ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ

ಲೇಖನ

ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ

ವಿಶ್ವನಾಥ ಎನ್ ನೇರಳಕಟ್ಟೆ

Kamat's Potpourri: History of Kannada Literature - I

ಹಳಗನ್ನಡ ಸಾಹಿತ್ಯವನ್ನು ಅಭ್ಯಸಿಸುವ ನಿಟ್ಟಿನಲ್ಲಿ ಇಂದಿನ ಬಹುತೇಕ ವಿದ್ಯಾರ್ಥಿಗಳ ಮನೋಭಾವದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಒಂದು ಕಾಲಘಟ್ಟದಲ್ಲಿ ಅಧ್ಯಯನದ ಪ್ರಮುಖ ಭಾಗವಾಗಿದ್ದ ಹಳಗನ್ನಡ ಸಾಹಿತ್ಯ ಇಂದು ಬಹುತೇಕ ಸಂದರ್ಭಗಳಲ್ಲಿ ಪರೀಕ್ಷೆಯ ಉದ್ದೇಶಕ್ಕಾಗಿ ಮಾತ್ರವೇ ಅಧ್ಯಯನಕ್ಕೆ ಒಳಪಡುತ್ತಿದೆ. ಅದರ ಕುರಿತಾದ ಆಸಕ್ತಿಯನ್ನು ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಅದನ್ನು ಸಂಪೂರ್ಣವಾಗಿ ಮರೆತುಬಿಡುತ್ತಿದ್ದಾರೆ. ಇದು ಕೇವಲ ವಿದ್ಯಾರ್ಥಿ ವಲಯದ ಮನೋಭಾವವಲ್ಲ. ಕನ್ನಡ ಭಾಷೆ- ಸಾಹಿತ್ಯವನ್ನೇ ಜೀವನ ನಿರ್ವಹಣೆಯ ಆಧಾರಸ್ತಂಭಗಳಾಗಿಸಿಕೊಂಡ ಕೆಲವರಲ್ಲೂ ಅಪ್ರಜ್ಞಾಪೂರ್ವಕವಾದ ತಿರಸ್ಕಾರ ಇದ್ದೇ ಇದೆ. ಹಳಗನ್ನಡ ಸಾಹಿತ್ಯ ಇಂದಿನ ಸಮಾಜಕ್ಕೆ ಒದಗಿಸಿಕೊಡುವ ಮೌಲ್ಯಗಳನ್ನು ಗಮನಿಸಿಕೊಂಡಾಗ ಅದರ ಕುರಿತ ನಿರ್ಲಕ್ಷ್ಯ ಭಾವ ತಪ್ಪು ಎನ್ನುವುದು ಮನದಟ್ಟಾಗುತ್ತದೆ. ಯಾವುದೇ ಭಾಷೆಯ, ಯಾವುದೇ ತರಹದ ಸಾಹಿತ್ಯವಾದರೂ ಕಾಲದ ಅಗತ್ಯಕ್ಕೆ, ಬದಲಾವಣೆಗಳಿಗೆ ಸ್ಪಂದಿಸದೇ ಹೋದಾಗ ಸಮಾಜದಿಂದ ದೂರವಾಗುತ್ತದೆ, ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಇದು ಸಹಜವಾದ ಪ್ರಕ್ರಿಯೆ. ಅಚ್ಚರಿಯ ಸಂಗತಿಯೆಂದರೆ, ಇಂದಿನ ಕಾಲಘಟ್ಟಕ್ಕೆ ಚೆನ್ನಾಗಿ ಅನ್ವಯಿಸಬಲ್ಲ ಹಲವಾರು ಸಂಗತಿಗಳನ್ನು ಹೊಂದಿದ್ದೂ ಹಳಗನ್ನಡ ಸಾಹಿತ್ಯ ಜನರಿಂದ ದೂರವಾಗುತ್ತಿದೆ.

