ರಾಜಕಾರಣ

ಪಕ್ಷ ರಾಜಕಾರಣಕ್ಕೊಂದು ಪರ್ಯಾಯ

Image result for photos of indian politics

ಗಣೇಶ ಭಟ್, ಶಿರಸಿ

ಕೊಳೆತು ನಾರುತ್ತಿರುವ ಪಕ್ಷ ರಾಜಕಾರಣಕ್ಕೊಂದು ಪರ್ಯಾಯ……


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷಗಳಿದ್ದಾಗ, ಆಡಳಿತ ಪಕ್ಷದ ತಪ್ಪು, ಒಪ್ಪುಗಳನ್ನು ವಿರೋಧ ಪಕ್ಷಗಳು ವಿಶ್ಲೇಷಿಸುತ್ತವೆಂದು ಭಾವಿಸಲಾಗಿತ್ತು. ಜನಹಿತವೇ ಆಡಳಿತದ ಉದ್ದೇಶವಾಗಿದ್ದರೂ ಅದನ್ನು ಸಕಾರಗೊಳಿಸುವುದಕ್ಕಾಗಿ ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಸಿದ್ದಾಂತ, ಪ್ರಣಾಳಿಕೆ, ಕಾರ್ಯವಿಧಾನವಿರುತ್ತದೆಂಬ ಭಾವನೆಯಿಂದ ಪಕ್ಷ ಆಧಾರಿತ ಚುನಾವಣೆ, ಸರ್ಕಾರ ರಚನೆಗಳಿಗೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ.
ಪಾಶ್ಚಾತ್ಯ ಪ್ರಜಾಪ್ರಭತ್ವ ದೇಶಗಳಲ್ಲಿರುವಂತೆ ನಮ್ಮಲ್ಲಿಯೂ ಸೀಮಿತ ಸಂಖ್ಯೆಯ ರಾಜಕೀಯ ಪಕ್ಷಗಳು ನಮ್ಮ ಸಂವಿಧಾಬನ ಕರ್ತರು ಊಹಿಸಿರಬಹುದು. ಈಗ 2 ಸಾವಿರಕ್ಕೂ ಹೆಚ್ಚು ಸಂಖ್ಯೆಯ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದಲ್ಲಿ ನೋಂದಾಯಿತವಾಗಿವೆ. ಇನ್ನೂ ಹೊಸ ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತಲೇ ಇವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳ ಅಸ್ತಿತ್ವಕ್ಕೆ ಬರಬಹುದೆಂಬ ಕಲ್ಪನೆ ಪ್ರಾಯಶಃ ಸಂವಿಧಾನ ಕರ್ತೃರಿಗೆ ಇಲ್ಲದಿರಬಹುದು.
ಸಾವಿರಾರು ರಾಜಕೀಯ ಪಕ್ಷಗಳ ಸಿದ್ಧಾಂತದಲ್ಲಿ ಮೂಲಭೂತ ವ್ಯತ್ಯಾಸವೇ ಇಲ್ಲ. ಇವುಗಳೆಲ್ಲವೂ ಬಂಡವಾಳವಾದದ ಚಿಂತನೆಯ ಚೌಕಟ್ಟಿನೊಳಗೇ ಸೀಮಿತವಾಗಿವೆ. ಭಾರತದ ಹತ್ತಾರು ಕಮ್ಯುನಿಸ್ಟ್ – ಪಕ್ಷಗಳು ಹೆಸರಿಗೆ ಮಾತ್ರ ಕಮ್ಯುನಿಸ್ಟ್ ಬೋರ್ಡ್ ಹಾಕಿಕೊಂಡಿವೆಯೇ ಹೊರತು ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಅಂಟಿಕೊಂಡಿಲ್ಲ. ಕಮ್ಯುನಿಸ್ಟ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ. ಪಕ್ಷದ ಸರ್ವಾಧಿಕಾರಿ ಆಡಳಿತವೇ ಅವರ ಗುರಿ.