ನಾನಿನ್ನು ಕಾಯಲಾರೆ
ಮುರಿದ ಮೌನದೊಳಗೆ ತೇಲಿಬರುವ
ನಿನ್ನ ಮಾತಿನೊಂದು ಹೆಣಕ್ಕಾಗಿ
ನಾನಿನ್ನು ಕಾಯಲಾರೆ
ಕುಸಿದುಬಿದ್ದ ನಂಬಿಕೆಯೊಂದು
ಮತ್ತೊಮ್ಮೆ ಚಿಗುರುವ ಚಣಕ್ಕಾಗಿ
ನಾನಿನ್ನು ಕಾಯಲಾರೆ
ಎಂದೂ ಅರಳಲಾರೆನೆಂದು ಮುನಿಸಿಕೊಂಡ
ಹೂವು ಬಿರಿಯುವಾ ಕ್ಷಣಕ್ಕಾಗಿ
ನಾನಿನ್ನು ಕಾಯಲಾರೆ
ಸ್ವರ್ಗದ ನಿರೀಕ್ಷೆಯಲಿ
ನಿತ್ಯ ನರಕದ ಬಾಗಿಲು ಕಾಯುವ
ಯಾತನಾದಾಯಕ ಬದುಕಿನಂಗಳದಲ್ಲಿ
ನಾನಿನ್ನು ಕಾಯಲಾರೆ
ಹೊರದಾರಿಗಳೇ ಇರದೀ ನರಕದೆಡೆಗೆ
ನಡೆದು ಬರುವೆಂಬ ನಂಬಿಕೆಯಲ್ಲಿ
ನಾನಿನ್ನು ಬರೆಯಲಾರೆ
ಬರೆದದ್ದೆಲ್ಲ ವ್ಯರ್ಥಪ್ರಲಾಪವಾಗಿ
ಲೋಕನಿಂದಿತನಾದವನ ಕಂಡು
ನಗುವ ಜನರ ಬಾಯಿಗೆ ಅನ್ನವಾಗಿ
ನರಳುವ ಕುನ್ನಿಯಾಗಿ!
ಕಾಯಲಾರೆ
ಬೇಡಲಾರೆ
ಮರುಗಲಾರೆ
ಮತ್ತೆಂದೂ
ಬರೆಯಲಾರೆ.
ಸೊಗಸಾದ ಸಾಲುಗಳು