ಇಂದಿನ ಕಾಲಘಟ್ಟದ ಹಲವು ಚರ್ಚಿತ ವಿಚಾರಗಳಿಗೆ ಹಳಗನ್ನಡ ಸಾಹಿತ್ಯದಲ್ಲಿ ಉತ್ತರವಿದೆ. ಈ ನೆಲೆಯಲ್ಲಿ ಹಲವು ಉದಾಹರಣೆಗಳನ್ನು ನೀಡಬಹುದು. ಸೂಚ್ಯವಾಗಿ ಒಂದೆರಡು ಕಾವ್ಯ ಸಂದರ್ಭಗಳನ್ನು ಗಮನಿಸಿಕೊಳ್ಳಬಹುದು. ಮೊದಲನೆಯದಾಗಿ, ಪಂಪಕವಿಯ ‘ವಿಕ್ರಮಾರ್ಜುನ ವಿಜಯ’ ಕಾವ್ಯದಲ್ಲಿ ಬರುವ ಭೀಷ್ಮನಿಗೆ ಸೇನಾಧಿಪತಿ ಪಟ್ಟವನ್ನು ಕಟ್ಟುವ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಕುಲದ ಕುರಿತಾದ ಚರ್ಚೆ. ‘ಕುಲಮನೆ ಮುನ್ನಮುಗ್ಗಡಿಪಿರೇಂಗಳ…’ ಪದ್ಯಭಾಗವು ಕುಲದ ಕುರಿತ ಹೊಸ ವ್ಯಾಖ್ಯಾನವನ್ನು ಒದಗಿಸಿಕೊಡುವ ಕಾರಣಕ್ಕೆ ಪ್ರಮುಖವೆನಿಸುತ್ತದೆ. ವಿವಾದಕ್ಕೆ ಎಡೆಮಾಡಿಕೊಡುತ್ತಿರುವ ಜಾತಿಪದ್ಧತಿಯನ್ನು ‘ಕುಲ’ದ ನೆಲೆಯಲ್ಲಿ ಪರಿಕಲ್ಪಿಸಿಕೊಂಡು, ಅವಲೋಕಿಸಿಕೊಳ್ಳಲಾಗಿದೆ. ಕುಲವು ಜನ್ಮದತ್ತವಾಗಿ ನಿರ್ಧರಿಸಲ್ಪಡುವುದಿಲ್ಲ ಎನ್ನುವುದನ್ನು ಈ ಪದ್ಯಭಾಗವು ಸ್ಪಷ್ಟಪಡಿಸುತ್ತದೆ. ವ್ಯಕ್ತಿಯ ವ್ಯಕ್ತಿತ್ವದ ಆಧಾರದಲ್ಲಿ ಕುಲವನ್ನು ನಿರ್ಧರಿಸಬೇಕೆಂಬ ಈ ವ್ಯಾಖ್ಯಾನವನ್ನು ಯಥಾವತ್ತಾಗಿ ಇಂದಿನ ಸಮಾಜಕ್ಕೆ ಅನ್ವಯಿಸಿಕೊಳ್ಳಬಹುದು. ಎರಡನೆಯದಾಗಿ, ರನ್ನನ ‘ಗದಾಯುದ್ಧ’ದಲ್ಲಿ ಬರುವ ಪದ್ಯಭಾಗವು ಯುದ್ಧವಿರೋಧಿ ನಿಲುವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. ‘ಅಂಧನೃಪಸುತನಯೋ ಜಾ| ತ್ಯಂಧನಯೋ ಮೆಟ್ಟದಗಲ್ದು ಪೋಗೆನುತುಂ ಕೋ| ಪಾಂಧರ್ ಜಡಿದರ್ ಪತಿಯ ಕ| ಬಂಧಮನೆಡಗಲಿಸಿ ಪೋಪ ದುರ್ಯೋಧನನಂ||’- ಈ ಪದ್ಯಭಾಗವು ಯುದ್ಧಕ್ಕೆ ಕಾರಣನಾದ ದುರ್ಯೋಧನ ಯುದ್ಧದ ನಂತರ ಎದುರಿಸಿದ ಪರಿಸ್ಥಿತಿಯನ್ನು ಹೇಳುತ್ತದೆ. ಆತನ ಆಜ್ಞೆಗೆ ತಲೆಬಾಗುತ್ತಿದ್ದ ಜನರೇ ಆತನನ್ನು ಹೀಗಳೆಯುವಂತಾಗುತ್ತದೆ. ಸಾಮಾನ್ಯರನ್ನು ನಿಂದಿಸಿದಂತೆ ಆತನನ್ನೂ ನಿಂದಿಸುವಂತಾಗುತ್ತದೆ. ಇದಕ್ಕೆ ದಿಟ್ಟತನದಿಂದ ಉತ್ತರಿಸಲೂ ಆತನಿಂದ ಸಾಧ್ಯವಾಗುವುದಿಲ್ಲ. ವ್ಯಕ್ತಿಗತ ಮೌಲ್ಯಗಳು ಅವನತಿ ಹೊಂದುತ್ತವೆ. ಸಾಮಾಜಿಕ ಸಂಬಂಧಗಳು ಛಿದ್ರಗೊಳ್ಳುವಂತಾಗುತ್ತವೆ. ಇವೆಲ್ಲವೂ ಯುದ್ಧದ ಪರಿಣಾಮವಾಗಿ ಉಂಟಾಗುವ ವೈಯಕ್ತಿಕ ಹಾಗೂ ಸಾಮಾಜಿಕ ಸ್ಥಿತ್ಯಂತರಗಳ ಚಿತ್ರಣಗಳೇ ಆಗಿವೆ.

