ಅಂಕಣ ಬರಹ

ತೊರೆಯ ಹರಿವು

ಒಬ್ಬರ ಯಶಸ್ಸು ಮತ್ತೊಬ್ಬರ ಸೋಲಲ್ಲ

Money, Coin, Investment, Business

ಯಶಸ್ಸನ್ನು ಹೇಗೆ ಅಳೆಯುವುದು? ಎನ್ನುವ ಪ್ರಶ್ನೆ ಆಗಾಗ್ಗೆ ಕೇಳಿ ಬರುತ್ತದೆ. ಈ ಪ್ರಶ್ನೆಯೇ ಸರಿಯಿಲ್ಲ ಎನ್ನುವುದು ನನ್ನ ಭಾವನೆ. 

   ನಾವು ಮರವೊಂದನ್ನು, ಹಕ್ಕಿಯೊಂದನ್ನು, ಪ್ರಾಣಿಯೊಂದನ್ನು ಅದರ ಯಶಸ್ಸು ಏನೆಂದು ಕೇಳುವೆವಾ? ಇಲ್ಲವಲ್ಲ! ಆದರೆ, ಅದೇ ಯಶಸ್ಸಿನ ಪ್ರಶ್ನೆಯನ್ನು ಮನುಷ್ಯರಿಗೆ ಕೇಳುತ್ತೇವೆ! ಪ್ರಕೃತಿಯ ಇತರೆ ಜೀವನಿರ್ಜೀವಗಳಿಗೆ ಅನ್ವಯಿಸದ ಪ್ರಶ್ನೆಯನ್ನು ಮನುಷ್ಯರಿಗೆ ಮಾತ್ರ ಕೇಳುವುದು ಏಕೆ!?

    ಮನುಷ್ಯರ ಅಭಿವ್ಯಕ್ತಿಯು ನಾನಾ ರೂಪಗಳಲ್ಲಿ ಆಗುತ್ತಿರುವುದರಿಂದ ಅವರ ಯಶಸ್ಸನ್ನು ಅಳೆಯವುದಕ್ಕೆ ತೊಡಗುತ್ತೇವೆಯಾ? ಎಂದರೆ, ಅದೂ ಅಲ್ಲವೆನಿಸುತ್ತದೆ. ಮರಗಿಡ, ನದಿ,ಬೆಟ್ಟ ಪಶುಪಕ್ಷಿಗಳಾದಿಯಾಗಿ ಸಕವ ಚರಾಚರ ಜೀವಚೇತನಗಳೂ ತಮ್ಮ ಸಾಮರ್ಥ್ಯವನ್ನು  ನಾನಾ ಬಗೆಯಲ್ಲಿ ಸಮರ್ಥವಾಗಿ ನಿರೂಪಿಸುತ್ತಿವೆಯಲ್ಲಾ!!

