ಊದ್ಗಳಿ ಊದುತ್ತಾ.

ಪುಸ್ತಕ ಸಂಗಾತಿ

ಊದ್ಗಳಿ ಊದುತ್ತಾ.

  ಬದುಕಿನ ಜೀವಂತಿಕೆ ಇರುವುದು ಬದಲಾವಣೆಗಳಲ್ಲಿ. ಕಾಲದ ಜೊತೆ ಜೊತೆಗೆ ಹೆಜ್ಜೆ ಹಾಕಲೆ ಬೇಕು, ಇಲ್ಲದಿದ್ದರೆ ನಾವು ಹಿಂದುಳಿದು ಬಿಡುತ್ತವೆ, ಸ್ಮೃತಿ ಪಟಲದಿಂದ ಮರೆಯಾಗುತ್ತೇವೆ. ಹಳೆಯದು ಹೊಸದಕ್ಕೆ ಎಡೆಮಾಡಿಕೊಡುತ್ತದೆ. ಅತೃಪ್ತಿ ಬದುಕಿನಲ್ಲಿ ಹೊಸದನ್ನು ತರುತ್ತದೆ. ಇದು ಸಾರಸ್ವತ ಲೋಕಕ್ಕೂ ಅನ್ವಯಿಸುತ್ತದೆ. ಸಾಹಿತ್ಯದಲ್ಲೂ ಕಾಲಕಾಲಕ್ಕೆ ಬದಲಾವಣೆಗಳು ನಡೆಯುತ್ತಿರುತ್ತವೆ. ಆ ಪರಿಧಿಯಲ್ಲಿ ‘Those who create nothing now, destroy” ಎಂಬ ಮಾತನ್ನು ಇಲ್ಲಿ ಸ್ಮರಿಸಬಹುದು. ನಮ್ಮ ಕನ್ನಡ ವಾಙ್ಮಯ ಇತಿಹಾಸವನ್ನು ಗಮನಿಸಿದಾಗ ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ… ಮುಂತಾದ ಹತ್ತು ಹಲವು ರೀತಿಗಳ ಮೂಲಕ ಸಾಹಿತ್ಯವು ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಸಾಹಿತ್ಯ ಕಾಲಕಾಲಕ್ಕೆ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ ತತ್ಕಾಲೀನತೆಗೆ ಸ್ಪಂದಿಸಿ, ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ರೂಪುಗೊಳ್ಳುತ್ತ ಸಾಗುತ್ತದೆ. ಸಾಹಿತ್ಯವೆಂದರೆ ಅದೊಂದು ಉತ್ತಮವಾದ ಜೀವನಮಾರ್ಗದ ದೀವಿಗೆ. ಅದು ಜೀವನದ ಅವಿಭಾಜ್ಯ ಅಂಗ. ಈ ನೆಲೆಯಲ್ಲಿ ಕಾವ್ಯವು ಹೃದಯದ ಪಿಸುಮಾತು. ಅಲ್ಲಿ ಪದಗಳನ್ನು ಕೇವಲ ಅರ್ಥಕ್ಕಾಗಿಯೇ ಬಳಸದೆ ಅಂತರ್ಭಾವಕ್ಕಾಗಿ ಬಳಸಲಾಗುತ್ತದೆ. ಈ ಜಾಡಿನಲ್ಲಿ ಸಾಹಿತ್ಯವು ಜನಜೀವನಕ್ಕೆ ಕನ್ನಡಿಯಾಗಿರುತ್ತದೆ. ಇಲ್ಲಿ ಡಿ. ವಿ. ಗುಂಡಪ್ಪನವರ ಈ ಹೇಳಿಕೆಯನ್ನು ಸ್ಮರಿಸಬಹುದು. “ಕಾವ್ಯವು ಜೀವನದ ಮುಖ್ಯ ಲಕ್ಷಣಗಳನ್ನು ಪ್ರತಿಬಿಂಬಿಸತಕ್ಕುದಾಗಿದೆ. ಒಳ್ಳೆಯ ಸಜೀವ ಕಾವ್ಯಗಳು ಹುಟ್ಟಬೇಕಾದರೆ ಅವುಗಳನ್ನು ಬರೆಯುವವರ ಸುತ್ತ ಮುತ್ತ ಹೊಸ ಹೊಸ ಭಾವನೆಗಳ ಪರಸ್ಪರ ಸಂಘರ್ಷಣೆ ಇರಬೇಕು.”