ಕುಲವು ಅತ್ಯಂತ ಪ್ರಬಲವಾಗಿದ್ದ ಕಾಲಘಟ್ಟದಲ್ಲಿಯೇ ಹಳಗನ್ನಡ ಸಾಹಿತ್ಯ ಅದನ್ನು ಹೊಸ ದೃಷ್ಟಿಕೋನದಲ್ಲಿ ನಿರ್ವಚಿಸಿಕೊಳ್ಳುತ್ತದೆ. ಯುದ್ಧವು ಸಾಹಸದ ಸಂಕೇತ ಎಂಬ ಮನೋಭಾವದಿಂದಲೇ ಕೂಡಿದ್ದ ಸಮಾಜದೆದುರು ಯುದ್ಧವಿರೋಧಿ ನಿಲುವನ್ನು ವ್ಯಕ್ತಪಡಿಸುತ್ತದೆ. ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಧೈರ್ಯ ತೋರಿದ ಹಳಗನ್ನಡ ಕವಿಗಳು ತನ್ಮೂಲಕ ಕಾಲದ ಮಿತಿಯನ್ನು ಮೀರಿದ ವಿಚಾರಗಳನ್ನು ಚರ್ಚಿಸಿದ್ದಾರೆ. 21ನೇ ಶತಮಾನದ ಸಮಾಜಕ್ಕೂ ಅನ್ವಯಿಸುವ ವಿಚಾರಗಳನ್ನು ಒದಗಿಸಿಕೊಟ್ಟಿದ್ದಾರೆ.     

