ಕವಿತೆ
ಸತ್ಯಕ್ಕೆ ಸಾಕ್ಷಿ ಬೇಕಾಗಿದೆ
ಆರ್.ಉಷಾ
ಸತ್ಯ ಸುಳ್ಳುಗಳ ಮಧ್ಯೆ ಬೆಸುಗೆ ಬೆಳೆದು
ಸುಳ್ಳು ಎಲ್ಲೆಲ್ಲೂ ಝೇಂಕರಿಸಿ ವಾಮನನಂತೆ ಬೆಳೆದು
ಬಲಿಗೊಟ್ಟು ಸತ್ಯವನು
ಮೋಸದ ಜೊತೆ ಒಡನಾಡಿಯಾಗಿ
ದ್ರೋಹದ ಜೊತೆ ಸ್ನೇಹ ಪಲ್ಲವಿಸಿ
ಅಪನಂಬಿಕೆಯ ಮಿತ್ರನ ನೆರವು ಪಡೆದು
ದ್ರೋಹದ ಬಲೆಯಲ್ಲಿ ಸತ್ಯವನು ಮೂಲೆಗುಂಪು ಮಾಡಿ
ಕಾರ್ಗತ್ತಲಿನ ಖೋಲಿಯಲ್ಲಿ ಬಂಧಿಯನ್ನಾಗಿಸಿತು
ಸುಳ್ಳು ಕಟ್ಟಿದ ಅರಮನೆಯಲ್ಲಿ ಕೂಪಮಂಡೂಕದಂತೆ
ಸೂರ್ಯೋದಯವನ್ನೇ ಕಾಣದ ಸತ್ಯ
ಕತ್ತಲಲ್ಲೇ ಕುರುಡಾಗಿ
ಇರುಳ ಕರುಳ ಬಗೆದು
ಬಟ್ಟ ಬಯಲಾಗಲಾರದೆ
ಸುಳ್ಳಿನ ವಿದ್ರೋಹದ ಮುಳ್ಳು ಬೇಲಿಯಲಿ ಸಿಲುಕಿ
ನರಳಿ ನರಳಿ ನರ ಸತ್ತು ಗಂಟಲ ಪಸೆ ಆರಿ
ಬೊಬ್ಬಿರಿಯಲಾಗದೆ ಕಗ್ಗತ್ತಲ ಕೂಪದಲಿ ಬೆಂದು ಒಂಟಿಯಾಗಿ
ಸಾಕ್ಷಿಯ ಸಹಚರನಿಲ್ಲದ ಸತ್ಯ ಕಾಯುತಿದೆ ಬಿಡುಗಡೆಗಾಗಿ
ಅರಸುತ್ತಿದೆ ತನ್ನ ಪರ ವಕಾಲತ್ತು ವಹಿಸುವ ಮಿತ್ರನನ್ನು
ತನ್ನ ಅಸ್ತಿತ್ವ ನಿರೂಪಿಸಲು ಇಂದಿಗೂ ಚಾತಕಪಕ್ಷಿಯಂತೆ
*************************************************
Super