ಅಂಕಣ ಬರಹ

ತೊರೆಯ ಹರಿವು

ಆಟಕ್ಕುಂಟು ಲೆಕ್ಕಕ್ಕಿಲ್ಲ

ಬಾಲ್ಯದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಮಾತನ್ನು ಸಾಕಷ್ಟು ಬಾರಿ ಕೇಳಿಸಿಕೊಂಡಿರ್ತೀವಿ ಅಥವಾ ಹೇಳಿರ್ತೀವಿ. ಅದರಲ್ಲೂ, ಸಮಾನ ವಯಸ್ಕ ಗೆಳೆಯರೊಡನೆ ಆಡುವಾಗ, ಚಿಕ್ಕವಯಸ್ಸಿನ ಮಕ್ಕಳು ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳಿರೆಂದು ಹಠ ಹಿಡಿದಾಗಲೋ ಅಥವಾ ಹಿರಿಯರು ಗದರಿಸಿ ಸಣ್ಣಮಕ್ಕಳನ್ನು ಆಟಕ್ಕೆ ಸೇರಿಸಿ ಹೋದಾಗಲೋ ಈ ಮಾತು ಬಳಕೆಯಾಗಿರುತ್ತೆ. ಎಂದರೆ, ಆಟದ ನಿಯಮಗಳು ಅರ್ಥವಾಗದ, ಅನುಸರಿಸಲಾಗದ ವಯಸ್ಸು ಹಾಗೂ  ಮನಃಸ್ಥಿತಿ ಇರುವವರೊಡನೆ ಗುದ್ದಾಡಿಕೊಂಡು ಆಟದ ಮಜಾ ಹಾಳು ಮಾಡಿಕೊಳ್ಳಲಾರದೆ ,ಅವರೂ ಇದ್ದರೆ ಇರಲಿ ಅವರ ಪಾಡಿಗೆ; ನಾವೂ ಆಡಿಕೊಳ್ಳೋಣ ನಮ್ಮ ಪಾಡಿಗೆ ಎಂಬರ್ಥದಲ್ಲಿ ಈ ಮಾತು ಬಳಕೆ ಆಗಿರುತ್ತದೆ. ಇಲ್ಲಿ ಸಣ್ಣಮಕ್ಕಳಿಗೆ ದೊಡ್ಡವರ ಗುಂಪಿನಲ್ಲಿ ತಾವೂ ಆಡಿದೆವೆಂಬ ಖುಷಿ ಸಿಕ್ಕರೆ, ದೊಡ್ಡವರಿಗೆ ತಮ್ಮ ಆಟದ ನಿಯಮಗಳಿಗೆ ಮಕ್ಕಳಿಂದ ತೊಂದರೆ ಆಗಲಿಲ್ಲ ಎಂಬ ಸಮಾಧಾನ!

 ಈ ಖುಷಿ – ಸಮಾಧಾನ ಸ್ಥಾಯಿಯಲ್ಲ. ಯಾರನ್ನು ಆಟಕ್ಕುಂಟು ಲೆಕ್ಕಕ್ಕಿಲ್ ಲವೆಂದು  ಪರಿಗಣಿಸಿ ಹಾಗೆ ನಡೆಸಿಕೊಳ್ಳಲಾಗಿರುತ್ತದೆಯೋ ಅವರಿಗೆ ಸ್ವಲ್ಪ ತಿಳುವಳಿಕೆ ಮೂಡುತ್ತಿದ್ದಂತೆಯೇ, ತನ್ನನ್ನು ಗುಂಪಿನಿಂದ ಪ್ರತ್ಯೇಕಿಸಲಾಗಿದೆ ಎನ್ನುವುದು ಅರ್ಥ ಆಗುತ್ತದೆ. ಆಗ ಮೊದಲಿಗೆ ಅವರ ಮನಸ್ಸಿಗೆ ಘಾಸಿಯಾಗುತ್ತದೆ! ಅನಂತರ ದುಃಖ ಮೂಡಿ; ಕೊನೆಗೆ ಅದು ಸಿಟ್ಟು, ಕೋಪಕ್ಕೆ ಮೂಲವಾಗಿ ದ್ವೇಷ-ರೋಷದ ಕಿಡಿ ಹೊತ್ತಿಸಿ ಇತರರೊಡನೆ ಜಗಳವಾಡಿಕೊಂಡು, ದೂರು ಹೇಳಿ, ಗಲಾಟೆ ಎಬ್ಬಿಸಿ ಆಟದ ಆನಂದವನ್ನೇ ಕೆಡಿಸಬಹುದು ಅಥವಾ ಆಟವನ್ನೇ ಮುಕ್ತಾಯಗೊಳಿಸುವ ಕೊನೆಯ ಹಂತಕ್ಕೆ ಮುಟ್ಟಬಹುದು. 

