ಯಮನ ಸೋಲು

ಪುಸ್ತಕ ಸಂಗಾತಿ

ಯಮನ ಸೋಲು

   ಕುವೆಂಪು ಅವರ ಪ್ರಸಿದ್ದ ನಾಟಕಗಳಲ್ಲಿ ಒಂದು ಪುರಾಣದ ಕಥೆಯನ್ನು ಪಡೆದು ಅದನ್ನು ರಮ್ಯವಾಗಿ ನಿರೂಪಿಸುವ ಅವರ ಶೈಲಿಗೆ ಇನ್ನೊಂದು ನಿದರ್ಶನ.ಮಹಾಕವಿಯೊಬ್ಬ ತನ್ನ ಕೃತಿಗಾಗಿ ಮಹಾಕಾವ್ಯಗಳನ್ನು ಅವಲಂಬಿಸಿ ಅಲ್ಲಿಯ ಕಥೆಯನ್ನು ಸ್ವೀಕರಿಸಿದರೂ ಅದನ್ನು ತನ್ನದೆನ್ನುವಂತೆ ಮರ಼ಳಿ ನಿರೂಪಿಸುವ ಮಹಾಕವಿ ಪ್ರತಿಭೆಗೆ ಈ ನಾಟಕವೂ ಒಂದು ಉದಾಹರಣೆ.ಜಗದಲ್ಲಿ ಪಾತಿವ್ರತ್ಯದಂತಹ ಧರ್ಮ ಇನ್ನೊಂದಿಲ್ಲ . ಯಮ ಕೂಡ ಆ ಧರ್ಮಕ್ಕೆ ಸೋಲುತ್ತಾನೆ ಎಂಬ ಸತ್ಯವನ್ನು ಸಾರಲು ಈ ಕಥೆ ನಿರೂಪಿತವಾಗಿದೆ. ಸಾವನ್ನೇ ಸೋಲಿಸಿ ಗಂಡನನ್ನುಳಿಸಿಕೊಂಡ ಪತಿವ್ರತೆಯ ಕಥೆಯಿದು. ಮಾನವ ಧರ್ಮದ ಎದುರು ದೈವ ಧರ್ಮ ಸೋಲುತ್ತದೆ.ಮನುಷ್ಯ ಪ್ರೀತಿ‌ಗೆಲ್ಲುತ್ತದೆ.ಪ್ರೇಮ ಎಲ್ಲ ಧರ್ಮವನ್ನು‌ಮೀರಿದ್ದು ಎಂದು ಸಾರುವದೇ ಈ‌ ಕಥೆಯ ಉದ್ದೇಶ ” ಪ್ರೇಮಾನುರಾಗವು ಧರ್ಮವ‌ ಮೀರಿದುದೆಂಬುದನು ಸಾಧಿಸುವದೆ ಇಲ್ಲಿ ಮುಖ್ಯ. ಇದು ಎದೆಯೊಲ್ಮೆ ಗೆದ್ದ ಕಥೆ.ಅನುರಾಗವಿದ್ದಲ್ಲಿ ವೈಕುಂಠ ಪ್ರೇಮವಿದ್ದಲ್ಲಿ ಕೈಲಾಸ ಎದೆಯೊಲ್ಮೆಯಿದ್ದಲ್ಕಿ ಮುಕ್ತಿ‌ ಎಂದು ಸಾರುವ ಕಥೆ.

ತು಼ಂಬ ಚಿಕ್ಕದಾಗಿರುವ ಈ ನಾಟಕ ೧೯೨೮ ರಲ್ಲಿ‌ ಮೊದಲ‌ ಮುದ್ರಣ ಕಂಡಿದ್ದು ೨೦೦೪ ರ ಅವಧಿಯೊಳಗೆ ೮ ಮರು ಮುದ್ರಣಗಳನ್ನು ಪಡೆದಿದೆ.

ನಾಟಕದಲ್ಲಿ ೧೦ ಚಿಕ್ಕ ಚಿಕ್ಕ ದೃಶ್ಯಗಳಿವೆ.ಮೊದಲನೆಯದು ಪೀಠಿಕಾ ದೃಶ್ಯ ಮತ್ತು ಕಡೆಯದು ಉಪಸಂಹಾರ ದೃಶ್ಯ ಎಂದು ಹೆಸರಿಸಿದ್ದು ಮದ್ಯದಲ್ಲಿ ಇಡೀ‌ ಕಥೆ ೮ ದ್ರಶ್ಯದಲ್ಲಿ ಮೂಡಿದೆ.ನಾಟಕದ ಆರಂಭದ ಪೀಠಿಕಾ  ದೃಶ್ಯದಲ್ಲಿ ಯಕ್ಷ ಮತ್ತು ಯಮದೂತರ ಭೇಟಿಯಾಗುತ್ತದೆ.ಅವಸರದಿಂದ ಹೊರಟ ಯಮದೂತನನ್ನು ಯಕ್ಷ ತಡೆದಾಗ “ತಾನು ತುಂಬ ಅವಸರದಲ್ಲಿದ್ದೇನೆ.ಇಂದು ಸತ್ಯವಾನನನ್ನು ಎಳೆದು ಯಮನಲ್ಲಿಗೆ ಒಯ್ಯಬೇಕಾಗಿದೆ.ಇಂದವನ ಸಾವು ನಿಗದಿಯಾಗಿದೆ “ಎನ್ನುತ್ತಾನೆ.ಅದಕ್ಕೆ ಯಕ್ಷ “ಏಕೆ ಅವನೇನು ಮುದುಕನೇ? “ಎಂದು ಕೇಳಿದರೆ ಅದಕ್ಕೆ ದೂತ ಇಲ್ಲ ಅವನ‌ ಮದುವೆಯಾಗಿ ಹನ್ನೆರಡು ತಿಂಗಳೂ ತುಂಬಿಲ್ಲ ಎನ್ನುತ್ತಾನೆ. ಹಾಗಾದರೆ ಅಂಥವನನ್ನು ಏಕೆ ಸಾವಿತ್ರಿ ಆರಿಸಿದಳು ಎಂಬ ಪ್ರಶ್ನೆಗೆ “ಬೇಕೆಂದೇ ಅಂಥ ಅಲ್ಪಾಯುವನ್ನು ಆರಿಸಿದ್ದಾಳೆ ಯಾರೇನು ಮಾಡುವದು” ಎಂದುತ್ತರಿಸಿ ಆಕೆಯ ಸಾವಿತ್ರಿಯ ಕಥೆಯನ್ನು ಹೇ಼ಳುತ್ತಾನೆ.

