ಲೇಖನ
ಉಪಯೋಗಿಸೋಣ, ಉಳಿಯೋಣ
ಶಾಂತಿವಾಸು
ನಮ್ಮ ದೇಶದ ಪ್ರತಿ ರಾಜ್ಯವೂ ಅದರದೇ ಆದ ವೈಶಿಷ್ಟ್ಯ ಹಾಗೂ ಹಲವಾರು ಪದ್ಧತಿಯ ಆಚರಣೆಗಳು ಇರುವಂತೆ ನಮ್ಮ ಕರ್ನಾಟಕದ ನೆಲದ ಮೇಲಿನ ಪ್ರತಿಯೊಂದು ಪಂಗಡಗಳಿಗೆ, ಜಾತಿಗಳಿಗೆ, ಪ್ರಾಣಿಗಳು, ಜಾನುವಾರುಗಳಿಗೆ, ವಸ್ತುಗಳಿಗೆ ಹೀಗೆ ಎಲ್ಲಕ್ಕೂ ಪ್ರತ್ಯೇಕ ಹಬ್ಬಗಳಿವೆ. ಬೇರೆ ಬೇರೆ ಪ್ರದೇಶಗಳು ಹಾಗೂ ರಾಜ್ಯಗಳಿಂದ ಜೀವನವನ್ನರಸಿ ಬಂದು ನೆಲೆ ಕಂಡುಕೊಂಡ ಲಕ್ಷಾಂತರ ಜನರ ನೆಮ್ಮದಿಯ ನಮ್ಮ ಕರುನಾಡು, ಬಂದವರು ನಮ್ಮವರೇ ಎನ್ನುವ ಔದಾರ್ಯ ಮೆರೆದು, “ಬದುಕು, ಬದುಕಲು ಬಿಡು” ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ವಿಭಿನ್ನ ಸಂಪ್ರದಾಯವನ್ನಪ್ಪಿದ ಹೃದಯವಂತರ ನೆಲೆಬೀಡು. ಎರಡು ಸಾವಿರ ವರ್ಷಗಳಷ್ಟು ಹಳೆಯ ಭಾಷೆ ಹಾಗೂ ಸಂಸ್ಕೃತಿಯ ಬುನಾದಿ ಹೊಂದಿದ ನಮ್ಮ ಕನ್ನಡ ಭಾಷೆಯು ಸಾಮಾನ್ಯವಾಗಿ ಅಲುಗಾಡಿಸಲಾರದಷ್ಟು ಭದ್ರವಾಗಿದೆ ಎನ್ನುವುದು ಅತಿಶಯೋಕ್ತಿ ಎನಿಸುವುದಿಲ್ಲ.
65ನೇ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ನಾವು ನಮ್ಮ ಕರ್ನಾಟಕವು ಕಂಡ ಮೊದಲುಗಳ ಕಡೆ ಗಮನ ಹರಿಸದಿದ್ದರೆ ಅದು ಕನ್ನಡವನ್ನೇ ಕಡೆಗಣಿಸಿದಂತೆ ಎಂದು ನನ್ನ ಭಾವನೆ. ಏಕೆಂದರೆ ಶತಶತಮಾನಗಳಿಂದ ಒಂದೊಂದೇ ಹೆಜ್ಜೆಯಿಟ್ಟು ಲೋಕವೇ ಕರ್ನಾಟಕದತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡಿರುವುದರಲ್ಲಿ ಹಾಗೂ ಕರ್ನಾಟಕಕ್ಕೆ ಒಂದು ಪ್ರತ್ಯೇಕ ಸ್ಥಾನವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇಂಥ ಮೊದಲುಗಳೊಂದಿಗೆ ಕರ್ನಾಟಕ ಕನ್ನಡ ಭಾಷಾ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿದ ಮಹನೀಯರ ಹಾಗೂ ಅವರ ಗ್ರಂಥಗಳ ಹೆಸರು, ಸಾಧನೆಗಳ ದೊಡ್ಡ ಪಟ್ಟಿಯೇ ಇದೆ.
