ ಖಾನಾ ಖಾಯಾ?’, ಸಾಯಂಕಾಲ ನಾಲ್ಕೂವರೆಗೆ ಮೊಮ್ಮಗಳನ್ನು ಟ್ರೋಲಿಯಲ್ಲಿ ಕೂಡ್ರಿಸಿ ಕೊಂಡು ಅಪಾರ್ಟ್ ಮೆಂಟಿನ ಸುತ್ತಲೂ ತಿರುಗಾಡಲು ತೆಗೆದುಕೊಂಡು ಹೋದಾಗ ಗೇಟಿನ ಬಾಗಿಲಿನಲ್ಲಿ ಕಾಯುತ್ತಿರುವ ಕಾವಲುಗಾರ ಮೊದಲು ನನ್ನ ಮೊಮ್ಮಗಳಲ್ಲಿ ಕೇಳುವುದು ಈ ವಾಕ್ಯ.  ಪಾಪ ಅವಳೇನು ಹೇಳಿಯಾಳು. ಹತ್ತು ತಿಂಗಳ ಎಳಗೂಸು ಅವಳು. ‘ತಿಂದಾತಾ’? ಅವನು ಕೇಳಿದ ಪ್ರಶ್ನೆ ಅವಳಿಗೆ ಅರ್ಥವಾಗಲಿ ಅಂತ ನಾನು ಅದನ್ನೇ ಕನ್ನಡದಲ್ಲಿ ಕೇಳುತ್ತಿದ್ದೆ. ಆಗ ‘ಹೂಂ’ ಎನ್ನುತ್ತಿದ್ದಳು. ಕಾವಲುಗಾರನಿಗೂ ತಾನು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿದ ಸಮಾಧಾನ.

ಈ ಅಪಾರ್ಟ್ಮೆಂಟಿನಲ್ಲಿ ಸುಮಾರು ಇನ್ನೂರು ಮನೆಗಳಿವೆ.   ಅಪಾರ್ಟ್ ಮೆಂಟ್ ಕರ್ನಾಟಕದಲ್ಲಿದ್ದ ಮಾತ್ರಕ್ಕೆ ಅಪಾರ್ಟ್ ಮೆಂಟಿನ ಭಾಷೆ  ಕನ್ನಡವೇ  ಆಗಬೇಕೆಂಬುದು ಯಾವ ನ್ಯಾಯ?  ಕನ್ನಡ, ತಮಿಳು, ತೆಲುಗು, ಕೊಂಕಣಿ, ತುಳು ಹಿಂದಿ ಭಾಷೆಯನ್ನು ಮಾತೃಭಾಷೆಯಾಗುಳ್ಳ ಜನರು ಸೌಹಾರ್ದಯುತರಾಗಿಯೇ ಇದ್ದಾರೆ ಇಲ್ಲಿ. ಅವರವರ ಮನೆಯವರಲ್ಲಿ ಪರಸ್ಪರ ಮಾತನಾಡುವಾಗ ಈ ಭಾಷಾ ವೈವಿಧ್ಯತೆಗಳನ್ನು ಗಮನಿಸಬಹುದು. 