      ವೇಗವಾಗಿ ಓಡುವುದು, ಅಂದವಾಗಿ ಗೂಡು ಕಟ್ಟುವುದು, ಸಂಗಾತಿಯನ್ನು ವಿಶೇಷವಾಗಿ ಆಕರ್ಷಿಸುವುದು, ಚಾಣಾಕ್ಷತನದ ಬೇಟೆ, ವಿಶೇಷ ರೀತಿಯ ಮರಿಗಳ ಪಾಲನೆ, ಎಚ್ಚರಿಕೆಯ ಆಹಾರ ಸಂರಕ್ಷಣೆ, ಎತ್ತರದ ಹಾರಾಟ, ಸಾಮೂಹಿಕ ಹೋರಾಟ, ಒಂಟಿತನದ ದೈತ್ಯ ಶಕ್ತಿ, ಕಣ್ಬಿಡುತ್ತಲೇ ತಬ್ಬಲಿಯಾಗುವ ಮರಿಗಳು ತಮ್ಮಷ್ಟಕ್ಕೇ ಬದುಕು ಕಟ್ಟಿಕೊಳ್ಳುವುದು, ವಿಶೇಷ ಫಲಪುಷ್ಪಗಳನ್ನು ನೀಡುವುದು, ಮಳೆ ಬರುವವರೆಗೂ ಅಂತಃಸತ್ವ ಹಿಡಿದಿಟ್ಟುಕೊಂಡು ವರ್ಷಾನುಗಟ್ಟಲೆ ತಪಸ್ಸಿನಂತೆ ಕಾದು ಮೊದಲ ಮಳೆಗೆ ಚಿಗುರುವುದು! ನದಿಯೊಂದರ ಅಗೋಚರ ಹುಟ್ಟು, ಸುದೀರ್ಘ ಹರಿವು.., ಬೆಟ್ಟ- ಬಂಡೆಗಳು ಸಹಸ್ರಾರು ವರ್ಷಗಳ ಋತು ಪರ್ಯಟನೆಗಳ ಸಾಕ್ಷಿಯಾಗಿ ಅಚಲವಾಗಿ ನಿಂತಿರುವುದು, ಇದೆಲ್ಲವೂ ಬರಿಯ ಹುಡುಗಾಟದ ವಿಚಾರಗಳೇ? ಇಂಥ ನಿಸರ್ಗದ ವೈಚಿತ್ಯ್ರಗಳೇ ನಿಜವಾದ ಸಾಧನೆಯಲ್ಲವೇ. 

  ಆದರೂ ಮನುಷ್ಯ ವ್ಯಾಪಾರದಲ್ಲಿ ಸಾಧನೆಯನ್ನು ಅಳೆಯುವ ಮಾಪಕ ಬೇರೆಯೇ ಇದೆ. ಏಕೆಂದರೆ ಇಲ್ಲಿ ಆತ/ಕೆ ಸ್ಪರ್ಧಿಸುತ್ತಾರೆ. ಅವರ ಸ್ಪರ್ಧೆ ಇಡೀ ಜಗತ್ತಿನ ಜೊತೆಗೆ, ಪರಿಚಿತ – ಅಪರಿಚಿತರೊಡನೆ, ಸಮಾನ – ಅಸಮಾನರೊಡನೆ ನಡೆಯುತ್ತಾ ಅದು ಪ್ರತಿಷ್ಠೆಯ ಪ್ರಶ್ನೆಯಾಗಿ ನಿಲ್ಲುತ್ತದೆ.

  “ಮಾನವನ ಆಸೆಗೆ ಕೊನೆಯೆಲ್ಲಿ! ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ..!” ಈ ಹಠವೇ ಸ್ಪರ್ಧಿಸಲು ಪ್ರಚೋದಿಸುತ್ತದೆ. ಸ್ಪರ್ಧೆ ಗೆಲುವನ್ನು ಪಡೆಯಲು ಪ್ರಚೋದಿಸುತ್ತದೆ. ಸ್ಪರ್ಧೆ ಇದ್ದ ಮೇಲೆ ಫಲಿತಾಂಶ ಇರಬೇಕಾಗುತ್ತದೆ. ಆ ಫಲಿತಾಂಶವೇ ಯಶಸ್ಸಿನ ಅಳತೆಗೋಲಾಗುತ್ತದೆ. 

