ಬದುಕುವ ಕಲೆ

ಮಕ್ಕಳ ಕಥೆ

ಬದುಕುವ ಕಲೆ

ಸುಧಾ ಭಂಡಾರಿ

blue paint splash

ಸೋಮನಹಳ್ಳಿ ಎಂಬುದೊಂದು ಹಳ್ಳಿ.  ಹಸಿರಿನಿಂದ ಕಂಗೊಳಿಸುವ ಗುಡ್ಡ- ಬೆಟ್ಟ ಕಾಡು- ಮೇಡು, ನದಿ- ಬಯಲುಗಳಿಂದ ಸುತ್ತುವರಿದ ಸಂತಸದ ಒಡಲು. ನಗರ ಪ್ರದೇಶದಿಂದ ಹತ್ತು- ಹದಿನೈದು ಕಿಲೊಮೀಟರ್ ದೂರದಲ್ಲಿರುವ ಪರಿಶುದ್ಧ ಗ್ರಾಮೀಣ ಸೊಗಡಿನ ಅಡಿಕೆ – ತೆಂಗಿನ ಮಡಿಲು; ಸಹ್ಯಾದ್ರಿಯ ತೊಪ್ಪಲು. ಇದು ಹಿಂದೂ,ಕ್ರಿಶ್ಚಿಯನ್‌, ಜೈನ ಧರ್ಮಗಳ ಶಾಂತಿಯ ತೋಟ. ಹೀಗಾಗಿ  ಸೋಮನಹಳ್ಳಿ ಪ್ರಕೃತಿ ಪ್ರಿಯರ ಪಾಲಿನ ನೆಚ್ಚಿನ ತಾಣ. ಯಾವ ಸ್ಪರ್ಧೆ ಇಲ್ಲ; ಯಾರಿಗೂ ತೋರಿಕೆಯ ಹೆಚ್ಚುಗಾರಿಕೆ ಇಲ್ಲ. ಎಲ್ಲರೂ ಭೂಮ್ತಾಯಿಯನ್ನೆ ನೆಚ್ಚಿ ಬದುಕು ಕಟ್ಟಿಕೊಂಡಿದ್ದಾರೆ; ಪ್ರೀತಿಯನ್ನೆ ಹಾಸು ಹೊದ್ದುಕೊಂಡಿದ್ದಾರೆ . ಆದರೂ ಇತ್ತೀಚೆಗೆ ನಗರ ಪ್ರದೇಶದ ಹಳದಿ ಬಸ್ಸುಗಳು ಹಳ್ಳಿಗಾಡಿನ ರಸ್ತೆಗಳಲ್ಲಿ ಧೂಳೆಬ್ಬಿಸುತ್ತಿರುವುದರ ಜೊತೆಗೆ ಇಲ್ಲಿನ ಮಣ್ಣಿನ ಮಕ್ಕಳನ್ನು ಮಾತೃಭಾಷಾ ಶಿಕ್ಷಣದಿಂದ ದೂರ ಮಾಡಿ ಇಂಗ್ಲಿಷ್ ವ್ಯಾಮೋಹದ ವ್ಯಾಧಿ ಹುಟ್ಟು ಹಾಕುತ್ತಿರುವುದು ಊರಿನ ಅನೇಕ ಹಿರೇಕರನ್ನು ಚಿಂತೆಗೀಡು ಮಾಡಿದೆ.

             ಸೋಮನಹಳ್ಳಿಯ ಕೇಂದ್ರಸ್ಥಳದಲ್ಲಿ ಒಂದು ಹಿರಿಯ ಪ್ರಾಥಮಿಕ ಶಾಲೆ ,; ಅದಕ್ಕೆ ಹೊಂದಿಕೊಂಡಂತೆ ಅಲ್ಲಿಯೆ ಒಂದು ಪ್ರೌಢ ಶಾಲೆ ಕೂಡ ಇದೆ. ಹೀಗಾಗಿ ಅಲ್ಲಿನ ಸುತ್ತಮುತ್ತಲಿನ ಮಕ್ಕಳ ಪಾಲಿಗೆ ಅಕ್ಷರ ದೇಗುಲದಂತಿರುವ ಈ ಸರ್ಕಾರಿ ಶಾಲೆಗಳು ಮಕ್ಕಳ ಜ್ಞಾನದ ಹಸಿವನ್ನು ನೀಗಿಸುತ್ತ  ಬೆಳಗುತ್ತಿವೆ  .  ‌‌‌‌‌‌‌‌‌‌‌‌‌‌‌‌‌‌‌       ‌‌      ‌‌‌‌‌‌‌‌   ‌‌‌‌ ‌‌‌‌ ‌