      ಊದ್ಗಳಿ ತನ್ನ ಒಡಲಲ್ಲಿ ಮನುಕುಲದ ವಿಕಾಸ ಪ್ರಕ್ರಿಯೆಯನ್ನು ಇರಿಸಿಕೊಂಡು, ತಲೆ ತಲಾಂತರದ  ತನ್ನ ನೋವು-ನಲಿವುಗಳನ್ನು ಮೌನವಾಗಿ ಅರಹುತ್ತಿದೆ.‌ ಕೇಳುವ, ಅರ್ಥೈಸಿಕೊಳ್ಳುವ ಮನಸ್ಸುಗಳು ಮಾತ್ರ ಇಂದು ಮರೀಚಿಕೆಯಾಗಿವೆಯಷ್ಟೇ. ಊದ್ಗಳಿ ಕವನ ಸಂಕಲನದ ಶೀರ್ಷಿಕೆ ನೋಡುತ್ತಲೇ ನನ್ನ ಕಣ್ಮುಂದೆ ಬಂದದ್ದು ಅಮ್ಮನ ಚಿತ್ರಣ.. ! ಒಲೆಯ ಮುಂದೆ ಕುಳಿತು ಆಹಾರವನ್ನು ಬೇಯಿಸುತ್ತಿರುವ, ಒಳಗೊಳಗೆ ತಾನೇ ಬೇಯುತ್ತಿರುವ ಸ್ತ್ರೀ ಸಂಕುಲವೇ ಸ್ಮೃತಿ ಪಟಲದ ಮೇಲೆ ಹಾದು ಹೋಗುತ್ತದೆ. ಗಂಡ-ಮಕ್ಕಳು-ಕುಟುಂಬದ ಒಡಲ ಹಸಿವನ್ನು ನೀಗಿಸುವ ‘ಅನ್ನಪೂರ್ಣೆ’ ದಿಟವಾಗಿಯೂ ಸ್ತುತ್ಯರ್ಹಳು..!! ನಾವು ೨೧ ನೇ ಶತಮಾನದಲ್ಲಿ, ವೈಜ್ಞಾನಿಕ ಯುಗದಲ್ಲಿ ಉಸಿರಾಡುತ್ತಿದ್ದೇವೆಯಾದರೂ ಪಳೆಯುಳಿಕೆಯಂತೆ ಈ ಅಸಹಾಯಕತೆ, ಶೋಷಣೆ, ಮಾನಸಿಕ ತುಮುಲ…. ಇವು ಯಾವುವೂ ಹೆಣ್ಣನ್ನೂ ತೊರೆದು ದೂರ ಹೋಗಿಲ್ಲ. ಇವತ್ತಿಗೂ ಅವಳ ಸುತ್ತವೇ ಪ್ರದಕ್ಷಿಣೆ ಹಾಕುತ್ತಿವೆ. ಎದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಸ್ತ್ರೀ ಸಂವೇದನೆಯು ಮಾತ್ರ ಅಲ್ಪ-ಸ್ವಲ್ಪ ಬದಲಾವಣೆಗಳೊಂದಿಗೆ ಇಂದಿಗೂ ಯಥಾವತ್ತಾಗಿ ಚಲಿಸುತ್ತಿದೆ. ಕೆಲವು ಸಮಸ್ಯೆಗಳ ರೂಪಗಳು ಬದಲಾಗಿವೆಯೇ ಹೊರತು ಸಮಸ್ಯೆಗಳಲ್ಲ. ಬೆಂಕಿಯ ಸುತ್ತ ಸುತ್ತುವ ಹೆಣ್ಣಿನ ಜೀವನದಲ್ಲಿ ‘ಒಲೆ’ ಯ ರೂಪ ತುಸು ಬದಲಾದರೂ ಅದರೊಳಗಿನ ಜ್ವಾಲೆ ಇನ್ನಿತರ ರೂಪಗಳಲ್ಲಿ ಹೆಣ್ಣನ್ನು ಚುಂಬಿಸುವಲ್ಲಿ ಯಶಸ್ವಿಯಾಗುತ್ತಿದೆ…!! ಈ ನೆಲೆಯಲ್ಲಿ ಊದ್ಗಳಿ ಸ್ತ್ರೀ ಸಂವೇದನೆಯ ಆಪ್ತ ಉದ್ಯಾನವನ…!! ಮಗದೊಂದು ನೆಲೆಯಲ್ಲಿ ಈ ಊದ್ಗಳಿ ಕವನ ಸಂಕಲನವು ಊದುವ, ಊದಿಸಿಕೊಳ್ಳುವ ಪ್ರಕ್ರಿಯೆಯ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಬೆತ್ತೆಲುಗೊಳಿಸುತ್ತದೆ.