ಸಾವಿತ್ರಿ ಅಶ್ವಪತಿ ಯೆಂಬ ರಾಜನ ಕುವರಿ.ಆಕೆ ಜನಿಸಿದ್ದೇ ಶಿವನ ಆರಾಧನೆಯ ಫಲದಿಂದ.ಅತ್ಯಂತ ಸುಂದರಿ‌  ಅವಳನ್ನು ಪಾತಿವ್ರ್ಯತ್ಯದೊಳಗೂ ಮೀರಿಸುವರಾರಿಲ್ಲ. ಅವಳಿಗೆ ಅನುರೂಪನಾದ ವರ ಎಲ್ಲಿಯೂ ಸಿಗಲಾರದ್ದರಿಂದ ಅವಳ ತಂದೆ ತನಗೆ ಬೇಕಾದ ಗಂಡನನ್ನು ಹುಡುಕಿಕೊಂಡು ಬರುವಂತೆ  ಅವಳಿಗೆ ಅನುಮತಿಸಿದ.ದೇಶಗಳನ್ನು ಸುತ್ತಿದ ಸಾವಿತ್ರಿ ಅನುರೂಪ ನಾದ ವರ ಎಲ್ಲೂ ಸಿಕ್ಕದೆ ಒಂದು ಋಷ್ಯಾಶ್ರಮದಲ್ಲಿ

ಶತ್ರುಗಳು ರಾಜ್ಯವನ್ನಪಹರಿಸೆ ,ಕುರುಡಾಗಿ ಕಾನನಕೆ ಬಂದು ಋಷಿಚರ್ಯೆಯಲ್ಲಿರುವ ಧ್ಯುಮತ್ಶೇನ ಅರಸನ ಸುತನೂ ಶುದ್ಧಾತ್ಮನೂ ಆದ ಸತ್ಯವಾನನನ್ನು ವರಿಸುತ್ತಾಳೆ.ಆಕೆ ಒಲಿಯಲು ಆತ‌ ಸುಂದರನೆಂಬುದಷ್ಟೇ ಕಾರಣವಿರಲಿಲ್ಲ.

“ಆದರಾ ಸಾವಿತ್ರಿ ಸೌಂದರ್ಯಕೆ‌ ಮರುಳಾಗಲಿಲ್ಲ ಸೌಂದರ್ಯವನು ಮೀರಿ ಆತನೊಳು ಶುಚಿಶೀಲವಿತ್ತು”

ಹೀಗೆ ಆಕೆಯ ಆಯ್ಕೆಯಲ್ಲಿ ಒಂದು ಘನತೆ ಇದ್ದಿತು.ಆಗ ಬಂದ ನಾರದರು ಆತ ಅಲ್ಪಾಯು ಎಂಬುದನ್ನು ಹೇಳಿದರೂ‌ ಕೂಡ ಆಕೆಯ‌ ಪ್ರೇಮ ಹಿಂಜರಿಯಲಿಲ್ಲ.

ಪ್ರೇಮ ಮೃತ್ಯುವಿಗೆ ಬೆದರಿ ಓಡುವದೇ? ಪತಿಯ ಗತಿಯನು

ಕೇಳಿ ಆಕೆಯೊಲುಮೆಯು ಚೈತ್ರಮಾಸದೊಳು

ತಳತೆಸೆವ ವನದಂತೆ ಹಿಗ್ಗಿದುದು

ಒಮ್ಮೆ ಒಬ್ಬರೊಲಿದ ಶುಚಿಯೊಲವು ನೋಡುವುದೇ

ಕಣ್ಣೆತ್ತಿ ಎಂತಿರುವನೆಂದು ಕಡೆಗೆ?

ಹೀಗೆ ಆರಂಭದಲ್ಲಿಯೇ ಆಕೆಯ ಪವಿತ್ರ ಪ್ರೇಮವನ್ನು‌ ನಾಟಕ ಘೋಷಿಸಿಯೇ ಮುಂದೆ ಹೋಗುತ್ತದೆ.ಪತಿಗೆ ಉತ್ತಮ‌ ಸತಿಯಾಗಿ ಮಾತ್ರವಲ್ಲ ,ಸಾವಿತ್ರಿ ಅತ್ತೆ‌ ಮಾವರಿಗೆ ಉತ್ತಮ‌  ಸೊಸೆಯಾಗಿ ಪತಿಯನ್ನು ಅನುಸರಿಸುತ್ತ ಕಾಡಿನೊಳಗೆ ಉಳಿಯುತ್ತಾಳೆ. ಆಕೆಗೆ ತನ್ನ ಪತಿಯ ಆಯುಷ್ಯದಲ್ಲಿ  ಕಡೆಯ‌ ಮೂರು ದಿನಗಳು ಮಾತ್ರ ಉಳಿದಿವೆ ಯಂದು ಗೊತ್ತಾಗಿದೆ‌ ಕೂಡ.ಅದಕ್ಕೆ ಆಕೆ ಪೂಜೆಯಲ್ಲಿ ತೊಡಗಿ ದ್ದಾಳೆ. ಸತ್ಯವಾನನನ್ನು ಯಮನಲ್ಲಿಗೆ‌ ಒಯ್ಯಲು ಬಂದ ದೂತನಿಗೂ ಕರುಣೆಯಿದೆ.ಇಂತಹ ನವ ಯೌವನದ ಜೋಡಿಯನ್ನು ಅಗಲಿಸುವದೆಂತು ಎಂಬ ನೋವಿದೆ.ಆದರೆ ಕರ್ತವ್ಯದ ಕರೆ ಯಾರು ಮೀರಬಲ್ಲರು,? ಆತ ಕರ್ತವ್ಯ ಬದ್ಧ.ಅದಕ್ಕಾಗಿ ಆತ ಯಕ್ಷನೊಂದಿಗೆ ಭೂಲೋಕಕ್ಕೆ ತೆರಳುತ್ತಾರೆ.