ಇದೇ  ಸರ್ಕಾರಿ ಶಾಲೆಯಲ್ಲಿ  ಒಟ್ಟಿಗೆ ಏಳನೆ ತರಗತಿಯವರೆಗೆ ಓದಿದ ಮೂವರು ಗೆಳತಿಯರು ಸೌಮ್ಯ, ಜ್ಯೋತಿ , ವಿದ್ಯಾ. ಆದರೆ ಮೂವರ ಮನೆಯ ಪರಿಸ್ಥಿತಿ , ನಡವಳಿಕೆ ಮಾತ್ರ ವಿಭಿನ್ನ. ಜ್ಯೋತಿಯ ತಂದೆ – ತಾಯಿ ಇಬ್ಬರೂ ನಗರದಲ್ಲಿ ಸರ್ಕಾರಿ ಕೆಲಸ ಮಾಡುವ ಉದ್ಯೋಗಸ್ಥರು.ಜ್ಯೋತಿ ಒಬ್ಬಳೆ ಮುದ್ದಿನ ಮಗಳು. ಹೀಗಾಗಿ ಮಗಳು ಚೆನ್ನಾಗಿ ಓದಿ ಮುಂದೆ ಎಂಜನಿಯರಿಂಗ್ ಮುಗಿಸಿ ಲಕ್ಷ- ಲಕ್ಷ ಸಂಪಾದನೆ ಮಾಡಬೇಕೆಂದು ಮಹದಾಸೆ .ಅದಕ್ಕೆ ಏಳನೆ ತರಗತಿ ಮುಗಿಯುತ್ತಿದ್ದಂತೆ  ಪೇಟೆಯ ಕಾನ್ವೆಂಟ್ ಗೆ ಸೇರಿಸಿದ್ದರು. ಸದಾ ಓದು – ಓದು ಎನ್ನುವ ಒತ್ತಡ ಅವಳ ಮೇಲೆ. ವಿದ್ಯಾಳ ಅಮ್ಮ ಅದೆ ಸೋಮನ ಹಳ್ಳಯಲ್ಲಿರುವ ಗ್ರಾಮೀಣ ಗ್ರಂಥ ಪಾಲಕಿ. ತಂದೆಯದು ಮನೆಯ ತೋಟದ ಕೆಲಸ. ವಿದ್ಯಾಳ ಮನೆಯಲ್ಲಿ ಅವಳಿಗೆ ಅಂತಹ ಕಟ್ಟುಪಾಡುಗಳಿಲ್ಲ. ಇಬ್ಬರೂ ಮಕ್ಕಳೂ ಕಲಿಯಲು ಚೆನ್ನಾಗಿಯೇ ಇದ್ದಾರೆ. ಇದಕ್ಕಿಂತ  ಅವರ ಮನೆಯಲ್ಲಿ ಮನೆಗೆಲಸ ,ಸಂಗೀತ ,ಕಲೆ ಎಲ್ಲದಕ್ಕೂ ಪ್ರಾಧಾನ್ಯತೆ. ಹೀಗಾಗಿ ಅವರು ಮಗಳನ್ನು ಐದನೆ ತರಗತಿ ಮುಗಿಯುತ್ತಿದ್ದಂತೆ ಸಂಗೀತ ಕ್ಲಾಸಿಗೂ ಸೇರಿಸಿದ್ದಾರೆ. ರಜಾ ದಿನಗಳಲ್ಲಿ ಓದಲು ಅಮ್ಮ ಒಳ್ಳೆಯ ಪುಸ್ತಕಗಳನ್ನು ಗ್ರಂಥಾಲಯದಿಂದ ತರುತ್ತಾರೆ. ಹೀಗಾಗಿ ಮಕ್ಕಳಿಗೆ ಓದುವ ಹವ್ಯಾಸವೂ ರೂಢಿಯಾಗಿದೆ. ಹೀಗಾಗಿ ವಿದ್ಯಾ ಸದಾ ಲವಲವಿಕೆಯ ಅಕ್ಷಯ ಪಾತ್ರೆ. ಬದುಕನ್ನು ಪ್ರೀತಿಸುತ್ತಾಳೆ; ಎಲ್ಲರಲ್ಲೂ ಒಂದಾಗಿ ಬೆರೆಯುತ್ತಾಳೆ.