ಗಜಲ್
ಅಶ್ಫಾಕ್ ಪೀರಜಾದೆ.
ಪ್ರೇಮಿಗಳ ಮಿಲನಕೆ ತಡೆಯೊಡ್ಡುವ ಗೋಡೆಗಳಿಗೆ ಕೊರತೆಯಿಲ್ಲ ಗಾಲಿಬ್
ಕೂಡುವ ಹೃದಯಗಳ ಭಾವನೆಗಳಿಗೆ ಅಂಕೆಯಿಲ್ಲ ಗಾಲಿಬ್
ನಮ್ಮಲ್ಲಿ ಜಾತಿ ಮತ ವೇಷ ಭಾಷೆಗಳ ಅಂತರ ಇರಬಹುದು
ಪ್ರೀತಿಸುವ ಪವಿತ್ರ ಹೃದಯಗಳಿಗೆ ಯಾವ ಸೀಮೆಯಿಲ್ಲ ಗಾಲಿಬ್
ಕಾಯ ಗೋಚರ ಅನುರಾಗ ಅಗೋಚರ ಅರಿಯದ ಮೂಢರು ನಾವು
ಬಂದು ಬೆರೆತು ಹೋಗುವ ನೆನಪುಗಳಿಗೆ ಅಂಜಿಕೆಯಿಲ್ಲ ಗಾಲಿಬ್
ಕುಶಲೋಪರಿ ನಿರತ ಹಕ್ಕಿಗಳ ಮೇಲೆ ಕಲ್ಲು ತೂರಿ ಹಾರಿಸಿ ಬಿಡಬಹುದು
ಹಗಲಿರುಳು ಎನ್ನದೇ ಕಾಡುವ ಕನಸುಗಳಿಗೆ ಕೊನೆಯಿಲ್ಲ ಗಾಲಿಬ್
ಚಿರಾಗ್ ತನ್ನಷ್ಟಕ್ಕೆ ತಾ ಸುಟ್ಟು ಹೋದರೆ ಬದುಕು ಸಾರ್ಥಕ ಪೀರ್;
ಬೆಳಕು ನಂದಿಸಿ ನಗುವ ಕ್ರೂರ ಕರಗಳಿಗೆ ಕರುಣೆಯಿಲ್ಲ ಗಾಲಿಬ್