ವಾರದ ಕವಿತೆ
ಜೋಕಾಲಿ
ಚೈತ್ರಾ ಶಿವಯೋಗಿಮಠ
ಮೇಲೆ ಮೇಲೆ ಮ್ಯಾಗ
ಜೂರಿ ಜೀಕಬೇಕು ನಾನು
ಹಳ್ಳ ಹೊಳಿ ಕಡಲು ಕಾಣಬೇಕ
ಹಸುರ ಹೊದ್ದ ಕಾನು
ಮಗುವಿನ್ಹಾಂಗ ಕ್ಯಾಕಿ ಹಾಕಿ
ಹಾರಬೇಕ ಮ್ಯಾಲೆ
ಕಾಣಬೇಕ ಮನಿ ಮಾಳಿಗಿ
ಹಬ್ಬಿದ ಹೂ ಬಳ್ಳಿ ಅಲ್ಲೆ
ಜೋಕಾಲಿ ಕಟ್ಟಿ ಜೀಕಿದರ
ರೆಕ್ಕಿ ಬ್ಯಾಡ ಪುಕ್ಕಾ ಬ್ಯಾಡ
ಬೆಳ್ಳಿ ಮುಗಲ ಅನಾಯಾಸ
ಹಂಗ ಮುಟ್ಟಬೋದು ನೋಡ
ಬರ್ರಿ, ಬೆಟ್ಟ ಕಣವಿ ಗುಡಿ ಬಯಲ
ದಾಟಿ ಮುಂದಕ ಜೀಕೋಣು
ಸ್ವಚ್ಛಂದ ಆಕಾಶದಾಗ ಹಕ್ಕಿಹಂಗ
ಹಾಡಾ ಹಾಡಿ ಸಿಳ್ಳಿ ಹಾಕೋಣು
ಹಾರಿದ್ಹಂಗ ಏರಿದ್ಹಂಗ ಚಂದ
ಗಾಳಿ ಜೋಡಿ ಮುಂಗುರುಳ ಸರಸ
ಚಂದವದು, ಸ್ವರ್ಗದ ಬಾಗಿಲು ತಟ್ಟಿ
ಮತ್ತ ಹಿಂದಕ ಹೊರಳೊ ವಿಲಾಸ
ಏರಿದ್ಹಾಂಗ ಮತ್ತಷ್ಟ ಮೇಲಕ
ಕಾಣತಾದ ಚಂದದ ಸೃಷ್ಟಿ
ಎಷ್ಟೇ ಮ್ಯಾಲೆ ಜೀಕಿದರೂನು
ಇರಲಿ ನೆಲದಕಡೆಗೂ ದೃಷ್ಟಿ
*****************************************************
ಜೋಕಾಲಿ ಜೀಕಲು ನಿನ್ನ ಸಂಗಡ ನಾನೂ ಬರುವೆ ಚೈತ್ರ
ಸರಳ ಸುಂದರ ಕವನ.