ಒಟ್ಟಾರೆ ಮಕ್ಕಳು ತಮ್ಮ ಕಾಲಿನ ಮೇಲೆ ತಾವು ನಿಂತು ಎಲ್ಲರಿಗೂ ಬೇಕಾದವರಾಗಿ ಬಾಳಬೇಕು ಎಂಬುದು ಹೆತ್ತವರ ಆಸೆ.  ವಿದ್ಯಾ ಪಕ್ಕದ ಹೈಸ್ಕೂಲ್ ನಲ್ಲಿಯೆ ಓದು ಮುಂದುವರಿಸಿದ್ದಾಳೆ. ಇನ್ನು ಸೌಮ್ಯ ಹೆಸರಿಗೆ ತಕ್ಕಂತೆ ತುಂಬಾ ಸೌಮ್ಯ. ಅಮ್ಮ ಇಲ್ಲ.;  ಅಪ್ಪ ಅವರಿವರ ಮನೆಯ ಕೂಲಿ ಮಾಡಿ  ಜೀವನ ಸಾಗಿಸುತ್ತಾರೆ. ಮನೆಯಲ್ಲಿ ವಯಸ್ಸಾದ ಅಜ್ಜಿ  ಇದ್ದಾರೆ. ಅಣ್ಣ ಹತ್ತನೆ ತರಗತಿಯಲ್ಲಿ ಫೇಲಾಗಿ ಗೋವಾದಲ್ಲಿ ಸಂಬಂಧಿಗಳ ಬೇಕರಿಯಲ್ಲಿ ಕೆಲಸಕ್ಕೆ ಸೇರಿದ್ದಾನೆ. ಸೌಮ್ಯ ಕೂಡ ಕಲಿಕೆಯಲ್ಲಿ ಹಿಂದೆ. ನೆನಪಿನ ಶಕ್ತಿ ತುಂಬಾ ದುರ್ಬಲ. ಅವಳೂ ಅಲ್ಲಿಯೇ ಓದು ಮುಂದುವರಿಸಿದ್ದಾಳೆ. ಚಿತ್ರವನ್ನು ತುಂಬಾ ಚೆನ್ನಾಗಿ ಬಿಡಿಸುತ್ತಾಳೆ.  ಚಿತ್ರಕಲೆಯಲ್ಲಿ ಹಲವು ಬಹುಮಾನ ಪಡೆದಿದ್ದಾಳೆ . ಆದರೆ ಪ್ರತಿ ಬಾರಿಯೂ ಗಣಿತ , ವಿಜ್ಞಾನ ಹೀಗೆ ಒಂದಾದರೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು ನೊಂದುಕೊಳ್ಳುತ್ತಾಳೆ. ಆಗೆಲ್ಲ ವಿದ್ಯಾಳೆ ಅವಳಿಗೆ ಧೈರ್ಯ ಹೇಳುವಳು. ಈ ವರ್ಷ ಮೂವರೂ ಹತ್ತನೆ ತರಗತಿ. ಪರೀಕ್ಷೆ ಹತ್ತಿರ ಬರುತ್ತಿದೆ. ಎಲ್ಲರೂ ಚೆನ್ನಾಗಿಯೆ ಪ್ರಯತ್ನ ನಡೆಸಿದ್ದಾರೆ.ಸೌಮ್ಯಾಳ ಪಾಲಿಗಂತೂ ವಿದ್ಯಾನೆ ಭರವಸೆ, ಆಸರೆ ಎಲ್ಲವೂ ಆಗಿದ್ದಳು. ಜ್ಯೋತಿ ತೊಂಬತೈದಕ್ಕಿಂತ ಹೆಚ್ಚು ಶೇಕಡಾ ಅಂಕ ಪಡೆಯಬೇಕೆಂಬ  ಕಟ್ಡಪ್ಪಣೆ ಮನೆಯಲ್ಲಿ. ಹೀಗಾಗಿ ಉರು ಹೊಡೆದು ಓದಿದ್ದೆ ಓದಿದ್ದು. ಇನ್ನೇನು ಹತ್ತು ದಿನ ಬಾಕಿ ಇದೆ.     ‌‌‌‌‌  ‌‌‌‌‌  ‌‌   ‌  ‌‌  ‌                  

