ಅಂಕಣ ಬರಹ
ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….8
ನಾನೂ ಶಾಲೆಗೆ ಸೇರಿದೆ…
ಅಪ್ಪನಿಗೆ ಅಲಗೇರಿಯಿಂದ ಕುಮಟಾ ತಾಲೂಕಿನ ಹನೇಹಳ್ಳಿ ಶಾಲೆಗೆ ವರ್ಗವಾಯಿತು. ಮತ್ತೆ ನಾವು ನಮ್ಮ ತಾಯಿಯ ತೌರೂರು ನಾಡುಮಾಸ್ಕೇರಿಗೆ ಬಂದು ನೆಲೆಸಬೇಕಾಯಿತು. ನಾಡು ಮಾಸ್ಕೇರಿಯಲ್ಲಿ ಆಗ ನಮ್ಮ ಜಾತಿಯ ಜನಕ್ಕೆ ಸ್ವಂತ ಭೂಮಿಯೆಂಬುದೇ ಇರಲಿಲ್ಲ. ಕೆಲವು ಕುಟುಂಬಗಳು ನಾಡವರ ಜಮೀನಿನ ಒಂದು ಮೂಲೆಯಲ್ಲಿ ಆಶ್ರಯ ಪಡೆದು ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದರು. ನಾಡುಮಾಸ್ಕೇರಿಯಲ್ಲಿ ನಾಡವರು ಇದ್ದುದರಲ್ಲಿಯೇ ಸ್ಥಿತಿವಂತರಾಗಿದ್ದರು. ಎಲ್ಲ ಕುಟುಂಬಗಳಿಗೂ ಅಲ್ಪಸ್ವಲ್ಪ ಬೇಸಾಯದ ಭೂಮಿಯೂ ಇದ್ದಿತ್ತು. ಮಾಸ್ಕೇರಿಯ ಈ ಭಾಗದಲ್ಲಿ ನಾಡವರು ವಾಸ್ತವ್ಯ ಇರುವುದರಿಂದಾಗಿಯೇ ನಾಡು ಮಾಸ್ಕೇರಿ’ ಎಂದು ಕರೆಯುತ್ತಿದ್ದಿರಬೇಕು. ಊರಿನ ಉತ್ತರ ಭಾಗದಲ್ಲಿ ಕೆಲವು ಬ್ರಾಹ್ಮಣರ ಮನೆಗಳಿದ್ದವು. ಹಾರ್ವರು ವಾಸಿಸುವ ಕಾರಣದಿಂದಲೇ ಈ ಭಾಗವನ್ನು ಹಾರೂ ಮಾಸ್ಕೇರಿ’ ಎಂದು ಕರೆಯುತ್ತಿದ್ದರು. ಬ್ರಾಹ್ಮಣರಿಗೆ ಸೇರಿದ ಜಮೀನಿನ ಮೂಲೆಯಲ್ಲಿಯೂ ಒಂದೆರಡು ನಮ್ಮ ಆಗೇರರ ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದವು.
ನಮ್ಮ ಅಜ್ಜಿಯ ಕುಟುಂಬ ನಾಡುಮಾಸ್ಕೇರಿ ಭಾಗದಲ್ಲಿ ನಾರಾಯಣ ನಾಯಕ ಎಂಬ ನಾಡವ ಜಾತಿಯ ಜಮೀನ್ದಾರರೊಬ್ಬರ ಗೇರು ಹಕ್ಕಲಿನಲ್ಲಿ ವಾಸವಾಗಿದ್ದಿತ್ತು. ನಮ್ಮ ತಂದೆಯವರು ಇಲ್ಲಿಗೆ ಬಂದ ಬಳಿಕ ಅಜ್ಜಿಯ ಮನೆಯ ಸಮೀಪವೇ ನಾರಾಯಣ ನಾಯಕರ ಅನುಮತಿಯಿಂದ ಒಂದು ಚಿಕ್ಕ ಹುಲ್ಲಿನ ಮನೆ ನಿಮಿಸಿಕೊಂಡರು. ಅಷ್ಟು ಹೊತ್ತಿಗೆ ನನಗೆ ಒಬ್ಬ ತಮ್ಮ (ನಾಗೇಶ) ಒಬ್ಬಳು ತಂಗಿ (ಲೀಲಾವತಿ) ಬಂದಾಗಿತ್ತು.