1. ಕನ್ನಡದ ಮೊದಲ ದೊರೆ -ಮಯೂರವರ್ಮ
2. ಕನ್ನಡದ ಮೊದಲ ಕವಿ -ಪಂಪ
3. ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ
4. ಕನ್ನಡದ ತ್ರಿಪದಿ ಛಂದಸ್ಸಿನ ಮೊದಲ ಬಳಕೆ – ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
5. ಕನ್ನಡದ ಮೊದಲ ಲಕ್ಷಣ ಗ್ರಂಥ – ಕವಿರಾಜಮಾರ್ಗ
6. ಕನ್ನಡದ ಮೊದಲ ನಾಟಕ – ಮಿತ್ರವಿಂದ ಗೋವಿಂದ
7. ಕನ್ನಡದ ಮೊದಲ ಮಹಮ್ಮದೀಯ ಕವಿ – ಶಿಶು ಸಂತ ಶಿಶುನಾಳ ಶರೀಫ
8. ಕನ್ನಡದ ಮೊದಲ ಕವಿಯತ್ರಿ – ಅಕ್ಕಮಹಾದೇವಿ
9. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ – ಇಂದಿರಾಬಾಯಿ
10. ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ – ಚೋರಗ್ರಹಣ ತಂತ್ರ
11.ಕನ್ನಡದ ಮೊದಲ ಛಂದೋಗ್ರಂಥ – ಛಂದೋಂಬುದಿ (ನಾಗವರ್ಮ)
12. ಕನ್ನಡದ ಮೊದಲ ಸಾಮಾಜಿಕ ನಾಟಕ – ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
13. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ – ಜಾತಕ ತಿಲಕ
14. ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ – ವ್ಯವಹಾರ ಗಣಿತ
15. ಕನ್ನಡದ ಮೊದಲ ಕಾವ್ಯ- ಆದಿಪುರಾಣ
16. ಕನ್ನಡದ ಮೊದಲ ಕಾವ್ಯ – ವಡ್ಡಾರಾಧನೆ
17. ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ – ಗ್ರಾಮರ್ ಆಫ್ ದಿ ಕನ್ನಡ ಲ್ಯಾಂಗ್ವೇಜ್
18. ಕನ್ನಡದ ಮೊದಲ ಪತ್ರಿಕೆ – ಮಂಗಳೂರ ಸಮಾಚಾರ
19. ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು – ಚಂದ್ರರಾಜ
20. ಕನ್ನಡದಲ್ಲಿ ಮೊದಲು ಕಥೆ ಬರೆದವರು – ಪಂಜೆ ಮಂಗೇಶರಾಯರು
21. ಕನ್ನಡದ ಮೊದಲ ಪ್ರೇಮ ಗೀತೆಗಳ ಸಂಕಲನ – ಒಲುಮೆ
22. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು – ಎಚ್. ವಿ. ನಂಜುಂಡಯ್ಯ
23. ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ – ಆರ್. ನರಸಿಂಹಾಚಾರ್
24. ಕನ್ನಡದ ಮೊದಲ ವಚನಕಾರರು – ದೇವರ ದಾಸಿಮಯ್ಯ
