ಕವಿತೆ
ಹೊಸ ಬಾಳಿಗೆ
ಶ್ವೇತಾ ಎಂ.ಯು.ಮಂಡ್ಯ
ಹಳತು ಕಳೆದು
ಹೊಸ ವರ್ಷ ಮರಳಿ
ಎಲ್ಲಿಂದಲೋ ಬಂದು
ಮತ್ತೆಲಿಗೋ ಸಾಗೋ
ಈ ಬದುಕ ಹಾದಿಯಲಿ
ಹೊಸ ಭರವಸೆಯ ಚಿಗುರಿಸಲಿ
ರಾಗಯೋಗ ಪ್ರೇಮಸೌಂದರ್ಯ
ಮೇಳೈಸಿ ಭೂರಮೆಯ ಸಿಂಗಾರಗೊಳಿಸಿ
ರೆಂಬೆಕೊಂಬೆಗಳು ತೂಗಿ ಬಾಗಿ
ನರುಗಂಪು ತಣ್ಣನೆಯ ಗಾಳಿ ಸೂಸಿ
ಆನಂದವನೆ ಹಂಚಿವೆ
ಈ ಹರುಷವು ಹೀಗೆ ಉಳಿಯಲಿ
ಖಂಡ ಖಂಡಗಳ ದಾಟಿ
ಅರೆಗೋಡೆ ಮಹಾಗೋಡೆ
ಅರೆತಡಿಕೆ ಮಹಾಮನೆಗಳೊಳಗಿನ
ರೋಗಗ್ರಸ್ತ ಮನಸುಗಳಲಿ
ಸೊರಗದ ಸಂಜೀವಿನಿಯಾಗಲಿ
ಮೈಮುದುಡಿ ಚಳಿಯೊಳಗೆ
ಬಿಟ್ಟುಬಿಡದೆ ಕಾಡುವ ಶಾಪಗ್ರಸ್ತ ದಾರಿದ್ರಕ್ಕೆ ಬಲಿಯಾದ ಜೀವಗಳಿಗೆ
ಬೇಡುವ ಕೈಗಳಿಗೆ ನೀಡುವ
ಶಕ್ತಿಯ ನೀ ಇಂದಾದರು
ಹೊತ್ತು ತಾ ಹೊಸ ವರುಷವೇ
ಬದುಕನ್ನೇ ಹಿಂಡಿದ ಕಾಣದ ಮುಖವು
ಕಾಣದೆ ಹೋಗಲಿ ಹಾಗೆಯೇ
ಈ ಲೋಕದೊಳಗಿಂದ ಆಚೆಗೆ
ಹೊಸ ಮುನ್ನುಡಿ
ಹೊಸ ಕನ್ನಡಿ
ಹೊಸಬಾಳಿನ ನಾಳೆಗೆ
**************************