ಪ್ರಿಯರೆ,
ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಕರ್ನಾಟಕ ಹಾಗೂ ಅದಕ್ಕೂ ಮೊದಲು ವಿಶಾಲ ಮೈಸೂರು ಎಂಬ ಹೆಸರು ಮತ್ತು ಒಗ್ಗೂಡುವಿಕೆಯ ಹಿಂದಿನ ಇತಿಹಾಸ ಅರಿಯುವುದು ಲೇಖಕರಾದ ನಮ್ಮೆಲ್ಲರ ಹೊಣೆ. ೧೯೦೫ ರಿಂದ ೧೯೨೦ ರ ಸಮಯದಲ್ಲಿ ಕನ್ನಡ ಮಾತಾಡುವ ಪ್ರದೇಶದ ಒಗ್ಗೂಡುವಿಕೆಯ ಹೋರಾಟ ಸಹ ಆರಂಭವಾಯಿತು. ಕರ್ನಾಟಕ ವಿದ್ಯಾವರ್ದಕ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ ಹೋರಾಟವೂ ಕನ್ನಡ ಮಾತಾಡುವ ಪ್ರದೇಶಗಳ ಒಗ್ಗೂಡಿಸುವಿಕೆಯಲ್ಲಿದೆ. ಮದ್ರಾಸ್ , ಹೈದರಾಬಾದ್, ಮುಂಬಯಿ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಗ್ಗೂಡುವಿಕೆಯಲ್ಲಿ ಆಲೂರು ವೆಂಕಟರಾಯರು, ರಾ.ಲ.ದೇಶಪಾಂಡೆ ಅವರ ಹೋರಾಟ ದೊಡ್ಡದು. ೧೯೫೬ ನವ್ಹಂಬರ್ ೧ ಹಾಗೂ ೧೯೭೩ ನವ್ಹಂಬರ್ ೧ ಕನ್ನಡಿಗರ ಪಾಲಿಗೆ ಮಹತ್ವದ ದಿನಗಳು. ನಿಜಲಿಂಗಪ್ಪ ಮತ್ತು ದೇವರಾಜ ಅರಸು ಅವರನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಇವತ್ತು ಕನ್ನಡ ,ಕರ್ನಾಟಕ ಸಮಸ್ಯೆ ಎದುರಿಸುತ್ತಿವೆ. ಕೋವಿಡ್ ಜೊತೆಗೆ ಕೇಂದ್ರದ ಏಕಪಕ್ಷೀಯ ಧೋರಣೆ ಕರ್ನಾಟಕವನ್ನು ಸಂಕಟಕ್ಕೆ ದೂಡಿದೆ.ಇದರ ವಿರುದ್ಧ ಧ್ವನಿ ಎತ್ತಲು ರಾಜಕೀಯ ಶಕ್ತಿಗಳ ಜೊತೆ ಬರಹಗಾರರು ನಿಲ್ಲಬೇಕು. ಪ್ರಬಲ ರಾಜಕೀಯ ಪಕ್ಷದ ಜೊತೆ ನಿಂತಿರುವ, ಆತ್ಮಸಾಕ್ಷಿಯ ಮಾರಿಕೊಂಡ ಅಕ್ಷರ ಲೋಕವೂ ನಮ್ಮ ಕಣ್ಣ ಮುಂದಿದೆ . ಇಂತಹ ಸನ್ನಿವೇಶದಲ್ಲಿ ಬರಹಗಾರ ವಿರೋಧ ಪಕ್ಷವಾಗಿ , ಜನರ ಧ್ವನಿಯಾಗಿ ನಿಲ್ಲಬೇಕು. ಕನಿಷ್ಟ ಪಕ್ಷ ಕನ್ನಡ ಸಾಹಿತ್ಯ ಪರಂಪರೆಯ ಅರ್ಥಮಾಡಿಕೊಂಡರು, ಅಲ್ಲಿನ ಪ್ರತಿಭಟನೆ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಗುಣ ಬರಹಗಾರರಿಗೆ ಬೇಕು. ಆ ಗುಣ ಸಂಗಾತಿ ಜೊತೆ ಇರುವ ಲೇಖಕಿ/ಲೇಖಕರದಾಗಲಿ ಎಂದು ಬಯಸುತ್ತದೆ.
ರಾಜ್ಯೋತ್ಸವ ಶುಭಾಶಯಗಳೊಂದಿಗೆ
ಸಂಗಾತಿ ಸಂಪಾದಕ ಬಳಗ
ಕು.ಸ. ಮಧುಸೂದನ್
ಡಾ.ಎಂ.ಈ.ಶಿವಕುಮಾರ್ ಹೊನ್ನಾಳಿ.
ನಾಗರಾಜ ಹರಪನಹಳ್ಳಿ