ವಾರದ ಕವಿತೆ

ನಿನ್ನನ್ನೇ ಉಸಿರಾಡುತ್ತಿದ್ದೇನೆ

Knit, Knitting Needles, Wool

ಈಗೀಗ ನಿನ್ನನ್ನೇ ಉಸಿರಾಡುವುದು
ನನ್ನ ಚಾಳಿಯಾಗಿದೆ ;
ಅದು ಎದೆಯ ಏರಿಳಿತವಾಗಿದೆ

ಪ್ರೇಮವನ್ನೇ ಕುಡಿದು ಬದುಕುವವ ಎಂದು
ಅರೆ ಮಿಶ್ರಿತ ಹಾಸ್ಯ ವ್ಯಂಗ್ಯದಲ್ಲಿ
ಜಂಜಡದ‌ ಜಗತ್ತು ಕರೆದರೂ

ಬೆರಳ ತುದಿಗಳಿಗೆ ಪ್ರೇಮದ ದುಃಖ ಅಂಟಿದೆ
ನೋಡು ;
ಅಪರೂಪಕ್ಕೆ ಒಮ್ಮೆ ಕಂಡಾಗಲೂ ಕೆನ್ನೆಗಳ ಸವರಲಾಗಲಿಲ್ಲ :
ಅವುಗಳ ಆಹ್ವಾನ ನಿನ್ನ ತುಟಿಯ ಮೇಲಿದ್ದರೂ ; ಅದು ಶಬ್ದವಾಗಿ ಹೂವಿನಂತೆ ಸದ್ದಿಲ್ಲದೆ ನಕ್ಕರೂ ನಿನಗದನ್ನು ಹೇಳಲಾಗಲಿಲ್ಲ ;

ಈಗೀಗ ಇಬ್ಬರೂ ಸೋತು ಹೋದ ಹಾಗೂ ಭರವಸೆಯ ಮಾತುಗಳನ್ನು ಆಡುತ್ತೇವೆ
ಅಪರೂಪಕ್ಕೆ ಸಿಕ್ಕಾಗ

ಎಷ್ಟು ವಿಚಿತ್ರ ನೋಡು ;
ಹೃದಯದಲ್ಲಿ ಜನಿಸಿದ್ದನ್ನು ಹೇಳಲಾಗುವುದೇ ಇಲ್ಲ ಕೊನೆಯತನಕ …

ಇಲ್ಲಿ
ದಂಡೆಯಲ್ಲಿ ಎಲ್ಲವೂ ರೂಪಕಗಳೇ
ಅಲೆಗಳು ,ಅವುಗಳ ದಣಿಯದ ಕುಣಿತ
ಮುಗಿಯದ ದನಿ, ದಂಡೆಗೆ ಸದಾ ನಮಿಸುತ್ತಲೇ
ವಿನೀತಗೊಳ್ಳುತ್ತಾ, ವಿನಯವೇ ಆಗುತ್ತವೆ

ಆಡದ ಮಾತಿಗೆ
ಮುಂದೆಂದೋ ಸಂಭವಿಸಬಹುದಾದ ಮೌನಕ್ಕೆ
ಹಠಾತ್ ತಿರುವು ಕವಿತೆ – ಕತೆಗೆ

ನೀನು
ನೌಕರಿ ಮುಗಿಸಿ ಬಂದು ಅವಸರದಿ ಅಡುಗೆಗೆ ಅಣಿಯಾಗಿ ,
ಸಾರು ಕುದಿಸುತ್ತಿರುವೆ ;
ನಾನಿಲ್ಲಿ
ನಿನ್ನ ಉಸಿರಾಡುತ್ತಾ ವಿರಹಕ್ಕೆ ಶಬ್ದಗಳ ಜೊಡಿಸುತ್ತಾ ಕುಳಿತಿದ್ದೇನೆ ;
ಒಮ್ಮೊಮ್ಮೆ ಚಡಪಡಿಸುತ್ತೇನೆ
ಕ್ರಾಂತಿಗೆ ;
ಅದೆಷ್ಟು ರಮ್ಯ ರೋಮಾಂಚಕ ಪ್ರತಿಮೆಗಳನ್ನು ಕಟ್ಟದೆ ಹಾಗೆ ಬಿಟ್ಟುಕೊಟ್ಟೆವಲ್ಲ ಎಂದು

ನೀನಲ್ಲಿ ಹೂವು , ಕನಸು ; ಉಸಿರು ಜೊತೆ ಜೊತೆಯಾಗಿ ಸೇರಿಸಿ ಮಾಲೆ ಹೆಣೆಯುತ್ತಿರಬೇಕು ಈಗ

ಅವ್ವ ಕಲಿಸಿದ ಎಣೆಯುವ ಕಲೆ ನಿನಗೂ ಸಿದ್ಧಿಸಿದೆ , ಎಣೆಯುವುದು
ನಿನ್ನ ಮುಡಿಗಾಗಿ ಮಡಿಲಿಗಾಗಿ
ಕವಿತೆ ಕಟ್ಟುವ ಕಲೆಗೆ
ಹೂ ಮಾಲೆಗಳು ನಗುತ್ತಿವೆ
ಹೂವು ,ಕವಿತೆ ಹಾಗೂ ಕನಸು ಮುಖಾಮುಖಿಯಾಗಿ
ದುಃಖದ ಸಾಲುಗಳಿಗೆ ಸಾಂತ್ವಾನದ ಗಾಳಿ ಬೀಸುತ್ತಿದೆ

ನಾನು ನಿನ್ನ ಉಸಿರಾಡುತ್ತಿದ್ದೇನೆ
ನೀನಲ್ಲಿ ಕುದಿಯವ ಸಾರಿಗೆ ಉಪ್ಪುಹಾಕಿ , ಕುದಿಬಿಂದುವಿನತ್ತ ದೃಷ್ಟಿ ನೆಟ್ಟಿರುವೆ ..
************************

Knitting, Wool, Woolen, Fiber, Yarn


ನಾಗರಾಜ್ ಹರಪನಹಳ್ಳಿ

Leave a Reply

Back To Top