25. ಹೊಸಗನ್ನಡದ ಮೊದಲ ಮಹಾಕಾವ್ಯ – ಶ್ರೀ ರಾಮಾಯಣ ದರ್ಶನಂ
26. ಪಂಪ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ – ಕುವೆಂಪು
27. ಕನ್ನಡದ ಮೊದಲ ಕನ್ನಡ ಇಂಗ್ಲಿಷ್ ನಿಘಂಟು ರಚಿಸಿದವರು – ಆರ್. ಎಫ್. ಕಿಟೆಲ್
28. ಕರ್ನಾಟಕದ ಮೊಟ್ಟ ಮೊದಲ ಸಂಕಲನ ಗ್ರಂಥ – ಸೂಕ್ತಿ ಸುಧಾರ್ಣವ
29. ಮೊದಲ ಅಖಿಲ ಭಾರತ ಸಾಹಿತ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ – ಬೆಂಗಳೂರು (1915)
30. ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ – ಕುವೆಂಪು
31. ಕನ್ನಡದ ಮೊದಲ ವಿಶ್ವಕೋಶ – ವಿವೇಕ ಚಿಂತಾಮಣಿ
32. ಕನ್ನಡದ ಮೊದಲ ವೈದ್ಯ ಗ್ರಂಥ – ಗೋವೈದ್ಯ
33. ಕನ್ನಡದ ಮೊದಲ ಪ್ರಾಧ್ಯಾಪಕರು – ಟಿ.ಎಸ್ .ವೆಂಕಣ್ಣಯ್ಯ
34. ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ – ಮಂದಾನಿಲ ರಗಳೆ
35. ಕನ್ನಡದ ಮೊದಲ ಹಾಸ್ಯ ಪತ್ರಿಕೆ – ವಿಕಟ ಪ್ರತಾಪ
36. ಕನ್ನಡದ ಮೊದಲ ವೀರಗಲ್ಲು ಶಾಸನ – ತಮ್ಮಟಗಲ್ಲು ಶಾಸನ
37. ಕನ್ನಡದ ಮೊದಲ ಹಾಸ್ಯ ಲೇಖಕಿ – ಟಿ .ಸುನಂದಮ್ಮ
ಜ್ಞಾನಪೀಠ ಪ್ರಶಸ್ತಿ ಪಡೆದು, ಕನ್ನಡದ ಹೆಸರನ್ನು ಉತ್ತುಂಗಕ್ಕೇರಿಸಿದ ಮಹನೀಯರು
1. ಕುವೆಂಪು,
2. ದ.ರಾ. ಬೇಂದ್ರೆ
3. ಶಿವರಾಮ ಕಾರಂತರು
4.ಮಾಸ್ತಿ ವೆಂಕಟೇಶ ಅಯ್ಯಂಗಾರ್
5.ವಿ.ಕೃ. ಗೋಕಾಕರು
6. ಯು. ಆರ್. ಅನಂತಮೂರ್ತಿ
7. ಗಿರೀಶ್ ಕಾರ್ನಾಡರು
8. ಚಂದ್ರಶೇಖರ ಕಂಬಾರರು
ಇಷ್ಟು ಭವ್ಯತೆಯನ್ನು ಹೊಂದಿರುವ ನಮ್ಮ ಕರ್ನಾಟಕವು 1956 ರ ನವಂಬರ್ ಒಂದರಂದು ಮೈಸೂರು ರಾಜ್ಯ ಹೆಸರಿನಲ್ಲಿ ಮೊದಲಿಗೆ ನಿರ್ಮಾಣವಾಯಿತು. ರಾಜ್ಯಗಳ ಪುನರ್ ವಿಂಗಡಣೆ ಕಾಯಿದೆಯ ಮೇರೆಗೆ ಜನ್ಮತಾಳಿದ ನವ ರಾಜ್ಯವು ಕೇವಲ ಕರ್ನಾಟಕ ಕನ್ನಡ ಭಾಷಾ ಪ್ರದೇಶಗಳ ಒಂದುಗೂಡಿಕೆಯಾಗಿ ಮಾತ್ರ ಇರಲಿಲ್ಲ. ಬದಲಿಗೆ ಸುಮಾರು 2000 ವರ್ಷಗಳ ಉಜ್ವಲ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯುಳ್ಳ ಕರ್ನಾಟಕ ನೆಲದಲ್ಲಿ ಜನ್ಮ ತಾಳಿದ ಕೋಟ್ಯಾಂತರ ಕನ್ನಡ ಜನತೆಯ ಹೃದಯವನ್ನು ಒಗ್ಗೂಡಿಸಿದ ದಿನವಿದು.
ಮೈಸೂರು ರಾಜ್ಯವನ್ನೇ ಕರ್ನಾಟಕವೆಂದು ಕರೆಯಬೇಕೆಂಬ ಚರ್ಚೆಯು 1972 ರಲ್ಲಿ ಆರಂಭವಾದ ಇತಿಹಾಸವನ್ನು ಕೆದಕಿದರೆ, ಕರ್ನಾಟಕವೆಂಬ ಹೆಸರು ಮಹಾಭಾರತದಲ್ಲಿ ಉಲ್ಲೇಖವಿರುವ ದಾಖಲೆಯಿದೆ. ಅಂತೆಯೇ ಕ್ರಿ.ಶ. 450 ರಲ್ಲಿ ದಕ್ಷಿಣದಲ್ಲಿ ಆಳಿದ ಗಂಗ ಅರಸರ ಸಾಮ್ರಾಜ್ಯವು ಕರ್ನಾಟಕವೆಂದೇ ಹೆಸರಾಗಿದ್ದರೆ, ವಿಜಯನಗರ ಅರಸರು ಕರ್ನಾಟ ದೊರೆಗಳೆಂದು ಕರೆಯಲ್ಪಟ್ಟಿದ್ದಾರೆ. ಕನ್ನಾಡು, ಕರ್ನಾಟ ಎಂದು ಕೊನೆಗೆ “ಕರ್ನಾಟಕ”ವೆಂದು ಕರೆಯುವುದು ರೂಢಿಗೆ ಬಂದಿದೆ.
ಕರ್ನಾಟಕತ್ವವೆಂದರೆ ಕೇವಲ ದೇಶಾಭಿಮಾನವೋ, ಭಾಷಾಭಿಮಾನವೋ ಅಥವಾ ಇತಿಹಾಸ ಅಭಿಮಾನವೋ ಅಲ್ಲದೆ ಮೂರು ಅಡಗಿರುವ ರಾಷ್ಟ್ರೀಯತೆಯನ್ನು ಒಪ್ಪಿ ಅಪ್ಪಿರುವ ತತ್ವವಾಗಿದೆ. 19 ಜಿಲ್ಲೆಗಳಾಗಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ 1905 ರಿಂದ 1920 ರ ಅವಧಿಯಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾಲಿಟ್ಟ ಕಾರ್ಯಕರ್ತರನ್ನು ಕನ್ನಡ ರಾಜ್ಯೋತ್ಸವ ಸಂಭ್ರಮಿಸುವ ಈ ಸಮಯದಲ್ಲಿ ನೆನೆಯುವುದು ಸರ್ವಸಮ್ಮತವಾಗಿದೆ. ಕರ್ನಾಟಕ ಏಕೀಕರಣಕ್ಕಾಗಿ ದನಿಯೆತ್ತಿದವರಲ್ಲಿ ಬೆನಗಲ್ ರಾಮರಾಯರು, ಆಲೂರು ವೆಂಕಟರಾಯರು, ಕಡಪ ರಾಘವೇಂದ್ರ ರಾವ್, ಮುದವೀಡು ಕೃಷ್ಣ ರಾವ್, ಗಂಗಾಧರ್ ರಾವ್ ದೇಶಪಾಂಡೆ, ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತರಾರು, ನಿಜಲಿಂಗಪ್ಪನವರು ಪ್ರಮುಖರೆನಿಸಿಕೊಂಡಿದ್ದಾರೆ.
ಆಗ ನಮ್ಮ ಕರ್ನಾಟಕದ ಹಲವಾರು ಭಾಗಗಳು ಹೈದರಾಬಾದ್, ಮುಂಬೈ, ಮದ್ರಾಸು, ಡೆಲ್ಲಿ ಹಾಗೂ ಹಳೆ ಮೈಸೂರು ರಾಜ್ಯಗಳಿಗೆ ಸೇರಿಕೊಂಡಿದ್ದರೆ, ನೀಲಗಿರಿ, ಕೃಷ್ಣಗಿರಿ, ಅನಂತಪುರದ ಮಡಕಸಿರಾ ತಾಲ್ಲೂಕು, ಮಧೋಳ, ಸೊಂಡೂರು, ರಾಮದುರ್ಗ, ಜಮಖಂಡಿ, ಕೊಲ್ಲಾಪುರ ಇವೇ ಮೊದಲಾದ ಭಾಗಗಳು ಕರ್ನಾಟಕಕ್ಕೆ ಸೇರಿದ್ದವು.
