ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು

ಲೇಖನ

ಆತ್ಮ ನಿವೇದನೆಯಲ್ಲಿ ಅಕ್ಕನ

ಹೆಜ್ಜೆಗಳು 

ಡಾ.ರೇಣುಕಾ. ಅ. ಕಠಾರಿ

akka mahadevi vachanagalu In Kannada, Telugu languages

ಕನ್ನಡ ನಾಡಿನ ಚರಿತ್ರೆಯಲ್ಲಿ ‘ವಚನ ಸಾಹಿತ್ಯ’ ಹೊಸ ಮೈಲುಗಲ್ಲನ್ನೇ ಸೃಷ್ಠಿಸಿತ್ತು. ಕುಟುಂಬದಲ್ಲಿ ಹೆಣ್ಣು ಸ್ವಾತಂತ್ರ್ಯ   ಕಳೆದುಕೊಂಡ ಕಾಲದಲ್ಲಿ ಶರಣ ಪರಂಪರೆಯು ಆಕೆಗೆ ಸ್ಥಾನವನ್ನು ಒದಗಿಸಿಕೊಟ್ಟಿತು. ಈ ಮೊದಲು ಹೆಣ್ಣನ್ನು ಶೂದ್ರ ಸಮಳೆಂಬ ಅಪವಾದವನ್ನು ಹೊತ್ತುಕೊಂಡು ಬದುಕಬೇಕಾಗಬೇಕಿತ್ತು. ಹಾಗೆ ಅವಳನ್ನು  ಅಜ್ಞಾನಿಯನ್ನಾಗಿ ಮಾಡಿದ್ದರು. ಮಹಿಳೆಯರಿಗೆ ಮೋಕ್ಷ ಬೇಕಾದರೆ ಪತಿಯ ಸೇವೆಯ ಮೂಲಕವೇ ಸಾಧ್ಯವೆಂಬ ಕಲ್ಪನೆಯನ್ನು ಬಲವಂತವಾಗಿ ಆಕೆಯ ಮೇಲೆ ಹೊರಿಸುತ್ತಿದ್ದರು. ಈ ಮೊದಲು ನಡೆಯುತ್ತಿದ್ದ ಎಲ್ಲ ಹಿಂಸಾ ಕೃತ್ಯಗಳಿಗೆ ಅಂತ್ಯ ಹಾಕಬೇಕೆಂದೇ ಹನ್ನೆರಡನೆಯ ಶತಮಾನವು ಹೊಸ ಕ್ರಾಂತಿಯ ರೂಪವನ್ನು ತಾಳಿತು. ಆ ಸಂದರ್ಭದಲ್ಲಿ ಹಲವಾರು ಮಹಿಳಾ ವಚನಕಾರ್ತಿಯರು ತಮ್ಮ ಜೀವನದಲ್ಲಿ ಕಂಡಿರುವ ಎಲ್ಲ ಸುಖ-ದು:ಖಗಳನ್ನು, ನೋವು-ನಲಿವುಗಳನ್ನು ಹೀಗೆ ಮೊದಲಾದುವುಗಳ ಕುರಿತು ವಚನಗಳನ್ನು ರಚಿಸುವುದರ ಮೂಲಕ ತಮ್ಮ ತಮ್ಮ ಆತ್ಮ ನಿವೇದನೆಯನ್ನು ಮಾಡಿಕೊಳ್ಳಲು ಹೊಸ ಮಾರ್ಗದ ಸೃಷ್ಠಿ ಆಗತೊಡಗಿತು. ಅಕ್ಷರವನ್ನು ಕಲಿಯದ ಅದೆಷ್ಟೋ ಮಹಿಳೆಯರು ಅಕ್ಷರ ಜ್ಞಾನದೊಂದಿಗೆ ಸಾಹಿತ್ಯ ಸೃಷ್ಠಿಯಲ್ಲಿ ಮುಂದಾದರು. ಚಿಂತನ ಮಂಥನಗಳೊಂದಿಗೆ ಪರಸ್ಪರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳವಂತಹ ಕಾಲ ನಿರ್ಮಾಣವಾಯಿತು. ಹೀಗೆ ಮಹಿಳೆಯರು ತಮ್ಮತನವನ್ನು ಅರಿತುಕೊಳ್ಳಲು ಆತ್ಮಾವಲೋಕನ ಮಾಡಿಕೊಂಡರು. 

