ಕಾಡಿದ ಗಜಲ್ ಹಿಂದಿನ ಕಥನ

ಲೇಖನ

ಕಾಡಿದ ಗಜಲ್ ಹಿಂದಿನ ಕಥನ

shadow of two person standing during daytime

ಗಜಲ್

ಬಡವರ ಮನೆಯಲ್ಲಿ ಈಗ ದಿನ ನಿತ್ಯ ಅನ್ನ ಬೇಯೋದು ಹೇಗೆ
ಕೆಲಸವೇ ಇಲ್ಲದ ಮೇಲೆ ಅವರೆಲ್ಲರ ಬದುಕು ಚಲಿಸೋದು ಹೇಗೆ

ಔಷದಿ ದವಾಖಾನೆ ಓಡಾಟಕ್ಕೆ ಹಣ ಹೊಂದಿಸೋದು ಹೇಗೆ
ಬರಬಾರದ ಈ ರೋಗದಿ ಅವರು ಜೀವ ಉಳಿಸಿಕೋದು ಹೇಗೆ

ದಿನದ ದುಡಿಮೆಯ ನಂಬಿ ಬದುಕಿದವರೇ ಬಹಳ ಈ ಜಗದಲ್ಲಿ
ಮನೆಯ ದುಡಿವ ಕೈಗಳು ಉಣ್ಣೋ ಬಾಯಿಗಳ ತುಂಬಿಸೋದು ಹೇಗೆ

ಕೂಲಿಕಾರರ ಕಷ್ಟ ಮಧ್ಯಮವರ್ಗದವರ ಬದುಕು ಅದಕಿಂತ ನಿಕೃಷ್ಟ
ಸಂಕಟ ಹೇಳರು ಅನುಭವಿಸಲಾರರು ಆವರು ಮರ್ಯಾದೆ ಕಾಪಾಡಿಕೋದು ಹೇಗೆ

ದುಡಿದುಣ್ಣೋ ರೈತರ ಬೆಳೆಗಳು ಕೊಳ್ಳೊರಿಲ್ಲದೆ ಕೊಳೆಯುತಿವೆ ಹೊಲದಲ್ಲೆ
ಕಂಗೆಟ್ಟಿಹ ಕೃಷಿಕರ ಬವಣೆಗಳು ಹಲವಾರು ಅವರ ಕಣ್ಣೀರು ಒರೆಸೋದು ಹೇಗೆ

ಮಧ್ಯಮವರ್ಗ ಸಾಲ ಸೋಲ ಮಾಡುವರು ಮುಂದೆ ತೀರಿಸೋದು ಹೇಗೆ
ನೂರಾರು ನೋವುಗಳಿಗೆ ಸಿಲುಕಿ ದಿಕ್ಕುಗಾಣದ ಜನಕೆ ಭರವಸೆ ತುಂಬೋದು ಹೇಗೆ

ಯಾತಕ್ಕೆ ಈ ಸಂಕಷ್ಟಗಳು ಬಂದವೋ ಕಾಯುತಿಹೆವು ಹಳೆಯ ದಿನಗಳಿಗೆ
ಹೊನ್ನಸಿರಿ’ ಆ ಸೃಷ್ಟಿಕರ್ತನಲ್ಲದೆ ಅನ್ಯರು ಈಗ ಇದರಿಂದ ರಕ್ಷಿಸೋದು ಹೇಗೆ


ಸಿದ್ಧರಾಮ ಹೊನ್ನಲ್

       ತಾಸೊತ್ತು ಯಾವ್ಯಾವ ಗಜಲ್ ಕಾಡಿವೆ ಅಂತ ಹಲವರ ಗಜಲ್ ನೆನಪಿಸಿಕೊಂಡೆ. ಕಾಡಿದ ಗಜಲ್ ಗಳು ಅನೇಕ. ಆ ಬಗ್ಗೆ ಬೇರೆಯದೇ ಆದ ಒಂದು ಲೇಖನವೇ ಬರೆಯುವಷ್ಟು ಗಜಲ್ ಗಳು ನನಗೆ ಕಾಡಿವೆ. ಈಗಲೇ ಬರೀಬಹುದು.ಆದರೆ ಈ ವ್ಯಾಪ್ತಿಯಲ್ಲಿ ಅದಕ್ಕೆ ಅವಕಾಶ ಕಡಿಮೆ.ಹಾಗಾಗಿ ಅದು ಬೇರೆಯದೇ ಲೇಖನ ಬರೀವೆ.