       ಕವಯಿತ್ರಿ ದಾಕ್ಷಾಯಣಿ ನಾಗರಾಜ್ ಮಸೂತಿಯವರು ಬಿಸಿಲೂರು ಬಳ್ಳಾರಿ ಜಿಲ್ಲೆಯ ಮುದ್ದಟನೂರು ಹಳ್ಳಿಯ ಅಪ್ಪಟ ದೇಸಿ ಪ್ರತಿಭೆ. ಕೃಷಿ ಹಿನ್ನೆಲೆಯ ಪರಿವಾರದಲ್ಲಿ ಬೆಳೆದ ಶ್ರೀಯುತರು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಮಕ್ಕಳ ಮನದಂಗಳದಲ್ಲಿ ನೆಲೆಯೂರಿದ್ದಾರೆ. ಮಕ್ಕಳ ಒಡನಾಟದೊಂದಿಗೆ ಸಮಾಜದೊಂದಿಗೆ ಮುಖಾಮುಖಿಯಾಗುತ್ತ ತಮ್ಮ ಅನುಭವವನ್ನು ಹಿಗ್ಗಿಸಿಕೊಂಡ ಇವರು ತಮ್ಮ ಭಾವನೆಗಳನ್ನು ಕಾವ್ಯಧಾರೆಯಲ್ಲಿ ಹರಿಸಿದ್ದಾರೆ.

      ಊದ್ಗಳಿ ಯು ೪೦ ಭಾವನೆಗಳ ಭಾವಂತರಂಗ. ಇಲ್ಲಿ ಪ್ರೀತಿ, ಪ್ರೇಮ, ಪ್ರಣಯ, ನಿವೇದನೆ, ವಿರಹ, ಮಾನಸಿಕ ತೊಳಲಾಟ, ಜೀವನದ ಸಾಕ್ಷಾತ್ಕಾರ, ತಾತ್ವಿಕ ಚಿಂತನೆ, ರಾಜಕೀಯ ಜಿಜ್ಞಾಸೆ, ವಿಡಂಬನೆ, ವೈಚಾರಿಕತೆ, ಸಮಾಜದ ಸೂಕ್ಷ್ಮ ಚಿತ್ರಣ ಹಾಗೂ ಪ್ರಧಾನವಾಗಿ ಸ್ತ್ರೀ ಸಂವೇದನೆಯನ್ನು (ತಾಯಿ) ಗುರುತಿಸಬಹುದು. ಪ್ರೀತಿ, ಪ್ರೇಮದಲ್ಲೂ ಸಂವೇದನೆಯ ಹಂದರವಿದೆ. ಮೊದಲ ಕವನ ನಾನು ಅವಳು ಮತ್ತು ವರ್ತುಲ ದಲ್ಲಿ ಸ್ತ್ರೀಯ ಆತ್ಮಾವಲೋಕನವಿದೆ.