ದೃಶ್ಯ ಒಂದರಲ್ಲಿ‌ ಸಾವಿತ್ರಿ ಋಷ್ಯಾಶ್ರಮದ ಎಲೆ‌ಮನೆಯ ಹತ್ತಿರದ ಶಿವನ ಗುಡಿಯಲ್ಲಿ ಪೂಜೆಗೆ ತೊಡಗಿದ್ದಾಳೆ .ಆ ಪತಿವ್ರತೆ,ಕಾಲಚಕ್ರಕ್ಕೆ ಅಂದು ಮುಂದುವರಿಯದಂತೆ , ಸೂರ್ಯನಿಗೆ ಉದಯವಾಗದಂತೆ ಪ್ರಾರ್ಥಿಸುತ್ತಿದ್ದಾ಼ಳೆ.ಒಂದು ವೇಳೆ ಸೂರ್ಯೊದಯವಾದರೆ ತಾನೆ? ಆಕೆಯ ಗಂಡನಿಗೆ ಸಾವು ಬರುವದು? ಸಾವಿನ‌ ನೋವು ಅವಳ ಮಾತಲ್ಲಿ ಮಡುಗಟ್ಟಿದೆ.ಗಾಳಿ ಬೀಸಿದರೆ,ಎಲ್ಲಿ ಸಪ್ಪಳವಾಗಿ ಅಂದೆ ಕಡೆಯ ದಿನವೆಂಬುದನು ಯಮನಿಗೆ ನೆನಪಿಸಿತೋ ? ಎಂದು ದಿಗ್ಭ್ರಮೆ ತಾಳುತ್ತಾಳೆ. ಆಕೆ ಆ ದುಃಖದಲ್ಲಿರುವಾಗಲೇ ಸತ್ಯವಾನನ ಪ್ರವೇಶವಾಗುತ್ತದೆ.ಆತ ಫಲ ಪುಷ್ಪಗಳಿಗಾಗಿ ವನಕೆ ಹೊರಟು ನಿಂತಿದ್ದಾನೆ. ಹೆಂಡತಿ‌ ಮೂರು ದಿನದಿಂದ ಏನು‌ಪೂಜೆ ನಡೆಸಿದ್ದಾಳೆ ಎಂಬ ಅಚ್ಚರಿ ಅವನಿಗೆ. ಆತನನ್ನು ಕಾಡಿಗೆ ಹೋಗದಂತೆ ತಡೆದ ಸಾವಿತ್ರಿ ಇಬ್ಬರೂ‌ ಕೂಡಿಯೇ ಪೂಜಿಸಬೇಕೆಂದು ಕೋರುತ್ತಾಳೆ. ಅವಳ ಒಲುಮೆಗೆ ಮಣಿದ ಸತ್ಯವಾನ ಕಾಡಿಗೆ ಹೋಗದೆ ಅಲ್ಲಿಯೇ ಉಳಿಯುತ್ತಾನೆ.ಗಂಡನಿಗೆ ಇಂದು‌ ಅವನ ಕಡೆಯ ದಿನವೆಂಬುದು ತಿಳಿದಿಲ್ಲವೆಂದು ಆಕೆಗೆ ನೋವು ತುಂಬಿದೆ.ಕಡೆಗೂ ಕಾಡಿಗೆ ಹೊರಟ ಅವನೊಡನೆ ಹೊರಟು ನಿಂತ ಅವಳು ಇಂದೇಕೆ ಹೀಗೆ ಮಾಡುತ್ತಿದ್ದಾಳೆ ಎಂದು ಅಚ್ಚರಿಯವನಿಗೆ.ಏಕೆ? ಎಂದು ಕೇಳಿದರೆ ಕನಸಿನ‌ ನೆವದಿಂದ ಮರೆಸಿ ತಾನೂ ಹೂವನಾರಿಸಲು ಬರುವೆನೆಂದು ಗಂಡನೊಡನೆ ಹೊರಡುತ್ತಾಳೆ.ಇಡೀ ದೃಶ್ಯದಲ್ಲಿ ಮುಂದಾಗುವ ನೋವು ಅರಿತ ಸಾವಿತ್ರಿಯಲ್ಲಿ  ತಳಮಳ ಮಡುಗಟ್ಟಿದೆ.ಆಕೆ ಕಾಡಿಗೆ

ಎನ್ನಿನಿಯನೊಡನಿಂದು ನರಕವಾದರೆ ನರಕ !

ಸಗ್ಗವಾದರೆ ಸಗ್ಗ! ನಾಶವಾದರೆ ನಾಶ!

ಯಮರಾಯನೊಡ್ಡುತಿಹ‌ ಪಾಶವಾದರೆ ಪಾಶ!