     ಮೊದಲೇ ಹೇಳಿದಂತೆ, ಯಶಸ್ಸಿನ ಅಳತೆಯು ಫಲಿತಾಂಶದ ಮೇಲೆ ನಿಂತಿರುತ್ತದೆ. ಫಲಿತಾಂಶವು ಸೋಲು ಗೆಲುವನ್ನು ಹೇಳುತ್ತದೆ. ಸೋಲು ಎಂದರೆ ಸಾವು ಎನ್ನುವಲ್ಲಿಗೂ; ಗೆಲುವು ಎಂದರೆ ಅಮರತ್ವ  ಎನ್ನುವವರೆಗೂ ಪ್ರಕಟಣೆ ಹೊರಡಿಸಿ, ಕತೆಗಳನ್ನು ಕಟ್ಟಿ ನಂಬಿಸಲಾಗಿದೆ. ದೇವದಾನವರ ಕಾದಾಟದ ಉದಾಹರಣೆಯೇ ಇದೆಯಲ್ಲ! ಯಾವ ತಂತ್ರ ಬಳಸಿಯಾದರೂ ಗೆಲ್ಲಬೇಕು. ಹಾಗೆ ತಂತ್ರಗಾರಿಕೆ ಇಂದ ಗೆಲ್ಲುವುದು ಮೋಸವಾಗದು. ಗೆದ್ದ ಮೇಲೆ ಸೋತವರನ್ನು ಏಮಾರಿಸುವುದು ಸುಲಭ. ಸಾವು ತಾರದ ‘ಅಮೃತ’ಕ್ಕಾಗಿ ದೇವಾದಿದೇವತೆಗಳು  ವೇಷಾಂತರ ಮಾಡಲಿಲ್ಲವೇ?

   ಸದ್ಯಕ್ಕೆ, ವಿಷಯಾಂತರ ಆಗುವುದು ಬೇಡ. ಗೆಲುವೇ ಯಶಸ್ಸು ಆಗುವುದಾದರೆ, ಮೊದಲ ಹಲವು ಹಂತಗಳ ವಿಫಲ ಪ್ರಯತ್ನಗಳನ್ನು ಏನೆಂದು ಪರಿಗಣಿಸುವುದು? ‘ಸೋಲೇ ಗೆಲುವಿನ ಸೋಪಾನ’ ಎಂದೇ! ಹಾಗಾದರೆ ಮೊದಲ ಸೋಲೆಂದರೆ ಅದು ನಿಜವಾದ ಸೋಲು ಅಲ್ಲವೇ?  ಪ್ರಯತ್ನ ಪಡದೇ ಸೋಲಿಗೆ ಗುರಿಯಾಗದೇ ಗೆಲುವು ಗಳಿಸುವುದು ಹೇಗೆ? ಇಂಥಾ ಸಂಶಯದ ಪ್ರಶ್ನೆಗಳು ಉದ್ಭವಿಸಿದರೂ, ಎಲ್ಲಾ ಗೆಲುವನ್ನು ಸಂದೇಹದಿಂದ ನೋಡುವ ಅಗತ್ಯವಿಲ್ಲ ಹಾಗೂ ಗೆಲುವುಗಳೆಲ್ಲಾ ಯಶಸ್ಸೇನಲ್ಲ. 

    ರಾಜನೊಬ್ಬ ಸಾಮ್ರಾಜ್ಯ ವಿಸ್ತರಣೆಯೇ ಯಶಸ್ಸೆನ್ನುತ್ತಾನೆ. ವೈದ್ಯರಿಗೆ ರೋಗಿಯ ಚೇತರಿಕೆ, ಶಿಕ್ಷಕರಿಗೆ ವಿದ್ಯಾರ್ಥಿಯ ಉತ್ತಮ ಫಲಿತಾಂಶ, ವಾಸ್ತುಶಿಲ್ಪಿಗೆ ಶತಮಾನ ನಿಲ್ಲುವ ಕಟ್ಟಡ, ಹಸಿದ ಹುಲಿಗೆ ಜಿಂಕೆಯ ಬೇಟೆ,  ಹುಲಿಯ ಬಾಯಿಂದ ತಪ್ಪಿಸಿಕೊಳ್ಳುವುದೇ ಜಿಂಕೆಯ ಯಶಸ್ಸು, ತಾಯ್ತಂದೆಯರಿಗೆ ಮಕ್ಕಳ ಭದ್ರ ಭವಿಷ್ಯ… ಹೀಗೆ..

 ಆದರೆ ಇದರಲ್ಲಿ ತಾತ್ಕಾಲಿಕ ಯಶಸ್ಸು ಯಾವುದು? ಶಾಶ್ವತ ಯಾವುದು!