  ಇಂಗ್ಲೀಷಿನಲ್ಲಿ ಒಂದು ಮಾತಿದೆ. ‘ಗುಡ್ ಫಾರ್ ನಥಿಂಗ್’ ಎಂದು. ಇದನ್ನೂ ಸಹ ನಮ್ಮ ‘ಆಟಕ್ಕುಂಟು …’ ಎನ್ನುವ ನುಡಿಗಟ್ಟಿನಂತೆಯೇ ಬಳಸುವುದುಂಟು. ಅಪ್ರಯೋಜಕರಿಗೆ, ನಿಷ್ಪ್ರಯೋಜಕರಿಗೆ ಬೆಟ್ಟು ಮಾಡಿ ತೋರಿಸುವಾಗ ಈ ಮಾತು ಹೇಳಲಾಗುತ್ತದೆ. ಎಂದರೆ ಮನುಷ್ಯ ಒಳ್ಳೆಯವರೇ, ಆದರೆ ಏನೂ ಉಪಯೋಗವಿಲ್ಲ!

ಉಪಯೋಗಕ್ಕೆ ಬಾರದ ಒಳ್ಳೆಯತನ ಕಟ್ಟಿಕೊಂಡು ಪ್ರಯೋಜನವೇನು? ಎಂದು ಕೇಳಬಹುದಾದ ಪ್ರಶ್ನೆಗೆ, ಒಳ್ಳೆಯದ್ದೇ ಅಪರೂಪ ಆಗುತ್ತಿರುವ ಈ ಸಂದರ್ಭದಲ್ಲಿ ಕಡೇಪಕ್ಷ ಅಂತಹ ಗುಣವನ್ನು ತೋರುವವರಾದರೂ ಇದ್ದಾರಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕೆನ್ನುವ ಉತ್ತರ ನೀಡಬಹುದೇ?

  ಆಟ ಎಂದರೆ ಎಷ್ಟೊಂದು ಬಗೆ ನೆನಪಾದರೂ ‘ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆಯೋಕೆ..’ ಸಾಧ್ಯವೇ ಇರೋಲ್ಲ. ನಮ್ಮ ಬಾಲ್ಯ ಕಾಲದ ಆಟಗಳ ಮುಂದೆ ಈಗಿನ ಮಕ್ಕಳ ಇಂಟರ್ನೆಟ್ಟಿನೊಳಗಿನ ವೀಡಿಯೋ ಗೇಮಾಟಗಳನ್ನು ಹೋಲಿಸಲು ಸಾಧ್ಯವೇ ಇಲ್ಲ. ಮಣ್ಣಿನೊಡನೆ ಆಡಿರೆಂದರೆ ಮೂಗು ಮುರಿದುಕೊಳ್ಳುವ ಈ ಮಕ್ಕಳಿಗೆ ಇಂಡೋರ್ ಗೇಮ್ ಎಂದರೆ ಕೇರಂ, ಚೆಸ್, ಪಗಡೆ, ಅಳಿಗುಣಿ ಮನೆ, ಚೌಕಾಬಾರ, ಹಾವು ಏಣಿ  ಮೊದಲಾದವು ನೆನಪಾಗುವುವೇ? ಧರ್ಮರಾಯನೂ ಸಹ ಇಂಡೋರ್ ಗೇಮೆಂಬ ದ್ಯೂತದಲ್ಲಿ ಸೋತವನೇ.. ಸೋತವನು ಅನಂತರ ಗೆದ್ದವನಾದುದೇ ಒಂದು ದೊಡ್ಡ ರಾಮಾಯಣ..! ಅಲ್ಲಲ್ಲ ಮಹಾಭಾರತ. 