ಇಡೀ ಅರ್ಥವ್ಯವಸ್ಥೆ ಸರ್ಕಾರದ ನಿಯಂತ್ರಣದಲ್ಲೇ ಇರಬೇಕೆಂಂಬ ಕಮ್ಯುನಿಸಂನ ವಾದವನ್ನು ಈ ಪಕ್ಷಗಳು ಹೇಳುವುದೂ ಇಲ್ಲ. ಅಂದ ಮೇಲೆ ಇಷ್ಟೊಂದು ಪಕ್ಷಗಳು ಯಾಕಿವೆ?
ನಮ್ಮ ದೇಶದ ರಾಜಕೀಯ ಪಕ್ಷಗಳು ದೊಡ್ಡ ಅಥವಾ ಸಣ್ಣ ಪ್ರಮಾಣದ ಸ್ವಹಿತಾಸಕ್ತಿಯ ಗುಂಪುಗಳು. ಯಾವುದೋ ಒಂದು ಪಕ್ಷದಲ್ಲಿರುವ ವ್ಯಕ್ತಿಗೆ ಅಪೇಕ್ಷಿತ ಸ್ಥಾನಮಾನ ಸಿಗಲಿಲ್ಲವೆಂದರೆ ಬೇರೊಂದು ಪಕ್ಷದವರು ಆವ್ಹಾನಿಸಲಿಲ್ಲವೆಂದರೆ, ಕೈಯ್ಯಲ್ಲಿ ಸಾಕಷ್ಟು ಹಣವಿದ್ದರೆ, ಜಾತಿ, ಮತಗಳ ಬೆಂಬಲದ ಭರವಸೆ ಇದ್ದರೆ, ಕೂಡಲೇ ಹೊಸ ಪಕ್ಷವನ್ನು ಹುಟ್ಟುಹಾಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಿದ್ದಾಂತವೆನ್ನುವುದು ಬರೀ ಬೂಟಾಟಿಕೆ ಮಾತ್ರ.
ಪ್ರಾದೇಶಿಕ ಅಥವಾ ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಮಡ್ ಸಂಸ್ಕೃತಿ ಗಟ್ಟಿಯಾಗಿ ಬೇರೂರಿದೆ. ಪ್ರತಿಯೊಂದು ಚಿಕ್ಕ ಪುಟ್ಟ ವಿಷಯಗಳಿಗೂ ಹೈಕಮಾಂಡ್ ಒಪ್ಪಿಗೆ ಪಡೆಯುವ ಪರಿಸ್ಥಿತಿಯಿಂದಾಗಿ ಸ್ಥಳೀಯ ಜನಪ್ರತಿನಿಧಿಯು ಯಾವುದೇ ಸ್ವಾತಂತ್ರ್ಯವಿಲ್ಲದ ಪಕ್ಷದ ಹೈಕಮಾಂಡ್ ಗುಲಾಮನಂತೆ ವರ್ತಿಸುವ ಸ್ಥಿತಿ ಇದೆ. ಕುಟುಂಬ ನಿಷ್ಠೆ, ಜಾತಿ, ಮತ, ಪಂಥಗಳ ಆಧಾರದ ಮೇಲೆ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಚಿಂತನೆಗಳನ್ನೇ ಸಿದ್ಧಾಂತವೆಂದು ಬಿಂಬಿಸುವ ಪ್ರಯತ್ನವನ್ನು ಹಲವು ರಾಜಕೀಯ ಪಕ್ಷಗಳು ಮಾಡುತ್ತಿವೆ.
ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬುದೇ ರಾಜಕಾರಣಿಗಳ ಗುರಿ. ಅಧಿಕಾರದ ಲಾಲಸೆಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರನ್ನೂ ನಿಯಂತ್ರಿಸುವ ಉದ್ದೇಶದಿಂದ ರೂಪುಗೊಂಡ ಪಕ್ಷಾಂತರ ನಿಷೇಧ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ಹುಟ್ಟಿ ಹಾಕಲಾಗುತ್ತಿದೆ. ಒಂದು ಪಕ್ಷದಿಂದ ಆಯ್ಕೆಯಾದವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷ ಸೇರಿ ಪುನಃ ಚುನಾವಣೆಗೆ ಸ್ಪರ್ಧಿಸುವದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿದೆ. ಅಧಿಕಾರ ಮತ್ತು ಅದರೊಂದಿಗೆ ಬರುವ ಹಣದ ಹರಿವು ರಾಜಕಾರಣಿಗಳ ನೈತಿಕತೆ ಮತ್ತು ಮನಸ್ಸಾಕ್ಷಿಯನ್ನು ಪಾತಾಳಕ್ಕೆ ತಳ್ಳಿ ಬಿಟ್ಟಿದೆ. ಅಧಿಕಾರಕ್ಕಾಗಿ ಮಹಾರಾಷ್ಟ್ರದಲ್ಲಿ ಹಾಗೂ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಅಸಹ್ಯ ಹುಟ್ಟಿಸುತ್ತಿವೆ. ದುರ್ಜನರು ನಡೆಸುವ ದುರಾಚಾರಕ್ಕಿಂತ ಸಜ್ಜನರ ನಿಷ್ಕ್ರಿಯತೆಯೇ ಹೆಚ್ಚು ಅಪಾಯಕಾರಿ ಎಂಬ ಗಾದೆ ನಿಜವಾಗ ತೊಡಗಿದೆ.
ಎಲ್ಲಿಯವರೆಗೆ ಮತದಾರರು ಹಣ, ಹೆಂಡ, ಜಾತಿ, ಮತ, ಪಂಥ, ಕೋಮುಭಾವನೆ , ಭಾವನಾತ್ಮಕ ವಿಷಯಗಳಿಗೆ ಮರುಳಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೋ ಅಲ್ಲಿಯವರೆಗೆ ರಾಜಕಾರಣಿಗಳ ಸಮಾಜ ಸೇವೆಯ ಸೋಗಿನ ಕಳ್ಳಾಟ ನಡೆಯುತ್ತಲೇ ಇರುತ್ತದೆ. ರಾಜಕೀಯ ಪಕ್ಷಗಳೆಂದರೆ ಅಧಿಕಾರಕ್ಕಾಗಿ ಹಪಹಪಿಸುವ ಸಮಾನ ಮನಸ್ಕರ ಗುಂಪು ಎನ್ನುವಂತಾಗಿದೆ. ಮತ ಖರೀದಿಗಾಗಿ ಚುನಾವಣೆಗಳಲ್ಲೂ ಹಣ ಚೆಲ್ಲುವುದು, ಗೆದ್ದ ನಂತರ ಖರ್ಚು ಮಾಡಿದ್ದರ ಜೊತೆಗೆ ಭವಿಷ್ಯದ ಚುನಾವಣೆ ಖರ್ಚಿಗಾಗಿ ಕೂಡಿ ಹಾಕುವುದಕ್ಕಾಗಿ ಭ್ರಷ್ಟಾಚಾರ ನಡೆಸುವ ವಿಷ ವರ್ತುಲದಲ್ಲಿ ಇಂದಿನ ರಾಜಕೀಯ ವ್ಯವಸ್ಥೆ ಬಳಲುತ್ತಿದೆ.