  ಭರತನೆಂಬ ರಾಜನು, ಅಖಂಡ ಭೂಮಂಡಲ ಗೆದ್ದು ಗರ್ವದಿಂದ ‘ವೃಷಭಾದ್ರಿ’ಎಂಬ ಪರ್ವತದ ತುತ್ತತುದಿಯಲ್ಲಿ ‘ವಿಶ್ವವಿಶ್ವಾಂಬರಾವಿಜಯ’ ಎಂದು ತನ್ನ ಗೆಲುವಿನ ಪ್ರಶಸ್ತಿ ಕೆತ್ತಿಸಲು ಬಹಳ ಉತ್ಸುಕನಾಗಿರಲು, ಆತನಿಗೂ ಮೊದಲೇ ಅನೇಕ ಶತಕೋಟಿ ಕಲ್ಪಗಳಲ್ಲಿ ಆಗಿ ಹೋದ ಪ್ರಚಂಡ ವೀರಾಧಿವೀರರ ಶೌರ್ಯದ ಬಿರುದಾವಳಿ ವರ್ಣನೆ ಅಲ್ಲಿರುತ್ತದೆ. ಅದನ್ನು ಕಂಡೊಡನೆಯೇ ಭರತಚಕ್ರೇಶ್ವರನ ‘ಗರ್ವರಸ’ ಸೋರಿತೆಂದು ಪಂಪ ಮಹಾಕವಿ ತನ್ನ ‘ಆದಿಪುರಾಣ’ದಲ್ಲಿ ವರ್ಣಿಸುತ್ತಾನೆ. 

      ‘ಗರ್ವಮೇರು’ವಾದ ಭರತೇಶ್ವರನ ಜಂಭ ‘ಚೂರ್ಣೀಕೃತ’ವಾದರೂ ಸಾಂಪ್ರದಾಯಿಕ ರೂಢಿಯಂತೆ, ಹಿಂದಿನ ಚಕ್ರೇಶ್ವರನೊಬ್ಬನ ‘ಪ್ರಶಸ್ತಿಯನ್ನು ತನ್ನ ದಂಡದಿಂದ ಸೀಂಟಿ’, ಅಳಿಸಿ ತನ್ನದನ್ನು ಬರೆಸುತ್ತಾನಂತೆ! ಭರತನ ಈ ಸಾಧನೆಯನ್ನು ಯಶಸ್ಸೆಂದು ಪರಿಗಣಿಸಬಹುದೇ? 

  ಚಕ್ರೇಶ್ವರ ಭರತನಿಗೆ ಪ್ರತಿಶೂರನಾದ ಆತನ ತಮ್ಮ ಬಾಹುಬಲಿ, ‘ಪಿರಿಯಣ್ಣಂ ಗುರು ತಂದೆಯೆಂದೆರಗುವೆ’ ಎನ್ನುತ್ತಾನೆ. ‘ಆಳರಸೆಂಬೊಂದು ವಿಭೇದ’ ಮಾಡುವ ಅಣ್ಣನ ದುರಹಂಕಾರಕ್ಕೆ ಮಣಿಯುವುದು ‘ಛೀ ಕಷ್ಟ’  ಎಂದು ಪ್ರತಿಭಟಿಸುತ್ತಾ ಸೋದರರಲ್ಲೇ ವೈರತ್ವ ತರುವ ರಾಜಭೋಗಗಳಿಗೆ ಹೇಸಿ ವೈರಾಗ್ಯ ದೀಕ್ಷೆಗೆ ತೆರಳುತ್ತಾನೆ. 

