ಕವಿತೆ
ನಿನ್ನ ಪಾಪದ ಹೆಣ
ಬೆಂಶ್ರೀ. ರವೀಂದ್ರ
ಹೇಳಿ ಬಿಡಬಹುದಿತ್ತು ಈ ಮಾತುಗಳ
ಪ್ರತಿಮೆ ರೂಪಕಗಳಲ್ಲಿ
ಕತೆಯೊಂದರ ಮುಸುಕಿನಲ್ಲಿ
ಪುರಾಣಗಳ ಪುಣ್ಯಕತೆಗಳ ಅವತರಣಿಕೆಗಳಲಿ
ಅಥವಾ
ಆಧುನಿಕತೆಯ ಹೆಸರಿನಲಿ
ಎಲ್ಲೆ ಮುರಿದಿದ್ದನ್ನು ತರ್ಕಿಸಿ ಸುಸಂಬದ್ಧಗೊಳಿಸಬಹುದಿತ್ತು.
ಪ್ರಾಣಿಗಳ ಹುಟ್ಟುಗುಣವಿದು ಎಂದು ಮನಶ್ಶಾಸ್ತ್ರದ ಮೆರಗನೀಯಬಹುದಿತ್ತು
ಹೇಳಿಬಿಡುತ್ತೇನೆ ಎಲ್ಲವೀಗ
ಬಟಾಬಯಲಲ್ಲಿ ನಿಂದು
ನಿನಗೆ ನಿನ್ನಂತವರಿಗೆ ಹಿಂದಿನವರಿಗೆ ಮುಂದಿನವರಿಗೆ
ಸಾಕು ಸಾಕಾಗಿದೆ
ನಿಶಸ್ತ್ರಿಯ ಮೇಲೆ ದುರಹಂಕಾರದ ನಿನ್ನ ಶಸ್ತ್ರವ ತೂರಿ ಆಕ್ರಮಿಸುವುದನ್ನು ಸಹಿಸಹಿಸಿ.
ಮತ್ತಿಂದು
ಪೋಲಿಸು ಠಾಣೆಗಳಲ್ಲಿ, ಪತ್ರಿಕೆಗಳಲಿ, ಮುಗಿಲಿಗೆ ಲಗ್ಗೆ ಹಾಕಿದ ಭುಗಿಲು
ಮಾಧ್ಯಮಗಳಲಿ
ಗುಪ್ತ ವಿಚಾರಣೆಗಳಲಿ ನ್ಯಾಯಾಲಯಗಳಲಿ ಮತ್ತೆ
ನನ್ನ ನಗ್ನಗೊಳಿಸಿ ಹುರಿದು ಮುಕ್ಕುವ ನಿನಗೆ
ಹಳೆಯದು,
ಹೊಸದಾಗಿ ಹೊಸೆದ ಹಳೆಯ
ಶಾಸ್ತ್ರಗಳ ಧಿಕ್ಕರಿಸಿ ಹೇಳಿಬಿಡುವೆ
ನಾನೀಗ ಬರಿಯ ಸಂತ್ರಸ್ತೆಯಲ್ಲ,
ಶಸ್ತ್ರಾಸ್ತ್ರ ಸಜ್ಜಿತೆ
ಮುರಿದುಬಿಡುವೆ ಎಲ್ಲ ಮುರಿದುಬಿಡುವೆ.