ಚೀನಾ ದೇಶದಲ್ಲಿ ಹುಟ್ಟಿದ ಕೊರೊನಾ ಅನ್ನುವ ಬಿರುಗಾಳಿ ಶೀಘ್ರವಾಗಿ ಇಡೀ ಜಗತ್ತಿನ್ನೆ ವ್ಯಾಪಿಸಿ ಕರ್ನಾಟಕಕ್ಕೂ ಹಬ್ಬಿದ ಬಿಸಿ ಬಿಸಿ ಸುದ್ದಿ. ದಿನೆ – ದಿನೆ ಆತಂಕ. ಇದ್ದಕ್ಕಿದ್ದಂತೆ ಒಂದರಿಂದ ಒಂಬತ್ತನೆ ತರಗತಿಗಳು ಮುಂದೂಡಲ್ಪಟ್ಟವು. ಹತ್ತನೆ ತರಗತಿ ಮಕ್ಕಳ ಎದೆಯಲ್ಲಿ ಢವಢವ. ಮರುದಿನವೆ ಹತ್ತನೆ ತರಗತಿ ಮಕ್ಕಳ ಪರೀಕ್ಷೆಯೂ ಮುಂದೂಡಲ್ಪಟ್ಟಿದೆ ಎನ್ನೊ ಸುದ್ದಿ ಟಿವಿ ಪರದೆ ಮೇಲೆ ಬಿತ್ತರಗೊಳ್ಳುತ್ತಿದ್ದಂತೆ ಚೆನ್ನಾಗಿ ಓದಿ ಇನ್ನೇನು ಬರೆಯುವುದೊಂದೆ ಬಾಕಿ ಅಂದುಕೊಂಡವರ ಉತ್ಸಾಹವೆಲ್ಲಾ ಬಲೂನ್ ಗೆ ಸೂಜಿ ಚುಚ್ಚಿದಂತೆ ಠುಸ್ಸಾಗಿ ಹೋಯ್ತು. ಎಲ್ಲರ ಮನೆಯಲ್ಲೂ ಆತಂಕ. ವಿದ್ಯಾ ನಿರುಮ್ಮಳವಾಗಿಯೆ ಇದ್ದಳು. ಮಾರನೆ ದಿನ ಸೌಮ್ಯಾಳ ಮನೆಗೆ ಹೋಗುತ್ತಿದ್ದಂತೆ ಅವಳು ತುಂಬಾ ಬೇಸರದಲ್ಲಿದ್ದಳು. ಯಾಕೆ ಎಂದು ವಿದ್ಯಾ ವಿಚಾರಿಸಿದಾಗ ‘ ವಿದ್ಯಾ ನಂಗೆ ತುಂಬಾ ಹೆದ್ರಿಕೆ ಆಗ್ತದೆ. ಇನ್ನೂ ಎಷ್ಟು ದಿನ ಪರೀಕ್ಷೆ ಮುಂದೆ ಹೋಗ್ತದ್ಯೋ ಏನೊ. ನಂಗಂತೂ ಒಂಚೂರು ಓದಿದ್ದು ನೆನಪೆ ಇರುದಿಲ್ವೆ. ನಾನು ಫೇಲಾಗುದು ಗ್ಯಾರಂಟಿ’ ಎಂದು ಕಣ್ಷೀರಾದಳು. ಅದಕ್ಕೆ ವಿದ್ಯಾ ಅಷ್ಟೇ ಸೌಮ್ಯವಾಗಿ’ ಅಯ್ಯೊ ಹುಚ್ಚಿ ,ಇಷ್ಟಕ್ಕೆಲ್ಲ ಅಳುದು ಎಂತಕೆ? ನಾನಿಲ್ವ ನಿನ್ನ ಸಹಾಯಕ್ಕೆ. ನೀನೇನು ಹೆದ್ರಬೇಡ. ನಾವಿಬ್ರು ಇನ್ ಮುಂದೆ ಕಮೈಂಡ್ ಸ್ಟಡಿ ಮಾಡ್ವ. ನಾ ನಿಂಗೆ ಪ್ರಶ್ನೆ ಕೇಳ್ತೆ; ನೀ ನಂಗೆ ಪ್ರಶ್ನೆ ಕೇಳು. ಇಬ್ರಿಗೂ ಅನುಕೂಲ ಅಲ್ವಾ . ಬಾ ಬಾ’ ಎನ್ನುತ್ತಾ ಸಮಾಧಾನಿಸಿದಳು. ಇಡೀ ದೇಶ ಕೊರೊನಾ ಲಾಕ್ ಡೌನ್ ಗೆ ಒಳಪಟ್ಟಿತು. ಮೊದಲು ಒಂದು ವಾರ, ಹೀಗೆ ಮುಂದುವರಿಯುತ್ತಲೆ ಹೋಯಿತು. ಯಾರ ಬಾಯಲ್ಲಿ ಕೇಳಿದರೂ ಅದೆ ಜಪ. ಟಿವಿ ನೋಡಿದರೆ ಭಯ ಆಗ್ತಿತ್ತು. ಸಾವಿರಾರು ಜನ ದೇಶದಲ್ಲೂ ಸತ್ತರು. ಬಸ್ದಿಲ್ಲ; ಅಂಗಡಿ ಇಲ್ಲ.ಎಲ್ಲಾ ಬಂದ್ ಬಂದ್. ಈ ನಡುವೆ ಒಂದಿನ ಸೌಮ್ಯಾಳ ಅಪ್ಪ ಸೊಂಟ ನೋವು ಅಂತ ಮಲಗಿದಲ್ಲಿಂದ ಏಳುತ್ತಿರಲಿಲ್ಲ. ಮನೆಯಲ್ಲಿ ಮತ್ತಾರೂ ಇಲ್ಲ. ಅಜ್ಜಿ , ಸೌಮ್ಯ ಇಬ್ಬರೆ.ಅವಳ ಅಣ್ಣ ಗೋವಾದಿಂದ ಬರಲಾರದೆ ಅಲ್ಲೆ ಉಳಿದಿದ್ದ. ಸೌಮ್ಯ ಕಂಗಾಲಾಗಿ ಅಳಲು ಶುರು ಮಾಡಿದ್ದಳು. ಇದನ್ನು ನೋಡಿದ ವಿದ್ಯಾ ಮನೆಗೆ ಬಂದು ತನ್ನ ಡೈರಿಯಲ್ಲಿ ಬರೆದಿಟ್ಡಿದ್ದ ತಮ್ಮ ಶಾಲೆಗೆ ಆರೋಗ್ಯ ತಪಾಸಣೆಗೆ ಬಂದಿದ್ದ ವೈದ್ಯರ ನಂಬರ್ ಹುಡುಕಿ ತೆಗೆದು ಕರೆ ಮಾಡಿ ತಿಳಿಸಿದಳು. ವೈದ್ಯರು ಇವಳ ಧೈರ್ಯ, ಸಮಯ ಪ್ರಜ್ಞೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಮರು ದಿನ ಬಂದು ತಪಾಸಣೆ ಮಾಡಿ ಮಾತ್ರೆ ನೀಡಿ ಹೋದರು. ಸೌಮ್ಯಾಳ ತಂದೆ ಮತ್ತೆ ಮೊದಲಿನಂತಾದರು.ಊರಲ್ಲಿ ಎಲ್ಲರೂ ವಿದ್ಯಾಳ  ಜಾಣ್ಮೆಯನ್ನು ಹಾಡಿ ಹೊಗಳಿದರು. ಬಂದ ವೈದ್ಯರು ಅಕ್ಕ- ಪಕ್ಕದ ವೃದ್ಧರನ್ನೂ ಪರಿಶೀಲಿಸಿ ಬೇಕಾದ ಮಾತ್ರೆ, ಎಚ್ಚರಿಕೆ ನೀಡಿ ಹೋದರು.