ತಾಯಿಯ ತೌರಿನ ಕಡೆಯಿಂದ ಅಜ್ಜಿಮನೆಯಲ್ಲಿ ಅವ್ವನ ಚಿಕ್ಕಪ್ಪ ರಾಕಜ್ಜ ಮತ್ತು ಅವನ ಹೆಂಡತಿ ಮತ್ತು ರಾಕಜ್ಜನ ಚಿಕ್ಕಮ್ಮ ಜುಂಜಜ್ಜಿ ಎಂಬ ಮುದುಕಿ ವಾಸಿಸುತ್ತಿದ್ದರು. ಆದರೆ ಈ ಪ್ರತ್ಯೇಕತೆ ಬಹಳ ಕಾಲವೇನೂ ಇರಲಿಲ್ಲ. ನನಗೆ ಬುದ್ದಿ ತಿಳಿಯುವ ಹೊತ್ತಿಗೆ ರಾಕಜ್ಜನಿಗೆ ಇದ್ದ ಮೊದಲ ಹೆಂಡತಿ ತೀರಿಕೊಂಡಿದ್ದಾರೆ ಎಂದೂ ಈಗ ಇರುವವಳು ಅವನ ಎರಡನೆಯ ಹೆಂಡತಿ ಎಂದೂ ತಿಳಿದು ಬಂತು. ಆದರೂ ಅವರು ಅನ್ಯೋನ್ಯವಾಗಿ ಇದ್ದಂತೆ ನಮಗೆ ಕಾಣಿಸುತ್ತಿತ್ತು. ಆದರೆ ಮುಂದಿನ ಒಂದೆರಡು ವರ್ಷಗಳಲ್ಲಿಯೇ ರಾಕಜ್ಜನ ಎರಡನೆಯ ಹೆಂಡತಿ ತನ್ನ ತೌರಿಗೆಂದು ಅಂಕೋಲೆಯ ಬಾಸಗೋಡ ಎಂಬ ಊರಿನ ಕಡೆ ಹೋದವಳು ಮತ್ತೆ ಎಂದೂ ತಿರುಗಿ ಬಾರದೇ ಅಲ್ಲಿಯೇ ಯಾರನ್ನೋ ಕೂಡಿಕೆ’ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಬಂದಿತ್ತು. ಆ ಬಳಿಕ ರಾಕಜ್ಜ ಮತ್ತು ಜುಂಜಜ್ಜಿ ನಮ್ಮದೇ ಮನೆಯ ಭಾಗವಾಗಿ ಹೋದರು. ರಾಕಜ್ಜ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆ, ಜುಂಜಜ್ಜಿ ಮನೆಯಲ್ಲಿಯೇ ಇದ್ದು ಅವ್ವನಿಗೆ ಮನೆಗೆಲಸದಲ್ಲಿ ನೆರವಾಗುತ್ತ ನಾವು ಮೂವರು ಮರಿಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಾ ಉಳಿದುಕೊಂಡಳು.
ಇಷ್ಟೆಲ್ಲ ಪುರಾಣ ಹೇಳಿದ ಕಾರಣವೆಂದರೆ ನನ್ನನ್ನು ಮೊಟ್ಟ ಮೊದಲು ಶಾಲೆಗೆ ಕರೆದೊಯ್ದು ಸೇರಿಸಿದವಳೇ ಈ ಜುಂಜಜ್ಜಿ. ನನ್ನ ಹಠ, ತುಂಟತನ ಎಲ್ಲವನ್ನೂ ನಿರಾಳವಾಗಿ ಹಚ್ಚಿಕೊಂಡಿದ್ದ ಜುಂಜಜ್ಜಿಯೇ ಹಾರೂಮಾಸ್ಕೇರಿ ಭಾಗದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಸಲು ಕರೆದೊಯ್ದಿದ್ದಳು. ನನಗೆ ಇನ್ನೂ ಸರಿಯಾಗಿ ನೆನಪಿದೆ….. ಒಂದು ಪಾಯಿಜಾಮ, ನೆಹರೂ ಶರ್ಟ ಧರಿಸಿ ನಾನು ತುಂಬಾ ಜಬರ್ದಸ್ತ ಆಗಿಯೇ ಶಾಲೆಗೆ ಹೊರಟಿದ್ದೆ. ಆದರೆ ಅಲ್ಲಿಗೆ ಹೋದ ಬಳಿಕ ಶಾಲೆಯೆಂಬ ಶಾಲೆಯನ್ನು ಅದರೊಳಗಿರುವ ಮಾಸ್ತರರನ್ನೂ ಅಲ್ಲಿರುವ ಮಕ್ಕಳನ್ನೂ ಕಂಡದ್ದೇ ನನಗೆ ಕಂಡಾಬಟ್ಟೆ ಅಂಜಿಕೆಯಾಗಿ ಜುಂಜಜ್ಜಿಯ ಸೀರೆಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತ ಶಾಲೆಯೇ ಬೇಡವೆಂದು ಹಠ ಮಾಡತೊಡಗಿದ್ದೆ. ಯಾರೋ ಮಾಸ್ತರರೊಬ್ಬರು ಸಂತೈಸಿ ಕರೆದೊಯ್ಯಲು ಮುಂದೆ ಬಂದಾಗ ಮತ್ತಷ್ಟು ಭಯಗೊಂಡು ಚೀರಾಟ ಮಾಡಿದೆ. ಜುಂಜಜ್ಜಿಗೆ ನನ್ನನ್ನು ಸಂತೈಸುವುದೇ ಕಷ್ಟವಾಗಿ ಒದ್ದಾಡುತ್ತ ನನ್ನನ್ನು ಹೇಗೋ ರಮಿಸಿ ಶಾಲೆಯ ಪಕ್ಕದಲ್ಲೇ ಇರುವ ಗೋವಿಂದ ಶೆಟ್ಟಿ ಎಂಬುವರ ಚಹಾದಂಗಡಿಗೆ ಕರೆತಂದಳು.