“ಅದ್ಯಾಕೆ ಈ ಹೆಣ್ಣು

ಅಲ್ಲಿಂದಿಲ್ಲಿಗೆ ಹಾರುವ

ದುಂಬಿಯ ಮೇಲೆ

ಕನಸು

ಕಟ್ಟುತ್ತಾಳೋ

ತಾನು ಉರಿದರೂ”

ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯ ವ್ಯಾಪ್ತಿ, ಹರಹು ಮನುಕುಲದ ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿದೆ. ನಿಸರ್ಗದ ಯಾವುದೋ ವಿಪರೀತದ ವ್ಯಾಪಾರದಿಂದಾಗಿ ಹೆಣ್ಣು ಸಂಭಾವಿತರಿಗಿಂತ ಹೆಚ್ಚಾಗಿ ವಾಚಾಳರಿಗೆ, ಬೇಜವಾಬ್ದಾರಿ ಸಾಹಸಿಗಳಿಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾಳೆ ಇಲ್ಲಿ ಪ್ರಶ್ನೆ ನೇರ ಮತ್ತು ಸರಳವಾಗಿ ಇದೆಯಾದರೂ ಉತ್ತರ ಮಾತ್ರ ಇನ್ನೂ ಬಿಸಿಲುಗುದುರೆಯೇ….!! ಇದು ಹೆಣ್ಣಿನ ಮಾನಸಿಕ ಸ್ಥಿತಿಯನ್ನು ಒರೆಗಲ್ಲಿಗೆ ಹಚ್ಚುವ ಕೆಲಸವನ್ನು ಮಾಡುತ್ತದೆ.‌

       ಸಮಾಜಕ್ಕೆ ಯಾವಾಗಲೂ ತನ್ನದಲ್ಲದ ವಸ್ತು, ವಿಷಯ ಹಾಗೂ ವ್ಯಕ್ತಿಯ ಬಗ್ಗೆ ವಿಪರೀತ ಮೋಹ. ಅದರಲ್ಲಂತೂ ಹೆಣ್ಣು ಮಕ್ಕಳ ಜೀವನದ ಬಗೆಗೆ ವಿಶೇಷ ಕಾಳಜಿ..! ಎಷ್ಟರಮಟ್ಟಿಗೆ ಎಂದರೆ ಅವರನ್ನು ನೆಮ್ಮದಿಯಾಗಿ ಬದುಕಲು ಬಿಡದಿರುವಷ್ಟರ ಮಟ್ಟಿಗೆ. ಇಂತಹ ವ್ಯವಸ್ಥೆಯು ಆ ಮಹಿಳೆಯರಲ್ಲಿ ಒಂದು ವಿಚಿತ್ರವಾದ ಪ್ರತಿಭಟನೆಯನ್ನು ಹುಟ್ಟಿಸುತ್ತದೆ.

“ಮತ್ತೆ ಮತ್ತೆ ಕೂಗಿ

ಹೇಳಬೇಕಿನಿಸುತ್ತದೆ

ಇದು

ನನ್ನ ಬದುಕು -ನನ್ನ ಆಯ್ಕೆ

ಎಂದು”

ತಮ್ಮ ಮನದಾಳದ ನೋವು, ಆತಂಕ, ಭಾವನೆಗಳನ್ನು ಕೆಲವೊಬ್ಬರು ಧೈರ್ಯದಿಂದ ಹೇಳಲು ಪ್ರಯತ್ನಿಸಿದರೆ, ಮತ್ತೇ ಕೆಲವರು ಅಸಹಾಯಕತೆಯಿಂದ ಎಲ್ಲವನ್ನೂ ಮೌನವಾಗಿಯೇ ಸಹಿಸಿಕೊಳ್ಳುತ್ತಾರೆ. ಇನ್ನೂ ಹಲವರು ಮಾನಸಿಕ ತೊಳಲಾಟದಲ್ಲಿ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ. ಈ ಮೇಲಿನ ಚರಣಗಳು ಕವಯಿತ್ರಿಯ ಸಾಮಾಜಿಕ ಸಂವೇದನೆಯ ಸೂಕ್ಷ್ಮತೆಯನ್ನು ಪ್ರತಿನಿಧಿಸುತ್ತವೆ. 