   ‘ದೇವರ ಆಟಾ ಬಲ್ಲವರಾರು…?’ ಎನ್ನುತ್ತಾ  ‘ಎಲ್ಲಾ ವಿಧಿಯ ಲೀಲೆ ನರಮಾನವನ ಕೈಯಲ್ಲಿ ಏನಿದೆ?’ ಎಂದು ಯಾವ ಜವಾಬ್ದಾರಿಯನ್ನೂ ಹೊರಲಾರದವರು ಹೇಳಿ ಕೈ ತೊಳೆದುಕೊಂಡು ಬಿಡುವುದುಂಟು. ಇದು ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದಂತೆ. ಯುದ್ಧ ಎಂದಾಗ ನೆನಪಾಗುವುದು ನೋಡಿ, ಹೊಡಿಬಡಿಕಡಿ,ಹುಡುಕಿ ಕೊಚ್ಚು, ಅಟ್ಟಾಡಿಸಿ ಕೊಲ್ಲು, ಬಾಂಬ್ ಹಾಕು, ಬಂದೂಕಿನಿಂದ ಗುರಿಹಿಡಿ, ಎದೆ ಸೀಳು, ರಕ್ತ ಬಸಿ ಎನ್ನುವಂತಹ ವೀಡಿಯೋ ಗೇಮ್ ಗಳನ್ನು ಈಗತಾನೇ, ತಾಯ ಮೊಲೆಹಾಲು ಕುಡಿದು ಬಿಟ್ಟ ತುಟಿಗಳಲ್ಲಿ ಹಸಿಹಾಲಿನ ವಾಸನೆ ಆರಿರದ ಕಂದಮ್ಮಗಳು ಆಡುತ್ತಿರುವುದು ಭೀಭತ್ಸಕ್ಕೆ ನೈಜ ಉದಾಹರಣೆ. ಹೀಗೆ ಆಡುವುದೇ ಮಜಾ ಎಂಬಂತೆ, ಬ್ರೈನ್ ವಾಷ್ಗೆ ಒಳಗಾಗುವ ಮಕ್ಕಳ ಕೈಯಲ್ಲಿ ಎಕೆ-೪೭ ರಂತಹ ರಣಮಾರಿಯ ಕೈಯ ಆಯುಧ ಸಿಕ್ಕರೆ ತಮ್ಮ ಖುಷಿಗಾಗಿ ಅನ್ಯ ಸಹಜೀವಿಯನ್ನು ಕೊಂದು ತೀರದಿರರೇ?

   ‘…ಆಟ ಊಟ ಓಟ ಕನ್ನಡ ಮೊದಲನೆ ಪಾಠ..’  ಎಂದು ಚಿಕ್ಕಂದಿನಲ್ಲೇ ಕಲಿಯುತ್ತಾ ಬೆಳೆದ ನಾವು ದೊಡ್ಡವರಾದ ಮೇಲೆ ಹೇಳ್ತೀವಿ, ‘ನಿನ್ನಾಟ ನನ್ಹತ್ರ ನಡೀಯಲ್ಲಮ್ಮಾ..’ ಎಂದು. ಆದ್ರೆ ಕೃಷ್ಣನಾಟಕ್ಕೆ ಮಾತ್ರ ಸುಮ್ಮನೆ ಮಾತಿಗೆಂಬಂತೆ, ‘ಬೇಡ ಕೃಷ್ಣಾ ರಂಗಿನಾಟ..’ ಎಂದು ಹುಸಿ ಮುನಿಸು ತೋರಿದರೂ ಒಳಗೊಳಗೆ ಪುಳಕಗೊಂಡು ಸಂಭ್ರಮಿಸ್ತೀವಿ! ಕೃಷ್ಣ ಬರಿಯ ರಂಗಿನಾಟಗಳನ್ನು ಮಾತ್ರ ಆಡಿದವನಲ್ಲ, ರಾಜತಾಂತ್ರಿಕ ನೈಪುಣ್ಯ ಸಾಧಿಸಿದವನು ಎಂದೆಲ್ಲಾ ಕೊಂಡಾಟ ಮಾಡಿದರೂ ನಮಗೆ ಇಷ್ಟವಾಗಿ ಮನಸ್ಸಿಗೆ ಹತ್ತಿರವಾಗೋದು ಗೋಪಬಾಲನ ಬಾಲ್ಯದ ಆಟಗಳ ಸೊಗಸುಗಾರಿಕೆಗಳೇ..

