ಕವಿತೆ
ಮನಿಷಾ
ವೀಣಾ ನಿರಂಜನ್
ಮೊದಲೇ ಕುರುಡಿಯಾಗಿದ್ದ
ನ್ಯಾಯ ದೇವತೆಯ
ಮೂಗಿಯನ್ನಾಗಿಸಿದರು ಮಗಳೇ
ನಿನ್ನ ನಾಲಿಗೆ ಕತ್ತರಿಸಿ
ಅವರ ಗಂಡಸುತನಕ್ಕೆ ಧಿಕ್ಕಾರವಿರಲಿ
ಅವರ ಬೆಚ್ಚನೆಯ ಮನೆಗಳಲ್ಲಿ
ಬಚ್ಚಿಟ್ಟ ನಿಧಿಯಂತೆ ನೀನೂ ಕೂಡ
ಅರಿತಿದ್ದರೆ ಸಾಕಿತ್ತು ಅವರು
ಹತ್ತೂ ಕಡೆ ಚಾಚಿದ ವಿಷ ಸರ್ಪಗಳ
ಹೆಡೆ ಮುರಿದು ಕಟ್ಟುತ್ತಿದ್ದರು
ಅರಿಯದಾದರೆ ಅವರು
ನಿನ್ನೊಳಗಿನ ಕುಡಿಯನ್ನು
ಹೊರಲಾರದಷ್ಟು ಪಾಪದ
ಮೂಟೆ ಹೊತ್ತು ನಡೆದರು
ಸಾವೂ ಕೂಡ ಸಹಜವಾಗಿ
ಸುಳಿಯಲಾರದಿನ್ನು ಅವರ ಬಳಿ
ಇಲ್ಲಿ ವಿಲ ವಿಲ ಒದ್ದಾಡುತ್ತಿದ್ದಾಳೆ
ನ್ಯಾಯ ದೇವತೆ
ನಿನ್ನ ನೆತ್ತರ ಬಿಸಿಯ ಸೋಕಿ
ಉರಿಯುತ್ತಿದ್ದಾಳೆ ನಖಶಿಖಾಂತ
ಸತ್ಯದ ನಾಲಿಗೆಯು ನೇತಾಡುತ್ತಿದೆ
ನಿನ್ನ ನಾಲಿಗೆಯ ಹಾಗೇ
ತೀರ್ಪು ಏನಾದರೇನು ಮಗಳೇ
ನಿನ್ನ ಜೀವಕ್ಕೆ ಬೆಲೆ ಕಟ್ಟಲಾದಿತೇ
ಬೇಡ ಮಗಳೇ
ನಿನ್ನ ಪಾಡು, ನಿನ್ನ ನೋವು ಮುಂದೆಂದೂ
ಬಾರದಿರಲಿ ನಿನ್ನಕ್ಕ ತಂಗಿಯರ ಪಾಲಿಗೆ
ಎಲ್ಲರೊಳಗಿನ ತಾಯಿ, ತಂಗಿ, ಅಕ್ಕ, ಮಗಳು
ಪ್ರಜ್ವಲಿಸುತಿರಲಿ ಸದಾ
ಅವರ ಎದೆಯೊಳಗೊಂದು ಸೂಜಿ
ಇರಿಯುತಿರಲಿ ಮೊನಚಾಗಿ
ಕಳಚಿ ಬೀಳಲಿ ಪಾಪದ ಕೊಂಡಿ
ಹರೇ ರಾಮ್ ಹರೇ ರಾಮ್
******************************