ಎಂದು ತೀರ್ಮಾನಿಸಿಯೇ ಹೊರಟಿದ್ದಾಳೆ.ಇಲ್ಲಿ‌ಮತ್ತೆ ಆಕೆಯ‌ಪಾತಿವೃತ್ಯದ ಪರಿಚಯ ನಮಗಾಗುತ್ತದೆ.ಗಂಡನಿಗೆ ಸಾವು ಬಂದರೆ ತನಗೂ‌ ಬರಲಿ ಎಂಬ ಗಟ್ಟಿ ನಿರ್ಧಾರ ಅವಳದು.

ಮುಂದಿನ ದೃಶ್ಯ ಫಲ ಪುಷ್ಪಗಳನರಸುತ್ತ ಸತ್ಯವಾನ ಸಾವಿತ್ರಿ ಕಾಡಲ್ಲಿ ಅಲೆಯುತ್ತಿದ್ದಾರೆ.ಬಹಳ ಸಾಂಕೇತಿಕವಾದ ಮಾತಿನಿಂದಲೇ ಈ ದೃಶ್ಯ ಆರಂಭವಾಗುತ್ತದೆ ಸತ್ಯವಾನ ” ಬಾ,ನೋಡಿಲ್ಲಿ ಹರಿಣಿಯನ್ನು ಹುಲಿಯ ಬಾಯಿಂದ‌ ನಾನು ರಕ್ಷಿಸಿದ್ದು ಇಲ್ಕಿಯೇ ” ಎಂದರೆ , ಸಾವಿತ್ರಿ ” ಆ ಪುಣ್ಯ ನಿನ್ನನೀ ದಿನ ಬಂದು ರಕ್ಷಿಸಲಿ” ಎನ್ನುತ್ತಾಳೆ..ಆತ ಸರಸಕ್ಕೆಳಸಿದರೆ ಆಕೆಗೆ ಸಾವಿನ ಬಾಯಲ್ಲೂ ಸರಸವೇ ಎಂಬ ಹೆದರಿಕೆ ಕಾಡುತ್ತದೆ. ಆಕೆಯ ಮನದಲ್ಲಿ ಸಾವೇ ಪ್ರತಿದ್ವನಿಸುತ್ತಿದೆ ಪ್ರತಿ‌ ಮಾತಲ್ಲೂ ಅದು ಸೂಸುತ್ತಿದೆ ಸತ್ಯವಾನ

ನೋಡಲ್ಲಿ ಮುತ್ತುಗದ ಹೂವು

ಪೃಕೃತಿದೇವಿಯ ಬರವಿಗಾಗಿ ವನದೇವಿ

ಹಿಡಿಯಿಸಿದ ಪಂಜುಗಳೋ ಎಂಬಂತೆ ರಂಜಿಸಿವೆ

ಎಂದರೆ,ಅದಕ್ಕೆ ಸಾವಿತ್ರಿ ” ಬಹುದೂರ ಮಸಣದೊಳು ಉರಿವ ಸೂಡುಗಳೊ ಎಂಬಂತೆ ತೋರುತಿವೆ” ಎನ್ನುತ್ತಾಳೆ . ಸತ್ಯವಾನನಿಗೆ ಅಚ್ಚರಿ ! ಅಮಂಗಳದ ನುಡಿಯೇಕೆ,? ಎನ್ನುತ್ತಾನೆ.ಆಕೆ ಹೆಜ್ಜೆ ಹೆಜ್ಜೆಗೆ  ಭಯ ಎದುರಿಸುತ್ತ ಹೋಗುವ ಕಾಲ ಚಕ್ರಕ್ಕೆ “ಕರುಣೆಯಿಲ್ಲವೇ ನಿನಗೆ” ಎನ್ನುತ್ತ ಪರಮೇಶ್ವರನಲ್ಲಿ ಪತಿಭಿಕ್ಷೆ ಬೇಡುತ್ತ ಗಂಡನೊಂದಿಗೆ ತಿಳಿನೀರ ವಾಹಿನಿಯೆಡೆ ತೆರಳುತ್ತಾಳೆ.

         ಮೂರನೆಯ ದೃಶ್ಯವೂ ಅದೇ ಕಾಡಲ್ಲಿ ನಡೆಯುತ್ತದೆ. ಅಷ್ಟೊತ್ತಿಗೆ ಸಂಜೆಯಾಗಿದೆ ಯಕ್ಷ ,ಯಮದೂತ ಅಲ್ಲಿಗೆ ಬರುತ್ತಾರೆ.ಯಮದೂತನಿಗೆ ಸಂಜೆಯಾಗುತ್ತಿದ್ದಂತೆ ತನ್ನ‌ ಕಾರ್ಯದ ನೆನಪಾಗುತ್ತದೆ. ಸತ್ಯವಾನ. ಸಾವಿತ್ರಿಯರನ್ನು ನೋಡಿದ ಯಕ್ಷನಿಗೆ‌ ಮುದ್ದಾ‌ದ ಪ್ರೇಮಿಗಳು ಎಂದು ಬೇಸರವಾಗುತ್ತದೆ.ಯಮದೂತನಿಗೂ ಬೇಸರವಿದೆ. ಆದರೇನು?