ನನಗೆ ನನ್ನ ಈ ಗಜಲ್ ಬರೆಯಲು ಕಾಡಿದ ತಲ್ಲಣ ಹಾಗೂ ಆ ಮೂಲಕ ರಚನೆಗೊಂಡ ನನ್ನದೇ ಗಜಲ್ ದ ಹಿಂದಿನ ಕಥನದ ಬಗ್ಗೆ  ಬರಿಯೋದೆ ಹೆಚ್ಚು ಸೂಕ್ತ ಅನಿಸಿತು. ಇದಿಷ್ಟು ಹಿನ್ನೆಲೆಯಲ್ಲಿ ಈಗ ನಾ ಬರೆದ ಹೊನ್ನಗರಿಯ ನವಿಲು ನನ್ನ ನಾಲ್ಕನೆಯ ಗಜಲ್ ಸಂಕಲನದ ಈ ಗಜಲ್-೨೪೫ ರ ರಚನೆಯ ಹಿಂದಿನ ಕಾಡಿದ ಕಾರಣ ಹಾಗೂ ಕಥನ ಬರೆದಿರುವೆ. ಒಪ್ಪಿಸಿಕೊಳ್ಳಿ.

      ಕಳೆದ ಫೆಬ್ರವರಿ-೨೦೨೦ ರಿಂದ ಇಡೀ ಜಗತ್ತಿಗೆ, ಆ ಮೂಲಕ ನಮ್ಮ ದೇಶಕ್ಕೆ, ನಾಡಿಗೆ ನಮಗೆ ನಿಮಗೆಲ್ಲ ಕಾಡಿದ ಈ ಕೊರೋನಾ ಕಾಲಘಟ್ಟದ ಜನ ಜೀವನದಲ್ಲಿ ಆದ ಸಂಕಷ್ಟಗಳು,ಸಾವು ನೋವುಗಳು,ಆರ್ಥಿಕ ಹಾಗೂ ಸಾಮಾಜಿಕ  ಸಮಸ್ಯೆಗಳು. ಅನಾರೋಗ್ಯ,ಹಸಿವು,ಬಡತನ ಕುರಿತು ಚಿಂತಿಸಿದ ಗಜಲ್ ಇದಾಗಿದೆ. ಗಜಲ್ ಮೂಲ  ಭೂತವಾಗಿ ಪ್ರೇಮ ಕಾವ್ಯವಾಗಿದ್ದರು ಸಹ,ಸಾಮಾಜಿಕ  ಸಂಕಟಗಳಿಗೆ ಮಿಡಿಯದ ಕವಿ ಕವಿಯೇ ಅಲ್ಲ…. ಎಂಬ ಭಾವದ ನನಗೆ ಈ ಸಂದರ್ಭದಲ್ಲಿ ಇಡೀ ನಾಡು ನಾವು ನಮ್ಮವರು ಸಾವಿನ ಬಾಗಿಲು ಬಡಿತಿರೋದು ಕಾಡದೇ ಇರಲಾರದು. ಆ ಸಂಕಟದ ಸಮಯದಲ್ಲಿ ಹುಟ್ಟಿದ ಗಜಲ್ ಇದು.

     ಒಂದು ಕಡೆ ಮಹಾಮಾರಿ ರೋಗದ ಭಯ.ಇನ್ನೊಂದು ಕಡೆ ನಿಯಂತ್ರಣ ಮಾಡಲು ಲಾಕ್ ಡೌನ ಮಾಡೋದ್ರಿಂದ ಬಡಜನರ, ದಿನನಿತ್ಯ ದುಡಿದು ಉಣ್ಣೋ ಜನಗಳ ಹಸಿವೆಯ ಆಕ್ರಂದನ.ದಿನದ ಕೂಲಿ ತಂದರೇನೇ ಒಲೆ ಹೊತ್ತುವ ಬಡವರೇ ಅಧಿಕ ನಮ್ಮಲ್ಲಿ. ಅದಕ್ಕೇನೆ ಗತಿ ಇಲ್ಲದ ಸ್ಥಿತಿಯಲ್ಲಿ ಈ ರೋಗಕ್ಕೆ ಒಳಗಾಗಿ ಆಸ್ಪತ್ರೆಗೆ ಹೋಗೋದು, ಬರೋದು ಔಷದಿ ಖರ್ಚಿಗೆ ಆ ಬಡಜನತೆ ಎಷ್ಟು ಕಷ್ಟ ಪಟ್ಟಿರಬಹುದೆಂಬ ಚಿತ್ರಣ ತುಂಬಾ ಭಯಾನಕ.