               ಹೀಗೆ ವಿದ್ಯಾ ಸೌಮ್ಯಾಳೊಂದಿಗೆ ದಿನವೂ ಒಂದು ಗಂಟೆ ಅಭ್ಯಾಸ, ಮನೆಯಲ್ಲಿ ಮುಂಜಾನೆ ಒಂದು ಗಂಟೆ ಅಭ್ಯಾಸ; ಉಳಿದಂತೆ ಅಮ್ಮನಿಗೆ ಮನೆಗೆಲಸದಲ್ಲಿ ನೆರವಾಗುವುದು , ಮಳೆಗಾಲದ ಹಪ್ಪಳ- ಸಂಡಿಗೆ ತಯಾರಿಯಲ್ಲಿ  ಖುಷಿಯಿಂದ ಅಮ್ಮನೊಂದಿಗೆ  ಕೈ ಜೋಡಿಸಿದ್ದು, ಅಪ್ಪ, ಅಣ್ಣನ ಜೊತೆ ತೋಟಕ್ಕೆ, ಹೊಳೆ ಬದಿಗೆ ಅಡ್ಡಾಡುತ್ತಾ ,ಸಂಜೆಯಾಗುತ್ತಲೆ ಭಜನೆ ಹಾಡುವುದು ಹೀಗೆ ರಜೆಯನ್ನು ಚೆನ್ನಾಗಿ ಆನಂದಿಸಿದಳು.  ಜ್ಯೋತಿಯ ಮನೆ ಪರಿಸ್ಥಿತಿಯೆ ಬೇರೆ. ಈಗ ಅಪ್ಪ- ಅಮ್ಮ ಇಬ್ಬರೂ ಮನೆಯಲ್ಲಿ. ಅವಳು ಟಿವಿ ನೋಡುತ್ತಾಳೆಂದು ಒಂದೆರಡು ನ್ಯೂಸ್ ಚಾನೆಲ್ ಬಿಟ್ಟರೆ ಬೇರೇನೂ ಹಾಕಿಸಿಲ್ಲ. ಹೊರಗೆ ಹೋಗಲೂ ಬಿಡುತ್ತಿರಲಿಲ್ಲ. ಒಮ್ಮೆ ಅಪ್ಪ,ಇನ್ನೊಮ್ಮೆ ಅಮ್ಮ ಪ್ರಶ್ನೆ ಕೇಳುವರು. ಮರೆತು ಉತ್ತರಿಸದಿದ್ದಾಗ ಚೆನ್ನಾಗಿ ಬೈಯ್ಯುವರು’ ಏನೆ ನೀನು, ಹೀಗಾದ್ರೆ ನೀನು ಎಂಜನೀಯರಿಂಗ್ ಓದುವುದು ಕನಸಿನಲ್ಲಿಯೆ. ಇಷ್ಟೆಲ್ಲಾ ಖರ್ಚು ಮಾಡಿ ಕಾನ್ವೆಂಟ್ ಗೆ ಹೋಗಿ ಏನು ಪ್ರಯೋಜನ . ನಿನ್ನ ಪ್ರಯತ್ನ ಸಾಲದು. ಇನ್ನೂ ಹೆಚ್ಚಿನ ಸಮಯ ಓದು ‘ ಎಂದು ಪದೆ ಪದೆ ಹೇಳುತ್ತಿದ್ದರು.     ‌‌‌‌ ‌‌‌ ‌  ‌‌‌‌‌‌‌‌‌‌ ‌‌‌   ‌ ‌‌ ‌‌  ‌‌‌    ‌‌‌‌‌‌‌‌‌‌‌    ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಇರಲೇಬೇಕಲ್ಲ! ಕೊರೊನಾ ಕಂಟಕವನ್ನು ನಿಭಾಯಿಸುವಲ್ಲಿ ಭಾರತ ಯಶಸ್ವಿಯಾಯಿತು. ಹೆಚ್ಚಿನ ಸಾವು , ಸೋಂಕು ಇಲ್ಲದೆ ಭಾರತದ ದಿಟ್ಟ, ಕಟ್ಟುನಿಟ್ಟಿನ  ನಡೆಗೆ ಜಗತ್ತಿನಲ್ಲಿಯೇ ಮೆಚ್ಚುಗೆ ವ್ಯಕ್ತವಾಯಿತು. ಮತ್ತೆ ಎಲ್ಲವೂ ಮೊದಲಿನಂತಾದವು. ಪರೀಕ್ಷಾ ವೇಳಾಪಟ್ಟಿ ಪ್ರಕಟವಾಯಿತು. ಯಾವ ತೊಂದರೆಯೂ ಇಲ್ಲದೆ ಪರೀಕ್ಷೆಯೂ ನಡೆಯಿತು. ವಿದ್ಯಾ, ಸೌಮ್ಯಾ ಒಟ್ಟಾಗಿ ಪರೀಕ್ಷೆಗೆ ಹೋಗಿ ಬಂದರು. ಸೌಮ್ಯಾಳಿಗೆ ಎಲ್ಲಾ ರೀತಿಯ  ಧೈರ್ಯ, ಮುನ್ನೆಚ್ಚರಿಕೆ ವಿದ್ಯಾ ನೀಡಿದ್ದಳು. ಹೀಗಾಗಿ ಇಬ್ಬರೂ ಗೆಲುವಾಗಿದ್ದರು. ಪರೀಕ್ಷೆ ಮುಗಿದು ಮೂರು ವಾರ ಕಳೆಯುವುದರೊಳಗೆ ರಿಸಲ್ಟ್ ಕೂಡ ಬಂದೇ ಬಿಡ್ತು. ವಿದ್ಯಾ ೮೭% ಅಂಕ ಪಡೆದು ಸಂಭ್ರಮಿಸಿದ್ದರೆ ಗೆಳತಿ ಸೌಮ್ಯ ೬೧% ಅಂಕ ಪಡೆದು ಫರ್ಸ್ಟ್ ಕ್ಲಾಸಿನಲ್ಲಿ ಪಾಸಾಗಿದ್ದು ಅವಳಿಗೆ ಇನ್ನಷ್ಟು ಖುಷಿ. …ಜ್ಯೋತಿ ೮೯% ಅಂಕ ಪಡೆದಿದ್ದಳು. ಆದರೆ ಅವರ ಅಪ್ಪ- ಅಮ್ಮಂಗೆ ಅವರ ಕನಸು ಈಡೇರಿಲ್ಲ ಅಂತ ಒಂಚೂರೂ ಸಮಾಧಾನ ಇಲ್ಲ. ಮಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು. ವಿದ್ಯಾಳ ಮನೆಯಲ್ಲಿ ಇದಕ್ಕೆ ತದ್ವಿರುದ್ಧ. ಅವರ ಮನೆಯಲ್ಲಿ ಹಬ್ಬ.’!! “ವಿದ್ಯಾ ನಾವೇ ನಿನ್ನಿಂದ ಇಷ್ಟು ಮಾರ್ಕ್ಸ ನಿರೀಕ್ಷಿಸಿರಲಿಲ್ಲ.ತುಂಬಾ ಒಳ್ಳೆಯ ಮಾರ್ಕ್ಸ ತೆಗಿದಿದ್ದೀಯಾ. ನಿನ್ನ ಗೆಳತಿನೂ ಒಳ್ಳೆ ಪ್ರಯತ್ನ ಮಾಡಿದ್ದಾಳೆ.ಇವತ್ರು ಮನೆಯಲ್ಲಿ ಸ್ವೀಟ್ ಏನಾದ್ರೂ ಮಾಡೋಣ.ಹೋಗಿ ಸೌಮ್ಯಾಳಿಗೆ ಹೇಳು.ಪಾಪ ಅವ್ಳು. ಆಮೇಲೆ ನಿಧಾನಕ್ಕೆ ಯೋಚಿಸಿ ನಿಂಗೆ ಯಾವ ಕೋರ್ಸ ಇಷ್ಟ ಅಂತ ಯೋಚಿಸಿದ್ರಾಯ್ತು’ ಎಂದರು. ವಿದ್ಯಾ ಹಾಡೊಂದನ್ನು ಗುನುಗುತ್ತಾ ಐದು ರೂಪಾಯಿ ಚಾಕಲೇಟ್ ತೆಗೆದುಕೊಂಡು ಸೌಮ್ಯಾಳ ಮನೆ ಕಡೆ ಓಡಿದಳು. …

********************

One thought on “ಬದುಕುವ ಕಲೆ

Leave a Reply

Back To Top