ಶರಣರ ದಾಂಪತ್ಯ ಒಂದು ಪರಂಪರೆಯ ಧರ್ಮವನ್ನೆ ಸೃಷ್ಟಿಸಿದೆ. ಬದುಕಿನಲ್ಲಿ ಶಾಂತಿ ನೆಮ್ಮದಿ ಸುಖ-ದು:ಖಗಳನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವಂತಹ ಧ್ಯಾನ ಮಾರ್ಗದ ಜೊತೆಗೆ ಆಧ್ಯಾತ್ಮದ ಕೊಂಡಿಯನ್ನು ಅನುಸರಿಸಿದರು. ಲೌಕಿಕ ಬದುಕನ್ನು ಸಂಪನ್ನಗೊಳಿಸಿಕೊಳ್ಳುವುದು ಮತ್ತು ಅದರ ಜೊತೆಗೆ ಪರಮಾರ್ಥ ಸಾಧನೆಯ ಗುರಿ ಶರಣರದಾಗಿತ್ತು. ಇದಕ್ಕೆ ಅನುಗುಣವಾಗಿ ಸಾಕಷ್ಟು ಶರಣೆಯರು ಸತಿಪತಿ ಭಾವವನ್ನು ಪಡೆದರು. ಅನುಭವಿಸಿದ ಜೀವನದ ಸಾರವನ್ನು ಕಂಡುಕೊಂಡು, ಮಲ್ಲಿಕಾರ್ಜುನನ್ನೇ ಹುಡುಕುತ್ತ ನಿರತಳಾಗಿಯೇ ಆಧ್ಯಾತ್ಮದ ಸಾಧನೆಯನ್ನು ಕಂಡುಕೊಂಡವಳು ಅಕ್ಕಮಹಾದೇವಿ. ಅಂತೆಯೇ ಆತ್ಮ ನಿವೇದನೆಯೆನ್ನುವುದು ಎರಡು ಹೃದಯಗಳ ಅನ್ಯೋನ್ಯ ಮಿಲನವಾಗಿ ಶಿವಪಥದಲ್ಲಿ ನಡೆದು ದೇವನ ಪಾದವನ್ನು ಸೇರಲು ಸಹಾಯಕವಾಗುವ ಒಂದು ಅವಕಾಶವೆಂದು ನಂಬಿಕೊಂಡಿದ್ದರು. ಆಕೆಯ ಬದುಕಿನ ಚಿತ್ರಣದ ಎಲ್ಲ ನೆಲೆಗಳು ಅವಳ ವಚನಗಳಲ್ಲಿ ಕಾಣುತ್ತೇವೆ. ಅಕ್ಕನ ಒಂದೊಂದು ವಚನಗಳು ಒಂದೊಂದು ಕಥೆಯನ್ನು ಹೇಳುತ್ತವೆ ಹಾಗೇ ಆತ್ಮದ ಪರಿಶೋಧವೂ ಇದೆ. ಇಡೀ ಜೀವನದುದ್ದಕ್ಕೂ ಚೆನ್ನನನ್ನು ನೆನೆಯುತ್ತಲೆ ತನ್ನೊಡಲದ ವೇದನೆಯನ್ನು ಅನುಸಂಧಾನಿಸಿಕೊಳ್ಳಲು ಪ್ರಯತ್ದಿಸಿದ ಮಹಾ ಶರಣೆ.

“ಉರಕ್ಕೆ ಜವ್ವನಗಳು ಬಾರದ ಮುನ್ನ

ಮನಕ್ಕೆ ನಾಚಿಕೆಗಳು ತೋರದ ಮುನ್ನ

ನಮ್ಮವರಂದೆ ಮದುವೆಯ ಮಾಡಿದರು

ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ

ಹೆಂಗೂಸೆಂಬ ಭಾವ ತೋರುವ ಮುನ್ನ

ನಮ್ಮವರಂದೆ ಮದುವೆಯ ಮಾಡಿದರು”

           (ಅಕ್ಕನ ವಚನಗಳು: ಸಂ.ಡಾ.ಸಾ.ಶಿ. ಮರುಳಯ್ಯ- ೧೯೯೩. ಬೆಂಗಳೂರು ಪು.ಸಂ೧೫)