     ಬಾಹುಬಲಿಯ ಅರಿವನ್ನು ತ್ಯುಚ್ಛೀಕರಿಸಿ ಭರತ ಜರೆದಾಗ, ‘ಪಿರಿಯಣ್ಣಂಗೆರಗುವುದೇಂ ಪರಿಭವವೇ’ ಆದರೆ, ಚಕ್ರವರ್ತಿ ಎಂಬ ಸೊಕ್ಕಿನಲಿ, ಸೋದರತ್ವ, ಮನುಷ್ಯತ್ವ ಮರೆತು ಮಲೆತಿರುವ ನಿನ್ನಂಥ ಅಣ್ಣನಿಗೆ ‘ಎರಗುವೆರಕಮಂಜಮೆಯಲ್ತೆ?’ಎಂದು ಬಾಹುಬಲಿ ಕೇಳುತ್ತಾನೆ. ಆದರೂ ತಮ್ಮನ ವಿವೇಕೋಪದೇಶವನ್ನು ಅರಿಯದ ಭರತ ಯುದ್ಧಕ್ಕೆಳಸುತ್ತಾನೆ. 

       ಅಸಹಾಯಶೂರನಾದ ಬಾಹುಬಲಿಯು,     ಸಕಲ ಭೂಮಂಡಲೇಶ್ವರನನ್ನು ಅಪ್ಪಳಿಸಿ ಕೊಂದು ತಾನೇ ಜಗದೇಕವೀರನಾಗಿ ಮೆರೆಯಬಹುದಾದ ಮಹಾದವಕಾಶವನ್ನು ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧ ಸ್ಪರ್ಧೆಗಳಲ್ಲಿ ಗೆಲ್ಲುವ ಮೂಲಕ ನ್ಯಾಯುತವಾಗಿ ಗಳಿಸಿಕೊಳ್ಳುತ್ತಾನೆ. ಆದರೆ ಕಡೆಯ ಕ್ಷಣದ ಅಂತರಾತ್ಮದ ಅರಿವಿಗೆ ಶರಣಾಗಿ; ಸರ್ವಸಂಗ ಪರಿತ್ಯಾಗ ಮಾಡಿ ಧರ್ಮಭೀರು ತಾನಾಗುತ್ತಾನೆ. ಜಗತ್ತಿನಲ್ಲಿ ಆ ಕಾಲದಿಂದಲೂ ಭರತನಿಗೆ ಅನುಯಾಯಿಗಳು ಇರುವಂತೆ ಬಾಹುಬಲಿಗೂ ಇದ್ದಾರೆ. ಇಬ್ಬರ ಮಾರ್ಗವೂ ಯಶೋಮಾರ್ಗವೇ ಎಂದು ಪರಿಗಣಿಸುತ್ತಾರೆ!

      ಆ ಮಹಾವೀರ ಅನುದಿನದ ಜಂಜಡಗಳಿಗೆ ಬೆನ್ನು ತೋರಿದ ಹೇಡಿಯಲ್ಲ. ಇವೆಲ್ಲಾ ನಶ್ವರ, ಕ್ಷಣಿಕ ಎನ್ನುವ ಜ್ಞಾನ ಪಡೆದು ಹೆಚ್ಚಿನ ಜನರು ನಡೆಯಲಾರದ ಮಾರ್ಗದಲ್ಲಿ ನಡೆದ ವಿವೇಕಿ. ಇಂಥಾ ಮಹಾ ತ್ಯಾಗವೀರನ ಬದುಕಿನ ಗತಿಯು ಯಶಸ್ಸಿನ ಮಾಪಕವೇ!? ಬುದ್ಧನ ಗತಿಯೇನು? ಗಾಂಧೀಜಿಯವರ ಬದುಕೇನು? ವಿವೇಕಾನಂದರ ಮಾರ್ಗವೇನು? ಅಕ್ಕಮಹಾದೇವಿ ರಾಜ ವೈಭೋಗ ತೊರೆದುದೇಕೆ? ಬಸವಣ್ಣ ಅಂಬೇಡ್ಕರ್ ಅವರ ಹೋರಾಟ ಯಾವುದರ ಸಾಬೀತಿಗೆ? 

 “ಲೋಕದ ಡೊಂಕ ನೀವೇಕೆ ತಿದ್ದುವಿರಿ 

  ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ,

  ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ

  ನೆರೆ ಮನೆಯ ದುಃಖಕ್ಕೆ ಅಳುವವರ 

  ಮೆಚ್ಚ ನಮ್ಮ ಕೂಡಲ ಸಂಗಮ ದೇವಾ..”