“ಯಮನೂರು ದಯೆಯ ಬೀಡಲ್ಲ,ನಿಷ್ಪಕ್ಷ ಪಾತವಾಗಿಹ ಧರ್ಮದೂರು , ಯಮಪಾಶ ಕಂಬನಿಗೆ ಕರಗುವಂತಹುದಲ್ಲ

ರೋದನಕೆ ಮರುಳಾಗದೆಂದಿಗೂ”

ಅದು ಅಸಂಖ್ಯ ಹೆಂಗಳೆಯರನ್ನು ವಿಧವೆಯರನ್ನಾಗಿಸಿದ ಧೂರ್ತ,ಗಣನೆಯಿಲ್ಲದ ಮಾತೆಯರ ಕಲ್ಲಾಗಿಸಿದ ನಿಷ್ಕರುಣಿ.,ಕೋಟಿ ವೀರರ ರಕ್ತವ ಕುಡಿದು ಕೊಬ್ಬಿರುವ ಪಾಶ, ಯೋಗಿಗಳ,ಅವತಾರಪುರುಷರು,ಋಷಿವರರು ಯಾರನ್ನು ಬಿಟ್ಟಿಲ್ಲ.ಇಂತಿರುವ ಅದು ಈ‌‌ ನೀರ ನೀರೆಯರ ಗೋಳಿಗಂಜುವದೇ ? ಎನ್ನುತ್ತಾನೆ .ಅಷ್ಟೊತ್ತಿಗೆ ಸತ್ಯವಾನ ಸಾವಿತ್ರಿಯರೆ ಅತ್ತ ಬರುತ್ತಾರೆ.ಈ ಯಕ್ಷ ಮತ್ತು‌ ಯಮದೂತ  ಇಬ್ಬರೂ  ಅದೃಶ್ಯ ಜೀವಿಗಳಾಗಿ. ಅವರ  ನಡೆ ನೋಡುತ್ತ ನಿಲ್ಲುತ್ತಾರೆ. ಸತ್ಯವಾನನಿಗೆ ಸಾಕಾಗಿದೆ‌. ಮಡದಿಯ ತೊಡೆಯ ಮೇಲೆ ತಲೆಯಿಟ್ಟು‌ ಮಲಗುತ್ತಾನೆ.ಸಾವು ಸಮೀಪಿಸಿದ ಸಂಕೆತ ವದು. ಸತ್ಯ ತಿಳಿದ ಸಾವಿತ್ರಿ ತನ್ನ‌ ಪತಿವೃತಾ ಧರ್ಮಕ್ಕೆ ” ಬಂದೆನ್ನ‌ ಕಾಪಾಡು’

ಎಂದು ಬೇಡಿಕೊಳ್ಞುತ್ತಾಳೆ.ಇಲ್ಲಿಗೆ ತುಸು ದೀರ್ಘವಾದ ಮೂರನೆಯ ದೃಶ್ಯ ಮುಗಿಯುತ್ತದೆ.

ನಾಲ್ಕನೆಯ ದೃಶ್ಯದ ಆರಂಭದಲ್ಲಿಯೇ ಯಮದೂತ ತಲ್ಲಣಗೊಂಡಿದ್ದಾನೆ.ಆತನ‌ ಮನದಲ್ಲಿ ತಳಮಳ ಆರಂಭವಾಗಿದೆ.ಏನೂ ತಪ್ಪು‌ಮಾಡದ ಸಾವಿತ್ರಿಯ ಗಂಡನ ಜೀವ ಅಪಹರಿಸುವದು ಅವನಿಂದ ಸಾದ್ಯವಾಗದಾಗಿದೆ. ಪತಿವ್ರತೆಯ ಜ್ವಾಲೆಯೊಳು ಸಿಕ್ಕಿದ್ದಾನೆ. ಮೂರು ಸಲ ಸತ್ಯವಾನನ ಪ್ರಾಣ ಎಳೆಯಲು ಯತ್ನಿಸಿದರೂ ಅವನಿಂದ ಸಾದ್ಯವಾಗಿಲ್ಕ.ಅವಳ ಓಜೆಯ ಉರಿಯ ಸುಳಿಯಲ್ಲಿ ಬಿದ್ದು ಅದರಿಂದ ಪಾರಾಗುವ ದಾರಿ ಸಿಗದೆ ಯಮಧರ್ಮನಲ್ಲಿಗೇ ಓಡುತ್ತಾನೆ.ದೃಶ್ಯ ೫ ರಲ್ಲಿ ಸಾಕ್ಷಾತ್ ಯಮನೇ ಬ಼ಂದಿದ್ದಾನೆ.ತಾನು ಜಗದ ಧರ್ಮಾಧಿಕಾರಿ ತನ್ನ ಧರ್ಮದ ಮೇಲೆ ಒಪ್ಪಿಗೆಯಿಟ್ಟು ನಿನ್ನ‌ಗಂಡನನ್ನೊಪ್ಪಿಸು ಎನ್ನುತ್ರಾನ .ತನ್ನ  ಮೇಲಿನ ಕರುಣೆಯಿಂದಲಾದರೂ ತನ್ನ‌ ಇನಿಯನನ್ನು ಉ಼ಳುಹಲಾರೆಯಾ ಎಂದ ಅವಳ‌ ಮಾತಿಗೆ

” ಜಗದ ಧರ್ಮದ ನೀತಿಯನರಿತವ಼ಳು‌ ನೀನು ,ಬಿಡು ” ಋತದ ನಿಯಮ‌ ಒಪ್ಪು ಎನ್ನುತ್ತಾನೆ ಆದರೆ ಆಕೆ ಹದಿಬದೆಯ ಧರ್ಮ,ತನ್ನತನ,ನನ್ನಿ,ನಿಷ್ಕಾಮ ಪ್ರೇಮ , ಪರಮೇಶ ಭಕ್ತಿ  ಇವುಗಳಿಗಾಗಿ ಋತವು ಒಪ್ಪದೇ? ಎನ್ನುತ್ತಾಳೆ.ಆದರೆ ಯಮ ಧರ್ಮನದು ಒಂದೇ ಮಾತು.ರಾಮ‌, ಕೃಷ್ಣರಂಥವರೆ ಋತ ಧರ್ಮಕ್ಕೆ ಸಾವು ಅನುಭವಿಸಿದ್ದಾರೆ.” ಹುಟ್ಟಿದವರಿಗೆಲ್ಲರಿಗೂ ಸಾವು ಉಂಟೇ ಉಂಟು” ಎನ್ನುತ್ತಾನೆ.

