ಭರವಸೆಯ ಬೆಳಕು ಸನಿಹ

ಲೇಖನ

ನಿರೀಕ್ಷೆಯನ್ನು ದೂರವಿಟ್ಟರೆ

ಭರವಸೆಯ ಬೆಳಕು ಸನಿಹ!

                                                     ಜಯಶ್ರೀ.ಜೆ. ಅಬ್ಬಿಗೇರಿ

Freedom, Sky, Hands, Handcuffs, Clouds

ಹಾಗೆ ನೋಡಿದರೆ ಜೀವನ ನಿರೀಕ್ಷೆಗಳ ಮಹಾಪೂರದಂತೆ ಕಾಣುತ್ತದೆ. ಇಲ್ಲಿ ದಿನವೂ ನಿರೀಕ್ಷೆಗಳ ಸಂತೆ ನಡದೇ ಇರುತ್ತದೆ. ಪ್ರತಿಯೊಬ್ಬರೂ ಬೇರೆಯವರಿಂದ ಏನನ್ನೋ ನಿರೀಕ್ಷಿಸುತ್ತಲೇ ಇರುತ್ತಾರೆ. ತಂದೆ ತಾಯಿ ಮಕ್ಕಳಿಂದ ತಮ್ಮ ಕನಸುಗಳೆಲ್ಲ ನನಸಾಗಲೆಂದು ನಿರೀಕ್ಷಿಸುತ್ತಾರೆ. ಮಕ್ಕಳು ಹೆತ್ತವರು ತಮ್ಮ ಎಲ್ಲ ಆಸೆಗಳನ್ನು ಈಡೇರಿಸಬೇಕೆಂದು ನಿರೀಕ್ಷಿಸುತ್ತಾರೆ. ಮಧುರ ಸಿಹಿ ಜೇನಿನಂತಿರಬೇಕಾಗಿದ್ದ ಸಂಬಂಧಗಳಲ್ಲಂತೂ ಇವುಗಳ ಹಾವಳಿ ಭರಪೂರ. ಸಂಬಂಧಗಳಲ್ಲಿ ಒಡುಕು ಮೂಡುವುದೇ ಅತಿಯಾದ ನಿರೀಕ್ಷೆಗಳಿಂದ. ಸಾವಿರ ಸಾವಿರ ವರುಷಗಳಿಂದ ಮಾನವನ ನಡುವಳಿಕೆಗಳ ಕುರಿತು ಅವುಗಳಿಗೆ ಸಂಬಂದಿಸಿದ ನಿಯಮದ ಕುರಿತು ಅಧ್ಯಯನ ನಡೆಸುತ್ತಲೇ ಬಂದಿದ್ದಾರೆ. ಅಧ್ಯಯನಗಳಿಂದ ಮುಖ್ಯವಾದ ಸೂತ್ರವೊಂದು ಬೆಳಕಿಗೆ ಬಂದಿದೆ. ಹಾಗಂತ ಅದು ಹೊಚ್ಚ ಹೊಸದೇನಲ್ಲ. ಎಲ್ಲರಿಗೂ ಗೊತ್ತಿದ್ದದ್ದೆ. ಮಾನವ ನಾಗರೀಕತೆಯಷ್ಟು ಹಳೆಯದು.  ನಮ್ಮ ಪುಟ್ಟ ಜಗತ್ತಿನಲ್ಲಿ ಬರುವ ಎಲ್ಲರಿಂದ ನಾವು ಒಂದಿಲ್ಲೊಂದನ್ನು ನಿರೀಕ್ಷಿಸುತ್ತೇವೆ. ನಮ್ಮಲ್ಲಿರುವ ಪ್ರತಿಭೆಯನ್ನು ಯೋಗ್ಯತೆಯನ್ನು ಗುರುತಿಸಬೇಕೆಂದು ನಿರೀಕ್ಷಿಸುತ್ತೇವೆ. ‘ನಾನೊಬ್ಬ ದೊಡ್ಡ ವ್ಯಕ್ತಿ ಎಂಬ ಭಾವವನ್ನು ಅನುಭವಿಸಲು ಹಂಬಲಿಸುತ್ತೇವೆ. ಆ ನಿರೀಕ್ಷೆ ಸುಳ್ಳಾದರೆ ಗೊಳೋ ಎಂದು ಕಣ್ಣೀರಿಡುತ್ತೇವೆ. ಹಾಗಂತ ನಾವು ಅಗ್ಗದ ಅಪ್ರಾಮಾಣಿಕ ಹೊಗಳಿಕೆಯನ್ನು ಬಯಸುವುದಿಲ್ಲ. ಮನಸಾರೆ ಮೆಚ್ಚಬೇಕೆಂದು ನಿರೀಕ್ಷಿಸುತ್ತೇವೆ. ಉದ್ಯಮಿ ಚಾಲ್ರ್ಸ್ ಶೊವಾಬ್ ಹೇಳುವಂತೆ ‘ಮೆಚ್ಚುಗೆಯಲ್ಲಿ ಮನಸಾರೆ ಹೊಗಳಿಕೆಯಲ್ಲಿ ಧಾರಾಳಿ.’ ಆಗಿರಬೇಕೆಂದು ನಿರೀಕ್ಷಿಸುತ್ತೇವೆ.