ಮೂರು ವರ್ಷಗಳನ್ನು ಕಳೆದ ಕೂಡಲೇ ಮಕ್ಕಳು ಪರಸ್ಪರ ಇಂಗ್ಲೀಷಿನಲ್ಲೇ ಮಾತನಾಡಿಕೊಳ್ಳುತ್ತಾರೆ. ಬಹುಶಃ ಇಲ್ಲಿ ವಾಸಿಸುವವರು ಮಧ್ಯಮ ಅಥವಾ ಮೇಲುಮಧ್ಯಮ ವರ್ಗದವರಾದುದರಿಂದ ಇಂಗ್ಲೀಷ್ ಮಾಧ್ಯಮದ ಹುಡುಗರಾದುದರಿಂದ ಇದು ಸಹಜ. ಆದರೆ ನಾವು ಅಜ್ಜ ಮತ್ತು  ಮೊಮ್ಮಗಳು ಕನ್ನಡದಲ್ಲಿಯೇ ಮಾತನಾಡಿಕೊಳ್ಳುವದರಿಂದ ಬಹುಶಃ  ನಾವು ಶುದ್ಧ ಕನ್ನಡಿಗರೆಂದು ಇಲ್ಲಿ ಓಡಾಡುವ ಮಕ್ಕಳಿಗೆ ಹಾಗೂ ಹಿರಿಯರಿಗೆ ಗುತ್ತಾಗಿದೆ. ಇಲ್ಲಿಯ ಮಕ್ಕಳು, ಮೊಮ್ಮಗಳ ಜೊತೆ ಕನ್ನಡದಲ್ಲಿ ಮಾತನಾಡಿ ಕೆಲವೊಮ್ಮೆ ನನ್ನ ಜೊತೆ ಇಂಗ್ಲೀಷಿಗೆ ವರ್ಗವಾಗಿ ಬಿಡುತ್ತಾರೆ. ಆಮೇಲೆ ನಾನು ಕನ್ನಡದಲ್ಲಿ ಮಾತನಾಡಿದಾಗ ನನ್ನಲ್ಲಿಯೂ ಕನ್ನಡದಲ್ಲಿಯೇ ಮಾತನ್ನು ಮುಂದುವರಿಸುತ್ತಾರೆ. ಕನ್ನಡ ಭಾಷೆ ಗುತ್ತಿಲ್ಲದ ಮಕ್ಕಳ ಜೊತೆ ನಾನು ಇಂಗ್ಲೀಷಿಗೆ ಜಾರುತ್ತೇನೆ.

ಕೆಲವು ಯುವಕ/ಯುವತಿಯರಲ್ಲಿ, ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ  ನಾನು ಮಾತನಾಡುವಾಗ ಹಿಂದಿ ಅಥವಾ ಇಂಗ್ಲೀಷ್ ಬಳಸದೆ ಅವರು ಬೇರೆ ಭಾಷೆಯಲ್ಲಿ ಮಾತನಾಡಲು ತೊಡಗಿದಾಗಲೂ ನಾನು ಉದ್ದೇಶಪೂರ್ವಕವಾಗಿ ಕನ್ನಡದಲ್ಲಿಯೇ ಉತ್ತರಿಸತೊಡಗಿದೆ. ಬಹಳಷ್ಟು ಜನರು ‘ಅರ್ಥವಾಗುವ ಕನ್ನಡದಲ್ಲಿ’ ಮಾತನಾಡತೊಡಗಿದರು. ಅವರು ಮೊಮ್ಮಗಳ ಜೊತೆಯಲ್ಲಿಯೂ ಕನ್ನಡವನ್ನೇ ಬಳಸುತ್ತಿದ್ದರು. ಕೆಲವೇ ಹಿರಿಯ ಜೀವರಿಗೆ ಅವರ ಮಾತೃಭಾಷೆ ಬಿಟ್ಟು ಬೇರೆ ಭಾಷೆ ಬರುವದಿಲ್ಲವೋ ಏನೋ? ಮೊಮ್ಮಗಳ ಜೊತೆ ಕೇವಲ ಹಾಯ್/ ಬಾಯ್ ಅಂತ ಕೈಯಾಡಿಸುತ್ತಿದ್ದರು. ಅಷ್ಟೇ.

ಉಳಿದ ಭಾಷಿಗರೂ  ಮೊಮ್ಮಗಳ ಜೊತೆ ಹೈ, ಬಾಯ್, ಬೇಬಿ ಮುಂತಾದ ಒಂದೆರಡು ಅಕ್ಷರಗಳಿಂದಾದ ಶಬ್ದಗಳನ್ನು ಬಳಸಿ ಮಾತನಾಡುತ್ತಾರೆ. ಮೊಮ್ಮಗಳು ಕೈ ಬೀಸಿ ಹಾಯ್ ಅಂತ ಹೇಳಿ ಪ್ರತಿಕ್ರಿಯಿಸತ್ತಾಳೆ ಅಷ್ಟೇ.