ಸರಿ ಹಾಗಾದರೆ,ಪತಿಯ‌ಕೂಡ ಎನ್ನನೂ ಒಯ್ಯು,ಪತಿಯಳಿದ ಮೇಲೆ ಸತಿಗೆ ಜೀವವೇ ಸಾವು! ಹರ್ಷದಿಂದೈತರುವೆ ಪತಿಯೊಡನೆ!

ಇದು ಸಾವಿತ್ರಿಯ ಹಟ. ಆದರೆ ಯಮ‌ “ಯಾರ ಜೀವಿತ ಮುಗಿದಿಲ್ಲವೋ ಅವರ ಬಳಿ ಸುಳಿಯಲೆನಗೆ ಅಧಿಕಾರವಿಲ್ಲ”  ಎನ್ನುತ್ತಾನೆ.ಆದರೆ ಯಮನಿಗೆ

 “ಧರ್ಮವೊಲವಿಗೆ ಶರಣು ಎಂದು ನೀನರಿತಾಗ ನನ್ನಿನಿಯನನ್ನೆನಗೆ ಹಿಂದಕೊಪ್ಪಿಸಬೇಕು “

ಎಂಬ ಮಾತನ್ನಿತ್ತು ದೂರ ನಿಲ್ಲುತ್ತಾಳೆ. ಯಮನೇನೋ ಸತ್ಯವಾನನ ಜೀವವನ್ನು ಸೆಳೆದೊಯ್ದ.  ಸಾವಿತ್ರಿ ಬಿಟ್ಟಳೇ! ಸತ್ಯವಾನನ ಜೀವವನ್ನು ತಗೆದುಕೊಂಡು ಹೊರಟ

 ಯಮನನ್ನು  ಬೆನ್ನು ಹತ್ತುತ್ತಾಳೆ.ಪ್ರೇಮಾನುರಾಗ ವು  ಧರ್ಮವನು‌ ಮೀರಿರುವದೆಂಬುದನು ಸಾಧಿಸುವೆನೆಂದು ಹೊರಡುತ್ತಾಳೆ.

   ದೃಶ್ಯ ೬ ರಲ್ಲಿ ಮುಂದೆ ಯಮ ಹಿಂದೆ ಸಾವಿತ್ರಿ ದೇವಲೋಕ ದತ್ತ ಹೊರಟಿದ್ದಾರೆ.ದಿಗಿಲಾದ ಯಮ ” ಏಕೆನಗನಳನ್ನುಸರಿಸಿ ಬರುತಿಹೆ ತಾಯೆ? ಎಂದು ಪ್ರಶ್ನಿಸಿದರೆ-

ನಿನ್ನ ನಾನನುಸರಿಸಿ ಬರುತಿಲ್ಲ ಯಮದೇವ

ಪತಿಯನನುನಸಿರಿಸಿ ಬರುತಿಹೆನು,ಹುಟ್ಟಿದವರೆಲ್ಲ

ರೂ ಸಾಯುವದು ಧರ್ಮವೆಂದೊರೆದೆ,

ಅಂತೆಯೆ ಸತ್ತ ಪತಿಯರ ಹಿಂದೆ ಹೋಗುವದು

ಪತಿವ್ರತಾ ರಮಣಿಯರ ಧರ್ಮ ! ಒಲಿದೆದೆಗ

ಳೆಂದಿಗೂ ಅಗಲಲಾರವು  ಎಂಬುದಿದು ವಿಶ್ವ ನಿಯಮ

ಎನ್ನುವ ಸಾವಿತ್ರಿ ಯಮನಿಗೆ “ನಿನ್ನ ಧರ್ಮ‌ ನೀನು ಮಾಡು ,ನನ್ನ ಧರ್ಮ ನಾನು‌ ಮಾಡುತ್ತೇನೆ” ಎನ್ನುತ್ತಾಳೆ. ಆಕೆಯ ಧರ್ಮಕೆ ಮೆಚ್ಚಿದ ಯಮ ವರವನೀಯುತ್ತೇನೆ ಬೇಡು ಎಂದಾಗ ಬಹಳ ಚಾಣಾಕ್ಷತನದಿಂದ ತನ್ನ ಮಾವನಿಗೆ ಕಣ್ಣು ಬರುವಂತೆ ವರ ಬೇಡುತ್ತಾಳೆ.ಇಲ್ಲಿ ಆಕೆಯ ನಿಸ್ವಾರ್ಥತೆ ಎದ್ದು ಕಾಣುತ್ತದೆ.೭ ನೆಯ ದೃಶ್ಯದಲ್ಲಿ  ಯಮ ಮಾನವ ಲೋಕ ದ ಎಲ್ಲೆ ದಾಟಿ ತನ್ನ ಲೋಕದತ್ತ ಹೋಗುತ್ತಾನೆ.ಮರಳಿ ನೋಡಿದರೆ ಸಾವಿತ್ರಿ ಬೆನ್ನಹಿ಼ಂದೆಯೆ ಇದ್ದಾಳೆ. ಏಕೆ  ಎಂಬ ಅವನ‌ ಪ್ರಶ್ನೆ ” ದೇಹ ಮನವನರಸುವದು .ಮನದ ಧರ್ಮ‌ವ ಮನವು‌ ಮಾಡುತಲಿಹುದು …ಪತಿಯಾತ್ಮದರ್ಧ ಸತಿ ಎಂಬುದದು ಋತಸಿದ್ಧ  ಆತ್ಮವಿಹ ಕಡೆ ದೇಹ ಮನಸುಗಳು ಹೋಗುವದು ಧರ್ಮ !