1905 ರಲ್ಲಿ ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದಲ್ಲಿ ಬೆನಗಲ್ ರಾಮರಾಯರು ಕರ್ನಾಟಕದ ಏಕೀಕರಣದ ಬಗ್ಗೆ ಭಾಷಣ ಮಾಡಿ ಮಾತನಾಡಿದ್ದು ಕರ್ನಾಟಕವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ ಎಂದು ಹೇಳಲಾಗಿದೆ.
1905 ರಲ್ಲಿ ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಲು ಯತ್ನಿಸಿದಾಗ ಬಂಗಾಳಿಯರು ಪ್ರತಿಭಟಿಸಿದ್ದನ್ನು ಸ್ಪೂರ್ತಿಯಾಗಿಸಿಕೊಂಡ ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣದ ಮೊದಲನೇ ದನಿಯೆತ್ತಿದರು. ಏಕೀಕರಣದ ಅವಶ್ಯಕತೆಯನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ 1920 ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಸುಮಾರು 800 ಕಾಂಗ್ರೆಸ್ ಪ್ರತಿನಿಧಿಗಳು ಕರ್ನಾಟಕದಿಂದ ತೆರಳಿದ್ದು ದಿನದಿಂದ ದಿನಕ್ಕೆ ಏಕೀಕರಣದ ಹೋರಾಟ ಹೆಚ್ಚಾಗುತ್ತಿದ್ದುದಕ್ಕೆ ಸಾಕ್ಷಿಯಾಗಿದೆ.
1924 ರಲ್ಲಿ ಬೆಳಗಾವಿಯಲ್ಲಿ ನಡೆದ, ಗಾಂಧೀಜಿಯವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಸಮ್ಮೇಳನದಲ್ಲಿಯೂ ಸಹ ಕರ್ನಾಟಕ ಏಕೀಕರಣ ಸಮ್ಮೇಳನವು ನಡೆಯಿತು. ಕರ್ನಾಟಕವನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ 1926ರಿಂದ 46 ರವರೆಗೂ ಸತತವಾಗಿ ಹಲವಾರು ಸಮ್ಮೇಳನಗಳು ನಡೆಯುತ್ತಲೇ ಇದ್ದವು. ಕರ್ನಾಟಕದ ಏಕೀಕರಣದ ಅವಶ್ಯಕತೆಯನ್ನು ಅರಿತ ಅಂದಿನ ಕಾಂಗ್ರೆಸ್ ಪಕ್ಷವು ಹೋರಾಟಕ್ಕೆ ಬೆಂಬಲ ನೀಡಿತು. ಅದನ್ನು ಮೈಸೂರ್ ಕಾಂಗ್ರೆಸ್ ಸಹ ಪುರಸ್ಕರಿಸಿತು. 1946 ರಲ್ಲಿ ಕರ್ನಾಟಕ ಮಹಾಸಭೆಯು ಏಕೀಕರಣದ ಮಂತ್ರವನ್ನು ಪುನರುಚ್ಚರಿಸಿತು. 1953 ರಲ್ಲಿ ಭಾಷಾವಾರು ರಾಜ್ಯವಾಗಿ ಆಂಧ್ರವು ಪ್ರಥಮ ಬಾರಿಗೆ ರೂಪುಗೊಂಡರೆ, ಅದೇ ವರ್ಷ ಹೈದರಾಬಾದಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೆಂಗಲ್ ಹನುಮಂತರಾಯರು ಒತ್ತಾಯಪೂರ್ವಕವಾಗಿ ಏಕೀಕರಣದ ಭಾಷಣ ಮಾಡಿದರು. ಅಂದಿನ ಕೆ.ಪಿ.ಸಿ.ಸಿ ಅಧ್ಯಕ್ಷರಾದ ನಿಜಲಿಂಗಪ್ಪನವರು ಕೂಡ ಅದೇ ಮಂತ್ರವನ್ನು ಜಪಿಸುವುದರೊಂದಿಗೆ ಅಹೋರಾತ್ರಿ ಶ್ರಮಿಸಿದರು.