ಕಾಡುಮೇಡಲಿ ಅಲೆದೆ ಕಾಡೆಂದರಿಯದೆ
ಕಾಡು ಪ್ರಾಣಿಯೆ ನಿನ್ನ ಜಾಡನರಿಯದೆ,
ಸುಖವುಂಡು ನೋವಿತ್ತು ನೀ
ಹರಿದು ಮುಕ್ಕಿಬಿಟ್ಟೆ ; ನೆಲಕೆ ಒತ್ತಿಬಿಟ್ಟೆ
ಬರೆದ ಶಾಸ್ತ್ರಗಳಲಿ ನೆಯ್ದ ಸೂತ್ರಗಳಲಿ
ನಿಲ್ಲಿಸಿಬಿಟ್ಟೆ ಎನ್ನ ಬಾಗಿಲ ಹೊರಗೆ ಜಾಣತನದಲಿ
ನದಿ ತಟಾಕಗಳಲಿ ನಾಗರೀಕತೆಯ ಕಟ್ಟಿದೆನೆಂಬ ಬಿಮ್ಮಲಿ
ಬುವಿ ನದಿಗಳ ಬಳಸಿ ನನ್ನ ಹೆಸರಿಟ್ಟು
ಆರತಿಯ ಜ್ವಾಲೆಯಲಿ ಕರಕಾಗಿಸಿಟ್ಟೆ
ಜಗದ ಉದ್ದಗಲ ಅಂಗುಲಂಗುಲ ಲಂಗುಲಗಾಮಿಲ್ಲದೆ ಹೇಸಿಗೆಯ ಮಾಡಿ
ಮನಸು ಕೊರಾಡಾಗಿಸಿ
ನನ್ನ ಆಳ ಹೊರಟೆ, ಮೇಲಾಳಾಗಿ
ಆಳಕೆ ಅದುಮಿ ಆಳ ಮಾಡಿಬಿಟ್ಟೆ
ನೀನು ಮಾಡಿದ
ಯುದ್ದಗಳಿಗೆ ಶಸ್ತ್ರಾಸ್ತ್ರವೆನ್ನ ಮಾಡಿದೆ
ಫಿರಂಗಿಗಳ ಗುಂಡುಗಳಲಿ ಸೀಳಿಬಿಟ್ಟೆ
ಬಸಿದ ರಕ್ತವ ಕ್ಯಾನ್ವಾಸಿನಲ್ಲಿ ಚೆಲ್ಲಿ ನವ್ಯಕಲೆಯೆಂದು ಸಾರಿಬಿಟ್ಟೆ
ಎದೆಯ ನುಡಿಯನು ಎರಡಾಗಿಸಿ
ಒಳಾಂಗಳದ ಭಾನಗಡಿಯ ಬಚ್ಚಿಟ್ಟೆ
ನನ್ನ ಚಿಟ್ಟೆಯೆಂದು ಬಿಟ್ಟೆ.
ನಾನಿನ್ನು ಬಿಡುವುದಿಲ್ಲ
ನನ್ನ ಕೈ ಕಾಲಿಗೆ ಕೋಳವಿಕ್ಕಲು
ಪುಕಪುಕಿಸಿಸುವ ನಿನ್ನ ಪುಕ್ಕಲುತನಕೆ
ಸೋಗದಂಬರ ತೊಡಲು
ಇನ್ನು ಆಗಲಾರೆ ನಿನ್ನ ತೆಕ್ಕೆಯ ಮುಳ್ಳುಗಳಿಗೆ ಮಗ್ಗುಲು
ಹಿಮಾಲಯದ ತುದಿಗೆ ಹೋಗುವೆ
ಕನ್ಯಾಕುಮಾರಿಯ ಅಂಚಿಗೆ ಸಾಗುವೆ
ಕೂಗಿ ಹೇಳುತ್ತೇನೆ, ಬೀಳಲಾರೆ ಸಂಚಿಗೆ
ನೋವುಗಳ ಎದೆಯಲ್ಲಿಟ್ಟು
ದೈನ್ಯತೆಯ ಬೇಡಿ
ನಿನ್ನ ಅನುಕಂಪಿತ ಕೂಸು ನಾನಾಗಲಾರೆ
ಶಸ್ತ್ರವೆತ್ತುವೆ,
ನಿನ್ನ ಪಾಪದ ಹೆಣವಾದರೂ ಸರಿಯೆ, ಸಂತ್ರಸ್ತೆಯಾಗಲಾರೆ.
**************************************************
ಮನಮುಟ್ಟಿದ ಕವಿತೆ
ಪಾಪದ ಹೆಣಗಳು ನಿತ್ಯ ಉರುಳಿದರು ಸಾವಿರ ಲಕ್ಷ ಇದರ ಬಗ್ಗೆ ಯಾರಿಗಿಲ್ಲ ಲಕ್ಷ್ಯ ಅದರ ಸೂಕ್ಷ್ಮತೆಯ ಅನಾವರಣ ಇಲ್ಲಿದೆ