      ಕವನ ಸಂಕಲನದ ಶೀರ್ಷಿಕೆಯ ಕವನ ಊದ್ಗಳಿ ಯು ಹೆಣ್ಣಿನ ಅಂತರಂಗವನ್ನು ಬಿಚ್ಚಿಡುವಲ್ಲಿ ಯಶಸ್ವಿಯಾಗಿದೆ. (ವಿಶೇಷವಾಗಿ ತಾಯಿ) ಊದ್ಗಳಿಯು ಉದ್ದನೆಯ ನುಣುಪಾದ ಸುರುಳಿಯಾಗಿ ಕಾಲವನ್ನು ಪ್ರತಿಬಿಂಬಿಸುತ್ತಿದೆ. ಇದು ಮಹಿಳೆಯರ ಆಂತರಿಕ ತುಮುಲದ ಸಂಕೇತವಾಗಿ ಬಳಕೆಯಾಗಿದೆ.

“ಕೆಂಪೇರಿದ ಮೂಗನ್ನು

ತಿಕ್ಕುತ್ತಾ…

ಕಟ್ಟಿಗೆ ಹಸಿಯೊಂದಿಗೆ ಸೆಣೆಸುತ್ತಾ

ಬಿಕ್ಕುತ್ತಲೇ… ಜಜ್ಜುತಿದ್ದಳು..”

ಈ ಸಾಲುಗಳನ್ನು ಓದುತ್ತಿದ್ದಂತೆಯೇ ಪ್ರತಿಯೊಬ್ಬ ಸಹೃದಯ ಓದುಗರ ಕಣ್ಮುಂದೆ (ತಾಯಿ) ಸ್ತ್ರೀ ಸಂಕುಲವೆ ಬಂದು ನಿಲ್ಲುತ್ತದೆ..!!

          ಕುಟುಂಬದಲ್ಲಿನ ಸಣ್ಣ ಸಣ್ಣ ವಿಷಯಗಳನ್ನೂ ತುಂಬಾ ಮುತುವರ್ಜಿಯಿಂದ ಗಮನಿಸಿ ಕಾವ್ಯದ ರೂಪವನ್ನು ನೀಡಿದ್ದಾರೆ. ಮನೆಗಳಲ್ಲಿ ಪಾತ್ರೆಗಳ ಸದ್ದು ಆದಾಗ ಅದು ಹೆಣ್ಣಿನ ಸಿಟ್ಟು, ಸೆಡವಿನ ಸಂಕೇತವೆಂದು ಅಂದುಕೊಳ್ಳುತ್ತೇವೆಯೇ ಹೊರತೂ ಅದರಲ್ಲಿ ಅಡಗಿರುವ ಅವಳ ಏಕತಾನತೆಯನ್ನು ನಾವು ಗುರುತಿಸುವುದೇ ಇಲ್ಲ. ಇದನ್ನು ಸದ್ದುಗಳು ಕವನವು ಸಶಕ್ತವಾಗಿ ಹಿಡಿದಿಟ್ಟಿದೆ.

      ಸಾಮಾನ್ಯವಾಗಿ ಹೆಣ್ಣನ್ನು ಚಂಚಲೆಯೆಂದು ಕರೆಯುವುದು ಗಂಡಿಗೆ ಅಭ್ಯಾಸವಾಗಿ ಬಿಟ್ಟಿದೆ. ಆದರೆ ಚಂಚಲತೆ ಗಂಡಿನಲ್ಲಿಯೂ ಇರುವುದನ್ನು ದಾಕ್ಷಾಯಣಿಯವರು ಗುರುತಿಸಿದ್ದಾರೆ.‌ ಚಂಚಲ ಚಿತ್ತ ಕವನವು ಪುರುಷನನ್ನು ಪ್ರಶ್ನಿಸುವ ಬಗೆ ಈ ರೀತಿಯಲ್ಲಿದೆ.