ಭಾರತದ ಭವಿಷ್ಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಡಾ. ಅಬ್ದುಲ್ ಕಲಾಂ ಅವರಲ್ಲಿದ್ದ ಬಹುಮುಖ್ಯ ಕನಸು- ತಾಳೆಗರಿಗಳಲ್ಲಿ ಹುದುಗಿರುವ ಜ್ಞಾನವನ್ನು ಡಿಜಿಟಲ್ ರೂಪದಲ್ಲಿ ಯುವಜನಾಂಗ ಪಡೆದುಕೊಳ್ಳುವಂತಾಗಬೇಕು. ವೈಜ್ಞಾನಿಕತೆಯ ಮೂಲಕ ಬದುಕು ಕಟ್ಟಿಕೊಂಡಿದ್ದ ಕಲಾಂ ಪರಂಪರೆಯಲ್ಲಿರುವ ಜ್ಞಾನವನ್ನು ಮುಂದಿನ ತಲೆಮಾರಿಗೆ ರವಾನಿಸುವಲ್ಲಿ ಆಸಕ್ತಿಯನ್ನು ಹೊಂದಿದ್ದರು. ಕಲಾಂ ಅವರ ಈ ಕನಸನ್ನು ನನಸು ಮಾಡುವಲ್ಲಿ ಕನ್ನಡ ವಿದ್ವಾಂಸರು ಪ್ರಯತ್ನಿಸುತ್ತಿದ್ದಾರೆ. ಹಳಗನ್ನಡ ಕಾವ್ಯಗಳ ವಾಚನ- ವ್ಯಾಖ್ಯಾನಗಳನ್ನು ತಂತ್ರಜ್ಞಾನದ ಮೂಲಕ ಇಂದಿನ ಜನರಿಗೆ ತಲುಪಿಸಲಾಗುತ್ತಿದೆ. ಈ ಮೂಲಕ ಇಂದಿನ ಜನರು ತಮಗೆ ಹೆಚ್ಚು ಹಿತಕರವಾದ ಮತ್ತು ಆಪ್ತವಾದ ರೀತಿಯಲ್ಲಿಯೇ ಹಳಗನ್ನಡ ಸಾಹಿತ್ಯವನ್ನು ಅರ್ಥೈಸಿಕೊಳ್ಳಲು ಅವಕಾಶ ಒದಗಿಸಿಕೊಟ್ಟಂತಾಗಿದೆ. ಮಾತ್ರವಲ್ಲ, ‘ಹಳಗನ್ನಡ ಎಂದರೆ ಕಬ್ಬಿಣದ ಕಡಲೆ’ ಎಂಬ ರೂಢೀಗತ ನಂಬಿಕೆಯನ್ನು ದೂರಮಾಡುವಲ್ಲಿ ಸಹಾಯಕವಾಗಿದೆ. ಆದರೆ ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಹೆಚ್ಚು ಜನ ತೊಡಗಿಕೊಳ್ಳುವುದು ಪರಿಣಾಮದ ದೃಷ್ಟಿಯಿಂದ ಮುಖ್ಯವಾಗುತ್ತದೆ.

ಕಳೆದುಹೋಗುವ ಸಾಂಸ್ಕೃತಿಕ ವಿಚಾರಗಳು

ಹಳಗನ್ನಡ ಸಾಹಿತ್ಯದ ಕುರಿತಾದ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವುದು ಸಾಂಸ್ಕೃತಿಕ ದೃಷ್ಟಿಯಿಂದ ಆತಂಕಕಾರಿಯಾದ ವಿಷಯವಾಗಿದೆ. ಭಾಷೆ- ಸಾಹಿತ್ಯಗಳು ಕೇವಲ ಅಭಿವ್ಯಕ್ತಿಯ ಮಾಧ್ಯಮಗಳು ಮಾತ್ರವಲ್ಲ. ಸಂಸ್ಕೃತಿ ವಾಹಕಗಳೂ ಹೌದು. ಒಂದು ನಿರ್ದಿಷ್ಟ ಕಾಲಘಟ್ಟದ ಸಂಸ್ಕೃತಿ, ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಹಳಗನ್ನಡ ಸಾಹಿತ್ಯ ನಮ್ಮ ಮುಂದಿಡುತ್ತದೆ. ಭವಿಷ್ಯದ ಸಾಂಸ್ಕೃತಿಕ ಸಂಚಲನೆಯ ಕುರಿತಾದ ಹೊಳಹುಗಳನ್ನು ಒದಗಿಸಿಕೊಡುತ್ತದೆ. ಆದ್ದರಿಂದ ಹಳಗನ್ನಡ ಸಾಹಿತ್ಯ ಪರಂಪರೆಯ ಕುರಿತ ತಿಳಿವಳಿಕೆಯನ್ನು ಮುಂದಿನ ತಲೆಮಾರು ಕಳೆದುಕೊಂಡಿತು ಎಂದಾದರೆ ಒಂದು ಕಾಲಘಟ್ಟದ ಹಲವು ಸಾಂಸ್ಕೃತಿಕ ವಿಚಾರಗಳನ್ನೂ ಕಳೆದುಕೊಂಡಂತಾಗುತ್ತದೆ. ಭವಿಷ್ಯಕ್ಕೆ ಮಾರ್ಗದರ್ಶಕವಾಗಬಲ್ಲ ಹಲವು ಸಂಗತಿಗಳು ನಶಿಸಿಹೋಗುತ್ತವೆ. ಆದ್ದರಿಂದ ಹಳಗನ್ನಡ ಸಾಹಿತ್ಯದ ಕುರಿತ ಆಸಕ್ತಿಯನ್ನು ಹೊಂದಿರುವ ತಲೆಮಾರನ್ನು ರೂಪಿಸಬೇಕಾದದ್ದು ಇಂದಿನ ಅಗತ್ಯವಾಗಿದೆ.  

ವೈಚಾರಿಕತೆ ಎಂದಾಕ್ಷಣ ಪಾಶ್ಚಿಮಾತ್ಯ ಸಾಹಿತ್ಯದ ಕಡೆಗೆ ನೋಡುವ ಮನೋಭಾವ ಇಂದಿಗೂ ಹಲವರಲ್ಲಿದೆ. ಇಂಗ್ಲಿಷ್ ಭಾಷೆ- ಸಾಹಿತ್ಯಗಳ ಮೂಲಕವೇ ವಿಚಾರ ಶಕ್ತಿ ಭಾರತೀಯರಲ್ಲಿ ಬೆಳೆದಿದೆ ಎಂಬ ಅಭಿಪ್ರಾಯ ಗಾಢವಾಗಿದೆ. ವೈಚಾರಿಕತೆ ಉಗಮಗೊಂಡಿರುವುದೇ ಆಧುನಿಕ ಕಾಲಘಟ್ಟದಲ್ಲಿ ಎಂಬ ನಂಬಿಕೆ ಬಲವಾಗಿದೆ. ಇದು ಒಂದು ದೃಷ್ಟಿಕೋನದಿಂದ ನೀಡಿದಾಗ ನಿಜ. ನಾವು ಕಳೆದುಕೊಂಡಿದ್ದ ವೈಚಾರಿಕತೆಯನ್ನು ಆಧುನಿಕ ಕಾಲಘಟ್ಟ, ಇಂಗ್ಲಿಷ್ ನಮಗೆ ಮತ್ತೆ ಒದಗಿಸಿಕೊಟ್ಟಿತು ಎನ್ನುವುದು ಹೆಚ್ಚು ವಾಸ್ತವ. ವೈಚಾರಿಕ ಪ್ರಜ್ಞೆ ಎನ್ನುವುದು ಭಾರತೀಯ ಸಮಾಜದ ಬಹುಮುಖ್ಯ ಅಂಗವಾಗಿತ್ತು. ಆದರೆ ಕಾಲದ ಬದಲಾವಣೆಗೆ ತಕ್ಕಂತೆ ವೈಚಾರಿಕ ಪ್ರಜ್ಞೆಯನ್ನು ಕಳೆದುಕೊಂಡೆವು ಎನ್ನುವುದು ಗಮನಾರ್ಹ ಅಂಶ. ಸಾಮಾಜಿಕ ಸುಧಾರಣೆಯನ್ನು ಗಮನದಲ್ಲಿರಿಸಿಕೊಂಡು ದಯಾನಂದ ಸರಸ್ವತಿಯವರು ನೀಡಿದ ‘ವೇದಗಳಿಗೆ ಹಿಂತಿರುಗಿ’ ಕರೆಯು ಪುರಾತನ ಭಾರತೀಯ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಉತ್ತಮ ಅಂಶಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನೇ ಹೊಂದಿತ್ತು ಎನ್ನುವುದು ಸ್ಪಷ್ಟ. ಆದ್ದರಿಂದ ವೈಚಾರಿಕತೆ ಎನ್ನುವುದು ಭಾರತದ ಪಾಲಿಗೆ, ಭಾರತೀಯ ಸಾಹಿತ್ಯ ಪರಂಪರೆಗಳ ಪಾಲಿಗೆ ನೂತನ ಸಂಗತಿಯೇನೂ ಆಗಿರಲಿಲ್ಲ.