 ನಿರೀಕ್ಷೆ ಮಹತ್ವ ಉಳ್ಳದ್ದೇ. ಆದರೆ ಅದು ಬಹಳ ಹೊತ್ತು ಉಳಿಯುವುದಿಲ್ಲ. ನಿರೀಕ್ಷಿಸುವುದು ಇತರರಿಂದ.ಆದರೆ ಭರವಸೆ ನಮ್ಮೊಳಗೆ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಬದುಕು ನಮಗೆ ಭವ್ಯ ಬಂಗಲೆ, ಅದರ ಮುಂದೆ ಉದ್ದನೆಯ ಅತ್ಯಾಧುನಿಕ ಕಾರುಗಳನ್ನು, ದುಬಾರಿ ಉಡುಗೆ ತೊಡುಗೆಗಳನ್ನು ಇನ್ನಿತರೆ ಐಶಾರಾಮಿ ಸುಖ ಸಾಧನಗಳನ್ನು ನೀಡುವುದೆಂದು ನಿರೀಕ್ಷಿಸುವುದು ಶುದ್ಧ ತಪ್ಪು ಎನಿಸುತ್ತದೆ. ‘ಬದುಕು ನಾವು ನಿರೀಕ್ಷಿಸುವುದನ್ನು ನೀಡುವುದಿಲ್ಲ. ನಾವು ಯಾವುದಕ್ಕೆ ಅರ್ಹರಾಗಿದ್ದೇವೆಯೋ ಅದನ್ನು ಖಂಡಿತ ನೀಡುತ್ತದೆ.’ ಅಂದರೆ ನಮ್ಮ ಯೋಗ್ಯತೆಗೆ ಅನುಸಾರವಾಗಿ ಬದುಕು ನೀಡುತ್ತ ಹೋಗುತ್ತದೆ ಎಂದಂತಾಯಿತು. ಜೀವನದಿಂದ ನಿರೀಕ್ಷಿಸುವುದು ಮತ್ತು ಒಬ್ಬರಿಂದ ಇನ್ನೊಬ್ಬರು ನಿರೀಕ್ಷಿಸುವುದು ಸಾಮಾನ್ಯ. ಆದರೆ ಅದು ಅತಿಯಾದರೆ ಮಾನಸಿಕ ಆಘಾತಕ್ಕೆ ತಳ್ಳುತ್ತದೆ.

ಇತರರು ನಮ್ಮ ಮೇಲಿಟ್ಟ ಭರವಸೆಯು ಹಣ ಒಡವೆ ಇದ್ದಂತೆ ಅವುಗಳನ್ನು ನಾವೇ ಕಾಪಾಡಿಕೊಳ್ಳಬೇಕು. ಆದರೆ ನಮ್ಮ ಮೇಲೆ ನಮಗಿರುವ ಭರವಸೆ ಮುಗಿಲಿಗಿಂತ ಮಿಗಿಲಾಗಿ ಬೆಳೆಸುತ್ತದೆ ಎಂಥ ಸಂಕಷ್ಟ ಸ್ಥಿತಿಯಲ್ಲಿ ಕಾಯುತ್ತದೆಂಬುದು ಅಂಗೈ ಗೆರೆಗಳಷ್ಟೇ ನಿಚ್ಚಳ. ಎಲ್ಲ ಕೆಲಸವನ್ನೂ ಮಾಡಬಲ್ಲೆ ಎಂಬ ವಿಶ್ವಾಸ ಮೆಚ್ಚಿಕೊಳ್ಳತಕ್ಕದ್ದೆ. ಆದರೆ ಎಲ್ಲವೂ ನನ್ನಿಂದಲೇ ಎಂಬ ಅಹಂಕಾರವು ಎಷ್ಟು ಎತ್ತರಕ್ಕೇರಿದ್ದರೂ ಕ್ಷಣಾರ್ಧದಲ್ಲಿ ಮೇಲಿಂದ ಕೆಳಕ್ಕೆ ದೂಡಿ ಬಿಡುತ್ತದೆ. ಅತಿಯಾದ ಭರವಸೆಯಿಂದ ದಿಢೀರನೆ ದೊಡ್ಡ ಬದಲಾವಣೆ ತಂದುಬಿಡುತ್ತೇನೆಂದು ಜಿಗಿದಾಡಬಾರದು. ಸಣ್ಣ ಬದಲಾವಣೆಯೊಂದಿಗೆ ಪ್ರಯತ್ನಿಸಬೇಕು.ಆ ಸಣ್ಣ ಪುಟ್ಟ ಬದಲಾವಣೆಗಳೇ ದೊಡ್ಡ ಪರಿವರ್ತನೆಗೆ ದಾರಿ ಮಾಡುತ್ತವೆ. ಹಿಂದೆ ಆಗಿ ಹೋದ ಕೆಟ್ಟ ಘಟನೆಗಳಿಂದ ಬಚಾವಾಗಿದ್ದನ್ನು ಪರಾಮರ್ಶಿಸಿದಾಗ ದೇವರಿಗೆ ಕೃತಜ್ಞರಾಗಬೇಕೆಂಬ ಆಲೋಚನೆ ಭದ್ರವಾಗುತ್ತದೆ. ಆತನನ್ನು ನಂಬುವಂತೆ ಮಾಡುತ್ತದೆ. ದೇವರ ಮೇಲಿನ ನಂಬಿಕೆ ನಮ್ಮ ಭರವಸೆಗಳಿಗೆ ಇಂಬು ಕೊಡುತ್ತದೆ. ಭರವಸೆಯು ಮನೋಸ್ಥೈಂiÀರ್iವನ್ನು ಎತ್ತಿ ಹಿಡಿದು ಬದುಕಿನ ಹೋರಾಟವನ್ನು ಗೆಲ್ಲುವಂತೆ ಪ್ರೇರೇಪಿಸುತ್ತದೆ. ಎದೆಯೊಡ್ಡಿ ನಿಲ್ಲುವ ಆತ್ಮಶಕ್ತಿಯನ್ನು ನೀಡಿ ಹೊಸ ಬದುಕನ್ನೇ ಕಲ್ಪಿಸುತ್ತದೆ ಎಂಬುದು ದಿಟ.