“……

ಮತ್ತೇಕೆ ?

ನಿನ್ನೊಲವು

ಹೂವಿಂದ ಹೂವಿಗೆ

ಹಾರುವ ದುಂಬಿಯಂತೆ…”

ಉತ್ತರ ಮಾತ್ರ ನಿರುತ್ತರ… !!

         ಬಾವಿ ಅಂತರಂಗ ಕವನವು ಬಾವಿಯ ಮನದಾಳದ ಮಾತುಗಳನ್ನು ಸ್ವಗತದ ಮಾದರಿಯಲ್ಲಿ ಹೇಳುವ ಪರಿ ಅನನ್ಯ ಮತ್ತು ಅನುಪಮ. ಇದು ಹೆಣ್ಣು ಮಕ್ಕಳ ಅಂತರಂಗದ ಕದವನ್ನು ತೆರೆಯುವಲ್ಲಿ ಯಶಸ್ವಿಯಾಗಿದೆ.

“ಮೊನ್ನೆ ಮೊನ್ನೆ

ಮದುವೆಯಾದ ಖುಷಿಯಲ್ಲಿ

ನೀರು ಸೇದಲು ಬಂದ

ಗೌರಿ ನನ್ನೊಳಗೆ

ಹೆಣವಾದಳು….”

         ಈ ಭೂಮಿಯ ಮೇಲೆ ಅನ್ನವಿಲ್ಲದೆ ಬದುಕಬಹುದು, ಆದರೆ ಪ್ರೀತಿಯಿಲ್ಲದೆ ಬದುಕಲು ಸಾಧ್ಯವಿಲ್ಲ. ಅಂತೆಯೇ ಪ್ರೀತಿಯೇ ನಮ್ಮ ಜೀವನದ ತಳಹದಿ. ಬದುಕಿನ ಪಡಿಯಚ್ಚಾಗಿರುವ ಸಾಹಿತ್ಯದ ಮೂಲ ದ್ರವ್ಯವೇ ಈ ಪ್ರೀತಿ. ಇದು ಯಾರನ್ನೂ ಬಿಟ್ಟಿಲ್ಲ, ಬಿಡುವುದು ಇಲ್ಲ. ಈ ಸಂಕಲನದಲ್ಲಿಯೂ ಹಲವಾರು ಕವನಗಳು ಪ್ರೀತಿ, ಪ್ರೇಮ, ವಿರಹ…. ಮುಂತಾದವುಗಳ ಮೇಲೆ ಬೆಳಕು ಚೆಲ್ಲುತ್ತವೆ. ‘ಇರಿದ ಕೈ’, ‘ಉಳಿದ ಮಾತು’, ‘ತಪ್ಪಿದ ವಿರಹ’, ‘ನೆನಪುಗಳ ಬಿಕ್ಕಳಿಕೆ’,.’ಕದ ಇಕ್ಕಿರುವೆ’, ‘ದಣಿದಿದ್ದೇನೆ’, ‘ಹುಚ್ಚು ಹಂಬಲ’, ‘ಬಿಡಲಾರದ ಮಾಯೆ’, ‘ಇರಲಾರೆ ಗೆಳೆಯ’, ‘ಜಾರಿದ ಕಣ್ಣ ಹನಿ’, .., ಇಂತಹ ಹಲವಾರು ಕವನಗಳು ಪ್ರೇಮಲೋಕದ ಮಾಯೆಯನ್ನು, ಒಂಟಿತನದ ಕಹಿಯನ್ನು, ಒಡೆದ ಹೃದಯದ ಚೂರುಗಳನ್ನು ಸಹೃದಯ ಓದುಗರ ಅನುಭೂತಿಗೆ ದಕ್ಕಿಸುವಲ್ಲಿ ಫಲ ಕಂಡಿವೆ. ಅದಕ್ಕಾಗಿ ಕೆಲವೊಂದು ಚರಣಗಳು….

“ನೀನಿಲ್ಲದ ಘಳಿಗೆಯಲಿ

ನೆನಪುಗಳ ಜಗಳ”

“ಮತ್ತೊಮ್ಮೆ ಹೇಳುತ್ತೇನೆ

ಹೃದಯಕ್ಕೆ ಕದ ಇಕ್ಕಿರುವೆ

ಬಡಿಯದಿರು, ತಾಗಿಸದಿರು

ಹಾಯದಿರು…

ದಫನ್ ಆದ ಭಾವಗಳ

ಕೆದುಕದಿರು..”

“ಮತ್ತಷ್ಟು ಪ್ರಶ್ನೆಗಳ

ಹಡೆಯುತ್ತಾ

ಮತ್ತೊಂದು ಕಂಬನಿ

ಮಿಡಿಯುವ ರಾತ್ರಿಗೆ

ಮುನ್ನುಡಿಯಾಗಿ…”

“ಉಸಿರುಗಟ್ಟಿದ ಭಾವಗಳ

ಅಲೆಯಲ್ಲಿ

ನಿನ್ನ ನೆನಪಿನ ಕಳೇಬರಗಳ

ತೇಲಾಟ ಈ ದಿನ”

“ಹೆಗಲಿಗೆ ಹೆಗಲು

ಕೊಟ್ಟಾದರೂ

ಇಲ್ಲವೇ

ರೈಲಿನ ಹಳಿಗಳಾಗಿ

ಆದರೂ ಸರಿಯೇ

ಸುಮ್ಮನೆ

ತುಸು ದೂರ ಸಾಗೋಣ”

      ಮೇಲಿನ ಈ ಸಾಲುಗಳು ಪ್ರತಿಯೊಬ್ಬ ಪ್ರೇಮಿಯ ನಾಡಿಮಿಡಿತಗಳಾಗಿವೆ. ಇವುಗಳ ಮಧ್ಯೆ ಓದುಗ ಕಳೆದುಹೋಗುತ್ತಾನೆ, ತನ್ನ ಗತ ಬದುಕಿನ ಕವಲು ದಾರಿಯಲ್ಲಿ..!! ಇವುಗಳ ಜೊತೆಗೆ ಹಲವು ಕವನಗಳು ವೈಚಾರಿಕ ಸಂದೇಶ, ತಾತ್ವಿಕ ಚಿಂತನೆ, ಜೀವನದ ಜೋಕಾಲಿಯ ಏರಿಳಿತವು ನಮ್ಮನ್ನು ತಟ್ಟುತ್ತವೆ. ಕೋಲು ಎನ್ನುವ ಕವನವು ರಾಜಕೀಯ ವಿಡಂಬನೆಯ ಚಿತ್ರವನ್ನು ಒಳಗೊಂಡರೆ, ಮರೆತೆವೇಕೆ ನಾವು? ಕವನವು ಕೋಮು ಸೌಹಾರ್ದತೆಯ ನೆಲೆಯಲ್ಲಿ ಮಾನವನ ಪ್ರವೃತ್ತಿ ಹೇಗೆ ದಾರಿ ತಪ್ಪುತ್ತಿದೆ ಎಂಬುದನ್ನು ನವೀರಾಗಿ ಚಿತ್ರಿಸುತ್ತದೆ. ಹೀಗೇಕೆ ಕವನವು ನಮ್ಮ ಆಧುನಿಕ ಬದುಕಿಗೆ ಕನ್ನಡಿ ಹಿಡಿದಂತಿದೆ. ಬುದ್ಧ-ಬಸವರನ್ನು ಮರೆತು ನಾವು ಅನಾಗರಿಕರಂತೆ ಬಾಳುತ್ತಿರುವುದು ದುರಂತವೇ ಸರಿ.

“ಮನುಜನೇಕೆ

ತನ್ನ ಸುತ್ತ ತಾನೇ

ಅಂತರಗಳ

ಜೇಡರಬಲೆಯ

ಹೆಣೆದು

ಸಿಲುಕಿ ಒದ್ದಾಡುತ್ತಾನೆ ?”

