ಮರೆಯದ ನೆನಪು

ಕಾವ್ಯಯಾನ

ಮರೆಯದ ನೆನಪು

ಶೃತಿ ಮೇಲುಸೀಮೆ

ಬೆಳಕು ಗಾಳಿ ಇಲ್ಲದಿದ್ರು,ಮನಿತುಂಬಾ ನಮ್ದೆ ಹವಾ,
ಸದ್ದು ಗದ್ದಲ,ಯಾವಾಗ್ಲೂ ಆಟೋಟ,ಬೀದಿಯೆಲ್ಲಾ ರಂಪಾಟ

ಚಪ್ಪರದ ಮನಿಯಾದ್ರೂ,ಅರಮನಿಗಿಂತ ಕಮ್ಮಿರ್ಲಿಲ್ಲ
ಮನೆಗೂ,ಮನಸಿಗೂ ತೂತು ಬಿದ್ದು ಸೋರುತಿರ್ಲಿಲ್ಲ

ನಿಷ್ಕಲ್ಮಶ ಸಣ್ಮನಸು,ಏನು ಅರಿಯದ ವಯಸು
ದೊಡ್ಡೋರಂದ್ರೆ ಭಯ,ಚಿಕ್ಕೋರಂದ್ರೆ ತಂಟೆ ತಕರಾರು

ಹೊತ್ತೊತ್ತು ಊಟಕ್ಕೂ ,ಗಂಜಿಯ ಘಮಲು
ಸಾಲಾಗಿ ಕೂತ್ರೆ,ಸಾಲಿನ ಕೊನೆಯೊರಿಗೆ ಸಾಲುತ್ತಿರ್ಲಿಲ್ಲ

ಕಿತ್ತು ತಿನ್ನೋ ಬಡತನಿದ್ರೂ,ಕತ್ತೆತ್ತಿ ನಡಿಯೋ ಶಕ್ತಿ
ಕತ್ತಿಯಂತೆ ಇರಿಯೋ ತೊಂದ್ರೆತಾಪತ್ರೆ,ಕಿತ್ತೆಸೆಯಲು ದಾರಿ ನೀಡಿದ ಅಕ್ಷರದ ದ್ಯಾವರು

ಬದುಕಿಗೆ ಒಂದರ್ಥ ಸಿಕ್ಕಿದ್ದೇ ಆ ಬಾಲ್ಯದ ದಿವಸದಲ್ಲಿ
ತಂದಿ ಗದರಿಕೆ ಧ್ವನಿಲೇ ಕಾಳಜಿತ್ತು,ಅವ್ವನ ಪ್ರೀತಿಲೇ ನಗು ತುಂಬಿತ್ತು

ತನ್ನತನವನುಳಿಸಿಕೊಂಡು, ಅನ್ಯಮತವನು ಗುಣಿಸಿಕೊಂಡು
ಅಂಧಕಾರವ ಮರೆಸಿ, ಕಲಿತ ಸಾಲಿಲೇ ಪಾಠ ಹೇಳೋಕೆ ಹೋಗೋತರಾಯ್ತು

ಹೋಗೋ ದಾರಿಲಿ ಯವ್ವಾ ನನ್ನ ಮಗಿನು ನಿನ್ನಂಗ ಮಾಡವ್ವ ಅನ್ನೋ ಮಾತು
ಆಗ್ಲಿಯವ್ವ ಮಗಿನ ದುಡಿಯಕ ಹಚ್ಚದೆ,ಶಾಲಿಗೆ ಕಳ್ಸು ಅಂದಾಗ ಹ್ಮ್ ಗುಟ್ಟಿದ ಮನಸು

ಬಾಲ್ಯದಲ್ಲಿ ಕಂಡ ಕನಸು, ಅನುಭವಿಸಿದ್ದ ತ್ರಾಸು
ಬದುಕು ಹೇಳ್ಕೊಟ್ಟ ನೀತಿ, ಸಾರ್ಥಕ ಅನ್ಸಿತ್ತು


2 thoughts on “ಮರೆಯದ ನೆನಪು

  1. ಕೊನೆಯಿಂದ ಮೂರನೇ ಪ್ಯಾರದ ಸಂದೇಶ, ಎರಡನೇ ಪ್ಯಾರದ ಅನುಭವ ಇಷ್ಟವಾದವು. ಪದಗಳು, ಸಾಲುಗಳು ಹಿತವಾಗಿದೆ.

Leave a Reply

Back To Top