ಎಂದು ಮತ್ತೆ ತನ್ನ ಧರ್ಮವನ್ನೇ ಸಾರುತ್ತಾಳೆ .ಆಕೆಯ ನಿರ್ಧಾರಕ್ಕೆ ಮೆಚ್ಚಿದ ಯಮ ಈಗಲಾದರೂ ಇನ್ನೊಂದು ವರ‌ ಕೊಟ್ಟು  ಅವಳನ್ನು ಸಾಗ ಹಾಕಬೇಕೆಂದುಕೊಂಡು ಇನ್ನೊಂದು‌ ವರ ಕೊಡುತ್ತಾನೆ .ಆಗಲೂ ತನ್ನ‌ಗಂಡನ ಜೀವ ಕೇಳದ ಸಾವಿತ್ರಿ ” ಮಾವನಿಗೆ ಕಳೆದ ಧರೆ ಆಳಿದ ಸಿರಿಗಳು ಬರಲಿ” ಎಂದು ಬೇಡಿಕೊಳ್ಳುತ್ತಾಳೆ. ಆಗಲೂ ಬೆನ್ನು ಹತ್ತಿದ ಅವಳಿಗೆ ಯಮ‌ ಇನ್ನು ಜೀವವುಳ್ಳ ಮಾನವರು ಬರಬಾರದು ಎಂದರೆ ಧರ್ಮದಿಂದ ಧರ್ಮವನ್ನು ಗೆಲ್ವೆನೆಂಬ ನಿರ್ಧಾರವನ್ನೇ ತೋರುತ್ತಾಳೆ.

೮ ನೆಯ ದೃಶ್ಯದ ಆರಂಭದಲ್ಲಿ‌ ಮತ್ತೆ ತನ್ನ ಹಿಂದೆ ಏನೋ ಸದ್ದು ಬರುವದ ಕೇಳಿದ ಯಮನಿಗೆ ದಿಗಿಲು .ಮತ್ತೆ ಸಾವಿತ್ರಿಯನ್ನು‌ ನೋಡಿದ ಯಮ‌ ಎರಡು ವರಗಳ‌ ಪಡೆದು‌ ಬೆನ್ನು ಹತ್ತುವದು ಧರ್ಮವೇ ? ಎಂದರೆ “ಪತಿಯ ತ್ಯಜಿಪುದು ಸತಿಗೆ ಧರ್ಮವೇ?” ಎಂಬ ಮರು ಪ್ರಶ್ನೆ ಯೊಡ್ಡುತ್ತಾಳೆ.ನಿನ್ನ  ಗಂಡ ನರಕಕ್ಕೆ ಹೋದರೆ ಅಲ್ಲಿಗೂ ಹೋಗುವಿಯಾ ? ಎಂದು‌ ಪ್ರಶ್ನೆ ಹಾಕಿದ ಯಮನಿಗೆ

“ಸಂತಸದಿ ಹೋಗುವೆನು ಯಮರಾಯ ,ಹಿಗ್ಗಿ

ಆನಂದದಿಂದವನ ಗತಿಯಪ್ಪುವೆನೆಂದು

ಎಲ್ಲಿ ಪತಿಯಿದ್ದರದೆ ಸಗ್ಗ,ಅನುರಾಗ

ವಿದ್ದಲ್ಲಿ ವೈಕುಂಠ, ಪ್ರೇಮವೆಲ್ಲಿಹುದೋ

ಅಲ್ಲಿ‌ ಕೈಲಾಸ ,ಎದೆಯೊಲ್ಮೆ ಎಲ್ಕಿಹುದೊ ಅಲ್ಲಿ‌ ಮುಕ್ತಿ”

ಎನ್ನುವ ಸಾವಿತ್ರಿಯ‌ ಮಾತಿಗೆ, ನಡೆಗೆ ಮೆಚ್ವಿದ ಯಮ ಇನ್ನೊಂದು ವರ ಕೇಳುತ್ತಾನೆ ಈ ಬಾರಿ ಸಾವಿತ್ರಿ-

ಹೇ ಧರ್ಮದೇವ ,

ನನ್ನ ಮಾವನ ವಂಶ ಹಾಳಾಗದಿರಲಿ,

ಅವನ ನೆಲ ಸತ್ಯವಾನನ ಸುತರ ಕೈಸೇರಲಿ

ಎಂಬ ವರ ಬೇಡುತ್ತಾಳೆ.ಈ ವರಗಳು ಈಡೇರಬೇಕಾದರೆ ಯಮ‌ ಸತ್ಯವಾನನ ಜೀವ ಮರಳಿಸಲೇ ಬೇಕಲ್ಲವೇ ! ಸತ್ಯವಾನನಿಲ್ಲದೆ ಸತ್ಯವಾನನ ವಂಶ ಬೆಳೆಯುವದೆಂತು? ಯಮಧರ್ಮ ತಥಾಸ್ತು ಎನ್ನುತ್ತಾನೆ.