ವಯಸ್ಸಾದ ಜೋಡಿಯನ್ನು ನೋಡಿದರೆ ಅವರ ಮಾತೃಭಾಷೆ ಯಾವುದು ಅಂತ ಗುತ್ತಾಗಿಬಿಡುತ್ತದೆ. ಮಾತು ಅರ್ಥವಾಗದೇ ಇದ್ದರೂ ಯಾವ ಭಾಷೆ ಎನ್ನುವದನ್ನು ತಿಳಿಯುವದು ಕಷ್ಟವಲ್ಲ. ಅವರಲ್ಲಿ ತೆಲುಗು, ಹಿಂದಿ ಹಾಗೂ ತಮಿಳಿನ ಹಿರಿ ಜೀವಿಗಳಲ್ಲಿ ಬಹಳಷ್ಟು ಜನರಿಗೆ ಅವರ ಮಾತೃ ಭಾಷೆ ಬಿಟ್ಟು ಬೇರೆ ಭಾಷೆಗಳು ಮಾತಾಡಲು ಕಷ್ಟ ಇದೆ ಅನಿಸುತ್ತದೆ. ಕೊಂಕಣಿ ಹಾಗೂ ತುಳು ಮಾತೃಭಾಷೆಯವರು ಕನ್ನಡವನ್ನು ಸಲೀಸಾಗಿ ಮಾತನಾಡುತ್ತಿದ್ದರು.

ಕನ್ನಡ ಹೊರತಾಗಿ ಇಂಗ್ಲೀಷ್ ಹಾಗೂ ಹಿಂದಿಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಲು ನನಗೆ ಬರುವದಿಲ್ಲ. ಆ ಬಗ್ಗೆ ಪ್ರಯತ್ನವನ್ನೂ ಮಾಡಲಿಲ್ಲವೆನ್ನಿ.

ಆದರೆ ಈ ಲೇಖನದ ಉದ್ದೇಶ ಕಾವಲುಗಾರರ ಜೊತೆ ಮಾತನಾಡುವದು.  ಏಳೆಂಟು ಕಾವಲುಗಾರರಿದ್ದರು ಇಲ್ಲಿ. ಅವರಲ್ಲಿ ಒಬ್ಬನನ್ನು ಬಿಟ್ಟು ಉಳಿದವರು ಆಸ್ಸಾಮ್ ಹಾಗೂ ಓರಿಸ್ಸಾದಿಂದ  ಬಂದವರು. ಆಸ್ಸಾಮಿನಿಂದ ಬಂದವರ  ಮಾತೃಭಾಷೆ ಬಂಗಾಲಿ ಅಂತ ಹೇಳಿದರು. ಓರಿಸ್ಸಾದಿಂದ  ಬಂದವನದು ಓರಿಯಾ . ಒಂದು ಏಜೆನ್ಸಿಯ ಮುಖಾಂತರ ನೇಮಣೂಕಿಯಾಗಿ ಇಲ್ಲಿ ಪ್ರವೇಶ ಪಡೆದವರು. ಅವರಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಲು  ಹಿಂದಿ ತಿಳಿದಿರಬೇಕಾದುದು ಕಡ್ಡಾಯವಂತೆ. ನೆನಪಿರಲಿ ಹಿಂದಿ. ಕನ್ನಡವಲ್ಲ.

ಓಡಿಸ್ಸಾದವನಿಗೆ ಹಿಂದಿ ಕಲಿಯುವುದು  ಕಷ್ಟವಲ್ಲ ಅಂತ ಹೇಳಿದನು. ಆದರೆ ಬಂಗಾಲಿ ಮಾತೃಭಾಷೆಯವರಿಗೆ ಹಿಂದಿ ಕಲಿಯುವುದು ಅಂದರೆ ಕನ್ನಡ ಅಥವಾ ಯಾವುದೇ ಇತರ ಭಾಷೆಗಳನ್ನು ಕಲಿತ ಹಾಗೆಯೇ ಕಷ್ಟಕರ. ಆದರೇನು ಅವಶ್ಯಕತೆ ಬಿದ್ದಾಗ ಭಾಷೆ ಕಲಿಯುವುದು ಕಷ್ಟವೇ? ಹೊಟ್ಟೆ ಭಾಷೆಯನ್ನು ಕಲಿಸುತ್ತದೆ. ಅವರು ಹೇಳುವ ಹಾಗೆ ಬೆಂಗಳೂರಿನಲ್ಲಿ ಹಿಂದಿ ಮಾತ್ರ ಅನಿವಾರ್ಯವಾದ ಭಾಷೆ!.