            ಅಕ್ಕನಲ್ಲಿ ಅಂತರಂಗದ ತೊಳಲಾಟವಿದೆ. ಆಕೆಯ ಭಾವದ ಜೊತೆಗೆ ಆಕೆ ಹಾಕಿಕೊಂಡಿರುವ ನೂರಾರು ಆಸೆ ಆಕಾಂಕ್ಷೆಗಳನ್ನು ಬಹಿರಂಗವಾಗಿ ಇಡಲು ಬಯಸುವ ಸಾಲುಗಳು ಎದ್ದು ಕಾಣುತ್ತವೆ. ಜಾಗತೀಕರಣದ ತುದಿಯನ್ನು ದಾಟಿ ನಿಲ್ಲುತ್ತಿರುವ ನಾವುಗಳು ಆತ್ಮದ ಶೋಧದಲ್ಲಿ ತೊಡಗುವುದು ಅನಿವಾರ‍್ಯವೆನಿಸುತ್ತದೆ. ತಾನು ಮನದಲ್ಲಿ ಬಯಸಿದ ಆ ಚೆನ್ನನ ಹೆಸರು ಹೇಳುವ ಮೊದಲೆ, ಹಿರಿಯರು ಮಾಡಿದ ಮದುವೆಗೆ ಅರ್ಥವಿದೆಯಾ? ಎಂದು ವ್ಯಂಗ್ಯವಾಗಿ ಹೇಳುವ ನುಡಿ ಇವತ್ತಿಗೂ ಜೀವಂತವಾಗಿದೆ. ಅಕ್ಕನ ಈ ವಚನದಲ್ಲಿ ಹೇಳಿದ ಎಲ್ಲ ಶಬ್ಧಗಳ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಸತ್ಯದ ಕೊಂಡಿ ಒಂದೊಂದೇ ಧ್ವನಿಗಳನ್ನು ಧ್ವನಿಸಿ ಎದ್ದು ನಿಲ್ಲುತ್ತವೆ. ಆನಾದಿ ಕಾಲದಿಂದಲೂ ಹೆಣ್ಣು ಎನ್ನುವ ಕಾರಣಕ್ಕೆ ಒಪ್ಪಿಗೆ ಇಲ್ಲದಿದ್ದರೂ ಮದುವೆಯೆಂಬ ಹೊಸ ಹಣೆ ಬರಹವನ್ನು ಕಟ್ಟುತ್ತಿದ್ದರು. ಇದು ಶೋಷಣೆಯ ರೂಪವೆಂದು ಭಾವಿಸುವಲ್ಲಿ ಯಾವುದೆ ತಪ್ಪಿಲ್ಲವೆಂದು ಅನಿಸುತ್ತದೆ. ಹಾಗೇ ಅಕ್ಕ ಪ್ರಶ್ನಿಸುವ ಮಾತು ಬಂಡಾಯದ ಹೊಸರೂಪವೇ ಹೊರತು ಬೇರೇನಲ್ಲ?

“ಚೆನ್ನ ಮಲ್ಲಿಕಾರ್ಜುನಯ್ಯ

ನೀನಿಲ್ಲದನ್ಯರ ಮುಖವ ನೋಂಡೆನೆಂದಡೆ

ನೋಡುವಂತೆ ಮಾಡಿದೆಯಲ್ಲಾ ಲಿಂಗವೆ”

                 (ಅಕ್ಕನ ವಚನಗಳು, ದ್ವಿ ಸಂಸ್ಕರಣ ಸಂ.ಎಲ್. ಬಸವರಾಜು.೧೯೭೨,ಮೈಸೂರು)

            ಹೆಣ್ಣು ತನ್ನತನದ ಹಿಂದೆಯೇ ಸಾಗುವುದು ಆಕೆ ಕಟ್ಟಿಕೊಂಡ ಒಂದು ಬೇಲಿ ಅಷ್ಟೇ. ಆದರೆ ಅದರಾಚೆಗೂ ಆಕೆಯ ಬೇಕು ಬೇಡಿಕೆಗಳನ್ನು ಮನದಾಳದಂತೆ ಪೂರೈಸಿಕೊಳ್ಳಲು ಅಸಾಧ್ಯವೆಂದು ಭಾವಿಸಬೇಕು? ಪರಸ್ಪರವಾಗಿ ಇರುವ ಬದುಕೇ ಭಿನ್ನ. ಮುಖಾಮುಖಿಯಾಗಿಸದೇ ಮತ್ತು ಬೇರೆ ಎಲ್ಲಿಯೋ ಇರುವ ಚಹರೆಯನ್ನು ಅನುಸಂಧಾನ ಮಾಡಿಕೊಳ್ಳಲು ಸಾಧ್ಯವೇ? ಎಂಬ ವಿಚಾರವಂತಿಕೆಗಳು ಬಹು ಸವಾಲನ್ನು ಎತ್ತುತ್ತವೆ. ಅಕ್ಕನ ತುಡಿತಗಳು ವೇದನೆಯಾಗಿ ಅಲಿದಾಡುವ ಬಗೆ ಬಹು ತನ್ಮಯತೆಯನ್ನು ಉಂಟು ಮಾಡುತ್ತದೆ. ಅಂದರೆ, ‘ಚೆನ್ನ ಮಲ್ಲಿಕಾರ್ಜುನೆನಗೆ ಕಟ್ಟದ ಕಟ್ಟಳೆಯ ನನ್ನಿಂದ ನಾನೆ ಅನುಭವಿಸಿ ಕಳೆವನು’. ಎಂದು ಅರುಹುವ ಮಾತು ಇಂದಿಗೂ ಜೀವಂತವಾಗಿ ನಮ್ಮನ್ನು ಪ್ರಶ್ನಿಸುತ್ತದೆ. ಇದೇ ನಾವು ಆತ್ಮಾವಲೋಕವೆಂದು ಕರೆಯುವುದು. ಹುಡುಕಾಟದ ಆಕೆಯ ತಲ್ಲಣಗಳು ಒಂದೊಂದೆ ಅಲೆಯಾಗಿ ಅಪ್ಪಳಿಸುವ ಒಡಲ ದಂಡೆಗೆ ಆತ್ಮದ ಸಾಕ್ಷಾತ್ಕಾರದ ಅವತಾರವಾಗಿದೆಂದು ಅರ್ಥವಾಗುವುದು.

“ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದ ಬಳಿಕ

ಕಾಯದ ಸುಖವ ನಾನೇನೆಂದರಿಯನು

ಆರು ಸೋಂಕಿದರೆಂದರಿಯೆನು

ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚ(ಪ್ಪಿ)ತವಾದ ಒಳಿಕ

ಹೌರಗೇನಾಯಿತೆಂದರಿಯೆನು”

(ಪು.ಸA ೨೩ ವಚನ ಸಂ ೭೬-ಅಕ್ಕನ ವಚನಗಳು: ದ್ವಿ ಸಂಸ್ಕರಣ ಸಂ.ಎಲ್.ಬಸವರಾಜು ೧೯೭೨, ಮೈಸೂರು)

ಹೆಣ್ಣು ತನ್ನೊಳಗೆಯೇ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡಿದ್ದಾಳೆ.  ಹಾಗೆ ಅಕ್ಕನ ಮನದ ಪ್ರಪಂಚದಲ್ಲಿ ಆ ಚೆನ್ನನ್ನು ಕಾಣುವ ಹಂಬಲ ಹೆಣ್ತತನದ ಒಂದು ರೂಪ ಅಷ್ಟೇ ಎಂದು ತಿಳಿಯುತ್ತದೆ. ಇದು ಸರ್ವಕಾಲಕ್ಕೂ ಸತ್ಯವೆ ಆಗಿರುತ್ತದೆ. ನೀನೆ ನನ್ನ ಪ್ರಾಣವೆಂದ ಮೇಲೆ ಎಲ್ಲವೂ ನೀನೆ ಇದರಲ್ಲಿ ಸಂಶಯವೇ? ಪಾರಮಾರ್ಥಿಕದ ಸುಖವೇ ಬೇಡವೆಂದು ತನುವಿನಲ್ಲಿ ಇರುವ ನಿನ್ನ ಇರುವಿಕೆಯ ಕಾಯಕವೊಂದೆ ಸಾಕು ಎಂದು ಹೆಣ್ಣು ತನ್ನ ನಿವೇದನೆಗಳನ್ನು ಒಗ್ಗೂಡಿಸುವ ಪರಿ ಅಕ್ಕನಲ್ಲಿ ಅನನ್ಯವಾಗಿದೆ.. ಬೇರೆಯವರ ಮಾತುಗಳ ನಿಂದನೆಯೂ ಬಂದರೂ ಬಿರುಗಾಳಿಗೆ ಅಣುರೇಣುವಿನಂತೆ ಮಾಯವಾಗುವೆಂಬ ಅಕ್ಕನ ಮನದ ಒಪ್ಪತ ನಿಲುವು ಸಾಟಿಯಾಗಿದೆ.

“ಹಸಿವಾದಡೆ ಊರೊಳಗೆ ಬಿಕ್ಷಾನ್ನಗಳುಂಟು

 ತೃಷೆಯಾದಡೆ ಕೆರೆ ಹಳ್ಳ ಭಾವಿಗಳುಂಟು

 ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು

 ಶಯನಕ್ಕೆ ಹಾಳು ದೇಗುಲಗಳುಂಟು

 ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು”

(ಶಿವಶರಣೆಯರ ವಚನ ಸಂಪುಟ. ಸಂ.ಡಾ. ವೀರಣ್ಣ ರಾಜೂರ ೧೯೯೩. ಬೆಂಗಳೂರು ಪು.ಸಂ. ೧೦೪. ಪು. ೩೩೬)