ಅಂಗಡಿಯ ಮುಂಗಟ್ಟಿನಲ್ಲೇ ಇರುವ ಒಲೆಯಮೇಲೆ ಇರುವ ದೊಡ್ಡದೊಂದು ಪಾತ್ರೆಯಲ್ಲಿ ನೀರು ಕೊತಕೊತ ಕುದಿಯುತ್ತಿತ್ತು. ಅದರ ಮೇಲೆ ಚಹಾಪುಡಿ, ಸಕ್ಕರೆ ಬೆರೆಸಿದ ಕಿಟ್ಲಿ’ ಹೊಗೆಯುಗುಳುತ್ತ ಸುತ್ತೆಲ್ಲ ಚಹಾದ ಗಮ್ಮನೆ ಪರಿಮಳ ಹರಡುತ್ತ ಕುಳಿತಿತ್ತು. ನನಗೆ ಅಚ್ಚರಿ ಹುಟ್ಟಿಸಿದ ಸಂಗತಿಯೆಂದರೆ ಒಲೆಯ ಮೇಲಿಟ್ಟ ಆ ದೊಡ್ಡ ಪಾತ್ರೆಯೊಳಗಿಂದ ಕೇಳಿ ಬರುತ್ತಿದ್ದ ಕಿಣಿ ಕಿಣಿ ಶಬ್ಧ. ಅದೊಂದು ವಿಚಿತ್ರ ಮಾಯಾ ಪೆಟ್ಟಿಗೆಯೆಂಬಂತೆ ಅಚ್ಚರಿಯಿಂದ ನೋಡುತ್ತ ನನ್ನ ಅಳು ಯಾವುದೋ ಕ್ಷಣದಲ್ಲಿ ನಿಂತು ಹೋಗಿತ್ತು.
ಚಹದಂಗಡಿ ಚಾಲೂ ಸ್ಥಿತಿಯಲ್ಲಿ ಇದೆ ಎಂಬುದನ್ನು ಗಿರಾಕಿಗಳಿಗೆ ತಿಳಿಸಲು ಪಾತ್ರೆಯಲ್ಲಿ ಒಂದು ತೂತು ಬಿಲ್ಲೆ’ (ಆಗಿನ ಕಾಲದ ಒಂದು ನಾಣ್ಯ) ಯನ್ನು ಹಾಕಿ ಇಡುವರೆಂದೂ ಅದು ನೀರು ಕುದಿಯುವಾಗ ಹಾರಾಡುತ್ತ ಪಾತ್ರೆಯ ತಳಕ್ಕೆ ಬಡಿದು ಲಯಬದ್ಧವಾದ ಕಿಣಿ ಕಿಣಿ ಸಪ್ಪಳ ಹೊರಡುವುದೆಂದೂ ತಿಳಿಯಲು ನಾನು ನನ್ನ ಎರಡನೆಯ ತರಗತಿಯವರೆಗೂ ಕಾಯಬೇಕಾಯಿತು.
