ಕವಿತೆ
ನೀಳ್ಗೆರೆ
ಅಕ್ಷತಾ ರಾಜ್
ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆ
ನಾನೋ !ನೀನೋ! ಉಸುರುತಿಹುದು ನೀಳ್ಗೆರೆ ||
ಊರು ಕೇರಿ ಸುತ್ತಿ ಸವೆದ ಪಾದ ತಿರುಗಿ ಸೋಲಲು
ಅಲ್ಲೇ ಮಂಡಿಯೊಳಗೆ ನಿಂತ ಕಾಲ್ಗಳವು ನಕ್ಕವು
ಮುಸುಕಿನೊಳಗೆ ಜಟ್ಟಿಗುದ್ದು ಕಂಡವನಾರೋ ಅರಿಯರು
ಮೊದಲು ಯಾರು ಎಂಬ ಈರ್ಷ್ಯೆ ಸುತ್ತಲಿದ್ದ ಜಗದೊಳು
ಹಲವು ಬಣ್ಣ ಇಹುದು ಅಲ್ಲಿ ಕಾಣದಿಹ ಕತ್ತಲು
ನೂರು ರುಚಿಯು ಸೇರಿ ನಡೆಯುತಿಹುದು ಹಿಮನದಿ
ಬೀಸುಗಾಳಿಯೆಲ್ಲಿ ಒಂಟಿ? ಸುತ್ತಲಿಹರು ಬೇಡರು
ಆದರೊಂದು ಪ್ರಶ್ನೆಯಿಹುದು ಯಾರು ಮುಂದೆ ನಡೆಯೊಳು
ಅರಳಿ ನಿಂತ ಕಿರಣದೆದುರು ‘ನಾನು’ ಮಂಜುಬಿಂದು
ಕರಗಲೇನೋ! ಉಳಿಯಲೇನೋ! ಪ್ರಶ್ನೆಯಿಹುದೇ ಅಲ್ಲಿ?
ನಡೆದು ನಡೆವ ಕಾಲುಹಾದಿ ತಿರುವು ಹಲವು ಇಲ್ಲಿ
ಗೆರೆಯ ದಾಟಿ ನಡೆದರದುವೆ ಮಂದೆ ತೊರೆದ ಹಾದಿ
ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆ
ನಾನೋ ! ನೀನೋ ! ಉಸುರುತಿಹುದು ನೀಳ್ಗೆರೆ ||
******************************************