    ಎಂದರೆ, ಸಹಾಯಾರ್ಥಿಗಳಿಗೆ ನೆರವಿನ ಕೈಚಾಚ ಬೇಡಿರಿ ಎಂದರ್ಥವಲ್ಲ. ಮೊದಲು ನಮ್ಮೊಳಗಿನ ಕಹಿಯನ್ನು ತೊಡೆದು, ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಸೋಗಿನ ಜೀವನವನ್ನು ಬಿಟ್ಟು ಪ್ರಾಮಾಣಿಕವಾಗಿ ಬದುಕಿ, ಸಕಲ ಪರಿವಾರದ ಒಳಿತನ್ನು ಬಯಸಿ ಬದುಕುವ ವಿಧಾನವೇ ಯಶಸ್ಸು. ಬೇರೆಯವರಿಗೆ ಒಳಿತು ಮಾಡಲು ಆಗದಿದ್ದರೂ ಕೆಡುಕನ್ನು ಬಯಸದ ಜೀವನ ವಿಧಾನವೇ ಯಶಸ್ಸು ಎಂದು ಅನುಭವಿಗಳೂ ಅನುಭಾವಿಗಳು ಕಂಡುಕೊಂಡಿದ್ದಾರೆ. ಹಾಗೆ ನುಡಿದು ನಡೆದು ತೋರಿದ್ದಾರೆ. 

   ಆ ದಾರಿಯಲ್ಲಿ ನಾವು ನಡೆಯುವುದು ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಹಾಗಾಗಿ ಯಶಸ್ಸಿನ ಮಾನದಂಡ ಹಣ, ಅಧಿಕಾರ, ಬಂಗಲೆ, ಸಂಪತ್ತಿನ ಶೇಖರಣೆಯಲ್ಲ. ಹಾಗೆಂದು ಅವುಗಳನ್ನು ನ್ಯಾಯಯುತವಾಗಿ ಹೊಂದಿರುವುದು ಸೋಲಲ್ಲ. ಆದಪೆ, ಪ್ರತಿಯೊಬ್ಬನ ಯಶಸ್ಸೂ ಮತ್ತೊಬ್ಬನ ಯಶಸ್ಸಿಗಿಂತಲೂ ಭಿನ್ನವಾಗಿರುತ್ತದೆ. 

    ‘ಲೋಕೋ ಭಿನ್ನ ರುಚಿಃ’ ಆದ್ದರಿಂದ ಯಶಸ್ಸೂ ವಿಭಿನ್ನವಾಗಿರುತ್ತದೆ. ಅರ್ಧ ಹಗಲು ಅರ್ಧ ರಾತ್ರಿಗಳ ನಡುವೆ ಬದುಕುತ್ತಿರುವ ನಾವು ಪೂರ್ಣತೆಗಾಗಿ ಹಂಬಲಿಸಿ ಹಲುಬಿ ನರಳಾಡದೆ,  ಅರ್ಥಪೂರ್ಣತೆಯಿಂದ ಬದುಕಿದರೆ ಅದನ್ನೇ ಯಶಸ್ಸೆಂದು ಪರಿಗಣಿಸಬಹುದು. ಹಾಗೆಯೇ ಈ ಮಾತನ್ನೂ ನೆನಪಿಡೋಣ ‘ಒಬ್ಬರ ಯಶಸ್ಸು ಮತ್ತೊಬ್ಬರ ಸೋಲಲ್ಲ’.

******

ವಸುಂಧರಾ ಕದಲೂರು

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ  ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ.

4 thoughts on “

    1. ಮನುಕುಲದ ಚಿತ್ತ ಹರಿಯಬೇಕಾದುದೆತ್ತ ಎಂಬ ಸೂಕ್ಷ್ಮ ಬರೆಹ ಅದ್ಭುತವಾಗಿ ಮೂಡಿ ಬಂದಿದೆ ವಸುಂಧರ ಅವರೆ

Leave a Reply

Back To Top