 ಸಹಜವಾಗಿ ಜೀವವನ್ನು ಉಳಿಸಿಕೊಳ್ಳಲು ಮತ್ತು ಬದುಕು ನಡೆಸಲು ಕೆಲವು ಸಕ್ರಿಯೆಗಳ ಅಥವಾ ಆಹಾರ ಪದಾರ್ಥಗಳು ಚಿಕ್ಕ ಗುಡಿಸಲು ಅವಶ್ಯಕವಿರುತ್ತದೆ. ಅವುಗಳನ್ನು ಪಡೆದುಕೊಂಡ ಮೇಲೆ ಮನವೆಂಬ ಶುದ್ಧಿಗೆ ಆತ್ಮದ ಅವಲೋಕನ ಹೊಳೆಯಬೇಕು. ಆಗ ಮಾತ್ರ ಆತ್ಮದ ಸಂಗಾತಿಯ ಪೂರ್ಣತೆ ಇರುವಿಕೆ ಆಗುತ್ತದೆ. ಅಕ್ಕಳ ಚೆನ್ನನೊಂದಿಗೆ ಮಾಡಿಕೊಂಡಿರುವ ಸಂಧಾನದ ಅರಿವು ಇಂದು ನೂತನ.

“ಅಕ್ಕನ ವಚನಗಳು ಅವಳ ಆತ್ಮಚರಿತೆಯ ಮತ್ತು ವ್ಯಕ್ತಿತ್ವದ ಜೀವಂತ ಮತ್ತು ಜ್ವಲಂತ ದಾಖಲೆಗಳಾಗಿವೆ’’ ಎಂದು ಡಾ.ರಂ.ಶ್ರೀ ಮುಗಳಿರವರು ಹೇಳಿರುವ ಹೇಳಿಕೆ ಸತ್ಯವೆನಿಸುವುದು. ಆತ್ಮವಂಚನೆ ಇಲ್ಲದೆ ಅಕ್ಕನ ವಚನಗಳು ಆತ್ಮ ಶೋಧನೆಯ ಪ್ರಕ್ರಿಯೆಯಲ್ಲಿ ಮೂಡಿಬಂದಿದೆ. ಹಾಗೇ ಚೆನ್ನನೊಂದಿಗೆ ಅಕ್ಕ ಅತ್ಮವಲೋಕನ ಮಾಡಿಕೊಂಡ ಪರಿ ಅನನ್ಯವಾದುದು. ಅಕ್ಕಳ ಈ ನಿವೇದನೆಯು ಪರಂಪರೆಯಲ್ಲಿ ಒಂದು ಗಟ್ಟಿ ನೆಲೆಯನ್ನು ಸ್ಥಾಪಿಸಿದ್ದು ವಿಶೇಷ. ಹೆಣ್ಣಿನ ಆತ್ಮ ನಿವೇದನೆಗೆ ಮುಕ್ತ ಸ್ವಾತಂತ್ರ್ಯವಿದ್ದಿಲ್ಲಾ? ಎನ್ನುವ ಅನುಮಾನದ ಬೆಂಕಿ ಇದೀಗ ಬೂದಿಯಾಗಿದೆ. ಸ್ವಾತಂತ್ರ್ಯ ವಿಲ್ಲದ ಕಾಲದಲ್ಲಿ ಅಕ್ಕಳು ತನ್ನ ವಿಚಾರದ ಕಹಿ-ಸಿಹಿ ನೆನಪುಗಳನ್ನು ಆತ್ಮದೊಳಗೆ ಅಡಗಿಸಿ ಅವುಗಳನ್ನು ವಿಹರಿಸಲು ರೂಪಕದ ಮೂಲಕ ಕ್ರಿಯೆ ನಡೆಸಿದಳು. ಆ ಕಾರಣಕ್ಕೆ ಅಕ್ಕಮಹಾದೇವಿಯ ಆತ್ಮ ನಿವೇದನೆಗಳ ಹೊಳಪು ಇವತ್ತು ಪ್ರಜ್ವಲಿಸುತ್ತಿವೆ. ಹೆಣ್ಣು ಏಕಕಾಲದಲ್ಲಿ ಮಾಯೆಯಾಗಿ, ಸಂಪತ್ತಾಗಿ, ಸಖಿ ಮತ್ತು ಸತಿಯಾಗಿ ಜೊತೆ ಜೊತೆಗೆ ಹಾಕುವ ಹೆಜ್ಜೆಗಳು ಸವಾಲಾಗಿರುತ್ತವೆ.

******************************************************

Leave a Reply

Back To Top