ಎಂದು ಕವಿಮನವು ಆತಂಕವನ್ನು ವ್ಯಕ್ತಪಡಿಸಿದೆ.

      ‘ಮೌನ’, ‘ಸಂತೆ’, ‘ದಿಂಬು’, ಕವನಗಳು ಆಯಾ ವಿಷಯಗಳನ್ನು ಮನಕ್ಕೆ ಮುದ ನೀಡುವಂತೆ ಅನುಸಂಧಾನಗೈಯುವಲ್ಲಿ ನಿರತವಾಗಿವೆ.

        ಇಲ್ಲಿಯ ಹೆಚ್ಚಿನ ಕವನಗಳು ನವ್ಯ ಸಾಹಿತ್ಯದ ಪ್ರಭಾವದಲ್ಲಿ ಉದಯಿಸಿವೆ. ಭಾಷೆಯ ದೃಷ್ಟಿಯಿಂದ ಹಲವು ಕಡೆ ಪ್ರಾದೇಶಿಕತೆ ಆಪ್ತವೆನಿಸುತ್ತದೆ. ಇಲ್ಲಿಯ ಕವನಗಳು ‌ವೈಯಕ್ತಿಕ ನೆಲೆಯಲ್ಲೇ ಉಳಿಯದೆ ಸಾರ್ವತ್ರಿಕ ಅನುಭವವನ್ನು ನೀಡುವಲ್ಲಿ ಯಶಸ್ವಿಯಾಗಿವೆ. ಆದರೆ ಕಾವ್ಯದ ಸಂವೇದನೆಗೆ ಯಾವ ವಿಷಯದ ಸೀಮೆ, ಎಲ್ಲೆ ಇಲ್ಲ.. ಅದು ಕಾಲಾತೀತ, ಸರ್ವವ್ಯಾಪಿ..! ಇಲ್ಲಿಯ ಕವನಗಳ ವ್ಯಾಪ್ತಿಯು ವಿಶಾಲವಾಗಿರದೆ ತುಂಬಾ ಸೀಮಿತವೆನಿಸುತ್ತದೆ. ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪುರುಷ ಸಂವೇದನೆ ಮರೆಯಾಗಿದೆ. ಮನುಕುಲದ ಎಲ್ಲ ಸಂಬಂಧಗಳಿಗೂ ಹೆಣ್ಣೇ ಮೂಲ. ಆ ನೆಲೆಯಲ್ಲಿ ಸ್ತ್ರೀ ಸಂವೇದನೆಯನ್ನು ವಿವಿಧ ಆಯಾಮಗಳಲ್ಲಿ ಅವಲೋಕನ ಮಾಡಬಹುದಾಗಿತ್ತು. ಇದರೊಂದಿಗೆ ಸಮಾಜದ ಹಲವು ಮುಖಗಳು ಇಲ್ಲಿ ಕಣ್ಮರೆಯಾಗಿವೆ. ಎಲ್ಲ ವಿಷಯಗಳು ಕಾವ್ಯದ ರೂಪ ತೊಡಬೇಕಾದರೆ ಕವಿಮನವು ಎಲ್ಲವನ್ನೂ ಸೂಕ್ಷ್ಮ ಸಂವೇದನೆಯಿಂದ ನೋಡುವ, ಪರಿಪಕ್ವತೆಯಿಂದ ಅರ್ಥೈಸಿಕೊಳ್ಳುವ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲ ಓರೆ ಕೋರೆಗಳು ಮರೆಯಾಗಿ ಸರ್ವಾಂತರ್ಯಾಮಿ ರೂಪದ ಕವನ ಸಂಕಲನಗಳು ಹಾಗೂ ಇನ್ನಿತರ ಸಾಹಿತ್ಯ ರೂಪಗಳು ಮೂಡಿಬರಲಿ ಎಂದು ಹೃನ್ಮನದಿ ಹಾರೈಸುವೆ…!!

*************************************

ಡಾ. ಮಲ್ಲಿನಾಥ ಎಸ್. ತಳವಾರ

Leave a Reply

Back To Top