‘ಹಸಿದಾಗ ಸಿಗದ ಅನ್ನ, ದಣಿದಾಗ ಸಿಗದ ನೆರಳು, ದುಃಖವಿದ್ದಾಗ ಬಾರದ ಸಂಬಂಧ, ಕಷ್ಟದಲ್ಲಿ ಇದ್ದಾಗ ಬಾರದ ಗೆಳೆಯ ಶವವಾದಾಗ ತೋರುವ ಅಪಾರ ಪ್ರೀತಿ ವ್ಯರ್ಥವೇ ಅಲ್ಲವೇ?’ ಹಾಗೆಯೇ ನಮಗೆ ನಮ್ಮ ಮೇಲೆ ಬೇಕಾದಾಗ ಭರವಸೆ ಇಲ್ಲದಿದ್ದರೆ ನಮ್ಮ ಬಳಿ ಇರುವುದೆಲ್ಲವೂ ವ್ಯರ್ಥ. ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ ಕೆಲವೊಮ್ಮೆ ಅದರಿಂದ ಒಳ್ಳೆಯ ಅನುಭವವೂ ದೊರೆಯಬಹುದು. ಆದರೆ ಅದೆಲ್ಲವೂ ಕ್ಷಣಿಕ. ಹುಟ್ಟಿನಿಂದಲೇ ಕೆಲವೇ ಕೆಲವರಿಗೆ ಭವ್ಯ ಬಂಗಲೆ ಕಾರು ಸುಖ ಸಾಧನೆಗಳೆಲ್ಲವೂ ಇದ್ದರೂ ಭರವಸೆ ಇಲ್ಲದಿರಬಹುದು. ಅಂಥವರು ಏನೆಲ್ಲ ಇದ್ದರೂ ಏನೂ ಇಲ್ಲದಂತೆ ಬದುಕಬೇಕಾಗುತ್ತದೆ. ಆದ್ದರಿಂದ ಭರವಸೆಯನ್ನು ಆಯ್ದುಕೊಳ್ಳಿ. ಬಾಹ್ಯ ಜಗತ್ತಿನ ಪರಿಸ್ಥಿತಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹಾಗೆ ಮಾಡ ಹೊರಟರೆ ದೊಡ್ಡ ದೊಡ್ಡ ತೊಂದರೆಗಳನ್ನು ಮೈಮೇಲೆಳೆದುಕೊಂಡು ಅನುಭವಿಸಬೇಕಾಗುತ್ತದೆ. ಆದರೆ ನಮ್ಮ ಅಂತರಂಗ ನಮ್ಮ ಕೈಯಲ್ಲೇ ಇದೆ. ನಿಯಂತ್ರಿಸಲು ನಿಜವಾಗಿಯೂ ಸಾಧ್ಯವಿದೆ.ಯಾರು ಈ ನಿಯಂತ್ರಣವನ್ನು ಸಾಧಿಸುವರೋ ಅವರು ಮಹಾನ ಆಗುವರು.