   ಒಂದೊಂದು ಪ್ರದೇಶಕ್ಕೂ ವಿಶಿಷ್ಟವಾದ ಸ್ಥಳೀಯ ಆಟಗಳಿರುತ್ತವೆ. ಭಾರತ-ಹಾಕಿ, ಅಮೇರಿಕ- ರಗ್ಬಿ, ಸ್ಪೇನ್- ಗೂಳಿ ಕಾಳಗ, ಆಸ್ಟ್ರೇಲಿಯಾ-  ಕ್ರಿಕೆಟ್, ಬಾಂಗ್ಲಾದೇಶ- ಕಬಡ್ಡಿ, ಚೀನಾ – ಪಿಂಗ್ ಪಾಂಗ್, ಜಪಾನ್- ಸುಮೋ, ಭೂತಾನ್-ಆರ್ಚರಿ…. ಹೀಗೆ ಹಲವು ರಾಷ್ಟ್ರಗಳು ತಮ್ಮ ರಾಷ್ರೀಯ ಕ್ರೀಡೆಗಳನ್ನು ಇವೇ ಎಂದು ಘೋಷಿಸಿಕೊಂಡಿವೆ. ಇದರ ಜೊತೆಗೇ, ಭಾರತದಂತಹ ಸಂಯುಕ್ತ ಒಕ್ಕೂಟ ರಾಷ್ಟ್ರದಲ್ಲಿ ಕಬಡ್ಡಿ, ಕಂಬಳ, ಜಲ್ಲಿಕಟ್ಟು, ಎತ್ತಿನಗಾಡಿ ಸ್ಪರ್ಧೆ, ದೋಣಿ ಸ್ಪರ್ಧೆ, ಮರ ಏರುವುದು, ಬುಗುರಿ, ಚಿನ್ನಿದಾಂಡು, ಅಪ್ಪಾಳೆ ತಿಪ್ಪಾಳೆ, ಮುದ್ದೆ ನುಂಗುವುದು, ಗದ್ದೆ ನಾಟಿ ಮಾಡುವುದು…,  ಹೀಗೆ ಹಲವು ಪ್ರಾದೇಶಿಕ ಆಟಗಳನ್ನು ಹಾಗೂ ಕೆಲವು ಸೀಸನಲ್ ಆಟಗಳನ್ನೂ ಆಡುವುದುಂಟು. 

   ಆಟವನ್ನು ಆಟ ಎಂದರೆ, ಏನೋ ಲಘುತ್ವ ಭಾವ. ಹಾಗಾಗಿ, ಕ್ರೀಡೆ ಎಂದು ಕರೆದು ಅದಕ್ಕೆ ಗಾಂಭೀರ್ಯವನ್ನು ಆರೋಪಿಸಲಾಗುತ್ತದೆ. ಹೌದಲ್ಲವೇ? ಆಡುವಾಗ ಗಂಭೀರವಾಗಿಲ್ಲದಿದ್ದರೆ, ಏಕಾಗ್ರತೆ ಕಳೆದುಕೊಂಡು ಬಹುಮಾನ ವಂಚಿತರಾಗಬಹುದು. ಸ್ಥಳೀಯ ಕ್ರೀಡೆಗಳು ಮನೆಯ ಒಳಾಂಗಣದಿಂದ ಪ್ರಾರಂಭವಾಗಿ, ಅಂಗಳ ಮುಟ್ಟಿ, ಬಯಲಿಗೆ ಸಾರಿರುವುದು ಮಾನವನ ನಾಗರಿಕತೆಯ ವಿಕಾಸವಾದದಷ್ಟೇ ಇತಿಹಾಸ ಉಳ್ಳದ್ದು. ಶಾಲೆ- ಕಾಲೇಜು ಹಂತಗಳಲ್ಲಿ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ಉನ್ನತ ವ್ಯಾಸಂಗಕ್ಕೆ ವಿಫುಲ ಮೀಸಲಾತಿಯ ಅವಕಾಶಗಳನ್ನು ಸರ್ಕಾರ ಮಾಡಿಕೊಡುತ್ತದೆ. ಕೇವಲ ವಿದ್ಯಾಭ್ಯಾಸವಷ್ಟೇ ಅಲ್ಲ, ಸರ್ಕಾರಿ ಉದ್ಯೋಗದಲ್ಲೂ ಗೌರವ ಸ್ಥಾನಮಾನಗಳನ್ನು ಕಲ್ಪಿಸಲಾಗುತ್ತದೆ.  ಕ್ರೀಡಾ ಸಾಧಕರದ್ದು ವೈಯಕ್ತಿಕ ಸಾಧನೆ, ಅವರಿಗೇಕೆ ಈ ಬಗೆಯ ವಿಶೇಷ ಗೌರವ ಎನ್ನುವವರಿಗೆ, ತಿಳಿ ಹೇಳಬೇಕಾದುದು ಜವಾಬ್ದಾರಿ  ಹೊಂದಿರುವ ನಾಗರಿಕರ ಕರ್ತವ್ಯ. 