ಅನೇಕ ಭಾಷಣಗಳು, ಮನವೊಲಿಕೆಗಳು ಫಲಕೊಡದಿದ್ದಾಗ 1953 ರಲ್ಲಿ ದಾವಣಗೆರೆಯಲ್ಲಿ ಸತ್ಯಾಗ್ರಹವು ಸಹ ನಡೆಯಿತು. ಹಂತಹಂತವಾಗಿ ಒಗ್ಗಟ್ಟನ್ನು ಸಾರುತ್ತ ಏಕೀಕರಣದ ಅಗತ್ಯವನ್ನು ಮನದಟ್ಟು ಮಾಡುವಲ್ಲಿ ವರ್ಷಗಟ್ಟಲೆ ಹೋರಾಡಿದ ಫಲವಾಗಿ 1956 ರ ನವೆಂಬರ್ ಒಂದರಂದು ಏಕೀಕೃತ ರಾಜ್ಯ, ಅದು ನಮ್ಮ ಕರ್ನಾಟಕ ರಾಜ್ಯದ ಉದಯವಾಯಿತು. ಕರ್ನಾಟಕ ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತತ್ವ ಮಾನ್ಯತೆಗಾಗಿ ರಾಜ್ಯದ ಹೆಸರು 1972ರಲ್ಲಿ “ಕರ್ನಾಟಕ” ಎಂದು ಬದಲಾಯಿತು. ಈ ಸಂದರ್ಭದಲ್ಲಿ ದೇವರಾಜ್ ಅರಸುರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಮುಂದಿನ ಪೀಳಿಗೆಯಾಗಿ ನಡೆಸಿದ ಹೋರಾಟದಲ್ಲಿ ಶಿವರಾಮ ಕಾರಂತರು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ. ಎಂ. ಶ್ರೀಕಂಠಯ್ಯನವರ ಹೆಸರುಗಳಿವೆ.
ಕೆಲವು ಕಾರಣಗಳಿಂದ ಕಾಸರಗೋಡು, ತಾಳವಾಡಿ, ಮಡಕಶಿರಾ, ಅಕ್ಕಲಕೋಟೆ, ಸೊಲ್ಲಾಪುರ, ಹೊಸೂರು ಇವೆಲ್ಲವೂ ಏಕೀಕೃತ ಕರ್ನಾಟಕದಿಂದ ಹೊರಗುಳಿದರೆ, 1565 ರಲ್ಲಿ ಒಡೆದು ಹೋಗಿದ್ದ ವಿಜಯನಗರ ಸಾಮ್ರಾಜ್ಯವು ಕರ್ನಾಟಕದ ನಕ್ಷೆಯಲ್ಲಿ ಸ್ಥಾನ ಪಡೆಯಿತು. ಕರ್ನಾಟಕದ ಗಡಿರೇಖೆಗಳು ಕಾರಣಾಂತರದಿಂದ ಕೆಲವು ಬಾರಿ ಹಿಗ್ಗಿ, ಕೆಲವು ಬಾರಿ ಕುಗ್ಗಿ ಹಲವು ಕಾರಣಗಳಿಂದ ನೆರೆ ರಾಜ್ಯಗಳಲ್ಲಿ ಹಂಚಿಹೋಗಿದ್ದ ಪ್ರದೇಶಗಳನ್ನು ಭೌಗೋಳಿಕವಾಗಿ ಹಾಗೂ ಮಾನಸಿಕವಾಗಿ ಬೆಸೆಯಲು ಯತ್ನಿಸಿದ ಅನೇಕ ಮಹನೀಯರು ಅಡ್ಡಬಂದ ಅನೇಕ ಎಡರು ತೊಡರುಗಳನ್ನು ಲೆಕ್ಕಿಸದೆ, ಕರ್ನಾಟಕದ ಏಕೀಕರಣಕ್ಕಾಗಿ ಚಳುವಳಿಗಳನ್ನು ನಡೆಸಿ ಅಖಂಡ ಕರ್ನಾಟಕವನ್ನು ನಮಗೆ ಉಡುಗೊರೆಯಾಗಿ ನೀಡಿದ ಈ ದಿನವೇ ನಮ್ಮ “ಕರ್ನಾಟಕ ರಾಜ್ಯೋತ್ಸವ” ಅಥವಾ “ಕನ್ನಡ ರಾಜ್ಯೋತ್ಸವ”.
ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಹಾಗೂ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಪರಿಗಣಿಸಬೇಕೆಂಬ ವಿ.ಕೃ. ಗೋಕಾಕರು ರಚಿಸಿದ ವರದಿಯ ಬೇಡಿಕೆಯನ್ನು ಮುಂದಿಟ್ಟು ನಡೆದ “ಗೋಕಾಕ್ ಚಳುವಳಿಯಲ್ಲಿ” ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಹೀಗೆ ಕನ್ನಡವನ್ನು ಉಸಿರಾಡಿ, ಕನ್ನಡವೆಂಬ ಹೆಮ್ಮೆಯ ಕಿರೀಟವನ್ನು ನಮಗೆ ಬಿಟ್ಟು ಹೋದ ಮಹನೀಯರನ್ನು ನೆನೆಯುವುದು “ಕನ್ನಡ ರಾಜ್ಯದ ನಿಜವಾದ ಉತ್ಸವ” ಎನ್ನುವುದು ನನ್ನ ಅನಿಸಿಕೆ. ಈ ಮೇಲೆ ಹೆಸರಿಸಿರುವ, ಹೋರಾಡಿರುವ ಎಲ್ಲ ಮಹನೀಯರೂ ಕನ್ನಡವನ್ನು ಉಪಯೋಗಿಸಿದ್ದರಿಂದಲೇ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಮಾನಸಿಕವಾಗಿ ಉಳಿದುಕೊಂಡಿದ್ದಾರೆ. ಭೂಮಿಯ ಮೇಲಿನ ಪ್ರತಿಯೊಂದಕ್ಕೂ ನಾಶವಿದೆ ಆದರೆ ಭಾಷೆಗಿಲ್ಲ. ಈ ನಿಟ್ಟಿನಲ್ಲಿ ಕನ್ನಡವನ್ನು ಆಸ್ವಾದಿಸಿ, ಅನುಭವಿಸಿ, ಭಾವನೆಗಳನ್ನು ಕನ್ನಡದಲ್ಲಿಯೇ ಪ್ರಕಟಿಸಿದ ಕನ್ನಡದ ವಚನಕಾರರು, ಕೀರ್ತನಕಾರರು, ಜನಪದರು, ಹರಿಕಥೆಗಾರರು, ಕಲಾವಿದರು, ಬರಹಗಾರರು ಹೀಗೆ ಎಲ್ಲ ಮಹನೀಯರ ಶ್ರಮ ವ್ಯರ್ಥವಾಗದಂತೆ, ಉಪಯೋಗಿಸಿದಷ್ಟೂ ಹೊಳೆಯುವ ನಮ್ಮದೇ ಪರಿಶುದ್ಧ ಭಾಷೆಯನ್ನು ನಮ್ಮ ಆದ್ಯತೆಯಾಗಿಸಿಕೊಳ್ಳೋಣ. ಉಪಯೋಗಿಸೋಣ ಉಳಿಯೋಣ ಧ್ಯೇಯ ಮಂತ್ರದೊಂದಿಗೆ 65ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ.
**********************************
ಲೇಖನವನ್ನು ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು