ಅಂಕಣ ಬರಹ
ತೊರೆಯ ಹರಿವು
ಜನಮರುಳೋ ಜಾಹೀರಾತು ಮರುಳೋ..!
ಇದೇನಿದು ಗಾದೆ ಮಾತು ತಿರುಚಲಾಗಿದೆ ಎನ್ನುವಿರಾ? ಇಲ್ಲ, ಇದು ಈ ಕಾಲಕ್ಕೊಪ್ಪುವ ಅಪ್ಡೇಟೆಡ್ ಗಾದೆ. ನಿಜ ಅಲ್ವೇ? ಮಾಲ್ ಸಂಸ್ಕೃತಿ ಕಾಲಿಟ್ಟಾಯ್ತು, ತ್ರಿಲೋಕ ಸಂಚಾರಿ ಮೊಬೈಲ್ ಅನ್ನು ಕೈಯಲ್ಲಿರಿಸಿಕೊಂಡು ಬೇಕಾದ್ದು ಬೇಡದ್ದು ತರಿಸಿಕೊಳ್ಳುವ ತಾಕತ್ತು ಬಂದಾಯ್ತು. ಆನ್ ಲೈನ್ ಶಾಪಿಂಗ್ ಮಾಡುವ ಯುವ ಜನಾಂಗಕ್ಕೆ ಜಾತ್ರೆಗೆ ಹೋಗೋವಷ್ಟು ಸಮಯ ಇದೆ ಅಂತ ಹೇಳೋಕಾಗುತ್ತಾ? ಅದೂ ಅಲ್ಲದೇ ಮನೇಲಿ ಕುಳಿತೇ ಅನ್ನವನ್ನೂ ಆರ್ಡರ್ ಮಾಡಿ ತರಿಸಿಕೊಳ್ಳುವ ಜನರಿಗೆ ಜನಜಂಗುಳಿಯ ಜಾತ್ರೆ ಏಕೆ ಬೇಕು ಹೇಳಿ?
ದುಡ್ಡು ಅನ್ನುವ ಕೊಳ್ಳುವ ಶಕ್ತಿ ಎಲ್ಲರ ಬಳಿ ಇಲ್ಲದ್ದಿದ್ದ ಹಿಂದಿನ ಕಾಲದಲ್ಲಿ ‘ವಸ್ತು ವಿನಿಮಯ’ ಪದ್ಧತಿ ಮೂಲಕ ಜನ ತಮಗೆ ಬೇಕಾದ್ದನ್ನು ಅಥವಾ ತಮ್ಮಲ್ಲಿ ಇಲ್ಲದ್ದನ್ನು ಖರೀದಿಸಲು ಅಥವಾ ತಮ್ಮಲ್ಲಿ ಇರುವುದನ್ನು ಮಾರಲು ಸಹಾಯಕವಾದ ಒಂದು ಅನುಕೂಲಕಾರಿ ವ್ಯವಸ್ಥೆಯನ್ನು ಜಾರಿಗೆ ತರುವ ಅನಿವಾರ್ಯವಿತ್ತು. ಸಾರಿಗೆ- ಸಂಚಾರವೂ ಸುಗಮವಾಗಿರದಿದ್ದ ಆ ಕಾಲದ ನಿರ್ದಿಷ್ಟ ದಿನಗಳಲ್ಲಿ ನಿಶ್ಚಿತ ಜಾಗದಲ್ಲಿ ಜನ ಸೇರಿ ವ್ಯವಹಾರಾನುಕೂಲ ವಾತಾವರಣ ಸೃಷ್ಟಿಸಿಕೊಳ್ಳುವ ಅನಿವಾರ್ಯತೆಯ ಬಗ್ಗೆ ಇತಿಹಾಸಕಾರರೂ ಸಮಾಜಜೀವನ ಅಧ್ಯಯನಕಾರರು ವಿಶ್ಲೇಷಿಸಿದ್ದಾರೆ. ಇಂತಹ ಜನಜಂಗುಳಿಯೇ ಮುಂದೆ ಸಂತೆಗಳಾದವು ಎನ್ನುತ್ತಾರೆ.
ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಗುಡಿಕಟ್ಟಿಯೋ, ಅಥವಾ ಇದ್ದ ಊರ ಗುಡಿಗಳಲ್ಲಿಯೋ, ಬೆಟ್ಟ- ಗುಡ್ಡಗಳ ಪುಣ್ಯಕ್ಷೇತ್ರಗಳಲ್ಲಿಯೋ ಸಂತೆಗಳನ್ನು ನಡೆಸುವ ರೂಢಿ ಬೆಳೆದಿರಬಹುದು. ಕಾಲ ಸರಿದಂತೆ ಸ್ಥಳ ಮಹಾತ್ಮೆ, ಪೌರಾಣಿಕ ಸ್ಪರ್ಶ, ಇತಿಹಾಸದ ಝಲಕು ದೊರೆತು ಕ್ರಮೇಣ ಉತ್ಸವ, ಪರುಷೆ, ಜಾತ್ರೆಗಳಾಗಿ ಬೃಹದ್ ಮಾನವ ಸಮಾವೇಶಗಳು ನಡೆದು ಬಂದಿರಬಹುದು ಎಂದೂ ತಜ್ಞರು ವಿಶ್ಲೇಷಿಸುತ್ತಾರೆ.
ಜಾತ್ರೆಗೆಂದು ಜನ ಸೇರಿದ ಮೇಲೆ ಅಲ್ಲಿ ವ್ಯಾಪಾರ- ವಹಿವಾಟಿಗೆ ಅನುಕೂಲ ಇಲ್ಲದಿದ್ದರೆ ಹೇಗೆ? ತಮ್ಮದೇ ಮಾಲುಗಳ ಒಡೆಯರಾದ ಮಾಲೀಕರು, ಗಿರಾಕಿಗಳಾದ ಗ್ರಾಹಕರಿಗೆ ತಮ್ಮ ವಸ್ತುವನ್ನು ಪ್ರಮೋಟ್ ಮಾಡುವ ಸಲುವಾಗಿ ಕೆಲವೊಂದು ತಂತ್ರಗಾರಿಕೆ ರೂಪಿಸಿಕೊಂಡು ಮಾರಾಟ ಕೌಶಲ್ಯ ರೂಢಿ ಮಾಡಿರೊಂಡಿರಬಹುದು. ಏಕೆಂದರೆ, ಸ್ಪರ್ಧೆ ಇಲ್ಲದಿದ್ದಾಗ ಬೇಡಿಕೆಗೆ ತಕ್ಕಂತೆ ಸರಕುಗಳು ಪೂರೈಕೆಯಾಗುತ್ತವೆ.
ಮಾರಾಟಗಾರರಿಗೆ ಹಲವಾರು ತಂತ್ರಗಾರಿಕೆಗಳು ಸಿದ್ಧಿಸಿರಬೇಕು. ತಮ್ಮ ವಸ್ತುಗಳ ಅಸಾಮಾನ್ಯ ಗುಣವೈವಿಧ್ಯವನ್ನು ಹಾಡಿ ಹೊಗಳಿ ಮೆರೆಸಬೇಕು. ಅದರ ಹೆಚ್ಚುಗಾರಿಕೆಯನ್ನು ಖರೀದಿಗಾರರಿಗೆ ಮನಗಾಣಿಸಬೇಕು. ಕಾಣದ್ದನ್ನೂ ಕಾಣಿಸಿ, ಇಲ್ಲದ್ದನ್ನೂ ಇದೆಯೆಂದೇ ಆರೋಪಿಸಿ ತಮ್ಮ ವಸ್ತುವನ್ನು ಸಾಗಿಸಬೇಕು. ‘ತಿಮ್ಮಿಯ ಬೊಮ್ಮಿಯ ಮಾಡಿ ಬೊಮ್ಮಿಯ ತಿಮ್ಮಿಯ ಮಾಡೀ… ‘ ಕಾಲಕ್ಕೆ ತಕ್ಕಂತೆ ಬದುಕುವ ಕಲೆಗಾರಿಕೆ ಸಿದ್ಧಿಸಿಕೊಳ್ಳಬೇಕು. ನಷ್ಟಕ್ಕೆ ಒಳಗಾಗದೆ, ಜಾಣ್ಮೆಯಿಂದ ಅಲ್ಪವಾದರೂ ಲಾಭ ಕಾಣುವಂತೆ ವ್ಯವಹಾರ ತೂಗಿಸಬೇಕು.
ತಮ್ಮ ಸರಕು ಸರಂಜಾಮುಗಳನ್ನು ನಾನಾ ವಿಧದ ಸರ್ಕಸ್ಸು ಮಾಡಿ ಸಾಗಿಸುವ ಯಾವ ಎಡೆಯಲ್ಲಿ ಜಾಹೀರಾತು ಎನ್ನುವುದು ಹುಟ್ಟಿಕೊಂಡಿತೋ..! ಬ್ರಹ್ಮನೇ ಬಲ್ಲ. ರಾಜ ಸತ್ಯ ಹರಿಶ್ಚಂದ್ರ, ಗುರು ವಿಶ್ವಾಮಿತ್ರರ ಸಾಲ ತೀರಿಸಲು ತನ್ನ ಮಡದಿ ಚಂದ್ರಮತಿಯನ್ನು ಕಾಶೀ ನಗರದ ಸಂತೆ ಬೀದಿಯಲ್ಲಿ ಹರಾಜಿಗಿಡುವಾಗ ಆಕೆಯ ಗುಣವಿಶೇಷಣಗಳ ಪರಿಚಯ ಮಾಡುತ್ತಾನಲ್ಲಾ, ಬಹುಶಃ ಅದು ಮೊದಲ ಬಹಿರಂಗ ಜಾಹೀರಾತಾಗಿರಬಹುದೇ ಎನ್ನುವುದು ನನ್ನ ಅನುಮಾನ. ಅಥವಾ ಅಷ್ಟರವರೆಗೆ ದಾಖಲಾಗಿರದ ಅದೆಷ್ಟು ಪ್ರಕಟಣೆ, ಜಾಹೀರಾತುಗಳು ಹೊರಟಿದ್ದವೋ!!
ಐತಿಹಾಸಿಕ ಮಹತ್ವವುಳ್ಳ ಅಶೋಕನ ಶಾಸನಗಳಲ್ಲಿ ಬೌದ್ಧ ಧರ್ಮ ಪರ ಪ್ರಚಾರ ಮಾಡಿರುವುದೂ ಜಾಹೀರಾತೇ ಅಲ್ಲವೇ!? ರಾಜನ ಧಾರ್ಮಿಕ ನಿಲುವು, ಧೈರ್ಯ, ಸಾಹಸ, ಶೌರ್ಯ ಪ್ರತಾಪ, ಯುದ್ಧ ಗೆಲವು.. ಇದನ್ನೆಲ್ಲಾ ಕಲ್ಲು, ತಾಮ್ರಪಟ್ಟಿಕೆಗಳ ಮೇಲೆ ಕೆತ್ತಿಸಿಟ್ಟಿದ್ದು ಮತ್ತೊಂದು ಬಗೆಯ ಜಾಹೀರಾತೇ.
ಹತ್ತೆಂಟು ಸೆಕೆಂಡುಗಳ ಜಾಹೀರಾತಿಗೆ ಕೋಟ್ಯಾಂತರ ಬಂಡವಾಳ ಹಾಕುವ ಶ್ರೀಮಂತ ಕಂಪೆನಿಗಳಿವೆ. “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲ ಒಂದಿದ್ದರೆ ಸಾಕೋ…” ಎನ್ನುವಂತೆ ಕೇವಲ ‘ಬ್ಯ್ರಾಂಡ್ ನೇಮ್’ ನಿಂದಲೇ ಕೋಟ್ಯಾಂತರ ಗಳಿಸುವ ಉದ್ದಿಮೆಗಳಿವೆ. ಒಮ್ಮೆ ಪೆಪ್ಸಿಯೋ ಕೋಕಾಕೋಲಾವೋ ಎಂತಹದ್ದೋ ಒಂದು ಕಂಪೆನಿಯ ಮುಖ್ಯಸ್ಥನಿಗೆ ನಿಮ್ಮ ಕಾರ್ಖಾನೆಗೆ ಬೆಂಕಿ ಬಿದ್ದರೆ ಆಗುವ ನಷ್ಟವೇನೆಂದು ಯಾರೋ ಸಂದರ್ಶಕರು ಪ್ರಶ್ನೆ ಕೇಳಿದ್ದರಂತೆ. ಅದಕ್ಕೆ ಆ ಮುಖ್ಯಸ್ಥ ನಷ್ಟವೇನೂ ಇಲ್ಲ. ನಮ್ಮದು ‘ಬ್ಯ್ರಾಂಡ್ ನೇಮ್’ ಮೇಲೆ ನಿಂತಿರುವ ಕಂಪೆನಿ ಎಂದಿದ್ದರಂತೆ! ಇದಲ್ಲವೇ ಉದ್ದಿಮೆಯೊಂದರ ಯಶಸ್ಸು. ಆ ಕಂಪೆನಿ ಕೂಡ ಜನರ ವಿಶ್ವಾಸ ಗಳಿಸಿಕೊಂಡಿರುವುದು ತನ್ನ ಜಾಹೀರಾತಿನ ಮೂಲಕವೇ ಎನ್ನುವುದರಲ್ಲಿ ಸಂದೇಹವೇ ಬೇಕಿಲ್ಲ.
ಉದ್ದಿಮೆಗಳು ತಮ್ಮ ಪ್ರಚಾರಕ್ಕೆ ಆರಿಸುವುದು ಚಲಾವಣೆಯಲ್ಲಿರುವ ನಾಣ್ಯಗಳನ್ನೇ. ಅಂದರೆ, ಯಾರಿಗೆ ತಾರಾಮೌಲ್ಯ ಇರುತ್ತದೆಯೋ, ಯಾರಿಗೆ ಹೆಚ್ಚು ಅಭಿಮಾನಿ ದೇವರುಗಳು ಇರುತ್ತಾರೋ ಅವರನ್ನು ತಮ್ಮ ರಾಯಭಾರಿಗಳನ್ನಾಗಿ ನೇಮಿಸಿ ಒಡಂಬಡಿಕೆ ಮಾಡಿಕೊಳ್ಳುತ್ತವೆ. ಇಂತಹ ಅಗ್ರಿಮೆಂಟ್ ಗಳು ನಿಗದಿತ ಕಾಲಮಿತಿ ಹಾಗೂ ಕೆಲವು ಷರತ್ತುಗಳನ್ನು ಹೊಂದಿರುತ್ತವೆ. ಉದಾ: ‘ನೈಕಿ’ ಕಂಪೆನಿಯೊಡನೆ ಒಪ್ಪಂದ ಮಾಡಿಕೊಂಡ ಕ್ರೀಡಾಪಟುವು ಆ ಕಂಪೆನಿಯ ಚಿಹ್ನೆಯನ್ನು ಅಥವಾ ಉತ್ಪನ್ನಗಳನ್ನು ಯಾವುದಾದರೂ ಬಗೆಯಲ್ಲಿ ಪ್ರದರ್ಶಿಸಬೇಕು. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, MRF ಕಂಪೆನಿಯ ಪ್ರಚಾರ ರಾಯಭಾರಿ ಆಗಿದ್ದಾಗ ಅವರ ಬ್ಯಾಟಿನಲ್ಲಿ MRF ಬರಹವನ್ನು ಢಾಳಾಗಿ ಕಾಣುತ್ತಿದ್ದುದನ್ನು ಸ್ಮರಿಸಬಹುದು.
ಅಪಾರ ಹಣ ಕೊಡುವ ವಿದೇಶಿ ಕಂಪೆನಿಗಳ ಜಾಹೀರಾತುಗಳಿಗೆ, ಸತ್ಯ ಮರೆಮಾಚುವ, ಜನರನ್ನು ಮೋಸಗೊಳಿಸುವ ಜಾಹೀರಾತುಗಳಿಗೆ ಆಗುವುದಿಲ್ಲವೆಂದು ಹೇಳಿ ಮುಖ ತಿರುಗಿಸಿದ ಹಲವಾರು ಸ್ಥಿತಪ್ರಜ್ಞರು ನಮ್ಮ ನಡುವಿದ್ದಾರೆ.
ಪೆಪ್ಸಿ, ಕೋಲಾದಂತಹ ವಿದೇಶಿ ಹಾಗೂ ಅನಾರೋಗ್ಯಕಾರಿ ಪೇಯಗಳಿಗೆ ಜಾಹೀರಾತು ನೀಡಲು ಒಪ್ಪದೆ, ಎಳೆನೀರಿನ ಜಾಹೀರಾತಿದ್ದರೆ ಹೇಳಿ, ಉಚಿತವಾಗಿ ಪ್ರಚಾರ ಮಾಡುವೆ ಎಂದು ಹೇಳಿದ್ದ ಪುಲ್ಲೇಲ ಗೋಪಿಚಂದ್ (ಭಾರತದ ಬ್ಯಾಡ್ಮಿಂಟನ್ ಪಟು) ಹಾಗೂ ಕಪ್ಪು ಮೈಕಾಂತಿ ಹೊಂದಿರುವವರ ಆತ್ಮಸ್ಥೈರ್ಯ ಕುಗ್ಗಿಸುವಂತೆ ಜಾಹೀರಾತು ನೀಡುವ ಫೇರ್ ಆ್ಯಂಡ್ ಲವ್ಲೀ ಕ್ರೀಮಿನ ಜಾಹೀರಾತಿಗೆ ಒಪ್ಪಿಕೊಳ್ಳದ ಕಂಗನಾ ರಾನೌಟ್ (ಹಿಂದಿ ಸಿನೆಮಾ ನಟಿ) ಅಂತಹ ಮೊದಲಾದವರೂ ಜನರನ್ನು ಪ್ರಭಾವಿಸಿರುತ್ತಾರೆ.
ಸ್ವದೇಶೀ ವಸ್ತು ಬಳಕೆಯ ಜಾಹೀರಾತುಗಳಿಗೆ ದೇಶಪ್ರೇಮವೇ ಬಂಡವಾಳ. ಮೈಸೂರ್ ಸ್ಯಾಂಡಲ್, ನಂದಿನಿ, ಅಮೂಲ್, ಚನ್ನಪಟ್ಟಣದ ಗೊಂಬೆಗಳು, ಫ್ಯಾಬ್ ಇಂಡಿಯಾ, ಗ್ರಾಮೀಣ ಅಂಗಡಿ, ದೇಸಿ… ಮೊದಲಾದವು ಸ್ವದೇಶಿ ವಸ್ತು ಬಳಕೆಯ ವಿಚಾರದಲ್ಲಿ ಅತ್ಯಾಸಕ್ತರಾಗಿರುವ ಜನ ಸಾಗರವನ್ನು ತನ್ನ ಗ್ರಾಹಕರನ್ನಾಗಿ ಹೊಂದಿವೆ. ಇದೆ. ತಲೆಮಾರುಗಳಿಂದ ಇಂತಹ ಉತ್ಪನ್ನಗಳನ್ನು ಬಳಕೆ ಮಾಡುತ್ತಿರುವ ಕುಟುಂಬಗಳಿವೆ. ಇದೂ ಸಹ ಜಾಹೀರಾತಿನ ಯಶಸ್ಸು.
ಇನ್ನು ಜಾಹೀರಾತುಗಳನ್ನೇ ಬಂಡವಾಳ ಮಾಡಿಕೊಂಡು ಬೆಳೆದಿರುವ, ಬೆಳೆಯುತ್ತಿರುವ, ಉಳಿದಿರುವ ಉದ್ದಿಮೆಗಳಲ್ಲಿ ಪತ್ರಿಕೋದ್ಯಮ ಮುಂಚೂಣಿಯಲ್ಲಿದೆ. ಕೆಲವು ಪತ್ರಿಕೆಗಳ ಮುಖಪುಟ, ಹಿಂದಿನ ಪುಟ ನಡುಪುಟಗಳಲ್ಲಿ ಜಾಹೀರಾತೇ ಪ್ರಧಾನವಾಗಿ, ಸುದ್ದಿ, ವಿಚಾರ, ವಿಮರ್ಶೆಗಳು ಉಪ್ಪಿನಕಾಯಿಯಾಗಿರುತ್ತವೆ. ಹಾಗಾಗಿ ಪತ್ರಿಕೆಗಳ ಇಂತಹ ನಡೆ ಕಂಡು ವಾಚಕರೂ ಸಹ ಆಗಾಗ್ಗೆ ಕೂರಂಬುವಿನ ಉಪ್ಪಿನಕಾಯಿ ಹಾಕುತ್ತಾರೆ. ಮುವ್ವತ್ತು ನಿಮಿಷಗಳ ಧಾರಾವಾಹಿಗೆ ಇಪ್ಪತ್ತು ನಿಮಿಷಗಳ ಜಾಹೀರಾತು ಇಟ್ಟು ವೀಕ್ಷಕರ ತಾಳ್ಮೆ ಪರೀಕ್ಷಿಸುವ ಟಿವಿ ಚಾನೆಲ್ ಗಳಿವೆ. ಇಂತಹ ಕಿರಿಕಿರಿಗಳಿಂದ ಹೊರಬರಲು ಜಾಣ ಆಧುನಿಕರು ಬೇರೆ ಬೇರೆ ಮಾರ್ಗೋಪಾಯ ಕಂಡುಕೊಂಡಿದ್ದಾರೆ ಬಿಡಿ. ಅವರ ಮುಂದೆ ಜಾಹೀರಾತಿನ ಆಟ ನಡೆಯೋಲ್ಲ.
ಯಶಸ್ಸನ್ನೇ ಬಂಡವಾಳ ಮಾಡಿಕೊಳ್ಳುವ ಜಾಹೀರಾತುಗಳು ವಿಫಲತೆಯನ್ನು ಮರೆಮಾಚುವ ಮೂಲಕ ಜನರನ್ನು ಸುಲಭವಾಗಿ ವಂಚಿಸುತ್ತವೆ.
ಆದರೆ, ಕೆಲವು ಜಾಹೀರಾತುಗಳು ಮಾತ್ರ ತದ್ವಿರುದ್ಧವಾಗಿರುತ್ತವೆ. ಹಲವು ಬಾರಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೂತರೂ ಯಶಸ್ವಿಯಾಗದ ವ್ಯಕ್ತಿ ಕೋಚಿಂಗ್ ಸೆಂಟರ್ ತೆರೆದು, ತನ್ನ ವಿಫಲತೆಯನ್ನೇ ಬಂಡವಾಳ ಮಾಡಿಕೊಂಡು ಇತರೆ ಸ್ಪರ್ಧಾಥಿಗಳಿಗೆ ತನ್ನ ಸೋಲನ್ನೇ ಉದಾಹರಿಸಿ, ತಾನು ಏಕೆ ಸೋತೆ? ಹಾಗಾದರೆ ಗೆಲುವಿಗೆ ಏನು ಮಾಡಬೇಕು ಎಂದು ಹೇಳುವ ಮೂಲಕ ಹಲವರ ಯಶಸ್ಸಿಗೆ ಕಾರಣನೂ ಆಗಬಹುದು. ಇಲ್ಲಿಯೂ ಸೋಲನ್ನೇ ಗೆಲುವಾಗಿ ಜಾಹೀರಾತುಗೊಳಿಸುವ ತಂತ್ರಗಾರಿಕೆ ಗೆದ್ದಿರುವುದು.
ಈಗ ಇರುವುದು ಜಾಹೀರಾತಿನ ಯುಗ. ಡಬಲ್ ಧಮಾಕಾ! ಬೈ ಒನ್ ಗೆಟ್ ಒನ್ ಫ್ರೀ, ಸೀಸನ್ ಎಂಡಿಂಗ್ ಸೇಲ್, ಕ್ಲಿಯರೆನ್ಸ್ ಸೇಲ್ ನಂತಹ ಜಾಹೀರಾತುಗಳು ಸಾಮಾನ್ಯರನ್ನು ಪ್ರಚೋದಿಸಿ ಬೇಕಾದ್ದು, ಬೇಡಾದ್ದು ಖರೀದಿಸುವ ಕೊಳ್ಳುಬಾಕರನ್ನಾಗಿ ಮಾಡಿ ಮಾಲುಗಳನ್ನು ಭರ್ತಿ ಮಾಡುತ್ತವೆ. ಆನ್ಲೈನ್ ಜಾಹೀರಾತುಗಳ ಆಕರ್ಷಣೆಯು ಮತ್ತೊಂದು ಬಗೆಯದ್ದು. ಇನ್ನು ಕೆಲವೇ ಸೆಕೆಂಡುಗಳಲ್ಲಿ ಈ ಆಫರ್ ಮುಕ್ತಾಯ ಆಗುವುದೆಂದು ಗ್ರಾಹಕರನ್ನು ತುದಿಗಾಲಿನಲ್ಲಿ ನಿಲ್ಲಿಸಿ ಟೆನ್ಷನ್ ತುಂಬುತ್ತವೆ.