  ಕೆಲವೊಮ್ಮೆ ಆಟಗಳನ್ನು ಸಾಂಪ್ರದಾಯಿಕ ಎಂದೋ ಹ್ಂದಿನಿಂದ ನಡೆದು ಬಂದ ರೂಢಿ- ಪರಂಪರೆ ಎಂದೋ ಆಡುವುದು ಕಡ್ಡಾಯ. ಕೃಷ್ಣ ಜನ್ಮಾಷ್ಠಮಿಗೆ ಮೊಸರಿನ ಗಡಿಗೆ ಒಡೆಯುವುದು, ಗಾಳಿಪಟ ಬಿಡುವುದು, ಎತ್ತಿನ ಬಂಡಿ ಓಡಿಸುವುದು, ಭಾರದ ಗುಂಡು ಎತ್ತುವುದು, ದಸರಾ ಹಬ್ಬದಲ್ಲಿ ಪೈಲ್ವಾನ್ಗಳಿಂದ ಕುಸ್ತಿ ಕಾಳಗ, ಹುಂಜದ ಅಂಕಣ, ಕೋಳಿ ಜಗಳ, ಹೋರಿ- ಟಗರು ಕಾಳಗ, ಯುಗಾದಿ ಹಬ್ಬದ ಮಾರನೆ ದಿನ ಇಸ್ಪೀಟಾಟ…. ಇವೆಲ್ಲಾ ಒಂದು ಪುರಾಣದ್ದೋ ಇತಿಹಾಸದ್ದೋ ಎಳೆಯನ್ನು ಇಟ್ಟುಕೊಂಡು  ನಾಮಕಾವಾಸ್ತೆಗೆ ಇರಲಿ ಎಂದಾದರೂ ಆಡುವಂತಿರುತ್ತವೆ!! 

   ಕ್ರೀಡೆ ಎಂದರೆ ಕೇವಲ ದೈಹಿಕ ಆಟವಲ್ಲ. ಅದು ಮಾನಸ್ಥಿಕ ಸ್ಥಿತಿಯೂ ಕೂಡ. ‘ಕ್ರೀಡಾ ಮನೋಭಾವ’ ಹೊಂದಿರಬೇಕೆಂದರೆ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಎಂದರ್ಥ. ಸೋತ ಕಾರಣಕ್ಕೆ ಹತಾಶರಾಗಿ ಕೈ ಚೆಲ್ಲದೇ, ಮರಳಿ ಯತ್ನವ ಮಾಡುತ್ತಿರಬೇಕೆನ್ನುವ ಸಂಕಲ್ಪ ಶಕ್ತಿಯನ್ನು ಸದಾಕಾಲ ಜಾಗೃತವಾಗಿ ಇಟ್ಟುಕೊಳ್ಳುವುದೇ ಕ್ರೀಡಾ ಮನೋಭಾವ. ಇದು ವೈಯಕ್ತಿಕ ಸ್ವಾಸ್ಥ್ಯದೊಡನೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ.  