ಮಿರ್ತುವನು ಎದೆಯೊಲವು ಗೆದ್ದಿತೆಲೆ ತಾಯೆ

ನಿನ್ನಿನಿಯನನ್ನಿಗೋ ಕೊಟ್ಟಿಹೆನು‌

ಎಂದು ವರವಿತ್ತುದೆ ಅಲ್ಲದೇ , “ಯಮನ ಜಯಿಸಿದ ಕಥೆಯ ಜಗಕೆ ಹೇಳು”  ಎಂದು ವರವನಿತ್ತು ತೆರಳುತ್ತಾನೆ. ಕೊನೆಯ ಉಪಸಂಹಾರ ದೃಶ್ಯದಲ್ಲಿ ದೂತ ಮತ್ತು ಯಕ್ಷ ಬಂದು ಸಾವಿತ್ರಿಯ ಮಹಾಪ್ರೇಮವನ್ನು ಮತ್ತೊಮ್ಮೆ ಸ್ತುತಿಸುತ್ತಾರೆ.ಪ್ರೇಮವು ಧರ್ಮವನ್ನು‌ ಮೀರಿದ್ದು ಎಂಬುದನ್ನು ಅವರ ಮಾತು ಪುಷ್ಟೀಕರಿಸುತ್ತವೆ. “ಪ್ರೇಮ ಧರ್ಮವನು ಗೆದ್ದು ಬಾವುಟವ ಹಿಡಿದೆತ್ತಿ ನಭಕೆತ್ತಿದುದ ಕಂಡೆ ” ಎಂದು ಯಮದೂತ ಹೇಳುತ್ತ ಯಮನನ್ನು ಸೋಲಿಸಿದವಳು ಎಂದು ಅಚ್ಚರಿಪಡುತ್ತಾನೆ. ಅದಕ್ಕೆ ಯಕ್ಷ “ಯಮನೂ ಪ್ರೇಮಕ್ಕೆ ಕಿಂಕರನು” ಎಂದು ತನ್ನ‌ ಮುದ್ರೆ ಒತ್ತುತ್ತಾನೆ.ಆತ ಕಡೆಗೆ ಹೇಳುವ ಭರತವಾಕ್ಯ ವಿದು

ನಿಯಮಜಾಲವ ಮೀರಿರುವ ನಿಯಮವೊಂದಿರುವದು

ಯಮದೂತ.ನುಡಿಗೆ ನಿಲುಕದ ಬುದ್ದಿಯರಿಯದಿಹ,

ಅತ್ಯನಿರ್ವಚನೀಯ ತತ್ವವೊಂದೀ ಸರ್ವ ವಿಶ್ವವನು

ಸರ್ವತ್ರ ತುಂಬಿ ಮರೆಯಾಗಿಹುದು.

ಆ ಪರಮ ತತ್ವ ಸ್ರೂಪವೇ ಪ್ರೇಮ

ಧರ್ಮನೂ ಪ್ರೇಮಕ್ಕೆ ಕಿಂಕರನು,ನಿಯಮಗಳು

ಶುದ್ಧವಹ ದಿವ್ಯಾನುರಾಗಕ್ಕೆ ಸೇವಕರು

ಪ್ರೇಮದಿಂದಲೇ ಹೊಳೆಯಿತೀ ಮಹಾಬ್ರಹ್ಮಾಂಡ

ಪ್ರೇಮದಾಧಾರದಿಂದಲೇ ಬಾಳುತಿಹುದು.

ಪ್ರೇನವಾರಿ್ಇಯಲ್ಲೇ ಕಡೆಗೈಕ್ಯವಾಗುವದು

ಪ್ರೇಮಮೂರುತಿಯಾದ ಸಾವಿತ್ರಿದೇವಿಗೆ

ಉಮನು ಸೋತುದಚ್ಚರಿಯಲ್ಲ,ಬಾ ಮಿತ್ರ

ನಾವಿಂದು ಜಗವೆಂದು ಕಾಣದಿಹ  ಪ್ರೇಮದ

ಮಹಾವಿಜಯವಂ ಕಂಡು ಧನ್ಯರಾಗಿಹೆವು

ಎಂದು ಧರ್ಮವಾಕ್ಯ ಸಾರುವಲ್ಲಿಗೆ ನಾಟಕ ಮುಗಿಯುತ್ತದೆ.ಅವನ ಧರ್ಮದ ನೀತಿಯಲ್ಲಿ  ಅವನನ್ನು  ಗೆಲ್ಲುತ್ತಾಳೆ .ಅವಳ ಪತಿವ್ರತಾ ಧರ್ಮ ಮತ್ತು ಪ್ರೇಮದ ಎದುರು ಋತ ಧರ್ಮವೂ ಸೋಲುತ್ತದೆ.

ಈ ಪೌರಾಣಿಕ ಕಥೆ ಅರವಿಂದರ ಸಾವಿತ್ರಿ‌ ಮಹಾಕಾವ್ಯಕ್ಕೆ ವಸ್ತುವಾಗಿತ್ತು. ಇಲ್ಲಿ ಮಾನವ ಪ್ರೇಮದ ದಿಗ್ವಿಜಯದ ಕಥೆಯಾಗಿ‌ ಮೂಡಿದೆ. ಕುವೆಂಪು ಪೌರಾಣಿಕ ಕಾವ್ಯಗಳ ಕಥೆಗೆ ನೀಡುವ ಮಾನವ಼ಿಯ ಮೌಲ್ಯಗಳ ಸ್ಪರ್ಶಕ್ಕೆ ಮತ್ತೊಂದು ಉದಾಹರಣೆಯಾಗಿದೆ.

************}*

ಯಾಕೊಳ್ಳಿ ಯ.ಮಾ

One thought on “ಯಮನ ಸೋಲು

  1. ಆಳವಾಗಿದೆ.ಇಂತಹ ಕಥೆಗಳ ಲೇಖನವು ಅಧ್ಯಯನವಾಗುತ್ತವೆ.ಕುವೆಂಪು ರವರ ಸಾಹಿತ್ಯವನು ಓದಬೇಕು.
    ಹಾಗೆಯೆ ತಮ್ಮ ವಿಮರ್ಶಾ ನುಡಿಯು ಬಹು ಸೊಗಸು.

Leave a Reply

Back To Top