ಇಡೀ ಜಗತ್ತು ಹೊತ್ತು ಉರಿಯುತ್ತಿರುವಾಗ ರೋಮದ ಚಕ್ರವರ್ತಿ ಪಿಟೀಲು ಬಾರಸ್ತಿದ್ದನಂತೆ .ಹಾಗಾಗಬಾರದು. ಯಾವುದೇ ಕವಿ ಲೇಖಕ ಆ ಕಾಲಮಾನದ ಸಾಕ್ಷಿ ಪ್ರಜ್ಞೆ  ಆಗಿರುತ್ತಾನೆ.ಆ ಕಾರಣದಿಂದ ಪ್ರೇಮ ನವಿರುತನಕ್ಕೆ ಮೀಸಲಾಗಿರುವ ಗಜಲ್ ಪ್ರಕಾರದಲ್ಲೆ ನಾ ಸುತ್ತಲಿನ ಕ್ಷೋಬೆಗೆ ಈ ಗಜಲ್ ಮೂಲಕ ಸ್ಪಂದಿಸಿರುವೆ. ಸಾವು ನೋವು ಬಡತನ, ಮಧ್ಯಮ ವರ್ಗದವರ ಸಂಕಷ್ಟಗಳು, ರೈತರು ಬೆಳೆದ ಬೆಳೆ ಕೊಳ್ಳೋರಿಲ್ಲದೇ‌ ಅವರ ಕಣ್ಣೆದುರೇ ಕೊಳೆತು ಹೋಗುವಾಗ ಕಷ್ಟಪಟ್ಟು ಅದನ್ನೆ ನಂಬಿಕೊಂಡು ಬೆಳೆದ ನಮ್ಮ ಗ್ರಾಮೀಣ ರೈತನ ಪರಸ್ಥಿತಿ ಏನಾಗಿರಬೇಡ. ಒಂದು ದಿನದಲ್ಲೆ ಅರಳಿ ಬಾಡೋ ಹೂ ಬೆಳೆಗಾರರ ಹೂ ಕೊಳ್ಳೋರಿಲ್ಲದ ಸಂಕಷ್ಟಗಳು.ಹತಾಶೆ ಉಹಿಸಿ.ರೈತ ಬೆಳೆದ ಕಾಯಿ ಪಲ್ಲೆ ಹಣ್ಣು ಹಂಪಲಗಳು ಕೊಳೆತು ಹೋದಾಗ ಆ ರೈತ ಮಾಡಿದ ಸಾಲ ತೀರಿಸೋದು ಹೇಗೆ?, ಮಧ್ಯಮ ವರ್ಗದ ಜನ ಬದುಕಿಗಾಗಿ ಮಾಡಿದ ಸಾಲಸೋಲ  ತೀರಿಸೋದು ಹೇಗೆ? ರೈತಾಪಿ ಕುಟುಂಬದಿಂದ ಬಂದ ನನಗೆ ನನ್ನ ಸುತ್ತಲೂ ದುಡಿ ದುಣ್ಢುವ ಸಾಮಾನ್ಯ ಜನರ, ಬಡವರ ಸಾಮಾಜಿಕ ಅಧ್ಯಯನ ಹಾಗೂ ಅವರ ಆರ್ಥಿಕ ಸಾಮಾಜಿಕ ಸ್ಥಿತಿ ಗತಿಯ ಮೇಲೆ  ಸದಾ ಒಂದು ಕಣ್ಣು ಇರುವುದರಿಂದ ಅವರ ಸಮಸ್ಯೆಗಳು ಬಹುಬೇಗ ಅರ್ಥ ಆಗುತ್ತವೆ. ಸಾಮಾಜಿಕ ಜವಾಬ್ದಾರಿ ಇರುವ ಕಮಿಟೆಡ್  ಲೇಖಕರಿಗೆ ಇದೆಲ್ಲಾ ಕಾಡೋದು ಸಹಜ . ಕಾಡಬೇಕು *ಕೂಡಾ.