       ಒಲಂಪಿಕ್ಸ್, ಕಾಮನ್ವೆಲ್ತ್, ಫಿಫಾ, ಟೆನ್ನಿಸ್ ನ ವಿವಿಧ ಗ್ಯ್ರಾಂಡ್ ಸ್ಲ್ಯಾಮ್ ಗಳು, ಚೆಸ್, ಕ್ರಿಕೆಟ್, ರಗ್ಬಿ, ಕುದುರೆ ಸವಾರಿ, ಅಥ್ಲೆಟಿಕ್ಸ್ ನ ರಾಷ್ಟ್ರೀಯ- ಅಂತಾರಾಷ್ಟ್ರೀಯ ಕ್ರೀಡೆಗಳು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುತ್ತವೆ. ಯಾವುದೋ ದೇಶದ ಕ್ರೀಡಾ ತಾರೆ, ಮತ್ಯಾವುದೋ ದೇಶದ ಗಾಡ್ ಆಫ್ ಅರ್ಥ್ ಆಗುವುದೇ ಒಂದು ಸೋಜಿಗ. ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹುಚ್ಚುತನ ಎನಿಸುತ್ತದೆ. ಕೆಲವೊಂದು ಕ್ರೀಡೆಗಳು ಸಮುದಾಯವನ್ನೇ ಸಮೂಹ ಸನ್ನಿಗೆ ಒಳಪಡಿಸುತ್ತವೆ. ಕ್ರೀಡೆಗಳನ್ನು ಅನುಸರಿಸಿ ಬರುವ ಪ್ರಾಯೋಜಕರು, ಜಾಹೀರಾತುಗಳು ಕೋಟ್ಯಾಂತರ ರೂಪಾಯಿಯ ವ್ಯವಹಾರ ನಡೆಸುತ್ತವೆ. ವೇಶ್ಯಾವಾಟಿಕೆಗೆ, ಡ್ರಗ್ಸ್ ದಂಧೆಗೆ, ಮಾನವ ಸಾಗಾಣಿಕೆ, ರಾಜಕೀಯ ಸ್ಥಿತ್ಯಂತರಕ್ಕೆ, ಆಟಗಳೂ ಪ್ರಮುಖ ಕಾರಣ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟವೇ…

   ಸರಿಯಾದ ತರಬೇತಿ, ಅನುಕೂಲಕರ ವ್ಯವಸ್ಥೆ ಒದಗಿಸಿದರೆ ಗ್ರಾಮೀಣ ಪ್ರತಿಭೆಗಳು ಸಾಧನೆ ಯಾವ ಎತ್ತರದಲ್ಲಿರುತ್ತದೆ ಎಂಬುದಕ್ಕೆ ನಮ್ಮ ಮುಂದೆ ಉದಾಹರಣೆಯ ಸಾಲು ಸಾಲು ಮಾದರಿಗಳೇ ಇವೆ. ಆದರೆ, ಲಿಂಗ-ಜಾತಿ- ವರ್ಗ- ವರ್ಣ ತಾರತಮ್ಯಗಳು ಅಂಥ ಸಾವಿರಾರು ಪ್ರತಿಭೆಗಳನ್ನು ಅವಕಾಶವಂಚಿತರನ್ನು ಸೃಷ್ಟಿಸಿರುವುದು ಉಂಟು. ವಶೀಲಿಭಾಜಿ ನಡೆಸಿ, ಕ್ರಿಕೆಟ್, ಅದರಲ್ಲೂ ಪುರುಷರ ಕ್ರಿಕೆಟ್ ಒಂದೇ ನಿಜವಾದ ಆಟವೆಂದು ಪರಿಗಣಿಸುವ ಭಾರತದಂಥ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಎರಡಂಕಿ ಮೇಲೆ ಪದಕ ನಿರೀಕ್ಷಿಸುವುದು ಮೂರ್ಖತನ. 

   ನಾವು ಎಂಜಿನಿಯರ್, ವೈದ್ಯಕೀಯ ಬಿಟ್ಟ ಓದು ಓದಲ್ಲ ಎಂದೂ, ಕ್ರಿಕೆಟ್ ಬಿಟ್ಟ ಇತರೆ ಆಟ ಆಟವಲ್ಲ ಎಂದೂ ಎಂದೋ ಪರಮ ದಡ್ಡತನದ ನಿರ್ಧಾರ ಮಾಡಿಬಿಟ್ಟಿರುವಂತಿದೆ. ಶಾಲಾ ಹಂತದಲ್ಲಿ ದೈಹಿಕ ಚಟುವಟಿಕೆಗಳಿಗೂ ಮಹತ್ವ ನೀಡುತ್ತಿದ್ದ ಶಿಕ್ಷಣ ವ್ಯವಸ್ಥೆ ಬರಬರುತ್ತಾ, ಓದಿನ ಕಾರ್ಖಾನಗಳಂತೆ ಆಗುತಿರುವುದು ದೈಹಿಕ – ಮಾನಸಿಕ ಹಾಗೂ ಆ ಮೂಲಕ ಸಾಮಾಜಿಕ ಸ್ವಾಸ್ಥ್ಯದ ಹದವನ್ನು ಹಾಳುಗೆಡವುತ್ತಿದೆ. 