ಕಾರ್ಯಕ್ರಮದ ಪ್ರಚಾರವೂ ಜಾಹೀರಾತೇ. ಯಾರು ಮುಖ್ಯಅತಿಥಿ, ಉದ್ಘಾಟಕರು, ಸ್ಥಳ ಎಲ್ಲಿ ಇತ್ಯಾದಿ ಆಧರಿಸಿ ಜನ ಸೇರುವುದುಂಟು. ಕಳಪೆ ಕಾರ್ಯಕ್ರಮಗಳು ಜಾಣ್ಮೆಯ ಜಾಹೀರಾತಿನ ಮೂಲಕ ಯಶಸ್ವಿಯಾಗಿವೆ. ಉತ್ತಮ ಕಾರ್ಯಕ್ರಮಗಳು ಪ್ರಚಾರದ ಕೊರತೆಯಿಂದ ಸೊರಗಿವೆ.
‘ವ್ಯಾಪಾರಾರ್ಥಂ ದ್ರೋಹ ಚಿಂತನಂ’ ಎಂಬುದನ್ನೇ ಬಂಡವಾಳ ಮಾಡಿಕೊಂಡವರ ಗಿಲೀಟಿನ ಜಾಹೀರಾತುಗಳು ಜನರನ್ನು ಮೊಸಗೊಳಿಸುವುದಕ್ಕೆ ಶುರು ಮಾಡಿದ ಮೇಲೆ ‘ಗ್ರಾಹಕರ ವೇದಿಕೆ’ ತಲೆ ಎತ್ತಿ, ಕಠಿಣ ಕಾನೂನುಗಳು ರಚನೆಯಾಗಿ ಗ್ರಾಹಕರ ಹಿತ ಕಾಯತೊಡಗಿವೆ.
ಮಹಾತ್ಮ ಗಾಂಧಿ, ‘ಗ್ರಾಹಕರನ್ನು ದೇವರು’ ಎಂದರು. ಆದರೆ, ದೇವರನ್ನೇ ಜಾಹೀರಾತಿಗೆ ಬಂಡವಾಳ ಮಾಡಿಕೊಂಡವರು ನಾವು. ಇಂತಲ್ಲಿ ಇಂತಹ ಪೂಜಾ ಕೈಂಕರ್ಯವೋ, ಸೇವೆಯೋ ಕೈಗೊಂಡರೆ ಇಂತಹದ್ದು ಸಿದ್ಧಿಸುತ್ತದೆ. ನಮ್ಮ ದೈವದ ಸ್ಥಳ ಮಹತ್ವ ಇದು, ನಮ್ಮ ದೈವದ ಶಕ್ತಿ ಇಂತಿಥದ್ದು… ಇದೆಲ್ಲಾ ಜಾಹೀರಾತು ತಾನೇ!? ಹೀಗೆ ದೇವಾನುದೇವತೆಗಳೇ ಜಾಹೀರಾತಿಗೆ ಬಿಕರಿಯಾಗುವಾಗ ಜನಸಾಮಾನ್ಯರ ಪಾಡೇನು?
ಹೀಗೆ ‘ಸರ್ವಂ ಜಾಹೀರಾತು ಮಯಂ’ ಎನ್ನುತ್ತಾ, ಈ ಲೇಖನವನ್ನು ಸಂಗಾತಿ.ಇನ್ ನಲ್ಲಿ ಪ್ರಕಟಿಸಿ ಜಾಹೀರುಗೊಳಿಸಿರುವೆ..!!
*****************************
ವಸುಂಧರಾ ಕದಲೂರು.
೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಅತ್ಯುತ್ತಮ *****
ಧನ್ಯವಾದಗಳು