ಈ ವಿಷ ವರ್ತುಲವನ್ನು ತುಂಡರಿಸಬೇಕೆಂದರೆ, ವಯಸ್ಸು ಆಧಾರಿತ ಸಾರ್ವತ್ರಿಕ ಮತದಾನದ ಹಕ್ಕನ್ನು ಬದಲಿಸಬೇಕು. ಆಡಳಿತ ನಡೆಸುವ ಅಧಿಕಾರ ಉಳ್ಳವರನ್ನು ಆಯ್ಕೆ ಮಾಡುವ ವ್ಯಕ್ತಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ವಿಷಯಗಳ ಕನಿಷ್ಟ ಮಟ್ಟದ ಜ್ಞಾನ ಇರಬೇಕಾದುದು ಅಗತ್ಯ. ಒಬ್ಬ ಪಂಚಾಯತ ಸದಸ್ಯನಿಂದ ಏನನ್ನು ನಿರೀಕ್ಷೆ ಮಾಡಬೇಕು, ಒಬ್ಬ ಜಿಲ್ಲಾ ಪಂಚಾಯತ್ ಸದಸ್ಯನ ಕರ್ತವ್ಯಗಳೇನು? ವಿಧಾನಸಭಾ ಸದಸ್ಯ , ಸಂಸದರ ಹೊಣೆಗಾರಿಕೆಯೇನು ಎಂಬ ಜ್ಞಾನ ಮತದಾರರ ಅರಿವಿನಲ್ಲಿ ಇರಬೇಕು.
ಅರ್ಥವ್ಯವಸ್ಥೆಯ ಕುರಿತಾದ ಮೂಲಭೂತ ಜ್ಞಾನ, ರಾಜಕೀಯ ಪಕ್ಷಗಳ ಪ್ರಣಾಳಿಕೆಯನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ ಇಲ್ಲದ ಮತದಾರರು ಮಾಡುವ ಆಯ್ಕೆ ಆಧಾರ ರಹಿತವಾಗುತ್ತದೆ. ಸ್ವಾರ್ಥಿಗಳು, ಅಯೋಗ್ಯರೇ ಆಯ್ಕೆಯಾಗಿಬಿಡುತ್ತಾರೆ. ಆದ್ದರಿಂದಲೇ ಸಾರ್ವತಿಕ ಮತದಾನದ ಹಕ್ಕನ್ನು ನೀಡುವ ಬದಲಿಗೆ ಪರೀಕ್ಷೆ ನಡೆಸಿದ ನಂತರವೇ ಉತ್ತೀರ್ಣರಾದವರನ್ನೂ ಮತದಾರರ ಯಾದಿಗೆ ಸೇರ್ಪಡೆ ಮಾಡುವಂತಾಗಬೇಕು. ಇದಕ್ಕಾಗಿ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗೆ ಮತದಾರರ ಸಮುದಾಯ ಸ್ಥಾಪಿಸುವ ಹೊಣೆಗಾರಿಕೆ ನೀಡಬೇಕು.
ಸಾಮಾಜಿಕ , ಆರ್ಥಿಕ, ರಾಜಕೀಯ ವಿಷಯಗಳ ಕುರಿತು ಪ್ರಾಥಮಿಕ ಜ್ಞಾನವನ್ನು ಪಸರಿಸುವ , ಆಸಕ್ತರಿಗೆ ಶಿಕ್ಷಣ ನೀಡುವ, ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗಕ್ಕೆ ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗಕ್ಕೆ ಇರಬೇಕು. ಅವರು ಕಾಲಕಾಲಕ್ಕೆ ನಡೆಸುವ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾದ ವ್ಯಕ್ತಿಗಳನ್ನು ಅರ್ಹ ಮತದಾರರೆಂದು ಪೋಷಿಸಬೇಕು. ವಯಸ್ಕರಿಗೆ ಶಿಕ್ಷಣ ನೀಡುವ, ಮತದಾರರಾಗುವ ಅವಕಾಶ ನೀಡುವ ಪರೀಕ್ಷೆಗಳನ್ನು ನಡೆಸುವ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಒಬ್ಬ ವ್ಯಕ್ತಿ ಎಷ್ಟು ಬಾರಿ ಬೇಕಾದರೂ ಈ ಪ್ರವೇಶ ಪರೀಕ್ಷೆ ಬರೆಯುವ ಅವಕಾಶ ಇರಬೇಕು.

Leave a Reply

Back To Top