    ಇಡೀ ದೇಶ ಈ ಕೊರೋನಾ ದಿಂದ ಭಯ ಪೀಡಿತ ಆಗಿದೆ.ವ್ಯವಹಾರಗಳು,ಸಂಚಾರ ಸಾರಿಗೆ,ಜನ ಜೀವನ ಎಲ್ಲಾ ಬಂದ ಆಗಿವೆ. ಉಳ್ಳವರು ಹೇಗಾದರೂ ಬದುಕುವರು.ಆದರೆ ನೊಂದವರ ಪರ ಇರುವ ಲೇಖಕನಿಗೆ ಇಲ್ಲಿ ರೋಗದಿಂದ ಬಳಲುವವನಿಗೆ, ಇಲ್ಲಿಯ ಆಸ್ಪತ್ರೆಗಳಲ್ಲಿ ಬೆಡ್, ಔಷದಿ, ಆಕ್ಸಿಜನ್ ಸಿಗದೇ ಸತ್ತವರ ಶವಗಳು, ಅವರ ಕುಟುಂಬದವರ, ಆಶ್ರಿತರ ಸಂಕಟಗಳು ಕಾಡಬೇಕು. ಸರಿಯಾಗಿ ಶವ ಸಂಸ್ಕಾರ ಸಹ ಮಾಡಲಾಗದ, ಹೆಣಕೆ ಹೆಗಲು ಕೊಡಲಾಗದ ಅಸಹಾಯ ಕ್ಷಣದಲ್ಲಿ ಕವಿ ಲೇಖಕ ಒಟ್ಟಾರೆ ಬರಹಗಾರ ಜನರ ಸಮಸ್ಯೆಗಳಿಗೆ ಮಿಡಿದು ವ್ಯವಸ್ಥೆಯನ್ನು ಎಚ್ಚರಿಸುವ ಪ್ರಯತ್ನ ಮಾಡಬೇಕು .ಇಂತಹ ಸಂದರ್ಭದಲ್ಲಿ ಸಹ ಜಾಗತಿಕ ಮೆಡಿಕಲ್ ಲಾಭಿ ಇಡೀ ದೇಶವನ್ನು ಕೊಳ್ಳೆ ಹೊಡೆಯುವ ಕುತಂತ್ರಕ್ಕೆ ತೊಡಗಿದ್ದು, ಹಣದ ಹಪಾಹಪಿ, ಬೆಡ್ ಬುಕ್ಕಿಂಗ್, ಕಾಳಸಂತೆಯಲ್ಲಿ ಔಷದಿ ಇಂಜೆಕ್ಷನ್ ಮಾರೋದು. ಇಂತಹ ಕರಾಳ ಧಂಧೆಗಳಿಗೆ ಪ್ರತಿಭಟಿಸಿ ಪ್ರಜ್ಞಾವಂತ ಜನರ ಗಮನಕ್ಕೆ ತಂದು ಎಚ್ಚರಿಸುವ ಕೆಲಸ ಮಾಡಬೇಕು.

     ಏಕ ಕಾಲಕ್ಕೆ ಕವಿ ಲೇಖಕ ತನ್ನ ಸುತ್ತಲಿನ ಪರಿಸರದ  ಜನತೆಗೆ ದೈರ್ಯ ತುಂಬಿ ಅವರ ನೈತಿಕ ಮನೋಬಲ  ಹಾಗೂ ದೈಹಿಕ ದೃಢತೆ ಹೆಚ್ಚಿಸಿ ಸಮಸ್ಯೆಯನ್ನು  ಎದುರಿಸುವ ಬಲ ತುಂಬಿದಾಗ ಮಾತ್ರ ಆತನ ಗಜಲ್  ಕಾವ್ಯ,ಅಥವಾ ಯಾವುದೇ ಬರಹದ ಹಿಂದಿನ ಕಥನ  ಹಾಗೂ ಕಾಳಜಿಗೆ ಒಂದು ಅರ್ಥ ಬರುತ್ತದೆ  ಎನ್ನುವುದರ ಆಶಯ ಈ ಗಜಲ್ ಹಿಂದಿನ ಕಥನವಾಗಿದೆ .ಆ ಹಿನ್ನೆಲೆಯಲ್ಲಿ ಈ ಗಜಲ್ ತನ್ನ ಕೆಲಸ ಸಮರ್ಪಕವಾಗಿ ನಿರ್ವಹಿಸಿದೆ ಎಂದು ನನ್ನ ಮನಸ್ಸು ಎದೆ ತಟ್ಟಿ ಹೇಳುತ್ತದೆ.

ಯಾತಕ್ಕೆ ಈ ದಿನಗಳು ಬಂದವೋ..ಮುಂಚಿನ ಆರೋಗ್ಯಯುತ ಸದಾ ಚೆಂದನೆಯ ದುಡಿದುಣ್ಣೋ ದಿನಗಳು ಮತ್ತೆ ಮರಳಲಿ. ಆ ಸೃಷ್ಟಿಕರ್ತನೇ ಇದನ್ನು ಇರುವ ವ್ಯವಸ್ಥೆಯ ಮೂಲಕ ನಿಯಂತ್ರಿಸಲಿ ಎಂದು ಇಲ್ಲಿಯ ಜನಪರ ಕವಿಯಾದವ ಕೇಳಿಕೊಂಡು ಎಲ್ಲರಿಗೂ ಒಳ್ಳೆಯ ಆರೋಗ್ಯ, ಜೀವ ಇದ್ದರೆ ಜೀವನ ಅದು ಕಾಪಾಡಿಕೊಳ್ಳಿ ಅಂತ ಕೋರಿಕೊಂಡು ಇದನ್ನು ಚಿಂತಿಸಿ ಬರೆಯಲು ಹಚ್ಚಿದ ಮಿತ್ರರಿಗೂ, ಓದಿದ ನಿಮಗೆಲ್ಲಾ ವಂದಿಸಿ ಮುಗಿಸುವೆ.

***************************

ಸಿದ್ಧರಾಮ ಹೊನ್ಕಲ್

Leave a Reply

Back To Top