ಹಳಗನ್ನಡ ಸಾಹಿತ್ಯದಲ್ಲಿರುವ ವೈಚಾರಿಕತೆ- ವೈಜ್ಞಾನಿಕತೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಇಂದಿನ ತಲೆಮಾರನ್ನು ಪ್ರಚೋದಿಸಬೇಕಿದೆ. ಪುರಾಣ- ಇತಿಹಾಸಗಳನ್ನು ಗಮನಿಸಿಕೊಳ್ಳುವ ದೃಷ್ಟಿಕೋನ ಬದಲಾಗಬೇಕಿದೆ. ಉಲ್ಲೇಖಿತ ಸಂಗತಿಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಗಮನಿಸಿಕೊಳ್ಳುವ ಪ್ರಜ್ಞೆಯನ್ನು ರೂಪುಗೊಳಿಸಬೇಕಿದೆ. ಇದರಿಂದ ಹಳಗನ್ನಡ ಸಾಹಿತ್ಯ ಮತ್ತಷ್ಟು ಆಪ್ತವಾಗುತ್ತದೆ. ಮಾತ್ರವಲ್ಲ, ಚಿಂತನೆಯ ಹೊಸ ಮಾದರಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.   

ಯಾವುದೇ ವಿಚಾರ ವ್ಯಾವಹಾರಿಕ ಉದ್ದೇಶವನ್ನು ಮಾತ್ರವೇ ಹೊಂದಿದ್ದಾಗ ಅದರ ಬೆಳವಣಿಗೆ ಸೀಮಿತಗೊಳ್ಳುತ್ತದೆ ಇಲ್ಲವೇ ನಿಂತುಹೋಗುತ್ತದೆ. ಹಳಗನ್ನಡ ಸಾಹಿತ್ಯ ಹೀಗಾಗಬಾರದು. ಕೇವಲ ಪರೀಕ್ಷೆ, ಉದ್ಯೋಗ, ವಾಣಿಜ್ಯ ಉದ್ದೇಶಗಳಿಗಾಗಿ ಅದನ್ನು ಕಲಿಯುವುದಲ್ಲ. ಅದರ ಮಹತ್ವವನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ. ನೈಜ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕಿದೆ. ಹಳಗನ್ನಡ ಸಾಹಿತ್ಯದಲ್ಲಿರುವ ಉತ್ತಮ ವಿಚಾರಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಇಂದಿನ ತಲೆಮಾರು ಪ್ರಯತ್ನಿಸಬೇಕಿದೆ. ಕನಿಷ್ಟ ಪಕ್ಷ ಹಳಗನ್ನಡ ಸಾಹಿತ್ಯವನ್ನು ಓದಿ, ಅರ್ಥೈಸಿಕೊಳ್ಳಬಲ್ಲಷ್ಟಾದರೂ ಹಿಡಿತವಿರುವ ಪೀಳಿಗೆಯನ್ನು ರೂಪಿಸಬೇಕಾದದ್ದು ಇಂದಿನ ಸಾಹಿತಿ, ಉಪನ್ಯಾಸಕ, ಚಿಂತಕರ ಮೇಲಿರುವ ಗುರುತರ ಜವಾಬ್ದಾರಿಯಾಗಿದೆ.

***

2 thoughts on “ಹಳಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ

  1. ತುಂಬಾ ಉತ್ತಮ ಲೇಖನ ಸರ್ ಜೀ

Leave a Reply

Back To Top