ಮೊಮ್ಮಗಳ ಜೊತೆ ನನ್ನ ‘ವಾಕಿಂಗ್’ ಬೆಳಿಗ್ಗೆ ಹಾಗೂ ಸಂಜೆ ನಡೆದೇ  ಇತ್ತು. ಇಂಗ್ಲೀಷ ಹೇಗೂ ಪಾಲಕರು ಹಾಗೂ ಶಾಲೆಯಲ್ಲಿ ಕಲಿಸೇ ಕಲಿಸುತ್ತಾರೆ ಅಂತ ನಾನು ಕನ್ನಡದಲ್ಲೇ ಅದರಲ್ಲೂ ನಮ್ಮ ಹವ್ಯಕ ಭಾಷೆಯಲ್ಲಿಯೇ ಮೊಮ್ಮಗಳ ಜೊತೆ ಮಾತನಾಡುತ್ತಿದ್ದೆ. ಕಾವಲುಗಾರರು ಮೊಮ್ಮಗಳ ಜೊತೆ ಅಭಿನಯ ಪೂರ್ವಕವಾಗಿಯಯೇ ಮಾತನಾಡುತ್ತಿದ್ದರು.  ಮಾತನಾಡುವಾಗ ಅವರಿಗೂ ಅರ್ಥವಾಗಲಿ ಅಂತ ಅವರು ಹೇಳಿದ ಹಿಂದಿ ಶಬ್ದಕ್ಕೆ ಪರ್ಯಾಯವಾಗಿ ಕನ್ನಡ ಶಬ್ದವನ್ನು ಮೊಮ್ಮಗಳಲ್ಲಿ ಹೇಳುತ್ತಿದ್ದೆ. ಕ್ರಮೇಣ ಮೊಮ್ಮಗಳು ಹೂಂ/ಉಹೂಂ ಎನ್ನಲು ಕಲಿತಳು. ಆ ಕಾವಲುಗಾರರು ನಾನು ಕನ್ನಡದಲ್ಲಿ ಮಾತನಾಡಿದರೆ ಬೇರೆ ಕಡೆ ಲಕ್ಷ್ಯ ತಿರುಗಿಸುತ್ತಿದ್ದರು. ಆದ್ದರಿಂದ ಮೊಮ್ಮಗಳ ಸಲುವಾಗಿ ನಾನು ಅನಿವಾರ್ಯವಾಗಿ ಹಿಂದಿಯನ್ನು ಕನ್ನಡ ಮಾಧ್ಯಮದ ಜೊತೆ ಕಾವಲುಗಾರರ ಜೊತೆ ಪ್ರಯೋಗಿಸುತ್ತಿದ್ದೆ.

ನಾನು ಊರಿಗೆ ಮರಳಿದೆ. ಆಮೇಲೆ ಒಂದೆರಡು ತಿಂಗಳು ಕಳೆದು ಪುನಃ ಬೆಂಗಳೂರಿಗೆ ಹೋದೆನು.  ಸ್ವಲ್ಪದಿನ ಅಲ್ಲಿ ಉಳಿಯಬೇಕಾಯಿತು. ಹಾಗೇ ಮೊಮ್ಮಗಳ ಜೊತೆ ವಾಕಿಂಗ್ ಮುಂದುವರಿಯಿತು.

“ಗುಡಿಯಾ ಖಾನಾ ಖಾಯಾ?, ಮಮ್ಮಿ ನಹೀಂ ಆಯಾ?, ಕಲ್ ಆಓ, ಬರಸ್ ಆತಾ ಹೈ ಅಬ್ ಚಲೋ, ಬಾಲ್ ಪಕಡೊ, ಜಂಪ್ ಕರೊ, ಮುಂತಾದ ಮಾತುಗಳು ನಡೆದೇ ಇದ್ದವು.

ನಾನು ಮೊಮ್ಮಗಳಲ್ಲಿ ಹೇಳಿದ ಶಬ್ದಗಳು ಕಾವಲುಗಾರರಿಗೆ ಅರ್ಥವಾಗಲಿಲ್ಲ. ಅವರಿಗೆ ಅದರ ಅವಶ್ಯಕತೆಯೂ ಬೀಳಲಿಲ್ಲ.  ಆದರೆ ಮೊಮ್ಮಗಳು ಈಗ ಹಿಂದಿಯನ್ನು
ಸ್ವಲ್ಪ ಸ್ವಲ್ಪ ಅರ್ಥಮಾಡಿಕೊಳ್ಳುತ್ತಿದ್ದಾಳೆ.


Leave a Reply

Back To Top