ಉತ್ಸಾಹವು ಭರವಸೆಯ ಬೆನ್ನೆಲುಬು ಇದ್ದಂತೆ. ಅದು ಕಲ್ಲಿದ್ದಲ ಒಳಗೆ ಕುದಿಯುತ್ತಿರುವ ಕಾವಿನಂತಿರಬೇಕೆ ಹೊರತು ಹುಲ್ಲಿಗೆ ಹತ್ತಿದ ಬೆಂಕಿಯಾಗಿರಬಾರದೆಂಬ ಎಚ್ಚರ ಇರಲೇಬೇಕು. ಎಲ್ಲ ಬೆರಳುಗಳು ಒಂದೇ ಸಮನಾಗಿ ಇರಲಾರದ್ದೇ ಒಳ್ಳೆಯದು. ಏಕೆಂದರೆ ಅವುಗಳನ್ನು ಬಾಗಿಸಿದಾಗ ಎಲ್ಲ ಕೆಲಸಗಳನ್ನು ಮಾಡಬಲ್ಲವರಾಗುತ್ತೇವೆ. ಅಂದರೆ  ಪರಿಸ್ಥಿತಿಯ ಜೊತೆಗೆ ಬಗ್ಗಿಸಿ ಹೊಂದಿಸಿದಾಗ ಭರವಸೆಯನ್ನು ಎದ್ದು ನಿಲ್ಲಿಸುವುದು ಸುಲಭವಾಗುತ್ತದೆ. ಬದುಕಿನಲ್ಲಿ ಎಷ್ಟು ಪ್ರಮಾಣದ ನಿರೀಕ್ಷೆ ಒಳ್ಳೆಯದು?ಭರವಸೆ ಅದೆಷ್ಟು ಮಹತ್ವವುಳ್ಳದ್ದು? ಎಂಬ ಸರಳ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಎಷ್ಟೋ ಜನರು ಬದುಕಿನ ಅರ್ಧ ದಾರಿ ಇಲ್ಲವೇ ಅರ್ಧಮುಕ್ಕಾಲು ದಾರಿ ಸವೆಸಿದ ಮೇಲೆ ನಾನು ಸಾಗಬೇಕಾದ ದಾರಿ ಇದಲ್ಲ ಅಂತ ಗೋಳಿಡುತ್ತಾರೆ. ಹಾಗಾಗದ ಮುನ್ನ ಎಚ್ಚರ ವಹಿಸುವುದು ಜಾಣತನ.

ನಿರೀಕ್ಷೆ ಎಂಬುದು ಆರಾಮ ಕುರ್ಚಿಯಂತೆ ಅದು ನಮ್ಮನ್ನು ಅಲುಗಾಡಿಸುತ್ತಾದರೂ ಬೇರೆಲ್ಲಿಯೂ ಒಯ್ಯುವುದಿಲ್ಲ. ಬದುಕಿನಲ್ಲಿ ಅತ್ಯುತ್ತಮವಾದುದನ್ನು ನಿರೀಕ್ಷಿಸುತ್ತಿದ್ದೀರಿ ಎಂದರೆ ತಾಳ್ಮೆಯಿಂದರಲೇಬೇಕು. ನದಿಯ ಹರಿವಿನಲ್ಲಿ ಸಿಗುವ ಸುಳಿಗಳನ್ನು ದಾಟಲೇಬೇಕು. ಕೆಟ್ಟದಾದ ಸಮಯವನ್ನು ದಾಟಿದಾಗಲೇ ಒಳಿತಾಗುತ್ತದೆಂಬ ಭರವಸೆಯು ಬದುಕನ್ನು ಇಂದಿನವರೆಗೂ ಕರೆದುಕೊಂಡು ಬಂದಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಆಗ ಭರವಸೆಯು ಚಿಲುಮೆಯಂತೆ ಪುಟಿದೇಳುತ್ತದೆ. ಹೀಗೆ ಭರವಸೆಯಿಂದ ಆರಂಭಗೊಂಡ ಜೀವನ ಪಯಣ ಉನ್ನತ ಹೊಂಗನಸುಗಳ ಸಾಕಾರದತ್ತ ತಲುಪಿಸುವ ಪರಿ ಅಚ್ಚರಿ. ಹುಸಿ ನಿರೀಕ್ಷೆಗಳನ್ನು ದೂರವಿಟ್ಟರೆ ಭರವಸೆಯ ಬೆಳಕು ಸನಿಹ ಬಂದು ತಬ್ಬಿಕೊಳ್ಳದೇ ಇರದು.

************

One thought on “ಭರವಸೆಯ ಬೆಳಕು ಸನಿಹ

Leave a Reply

Back To Top