ಉಸೂಳಿ ಅವಲಕ್ಕಿ’ ಗೋವಿಂದ ಶೆಟ್ಟರ ಸ್ಪೇಶಲ್ ತಿಂಡಿಯಾಗಿತ್ತು. ಚೆನ್ನಾಗಿ ಬೇಯಿಸಿದ ಒಟಾಣೆ ಕಾಳುಗಳಿಗೆ ಒಗ್ಗರಣೆ ಹಾಕಿ ಸಿದ್ಧಪಡಿಸಿದ ಉಸೂಳಿ’ಯನ್ನು ಅವಲಕ್ಕಿ ಶೇವು ಬೆರೆಸಿಕೊಡುತ್ತಿದ್ದ ಶೆಟ್ಟರಿಗೆ ಅವುಗಳನ್ನು ಸಮಪ್ರಮಾಣದಲ್ಲಿ ಬೆರೆಸುವ ಹದ ತಿಳಿದಿತ್ತಂತೆ. ಹಾಗಾಗಿಯೇ ಗೋವಿಂದ ಶೆಟ್ಟರ ಉಸೂಳಿ ಅವಲಕ್ಕಿ ಸುತ್ತಲಿನ ನಾಡವರು, ಹಾಲಕ್ಕಿಗಳು, ನಾಮಧಾರಿಗಳು ಆಗೇರರಿಗೆಲ್ಲ ಮರಳು ಹಿಡಿಸುವಷ್ಟು ಪ್ರಿಯವಾದ ತಿಂಡಿಯಾಗಿತ್ತು.
ಜುಂಜಜ್ಜಿ ನನಗೆ ಅಂದು ಉಸೂಳಿ ಅವಲಕ್ಕಿ ಪೊಟ್ಟಣ ಕೊಡಿಸಿದಳು. ಅದನ್ನು ತಿಂದಾದ ಬಳಿಕ ಅದೇ ಅಂಗಡಿಯಲ್ಲಿ ಸಿಗುವ ನಾಲ್ಕು ಚಕ್ಕುಲಿಗಳನ್ನೂ ನನ್ನ ನೆಹರೂ ಶರ್ಟಿನ ಎರಡೂ ಕಿಶೆಗಳಲ್ಲಿ ತುಂಬಿದ ಬಳಿಕವೇ ನಾನು ಶಾಲೆಗೆ ಎಂಟ್ರಿಕೊಟ್ಟಿದ್ದೆ.
ನಾಡುಮಾಸ್ಕೇರಿಯವರೇ ಆದ ವೆಂಕಟ್ರಮಣ ಗಾಂವಕರ ಎಂಬುವರು ಶಾಲೆಯ ಮುಖ್ಯಾಧ್ಯಾಪಕರಾಗಿದ್ದರು. ಅಜಾನು ಬಾಹು ವ್ಯಕ್ತಿತ್ವ, ಅಚ್ಚಬಿಳಿಯ ಕಚ್ಛೆ ಪಂಚೆಯುಟ್ಟು ಅಂಥದ್ದೇ ಬಿಳಿಯ ನೆಹರೂ ಶರ್ಟ್ ತೊಟ್ಟ ವೆಂಕಟ್ರಮಣ ಗಾಂವಕರ ಕಟ್ಟುನಿಟ್ಟಿನ ಶಿಸ್ತಿಗೆ ಶಾಲೆಯ ಸಹ ಶಿಕ್ಷಕರೂ ಅಂಜಿ ವಿಧೇಯತೆ ತೋರುತ್ತಿದ್ದರು. ನನ್ನಂಥ ಮಕ್ಕಳು ಅವರ ಮುಂದೆ ಸುಳಿಯಲೂ ಭಯ ಪಡುತ್ತಿದ್ದರು. ಶಾಲೆಯ ವಾತಾವರಣದಿಂದ ಪಾರಾಗಿ ಹೊರಬರುವ ತವಕದಲ್ಲೇ ಇದ್ದ ನನ್ನನ್ನು ಇನ್ನೋರ್ವ ಗುರುಗಳು ಆತ್ಮೀಯವಾಗಿ ಕರೆದು ಪ್ರೀತಿಯಿಂದ ಮಾತನಾಡಿಸುತ್ತ ನನ್ನ ಭಯ ನಿವಾರಿಸಿ ಶಾಲೆಯ ಕುರಿತು ಪ್ರೀತಿ ಹುಟ್ಟಿಸಿದರು. ಅವರು ಕುಚೆನಾಡ ತಿಮ್ಮಣ್ಣ ಮಾಸ್ತರರೆಂದೂ ಅಂಕೋಲಾ ತಾಲೂಕಿನ ಬೇಲೇಕೇರಿ ಊರಿನವರೆಂದೂ ನನಗೆ ಅರಿವಾಗಲು ವರ್ಷಗಳೇ ಕಳೆದಿದ್ದವು… ಅಂತೂ ಜುಂಜಜ್ಜಿಯ ದೇಖರೇಖಿಯಲ್ಲಿ ನಾನೂ ಶಾಲೆಗೆ ಸೇರಿದೆ…
*******
ರಾಮಕೃಷ್ಣ ಗುಂದಿ
ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