     ಬೆಕ್ಕಿನ ಕೈಗೆ ಸಿಕ್ಕಿ ಬೀಳುವ ಇಲಿಯನ್ನು ಅದು ಒಂದೇ ಏಟಿಗೆ ಕೊಂದು-ತಿಂದು ಮುಗಿಸುವುದಿಲ್ಲ. ಬಿಟ್ಟ ಹಾಗೆ ಮಾಡಿ, ಮತ್ತೆ ಮೇಲೆ ಹಾರಿ ಅದನ್ನು ಸತಾಯಿಸಿ ಸುಸ್ತು ಮಾಡಿಸಿ ಅದು ಗಾಬರಿ ಬಿದ್ದು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿರುತ್ತದೆ. ಹೀಗೆ, ಒಬ್ಬರ ಆಟ ಮತ್ತೊಬ್ಬರಿಗೆ ಪ್ರಾಣ ಕಂಟಕ ಆಗಬಾರದು ಎಂದೇ ‘ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ’ ಎಂಬ ಗಾದೆ ಟಂಕಿಸಲಾಗಿದೆ. ‘ಆಟ ಆಡಿದ್ರೆ ಅರಗಿಣಿ; ಕಾಟ ಕೊಟ್ರೆ ನಾಗಪ್ಪ’ ಅಂತಾನೂ ಮನೋಆಟದ ಕುರಿತ ಗಾದೆ ಇದೆ. ಇದು ಮಾನವರ ನಡವಳಿಕೆಯು ಹೇಗೆ ಪ್ರಾಣಿಗಳ ನಡವಳಿಕೆಗೆ ಹೋಲಿಕೆಯಾಗುವುದು ಎಂಬ ಬಗ್ಗೆ  ಇರುವಂತಹದ್ದು. ಹಿಂದಿನ ರಾಜಮಹಾರಾಜರು, ಹಣವಂತರು ಶಿಕಾರಿಯನ್ನೂ ಆಟವೆಂದೇ ಭಾವಿಸಿದ್ದರೆನ್ನುವುದು ಓದಿನಿಂದ ತಿಳಿಯಬಹುದು. ಈಗ ಕಾನೂನು ಶಿಕಾರಿಯನ್ನು ಅಮಾನ್ಯ ಮಾಡಿದೆ. ಸರ್ಕಸ್ ನಲ್ಲಿ ಹಿಡಿದು ಪಳಗಿಸಿದ ಕಾಡುಪ್ರಾಣಿಗಳಿಂದ ಕೆಲವಾರು ಆಟ ಆಡಿಸಿ ಕಾಸು ಮಾಡುವುದು ಈ ಮನುಷ್ಯ ಜಾತಿಯವರ ಆಸೆಬುರಕತನವೋ ಅಥವಾ ಚಾಣಾಕ್ಷತನವೋ ನಿರ್ಧರಿಸುವುದು ಹೇಗೆ?

     ‘ಪರಮಾತ್ಮ ಆಡಿಸಿದಂತೆ ಆಡುವೆ ನಾನು’ ಎನ್ನುವ ಆಸ್ತಿಕವಾದಿಗಳು, ತಮ್ಮ ನಿರ್ಧಾರಗಳಿಗೂ ಬೇರೆಯ ಧಾತುವನ್ನು ಹೊಣೆಗಾರಿಕೆ ಮಾಡುವುದು ಬೇಜವಾಬ್ದಾರಿತನ ಅವಲ್ಲದೆ ಮತ್ತೇನಲ್ಲ ಎಂದು ಖಂಡಿತವಾಗಿ ಹೇಳಬಹುದು. ಒಟ್ನಲ್ಲಿ ‘ಆಟ ಕೆಟ್ಟರೆ ದೀವಟಿಗೆಯವನ ಸುತ್ತ’ ಎಂದಂತೆ, ಜೀವನದ ಆಟದಲ್ಲಿ ಭಾಗವಹಿಸಿರುವ ಎಲ್ಲರೂ ಒಂದಲ್ಲಾ ಒಂದು ಪಾತ್ರ ನಿರ್ವಹಿಸವೇ ಬೇಕು. ಹಾಗೂ  ‘…. ನಿಂತಾಗ ಬುಗುರಿಯ ಆಟ ಎಲ್ಲಾರೂ ಒಂದೇ ಓಟ…’ ಎಂದು ಆಟ ಮುಗಿಸಿ ‘ಸಾಯೋ ಆಟ’ ಆಡಲು ಗಂಟುಮೂಟೆ ಕಟ್ಟಲೇಬೇಕು…

********************

– ವಸುಂಧರಾ ಕದಲೂರು.

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ

Leave a Reply

Back To Top